ಮರೆಯಾಗುತ್ತಿರುವ ಜಾನಪದ ಸೊಗಡು: ಸುಮನ್ ದೇಸಾಯಿ

 

ಇಂದಿನ ದಿವಸಗಳೊಳಗ ನವ್ಯಕಾವ್ಯಗಳ ಆರ್ಭಟಗಳ ಅಡಿಯೊಳಗ ಜಾನಪದ ಕಾವ್ಯಗಳ ಸೊಗಡು ಮರಿಯಾಕ್ಕೊತ ಹೊಂಟದ. ಈ ಜನಪದ ಸಿರಿ ಹೆಚ್ಚಾಗಿ ಹಳ್ಳಿಗೊಳೊಳಗ ನೋಡಲಿಕ್ಕೆ ಸಿಗತದ. ಹಳ್ಳಿಗಳೊಳಗ ಜೀವನ ಶೂರುವಾಗೊದ ಈ ಜನಪದ ಸೊಗಡಿನ ಹಾಡುಗಳಿಂದ. ಹಳ್ಳಿ ಜನರಲ್ಲೆ ಅಕ್ಷರಜ್ಞಾನ ಇಲ್ಲಂದ್ರು ಜೀವನದ ಅನುಭವಗೊಳ ಲಾಲಿತ್ಯವನ್ನ ಪದಕಟ್ಟಿ ಹಾಡುವ ಕಲೆ ಇರ್‍ತದ. "ಮುಂಝಾನೆ ಎದ್ದು ನಾ ಯಾರನ್ನ ನೆನೆಯಲಿ" ಅಂತ ದೈವಿಕ ಭಾವನೆಯಿಂದ ದಿನ ನಿತ್ಯದ ಬದುಕಿನ ಬಂಡಿ ಎಳಿಲಿಕ್ಕೆ ಅನುವಾಗ್ತಾರ. ದೈನಂದಿನ ಕೆಲಸಗಳಿಗೆ ಜಾನಪದದ ಸಾಹಿತ್ಯದ ರೂಪ ಕೊಟ್ಟು ಎಷ್ಟ ಛಂದ ಹಾಡು ಕಟ್ಟಿರತಾರ. "ಏಳೇಳ ಹೊತ್ತ ಹೊಡ ಉರಳಿಬಂತ, ಕಸ ಎತ್ತಿ ಹೊರಗ ಹಾಕ. ದೊಡ್ಡೆಮ್ಮಿ ಎಲ್ಲಿ ಹೋಗೈತಿ ನೋಡ, ಕರ ಕಟ್ಟ ಹಿತ್ತಲಾಗ" ಇದು ಹಳ್ಳಿಗಳೊಳಗ ಕಾಣುವಂಥ ಒಂದು ಸಾಮಾನ್ಯ ದಿನಚರಿ. ಆದರ ಇದನ್ನ ಜಾನಪದ ಸೊಗಡಿನ ಚೌಕಟ್ಟನ್ಯಾಗ ಹೆಣೆದಾಗ ಎಷ್ಟು ಸೊಗಸು ಅನಿಸ್ತದ. 

