..ಹೇ.. ಆಶೋಕ..ರಾಘು.. ಕವಿತಾ.. ಬೇಗ ಬನ್ರೇ.. ಇಲ್ಲಿದೆ ಅದು.. ಬೇಗ ಬನ್ನಿ.. ಸಕತ್ತಾಗಿದೆ ನೋಡೋಕೆ.. ಅಂತ ಕೂಗಿದಳು ವೀಣಾ..
ಮಲೆನಾಡಿನ ಕಾಡಿನ ಆ ಕಡಿದಾದ ಹಾದಿಯಲ್ಲಿ.. ಅದೂ ಜಾರು ರಸ್ತೆ ಬೇರೆ.. ವೀಣಾಳ ಕೂಗಿಗೆ.. ಕವಿತಾ ಮತ್ತು ರಾಘು ಕೂಡಲೇ ವೀಣಾ ಇದ್ದ ಸ್ಥಳಕ್ಕೆ ತಲುಪಿದರು..
ಎಲ್ಲೇ ವೀಣಾ.. ಎಲ್ಲೇ ತೋರಿಸೇ ಬೇಗ..
ಅದೋ ಅಲ್ಲಿ ನೋಡಿ.. ಆ ಮತ್ತಿ ಮರದ ಬಲಭಾಗದ ದೊಡ್ಡ ಕೊಂಬೆ ಇದೆಯಲ್ಲ.. ಅದರ ತುದಿಯಲ್ಲಿ.. ಕೆಂಪು ಕಾಣ್ತಿದೆ ನೋಡಿ ಅದೇ.. ಮಲಬಾರ್ ಟ್ರೋಗನ್ ಗಂಡು.. ಎಂದು ತೋರಿಸಿದಳು ವೀಣಾ
ಹಾ!!! ಕಾಣ್ತು.. ಅಬ್ಬಾ.. ಎಂತಾ ಚೆಂದದ ಹಕ್ಕಿ ವೀಣಾ.. ಅದರ ಕೆಂಪು ಕಲರ್ ನೋಡೇ..ರಾಘೂ.. ಕಾಣ್ತೇನೋ?.. ಹಕ್ಕಿ ನೋಡದ ಕವಿತಾ ಕೇಳಿದಳು..
ಹಾ!! ಕಾಣ್ತು.. ಸಕತ್ತಾಗಿದೆ ಕಣೇ.. ಇರು ಪೋಟೋ ತೆಗಿತೀನಿ.. ಅನ್ನುತ್ತಾ ಎರಡು ಹೆಜ್ಜೆ ಮುಂದೆ ಬಂದು ಕ್ಯಮಾರಾ ಲೆನ್ಸ್ ಜೂಮ್ ಮಾಡಿ ನೋಡತೊಡಗಿದ.. ಅಯ್ಯೋ..ತುಂಬಾ ದೂರ ಆಯ್ತು ಕಣೇ.. ಈ ಲೆನ್ಸ್ ಸಾಲಲ್ಲ.. ಕನಿಷ್ಟ 400 ಎಂ.ಎಂ. ಆದ್ರೂ ಇರ್ಬೇಕು ಅನ್ನುತ್ತಾ.. ಇದ್ದ ಕ್ಯಾಮರಾದಲ್ಲೇ 2-3 ಚಿತ್ರ ತೆಗೆದ..
ಆದರೆ ಬೇಗ ಬರುವ ಪ್ರಯತ್ನದಲ್ಲಿ.. ಅಶೋಕ ಕೊರಕಲಿಗೆ ಕಾಲು ಹಾಕಿ ಜಾರಿ ಬಿದ್ದವನೇ ಎರಡು ಮೂರು ಮಾರಿ ಉರುಳಿ.. ಅಮ್ಮಾ ಎಂದು ಕೂಗಿದ.. ಆದರೂ ಹಕ್ಕಿ ನೋಡಬೇಕೆನ್ನುವ ಕಾತರದಲ್ಲಿ ಪುನ ಎದ್ದು ಬರುವಷ್ಟರಲ್ಲಿ..ಹಕ್ಕಿ ಹಾರಿ ಹೋಗಿತ್ತು.. ಅಯ್ಯೋ!! ಥೂ.. ನೋಡಕ್ಕೆ ಆಗ್ಲಿಲ್ವಲ್ಲಾ.. ಎಂದು ಕೊರಗುತ್ತಾ ಅಲ್ಲೇ ಕೆಳಗೆ ಕುಳಿತ ಅಶೋಕ.. ಕಾಳಿನಿಂದ ಸಣ್ಣದಾಗಿ ರಕ್ತ ವಸರುತ್ತಿತ್ತು..
ಥೂ ನಿನ್ನ.. ಕರೆದಂಗೆ ಹಿಂದೆ ಮುಂದೆ ನೋಡದೇ ಓಡೋದ.. ಈಗ ನೋಡು ಕಾಲು ಹೆಂಗೆ ಗಾಯ ಆಗಿದೆ.. ಗದರುತ್ತಾ.. ಬಾಟಲಿಯಿಂದ ಗಾಯದ ಮೇಲೆ ನೀರು ಸುರಿದಳು ವೀಣಾ..
ಆ ಕೊರಕಲಿಗೆ ಕಾಳು ಸಿಕಾಕೊಳ್ತು ಕಣೆ.. ಅಮ್ಮಾ.. ಸಕತ್ತು ನೋವ್ತಿದೆ.. ನರಳಿದ ಅಶೋಕ..
ಎರಡು ನಿಮಿಷ ಕೂತ್ಕೋ.. ಸರಿಯಾಗುತ್ತೆ..
ಲೋ ಮಗಾ.. ನೀನೇನಾದ್ರೂ ಆ ಹಕ್ಕಿ ನೋಡಿದ್ರೆ ನಿಜವಾಗ್ಲೂ ನಿನ್ನ ನೋವು ಮರೆತೋಗ್ತಿದ್ದೆ.. ಎಂಥಾ ಚೆಂದದ ಹಕ್ಕಿ ಮಾರಾಯ ಅದು..!! ಆ ಕೆಂಪು ಕಲರ್ ಹೊಟ್ಟೆ.. ಕಂದು ಕಲರ್ ಬೆನ್ನು.. ಆ ಕೊಕ್ಕು.. ವ್ವಾವ್.. ಸಕತ್ತಾಗಿತ್ತು ಕಣೋ.. ಇಲ್ಲಿ ನೋಡು.. ಹೆಂಗೋ ಎರಡು ಚಿತ್ರ ತೆಗೆದೆ ಅಷ್ಟು ಕ್ಲಿಯರ್ ಇಲ್ಲ.. ಅಂತಾ ಕ್ಯಾಮರಾದಲ್ಲೇ ಫೋಟೋ ತೋರಿಸಿದ ರಾಘು..
ನೋವಿನಿಂದ ನರಳುತ್ತಿದ್ದ ಅಶೋಕನಿಗೆ ಕ್ಯಾಮರಾದಲ್ಲಿ ಹಕ್ಕಿ ಸರಿಯಾಗಿ ಕಾಣಲೇ ಇಲ್ಲ..ತೂ.. ಎಂತಾ ಚಿತ್ರನೋ ಇದು.. ಬರೀ ಹಸರು ಮಾತ್ರ ಕಾಣ್ತಾ ಇದೆ.. ಎಲೆಗಳು.. ಹಕ್ಕಿ ಒಳ್ಳೇ ಕೆಂಪು ಡಾಟ್ ಇಟ್ಟಂಗಿದೆ ಅಂದ..
ಮುಂದೆ ಹೋಗ್ತಾ ಸಿಕ್‍ಬೋದು ಸುಮ್ನಿರೋ.. ಅಂದಳು ವೀಣಾ..
ಎಲ್ಲರೂ ಮುಂದೆ ನಡೆಯಲು ಸುರು ಮಾಡಿದರು..
ಲೋ ಅವರಿಬ್ಬರು ಎಲ್ರೋ?.. ಕೂಗಿದ ಅಶೋಕ..
ಅವರು ಮುಂದೆ ಗಾಡಿ ಹತ್ರ ತಲುಪಿರಬೇಕು ಹೇಳಿದ ರಾಘು..
ಸರಿ ಬೇಗ ನಡೀರಿ.. ಆಗ್ಲೇ 5.45.. ಇನ್ನು ಅರ್ದ ಗಂಟೇಲಿ ತಲುಪಬೇಕು.. ಆಮೇಲೆ ಪುನ 45 ಗಂಟೆ ಸ್ಟ್ಯಾಂಡ್‍ಗೆ ತಲುಪೋಕೆ ಬೇಕು.. ನಡೀರಿ ಬೇಗ ಅಂದ ಅಶೋಕ..
ಎಲ್ಲರೂ ಬೇಗ ಬೇಗ ಹೆಜ್ಜೆ ಇಡುತ್ತಾ ಮುಂದೆ ನಡೆದರು..
ಸಂಜೆಯ ಸಮಯವಾಗಿದ್ದರಿಂದ.. ಸೂರ್ಯನ ಹೊಂಬಿಸಿಲಿನ ಕಿರಣಗಳು ಪ್ರತೀ ಎಲೆಗಳ ಮೇಲೆ.. ಗಿಡಗಳ ಮೇಲೆ ಬಿದ್ದು ಎಲೆಗಳೆಲ್ಲಾ ಫಳ ಫಳನೆ ಹೊಳೆಯುತ್ತಿದ್ದವು.. ಕೆಲವು ಕಡೆ.. ಕಾಡು ದಟ್ಟವಾಗಿದ್ದ ಜಾಗದಲ್ಲಿ ಸೂರ್ಯನ ಕಿರಣಗಳು ಆ ದಟ್ಟ ಕಾಡನ್ನು ಸೀಳಿಕೊಂಡು ಬೆಳಕಿನ ಕೋಲುಗಳಾಗಿ ಕಾಣುತ್ತಿದ್ದವು..ಮದ್ಯೆ ಮದ್ಯೆ ಹತ್ತು ಹಲವು ಹಕ್ಕಿಗಳ ಕಲರವವಂತೂ ಎಲ್ಲರನ್ನೂ ಅತ್ಯಂತ ಖುಷಿ ಪಡಿಸುತ್ತಿತ್ತು..ರಾಘು.. ಪ್ರತೀ 2 ನಿಮಿಷಕ್ಕೊಮ್ಮೆ ಕಂಡಿದ್ದನ್ನೆಲ್ಲಾ ಕ್ಲಿಕ್ಕಿಸುತ್ತಾ.. ವ್ವಾವ್ ಇದು ಸಕತ್ತಾಗಿ ಬಂದಿದೆ.. ಅಂತ ಎಲ್ಲರಿಗೂ ತೋರಿಸುತ್ತಿದ್ದ..
