ಮಲೆಗಳಲ್ಲಿ ಮದುಮಗಳು ಮತ್ತು ನಾವು: ಪ್ರಶಸ್ತಿ ಪಿ.

೨೦೦೬-೦೭ ನೇ ಇಸವಿ. ಸಾಗರದ ಶಿವಲಿಂಗಪ್ಪ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ (ಕಳೆದ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ ಡಿಸೋಜ)ರ ಭಾಷಣ. ಸಾಹಿತ್ಯದ ಬಗ್ಗೆ ಮಾತನಾಡುತ್ತಾ ಅವರು ಕುವೆಂಪು ಅವ್ರ ಎರಡು ಮುಖ್ಯ ಕಾದಂಬರಿಗಳು ಯಾವುದು ಗೊತ್ತಾ ಅಂತ ಸಭೆಗೆ ಕೇಳಿದ್ದರು. ತಕ್ಷಣ ಕೈಯಿತ್ತಿದ್ದ ನಾನು ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡತಿ ಅಂದಿದ್ದೆ. ಶ್ರೀ ರಾಮಾಯಣ ದರ್ಶನಂ ಕೂಡಾ ಮಹತ್ಕೃತಿಯಾಗಿದ್ದರೂ ಅದು ಕಾವ್ಯ, ಕಾದಂಬರಿಯಲ್ಲ ಎಂಬ ಸಾಮಾನ್ಯ ಜ್ನಾನ ಆ ಪ್ರಶ್ನೆಗೆ ಥಟ್ಟನೆ ಉತ್ತರಿಸಲು ಸಹಾಯಕವಾಗಿತ್ತು. ಹೈಸ್ಕೂಲ್ ದಿನಗಳವು. ಟಿವಿಯಲ್ಲಿ ಬರುತ್ತಿದ್ದ ಕಾದಂಬರಿಯಾಧಾರಿತ ಮಾಲ್ಗುಡಿ ಡೇಸ್ ಬಗ್ಗೆ ಕೇಳಿ ಮತ್ತು ಮಲೆಗಳಲ್ಲಿ ಮದುಮಗಳು ಅನ್ನು ನೋಡಿ ಗೊತ್ತಿದ್ದ ನನಗೆ ಮಲೆನಾಡಿನ ವರ್ಣನೆಯನ್ನು ಸಖತ್ತಾಗಿ ಪದಗಳಲ್ಲಿ ಹಿಡಿದಿಟ್ಟ ಕುವೆಂಪು ಅವರ ಕೃತಿಗಳನ್ನೋದೋ ಆಸಕ್ತಿ ಮೂಡಲಾರಂಭಿಸಿತ್ತು. ತದನಂತರ ಕುವೆಂಪು ಜನ್ಮ ದಿನೋತ್ಸವ ಅಂತ ನಡೆದ ಸ್ಪರ್ಧೆಗಳು ನನಗೆ ಕುವೆಂಪುರವರ ಇನ್ನಿತರ ಕೃತಿಗಳ ಓದುವಂತೆ ಮಾಡಿದವು. ಬಾಲ್ಯದಲ್ಲಿ ತನ್ನ ಲಯದಿಂದ ಮೋಡಿ ಮಾಡಿದ ಬೊಮ್ಮನಹಳ್ಳಿಯ ಕಿಂದರಿ ಜೋಗಿಯಲ್ಲದೆ , ಜಲಗಾರನಂತಹ ಕಿರುಕೃತಿಗಳು ಓದಿಸಿಕೊಂಡವು. ಸರಿಸುಮಾರು ಅದೇ ಸಮಯದಲ್ಲಿ ಓದಿದ ತೇಜಸ್ವಿಯವರ ಕರ್ವಾಲೋ, ಒಂದು ಹಕ್ಕಿಯ ಕತೆಯಂತಹ ಪುಸ್ತಕಗಳು ಓದೋ ಹವ್ಯಾಸವನ್ನು ಇನ್ನಷ್ಟು ಹೆಚ್ಚಿಸಿದ್ದು ಸುಳ್ಳಲ್ಲ. ಕಾದಂಬರಿ ಮತ್ತು ದೃಶ್ಯ ಮಾಧ್ಯಮ ಎರಡು ಬೇರೆ ಬೇರೆ ರಂಗಗಳೇನೋ ಎಂದನಿಸೋಕೆ ತದನಂತರ ಪ್ರಾರಂಭಿಸಿದ್ದು ನಂತರ ಬರಲಾರಂಭಿಸಿದ ವಾಹಿನಿಗಳ ಸಾಮಾಜಿಕ ಧಾರಾವಾಹಿಗಳು ಮತ್ತು ಕಮರ್ಷಿಯಲ್ಲೆಂಬ ಹೆಸರಿನ ಮಸಾಲೆ ಸಿನಿಮಾಗಳಿಂದ. ನಾಟಕವೆಂಬ ಪ್ರಕಾರದಲ್ಲೇ ಬರೆದ ನಾಟಕಗಳನ್ನು ನಾಟಕವಾಗಿ ರಂಗದ ಮೇಲೆ ಅಳವಡಿಸಬಹುದಾದರೂ ಕಾದಂಬರಿಯಾಗಿ ಬರೆದದ್ದನ್ನು ನಾಟಕದಂತೆ ರಂಗದ ಮೇಲೆ ತರಬಹುದೇ  ? ಸಿನಿಮಾದಲ್ಲಾದ್ರೂ ದೃಶ್ಯದಿಂದ ಮತ್ತೊಂದಕ್ಕೆ ಸಂಬಂಧವೇ ಇಲ್ಲದಂತೆ, ಗಟ್ಟಿ ಕತೆಯೇ ಇಲ್ಲದಿದ್ದರೂ ದೃಶ್ಯಗಳ ಜೋಡಿಸುವಿಕೆಯಿಂದಲೇ  ಮಾಡಬಹುದಾದರೂ ನಿರಂತರವಾಗಿ ನಡೆಯುವ ನಾಟಕದಲ್ಲಿ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳನ್ನು, ಪರಿಸರವನ್ನು ಕಟ್ಟಿಕೊಡಲಾದೀತೇ ಎಂಬ ಅನುಮಾನ ಆಗ ಕಾಡದಿದ್ದರೂ ನಂತರದ ದಿನಗಳಲ್ಲಿ ಕಾಡಲಾರಂಭಿಸಿತ್ತು. ಅದಕ್ಕೊಂದು ಉತ್ತರವೆಂಬಂತೆ ಕಂಡ ಪ್ರಯೋಗ ಕಲಾಗ್ರಾಮದಲ್ಲಿ ನಡೆಯುತ್ತಿರುವ ಮಲೆಗಳಲ್ಲಿ ಮದುಮಗಳು ಪ್ರದರ್ಶನ. 

