ಮರೆಲಾಗದ ಮಹಾನುಭಾವರು ತಲ್ಲೂರ ರಾಯನಗೌಡರು: ವೈ. ಬಿ. ಕಡಕೋಳ

“ನಿಮಗೇಕೆ ಕೊಡಬೇಕು ಕಪ್ಪ. ನೀವೇನು ನಮ್ಮ ನೆಂಟರೋ ಬಂಧುಗಳೋ. ನಮ್ಮ ಭೂಮಿಯನ್ನು ಉತ್ತಿ ಬಿತ್ತಿ ಬೆಳೆದವರೋ. ನಿಮಗೇಕೆ ಕೊಡಬೇಕು ಕಪ್ಪ. ” ಎಂಬ ಈ ಸಾಲುಗಳನ್ನು ಬಿ. ಸರೋಜಾದೇವಿ ಹೇಲುವ ಕಿತ್ತೂರು ಚನ್ನಮ್ಮ ಚಲನಚಿತ್ರದ ಈ ಸಂಭಾಷಣೆ ಇಂದಿಗೂ ಕಿತ್ತೂರು ಚನ್ನಮ್ಮ ಚಲನಚಿತ್ರ ವೀಕ್ಷಿಸಿದವರಿಗೆ ರೋಮಾಂಚನೆ ಉಂಟು ಮಾಡುತ್ತವೆ ಅಲ್ಲವೇ. ? ದೇಶಭಕ್ತಿಯ ಕಿಚ್ಚನ್ನು ಹಚ್ಚುವ ಸಾಲುಗಳ ಕತೆಯಾಧಾರಿತ ಕಿತ್ತೂರು ಚನ್ನಮ್ಮ ಚಲನಚಿತ್ರವಾಗಲು ಒಂದು ವ್ಯಕ್ತಿಯ ಶಕ್ತಿ ಬಹಳ ಶ್ರಮಿಸಿದ್ದು. ಕಿತ್ತೂರ ಚನ್ನಮ್ಮ ಚಲನಚಿತ್ರ ನಿರ್ದೇಶಕ ಬಿ. ಆರ್. ಪಂತಲು ಕೂಡ ಆ ವ್ಯಕ್ತಿಯ ಕುರಿತು ಚಲನಚಿತ್ರ ಆರಂಭದಲ್ಲಿ ನಮ್ಮ ಧನ್ಯವಾದಗಳು ಎಂಬ ಒಕ್ಕಣೆಯಲ್ಲಿ ಸ್ಮರಿಸಿದ್ದನ್ನು ಇಂದಿಗೂ ಕೂಡ ಆ ಚಲನಚಿತ್ರ ವೀಕ್ಷಿಸಲು ಕುಳಿತರೆ ನೋಡಬಹುದು. ಅಲ್ಲಿ ಪಂತುಲು ಅವರು ತಲ್ಲೂರ ರಾಯನಗೌಡರು. ವಾಲಿ ಚನ್ನಪ್ಪನವರನ್ನು ಸ್ಮರಿಸಿದ್ದಾರೆ. ಅವರೇ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ತಲ್ಲೂರ ರಾಯನಗೌಡರು.

ತಲ್ಲೂರು ಗ್ರಾಮ ಶರಣರು ಸಂಚರಿಸಿದ ಮಾರ್ಗಗಳಲ್ಲೊಂದು. ಬಿಜ್ಜಳನ ಉಪಟಳದಿಂದ ಹೊರಟ ಶರಣರ ದಂಡು ಚನ್ನಬಸವಣ್ಣನವರ ನೇತೃತ್ವದಲ್ಲಿ ಉಳುವಿಯತ್ತ ಸಾಗುವಾಗ ಚುಂಚನೂರು ಜಾಲಿಕಟ್ಟಿ ತಲ್ಲೂರು ಮುರಗೋಡ ಮೂಲಕ ಸಂಚರಿಸಿದ್ದು. ತಲ್ಲೂರಲ್ಲಿ ಬಿಜ್ಜಳನ ಸೈನಿಕರಿಗೆ ಸಿಕ್ಕ ಶರಣರು ಅವರೊಡನೆ ಕಾದಾಡಿದಾಗ ತಲೆಗಳು ಉರುಳಿದವು ಎಂದು ಹೇಳುವರು. ಅಂತಹ ತಲೆಗಳು ಉರುಳಿದ ಊರು ತಲ್ಲೂರು ಆಯಿತು ಎಂದು ಗ್ರಾಮ ನಾಮ ಕುರಿತು ಹೇಳುವಾಗ ಬರುವುದು. ಇಂಥಹ ತಲ್ಲೂರಿನಲ್ಲಿ ಬ್ರಿಟನ್ ರಾಣಿಯಿಂದ ಕಿತ್ತೂರಿನ ಅವಶೇಷಗಳನ್ನು ತಂದು ಸದ್ಯ ಕಿತ್ತೂರು ಕೋಟೆಯಲ್ಲಿ ಇರುವ ಮ್ಯೂಜಿಯಂ ಸ್ಥಾಪನೆಗೆ ಕಾರಣಕರ್ತರಾದ ರಾಯನಗೌಡರು ಬದುಕಿದ್ದರು ಎಂಬುದು ನಮ್ಮ ಕಣ್ಣ ಮುಂದಿರುವ ಸತ್ಯ.