ಹಿಂದಿನ ದಿನ ಜೋರು ಮಳೆ ಬಿದ್ದಿದ್ದರಿಂದ ನೆಲವೆಲ್ಲಾ ಒದ್ದೆಯಾಗಿ ವೇಗವಾಗಿ ನಡೆಯಲು ಕೂಡಾ ಸಾಧ್ಯವಾಗುತ್ತಿರಲಿಲ್ಲ..ಕಾಲು ಜಾರುವುದು ಬೀಳುವುದು ಮಾಮೂಲಿಯಾಗಿತ್ತು..ಜೊತೆಗೆ ಕೆಲವು ಕಡೇ ವಿಪರೀತ ಜಿಗಣೆಗಳ ಕಾಟ ಬೇರೆ.. ಕಚ್ಚಿ ಗಂಟೆಗಳಾದ್ರೂ ಅದರ ಸುಳಿವನ್ನೇ ಕೊಡದ ಜಿಗಣೆಗಳು ಹುಟ್ಟಿದಾಗಿನಿಂದಲೂ ಅಪಾರ್ಟ್‍ಮೆಂಟಿನಲ್ಲೇ ಬದುಕುತ್ತಿರುವ ಅಶೋಕನಿಗೆ ಒಂದು ಆಶ್ಚರ್ಯವನ್ನೇ ಹುಟ್ಟಿಸಿದ್ದವು..
ಅರ್ದ ಗಂಟೆ ನಡೆಯುತ್ತಿದ್ದಂತೆ ರಸ್ತೆಗೆ ಅಡ್ಡಲಾಗಿ ಹರಿಯುತ್ತಿದ್ದ ಸಣ್ಣ ತೊರೆಯನ್ನು ಕಂಡು.. ಅಲ್ಲೇ ಪಕ್ಕದ ಕಲ್ಲಿನ ಮೇಲೆ ಕೂತಳು ಕವಿತಾ.. ಅಮ್ಮಾ ಕಾಳು ನೋವ್ತಿದೆ ಕಣ್ರೋ.. ಸ್ವಲ್ಪ ಕೂರೋಣ ಪ್ಲೀಸ್!!! ಅಂದಳು..
ಹೌದು.. ಸ್ವಲ್ಪ ಕೂರೋಣ ಅಶೋಕ..ರಾಘೂ ಕೂಡ ಧನಿ ಸೇರಿಸಿದರು.. ಎಲ್ಲರೂ ಅಲ್ಲೇ ಕುಳಿತರು..
ವೀಣಾ ಒಮ್ಮೆ ಜೋರಾಗಿ ಮಧೂ… ಅಂತ ಕೂಗಿದಳು..
ಆ ಕಡೆಯಿಂದ ಜೋರಾಗಿ.. ಹೋ ಎನ್ನುವ ಉತ್ತರ ಬಂತು..
ಹೋ ಅವರು ಇನ್ನೂ ತಲುಪಿಲ್ಲ ಕಣ್ರೋ.. ಇಲ್ಲೇ ಸ್ವಲ್ಪ ಮುಂದೆ ಇರಬಹುದು ಅಂದಳು ವೀಣಾ..
ಸರಿ 5 ನಿಮಿಷ ಕೂತು ಹೊರಡೋಣ.. ಓಕೆ.. ಅಂದಳು ಕವಿತಾ..
ಅಶೋಕ ಮಾತ್ರ ಶೂ ಒಳಗೆ ಸಾಕ್ಸ್‍ನ ಒಳಗೆ ಸೇರಿಕೊಂಡಿದ್ದ ಜಿಗಣೆಗಳನ್ನು ಒಂದೊಂದಾಗಿ ಕಿತ್ತು ಕಿತ್ತು ಬಿಸಾಕುತ್ತಿದ್ದ..
ಕವಿತಾ.. ವೀಣಾ..ರಾಘು ಕೂಡಾ ಜಿಗಣೆಗಳಿರಬಹುದೇನೋ ಅಂತ ಶೂ.. ಸಾಕ್ಸ್ ಎಲ್ಲಾ ಹುಡುಕತೊಡಗಿದರು.. ಕವಿತಾಳ ಕಾಲಿನ ಹಿಂಬಾಗ ಮೊಣಕಾಲಿನತ್ತಿರ ಒಂದು ಜಿಗಣೆ ಅದಾಗಲೇ ರಕ್ತ ಕುಡಿದು ಹೆಬ್ಬೆರಳಿನ ಗಾತ್ರಕ್ಕೆ ದೊಡ್ಡದಾಗಿತ್ತು.. ಅದನ್ನು ಕಂಡಿದ್ದೇ ಕವಿತಾ..ಜೋರಾಗಿ ಕೂಗಿಕೊಂಡಳು.. ವೀಣಾ ಮೆಲ್ಲನೇ ಅದನ್ನು ಕಿತ್ತು ತೆಗೆದು ಬಿಸುಟಿದ್ದೇ.. ಅದ್ಯಾಕೆ ಅಷ್ಟು ಹೆದರ್ತೀಯಾ?.. ಏನೂ ಆಗಲ್ಲ ಬಿಡು.. ಬೆಂಗಳೂರಿಗೆ ಹೋಗಿದ್ದೆ ಒಂದು ಟಿಟಿ ಇಂಜೆಕ್ಷನ್ ತಗೋ ಸಾಕು ಅಂದಳು..
5 ನಿಮಿಷ ಕುಳಿತವರು ಎಲ್ಲಾ ಎದ್ದು ನಡೆಗೆ ಶುರು ಮಾಡಿದರು..
ಬೆಳಿಗ್ಗೆ 5.45 ರಿಂದ ನಡೆಯಲು ಶುರು ಮಾಡಿದ್ದರು ಇವರುಗಳು..ಮಲೆನಾಡಿನ ಒಂದು ಕಾಡಿನಲ್ಲಿ ಸುಮಾರು 9 ಕಿಮೀಗಳ ಟ್ರೆಕ್ಕಿಂಗ್ ದಾರಿ.. ಸಿಟಿಯಲ್ಲಿ 100 ಮೀಟರ್ ದೂರಕ್ಕೂ ಗಾಡಿ ಇಲ್ಲಾ ಆಟೋದಲ್ಲಿ ಓಡಾಡುವ ಇವರುಗಳಿಗೆ 9 ಕಿಲೋಮೀಟರ್ ನಡೆಯುವುದು ನಿಜಕ್ಕೂ ಸವಾಲಾಗಿತ್ತು..ಕಾಡಿನುದ್ದಕ್ಕೂ ಗಲಾಟೆ ಮಾಡುತ್ತಾ.. ಹಕ್ಕಿಗಳನ್ನು ನೋಡುತ್ತಾ.. ಆನೆ ಗಾತ್ರದ ಮರಗಳು.. ಕಿಲೋ ಮೀಟರ್ ಎತ್ತರದ ಬಿದಿರುಗಳು.. ಭಯ ಹುಟ್ಟಿಸುವಂತಿದ್ದ ಮರದ ಪೊಟರೆಗಳು..10 ಅಡಿಗೂ ಎತ್ತರ ಬೆಳೆದಿದ್ದ ಹುಲ್ಲುಗಳು.. ಅದೆಲ್ಲವನ್ನೂ ದಾಟಿ.. ವಿಸ್ತಾರವಾದ.. ಬೆಟ್ಟದ ಬಯಲಿಗೆ ತಲುಪಿದ್ದರು ಅವರು.. ಮಲೆನಾಡಿನ ಆ ಬೆಟ್ಟದ ಸೊಬಗನ್ನು ಕಣ್ತುಂಬಿಕೊಂಡು.. ಹಾಡಿ ಕುಣಿದು.. ಅಲ್ಲೇ ತೆಗೆದುಕೊಂಡು ಹೋಗಿದ್ದ ತಿಂಡಿ ತಿಂದು.. ವಾಪಾಸು ಹೊರಟರು.. ಅವರು ಹೋಗಿದ್ದ ಕಾಡು ವೀಣಾಳ ಊರಿನದ್ದೇ ಆಗಿದ್ದರಿಂದ ಜೊತೆಗೆ ವೀಣಾ ಚಿಕ್ಕಂದಿನಲ್ಲಿ ಅದೇ ಕಾಡಿನ ಬುಡದಲ್ಲಿ ಆಟವಾಡುತ್ತಾ ಬೆಳೆದವಳಾಗಿದ್ದರಿಂದ ವೀಣಾಗೆ ಆ ಕಾಡು ಎಂದರೆ ಅದೇನೋ ಪ್ರೀತಿ.. ಅಲ್ಲಿ ಸಿಗುವ ನೂರಾರು ಹಕ್ಕಿಗಳನ್ನು ಅವುಗಳ ಶಬ್ದದಿಂದಲೇ ಗುರುತಿಸುವ ಜ್ಞಾನ ಇತ್ತು ಅವಳಿಗೆ..ಅದರಲ್ಲೂ ಮಲಬಾರ್ ಟ್ರೋಗನ್ ಎಂದು ಕರೆಯುವ ಕಾಕರಣೆ ಹಕ್ಕಿ ಅವಳ ಮೆಚ್ಚಿನ ಹಕ್ಕಿಯಾಗಿತ್ತು.. ಆ ಹಕ್ಕಿ ತೋರಿಸುತ್ತೇನೆಂದು ಎಲ್ಲರಿಗೂ ಹೇಳಿದ್ದ ಅವಳಿಗೆ ಇಡೀ ದಿನ ನಡೆದರೂ ಹಕ್ಕಿ ಕಾಣದೇ ಬೇಸರವಾಗಿತ್ತು.. ಅಷ್ಟರಲ್ಲಿ ಏನೋ ಪುಣ್ಯ ಒಂದು ಗಂಡು ಹಕ್ಕಿ ಇವರಿಗೆ ದರ್ಶನ ಕೊಟ್ಟಿತ್ತು..!!