ಸಾಮಾನ್ಯವಾಗಿ ಹೆಣ್ಣುಮಕ್ಕಳು ಮನಿ ಕೆಲಸಾ ಮಾಡೊವಾಗ ಜಾನಪದ ಗೀತೆಗಳನ್ನ ಹಾಡಿಕೋತ ಕೆಲಸಾ ಮಾಡ್ತಿರರ್ತಾರ. "ಕುಟ್ಟುತ, ಬೀಸುತ, ಕೂಸು ನನ್ನ ತೊಡಿಮ್ಯಾಲ| ವಾಸ್ಯ ಬ್ಯಾಡಾ ನೆಗೆಣ್ಣಿ, ಮನೆಗೆಲಸಾ ಘಳಿಗೊತ್ತಿನ್ಯಾಗ ಮಾಡೇನಾ||" ಅಂತ ತನ್ನ ನಿಗೆಣ್ಣಿಗೆ ಸಿಟ್ಟಾಗಬ್ಯಾಡಾ ಅಂತ ಕೇಳಿಕೊಳ್ಳತಾಳ ಮನಿಯ ಸಣ್ಣ ಸೊಸಿ. ಮನಿಕೆಲಸಾ ಮಾಡಲಿಕ್ಕೆ ಬಿಡಲಾರದ ಅಳುವ ಕಂದಮ್ಮಗೊಳನ್ನ, ತಾಯಿ ಎಷ್ಟ ಛಂದ ರಮಿಸ್ತಾಳ, ಎಷ್ಟ ಸಹನೆಯಿಂದ ಮಕ್ಕಳ ಕಾಡುವಿಕೆಯನ್ನ ಸುದ್ಧಾ ಹೆಮ್ಮಯಿಂದ ಹೇಳ್ಕೊಳ್ಳತಾಳ ಅನ್ನೊದು ಈ ಹಾಡುಗಳೊಳಗ ಎಷ್ಟ ಛಂದ ವರ್ಣಿಸ್ಯಾರ ನೋಡ್ರಿ, "ಅತ್ತರ ಅಳಲ್ಯವ್ವ, ಈ ಕೂಸು ನನಗಿರಲಿ| ಕೆಟ್ಟರ ಕೆಡಲಿ ಮನೆಗೆಲಸ||" ತಾಯಿ ತನ್ನ ಮಗುವನ್ನ ಬಿಟ್ರ ತನಗ್ಯಾವದು ಹೆಚ್ಚಲ್ಲ ಅನ್ನೊ ಭಾವ ಈ ಹಾಡಿನೊಳಗ ಸ್ಪಷ್ಟ ಕಾಣಿಸ್ತದ.  "ಅಳುಬುರುಕ, ಗಿಳುಬುರುಕ, ಇವನೆಂಥ ಮಗನವ್ವಾ | ಉಣಗೊಡಣ, ರೊಟ್ಟಿ ಸುಡಗೊಡಣ| ನನ್ನ ಮಗನ, ಎತ್ತಕೊಳ್ಳೊರು ಯಾರಿಲ್ಲ|| "ಮನೆಗೆಲಸಾ ಮಾಡಲಿಕ್ಕೆ ಬಿಡದ ಕಾಡೊ ಮಗನ್ನ ಎತ್ತಿಕೊಳ್ಳೊರು ಯಾರು ಇಲ್ಲಂತ ತನ್ನ ತಳಮಳನ ಹಿಂಗ ಹಾಡಿನ ಮೂಲಕ ಹೇಳ್ಕೊಳ್ಳತಾಳ ಕೂಸಿನ ತಾಯಿ. ಅದೆಂಥಾ ಬಡತನದೊಳಗನ ಇರಲಿ ತಾಯಿಗೆ ತನ್ನ ಮಗಾ ರಾಜಕುಮಾರನ, ಆಡಿ ಬಂದ ಮಗಗ ಅಕ್ಕರೆಯಿಂದ ಹಿಂಗ ಹೇಳ್ತಾಳ,  "ಆಡಿ ಬಾ ಎನ ಕಂದ ಅಂಗಾಲ ತೊಳೆದೇನ, ತೆಂಗಿನಕಾಯಿ ತಿಳಿನೀರ| ತೆಂಗಿನಕಾಯಿ ತಿಳಿನೀರ ತಕ್ಕೊಂಡು, ಬಂಗಾರದ ಮಾರಿ ತೊಳದೇನ" ಅಂತ. ಬಡತನದ ಬಿಸಿಲಿನ್ಯಾಗ ಬೆಂದ ಜೀವಾ, ತನ್ನ ಕರುಳಿನ ಕುಡಿಗಳ ಆಟಪಾಠಗಳನ್ನ ನೋಡ್ಕೋತ ತನ್ನ ದುಃಖ ನೋವುಗಳ ತಾಪವನ್ನ ಮರಿಲಿಕ್ಕೆ ಹಿಂಗ ಹಾಡ್ತಾಳ,  "ಕೂಸಿದ್ದ ಮನಿಗೆ ಬೀಸಣಿಕಿ ಯಾತಕ್ಕ | ಕೂಸು ಕಂದವ್ವ ಒಳಹೊರಗ ಆಡಿದರ| ಬೀಸಣಿಕಿ ಗಾಳಿ ಸುಳಿಧಾಂಗ||" ಅಂತ. ಬರೆ ಮಕ್ಕಳ ಸುಖದೊಳಗ ಇಂಥಾ ಜನಪದ ಹಾಡುಗೊಳು ಹುಟ್ಟಿಕೊಳ್ಳತಾವಂತೇನಿಲ್ಲಾ. ಮಕ್ಕಳಿರದವರ ನೋವಿಗೂ, "ಬಾಲಕರಿಲ್ಲದ ಬಾಲಿದ್ಯಾತರ ಜನ್ಮ| ಬಾಡಿಗಿ ಎತ್ತು ದುಡಿಧಾಂಗ||" ಅನ್ನೊ ವೇದನೆಗು ಜನಪದ ಸ್ಪಂದಿಸ್ತದ. 

