ಮಲೆನಾಡಿನ ದೀಪಾವಳಿ: ವೇದಾವತಿ ಹೆಚ್. ಎಸ್.


“ಮಲೆನಾಡು”ಎಂದರೆ ಅದೊಂದು ಸುಂದರವಾದ ವನಸಿರಿಗಳ ನಡುವೆ ಕಂಗೋಳಿಸುವ ಊರೆಂದರೆ ತಪ್ಪಾಗಲಾರದು. ಒಂದೊಂದು ಮನೆಯೂ ಅವರವರ ಜಮೀನುಗಳ ಮಧ್ಯದಲ್ಲಿ ಸುಂದರವಾಗಿ ಕಟ್ಟಿಕೊಂಡು, ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಂಡು ಜೀವನ ನೆಡೆಸಿಕೊಂಡು ಬಂದಿರುತ್ತಾರೆ. ಅವರಿಗೆ ಅವರದೇ ಆದ ಸಂಪ್ರದಾಯಗಳು ಹಳೆಯ ತಲೆಮಾರಿನಿಂದಲೂ ಬಳುವಳಿಯಾಗಿ ಬಂದಿರುತ್ತದೆ.

ದೀಪಾವಳಿ ಹಬ್ಬವನ್ನು ನಮ್ಮ ಮಲೆನಾಡಿನ ಜನರು ಐದು ದಿನಗಳ ಕಾಲ ಸಂಭ್ರಮದಿಂದ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಹಿಂದಿನ ತಲೆಮಾರಿನ ಜನರು ನಡೆಸಿದಷ್ಟು ಆಚರಣೆಗಳು ಇಂದು ಕಡಿಮೆಯಾಗಿದ್ದರೂ, ಅದನ್ನು ಸ್ಪಲ್ಪ ಮಟ್ಟಿಗೆಯಾದರೂ ಇಂದಿನ ತಲೆಮಾರಿನ ಜನರು ಮುಂದುವರಿಸಿಕೊಂಡು ಬಂದಿದ್ದಾರೆ. ಹಬ್ಬದ ಸಂಭ್ರಮ ಕಡಿಮೆಯಾಗಲು ಕಾರಣ ಮೂಲ ಮಲೆನಾಡಿನ ಜನರು ಈಗ ಅಲ್ಲಿ ವಾಸಿಸದೇ, ಪಟ್ಟಣದ ಕಡೆಗೆ ಬಂದಿರುವುದು ಒಂದು ಕಾರಣವೆನ್ನಬಹುದು. ಅಲ್ಲದೇ, ಅಲ್ಲಿಯ ಜನರಿಗೆ ತಮ್ಮ ಜಮೀನು ಕೆಲಸವನ್ನು ಮಾಡಿಸಲು ಜನರ ಕೊರತೆಯೂ ಇತ್ತೀಚ್ಚಿನ ದಿನಗಳಲ್ಲಿ ನಾವು ನೋಡಬಹುದು. ಅಲ್ಲಿ ಗದ್ದೆಗಳಿದ್ದ ಜಮೀನುಗಳು ಭತ್ತವನ್ನು ಬೆಳೆಯದೇ, ಕಾಫಿ ತೋಟ, ಅಡಿಕೆ ಬೆಳೆಯನ್ನು ಆ ಜಾಗದಲ್ಲಿ ಹಾಕಿ ಬೆಳೆಯುತ್ತಾರೆ. ಈಗ ಮಲೆನಾಡುಗಳಲ್ಲಿ ಕೇವಲ ವಯಸ್ಕರನ್ನು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವುದನ್ನು ನೋಡುವಂತಾಗಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹಬ್ಬಗಳ ಸಂಭ್ರಮವೂ ಹಿಂದಿನಂತಿಲ್ಲವೆಂದರೆ ತಪ್ಪಾಗಲಾರದು.