ಹೆಂಗೋ ಬೆಟ್ಟದ ಬುಡದಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ತಲುಪಿದರು ಎಲ್ಲರೂ..ತಂಡದ ಉಳಿದ ಇಬ್ಬರೂ ಅದಾಗಲೇ ಗಾಡಿ ತಲುಪಿ.. ಸುಸ್ತು ಮತ್ತು ಹಸಿವಿನಿಂದ ಬ್ರೆಡ್ ಜಾಮ್ ತಿನ್ನುತ್ತಾ ಕುಳಿತಿದ್ದರು..!! ಪ್ರತಿಯೊಬ್ಬರೂ ಸುಸ್ತಾಗಿದ್ದರು!! ಎಲ್ಲರೂ ಗಾಡಿ ಹತ್ತಿದ್ದೇ.. ಗಾಡಿ ಹೊರಟಿತು..
ಮೊದಲು ವೀಣಾಳನ್ನು ಬಸ್ ಸ್ಟ್ಯಾಂಡಿಗೆ ಬಿಡಬೇಕು.. ಡ್ರೈವರ್‍ಗೆ ಹೇಳಿದ ಅಶೋಕ್..
ಹಾಗೇ ವೀಣಾಳನ್ನು ಬಿಟ್ಟು ಅವರೆಲ್ಲರೂ ಬೆಂಗಳೂರಿಗೆ ಹೊರಟರು!!
–==–
ಮಲೆನಾಡಿನಲ್ಲಿ ಹುಟ್ಟಿ ಬೆಳೆದಿದ್ದರಿಂದಲೂ..ಜೊತೆಗೆ ಭಾಲ್ಯದಲ್ಲಿ ಇದ್ದಾಗ ಇದ್ದ ಮನೆ ಸುತ್ತಾ ಮುತ್ತ ಕಾಡು.. ಬೆಟ್ಟ.. ನದಿ.. ಗಳು ಇದ್ದು ಅವುಗಳೊಂದಿಗೆ ಬೆರೆತು ಬೆಳೆದದ್ದರಿಂದಲೂ.. ವೀಣಾಗೆ..ಚಿಕ್ಕಂದಿನಿಂದಲೂ ಕಾಡು ಎಂದರೆ ಅತ್ಯಂತ ಇಷ್ಟದ ಜಾಗ.. ಹೈಸ್ಕೂಲ್ ಮುಗಿಯೋ ತನಕವೂ ಪ್ರತೀ ರಜಾ ದಿನವೂ ಕಾಡು ಮೇಡುಗಳಲ್ಲೇ ಸುತ್ತಾಡಿ ಕಾಲ ಕಳೀತಿದ್ದ ವೀಣಾಗೆ.. ಕಾಡಿನೊಳಗಿನ ನಡಿಗೆ.. ಹಕ್ಕಿ ವೀಕ್ಷಣೆ.. ಅತ್ಯಂತ ಪ್ರಿಯವಾದ ಹವ್ಯಾಸವಾಗಿತ್ತು.. ಹೈಸ್ಕೂಲ್ ವಿದ್ಯಾಭ್ಯಾಸ ಮುಗಿದದ್ದೇ..ಇಂಜಿನಿಯರ್ ಓದಬೇಕೆನ್ನುವ ಆಸೆಯಿಂದ ದೂರದ ಬೆಂಗಳೂರಿಗೆ ಹೋಗಿ ಅಲ್ಲಿ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡೇ.. ಇಂಜಿನಿಯರಿಂಗ್ ಓದಿ ಮುಗಿಸಿ ಈಗ ಪ್ರತಿಷ್ಠಿತ ಕಂಪೆನಿಯಲ್ಲಿ ಕೈತುಂಬಾ ಸಂಬಳದ ಕೆಲಸಕ್ಕೂ ಸೇರಿಕೊಂಡಿದ್ದಳು.. ಚಿಕ್ಕಮ್ಮನಿಗೆ ಮಕ್ಕಳಿಲ್ಲದ ಕಾರಣ ಅತ್ಯಂತ ಪ್ರೀತಿ ಹಾಗೂ ಸ್ವತಂತ್ರವಾಗಿ ಬೆಳೆಸಿದ್ದರಿಂದ.. ಆಕೆಗೆ ಧೈರ್ಯ.. ಬುದ್ದಿವಂತಿಕೆಯೇನೂ ಕಡಿಮೆ ಇರಲಿಲ್ಲ..
ಇಂಜಿನಿಯರಿಂಗ್ ಓದುತ್ತಿದ್ದಾಗಿನಿಂದಲೂ ಗೆಳೆಯರೊಂದಿಗೆ ಟ್ರೆಕ್ಕಿಂಗ್.. ಹಕ್ಕಿ ವೀಕ್ಷಣೆ.. ಪ್ರವಾಸ.. ಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಳು ಅವಳು.. ಹಾಗೇ.. ಈ ವೀಕೆಂಡ್ನಲ್ಲಿ ಮಲೆನಾಡಿನ ಒಂದು ಕುಗ್ರಾಮದಲ್ಲಿರುವ ಕಾಡಿಗೆ ಟ್ರೆಕ್ಕಿಂಗ್ ಹೋಗುವ ನಿರ್ಧಾರ ಮಾಡಿ6 ಜನರ ತಂಡವನ್ನು ಬೆಂಗಳೂರಿನಿಂದ ಕರೆತಂದಿದ್ದಳು ವೀಣಾ..ಟ್ರೆಕ್ಕಿಂಗ್ ಮುಗಿಸದ ಮೇಲೆ ಅವರನ್ನೆಲ್ಲಾ ಬೆಂಗಳೂರಿಗೆ ವಾಪಾಸ್ ಹೋಗಲು ಹೇಳಿ, ಅಲ್ಲಿಂದ ಅವಳ ಊರಿಗೆ ತುಂಬಾ ದೂರವೇನೂ ಇಲ್ಲವಾದ್ದರಿಂದ ಅಲ್ಲಿಂದ 30 ಕಿ.ಮೀ ದೂರ ಇರುವ ನನ್ನ ಅಜ್ಜಿ ಮನೆಗೆ ಹೋಗಿ 2 ದಿನ ಬಿಟ್ಟು ಬರುವುದಾಗಿ ಹೇಳಿ ಅವರನ್ನೆಲ್ಲಾ ವಾಪಾಸು ಕಳಿಸಿಕೊಟ್ಟಳು ವೀಣಾ.. ಅಜ್ಜಿ ಮನೆಗೆ ಡ್ರಾಪ್ ಮಾಡುವ ಬಗ್ಗೆ ಕವಿತಾ ಮತ್ತು ಅಶೋಕ್ ಹೇಳಿದ್ದರೂ ಅದು ಸುಮ್ಮನೇ ದೂರ ಆಗುತ್ತೆ ಮತ್ತೆ ಈಗೇನು?.. ಎಲ್ಲಿಗೆ ಬೇಕಿದ್ರೂ ಕೆ.ಎಸ್.ಆರ್.ಟಿ.ಸಿ. ಬಸ್ ಸಿಗುತ್ತೆ ಅನ್ನೋ ಅಭಿಪ್ರಾಯ ಉಳಿದವರದ್ದಾಗಿದ್ದರಿಂದ ಸ್ನೇಹಿತರ ಮಾತಿಗೆ ಬೆಲೆ ಕೊಟ್ಟು ಅವರಿಂದಲೇ ಬಸ್ ಸ್ಟಾಂಡ್ ಗೆ ಡ್ರಾಪ್ ಮಾಡಿಸಿಕೊಂಡಾಗ ರಾತ್ರಿ 7.30 ಗಂಟೆ.. ಬಸ್ ನಿಲ್ಧಾಣ ತುಂಬಿತ್ತು.. ಸ್ನೇಹಿತರೆಲ್ಲರಿಗೂ ಬಾಯ್ ಹೇಳಿ.. ಅಲ್ಲೇ ಕಲ್ಲುಬೆಂಚಿನ ಮೇಲೆ ಕೂತಳು ವೀಣಾ.. ಬೆಳಿಗ್ಗೆಯಿಂದ ನಡೆದದ್ದಕ್ಕೂ.. ಕಾಲು ನೋವು.. ಮೈ ಕೈ ನೋವು.. ನಿಜಕ್ಕೂ ಸುಸ್ತಾಗಿದ್ದಳು.. ನೀರಿನ ಬಾಟಲಿ ಖಾಲಿ ಯಾಗಿತ್ತು.. ಅಲ್ಲೇ ಪಕ್ಕದಲ್ಲಿ ಇದ್ದ ಅಂಗಡಿಯಿಂದ ನೀರಿನ ಬಾಟಲ್ ಬಿಸ್ಕೆಟ್ ತೆಗೆದುಕೊಂಡವಳೇ.. ಅವಳ ಅಜ್ಜಿ ಊರಿಗೆ ಬಸ್ ಎಷ್ಟೊತ್ತಿಗೆ ಎಂದು ವಿಚಾರಿಸಿಕೊಂಡಳು..
ಎಂಟೂ ಕಾಲಿಗೆ ಒಂದು ಬಸ್ ಇರುವುದಾಗಿಯೂ ನಂತರ ಕೊನೆಯದಾಗಿ 10.45 ಕ್ಕೆ ಒಂದು ಬಸ್ ಇದ್ದು ಅದು ಕೊನೆಯದ್ದು ಎಂದ ಅವನು..ಜೊತೆಗೆ ಹೇಳಿದ.. ಮೇಡಂ.. ಸುಮ್ನೇ ರಿಸ್ಕ್ ತಗೋಬೇಡಿ.. 10.45 ರ ಬಸ್ ಗ್ಯಾರಂಟಿ ಇಲ್ಲ.. ಎಂಟೂ ಕಾಲಿನ ಬಸ್ ಸಿಕ್ಕಲ್ಲಾಂದ್ರೆ ನಂತರ 9.20 ಕ್ಕೆ ಬೆಂಗಳೂರಿಗೆ ಬಸ್ ಇದೆ.. ಅದರಲ್ಲಿ ಹೋಗಿಬಿಡಿ ಅಂದ..