ಮೂರು ವರ್ಷಗಳ ಹಿಂದೆ ಪ್ರಾರಂಭವಾದ, ಈ ಶುಕ್ರವಾರಕ್ಕೆ ೫೫ನೇ ಪ್ರದರ್ಶನ ಕಂಡ ಮಲೆಗಳಲ್ಲಿ ಮದುಮಗಳು ಎಂಬ ನಾಟಕಕ್ಕೆ ಹೋಗಬೇಕೆಂಬ ಆಸೆ ತುಂಬಾ ದಿನಗಳಿಂದ ಈಡೇರಿರಲಿಲ್ಲ. ಹಿಂದಿನ ಬಾರಿ ಹೋಗಬೇಕೆಂಬ ಆಸೆಯಲ್ಲಿದ್ದಾಗ್ಲೇ ಪ್ರದರ್ಶನ ಮುಗಿದುಹೋಗಿತ್ತು. ಈ ಸಲವೂ ಅಂದುಕೊಳ್ಳುತ್ತಿರುವಾಗಲೇ ಕಾರಣಾಂತರಗಳಿಂದ ಸಾಧ್ಯವಾಗದೇ ಮುಂದೋಗುತ್ತಲೇ ಬಂದಿದ್ದ ಅದಕ್ಕೆ ಈ ವಾರ ಹೋಗಲೇಬೇಕೆಂಬ ಆಸೆಯಿಂದ ಮುಖಹೊತ್ತಿಗೆಯಲ್ಲಿರೋ ಗೆಳೆಯರಲ್ಲೇನಕರಿಗೆ ಕೇಳಿದ್ರೂ ಯಾರೂ ಬರಲು ಸಿದ್ದರಿರಲಿಲ್ಲ. ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಯೇ ಆಗಿದ್ದ ಸಿ.ಬಸವಲಿಂಗಯ್ಯನವರ ನಿರ್ದೇಶನ, ಹಂಸಲೇಖರವರ ಸಂಗೀತ, ಸ್ಥಳೀಯ ಕಲಾವಿದರೊಂದಿಗೆ ರಾಷ್ಟ್ರೀಯ ನಾಟಕಶಾಲೆಯ ಬೇರೆ ಬೇರೆ ರಾಜ್ಯಗಳ ಕಲಾವಿದರು ಮೂರ್ನಾಲ್ಕು ತಿಂಗಳಲ್ಲೇ ಕನ್ನಡ ಕಲಿತು ಅಭಿನಯಿಸುತ್ತಿರುವುದು,ಶಶಿಧರ ಅಡಪ ಅವರ ವಿನ್ಯಾಸ ಹೀಗೆ ಹತ್ತು ಹಲವು ಹೆಗ್ಗಳಿಕೆಗಳು ಇದಕ್ಕೆ. ೮೦೦ ಪುಟದ ಕಾದಂಬರಿಯನ್ನು ೨೫೦ ಪುಟಗಳಿಗಿಳಿಸಿ ರಂಗಕ್ಕಿಳಿಸಿದ ಕೆ.ವೈ. ನಾರಾಯಣಸ್ವಾಮಿ ಮತ್ತು ತಂಡದ ಪ್ರಯತ್ನ, ಒಂಭತ್ತು ಗಂಟೆಗಳ ರಾತ್ರಿಯಿಡೀ ಪ್ರದರ್ಶನ..ಹೀಗೆ ಹಲವೆಂಟು ಮಾಹಿತಿಗಳು ಸಿಗುತ್ತಿದ್ದರೂ, ಮುಖಹೊತ್ತಿಗೆಯಲ್ಲಿ ದಿನಾ ಅದರದ್ದೇ ಫೋಟೋಗಳು ಕಂಡರೂ, ನಾಟಕಕ್ಕೆ ಹೋಗೋಕೆ ನಂಗಿನ್ನೂ ಜೊತೆ ಸಿಕ್ಕಿರಲಿಲ್ಲ !ನಾ ಕೇಳಿದವರೆಲ್ಲಾ ಆಗಲೇ ನೋಡಾಗಿತ್ತಲ್ಲ !! ಒಂದಿಷ್ಟು ಜನ ನೋಡದೇ ಈ ವಾರ ಬರಲಿಷ್ಟವಿದ್ದರೂ ಮತ್ತಿನ್ನೇನೋ ಕೆಲಸಗಳು. ಒಬ್ಬನೇ ಆದ್ರೂ ಹೋಗೋದೇ ಸೈ ಅಂದುಕೊಳ್ಳುತ್ತಿದ್ದಾಗ್ಲೇ, ಗೆಳೆಯನ ಗೆಳೆಯನ ಗೆಳೆಯರು ಅಂತ ಒಂದಿಷ್ಟು ಜನ ಸಿಕ್ಕಿದ್ರು ! ಯಾರೂ ಇಲ್ಲದ್ದಕ್ಕಿಂತ ಒಂದಿಷ್ಟು ಜನ ಜೊತೆಗೆ ಎಂಬ ಭರವಸೆಯಿಂದ ಜೈ ಅಂತ ಹೊರಟಾಯ್ತು ಎಂಬಲ್ಲಿಗೆ ಒಂದು ಉಪಕತೆ ಮುಗಿದು ಮತ್ತೆ ಕತೆಯತ್ತ ಹೊರಡುವ ಸಮಯ.