ನಾವು ಇಂದು ಅನೇಕ ಜನರನ್ನು ಒಂದೊಂದು ರೀತಿಯಲ್ಲಿ ಸ್ಮರಿಸುತ್ತೇವೆ. ಅವರ ಬದುಕಿನ ರೀತಿಯನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿದರೆ ಅದು ಮುಂದಿನ ಪೀಳಿಗೆಗೂ ತಲುಪುತ್ತದೆಯಲ್ಲವೇ. ? ಸವದತ್ತಿ ತಾಲೂಕಿನ ಪುಟ್ಟ ಗ್ರಾಮ ತಲ್ಲೂರಿನಲ್ಲಿ ದೇಶ ಕಂಡ ಅಪ್ರತಿಮ ವ್ಯಕ್ತಿಯೊಬ್ಬರು ಬಾಳಿ ಬದುಕಿದ್ದರು ಎಂಬುದನ್ನು ಇಂದಿನ ಪೀಳಿಗೆಯು ಅರಿಯಬೇಕಾದ ಅವಶ್ಯಕತೆ ಇದೆ. ಇಂದು ತಲ್ಲೂರ ರಾಯನಗೌಡರ ಜನ್ಮ ದಿನ. ಅದಕ್ಕಾಗಿ ಅವರ ಕುರಿತು ನನ್ನ ನುಡಿನಮನ.

ರಾಯನಗೌಡರು 28-2-1910 ರಂದು ತಲ್ಲೂರ ಗೌಡರ ಮನೆತನದಲ್ಲಿ ಜನಿಸಿದರು. ಇವರ ತಂದೆ ಲಿಂಗನಗೌಡ ತಾಯಿ ಬಸವ್ವ. ಅವರಿಗೆ ಇಬ್ಬರು ಗಂಡು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದ ರಾಯನಗೌಡರು ತಮ್ಮ ಬಾಲ್ಯವನ್ನು ತಲ್ಲೂರು ಮತ್ತು ಮುರಗೋಡದಲ್ಲಿ ಕಳೆದರು. ಚಿಕ್ಕವರಿದ್ದಾಗಲೇ ತಾಯಿಯನ್ನು ಕಳೆದುಕೊಂಡ ಇವರ ಬದುಕು ಸಾಗಿದ್ದು ಅಜ್ಜಿ ಶ್ರೀಮತಿ ಸಿದ್ದಲಿಂಗಮ್ಮನವರ ಲಾಲನೆ ಪೋಷಣೆಯಲ್ಲಿ. ಸಿದ್ದಲಿಂಗಮ್ಮನವರು ರಾಯನಗೌಡರನ್ನು ತಾಯಿಯಿಲ್ಲದ ತಬ್ಬಲಿಯೆಂದು ಬಹಳ ಅಕ್ಕರೆಯಿಂದ ಅತ್ಯಂತ ಮುದ್ದು ಮುದ್ದಾಗಿ ಬೆಳೆಸಿದರು. ಪರಿಣಾಮವಾಗಿ ರಾಯನಗೌಡರು ಬಹು ತುಂಟ ಬಾಲಕನಾಗಿ ಬೆಳೆದರು. ಅವರ ತುಂಟುತನವು ಶಾಲೆ ಕಾಲೇಜುವರೆಗೂ ಬಂದಿತ್ತು.