ಆಯ್ತೂ ತ್ಯಾಂಕ್ಸ್.. ಅಂದವಳೇ.. ಬೆಂಚಿನ ಮೇಲೆ ಕೂತು ನೀರು ಕುಡಿದು ಬಿಸ್ಕೆಟ್ ತಿಂದಳು.. ಎಂಟೂ ಕಾಲು ಎಂದರೆ.. ಇನ್ನೇನು ಹತ್ತು ಇಪ್ಪತ್ತು ನಿಮಿಷ ಅಂದವಳೇ.. ಸಮಾಧಾನವಾಗಿ ಬಸ್ ನಿಲ್ಧಾಣದ ಸುತ್ತ ದೃಷ್ಠಿ ಹಾಯಿಸಿದಳು.. ಸುಮಾರು 60 ರಿಂದ 70 ಜನ ಒಂದೇ ಗುಂಪಿನಲ್ಲಿ ಕುಳಿತಿದ್ದರು.. ಬಹುಷ ಎಲ್ಲರೂ ಒಂದೇ ಊರಿನವರೇ ಇರಬೇಕು.. ಅಂದುಕೊಂಡಳು..ದೂರದಲ್ಲಿ.. ವಿಚಾರಣೆ/ಸಹಾಯ ಎನ್ನುವ ಬೋರ್ಡಿದ್ದ ಒಂದು ಟೇಬಲ್ ಇತ್ತಾದರೂ ಅದರ ಮುಂದಿದ್ದ ಖುರ್ಚಿಯಲ್ಲಿ ಯಾರೂ ಕುಳಿತಿರಲಿಲ್ಲ.. ನಿಲ್ಧಾಣದ ಕೊನೆಯ ಮೂಲೆಗೆ ಶೌಚಾಲಯ ಮತ್ತು ಇನ್ನೊಂದು ಬದಿಯಲ್ಲಿ ಪೊಲೀಸ್ ಎಂದು ಬರೆದಿದ್ದ ಒಂದು ಕೋಣೆಯಿತ್ತು..
ಅಲ್ಲಾ.. ಎಷ್ಟೆಲ್ಲಾ ಬದಲಾವಣೆ ಯಾಗಿದೆ ಸಮಾಜದಲ್ಲಿ.. ಆದರೆ ಈ ಬಸ್ ನಿಲ್ಧಾಣ ಯಾಕೆ ಇನ್ನೂ ಹೀಗಿದೆ?.. ಎಂದುಕೊಂಡಳು ಮನಸ್ಸಿನಲ್ಲೇ.. ಹೈಸ್ಕೂಲಿನಲ್ಲಿದ್ದಾಗ ಯಾವಾಗಲೋ ಇದೇ ನಿಲ್ಧಾಣದಿಂದ ಒಮ್ಮೆ ಪಪ್ಪ… ಮಮ್ಮ.. ಅಜ್ಜಿ ಜೊತೆ ಬಸ್ ಹತ್ತಿದ್ದನ್ನು ನೆನೆಸಿಕೊಂಡಳು.. ಹೂಂ.. ಯಾವಾಗ ಉದ್ಧಾರ ಆಗುತ್ತೋ ಏನೋ ಅಂದುಕೊಂಡಳು.. ಗಡಿಯಾರ ನೋಡಿಕೊಂಡಳು.. ಆಯ್ತು.. ಇನ್ನು 5 ನಿಮಿಷ ಇದೆ.. ಅಷ್ಟರಲ್ಲಿ ಯಾವುದಕ್ಕೂ ಶೌಚಕ್ಕೆ ಹೋಗಿ ಬಂದುಬಿಡುವ ಅಂದುಕೊಂಡು.. ಬ್ಯಾಗ್ ಅಲ್ಲೇ ಬಿಟ್ಟು ಶೌಚಕ್ಕೆ ನಡೆದಳು..
ಮಹಿಳಾ ಶೌಚಾಲಯದ ಹತ್ತಿರ.. ಯಾರೋ ಗಂಡಸಿದ್ದು.. ಇವಳನ್ನೇ ದುರುಗುಟ್ಟಿ ನೋಡ್ತಿದ್ದ.. ಅವನೆಡೆಗೆ ಕೆಂಗಣ್ಣು ಬೀರಿ.. ಒಳ ಹೊಕ್ಕವಳೇ.. ಹೊರ ಬರುವಷ್ಟರಲ್ಲಿ.. ನರಕ ದರ್ಶನವಾಗಿತ್ತು..ಥೂ ಎನ್ನುತ್ತಾ.. ಮೂಗು ಮುಚ್ಚಿಕೊಂಡವಳೇ.. ಬ್ಯಾಗಿನ ಹತ್ತಿರ ಹೋಗಿ ನೀರಿನ ಬಾಟಲಿ ತೆಗೆದುಕೊಂಡು ಮುಖ ತೊಳೆದುಕೊಂಡಳು.. ಅದಾ ಅಷ್ಟರಲ್ಲೇ ಬಸ್ ಬಂತು.. ಬಸ್ ಬಂದದ್ದೇ ತಡ.. ನಿಲ್ಧಾಣದಲ್ಲಿ ಕುಳಿತಿದ್ದ 60-70 ಜನರ ತಂಡ ಒಮ್ಮಗೇ ಗುಂಪಾಗಿ ಬಸ್ ಹತ್ತಿರ ಹೋಗಿ ಬಸ್‍ನ ಎರಡೂ ಬದಿಯ ಬಾಗಿಲಿನಿಂದ ಹತ್ತಿಕೊಂಡರು.. ಐದೇ ನಿಮಿಷದಲ್ಲಿ ಬಸ್ ತುಂಬಿ ಹೋಯಿತು,., ಕೂರಲು ಹೋಗಿ.. ನಿಲ್ಲಲೂ ಜಾಗ ಇಲ್ಲದಂತಾಯಿತು..
ಅಯ್ಯೋ ದೇವರೇ ಎಂದುಕೊಂಡವಳೆ.. ಬಸ್ ಡ್ರೈವರ್ ಹತ್ತಿರ ಹೋಗಿ ಹೇಗಾದರು ಒಂದು ಸೀಟು ಮಾಡಿಕೊಡುವಂತೆ ಕೇಳಿಕೊಂಡಳು..
ಅಯ್ಯೋ ಆಗಲ್ಲಮ್ಮ.. ಅವ್ರೂ ಮನುಷ್ಯರೇ ತಾನೇ.. ಹೆಂಗೋ ಅಡ್ಜಸ್ಟ್ ಮಾಡ್ಕೋಳಿ.. ಏನೂ ಮಾಡಕಾಗಲ್ಲ.. ಅಂದು ಬಿಟ್ಟ..
ನಿಜಕ್ಕೂ ಕೋಪ ಬಂದರೂ ಸಹಿಸಿಕೊಂಡು ಸುಮ್ಮನಾದಳು ವೀಣಾ.. ಅಷ್ಟರಲ್ಲೇ..ಟೈರ್ ಕುಟ್ಟಿ ನೋಡ್ತಿದ್ದ ಕಂಡಕ್ಟರ್.. ಅಣ್ಣಾ.. ಹಿಂದೆ ಟೈರ್ ವೀಕ್ ಇದೆ.. ಪಂಚರ್ ಆಗಿರ್‍ಬೋದು ಅಂತ ಡೌಟು ಅಂದ..
ಸರಿ.. ಚೆಕ್ ಮಾಡ್ಸು… ನಾನು ಊಟ ಮಾದ್ಕೊಂಡು ಬರ್ತೀನಿ.. ಅಂದ..
ಸರಿ ಅಂದವನೇ ಕಂಡಕ್ಟರ್.. ಮೆಕಾನಿಕ್ ಹುಡುಕ್ತಾ ಹೊರಟ..
ವೀಣಾಗೆ ಸ್ವಲ್ಪ ಗಾಭರಿ ಆಯ್ತು.. ಏನು ಮಾಡೋದೀಗ?.. ಅಷ್ಟರಲ್ಲೇ.. ಅಂಗಡಿಯಾತ ಇವಳನ್ನು ಕರೆದ.. ಮೇಡಂ ನಾನೇಳಿದ್ನಲ್ಲಾ.. ಬೆಂಗಳೂರು ಬಸ್ ಬರುತ್ತೆ ಅದರಲ್ಲಿ ಹೊರಟೋಗಿ.. ಇಲ್ಲಿ ಸರಿ ಇಲ್ಲ.. ಆ ಬಸ್ ಹೋದ ಮೇಲೆ.. ನಾನೂ ಅಂಗಡಿ ಮುಚ್ಚಿಕೊಂಡು ಹೋಗ್ತೀನಿ … ಆಮೇಲೆ ಇಲ್ಲಿ ಯಾರೂ ಇರಲ್ಲ.. ರಿಸ್ಕ್ ತಗೋಬೇಡಿ ಅಂದ..
ಅಷ್ಟರಲ್ಲೇ..ಟೈರ್ ರಿಪೇರಿ ಮಾಡೋಕೆ ಮೆಕಾನಿಕ್ ಬಂದ.. ಇವಳನ್ನು ನೋಡಿದೊಡನೇ.. ಏನ್ ಮೇಡಂ ಬೆಂಗಳೂರಾ ಅಂದ?.. ಇವಳು ಇಲ್ಲ ಎನ್ನುತ್ತಾ ತಲೆಯಾಡಿಸಿದಳು..
