ಮಲೆನಾಡು ಹಚ್ಚ ಹಸಿರು ಹೊದಿಕೆಯ ಮೇಲ್ಮೈ,ದಟ್ಟ ಕಾನನದ ನಡುವೆ ಅಲ್ಲಲ್ಲಿ ಒಂದೋ ಎರಡೋ ಮನೆಗಳು ಮತ್ತೆಲ್ಲೋ ಚಿಕ್ಕ ಹಳ್ಳಿ ಊರು ಕೇರಿ ಇತ್ಯಾದಿ. ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿರುವ ಪ್ರಕೃತಿಯ ಮಡಿಲು . ಕೆರೆ ನದಿ ಹಳ್ಳ ಕೊಳ್ಳಗಳಿಂದ ಸಮೃದ್ಧ ಗಾಳಿ ಬೀಸುತ್ತಿದೆ. ಬೇಸಿಗೆಯಲ್ಲೂ ಮರದ ನೆರಳು ರಸ್ತೆಗಳನ್ನು ಮುಚ್ಚುವಷ್ಟು ತಂಪಾಗಿರುತ್ತದೆ. ಹಲವು ಹಣ್ಣು ಹೂಗಳು ಹಾಗೇ ಪ್ರಾಣಿ ಪಕ್ಷಿಗಳು ಹೀಗೆ ವೈವಿಧ್ಯಮಯವಾಗಿದೆ ಮಲೆನಾಡು. ಮಾನವರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ವಿವಿಧತೆಯ ತಾಣವಾಗಿದೆ. ಇಷ್ಟೆಲ್ಲಾ ಸಕಲ ಸಮೃದ್ಧ ತಂಗುದಾಣವೆಂಬಂತಿರುವ ಮಲೆನಾಡಲ್ಲೂ ಹಲವು ಸಂಕಷ್ಟಗಳನ್ನು ಜನರೂ ನಿತ್ಯವೂ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಹೆಚ್ಚಾದ ಮಳೆಯಿಂದ ಊರುಗಳ ಜನ ಸಂಪರ್ಕವೇ ಕಡಿದು ಹೋಗುತ್ತದೆ. ಮರ ಮಟ್ಟು ಬಿದ್ದು ಹಲವು ಹಾನಿಯಾಗುತ್ತದೆ. ಕೆಲವೊಂದು ಸರ್ತಿ ಮನೆಗಳೇ ಕೊಚ್ಚಿ ಹೋಗುವುದುಂಟು.
ಕರೆಂಟು ಇರೋದೇ ಅಪರೂಪ ಅದರಲ್ಲೂ ಈ ಅವಾಂತರಗಳು ಆದಾಗ ವಿದ್ಯುತ್ ಇಲ್ಲದೆ ವಾರಗಳೇ ಕಳೆಯುತ್ತವೆ. ಯಾರಿಗಾದ್ರೂ ಫೋನ್ ಹಾಯಿಸಬೇಕೆಂದರೆ ಲಾಂಡ್ ಲೈನು ಡೆಡ್ ಆಗಿರೋದೆ ಜಾಸ್ತಿ. ಇನ್ನು ಮೊಬೈಲ್ ನೆಟ್ವರ್ಕ್ ಗಳು ದೂರದ ಮಾತು. ಹಾಗಂತ ಅನಕ್ಷರಸ್ಥರು ಇದ್ದಾರೆಂದು ಅಲ್ಲ ಬಹುಪಾಲು ಅಕ್ಷರಸ್ಥರೆ. ಅದಲ್ಲದೆ ಮಲೆನಾಡ ಭಾಗದಲ್ಲೇ ಹುಟ್ಟಿ ಬೆಳೆದ ಶರಾವತಿ ನದಿಯು ತಂಪೆನಿಸಿದರೂ ಹೊಳೆಯಾಚೆಯ ಜನರ ಬದುಕು ಕೇಳಕೂಡದು. ಲಾಂಚ್ ಮೂಲಕ ಶರಾವತಿ ಹಿನ್ನೀರ ದಾಟಿ ಸಾಗರ ಪೇಟೆಗೆ ಬರುವುದು ಸಾಧನೆಯೇ ಸರಿ. ರಾತ್ರಿಯಾದಮೇಲೆ ಯಾರಿಗಾದ್ರೂ ಸೀರಿಯಸ್ ಆದ್ರೆ ಬದುಕುಳಿಯೋದು ಬಹುತೇಕ ಡೌಟು. ಯಾಕಂದ್ರೆ ಲಾಂಚ್ ಇರೋದಿಲ್ಲ ಬಳಸಿ ಮತ್ತೊಂದು ಮಾರ್ಗದಲ್ಲಿ ಬರೋದು ಅನಿವಾರ್ಯ, ಅವ್ರು ಸುತ್ತು ಹಾಕಿ ಬರೋದ್ರೊಳಗೆ ಸೀರಿಯಸ್ ಆದವ್ರ ಗತಿ ದೇವ್ರಿಗೆ ಅಚ್ಚು ಮೆಚ್ಚು. ಅಷ್ಟಕ್ಕೂ ಮತ್ತೊಂದು ವಿಷ್ಯ ಏನಂದ್ರೆ ಜೋಗದಲ್ಲೇ ತಯಾರಾದ ವಿದ್ಯುತ್ ರಾಜ್ಯದ ರಾಜಧಾನಿಗೆ ಸರಬರಾಜು ಆಗುತ್ತದೆ. ಅಲ್ಲದೆ ಇಷ್ಟೆಲ್ಲಾ ಸೌಕರ್ಯ ಇದ್ದರೂ ಮಲೆನಾಡಿನ ಜನರಿಗೆ ಬೆಳಕಿನ ಭಾಗ್ಯ ಕಡಿಮೆ ಎನಿಸುತ್ತದೆ. ಲೋಡ್ ಶೆಡ್ಡಿಂಗ್ ಗೆ ಟೈಮಿನ ಇತಿ ಮಿತಿಯಿಲ್ಲ. ಲ್ಯಾಟಿನು ಟಾರ್ಚ್ ಗಳೆ ಮಂದಿಗೆ ಆಧಾರ.