ರಾಯನಗೌಡರ ಪ್ರಾಥಮಿಕ ಶಿಕ್ಷಣ ತಲ್ಲೂರಿನಲ್ಲಿಯೇ ಆಯಿತು. ಅವರ ಶಿಕ್ಷಕರಾದ ಶ್ರೀ ಬಸಪ್ಪ ಮಲಕಣ್ಣವರ. ಬಸಲಿಂಗಪ್ಪ ಕಾಶಪ್ಪನವರ ಹಾಗೂ ದುಂಡಯ್ಯ ತೊರಗಲ್ಲಮಠರು ರಾಯನಗೌಡರ ಬಾಲ ಪ್ರತಿಭೆಯನ್ನು ಹೊರತರಲು ಶ್ರಮ ಪಟ್ಟಿದ್ದರು. ರಾಯನಗೌಡರು ತಮ್ಮ ಶಿಕ್ಷಣ ಮುಗಿದ ಮೇಲೂ ಹಾಗೂ ಅವರು ಸಾಮಾಜಿಕ ವ್ಯಕ್ತಿಯಾದ ಮೇಲೂ ಈ ಗುರುಗಳೊಡನೆ ಸ್ನೇಹ ಸಂಬಂಧವನ್ನು ಇಟ್ಟುಕೊಂಡಿದ್ದರು. ಮುಲ್ಕಿ ಪರೀಕ್ಷೆಯ ನಂತರ ಬಿ. ಎ. ಪದವಿಯನ್ನು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ 1932 ರಲ್ಲಿ ಸೇರಿದರು. ನಂತರ ಎಲ್. ಎಲ್. ಬಿ. ಅಭ್ಯಸಿಸಲು ಮುಂಬೈಗೆ ತೆರಳಿದರು.

ರಾಯನಗೌಡರಿಗೆ ಸ್ವಾತಂತ್ರ್ಯದ ಹೋರಾಟದ ಪ್ರಭಾವ ಗಾಂಧೀಜಿಯವರ ಭಾಷಣಗಳ ಮೂಲಕ ಆಯಿತು. ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. 1942 ರ ವರೆಗಿನ ಅವರ ಹೋರಾಟದ ಪುಟಗಳು ಅಮೋಘ. ನಂತರ ಶರಣಾಗತರಾಗಿ ಜೈಲುವಾಸ. ಸ್ವಾತಂತ್ರ್ಯ ನಂತರ ಸಂಶೋಧನೆ ಸಮಾಜಸೇವೆ ಇತರ ಚಟುವಟಿಕೆಗಳನ್ನು ಬೈಲಹೊಂಗಲದಲ್ಲಿ ಆರಂಭಿಸಿದರು. ಅಷ್ಟೇ ಅಲ್ಲ ಕರ್ನಾಟಕ ಏಕೀಕರಣ ಹೋರಾಟದಲ್ಲೂ ಕೂಡ ಪಾಲ್ಗೊಂಡರು. ರಾಣಿ ಚನ್ನಮ್ಮ ಇತಿಹಾಸ ಮಂಡಳದ ಕಾರ್ಯದರ್ಶಿಯಾಗಿ ಜನತಾ ಸೇವಕ ಸಮಾಜ ಸಂಸ್ಥೆಯ ಚಟುವಟಿಕೆಯ ಮೂಲಕ ಕಿತ್ತೂರ ಮ್ಯೂಜಿಯಂ ಸ್ಥಾಪನೆ ಹಾಗೂ ಮಲ್ಲಸರ್ಜ ಕಾವ್ಯ ಸಂಪಾದನೆ ಇವರ ಮಹತ್ವದ ಕಾರ್ಯ ಇಂದಿನ ಕಿತ್ತೂರಿಗೆ ಆಗಿರುವುದು ಸ್ಮರಣೀಯ. ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತ 1952 ಮುಂಬೈ ವಿಧಾನ ಸಭೆಗೆ ಗುಡಿಸಲು ಚಿನ್ಹೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನನುಭವಿಸಿದರು. ಸ್ವಂತ ಬಲದ ಮೇಲೆ ಪ್ರಜಾ ಸಮಾಜವಾದೀ ಪಕ್ಷದ ಸಕ್ರೀಯ ಸದಸ್ಯರಾಗಿ ಮುಂದುವರೆದರು. ಕರ್ನಾಟಕದಲ್ಲಿ ಆ ಪಕ್ಷವನ್ನು ಬಲಪಡಿಸಲು ಶ್ರಮಿಸಿದರು. ಮಾರ್ಚ 21 1954 ರಲ್ಲಿ ಬೆಳಗಾವಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕರ್ನಾಟಕ ಪ್ರಜಾ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಸರ್ವಾನುಮತದಿಂದ ಚುನಾಯಿತರಾದರು. ಅವರ ಸೋಲು ಅವರನ್ನು ದೃತಿಗೆಡಿಸಿತು. ಅಷ್ಟೇ ತಮ್ಮ ಜೀವಿತಾವಧಿಯವರೆಗೂ ಅವರು ಸಮಾಜ ಸೇವೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡರು.