"ಅಕ್ಕಂದು ಆಲೂರು, ತಂಗಿದು ಬೇಲೂರು, ನೀರಿಲ್ಲದೂರು ನರಗುಂದ| ನೀರಿಲ್ಲದೂರ ನರಗುಂದ ದೇಸಾಯಿ, ಹಾಲಿಲೆ ಮಾರಿ ತೊಳದಾನ||. ಕಿರಿಕಿರಿ ಕಂದಮ್ಮಗ ಬೆರಕಿಗೆ ನೀರಿಲ್ಲ| ಸರಕಾರದ ಅಗಸಿ ತಗದಿಲ್ಲ| ಸರಕಾರದ ಅಗಸಿ ತಗದಿಲ್ಲ ಕಂದಮ್ಮನ ಅಳುವ ಧ್ವನಿ ಕೇಳಿ| ಸರಕಾರದ ಅಗಸಿ ತಗದಾರ||" ಸಮಕಾಲೀನ ನೀರಿನ ಸಮಸ್ಯೆಯನ್ನ ಮತ್ತ ದೇಸಾಯರ ದೌಲತ್ತನ್ನ ಎಷ್ಟ ಛಂದ ಜಾಹಿರ ಪಡಿಸ್ತಾರ ಈ ಹಾಡುಗಳೊಳಗ.  

ಬಡತನವಿರಲಿ| ಬಹಳ ಮಕ್ಕಳಿರಲಿ| ಮೇಲೆ ಗುರುವಿನ ದಯೆಯಿರಲಿ ನನ್ನ ಗುರುವೆ| ಬಡತನದ ಚಿಂತಿ ನಿನಗಿರಲಿ|| ಹಳ್ಳಿಯ ಜನರು ಅಲ್ಪತೃಪ್ತರಿರತಾರ. ತಾವಿದ್ದ ಸಿಮೀತ ಜಗತ್ತನೊಳಗ ಶಾಂತಿ ನೆಮ್ಮದಿಯನ್ನ ಕಂಡ್ಕೊಂಡು ಸುಖವಾಗಿರೊ ಪ್ರಯತ್ನ ಮಾಡತಾರ. ದೇವರಲ್ಲೆ ಅವರು ಪ್ರಾರ್ಥನೆ ಮಾಡಿಕೊಳ್ಳೊದು ಎಷ್ಟ ಸರಳ ಇರ್ತದ, ಕಾಯುವ ದೇವರಿದ್ದಾನ ಅನ್ನೊ ನಂಬಿಕಿ ಎಷ್ಟು ಅಚಲವಾಗಿರ್ತದ ಅಂತ ಈ ಜನಪದ ಹಾಡನ್ನ ಕೇಳಿದ್ರ ಗೊತ್ತಾಗ್ತದ. ಇನ್ನ ಪಟ್ಟಣದ ಶೋಕಿ, ಬಣ್ಣದ ಬೆಡಗಿಗಿಂತ ತಮ್ಮ ಹಳ್ಳಿ ಊರ ಛಂದನ್ನೊದನ್ನ ಈ ಹಾಡಿನ್ಯಾಗ ಎಷ್ಟ ಛಂದ ರೂಪಿಸ್ಯಾರ ನೋಡ್ರಿ, ಊರ ಮುಂದ ತಿಳಿನೀರಿನ ಹಳ್ಳ| ಬೇವುಮಾವು ಹೊಲಗಳ ಮರಬಳ್ಳಿ| ದಂಡಿಗುಂಟ ನೋಡ ನೇಳ್ಳ ನೇಳ್ಳ| ನೀರ ತರುವಾಗ ಗೆಳತಿಯರ ಜೋಡ| ಯಾತಕವ್ವ ಹುಬ್ಬಳ್ಳಿ ಧಾರವಾಡ| ನಮ್ಮ ಹಳ್ಳಿ ಊರ ನಮಗ ಪಾಡ| ಯಾತಕವ್ವ ಹುಬ್ಬಳ್ಳಿ ಧಾರವಾಡ||.