ಕತೆ ಅಂದ್ರೆ ಏನಪ್ಪ ? ಒಬ್ಬ ನಾಯಕ, ಒಬ್ಬ ನಾಯಕಿ, ಮತ್ತೊಬ್ಬ ಖಳನಾಯಕ ಅಥವಾ ನಾಯಕಿ ಅಥವಾ ಇಬ್ಬರೂ. ಒಂದಿಷ್ಟು ಪೋಷಕ ಪಾತ್ರಗಳು ಅನ್ನೋದು ಸಾಮಾನ್ಯ ಕಲ್ಪನೆ ಕ್ರಮೇಣ ಮಾಯವಾಗುತ್ತಾ ಬಂದು ಅನೇಕಾನೇಕ ನಾಯಕರು, ನಾಯಕ ಉಪನಾಯಕರು, ಅವರಿಗೊಂದಿಷ್ಟು ನಾಯಕಿ ಉಪನಾಯಕಿಯರು, ಖಳರ ತಂಡ , ನಾಯಕ-ಖಳನಾಯಕನಲ್ಲದ ಅವೆರಡರ ಸಮ್ಮಿಶ್ರ ಗುಣಗಳ ಹೊಂದಿರೋ ಪಾತ್ರಗಳು.. ಹೀಗೆ ಕ್ಲಿಷ್ಟವಾಗುತ್ತಾ ಸಾಗುತ್ತದೆ. ಆದ್ರೆ ಯಾರೋ ಒಂದಿಬ್ಬರಿಗೆ ಪ್ರಾಮುಖ್ಯತೆ ಕೊಟ್ಟು ಉಳಿದವರಿಗೆ ಅಷ್ಟು ಕೊಡದ ಕತೆಗಳೇ ಹೆಚ್ಚು. ಆದ್ರೆ ಕತೆಯೆಂದ್ರೆ ಹೀಗೇ ಇರಬೇಕಾ ? ಇರೋರೆಲ್ಲಾ ಮುಖವಾಗದೇ, ಯಾರೂ ಅಮುಖ್ಯರಾಗದೇನೂ ಇರಬಹುದಾ ಅನ್ನೋ ಒಂದು ಪ್ರಶ್ನೆಗೆ ಉತ್ತರವೆಂಬಂತೆ ನಿಲ್ಲುತ್ತಾ ವಿಶೇಷವಾಗುತ್ತೆ ಮಲೆಗಳಲ್ಲಿ ಮದುಮಗಳು. ಕುವೆಂಪುರವರ ಕಾದಂಬರಿಯ ಮೊದಲ ಪುಟಗಳಲ್ಲಿರುವ ಸಾಲುಗಳು ಒಂದು ದನಿಯಾಗಿ ರಂಗಪ್ರಯೋಗದ ಪ್ರಮುಖ ಘಟ್ಟಗಳಲ್ಲೆಲ್ಲಾ ಬಂದುಹೋಗುತ್ತೆ."ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ…" ಅಂತ. ಆ ಸಾಲುಗಳು ಹಾಗೇ ಬೆಳೆಯುತ್ತಾ ಹೋಗಿ ಹೀಗಾಗುತ್ತೆ..

    ಇಲ್ಲಿ

        ಯಾರೂ ಮುಖ್ಯರಲ್ಲ;

        ಯಾರೂ ಅಮುಖ್ಯರಲ್ಲ;

        ಯಾವುದೂ ಯಃಕಶ್ಚಿತವಲ್ಲ!

    ಇಲ್ಲಿ

        ಯಾವುದಕ್ಕೂ ಮೊದಲಿಲ್ಲ;

        ಯಾವುದಕ್ಕೂ ತುದಿಯಿಲ್ಲ;

        ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;

        ಕೊನೆ ಮುಟ್ಟುವುದೂ ಇಲ್ಲ!

    ಇಲ್ಲಿ

        ಅವಸರವೂ ಸಾವಧಾನದ ಬೆನ್ನೇರಿದೆ!

    ಇಲ್ಲಿ

        ಎಲ್ಲಕ್ಕೂ ಇದೆ ಅರ್ಥ;

        ಯಾವುದೂ ಅಲ್ಲ ವ್ಯರ್ಥ;

        ನೀರೆಲ್ಲ ಊ ತೀರ್ಥ!

ರಂಗಪ್ರಯೋಗದಲ್ಲಿ ಅಲ್ಲಿಗೇ ನಿಲ್ಲಿಸದೇ ಪ್ರಸ್ತುತ ವಿದ್ಯಮಾನಕ್ಕನುಗುಣವಾಗಿ "ತೀರ್ಥವೂ ನೀರು" ಅಂತೊಂದು ಸಾಲು ಸೇರಿಸಿದ್ದಾರೆ.