ರಾಯನಗೌಡರು ತಾವು ಸ್ಥಾಪಿಸಿದ್ದ ಜನತಾ ಸೇವಕ ಸಮಾಜ(ಸಾಹಿತ್ಯ) ದಿಂದ ಕರ್ನಾಟಕದ ಗಡಿಗೆರೆಗಳು ಭಾಗ-1 ಎಂಬ ಪುಸ್ತಕವನ್ನು ಬರೆದು ಕರ್ನಾಟಕದ ವಿವಿಧ ಭಾಗಗಳು ಬೇರೆ ಬೇರೆ ರಾಜ್ಯದಲ್ಲಿ ಹಂಚಿಹೋಗಿದ್ದನ್ನು ಕನ್ನಡಿಗರ ಅವಗಾಹನೆಗೆ ತಂದಿರುವರು. ಹೀಗೆ ಅವರ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಮೇಲೆ ಬೆಳಕು ಚಲ್ಲುವ ಅವರ ಕೈಬರಹದ ಮತ್ತು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿತ ಅವರ ಬರಹಗಳು. ಇವರ ಮನೆಯಲ್ಲಿ ಇವರದೇ ಆದ ಒಂದು ಕೊಠಡಿ. ಅಲ್ಲಿ ಒಂದು ಕಟ್ಟಿಗೆಯ ಖುರ್ಚಿ. ಖಾದಿ ಗ್ರಾಮೋದ್ಯೋಗ ಭಂಡಾರದಿಂದ ತಂದಿದ್ದ ಆಯ್ದ ಸೋಪಾನಗಳು ಮಧ್ಯದಲ್ಲಿ ಹೂವಿನ ಗುಚ್ಚದಿಂದಾವೃತವಾದ ಕುಂಡ ಆ ಅರಾಮ ಕುರ್ಚಿಯಲ್ಲಿ ಕುಳಿತು ಪ್ರತಿ ದಿನ ಬೆಳಗಿನ 7 ಗಂಟೆಯಿಂದ 9 ಗಂಟೆಯವರೆಗೆ ತಮ್ಮ ನಿಕಟವರ್ತಿಗಳೊಂದಿಗೆ ಪತ್ರ ಬರೆಯುವ ದಿನಚರಿ. ಹಾಗೆಯೇ ಯಾರಾದರೂ ಭೇಟಿಗೆ ಬಂದರೆ ಅವರ ಉಭಯ ಕುಶಲೋಪಚರಿ ವಿಚಾರಿಸಿ ಅವರ ಕಾರ್ಯಕ್ಕೆ ಕೈ ಜೋಡಿಸುವುದು ನಿತ್ಯದ ದಿನಚರಿಯಾಗಿತ್ತು. ಎಂದು ಅವರ ಮಗಳು ಮೈಂದ್ರೇಯಣಿ ಹೇಳುತ್ತಾರೆ. ಎತ್ತರದ ಕಟ್ಟು ಮಸ್ತಾದ ಕಾಯ ಪ್ರತಿಭೆ ಸೂಸುವ ಕಣ್ಣು ನಯ ವಿನಯ ಗೌರವರ್ಣ ಸದಾ ಹಸನ್ಮುಖಿ ಅಪ್ಪಟ ಭಾರತೀಯ ರೈತ ನನ್ನ ತಂದೆ ಎಂದು ಅವರು ತಮ್ಮ ತಂದೆಯ ಕುರಿತು ಹೇಳುವಾಗ ಅವರ ಪೋಟೋ ನೋಡಿದರು ಸಾಕು ಅವರ ವ್ಯಕ್ತಿತ್ವ ನಮ್ಮ ಕಣ್ಮುಂದೆ ಬರುವುದು.