ಹೆಣ್ಣು ಮಕ್ಕಳು ತವರನ್ನ ನೆನಪು ಮಾಡಿಕೊಂಡು, ಹರಿಸೊ ಹಾಡುಗಳಂತು ಕಣ್ಣು ತುಂಬಿ ಬರೊ ಹಂಗ ಇರ್‍ತಾವ. ಗಂಡನ ಮನ್ಯಾಗ ಐಸಿರಿ ಇದ್ರುನು, ತವರಿನ ಮೋಹ ಹೆಣ್ಣ ಮಕ್ಕಳಿಗೆ ಬಿಟ್ಟದ್ದಲ್ಲಾ. ಹಾಲುಂಡ ತವರಿಗೆ ಏನೆಂದು ಹಾಡಲಿ| ಹೊಳೆ ದಂಡಿಲಿರುವ ಕರಕೀಯ ಕುಡಿಯಂಗ| ಹಬ್ಬಲೇ ಅವರ ರಸಬಳ್ಳಿ|| ಅಂತ ತನ್ನ ತವರಿನ ಕಿರ್ತಿ ಬೆಳೆಯಲಿ ಅಂತ ಹಾರೈಸ್ತಾಳ. ತಂದಿಯ ನೆನೆದರ ತಂಗಳ ಬಿಸಿಯಾಯ್ತು| ಗಂಗಾದೇವಿ ನನ್ನ ಹಡದವ್ವನ ನೆನೆದರೆ| ಮಾಸಿದ ತಲೆಯು ಮಡಿಯಾಯ್ತು|| ಹಿಂಗ ಕೊಟ್ಟಮನೆಯೊಳಗ ತಾ ಅನುಭವಿಸೊ ದುಃಖಗಳನ್ನ ತನ್ನ ಹಡೆದವರನ್ನ ನೆನಪು ಮಾಡ್ಕೊತ ಮನಸ್ಸನ್ನ ತಂಪು ಮಾಡ್ಕೊತಾಳ.  ಕಾಶೀಗೆ ಹೋಗಲಾಕ ಎಸೊಂದು ದಿನ ಬೇಕ| ತಾಸು ಹೊತ್ತಿನ ಹಾದಿ ತವರೂರ ಮನೆಯಾಗೆ| ಕುಂತಾಳೆ ಕಾಶಿ ಹಡೆದವ್ವ||. ಹಿಂಗ ತನ್ನ ತವರೂರು ಕಾಶಿ ಯಾತ್ರೆಗಿಂತ ಪುಣ್ಯದ್ದು ಅಂತ ಅನ್ನೊ ಭಾವ ಈ ಹಾಡಿನೊಳಗ ವ್ಯಕ್ತ ಪಡಿಸ್ತಾಳ.