ಇಂತಹ ಪರಿಸ್ಥಿತಿಯಲ್ಲಿ ಮಂಗನ ಖಾಯಿಲೆ (ಕೆ. ಎಫ್. ಡಿ) ಎಂಬ ಮಾರಿ ಹಲವು ಜನರ ಜೀವ ಕೊನೆಗೊಳಿಸಿದೆ. ಮಂಗನ ಖಾಯಿಲೆಗೆ ಸರಿಯಾದ ಔಷಧ ಸಿಗದ ಕಾರಣ ಸುಮಾರು ಮಂದಿ ಮೃತಪಟ್ಟರು. ತುಂಬಾ ಹಿಂದೆ ಕ್ಯಾಸನೂರು ಎಂಬ ಊರಿನ ಅರಣ್ಯ ಪ್ರದೇಶದಲ್ಲಿ ಮೊದಲು ಕಾಣಿಸಿಕೊಂಡ ಈ ಖಾಯಿಲೆ ಈಗ ಮತ್ತೆ ಕಳೆದ ಎರಡು ವರ್ಷಗಳಿಂದ ಮಾರಣಾಂತಿಕವಾಗಿ ವ್ಯಾಪಿಸುತ್ತಿದೆ. ಇದೆಲ್ಲ ಒಂದು ಕಡೆಯಾದರೆ ಕರೋನ ವೈರಸ್ ಮತ್ತೊಂದು ಕಡೆ ಇಡೀ ವಿಶ್ವದಾದ್ಯಂತ ಹಬ್ಬುತ್ತಿದೆ. ನಮ್ಮ ದೇಶ ರಾಜ್ಯದಲ್ಲೂ ಕರೋನ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಲೆನಾಡುಗೂ ಕಷ್ಟಗಳ ಬೇರೆ ಬೇರೆ ಆಯಾಮದ ಪರಿಚಯವಾಗುತ್ತಿದೆ. ಕೊರೋನ ನಿರ್ಮೂಲನೆ ಪಣ ತೊಟ್ಟು ಅಂತರ ಕಾಯ್ದಿದ್ದಾರೆ. ಸಾಮಾಜಿಕ ಅಂತರವನ್ನು ಮುಂಚಿನಿಂದಲೂ ಕಾಪಿಟ್ಟಿರುವುದಕ್ಕೆ ಊರು ಮನೆಗಳ ಅಂತರವೇ ಸಾಕ್ಷಿ.
ಇದರ ನಡುವೆ ರೈತರ ಸ್ಥಿತಿ ಚಿಂತಾಜನಕ. ಮಲೆನಾಡ ಕಾಡು ಪ್ರಾಣಿಗಳ ದಾಳಿಯಿಂದಾಗುವ ಹಾನಿ (ಕಾಡೆಮ್ಮೆ ಮಂಗಗಳು ಇತ್ಯಾದಿ) ಒಂದೆಡೆಯಾದರೆ ಲಾಕ್ ಡೌನ್ ನಿಂದಾದ ಬೆಲೆ ಕುಸಿತ ಅಥವಾ ಬೆಳೆಗೆ ಬರುವ ರೋಗದ ಪರಿಣಾಮ ಹೇಗೆ ಒಂದಲ್ಲಾ ಒಂದು ಸಂಕಷ್ಟ. ಹೀಗಿರುವ ಮಲೆನಾಡಿಗರಿಗೆ ಮಲೆನಾಡಿಗರೇ ಸಾಟಿ. ಎಂತಹ ಕ್ಷಣದಲ್ಲೂ ಧೃತಿಗೆಡದೆ ತಮ್ಮದೇ ಕಟ್ಟುಪಾಡುಗಳಿಂದ ಜೀವನ ಸಾಗಿಸುತ್ತಿದ್ದಾರೆ. ಯಾವುದೇ ಅಪಾಯ ಸಂದರ್ಭದಲ್ಲಿ ಮಾತ್ರವಲ್ಲದೆ ಹಬ್ಬ ಹರಿದಿನಗಳಲ್ಲದೆ ಇತ್ಯಾದಿ ದಿನಗಳಲ್ಲೂ ಮುಂಚೂಣಿಯಾಗಿ ಒಗ್ಗಟ್ಟಾಗಿ ಇರುತ್ತಾರೆ. ಒಬ್ಬರಿಗೊಬ್ಬರು ಸಹಾಯವಾಗಿ ನಿಲ್ಲುತ್ತಾರೆ. ಇದು ನಮ್ಮ ಮಲೆನಾಡಿನ ಪರಿಸ್ಥಿತಿಯ ಒಳಹರಿವು.
-ವಿಜೇತ ಎಂ. ವಿ