ಪ್ರತಿದಿನವೂ ತಲ್ಲೂರಲ್ಲಿ ಇದ್ದಾಗ ಮುಂಜಾವಿನ 5 ಗಂಟೆಗೆ ಎದ್ದು 2. 4 ಕಿ. ಮೀ ಅಂತರದಲ್ಲಿರುವ ತಮ್ಮ ಹೊಲಗಳಿಗೆ ಭೇಟಿ ನೀಡುವುದು. ನಿಸರ್ಗದ ಬಗ್ಗೆ ತಮ್ಮ ಮಕ್ಕಳಿಗೆ ಹೇಳುತ್ತ ಸಾಗುವುದು ಅವರೊಟ್ಟಿಗೆ ಮಕ್ಕಳನ್ನು ಕರೆದುಕೊಂಡು ಸಂಚಾರಕ್ಕೆ ಹೊರಡುತ್ತಿದ್ದ ರೀತಿಯನ್ನು ಅವರ ಮಗಳು ಮೈಂದ್ರೇಯಣಿ ಹೇಳುವುದನ್ನು ಕೇಳಿದರೆ ನಿಜಕ್ಕೂ ಅವರ ದೈನಂದಿನ ದಿನಚರಿ ಅದ್ಬುತ ಮತ್ತು ಶಿಸ್ತಿನಿಂದ ಕೂಡಿತ್ತು ಎಂಬುದನ್ನು ನಾವು ಕಾಣಬಹುದು.

ರಾಯನಗೌಡರು ರಾಜ್ಯ ರಾಜಕೀಯಕ್ಕೆ ಅಸ್ಪಶ್ಯರಾದರೂ ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿ,ಅಜೀವ ಸದಸ್ಯರಾಗಿ,ಕಾರ್ಯಾಧ್ಯಕ್ಷರಾಗಿ,ಉಪಾಧ್ಯಕ್ಷ,ಅಧ್ಯಕ್ಷರಾಗಿ ಕಾರ್ಯ ಮಾಡಿದರು. ರಾಯನಗೌಡರು ಮುಂಬೈಗೆ ಕಾನೂನು ವಿದ್ಯಾಭ್ಯಾಸಕ್ಕೆ ಹೋದ ನಂತರ ಮುಂಬೈದಲ್ಲಿ 12-5-1937 ರಂದು ಲಿಂಗಾತ ಉನ್ನತಿ ಸಂಘವನ್ನು ಸ್ಥಾಪಿಸಿದರು. ಅವರು ಈ ಕೆಳಗಿನ ಸಂಘ ಸಂಸ್ಥೆಗಳೊಡನೆ ಸಂಬಂಧವಿಟ್ಟುಕೊಂಡಿದ್ದರು.
1) ಚೇರಮನ್ ಚನ್ನಮ್ಮರಾಣಿ ಇತಿಹಾಸ ಮಂಡಳ ಬೈಲಹೊಂಗಲ 1944-67
2)ಉಪಾಧ್ಯಕ್ಷ ರಾಜ್ಯ ಕೃಷಿಕ ಸಮಾಜ 1960-69
3) ಭಾರತೀಯ ಕೃಷಿಕ ಸಮಾಜ ಆಡಳಿತ ಸಮಿತಿಯ ಸದಸ್ಯ 1960-69
4)ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯ 1951-69
5)ರಾಣಿ ಚನ್ನಮ್ಮ ಸಮಿತಿ ಮೈಸೂರು(ರಾಜ್ಯ ಮಟ್ಟದಲ್ಲಿ) 1965-69
6) ಬಸವೇಶ್ವರರ 800 ನೇ ಜನ್ಮದಿನ ಸಮಾರಂಭದ ಸದಸ್ಯ 1965-69
7) ಕನಕದಾಸರ 400ನೆಯ ಜನ್ಮ ದಿನದ ಸಮಾರಂಭದ ಸಮಿತಿ ಸದಸ್ಯ
8)ಐತಿಹಾಸಿಕ ಮತ್ತು ಪುರಾತತ್ವ ಕಮೀಟಿ ಮೈಸೂರು ರಾಜ್ಯ 1960-69
9)ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಟ್ರಸ್ಟ ಕಮೀಟಿ ಸದಸ್ಯ (1962-1965)

ಹೀಗೆ ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ ಚೇರಮನ್‍ರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ ಬದುಕನ್ನು ಕಳೆದರು. ಈ ಎಲ್ಲ ಸಂಘ ಸಂಸ್ಥೆಗಳ ಮೂಲಕ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದರು.