ಅಲ್ವಾ?.. ಮತ್ತೆ ಇಷ್ಟೊತ್ತಿನ ರಾತ್ರೀಲಿ.. ಒಬ್ಳೇ.. ಎನ್ನುತ್ತಾ ಏನೇನೋ ಗೊಣಗುತ್ತಾ.. ಇವಳನ್ನು ಒಮ್ಮೆ ಅಡಿಯಿಂದ ಮೇಲಿನ ತನಕ ನೋಡಿ..ಟೈರ ಬಿಚ್ಚೋಕೆ.. ಶುರು ಮಾಡಿದ. ಜೊತೆಗೆ ಜನರನ್ನೆಲ್ಲಾ.. ಕೆಳಗಿಳಿಯಲು ಕೂಗಿಕೊಂಡ….
ವೀಣಾ ಯೋಚಿಸತೊಡಗಿದಳು.. ಏನು ಮಾಡೋದು?.. ಅಜ್ಜಿ ಮನೆಗೆ ಹೋಗೋದು ಬಿಟ್ರೆ ಬೇರೆ ದಾರಿ ಇಲ್ಲ.. ಅಥವಾ ಬೆಂಗಳೂರಿಗೆ ಹೋಗೋದಾ?.. ಬೇಡ ಬೆಂಗಳೂರಿಗೆ ಹತ್ತಿಬಿಡೋಣ.. ಅದೇ ಸರಿ ಎಂದುಕೊಂಡಳು..ಛೀ.. ಎಂತಾ ತಪ್ಪು ಮಾಡಿದೆ.. ಸುಮ್ನೇ ಅವರ ಜೊತೇಲೇ ವಾಪಾಸ್ ಹೋಗ್ಬೇಕಿತ್ತು.. ಅಜ್ಜಿ ನೋಡೋಣ ಅನ್ನೋ ಆಸೆ ಇಂತ ತೊಂದ್ರೇಗೆ ಸಿಕ್ಕಿಸಿಬಿಡ್ತಲ್ಲಾ?.. ಅಂದುಕೊಂಡಳು..ಛೇ ಪಪ್ಪ ಮಮ್ಮಂಗೆ ಬೇರೆ ಹೇಳಿಲ್ಲ.. ಹೇಳಿದ್ರೆ ಅವರು ಈ ಊರಿಗೆ.. ಬರೋಕೆ ಒಪ್ತಾ ಇರಲಿಲ್ಲ.. ಎಲ್ಲಾ ನಂದೇ ತಪ್ಪು ಅಂದುಕೊಂಡಳು..
ಟೈರ್ ರೆಡಿ ಆಗ್ತಿದ್ದಂಗೆ ಜನರನ್ನು ತುಂಬಿ ಕೊಂಡಿದ್ದ ಬಸ್.. ನಿಲ್ಧಾಣ ಬಿಟ್ಟು ಹೊರಟಿತು.. ಆಸೆ ಕಣ್ಣಿನಿಂದ ಬಸ್ಸಿನೆಡೆಗೆ ನೋಡುತ್ತಾ ನಿಂತಳು ವೀಣಾ.. ಆದರೆ.. ಬಸ್ ಇನ್ನೂ ನಿಲ್ಧಾಣವನ್ನು ದಾಟಿರಲಿಲ್ಲ.. ಆಗಲೇ.. ಬಸ್ಸಿನ ಲೋಡಿಗೆ ಒತ್ತಡ ತಾಳಲಾರದೇ ಬಸ್‍ನ ಇನ್ನೊಂದು ಟೈರ್ ದೊಡ್ಡ ಶಬ್ದದೊಂದಿಗೆ ಸಿಡಿಯಿತು… ಜನರೆಲ್ಲಾ ಹಾಹಾಕರ ಮಾಡುತ್ತಾ.. ಕೆಳಗಿಳಿದವರೇ..ಡ್ರೈವರ್ ಕಂಡೆಕ್ಟರ್ ಜೊತೆ ಜಗಳಕಿಳಿದರು.. ವೀಣಾಗೆ ನಗು ಬಂತು..
9-15, 9-20, 9-45 ಆದ್ರೂ ಬೆಂಗಳೂರಿನ ಬಸ್ ಬರಲೇ ಇಲ್ಲ.. ಅಂಗಡಿಯವನ್ನು ಕೇಳಿದಳು..
ಗೊತ್ತಿಲ್ಲಾ ಮೇಡಂ.. ಬೇರೆ ಯಾರನ್ನಾದ್ರೂ ವಿಚಾರಸ್ಬೇಕು ಇರಿ.. ಎನ್ನುತ್ತಾ ಲ್ಯಾಂಡ್ ಲೈನಿನಿಂದ ಯಾರಿಗೋ ಫೋನ್ ಮಾಡಿದ.. ನಂತರ ಮೇಡಂ.. ಏನು ಮಾಡೋಕಾಗಲ್ಲ.. ಬೆಂಗಳೂರು ಬಸ್ ಸ್ಟ್ಯಾಂಡ್ ಒಳಗೇ ಬರಲೇ ಇಲ್ವಂತೆ.. ಎಲ್ಲಾ ಸೀಟು ತುಂಬಿದ್ದರಿಂದ ಹಾಗೇ ಹೊರಟೋಗಿದೆ.. ಅಂದವನೇ.. ಅಂಗಡಿ ಮುಚ್ಚಲು ರೆಡಿಯಾದ..
ವೀಣಾ ನಿಜಕ್ಕೂ ಈಗ ಸ್ವಲ್ಪ ಹೆದರಿಕೊಂಡಳು.. ಆದರೂ ಧೈರ್ಯ ತಂದುಕೊಂಡು.. ಸರಿ ಇಲ್ಲಿ ಬೇರೆ ಟ್ಯಾಕ್ಸಿ ಏನಾದ್ರೂ.. ಅಥವಾ ಹೋಟೇಲ್.. ಏನಾದ್ರೂ.. ಅಂದಳು..
ಅಂಗಡಿಯಾತ ನಗುತ್ತಾ.. ಹೋಟೇಲ್ ಇಲ್ಲಮ್ಮಾ.. ಆದರೆ..ಟ್ಯಾಕ್ಸಿ ಇದೆ.. ಅದ್ರೆ ಬೆಂಗಳೂರಿಗೆ ಬರೋದು ಡೌಟೇ ಅಂದ..
ಸಮಯ 10.30 ಕಳೀತು.. ವೀಣಾ ಧೈರ್ಯ ಕಳೆದುಕೊಳ್ಳಲಿಲ್ಲ..
ಪಟ್ಟನೆ ಅವಳಿಗೆ ಒಂದು ಐಡಿಯಾ ಬಂತು.. 108!!! 108 ಕ್ಕೆ ಕಾಲ್ ಮಾಡಿದರೆ ಅಂಬುಲೆನ್ಸ್ ಬರುತ್ತಲ್ಲಾ?.. ಅದೇ ಬೆಸ್ಟ್.. ಯಾವುದಾದರೂ ಹತ್ತಿರದ ಆಸ್ಪತ್ರೆಗೆ ಸೇರಿಸೋದು ಗ್ಯಾರಂಟಿ.. ಯೆಸ್.. ಹಂಗೇ ಮಾಡಿದ್ರಾಯ್ತು ಅಂದುಕೊಂಡಳು.. ಸ್ವಲ್ಪ ಧೈರ್ಯ ಬಂತು.. ಸ್ವಲ್ಪ ನೀರು ಕುಡಿದು ಬಿಸ್ಕೆಟ್ ತಿಂದಳು.. ಇನ್ನೇನು 108 ಕ್ಕೆ ಕಾಲ್ ಮಾಡಿ ಸಹಾಯ ಕೇಳಬೇಕು ಅಂದ್ಕೋಳಷ್ಟರಲ್ಲಿ..
ಎಕ್ಸ್‍ಕ್ಯೂಸ್ ಮಿ ಮೇಡಂ.. ಎಂಬ ಧನಿ ಕೇಳಿತು..
ತಿರುಗಿ ನೋಡಿದಳು..
ಒಬ್ಬಾತ.. ಬಿಳೀ ಬಟ್ಟೆಯನ್ನು ಧರಿಸಿ.. ಹಣೇ ಮೇಲೆ ಕೆಂಪು ಬಣ್ಣದ ನಾಮ ಇಟ್ಟುಕೊಂಡವ.. ನಗುತ್ತಾ ಮೇಡಂ.. ಇಷ್ಟೊಂದು ರಾತ್ರೀಲಿ ಇಲ್ಲಿ.. ಅದೂ ಒಬ್ಬಳೇ ಅಂದ..
ಯಾರು ನೀವು?..
ಮೇಡಂ ನಾನು… ಇಲ್ಲೇ 10 ಕಿಮೀ ದೂರದಲ್ಲಿ ಒಂದು ಆಶ್ರಮ ಇದೆ.. ಅದು ರೆಡ್ ಕ್ರಾಸ್ ಸಂಸ್ಥೆಯಿಂದ ನಡೆಸುತ್ತಿರೋದು.. ನಾನು ಅದರ ಒಬ್ಬ ಸೇವಕ..
ಓ .. ಐಸಿ.. ಇಲ್ಲಿ ರೆಡ್ ಕ್ರಾಸ್ ಯೂನಿಟ್ ಉಂಟಾ?.. ಆಶ್ಚರ್ಯ ದಲ್ಲಿ ಕೇಳಿದಳು..
ಹೌದು ಮೇಡಂ.. ಎಸ್ಟಾಬ್ಲಿಷ್ ಆಗಿ ಸುಮಾರು 4 ತಿಂಗಳು ಆಯ್ತು.. ಇನ್ನೂ ಅಧಿಕೃತ ಉದ್ಘಾಟನೆ ಆಗಿಲ್ಲ.. ಅದಿಕ್ಕೆ ಯಾರಿಗೂ ಗೊತ್ತಿಲ್ಲ.. ಆದಮೇಲೆ.. ಇಲ್ಲೆಲ್ಲಾ ಪೋಸ್ಟರ್ ಅಂಟಿಸ್ತೀವಿ..
ಓಕೆ..