ನಾವು ಚಿಕ್ಕವರಿದ್ದಾಗ ದೀಪಾವಳಿ ಹಬ್ಬವೆಂದರೆ ನಮಗೆ ಸಂಭ್ರಮವೊ. . ಸಂಭ್ರಮ. ನೀರು ತುಂಬುವ ಹಬ್ಬದ ದಿನ ಕಹಿ ಹಿಂಡಲೆ ಕಾಯಿ(ಇದೊಂದು ಸೌತೆಕಾಯಿ ಜಾತಿಗೆ ಸೇರಿದ ಸಸ್ಯ)ಯನ್ನು ಕಾಡಿನಿಂದ ತಂದು ಬಚ್ಚಲ ಮನೆಯನ್ನು ಶುಚಿ ಮಾಡಿ, ಹಂಡೆಯನ್ನು ತೊಳೆದು, ಹಂಡೆಗೆ ನೀರು ತುಂಬಿಸಿ, ಹಂಡೆಯ ಸುತ್ತಲೂ ಕೆಮ್ಮಣ್ಣು ಮತ್ತು ಸುಣ್ಣವನ್ನು ಬಳಿದು ಈ ಹಿಂಡಲೆಕಾಯಿಯ ಬಳಿಯನ್ನು ಕಟ್ಟುತ್ತಿದ್ದೆವು. ನಂತರ ಆ ಸ್ನಾನದ ಮನೆಯನ್ನು ಯಾರೂ ಉಪಯೋಗಿಸದೇ ಮಾರನೇಯ ದಿನ ಅಭ್ಯಂಗ ಸ್ನಾನ ಮಾಡುತ್ತಿದ್ದೆವು. ನರಕ ಚತುರ್ದಶಿಯ ಹಿಂದಿನ ದಿನ ಹೂವಿನ ಹಾರಗಳನ್ನು ತಯಾರಿಸುತ್ತಿದ್ದೆವು. ಆ ಹೂವಿನ ಹಾರಗಳು ಹಸುಗಳಿಗೆ ನರಕ ಚತುರ್ದಶಿಯ ದಿನ ಅವುಗಳಿಗೆ ಪೂಜೆ ಮಾಡಿ ಹಾಕುತ್ತಿದ್ದೆವು. ಎತ್ತುಗಳಿಗೆ ಗೌರಿಯ ಕಾಯಿಯನ್ನು ಕಾಡಿನಿಂದ ತಂದು, ಅದನ್ನು ಪೋಣಿಸಿ ಎಷ್ಟು ಎತ್ತುಗಳಿವೆ ಅಷ್ಟು ಗೌರಿ ಕಾಯಿಯ ಹಾರವನ್ನು ತಯಾರು ಮಾಡುವುದಿತ್ತು. ಗೌರಿ ಗಿಡವು ಜುಲೈ ತಿಂಗಳ ಮಳೆ ಬಿದ್ದಾಗ ಮರದಲ್ಲಿದ್ದ ಅದರ ಗೆಡ್ಡೆಯು ಚಿಗುರಿ ಗಿಡವಾಗಿ, ಗೌರಿ ಹಬ್ಬದ ಕಾಲದಲ್ಲಿ ಹೂವುಗಳಾಗಿ, ದೀಪಾವಳಿ ಹಬ್ಬದಲ್ಲಿ ಕಾಯಿಗಳಾಗಿ ನಿಂತಿರುತ್ತದೆ. ಇದರ ಕಾಯಿಗಳು ಗೋಲಿಯಾಕಾರದಲ್ಲಿರುತ್ತದೆ. ನೋಡಲು ಸುಂದರವಾಗಿರುತ್ತದೆ. ಅದನ್ನು ತಂದು ಹಾರ ಮಾಡಿವುದಿತ್ತು. ನಂತರ ಹಸುಗಳಿಗೆ ಮನೆಯಲ್ಲಿ ಅರಳಿದ ಚೆಂಡು ಹೂವುಗಳ ಮಾಲೆಯನ್ನು ತಯಾರಿಸುತ್ತಿದ್ದೆವು.

ನರಕ ಚತುರ್ದಶಿಯ ದಿನ ಬೆಳಿಗ್ಗೆ ಅಭ್ಯಂಗ ಸ್ನಾನವನ್ನು ಮಾಡಿ, ನಂತರ ಕೆಮ್ಮಣ್ಣು ಮತ್ತು ಸುಣ್ಣವನ್ನು ನೀರಿನಲ್ಲಿ ಬೇರೆ ಬೇರೆಯಾಗಿ ಬೆರೆಸಿ, ಅದನ್ನು ಒಂದು ವೃತ್ತಾಕಾರದ ಬೌಲ್ನಲ್ಲಿ ಅದ್ದಿ, ಹಸು, ಕರು ಮತ್ತು ಎತ್ತುಗಳ ಮೈಮೇಲೇ ಹಚ್ಚಿ, ಅವುಗಳ ಕೊಡುಗಳಿಗೆ ಎಣ್ಣೆಯನ್ನು ಸವರಿ, ನಂತರ ಹೂವಿನ ಹಾರವನ್ನು ಹಾಕಿ, ಅರತಿ ಎತ್ತಿ, ಸಿಹಿ ಕುಂಬಳಕಾಯಿಯಿಂದ ಮಾಡಿದ ಕಡಬು ಮತ್ತು ಹುಗ್ಗಿಯನ್ನು ಹಸು, ಕರು, ಎತ್ತುಗಳಿಗೆ ತಿನ್ನಿಸಿ ನಂತರ ಅವುಗಳನ್ನು ಮೈಯಲು ಹೊರಗೆ ಬಿಡುತ್ತಿದ್ದೆವು. ದೀಪಾವಳಿಯಲ್ಲಿ ಗೋವುಗಳನ್ನು ಪೂಜೆ ಮಾಡುವುದು ಚಿಕ್ಕಂದಿನ ದಿನಗಳಲ್ಲಿ ತುಂಬಾ ಸಂಭ್ರಮವಾಗಿತ್ತು. ನಂತರ ನಾವುಗಳು ತಿಂಡಿ ತಿಂದು ಪಟಾಕಿ ಸಿಡಿಸುತ್ತಿದ್ದೆವು.