ಹೀಗೆ ಸಮಾಜುಮುಖಿ ಚಿಂತಕರಾಗಿ ರೈತರ ಒಡನಾಡಿಯಾಗಿ ಕರ್ನಾಟಕ ಏಕೀಕರಣ ಹೋರಾಟದಲ್ಲೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಸಂಶೋಧಕರಾಗಿ ಬದುಕಿದ ತಲ್ಲೂರು ರಾಯನಗೌಡರನ್ನು ಕುರಿತು ನಾಡಿನ ಹೆಸರಾಂತ ಲೇಖಕರಾದ ಎನ್ಕೆ. ಕವಿ ಚನ್ನವೀರ ಕಣವಿ. ಹೋರಾಟಗಾರ ನಾಡೋಜ ಪಾಟೀಲ ಪುಟ್ಟಪ್ಪನವರು ತಮ್ಮ ಅನುಭವಗಳನ್ನು ಲೇಖನಗಳಲ್ಲಿ ಪ್ರಕಟಿಸಿರುವರು. ಇಂಥಹ ಮಹಾನುಭಾವರ ಸ್ಮರಣೆ ಇಂದಿನ ಪೀಳಿಗೆಗೆ ಅವಶ್ಯಕ. ಜಾಲಿಕಟ್ಟಿ ಗ್ರಾಮದ ಮೂಲಕ ತಲ್ಲೂರಿಗೆ ಹೊರಟರೆ ಮಾರ್ಗಮಧ್ಯದಲ್ಲಿ ಅವರ ಜಮೀನಿನಲ್ಲಿ ರಾಯನಗೌಡರ ಸಮಾಧಿಯಿದೆ. ಅಲ್ಲಿಂದ ತಲ್ಲೂರಿಗೆ ಹೋದರೆ ಅಲ್ಲಿ ಅವರು ವಾಸವಿದ್ದ ಮನೆಯಿದೆ. ಅಲ್ಲಿ ಅವರ ಭಾವಚಿತ್ರ ಕಾಣಬಹುದು. ಅವರ ಬದುಕಿನ ಕುರಿತು ಅವರ ಒಡನಾಟ ಹೊಂದಿದ್ದ ವಯೋವೃದ್ದರ ನುಡಿಗಳನ್ನು ಕೇಳಿದಾಗ ಎಂತಹ ಮಹಾತ್ಮ ಈ ನೆಲದಲ್ಲಿ ಆಗಿ ಹೋಗಿರುವರಲ್ಲ ಎಂದು ಆಶ್ಚರ್ಯ ಉಂಟಾಗುತ್ತದೆ. ಇಂಥಹ ಮಹಾನುಭಾವರು ಅಗಲಿದ್ದು 30-9-1982 ರಂದು ಇಂದಿಗೂ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅವರ ದತ್ತಿನಿಧಿಯ ಹೆಸರಿನಲ್ಲಿ ಪ್ರತಿವರ್ಷ ಅವರ ಸ್ಮರಣೆ ಜರುಗುತ್ತಿದೆ. ತಲ್ಲೂರ ಗ್ರಾಮದಲ್ಲಿಯೂ ಈ ಕುರಿತು ಚಟುವಟಿಕೆಗಳು ನಿರಂತರವಾಗಿ ನಡೆಯುವ ಅವಶ್ಯಕತೆ ಇದೆ. ಈ ದಿಸೆಯಲ್ಲಿ ಪ್ರಯತ್ನಗಳು ಜರುಗಬೇಕು. ಸರ್ಕಾರ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿಗೆ ಸಂಬಂಧಿಸಿದಂತೆ ಏಣಗಿ ಬಾಳಪ್ಪನವರು. ಹುಕ್ಕೇರಿ ಬಾಳಪ್ಪನವರು. ತಲ್ಲೂರ ರಾಯನಗೌಡರ ಕುರಿತಂತೆ ಟ್ರಸ್ಟ ಹುಟ್ಟು ಹಾಕುವ ಔಚಿತ್ಯ ಕೂಡ ಇದೆ. ಮುಂಬರುವ ಪೀಳಿಗೆಗೆ ಇಂತಹ ವ್ಯಕ್ತಿಗಳು ನಮ್ಮ ಜಿಲ್ಲೆಯಲ್ಲಿ ಆಗಿ ಹೋಗಿರುವರು ಎಂಬುದನ್ನು ತಿಳಿಸಿದರೆ ಬದುಕು ಸಾರ್ಥಕವಲ್ಲವೇ. ?

-ವೈ. ಬಿ. ಕಡಕೋಳ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಮಹಾಂತೇಶ್ ಅಣ್ಣಿಗೇರಿ
ಮಹಾಂತೇಶ್ ಅಣ್ಣಿಗೇರಿ
4 years ago

ತಲ್ಲೂರಿನ ಗೌಡರ ಇತಿಹಾಸ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್

1
0
Would love your thoughts, please comment.x
()
x