ತವರು ಮನಿ ಅಂದಕೂಡಲೆ ಹೆಣ್ಣಿಗೆ ಮೊದಲ ನೆನಪಗೊದು ಅಣ್ಣ-ತಮ್ಮಂದ್ರು. ಪ್ರತಿ ಹೆಣ್ಣಿಗು ಹಡೆದವರಕ್ಕಿಂತ ಹೆಚ್ಚು ಭಾವನತ್ಮಕ ಸಂಬಂಧ ತನ್ನ ಅಣ್ಣತಮ್ಮಂದ್ರಲ್ಲೆ ಇರ್ತದ. ಹೆಣ್ಣಿನ ಜನುಮಾಕ ಅಣ್ಣತಮ್ಮದಿರು ಬೇಕು| ಬೆನ್ನು ಕಟ್ಟುವರು ಸಭೆಯೊಳಗ ಸಾವಿರ| ಹೊನ್ನು ಕಟ್ಟುವರು ಉಡಿಯೊಳಗ||. ಅದಕ್ಕ ಈ ಜನಪದ ಗೀತೆನ ಸಾಕ್ಷಿ.  ತಂಗೀನ ಕಳುವ್ಯಾನ ತವರೇರಿ ನೀಂತಾನ | ಅಂಗೀಲಿ ನೀರು ಒರಸ್ಯಾನ ನನ್ನಣ್ಣ| ಇಂದಿಗೆ ತಂಗಿ ಎರವೆಂದ|| ಮುದ್ದಿನ ತಂಗಿನ್ನ ಸಡಗರದಿಂದ ಮದವಿ ಮಾಡಿ ಕಳಿಸಿದ ಅಣ್ಣನ ಅಗಲಿಕೆಯ ನೋವು ಈ ಹಾಡಿನೊಳಗದ. 

ಹೆಣ್ಣ ಮಕ್ಕಳಿಗೆ ಪಂಚಮಿ ಹಬ್ಬಕ್ಕ ತವರುಮನಿಗೆ ಬರೊ ಹುರುಪಂತು ಮಾತಿನ್ಯಾಗ ಹೇಳಲಿಕ್ಕೆ ಆಗುದಿಲ್ಲ. ಪಂಚಮಿ ಹಬ್ಬಾ ಉಳದಾವ ದಿನ ನಾಕ| ಅಣ್ಣಾ ಬರಲೇಯಿಲ್ಲಾ ಕರಿಲಾಕ|| ನನ್ನ ತವರಲ್ಲಿ ಪಂಚಮಿ ಭಾರಿ| ಮಣ ತೂಕದ ಬೆಲ್ಲ ಖೊಬ್ಬರಿ| ಅಳ್ಳು ಅವಲಕ್ಕಿ ತಂಬಿಟ್ಟು ಸೂರಿ| ನಾನು ತಿನುವಾಕಿ ಅಲ್ಲೇ ಮನಸಾರಿ|| ಅಂತ ತನ್ನ ಕರಿಲಿಕ್ಕೆ ಬರೊ ಅಣ್ಣನ ದಾರಿ ಕಾಯ್ಕೋತ, ತನ್ನ ತವರು ಮನ್ಯಾಗಿನ ಹಬ್ಬದ ಸಂಭ್ರಮ ಹೇಳ್ಕೊತಿರತಾಳ. ಹಿಂಗ ನಾವು ನಮ್ಮ ದಿನನಿತ್ಯದ ಜೀವನದೊಳಗ ಜನಪದ ಸಾಹಿತ್ಯದ ಸೊಗಡನ್ನ ಕಾಣ ಬಹುದು. ಸಂಸಾರದ ಏರುಪೇರುಗಳನ್ನ ತನ್ನ ಭಾವದೊಳಗ ಹಿಡದಿಡೊ ಅಂಥಾ ಒಂದು ಮಂತ್ರಿಕ ಶಕ್ತಿ ಜನಪದ ಸಾಹಿತ್ಯದೊಳಗದ. ಸಂಸಾರ ಸಂಸಾರ| ಒಲಿ ಮ್ಯಾಲಿನ ಹಂಚಿನಾಂಘ| ಮೊದಲ ಕೈಗೆ ಬಿಸಿ ಹತ್ತಿ, ಸುಟ್ಟ ಮ್ಯಾಲೆನ ಸಿಗತದ ರುಚಿ ರುಚಿ ರೊಟ್ಟಿ||. ಈ ಒಂದು ಪುಟ್ಟ ಸಾಲಿನೊಳಗ ಜೀವನದ ಸಂಪೂರ್ಣ ಅರ್ಥನ ಅಡಗೇದ. 