ಈಗ ಮೇಡಂ.. ಇಷ್ಟೊತ್ತಿನ ಮೇಲೆ ನಿಮಗೆ ಬೇರೆ ಯಾವುದೂ ಬಸ್ ಸಿಗಲ್ಲ.. ನಾವು ಸಂಸ್ಥೆ ವತಿಯಿಂದ ಹೀಗೆ ರಾತ್ರಿ ಬಂದು ನೋಡ್ಕೊಂಡೋಗ್ತೀವಿ.. ಯಾರಾದ್ರೂ ಅಪರಿಚಿತರು ಹೀಗೆ ಒಂಟಿಯಾಗಿ ಇದ್ರೆ ಸೇಫ್ಟಿಗೋಸ್ಕರ ಕರ್ಕೊಂಡು ಹೋಗಿ.. ಆಶ್ರಮದಲ್ಲಿ ಬಿಡ್ತೀವಿ.. ಅದು ಬಿಟ್ರೆ ನಿಮಗೇ ಬೇರೆ ದಾರಿ ಇಲ್ಲ ಇಲ್ಲಿ..ಜೊತೆಗೆ ಇನ್ನು ಸ್ವಲ್ಪ ಹೊತ್ತಾದರೆ.. ಇಲ್ಲಿ ತುಂಬಾ ಕುಡುಕರು.. ಬಿಕ್ಷುಕರು ಬಂದು ಮಲಕೋತಾರೆ.. ಅಷ್ಟು ಸೇಫ್ಟಿ ಅಲ್ಲ.. ಅಂದ..
ಓಕೆ.. ಆದ್ರೆ ನಿಮ್ಮನ್ನು ಹೆಂಗೆ ನಂಬೋದು?..
ಅಯ್ಯೋ ಮೇಡಂ.. ನಮ್ಮನ್ನಲ್ಲಾ..ರೆಡ್ ಕ್ರಾಸ್ ನ ನೀವು ನಂಬಲ್ವಾ?.. ಈಗಾಗಲೇ ನಿನ್ನೆ ಕರೆಕೊಂಡೋಗಿರೋ 2 ಹುಡುಗೀರು ಅಲ್ಲೇ ಇದ್ದಾರೆ.. ಬೇಕಿದ್ರೆ ನೀವೇ ಬಂದು ನೋಡಿ.. ಗೊತ್ತಾಗತ್ತೆ ಅಂದ..
ಒಮ್ಮೆ ಅವನ್ನೇ ನೋಡಿದಳು ವೀಣಾ.. ಹಾಕಿರೋ ಬಟ್ಟೆ.. ಶೇವ್ ಮಾಡಿಕೊಂಡ ಮುಖ.. ಆ ಸಣ್ಣ ನಗು,.. ಭಾಷೆ.. ವಿನಯ.. ಎಲ್ಲ ಸ್ವಲ್ಪ ಮಟ್ಟಿಗೆ ಧೈರ್ಯ ನಂಬಿಕೆ ಬರಿಸಿತು ಅವಳಿಗೆ..
ಆದ್ರೂ.. ನಿಮ್ಮ ಜೊತೆ ಯಾರಿಲ್ವಾ?.. ಇದ್ದಾರೆ ಮೇಡಂ.. ರಸ್ತೆ ಪಕ್ಕ ವ್ಯಾನ್ ಇದೆ.. ಅದರಲ್ಲಿ ಡ್ರೈವರ್ ಇದ್ದಾನೆ.. ನಿಮಗೆ ಊಟಕ್ಕೆಲ್ಲಾ ಆಶ್ರ್ರಮದಲ್ಲೇ ಸಿಗುತ್ತೆ..ಜೊತೆಗೆ ಮೇಡಂ.. ನೀವು ಇಲ್ಲೇ ಇದ್ದು ಏನಾದ್ರೂ ಹೆಚ್ಚು ಕಮ್ಮಿ ಆದ್ರೆ.. ನಮಗೆ ನೀಡಿರೋ ಲೈಸೆನ್ಸ್ ಕಿತ್ತುಕೋತಾರೆ ಮೇಡಂ.. ನಮ್ಮ ಸಂಸ್ಥೆ ಇಲ್ಲಿ ಶುರು ಆದ ಮೇಲೆ ಎಲ್ಲಾ ಕಳ್ಳರ ಕಾಟನೂ ದೂರ ಆಗಿದೆ ಮೇಡಂ.. ನಾವು ಅಷ್ಟು ಕೇರ್ ತಗೋತೀವಿ ಹೆಣ್ಣು ಮಕ್ಕಳ ಮೇಲೆ.. ಇಲ್ಲಿ ಆ ಕಾಡು.. ಬೆಟ್ಟ ಬೇರೆ ಇರೋದ್ರಿಂದ.. ಪ್ರತೀ ವಾರದ ಕೊನೇಗೆ ಟ್ರೆಕ್ಕಿಂಗ್.. ಅದೂ ಇದೂ ಅಂತ ಬರೋವ್ರಲ್ಲಿ ಯಾರಾದ್ರೂ ತೊಂದ್ರೆಗೆ ಸಿಕ್ಕಾಕೋತಾರೆ.. ಅವರಿಗೆಲ್ಲಾ ನಾವೇ ಆಧಾರ ಮೇಡಂ..
ಹೂಂ.. ಅವನ ನೋಡಿದಳು ಮತ್ತೊಮ್ಮೆ.. ನೋಡಿದ್ರೆ..ರೇಪ್ ಮಾಡೋಷ್ಟು ಕಟುಕನ ತರಹ ಅಥವಾ.. ಶಕ್ತಿವಂತನ ಥರಾನೂ ಕಾಣಲಿಲ್ಲ.. ಹಂಗೂ ಏನಾದ್ರೂ ಟ್ರೈ ಮಾಡಿದ್ರೆ ಇವನ್ನನ್ನು ಹೊಡೆದು ಬೀಳಿಸೋದು ಅಷ್ಟು ಕಷ್ಟ ಏನಲ್ಲ ಅಂದಕೊಂಡಳು ವೀಣಾ.. ಅದೂ ಮೀರಿದ್ರೆ ಇದ್ದೇ ಇದೆಯಲ್ಲ ವೆಪನ್!! ಅಂದುಕೊಂಡಳು.. ಮನಸ್ಸಿನಲ್ಲೇ.. ಆದರೂ ಏನೂ ಮಾತನಾಡದೇ.. 10 ನಿಮಿಷ ನಿಂತಳು..
ಮೇಡಂ.. ಹೆದರಿಕೋಬೇಡಿ.. 11 ಗಂಟೆಗೆ ನಾವು ಹೋಗ್ತೀವಿ.. ಆಮೇಲೆ ಇಲ್ಲಿ ನಾವು ಗಂಡಸರೂ ಇರಕ್ಕಾಗಲ್ಲ.. ಅಂತಾ ಕುಡುಕರ ಹಾವಳಿ ಇದೆ.. ಧೈರ್ಯವಾಗಿ ಹೊರಡಿ.. ಏನೂ ಆಗಲ್ಲ.. ಅಂದ..
ಮನಸ್ಸಿನಲ್ಲೇ ದೇವರನ್ನು ನೆನೆಯುತ್ತಾ..ಧೈರ್ಯ ಮಾಡಿ.. ಸರಿ.. ನಾನು ನಿಮ್ಮನ್ನ ನಂಬ್ತೀನಿ.. ಆದ್ರೆ ಮೋಸ ಮಾಡ್ಬೇಡಿ.. ಪ್ಲೀಸ್.. ಅಂದು ಕೈ ಮುಗಿದಳು..
ಅಯ್ಯೋ ಬನ್ನಿ ಮೇಡಂ.. ಅಷ್ಟೋಂದು ಅಪನಂಬಿಕೆ ಪಟ್ರೆ ಬದುಕೋಕಾಗುತ್ತಾ?.. ನಂಬಿಕೆ ಮುಖ್ಯ ಮೇಡಂ.. ನೀವು ನನ್ನ ನಂಬಿ.. ಅಷ್ಟು ಸಾಕು.. ಅಂದವನ ಕಣ್ಣಲ್ಲಿ ಫಳ ಫಳ ಹೊಳಪು.. ಅದರಲ್ಲಿದ್ದ ಆಸೆಯನ್ನು ವೀಣಾ ಗಮನಿಸಲು ಸೋತಿದ್ದು ಅವಳ ದುರಾದೃಷ್ಟವೇ ಸರಿ..
ಸರಿ.. ಅವನೇ ಬ್ಯಾಗ್ ತೆಗೆದುಕೊಂಡ.. ನಡೆಯುತ್ತಾ ರಸ್ತೆ ಹತ್ತಿರ ತಲುಪಿದರು..ದೂರದಲ್ಲಿ ಒಂದು ಬಾರ್ ಬಿಟ್ರೆ.. ಬೇರೆ ಏನೂ ಇಲ್ಲ.. ಸಮಯ ನೋಡಿಕೊಂಡಳು.. ಅದಾಗಲೇ 11-10.. ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಅಂದುಕೊಂಡಳು..
ಅದೊಂದು ಹಳೇಯ ಮಾರುತಿ ವ್ಯಾನ್.. ಕಪ್ಪು ಬಣ್ಣದ್ದು.. ಗಾಜಿಗೆಲ್ಲಾ ಕಪ್ಪು ಬಣ್ಣದ ಸ್ಟಿಕರ್ ಅಂಟಿಸಲಾಗಿತ್ತು.. ಎಲ್ಲಿ ನಿಮ್ಮ ಡ್ರೈವರ್.. ಕೇಳಿದಳು ವೀಣಾ..
ಅಯ್ಯೋ ಅವಂದೊಂದು ಕಾಟ ಮೇಡಂ..ರಾತ್ರಿ ಯಾವಾಗಲು ಕುಡಿಬೇಕು ಅವನಿಗೆ.. ಅದಾ ಅಲ್ ನೋಡಿ.. ಅಲ್ಲಿ ಕೆಂಪು ಬಣ್ಣದ ಅಂಗಿ ಹಾಕಿದ್ದಾನಲ್ಲಾ ಅವನೇ.. ಅಂದ..