ಮೇಲೆ ಹೇಳಿದಂತೆ ನಾಟಕದಲ್ಲಿ ಹಲವು ಪಾತ್ರಗಳು. ಐತ-ಪೀಂಚಲು, ಮುಕುಂದಯ್ಯ-ಚಿನ್ನಕ್ಕ, ಸಿಂಭಾವಿ ಗುತ್ತಿ ಮತ್ತವನ ನಾಯಿ "ಹುಲಿಯ" ಮತ್ತು ತಿಮ್ಮಿ ಎಂಬ ಹುಲಿಕಲ್ಲು ನೆತ್ತಿ ಹತ್ತುವ ಮೂರು ಜೋಡಿಗಳೊಂದಿಗೆ ,

ನಾಗಕ್ಕ-ನಾಗತ್ತೆ ,ವೆಂಕಟಪ್ಪ ನಾಯಕ, ಪಾದ್ರಿ ಪರಂಧಾಮಯ್ಯ, ನಾಲ್ಕೈದು ಜನ ಸಾಬರು, ಸುಂದರಾಗನೆಂಬೋ ಭ್ರಮೆಯ ತಿಮ್ಮಪ್ಪ ಹೆಗಡೆ, ಅಂತಕ್ಕ ಮತ್ತವಳ ಮಗಳು ಕಾವೇರಿ,ತಿರುಪತಿಗೆ ಹೋಗಿ ಬರುವೆನೆಂದಂದಿನಿಂದ ನಾಪತ್ತೆಯಾದ ಅಣ್ಣಪ್ಪ ಹೆಗಡೆ,ಅವನ ನಿರೀಕ್ಷೆಯಲ್ಲೇ ಕೊನೆಯ ದಿನಗಳ ಕಳೆಯುತ್ತಿರುವ ದೊಡ್ಡ ಹೆಗಡೆ, ತಿಮ್ಮಪ್ಪನಿಂದ ಗೋಳು ಪಡುತ್ತಿರೋ ಅಣ್ಣಪ್ಪನ ಹೆಂಡತಿ, ಅವಳ ಮಗ ಧರ್ಮ, ಮಕ್ಕಳಿಗೆ  ಪಾಠ ಕಲಿಸೋ ಕಿಟ್ಟ ಐಗಳು, ಗೌಡ್ರು, ಅವ್ರ ಮಗ ಗೋವಿಂದಯ್ಯ, ಅವನ ಸಂಸಾರ, ಶೇರೆಗಾರ ಕೀಂತ್ರ, ವೈದ್ಯರು ಹೀಗೆ ಹಲವೆಂಟು ಪಾತ್ರಗಳು. ಹಂದಿ, ನಾಯಿ, ಜೀರುಂಡೆ, ಮಿಂಚುಹುಳಗಳೂ ಕೂಡ ಇಲ್ಲಿ ಮಿಂಚುತ್ತವೆ. ಉದಾಹರಣೆಗೆ ಗುತ್ತಿಯ ನಾಯಿಯ ಹೆಸರು ಹುಲಿಯ.ಇದೇನು ಬರೀ ನಾಯಿ ಅಂದುಕೊಂಡ್ರೂ ಇದು ನಾಟಕದ ಯಾವ ಪ್ರಮುಖ ಪಾತ್ರಕ್ಕಿಂತಲೂ ಕಮ್ಮಿಯಿಲ್ಲದಂತೆ ಮಿಂಚುತ್ತದೆ. ರಂಗಪ್ರಯೋಗದ ಮೂರನೇ ಭಾಗದಲ್ಲಿ ಹುಲಿಯ ಈಗ ಎಂಟ್ರಿ ಕೊಡಬಹುದು, ಈಗ ಕೊಡಬಹುದು ಅಂತ ಅನೇಕ ಬಾರಿ ನಿರೀಕ್ಷಿಸಿದ, ಅವನ ಬರುವಿಕೆಗಾಗೇ ಕಾದ ಪ್ರಸಂಗಗಳೂ ಇದ್ದವೆಂದರೆ  ಪ್ರತೀ ಪಾತ್ರಕ್ಕೆ, ಪರಿಸರಕ್ಕೆ ಕೊಟ್ಟ ಮಹತ್ವವೆಷ್ಟೆಂದು ನೀವೇ ಎಣಿಸಿ. ರಂಗಪ್ರಯೋಗದಲ್ಲೆಂತೂ ಒಂದೇ ಕಲಾವಿದರು ಐದಾರು ಪಾತ್ರ ಹಾಕುತ್ತಾ ಎಲ್ಲಕ್ಕೂ ಜೀವ ಕೊಡುವ ಪರಿ ಮೆಚ್ಚುಗೆಗಳಿಸುತ್ತೆ. ತಿಮ್ಮಿಯ ಅಮ್ಮನಿಗೆ ಜಕ್ಕಿಣಿ ಮೈಮೇಲೆ ಬರುವ ಸನ್ನಿವೇಶದಲ್ಲಿ ದಯ್ಯಗಳಾಗಿ ಬರುವ ಎಂಟತ್ತು ಪಾತ್ರಗಳು ಅದಕ್ಕಿಂತ ಮುಂಚೆ ಹಳ್ಳಿಯ ಕೆಲಸದಾಳುಗಳಾಗಿ, ನಂತರ ಹರಿನಾಮ ಸ್ಮರಣೆ ಮಾಡೋ ಸಂನ್ಯಾಸಿಗಳಾಗಿ, ಮರ ಹತ್ತೋ, ಗದ್ದೆಗೆಲಸದ, ತೋಟದ ಆಳುಗಳಾಗಿ, ಹಂದಿ ಹಿಡಿಯುವವರಾಗಿ,ಹಂದಿಯೇ ಆಗಿ, ಜೋಗಯ್ಯರಾಗಿ, ಸ್ಮಶಾನದ ಸಾಧುಗಳಾಗಿ, ಹೆಳವರಾಗಿ, ಸಾಬರಾಗಿ ನಂತರ ಮತ್ತೇನೋ ಆಗಿ ಮುಂದೆ ಬಂದರೂ ಇವರು ಇವರೇ ಎಂದು ಗುರುತಿಸಲಾಗದಷ್ಟು ಸಹಜ ಅಭಿನಯ ಅವರಲ್ಲಿ. ಮೋಡಗಳಾಗಿ, ಬಳ್ಳಿಗಳಾಗಿ, ಹೊಗಬೇಡ ಕಾವೇರಿ ಅನ್ನೋ ದನಿಯಾಗಿ ಬರೋ ಪಾತ್ರಗಳಲ್ಲಿ ಎಷ್ಟೋ ನಂತರ ಕ್ರೈಸ್ತ ಸನ್ಯಾಸಿನಿಯರಾಗಿ, ಅದಕ್ಕಿಂತ ಮುಂಚೆ ಜೀರುಂಡೆಯಾಗಿ, ಸಾಬರ ಕುದುರೆಯಾಗಿ,ಕೆಲಸದ ಹೆಣ್ಣುಗಳಾಗಿ, ಹಳ್ಳಿಯ ಬುಟ್ಟಿ, ತಟ್ಟಿಗಳ ಹೊತ್ತು ಪ್ರಸಂಗಗಳನ್ನು ಮಾರ್ಮಿಕವಾಗಿ ಹಾಡೋ ನಿರೂಪಕ ಪಾತ್ರಗಳಾಗಿ ಬಂದರೋ ಗೊತ್ತಿಲ್ಲ ! 