ಗಂಡಹೆಂಡಿರ ಜಗಳ| ಗಂಧವ ತೀಡಿಧಂಗ||  ಅಂತ ಸಂಸಾರದೊಳಗ ಸರಸ ವಿರಸಗೊಳೊಂದಿಗೆ ಸಾಮರಸ್ಯದಿಂದ ಜೀವನ ನಡೆಸಲಿಕ್ಕೆ ಸಂದೇಶವನ್ನ ನೀಡುವಂಥ ಸಾಲುಗಳು. ಮನೆಗೆ ಸೊಸಿನ್ನ ಹುಡುಕಬೇಕಾದ್ರು ಮಾಳಿಗಿ ಮನಿ ಬೇಕ, ಜೋಳಿಗಿ ಹಣ ಬೇಕ| ರಾಮ ದೇವರಂಥ ಮಗ ಬೇಕ| ರಾಮ ದೇವರಂಥ ಮಗ ಬೇಕ, ನಮ್ಮನಿಗೆ ಜಾನಕಿಯಂಥ ಸೊಸಿ ಬೇಕ||, ಉಪ್ಪರಿಗಿ ಮನಿ ಬೇಕ| ಕೊಪ್ಪರಿಗಿ ಹಣ ಬೇಕ| ಕೃಷ್ಣ ದೇವರಂಥ ಮಗ ಬೇಕ| ಕೃಷ್ಣ ದೇವರಂಥ ಮಗ ಬೇಕ, ನಮ್ಮನಿಗೆ ರುಕ್ಮೀಣಿಯಂಥ ಸೊಸಿ ಬೇಕ|| ಅಂತ ಬರೊ ಸೊಸಿ ಬಗ್ಗೆ ಅಕ್ಕರತಿಯಿಂದ ಹಾಡತಾರ.  ಸಂಗಮಕ ಹೋಗಾಕ ಸಂಗಾಟ ಮಗಾ ಬೇಕ| ತಂಬಿಗಿ ಹಿಡಿಯಾಕ ಸೊಸಿ ಬೇಕ| ಕೂಡಲಸಂಗಮಕ ಹೋಗಿಬರಬೇಕ|| ಈ ಸಾಲುಗೊಳು ಹೆತ್ತವರಿಗೆ ಮಗಾ-ಸೊಸಿ ತಮ್ಮ ಜೀವನಕ್ಕ ಎಷ್ಟು ಮುಖ್ಯ ಅನ್ನೊದನ್ನ ಭಾಳ ಅಂತಃಕರಣದಿಂದ ಹೇಳ್ತಾವ. ಹಿಂಗ ಜಾನಪದ ಜಗತ್ತಿನೊಳಗ ಒಳಹೊಕ್ಕು ನೋಡಿದ್ರ ಬದುಕಿನ ಬಣ್ಣಗಳ ಕಾಮನಬಿಲ್ಲ ಕಾಣಸ್ತಾವ.