ಅಲ್ಲಿ ದೂರದಲ್ಲಿ ಬಾರಿನತ್ತಿರ ಕೆಂಪು ಬಣ್ಣದ ಅಂಗಿ ಹಾಕಿದ್ದವನು .. ಆದಾಗಲೇ ತೂರಾಡ್ತಾ ಇದ್ದ.. ವೀಣಾಗೆ ಭಯ ವಾಯಿತು..
ಅಯ್ಯೋ ಅವನು ತುಂಬಾ ಕುಡಿದಿರೋ ಹಾಗಿದೆ.. ಗಾಡಿ ಹೆಂಗ್ ಓಡಿಸ್ತಾನೆ..
ತೊಂದ್ರೆ ಇಲ್ಲ ಮೇಡಂ.. ಎಷ್ಟು ಕುಡಿದ್ರೂ ಸರಿ ಓಡಿಸ್ತಾನೆ.. ಅನ್ನುತ್ತಾ.. ಒಮ್ಮೆ ಅವನ್ನು ಜೋರಾಗಿ ಕೂಗಿದ ಅವ..
ಆ ಕಡೆಯಿಂದ ಯಾರೂ ತಿರುಗಿ ನೋಡಲೂ ಇಲ್ಲ.. ಮೇಡಂ ಫುಲ್ ಟೈಟಾಗಿದ್ದಾನೆ.. ಬಿಡಿ ನಾವೇ ಹೋಗೋಣ.. ನಾನೇ ಡ್ರೈವ್ ಮಾಡ್ತೀನಿ ಅಂದ..
ಇಬ್ರೇನಾ?..
ಹೂಂ.. ಅದಿಕ್ಕೇನು?.. ಅವ ಹೇಗಿದ್ರೂ ಟೈಟಾಗಿದ್ದಾನೆ.. ನಿಮಗೂ ಹಿಂಸೆ.. ನಡೀರಿ.. 20 ನಿಮಿಷ ಅಷ್ಟೇ ಆಶ್ರಮ ತಲುಪ್ತೀವಿ.. ಅಂದ..
ಸರಿ ಅಂದಳು.. ಆದರೂ ಒಳಗೇ ಒಂದು ಅಪಾಯದ ಮುನ್ಸೂಚನೆ ಅರಿತು.. ಎಚ್ಚರವಾಗಿದ್ದಳು..
ಗಾಡಿ ಓಡಿಸುತ್ತಾ.. ಮೇಡಂ.. ನಾನು ಕುಡಿಯೋದಿಲ್ಲ.. ಈ ಸಂಸ್ಥೆಗೆ ಸೇರಿದ ಮೇಲೆ.. ಎಲ್ಲಾ ಬಿಟ್ಟು ಬಿಟ್ಟೆ.. ಯಾಕಂದ್ರೆ ರಾತ್ರಿ ಇಂತಾ ಕೆಲಸ ಮಾಡುವಾಗ.. ನಾನು ಕುಡಿದಿದ್ರೆ ಯಾವ ಹೆಣ್ ಮಕ್ಕಳೂ ನನ್ನ ನಂಬಲ್ಲ ನೋಡಿ.. ಅದಿಕ್ಕೆ .. ಅಂದು ನಕ್ಕ..
15-20 ನಿಮಿಷ ಕಳೆಯಿತು.. ವೀಣಾಗೆ.. ಹಸಿವು.. ಸುಸ್ತು.. ನಿದ್ರೆ ಎಲ್ಲ ಕಾಡುತ್ತಿತ್ತು.. ಕತ್ತಲೆಯಲ್ಲಿ ಎಲ್ಲಿ ಹೋಗ್ತಿದ್ದೀವಿ ಅಂತಾನೂ ಗೊತ್ತಾಗ್ತ ಇರ್ಲಿಲ್ಲ..
ಅಷ್ಟರಲ್ಲಿ ಅವನೇ ಹೇಳಿದ.. ಮೇಡಂ.. ನಾವು ತಲ್ಪಿದ್ವಿ.. ಇರೀ.. ಗಾಡೀ ಒಳಗೆ ಹಾಕ್ತೀನಿ ಅಂದವನೇ.. ಕೆಳಗಿಳಿದ..ದಡ ದಡ ದಡ ಅಂತಾ ಷಟರ್ ತೆಗೆದ ಶಬ್ದ ಕೇಳಿತು.. ಪುನ ಬಂದವನೇ ವ್ಯಾನ್ ಹತ್ತಿ ಮುಂದೆ ಹೋಗಿ.. ಗಾಡಿ ಆಫ್ ಮಾಡಿದ.. ಷಟರ್ ಮುಚ್ಚಿ.. ಮೇಡಂ ಕೆಳಗಿಳಿರಿ. ಇವತ್ತು ಇದೇ ನಿಮಗೆ ಸೇಫ್ ಪ್ಲೇಸ್.. ಓಕೆ.. ಅಂದವನೇ.. ಹಿಂಬಾಗದ ಬಾಗಿಲು ತೆರೆದ..
ಕೆಳಗಿಳಿದಳು ವೀಣಾ.. ಆಶ್ರಮದ ಯಾವ ಲಕ್ಷಣನೂ ಇರಲಿಲ್ಲ.. ಯೆಸ್.. ರೆಡಿಯಾದಳು ಅವಳು.. ಮೆಲ್ಲ ಒಳ ನಡೆದಳು..
ಬನ್ನೀ ಮೇಡಂ.. ಕೂತ್ಕೊಳಿ..ಅಂದ..
ಕುಳಿತಳು.. ಸಣ್ಣ ರೂಂ.. ಒಂದು ಸೋಪಾ ಇತ್ತು… ರೂಮಿನ ತುಂಬಾ ಕಮಟು ಕಮಟು ವಾಸನೆ.. ಪಕ್ಕದಲ್ಲೇ ಬೆಡ್ ರೂಂ..
ಅವನು ಮಲ್ಲಗೆ ಹೋಗಿ ಬಾಗಿಲು ಹಾಕಿ ಇವಳತ್ತಿರ ಬಂದ..
ಎದುರು ಕೂತವನ ಮುಖದಲ್ಲಿ.. ಕಣ್ಣಿನಲ್ಲಿ.. ಒಂದು ಕೆಟ್ಟ ಆಸೆ.. ಹಸಿವು.. ವೀಣಾಳನ್ನು ಸ್ವಲ್ಪ ನಡುಗಿಸಿತು.. ಮುಖದ ಮೇಲೆಲ್ಲಾ ಬೆವರು..
ಅವನೇ ಕೈಹಾಕಿ ಬೆವರೊರೆಸಿದ..
ಹೆದರ್ಕೋಬೇಡಿ ಮೇಡಂ.. ಇಲ್ಲಿಗೆ ಯಾರೂ ಬರಲ್ಲ.. ಏನೂ ಆಗಲ್ಲ.. ನಾನೂ ಏನೂ ಮಾಡಲ್ಲ.. ಓಕೇ..!! ಧೈರ್ಯವಾಗಿರಿ..
ಮತ್ತೆ ಆಶ್ರಮ.. ತಡವರಿಸಿದಳು ವೀಣಾ..
ಹ ಹ ಹ ಹ ಹ..ಜೋರಾಗಿ ನಕ್ಕ ಅವನು.. ಯಾವ ಆಶ್ರಮ ಮೇಡಂ..ರೆಡ್ ಕ್ರಾಸ್ ಅವರು ಇಲ್ಲಿ ಈ ಊರಲ್ಲಿ ಬಂದು.. ಆಶ್ರಮ ಯಾಕ್ ತೆಗೀತಾರೆ?.. ಇಲ್ಲಿ ಕರೆಂಟಿಲ್ಲ.. ನೀರಿಲ್ಲ.. ಕರ್ಮಕಾಂಡ.. ಆದ್ರೆ ಏನು ಮಾಡೋದು.. ನಿಮ್ಮನ್ನ ನಂಬಿಸ್ ಬೇಕಿತ್ತಲ್ಲಾ.. ಅದಿಕ್ಕೆ.. ಅದೆಲ್ಲಾ?..
ಛೀ!!! ಮೋಸ ಮಾಡಲ್ಲ ಮೇಡಂ ಅಂದೆ.. ನಿನ್ನನ್ನು ನಂಬಿ ಬಂದ್ರೆ ಈ ತರ ಮಾಡೋದ?.. ದೇವರು ನಿಂಗೆ ಒಳ್ಳೇದು ಮಾಡಲ್ಲ ನೋಡು..
ಹ ಹ ಹ..!! ಅಯ್ಯೋ ಮೇಡಂ.. ಇನ್ನೇನು ಬಸ್ ಸ್ಟ್ಯಾಂಡ್ ನಲ್ಲೇ ನಿಮ್ಮನ್ನ ರೇಪ್ ಮಾಡಕ್ಕಾಗುತ್ತಾ ಮೇಡಂ?.. ಅದಿಕ್ಕೆ ನಂಬಿಸಿ ಇಲ್ಲಿಗೆ ಕರೆದುಕೊಂಡು ಬಂದಿದ್ದು.. ನೀವು ಹುಡುಗೀರು.. ಒಂದು ಸಲ ನಂಬಿಸಿದ್ರೆ ಸಾಕು.. ಎಲ್ಲಾದಕ್ಕೂ ರೆಡಿ.. ಅಲ್ವಾ?.. ಅನ್ನುತ್ತಾ ಕುಹಕವಾಡಿದ..
ಹೂಂ.. ನಿಜ.. ನಾವು ನಂಬ್ತೀವಿ.. ನೀವು ಮೋಸ ಮಾಡ್ತೀರ.. ಅಲ್ವಾ?..