ಗೋವಿಂದಯ್ಯನ ಮಗು ಬಾಲೆ, ಧರ್ಮ ಮತ್ತವನ ಸಂಗಾತಿಗಳಾದ ಮೂವರು ಹುಡುಗರು, ತೋಟದ ಆಳುಗಳು, ಮುದುಕರು.. ಹೀಗೆ ಎಲ್ಲಾ ಎಲ್ಲಾ ವಯೋಮಾನದ ಪಾತ್ರಗಳೂ ಇಲ್ಲಿ ಬರುತ್ತವೆ. ದಟ್ಟ ಕಾಡಾಗಿದ್ದ ಮಲೆನಾಡು ಬದಲಾಗುತ್ತಾ "ಅಂತಕ್ಕನ ಓಟ್ಲುಮನೆ" ಮತ್ತು "ಮಿಷನ್ ಸ್ಕೂಲು" ಮತ್ತದರ ಸುತ್ತಲ ಬಯಲನ್ನು ಕಂಡ ಪರಿಯ ಹಲವು ಮುಖಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತೆ. ಕರುಣೆ, ದ್ವೇಷ, ಅಸೂಯೆ, ಶೃಂಗಾರ, ಹಾಸ್ಯ, ರೌದ್ರ, ಭಯಾನಕಗಳಂತಹ ಭಾವಗಳ ಜೊತೆಗೆ ಜನಗಳ ಮುಗ್ದತನ, ಕೆಲವರ ಮೋಸ, ಮತಾಂತರಗಳಂತ ಅಂದಿನ ಸಮಯದಲ್ಲಿದ್ದ ಜ್ವಲಂತ ಸಮಸ್ಯೆಗಳನ್ನೂ ತೆರೆದಿಡುತ್ತಾ ಹೋಗುತ್ತೆ. ತನ್ನ ಒಡೆಯನಿಗಾಗಿ ನೀರಿಗೆ ಬೀಳೋ ಹುಲಿಯ, ಅವನಿಗಾಗಿ ರೋದಿಸೋ ಗುತ್ತಿಯ ಸನ್ನಿವೇಷ, ಅಮ್ಮನಿಗಾಗಿ ಅಳುವ ಧರ್ಮ ಮತ್ತವನ ಅಮ್ಮನ ಸನ್ನಿವೇಶಗಳು ಕರುಳ ಹಿಂಡಿಬಿಟ್ಟರೆ ಹಲವು ಬಾರಿ ಕೀಂತ್ರ ಸಿಟ್ಟ ನೆತ್ತಿಗೇರಿಸಿಬಿಡುತ್ತಾನೆ. ಹೇಳುತ್ತಾ ಹೋದ್ರೆ ೮೦೦ ಪುಟದಲ್ಲಿ ಬರೋ ಪಾತ್ರಗಳ ವಿವರಣೆಯೇ ಮತ್ತೊಂದು ಕಾದಂಬರಿಯಾದೀತು. ಹಾಗಾಗಿ ಆ ಕುತೂಹಲವನ್ನು, ಪುಸ್ತಕವೋದುವ ಆನಂದವನ್ನು ನಿಮಗೇ ಬಿಡುತ್ತಾ ಮುಂದಿನ ವಿಷಯಕ್ಕೆ ತೆರಳುತ್ತೇನೆ.