ನಾವೆಲ್ಲ ಇವನ್ನೆಲ್ಲಾ ಕೇಳ್ಕೊತನ ಬೆಳೆದು ದೊಡ್ಡವರಾದ್ವಿ. ಆದ್ರ ಈಗಿನ ಪೀಳಿಗೆ ಈ ಸೊಗಡಿನಿಂದ ವಂಚಿತರಾಗ್ಯಾರ. ಪಾಶ್ಚಿಮಾತ್ಯ, ಆಧುನಿಕ, ಸಾಹಿತ್ಯ ಸಂಗೀತಗಳ ಅಬ್ಬರದೊಳಗ ಜಾನಪದ ಸಾಹಿತ್ಯ ಮರೆಯಾಗಿ ಹೋಗೆದ. ಜೀವನದ ತಾತ್ಪರ್ಯಗಳನ್ನ ಸರಳವಾದ ಭಾವದೊಳಗ ತಿಳಿಸಿಕೊಡುವಂಥ ಈ ಜಾನಪದ ಸಾಹಿತ್ಯದ ಮಹತ್ವವನ್ನ, ಲಾಲಿತ್ಯವನ್ನ, ಈಗಿನ ಪೀಳಿಗೆ ತಿಳಿಸಿಕೊಡೊ ಅಭಿಯಾನ ಶೂರುವಾಗಬೇಕು. ನಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರಗಳ ಪರಿಚಯ ಬಹುತೇಕ ಈ ಜನಪದ ಸಾಹಿತ್ಯದೊಳಗ ಅಡಗೇದ. ಮಕ್ಕಳಿಗೆ ಶಾಲೆಯೊಳಗ ಕಲಾ ಅವಧಿಯೊಳಗ ಜಾನಪದ ಹಾಡುಗಳು, ಸಾಹಿತ್ಯಗಳ ಸೊಗಡಿನ ಬಗ್ಗೆ ಹೇಳಿಕೊಡೊ ಪ್ರಯತ್ನ ನಡಿಬೇಕು. ಯಾಕಂದ್ರ ಇಂದಿನ ಮಕ್ಕಳೆ ನಾಳಿನ ಭವ್ಯ ಸಂಸ್ಕೃತಿಯ ಬುನಾದಿಗಳು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

11 Comments
Oldest
Newest Most Voted
Inline Feedbacks
View all comments
Anil T
Anil T
10 years ago

'ಸುಮ್ಮ ಸುಮ್ಮನಾ' ಅನ್ಕೋತ ಎಷ್ಟು ಖರೆ ಖರೆ ವಿಷಯ ಬರಿತಿರಿ –ಬಹಳ ಹಿಡಿಸ್ತು ನೀವು ಹೇಳಿದ್ದು ''ಕೂಸಿದ್ದ ಮನಿಗೆ ಬೀಸಣಿಕಿ ಯಾತಕ್ಕ | ಕೂಸು ಕಂದವ್ವ ಒಳಹೊರಗ ಆಡಿದರ| ಬೀಸಣಿಕಿ ಗಾಳಿ ಸುಳಿಧಾಂಗ!' ತಂಗಾಳಿಯಂಥ ಮಾತು.

-Anil

Akhilesh Chipli
Akhilesh Chipli
10 years ago

ನೀವು ಅಂಬೋದು ಖರೇ ಐತಿ!

narayana.M.S.
narayana.M.S.
10 years ago

ನೀವು ಹೇಳೋದು ನಿಜ. ಆದರೆ ಮಕ್ಕಳಿಗೆ ಈ ಭಾಷೆ ಅರ್ಥ ಆಗತ್ತಾ? ವಿಶೇಷವಾಗಿ ಪಟ್ಟಣದ ಮಕ್ಕಳಿಗೆ ಜನಪದ ಸಿಕ್ಕೋಹಾಗಾಗ ಬೇಕು. 

rukmini nagannavar
rukmini nagannavar
10 years ago

"ನಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರಗಳ ಪರಿಚಯ ಬಹುತೇಕ ಈ ಜನಪದ ಸಾಹಿತ್ಯದೊಳಗ ಅಡಗೇದ. ಮಕ್ಕಳಿಗೆ ಶಾಲೆಯೊಳಗ ಕಲಾ ಅವಧಿಯೊಳಗ ಜಾನಪದ ಹಾಡುಗಳು, ಸಾಹಿತ್ಯಗಳ ಸೊಗಡಿನ ಬಗ್ಗೆ ಹೇಳಿಕೊಡೊ ಪ್ರಯತ್ನ ನಡಿಬೇಕು. ಯಾಕಂದ್ರ ಇಂದಿನ ಮಕ್ಕಳೆ ನಾಳಿನ ಭವ್ಯ ಸಂಸ್ಕೃತಿಯ ಬುನಾದಿಗಳು".