ಹಹಹ.. ಸರಿ ಬಿಡಿ.. ಈಗ ಕತೆ ಹೇಳಿ ಏನು ಪ್ರಯೋಜನ.. ಸುಮ್ನೇ ಒಪ್ಕೋಳಿ.. ಇಲ್ಲಾಂದ್ರೆ ಬೆಳಿಗ್ಗೇಗೆ.. ಕಬಾಬ್ ಪೀಸ್ ತರ ತುಂಡು ಮಾಡಿ ನಿಮ್ಮ ಟ್ರೆಕ್ಕಿಂಗ್ ಕಾಡಿಗೋಗಿ ಬಿಸಾಕ್ತೀನಿ ಅಂದ.. ಮುಖದಲ್ಲಿ ಒಂದು ವಿಲಕ್ಷಣ ನಗು ಜೊತೆಗೆ ಒಂದು ಕ್ರೂರ ಭಾವ!!
ಒಳಗೊಳಗೇ ಭಯ ವಿದ್ದರೂ.. ಅದನ್ನು ತೋರ್ಪಡಿಸದೇ.. ಹ ಹ ಹ.. ಎಂದು ನಕ್ಕಳು ವೀಣಾ..
ಅವಳು ನಗುವುದನ್ನು ನೋಡದ್ದೇ.. ಅವನ ಮುಖದಲ್ಲಿದ್ದ ವಿಲಕ್ಷಣ ನಗು ಮಾಯವಾಗಿ..ಯಾಕ್ ನಗ್ತಿದ್ದೀಯಾ? ಅಂದ..
ನಗದೇ ಇನ್ನೇನು ಅಳ್ ಬೇಕಾ?.. ನೀನೇನ್ ಅಂದ್ಕೊಂಡೆ.. ನಾನು ಒಂಟಿ ಹೆಣ್ಣು ಬಸ್ ಮಿಸ್ ಆಗಿ ಕಾಯ್ತೀದ್ದೀನಿ.. ನನ್ನನ್ನು ನಂಬಿಸಿ ಬುದ್ದಿವಂತಿಕೆಯಿಂದ ಇಲ್ಲಿಗೆ ಎತ್ತಾಕೊಂಡು ಬಂದೆ.. ಅಂತಾನ?..
ಮತ್ತೇ?,,
ನಾನೂ.. ಹಂಗೇನೆ.. ನಿನ್ನ ತರಾನೇ ನಂದೂ ಬಿಸ್‍ನೆಸ್..!! ಬೆಂಗ್ಳೂರ್ ಬಸ್ ನವರು ಯಾರಾದ್ರೂ ಪಿಕ್ ಮಾಡ್ತಾರಾ ನೋಡೋಣಾ ಅಂತ ಕಾಯ್ತಿದ್ದೆ ಅಷ್ಟೇ.. ನೋಡಿದ್ರೆ ಬಿಟ್ಟಿ ಓಸಿ ಗಿರಾಕಿ ನೀನು ಸಿಕ್ಕಿದೆ..!! ಅಂದು ಕಾಲು ಎತ್ತಿ ಎದುರಿಗಿದ್ದ ಟೀಪಾಯ್ ಮೇಲಿಟ್ಟು ನಕ್ಕಳು..
ಹೋ ಹೋ ಹೋ!!!.. ಮೇಡಂ ಅವ್ರು ಹಂಗಾ?.. ತಲೆ ಯಾಡಿಸುತ್ತಾ ರಾಗವಾಗಿ ಕೇಳಿದ?.. ಹಂಗಾದ್ರೆ ಸರಿಯಾಯ್ತು ಬಿಡಿ ಅಂದ..
ಹೂಂ ಮತ್ತೆ.. ನೋಡು.. ಒಂದು ರಾತ್ರಿ ತಾನೆ.. ಒಪ್ಕೋತಿನಿ.. ಏನೂ ತೊಂದ್ರೆ ಮಾಡಬಾರದು.. ಅಷ್ಟೇ.. ನಾಳೆ ಬೆಳಿಗ್ಗೆ ನನ್ನ ಪುನ ಬಸ್ ಸ್ಟ್ಯಾಂಡ್ ಬಿಡಬೇಕು ಓಕೇ ನಾ?..
ಆಯ್ತು ಬಿಡಿ.. ಬೆಳಿಗ್ಗೆ 5-15 ಕ್ಕೆ ಒಂದು ಬಸ್ ಬೆಂಗಳೂರಿಗೆ ಇದೆ.. ಅದ್ರಲ್ಲಿ ಹೋಗಿ ಅನ್ನುತ್ತಾ..ಜೇಬಿನಿಂದ ಚಾಕು ತೆಗೆದ.. ನೋಡು…ನಾನು ನೀನಂದುಕೊಂಡಷ್ಟು ಒಳ್ಳೇಯವನಲ್ಲ.. ಏನಾದ್ರೂ ಗಾಂಚಾಲಿ ಮಾಡಿದ್ರೆ.. ಚಾಲಾಕಿ ತೋರಿಸಿದ್ರೆ.. ಕತ್ತು ಕುಯ್ದಾಕ್ತೀನಿ ಅಂದ..
ಅಯ್ಯೋ ಅಂತದ್ದೇನೂ ಇಲ್ಲಪ್ಪ.. ನಂಗಿದೆಲ್ಲ ಮಾಮೂಲಿ.. ವಾರದಲ್ಲಿ 3-4 ರಾತ್ರಿ ಹೀಂಗೆ ಕಳಿಯುತ್ತೆ ಬಿಡು.. ಏನೂ ಟೆನ್ಷನ್ ಮಾಡ್ಕೋಬೇಡ.. ಅಂದಳು
ಸರಿ.. ನಡಿ ರೂಂಗೆ.. ನಿನ್ನ ನೋಡ್ತಿದ್ರೆ ನಂಗೆ ತಡ್ಕೋಳೊಕಾಗ್ತಿಲ್ಲ.. ಅಂದ..
ಅಯ್ಯೇ.. ಸ್ವಲ್ಪ ಸಮಾಧಾನ ಮಾಡ್ಕೋ.. ಇಡೀ ರಾತ್ರಿ ಉಂಟಲ್ಲಾ.. ಅದೂ ಅಲ್ದೇ ನನ್ ಮೈ ಇಡೀ ಬೆವರಿಂದ ಗಲೀಜಾಗಿದೆ.. ಸ್ವಲ್ಪ ಫ್ರೆಸ್ ಆಗ್ಬೇಕು ಅಂದಳು..
ಆಯ್ತು.. ಮೊದಲು ರೂಂಗೆ ನಡಿ.. ಆಮೇಲೆ ಆರಾಮಾಗಿ ಒಟ್ಗೇ ಫ್ರೆಸ್ ಆಗೋವಂತೆ ಅಂದವನೇ ಮೈಮುರಿಯುತ್ತಾ ನಕ್ಕ…
ಆಯ್ತು.. ಎಂದವಳೇ..ರೂಂಗೆ ಹೋದಳು.. ಹಿಂದಿನಿಂದ ಅವನೂ ಬಂದವನೇ ಅವಳ ನಡು ಬಳಸಿದ..
ಅವನನ್ನು ಕೊಸರಿಕೊಂಡು.. ಅಯ್ಯೋ ಇರಪ್ಪ.. 10 ನಿಮಿಷ ಟೈಮ್ ಕೊಡು.. ನಿನ್ನತ್ರ.. ಕಾಂಡೋಂ ಉಂಟಾ? ಅಂದಳು..
ಕಾಂಡೋಮಾ?.. ಅದ್ಯಾಕೆ? ಅಂದ..
ಅಯ್ಯೋ ಅದೇ ಮುಖ್ಯ.. ಸೇಫ್ಟಿ.. ನಾನು ಯಾರನ್ನೂ ನಂಬಲ್ಲ.. ಅಂದಳು..
ಹೋ.. ನನ್ನತ್ರ ಇಲ್ಲ ಅಂದ..
ಸರಿ ನೀನು ರೆಡಿಯಾಗು.. ನಾನು ಬ್ಯಾಗಿಂದ ಕಾಂಡೋಂ ತರ್ತೀನಿ ಅಂದು ಹಾಲಿಗೆ ಬಂದಳು..
ಪುನ ಬೆಡ್ ರೂಂ ಒಳ ಹೋದಳು.. ಅವನಾಗಲೇ.. ಹಾಸಿಗೆಯಲ್ಲಿ..ರೆಡಿಯಾಗಿ ಬಿದ್ದಿದ್ದ.. ಮುಖದಲ್ಲಿ ಪೈಶಾಚಿಕ ಕಳೆ..
ಅವಳ ಜೀವನದಲ್ಲಿ ಯಾವ ಮನುಷ್ಯನಲ್ಲೂ ಕಾಣದ ಒಂದು ಅತ್ಯಂತ ವಿಕೃತ ನಗು.. ಬಾ ಬಾ ಬಾ.. ಬೇಗ ಬಟ್ಟೆ ಬಿಚ್ಚು ಎಂದ..
ಎರಡು ಹೆಜ್ಜೆ ಮುಂದಿಟ್ಟಳು.. ಬೆನ್ನ ಹಿಂದೆ ಅಡಗಿಸಿಕೊಂಡಿದ್ದ ಕೈ ಮುಂದೆ ತಂದಳು..
ಅರೆ.. ನೀನು ಭಾಳ ಹುಷಾರು..ರೂಂಗೆ ಸೆಂಟ್ ಬೇರೆ ಹೋಡೀತಿಯಾ?.. ಹೊಡಿ ಹೊಡಿ ಅಂದ..
ಮುಂದಿನ ಅರೆಗಳಿಗೆಯಲ್ಲಿ.. ಅಯ್ಯೋ ಅಮ್ಮಾ.. ಉರಿ ಉರಿ ಉರಿ.. ಎನ್ನುವ ಕೂಗು.. ಕತ್ತಲೆಯೊಡನೇ ಬೆರೆತು ಹೋಯ್ತು.. ಸ್ವಲ್ಪ ಹೊತ್ತಿನಲ್ಲೇ ಅಯ್ಯೋ ಬೇಡ ಬೇಡ.. ಬಿಟ್ಬಿಡು.. ಕುಯ್ಬೇಡ…. ಅಮ್ಮಾ.. ಅಯ್ಯೋ.. ಎನ್ನುವ ಕೂಗು…!! ಮಲೆನಾಡಿನ ಕಂದರಗಳ ನಡುವೆ ಮಾರ್ಧನಿಸಿತು..!!
*****