ತಂತ್ರಜ್ನಾನ ಅನ್ನೋದು ರಂಗಪ್ರಯೋಗಕ್ಕೆ ಎಷ್ಟು ಚೆನ್ನಾಗಿ ಸಾಥ್ ಕೊಡಬಲ್ಲದು ಅನ್ನೋದನ್ನು ಮತ್ತೊಮ್ಮೆ ನೋಡಿ ಖುಷಿ ಪಟ್ಟಿದ್ದು ಮಲೆಗಳಲ್ಲಿ ಮದುಮಗಳು ರಂಗಪ್ರಯೋಗದಲ್ಲಿ. ಹುಲಿಕಲ್ ನೆತ್ತಿಯ ಬಿಂಬಿಸೋ ಎತ್ತರೆತ್ತರದ ಅಟ್ಟಣಿಗೆಗಳು, ಮನೆಯ ನಾಗಂದಿಗೆ, ಮಾಡು, ಕಾಡ ಹಾದಿ, ತೋಟ ಹೀಗೆ ಹತ್ತು ಹಲವು ಸಾಧ್ಯತೆಗಳನ್ನು ರಂಗ ವಿನ್ಯಾಸ ಸಾಧಿಸಿದೆ. ತೆರೆ ಬೀಳುತ್ತೆ, ತೆರೆ ಏಳುತ್ತೆ ಅನ್ನೋ ಪರಿಕಲ್ಪನೆಯೇ ಇಲ್ಲದಂತೆ ಒಂದು ಪಾತ್ರದ ನಿರ್ಗಮನ, ಮತ್ತೊಂದರ ಆಗಮನ ಸೂಚಿಸೋ ನೆರಳು ಬೆಳಕಿನ ಸಂಯೋಜನೆ ಫುಲ್ ಖುಷಿ ಕೊಡುತ್ತೆ ಇಲ್ಲಿ. ಎಲ್ಲೋ ಬರೋ ಪಾತ್ರಕ್ಕೆ ಅಲ್ಲಿ ಮಾತ್ರ ಕೊಡೋ ಬೆಳಕು ಮತ್ತೊಂದು ಪಾತ್ರ  ತೆರೆಯಿಂದ ನಿರ್ಗಮಿಸಲು,ರಂಗವನ್ನು ಮುಂದಿನ ಪ್ರಸಂಗಕ್ಕೆ ಸಿದ್ದಗೊಳಿಸಲು ನೆರವಾಗುತ್ತೆ. ನಾಲ್ಕು ರಂಗಗಳು ಹೊಸ ಸಾಧ್ಯತೆಯಿಲ್ಲಿ. ವಿವೇಕಾನಂದರ ಪ್ರಸ್ತಾಪ ಬಂದಾಗ ಅಲ್ಲಿ ನೋಡು ಎನ್ನೋ ಜೋಗಯ್ಯನ ಮಾತಿಗೆ ತಕ್ಕಂತೆ ರಂಗದ ಹಿಂಭಾಗದಲ್ಲಿ ಪ್ರತ್ಯಕ್ಷವಾಗೋ ವಿವೇಕಾನಂದರು, ಶುರುವಿನಲ್ಲಿ ಬರೋ ಧೂಪದ ಘಮ,.. ಉಫ್ ಏನುಂಟು ಏನಿಲ್ಲ ಇಲ್ಲಿ. ಕತೆಯಲ್ಲೇ ಇರೋ ಸಾಕಷ್ಟು ಟ್ವಿಸ್ಟುಗಳನ್ನು ಇನ್ನೂ ಹೆಚ್ಚು ರೋಚಕಗೊಳಿಸಿ ಯಾವ ಸಿನಿಮಾಕ್ಕೂ ಕಮ್ಮಿಯಿಲ್ಲ ಗುರು ಇದು ಅಂತ ಅನೇಕರ ಬಾಯಲ್ಲಿ ಉದ್ಘಾರ ಮೂಡುವಂತೆ ತೋರಿಸೋಕೆ ಸಹಾಯಕವಾಗಿದೆ ತಂತ್ರಜ್ನಾನ ಇಲ್ಲಿ ! 

ತಪ್ಪು ಹುಡುಕಹೊರಡುವವರಿಗೆ ಅಲ್ಲಲ್ಲಿ ತಪ್ಪೂ ಕಾಣಬಹುದಿಲ್ಲಿ. ಇಂತಾ ಸುದೀರ್ಘ ಪ್ರದರ್ಶನವನ್ನು ಮೊದಲ ಬಾರಿಗೆ ನೋಡಿದ ನನಗೆ ಇದನ್ನು ಬೇರೆ ಯಾವುದರ ಜೊತೆಗೆ ಹೋಲಿಸಲಾಗದಿದ್ದರೂ ಸಿನಿಮಾ, ಇಂಟರ್ನೆಟ್ ಯುಗದಲ್ಲಿ ನಾಟಕಗಳಿಗೆ ಜನ ಬರುತ್ತಾರಾ ಅನ್ನೋ ಅನುಮಾನದ ಸಮಯದಲ್ಲಿ ಇದೊಂದು ಉತ್ತರದಂತೆ, ಆಶಾಭಾವನೆಯಂತೆ ಕಂಡದ್ದೆಂತೂ ಸುಳ್ಳಲ್ಲ. ಉದಾಹರಣೆಗೆ ಒಂದು ಸ್ಟೇಜಲ್ಲಿ ಸುಮ್ಮನೇ ಕಣ್ಣುಹಾಯಿಸಿದಾಗ ಹದಿನಾರು ಸಾಲುಗಳು ಕಂಡವು. ಪ್ರತೀ ಸಾಲಲ್ಲೂ ಸುಮಾರು ನಲವತ್ತು ಜನ. ಅದೂ ಸಾಲದೆ ಹೊರಗೆ ನಿಂತು ನೋಡುತ್ತಿದ್ದ ಜನರಿದ್ದರೆಂದರೆ ಪ್ರದರ್ಶನ ನೋಡೋಕೆ ಬಂದೋರೆಷ್ಟಿರಬಹುದೆಂದು, ಪ್ರದರ್ಶನದ ಯಶಸ್ಸೆಷ್ಟಿರಬಹುದೆಂದು ನೀವೇ ಅಂದಾಜಿಸಿ ! ಒಳ್ಳೊಳ್ಳೆ ಡೈಲಾಗುಗಳಿಗೆ, ಹಾಡುಗಳಿಗೆ ಚಪ್ಪಾಳೆ, ಶಿಳ್ಳೆಗಳ ಮೆಚ್ಚುಗೆ, ಪ್ರತೀ ದೃಶ್ಯಾಂತ್ಯಕ್ಕೆ ನೋಡುಗರ ಕರತಾಡನದ ಮೆಚ್ಚುಗೆಗಳು ಯಾವ ಸ್ಟಾರ್ ಪಟ್ಟಕ್ಕೂ ಅಪೇಕ್ಷಿಸದೇ ಕಿರು ಸಂಬಳದಲ್ಲೇ ಅಭಿನಯಿಸುತ್ತಿರೋ ಪಾತ್ರಧಾರಿಗಳ ಉಮೇದನ್ನು ಕೊಂಚವಾದರೂ ಹೆಚ್ಚಿಸಿರಬಹುದಾ ಅನಿಸ್ತು. ಪ್ರತೀ ಎರಡು ಎರಡೂವರೆ ಘಂಟೆಗಳ ನಡುವೆ ಹದಿನೈದು ನಿಮಿಷದ ವಿರಾಮ ಕೊಟ್ಟು, ಫುಡ್ ಕೋರ್ಟು, ಶೌಚಾಲಯಗಳಂತ ಮೂಲಭೂತ ವ್ಯವಸ್ಥೆ, ಅಲ್ಲಲ್ಲಿ ನಿಂತು ಮುಂದಿನ ರಂಗಕ್ಕೆ ಜನರನ್ನು ನಿರ್ದೇಶಿಸುತ್ತಿದ್ದ ಕಾರ್ಯಕತ್ರರು.. ಹೀಗೆ ಒಟ್ಟಾರೆ ಆಯೋಜನೆಯೂ ಖುಷಿ ಕೊಡ್ತು. 