ಖರೆ ಅದ ನಿಮ್ಮ ಮಾತು… 

ಜಾನಪದ ಅಂದ್ರ ನಂಗೂ ಭಾಳ ಹಿಡಿಸ್ತದ…

ರುಕ್ಮಿಣಿ ಎನ್.

amardeep.ps
amardeep.ps
10 years ago

ಹಳ್ಳಿ ಸೊಗಡಿನ ಸಂಸ್ಕೃತಿ ಚಿತ್ರಣ ಬಹಳ ಚೆನ್ನಾಗಿ ಬಿಡಿಸಿದ್ದೀರಿ….

Ravichandra
Ravichandra
10 years ago

ಹಾಲುಂಡ ತವರಿಗೆ ಏನೆಂದು ಹಾಡಲಿ| ಹೊಳೆ ದಂಡಿಲಿರುವ ಕರಕೀಯ ಕುಡಿಯಂಗ| ಹಬ್ಬಲೇ ಅವರ ರಸಬಳ್ಳಿ

ತಂದಿಯ ನೆನೆದರ ತಂಗಳ ಬಿಸಿಯಾಯ್ತು| ಗಂಗಾದೇವಿ ನನ್ನ ಹಡದವ್ವನ ನೆನೆದರೆ| ಮಾಸಿದ ತಲೆಯು ಮಡಿಯಾಯ್ತು|

prema naduvinamani
prema naduvinamani
10 years ago

Tumba sogasu….. nantar kannadadalle kalisuttene

umesh desai
10 years ago

ಭಾಳ ಅಂದರ ಭಾಳ ಛಂದ

ನಮ್ಮ ಪೀಳಿಗಿಗೆ ಈ ಹಾಡು ನಿಂತಾವ ಇದು ದುಃಖದ ಸಂಗತಿ

ಇಂತಹ ಅತ್ಯಮೂಲ್ಯ ಲೇಖನ ಬರೆದ ನಿಮಗೆ ಅಭಿನಂದನೆ..

Girish Kulkarni
Girish Kulkarni
4 years ago

“ಏಳೇಳ ಹೊತ್ತ ಹೊಡಮರಳಿ ಬಂತ ಕಸ ಹೊತ್ತು ಹೊರಗ ಹಾಕ” ಈ ಹಾಡು ಪೂರ್ತಿಯಾಗಿ ಸಿಗಬಹುದೇ ?

sunil somani
sunil somani
2 years ago

ಏಳೇಳ ಹೊತ್ತ ಹೊಡ ಉರಳಿಬಂತ, ಕಸ ಎತ್ತಿ ಹೊರಗ ಹಾಕ. ದೊಡ್ಡೆಮ್ಮಿ ಎಲ್ಲಿ ಹೋಗೈತಿ ನೋಡ, ಕರ ಕಟ್ಟ ಹಿತ್ತಲಾಗ” ದಯವಿಟ್ಟು ಸಿಗ್ಬಹುದ?

Shaileshwar
Shaileshwar
1 year ago

“ಏಳೇಳ ಹೊತ್ತ ಹೊಡ ಉರಳಿಬಂತ, ಕಸ ಎತ್ತಿ ಹೊರಗ ಹಾಕ. ದೊಡ್ಡೆಮ್ಮಿ ಎಲ್ಲಿ ಹೋಗೈತಿ ನೋಡ, ಕರ ಕಟ್ಟ ಹಿತ್ತಲಾಗ” -ಈ ಜಾನಪದವನ್ನು ಪೂರ್ತಿಯಾಗಿ ದೊರಕುವುದೇ……. ಇಲ್ಲ ಅಂದ್ರೆ ಯೌಟ್ಯೂಬ್ ನಲ್ಲಿಯಾದರೂ ಬಿಟ್ಟರೆ ನಿಮ್ಮ ಜಾನಪದದ ಪ್ರೀತಿಗೆ ಒಂದು ಬೆಳೆಯದರೂ ಬರಬಹುದು…..

11
0
Would love your thoughts, please comment.x
()
x