ದೀಪಾವಳಿಯ ಮೊದಲನೆಯ ದಿನವಾದ ನರಕ ಚತುರ್ದಶಿಯ ದಿನ ಮುಂಡುಗ ಹಾಕುವ ಪದ್ದತಿ ಅಲ್ಲಿನ ಸಂಪ್ರದಾಯಗಳಲ್ಲಿ ಒಂದು. ಅದನ್ನು ಮನೆಯ ಬಾಗಿಲಿನಿಂದ ಹಿಡಿದು, ಅರೆಯುವ ಕಲ್ಲಿನವರೆಗೂ ಇಟ್ಟು ಪೂಜಿಸುತ್ತಾರೆ. ಹಾಗೆಯೇ ಅವರವರ ಜಮೀನುಗಳ ಒಂದೊಂದು ಮೂಲೆಯಲ್ಲೂ ಇಡುತ್ತಾರೆ. ಇದನ್ನು ಇಡುವವರು ಆ ಮನೆಯ ಯಜಮಾನ ಮನೆಗೆ ದಿನವೂ ಬರುವ ಕೆಲಸದವರಿಗೆ ಒಪ್ಪಿಸಲಾಗುತ್ತದೆ. ಈ ಮುಂಡುಗವನ್ನು ಇಟ್ಟವರೇ ಬಲಿ ಪಾಡ್ಯಮಿಯ ದಿನದಂದು ಮುಸ್ಸಂಜೆ ಕಾಲದಲ್ಲಿ ಹಾಡನ್ನು ಹೇಳುತ್ತಾ ದೀಪವನ್ನು ಯಜಮಾನ ಮನೆಮುಂದೆ ಮತ್ತು ಅವನ ಜಮೀನಿನ ಪ್ರತಿಯೊಂದು ಮೂಲಗೂ ಹಚ್ಚಬೇಕು. ಅವನು ಬಂದು ದೀಪ ಹಚ್ಚಿದ ನಂತರ ಯಜಮಾನನ ಮನೆಯಲ್ಲಿ ದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುವುದು. ಅದರ ಅರ್ಥ ಬಲಿಯೂ ಆ ಸಮಯದಲ್ಲಿ ಬರುತ್ತಾನೆಂದು ನಂಬಿಕೆ. ಮನೆಯ ಎಲ್ಲಾ ಕಡೆಗಳಲ್ಲೂ ಬೆತ್ತದಿಂದ ಮಾಡಿದ ದೀಪವನ್ನು ಮನೆಕೆಲಸದವನು ಹಚ್ಚಿದ ಹೋದ ಮೇಲೆ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ದೀಪ ಹಚ್ಚಿದವನಿಗೆ ಹಣ, ಹೊಸ ಬಟ್ಟೆ, ಸಿಹಿ ತಿಂಡಿಗಳನ್ನು ನೀಡುತ್ತಾರೆ.