ಮುಗಿಸೋ ಮುನ್ನ: ಬುಕ್ ಮೈ ಶೋನಲ್ಲಿ ಅಥವಾ ಅಲ್ಲೇ ಹೋಗೂ ತಗೊಳ್ಳಬಹುದು ಟಿಕೇಟನ್ನ ಅಂತ ತಿಳಿಸಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿರೋ ನಾನು ಈ ರಂಗಪ್ರಯೋಗದ ಅಥವಾ ಕಾದಂಬರಿಯ ಪ್ರಚಾರಕ ಖಂಡಿತಾ ಅಲ್ಲ. ಕೆಳದಿ ಉತ್ಸವ ಅಂತ ಸಂಗೀತಗಾರರ ತಂಡವೊಂದಕ್ಕೆ(ಹೆಸರು ಬೇಡ ಬಿಡಿ) ನಾಲ್ಕು ಲಕ್ಷ ಕೊಟ್ಟು ಕರೆಸಿದ ಸರ್ಕಾರ ಅದಕ್ಕಿಂತ ಮುಂಚೆ ಭರತನಾಟ್ಯ ಪ್ರದರ್ಶನ ನೀಡಿದ ಕಲಾವಿದರಿಗೆ, ಸಖತ್ ಚೆನ್ನಾಗೇ ಹಾಡಿದ ಕಾಲೇಜು ಹುಡುಗಿಯರಿಗೆ ಕೊಟ್ಟ ಸಂಭಾವನೆ ..? ಅದ್ನೆಲ್ಲ ಕೇಳಂಗಿಲ್ಲ ಬಿಡಿ. ಎಷ್ಟಂದ್ರೂ ಲೋಕಲ್ ಕಲಾವಿದರಲ್ವೇ ? ಸ್ಟೇಜ್ ಹತ್ತೋದೇ ದೊಡ್ಡ ಸಾಧನೆ !! ಅರ್ಜಿತ್ ಸಿಂಗನ ಸಂಗೀತ ಅಂತ ಮೂರು ಸಾವಿರ ಕೊಟ್ಟು ಫೀನಿಕ್ಸ್ ಮಾಲಿಗೆ ತೆರಳೋ ಜನರಿಗೆ ನಾಟಕ ಪ್ರದರ್ಶನದ ನೂರಿನ್ನೂರರ ಪ್ರವೇಶ ಧನ ದುಬಾರಿಯಾಗಿ ಕಾಣುತ್ತೆ. ಆ ಉತ್ಸವ, ಇಷ್ಟನೇ ವರ್ಷದ ಆಚರಣೆ ಅಂತ ಕೋಟಿಗಟ್ಟಲೇ ಸುರಿಯೋ ಸರ್ಕಾರಕ್ಕೆ ಐವತ್ತರವತ್ತು ಕಲಾವಿದರು ತಿಂಗಳುಗಟ್ಟಲೇ ಶ್ರಮಹಾಕಿ ದುಡಿಯುತ್ತಿರುವ ಇಂಥಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸೋ ಬುದ್ದಿಬರುವುದು ಎಂದೋ ? ! ಕ್ವಾಲಿಟಿಯಿದ್ರೆ ಜನ ಬಂದೇ ಬರುತ್ತಾರೆ ಅನ್ನೋ ಮಾತಿದ್ರೂ ರಂಗಸಜ್ಜಿಕೆ ಮುಂತಾದವನ್ನು ಸಿದ್ದಪಡಿಸೋಕೆ ಮೊದಲಿಗೆ ಬೇಕಾಗೋ ಬಂಡವಾಳ  ಎಲ್ಲಿಂದ ಬರಬೇಕು ? ! ತನ್ನ ಕ್ವಾಲಿಟಿಯಿಂದಲೇ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಪ್ರದರ್ಶನದಿಂದ ಇನ್ನಿತರ ಹೊಸ ಹೊಸ ಪ್ರಯೋಗಗಳು ಬರಲಿ, ಬರೀ ಲಾಂಗು ಮಚ್ಚು-ಯುದ್ದದ ಸಿನಿಮಾಗಳಿಂದ ,  ಚೂಯಿಂಗಗಮ್ಮಿನಂತೆ ಎಳೆಯಲ್ಪಡೋ ಜಗಳಗಳ ಧಾರಾವಾಹಿಗಳ ಬೋರಿನಿಂದ ಪಾರಾಗಲು ಪ್ರೇಕ್ಷಕರಿಗೆ ಬೇರೆ ದಾರಿ ಸಿಗಲೆಂಬ ಸದಾಶಯದೊಂದಿಗೆ, ಜೊತೆಯಾದ ಉಮಾಕಾಂತ, ಶಾಂತಗೌಡ,ರಾಮ್, ಸುರೇಶ ಗೌಡ, ಚಂದ್ರಕಲಾ, ದೀಪಿಕಾ, ಅಶೋಕ್ ಮತ್ತವರ ಒಟ್ಟು ಎರಡಂಕಿಯ ಸ್ನೇಹಿತರಿಗೆ ವಂದಿಸುತ್ತಾ  ಸದ್ಯಕ್ಕೊಂದು ವಿರಾಮ. 

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Adarsha B S
Adarsha B S
9 years ago

Super writeup..same feels here Prashu 🙂 🙂

ಗುರುಪ್ರಸಾದ ಕುರ್ತಕೋಟಿ

ಪ್ರಶಸ್ತಿ, ನೀವು ಕರೆದಾಗ ಬರಲಾರದ ಮಿತ್ರರಲ್ಲಿ ನಾನೂ ಒಬ್ಬ :). ತುಂಬಾ ಒಳ್ಳೆಯ ಬರಹ. ಕೊನೆಯ ಪ್ಯಾರಾವಂತೂ ಮನ ಕಲುಕುತ್ತದೆ. ನಾಳೆ ಪ್ರದರ್ಶನಕ್ಕೆ ಹೋಗುವ ನನ್ನ  ನಿರ್ಧಾರ ನಿಮ್ಮ  ಬರಹ ಓದಿದ ಮೇಲೆ ಗಟ್ಟಿಯಾಯ್ತು!  

ಆದರ್ಶ
ಆದರ್ಶ
9 years ago

ಕುವೇ೦ಪು ಅವರ ಮಾತಿನ೦ತೆ, ಸೃಷ್ಟಿ ಎಷ್ಟು ಮುಖ್ಯವೋ, ಅದನ್ನು ಅನುಭವಿಸುವವನೂ ಅಷ್ಟೇ ಮುಖ್ಯ. ಇಲ್ಲಿ ಸಾಹಿತ್ಯದ ಮಾತಾದರೂ, ಇದು ರ೦ಗ ಪ್ರಯೋಗಕ್ಕೆ ಅನ್ವಯಿಸುತ್ತದೆ. ಇದನ್ನು ಅನುಭವಿಸಿ, ಅಷ್ಟೇ ಅದರ ಬಗ್ಗೆ ಹೊಗಳಿದರೆ ನಿರ್ದೇಷಕರಿಗೆ ಮತ್ತು ಇದರಲ್ಲಿ ಅಭಿನಯಿಸಿದವರಿಗೆ ಗೌರವ ತಲುಪುತ್ತದೆ. ನಿಮ್ಮ ಕಾಳಜಿ ಮತ್ತು ಆಸಕ್ತಿ ನಿಮ್ಮ ಲೇಖನದಲ್ಲಿ ಎದ್ದು ಕಾಣುತ್ತದೆ.ಆಸಕ್ತಿ ಹೀಗೆ ಮು೦ದುವರೆಯಲಿ.

sakhyamedha
9 years ago

ಇದುವರೆಗೆ ಐದು ಬಾರಿಯಾದರೂ ಮಲೆಗಳಲ್ಲಿ ಮದುಮಗಳು ಓದಿದ್ದರೂ ಮೊದಲು ಸಿಕ್ಕ ಅನುಭೂತಿಯೇ ಪ್ರತೀ ಬಾರಿಯೂ ಅನುಭವವಾಗುತ್ತದೆ. ಮಲೆನಾಡಿನಲ್ಲೇ ಬೆಳೆದವರಿಗಂತೂ ಅಲ್ಲಿ ವಿವರಿಸುವ ಸನ್ನಿವೇಶಗಳು ಭಾವೋನ್ಮಾದ ಹುಟ್ಟಿಸುತ್ತವೆ.

ಈ ಕಾದಂಬರಿಯ ನಾಟಕ ಇದೆ ಎಂದು ಕೇಳಿದಾಗೆಲ್ಲ ಎಷ್ಟೇ ಆದರೂ ಮೂಲರೂಪ ಉಳಿಸಿಕೊಂಡ ಕಥೆಯನ್ನು ನಾಟಕದಲ್ಲಿ ಅಳವಡಿಸಲು ಸಾಧ್ಯವಿಲ್ಲ ಎಂದುಕೊಂಡಿದ್ದೆ. ಮನಮುಟ್ಟುವ ಈ ಬರಹ ಓದಿದ ಮೇಲೆ ನಿಜಕ್ಕೂ ಅದನ್ನು ನೋಡಬೇಕೆಂಬ ಅತೀವ ಆಸೆ ಹುಟ್ಟಿದೆ. ಸುಂದರ ಬರಹ 🙂

4
0
Would love your thoughts, please comment.x
()
x