ಮಲೆನಾಡಿನ ದೀಪಾವಳಿಯಲ್ಲಿ ಅಲ್ಲಿನ ಜನರು ವರ್ಷಗಟ್ಟಲೆ ಉಪಯೋಗಿಸುವ ನೇಗಿಲು, ಬಿಸು ಕಲ್ಲು, ಅಕ್ಕಿ ಕೇರುವ ಮರ, ಪಣತ(ಭತ್ತವನ್ನು ವರ್ಷವಿಡಿ ಸಂಗ್ರಹಿಸಿಡು ಮರದ ವಸ್ತು). ಹಸುಗಳು ತಮ್ಮ ಜಮೀನು ಎಲ್ಲದಕ್ಕೂ ಐದು ದಿನಗಳ ಪೂಜೆ ಸಲ್ಲಿಸಲಾಗುತ್ತದೆ. ಹಾಗೆಯೇ ದಿನ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ವಿಶೇಷ ಸ್ಥಾನ ಕೊಟ್ಟು ಗೌರವ ಸೂಚಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಅಂಟಿಗೆ-ಪಿಂಟಿಗೆಯವರು ಮನೆ ಮನೆಗೆ ಬರುವುದಿದೆ. ಅವರು ದೀಪವನ್ನು ಕೈಯಲ್ಲಿ ಹಿಡಿದು ಹಾಡನ್ನು ಹೇಳುತ್ತಾ ಆ ಮನೆಗೆ ಶುಭವಾಗಲಿಯೆಂದು ಹಾರೈಸುತ್ತಾರೆ. ಕರಡಿ ಕುಣಿತ, ಹುಲಿ ಕುಣಿತದ ವೇಷವನ್ನು ಹಾಕಿಕೊಂಡು ಬಂದು, ಕುಣಿದು ಮನೆಯಲ್ಲಿದ್ದ ಜನರಿಗೆ ಉಲ್ಲಾಸ ನೀಡುವುದಿದೆ.

ಹಬ್ಬದ ದಿನಗಳಲ್ಲಿ ವಿಶೇಷವಾಗಿ ಒಬ್ಬಟ್ಟಿನ ಊಟವನ್ನು ಮನೆಮಂದಿಯಲ್ಲ ತಯಾರಿಸಿ ಸವಿಯುವುದಿದೆ. ಆ ಮನೆಯಲ್ಲಿ ಹೊಸದಾಗಿ ಹೆಣ್ಣು ಮಗಳಿಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ್ದರೆ, ಮಗಳು ಮತ್ತು ಅಳಿಯನನ್ನು ಹಬ್ಬಕ್ಕೆ ಕರೆದು, ಆರತಿ ಮಾಡಿ, ತಮ್ಮ ಶಕ್ತಿಗನುಸಾರವಾಗಿ ಮಗಳು ಮತ್ತು ಅಳಿಯನಿಗೆ ಉಡುಗೊರೆಯನ್ನು ನೀಡುವ ಸಂಪ್ರದಾಯವಿದೆ. ಆಗ ಇಡೀ ಕುಟುಂಬದ ಬಂಧುಬಳಗ ಅವರ ಮನೆಗೆ ಬಂದು ಹೊಸದಾಗಿ ಮದುವೆಯಾದ ದಂಪತಿಗಳಿಗೆ ಆರ್ಶಿರ್ವಾದವನ್ನು ಮಾಡುವುದಿದೆ.

ಐದನೇಯ ದಿನ ಮತ್ತು ದೀಪಾವಳಿಯ ಕೊನೆಯ ದಿನ ಹೊಸತೊಡಕುನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆ ದಿನ ಜಮೀನಿನಲ್ಲಿ ಬೆಳೆದ ಪಸಲುಗಳು ಪೈರಿಗೆ ಬಂದು ನಿಂತಿರುತ್ತದೆ. ಭತ್ತ, ಅಡಿಕೆಯನ್ನು ಪೂಜೆ ಮಾಡಲಾಗುತ್ತದೆ. ಹೊಸತೊಡಕಿನ ದಿನ ಸಿಹಿ ತಿಂಡಿಗಳನ್ನು ತಯಾರಿಸಿ ಸವಿಯುತ್ತಾರೆ. ದೀಪಾವಳಿಯೆಂದರೆ ಮಲೆನಾಡಿನ ಜನರಿಗೆ ದೊಡ್ಡ ಹಬ್ಬವೇ ಹೌದು. ಇಂದಿನ ಪೀಳಿಗೆಯವರು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಇಂತಹ ಹಬ್ಬವನ್ನು ಮುಂದುವರಿಸಿಕೊಂಡು ಹೋದರೆ ಅವರ ಮಕ್ಕಳಿಗೂ ಹಬ್ಬದ ಆಚರಣೆಯು ತಿಳಿದಂತಾಗುತ್ತದೆ. ದೀಪಾವಳಿ ಹಬ್ಬವು ಬರೀ ಹಬ್ಬವಾಗಿರದೆ, ಪ್ರತಿಯಾಂದು ವಸ್ತುಗಳಿಗೂ ಗೌರವ ಸೂಚಿಸುವ ಹಬ್ಬವೆಂದರೆ ತಪ್ಪಾಗಲಾರದು.

-ವೇದಾವತಿ ಹೆಚ್. ಎಸ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x