ಮರೆಯಾಗದಿರಲಿ ನೋವು ಮರೆಸುವ ನಗು!: ಜಯಶ್ರೀ.ಜೆ. ಅಬ್ಬಿಗೇರಿ


ಬಹುತೇಕ ನಮ್ಮೆಲ್ಲರ ಇತ್ತೀಚಿನ ದೈನಂದಿನ ಜೀವನ ಒತ್ತಡದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದೆ. ಒತ್ತಡ ಹಾಗೂ ಬದ್ಧತೆಗಳ ಆರ್ಭಟಕ್ಕೆ ಮಣದಿರುವ ನಾವು ಅಕ್ಷರಶಃ ನಗುವುದನ್ನೇ ಮರೆತಿದ್ದೇವೆ. ಅಲ್ಲೊಮ್ಮೆ ಇಲ್ಲೊಮ್ಮೆ ಆಗೊಮ್ಮೆ ಈಗೊಮ್ಮೆ ನಕ್ಕರೂ ಅದು ಗೊಂಬೆ ನಗುವಿನಂತಿರುತ್ತದೆ. ಹೃದಯ ತುಂಬಿದ ನಗು ಅದೆಲ್ಲಿ ಮಾಯವಾಗಿದೆಯೋ ಹುಡುಕ ಬೇಕಿದೆ. ಕಿವಿಯಿಂದ ಕಿವಿಯವರೆಗಿನ ನಗು ಮರೆತು ಅದೆಷ್ಟೋ ವರ್ಷಗಳು ಕಳೆದವು ಅನಿಸುತ್ತಿದೆ ಅಲ್ಲವೇ? ನಗು ಮಾನವನ ಸಹಜ ಪ್ರಕ್ರಿಯೆ ಅದನ್ನೇ ಮರೆತು ಬಾಳುತ್ತಿರುವುದು ನಿಜಕ್ಕೂ ಖೇದಕರ ಸಂಗತಿಯೇ ಸರಿ. ಒಂದು ಅಧ್ಯಯನದ ಪ್ರಕಾರ ನಾಲ್ಕು ವರ್ಷದ ಮಗು ದಿನವೊಂದಕ್ಕೆ ಸರಾಸರಿ ಮುನ್ನೂರು ಬಾರಿ ನಗುತ್ತದೆ. ಆದರೆ ವಯಸ್ಕನು ಕೇವಲ ಹದಿನೈದು ಸಲ ತುಟಿ ಅರಳಿಸುತ್ತಾನೆ. ಇದು ಅಚ್ಚರಿಯೆನಿಸಿದರೂ ಸತ್ಯ. ದೊಡ್ಡ ದೊಡ್ಡ ಆಕಾಂಕ್ಷೆಗಳಿಗೆ ತಕ್ಕಂತೆ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗುವುದು. ಗುರಿಯಿಲ್ಲದ ಅರ್ಥಹೀನ ಕೆಲಸಗಳಲ್ಲಿ ಮುಳುಗುವುದು ನಮ್ಮ ನಗೆ ಕಾಣದಾಗುವುದಕ್ಕೆ ಕಾರಣಗಳಾಗಿವೆ. ಇಡೀ ದಿನವೆಲ್ಲ ಪುರುಸೊತ್ತಿಲ್ಲದಂತೆ ಕೆಲಸ ನಿರ್ವಹಿಸಿದರೂ ಅಂತಿಮವಾಗಿ ದಿನದ ಕೊನೆಯಲ್ಲಿ ಸಂತೃಪ್ತಿಯ ನಗುವೊಂದು ಹುಟ್ಟುವುದಿಲ್ಲ. ನಗೆಯ ದೈತ್ಯಾಕಾರದ ಅಲೆಗಳು ಅಪ್ಪಳಿಸುವುದಿಲ್ಲ. ದಾವಂತವೆಂಬ ಸಣ್ಣದೊಂದು ತೂತು ಕೊರೆಯುವುದರ ಮೂಲಕ ಸಹಜ ನಗುವಿನ ಹಡುಗನ್ನು ಮುಳುಗಿಸುತ್ತಿದ್ದೇವೆ. ದಿನೇ ದಿನೇ ಹೆಚ್ಚು ಹೆಚ್ಚು ಒತ್ತಡದ ಬದುಕಿನತ್ತ ಮುನ್ನುಗ್ಗುತ್ತಿದ್ದೇವೆ. ಆಶೆ ಆಮಿಷ ರೋಷ ದ್ವೇಷಗಳ ಸುಳಿಗೆ ಸಿಲುಕಿ ನಲುಗುತ್ತಿದ್ದೇವೆ. ಮತ್ತೊಬ್ಬರ ನೋವಿಗೆ ನಗುತ್ತಿದ್ದೇವೆ. ಇತರರ ನಗುವಿಗೆ ಕೆಂಡ ಕಾರುತ್ತಿದ್ದೇವೆ. ಪಕ್ಕದವರ ಸಾಧನೆಗೆ ವ್ಯಂಗ್ಯ ಕುಹಕದ ನಗು ಚೆಲ್ಲಿ ಅಟ್ಟಹಾಸ ಮೆರೆಯುತ್ತಿದ್ದೇವೆ. ನಗು ಎಷ್ಟು ಶುದ್ಧವಾಗಿರುತ್ತದೆಯೋ ಸಶಕ್ತವಾಗಿರುತ್ತದೆಯೋ ಅಷ್ಟು ನಮ್ಮ ಜೀವನ ಸಮೃದ್ಧವಾಗುತ್ತದೆ. ಹಟಾತ್ ಬದಲಾವಣೆಯ ಈ ಕಾಲದಲ್ಲಿ ನಗು ಒಂದು ನೋವು ಮರೆಸುವ ಮಾಂತ್ರಿಕ ಶಕ್ತಿ ನಗ್ತಾ ನಗ್ತಾ ಬಾಳುವುದು ಹೇಗೆ ನೋಡೋಣ ಬನ್ನಿ.

ತುಂಬಿರಲಿ ಭಾವದ ಒಡಲು
ಯಾವಾಗ ನೋಡಿದರೂ ಪ್ರಪಂಚದ ಮಾಹಿತಿಗಳಿಗೆ ಬೆನ್ನು ಬಿದ್ದಿದ್ದೇವೆ. ಹೀಗಾಗಿ ಮಾಹಿತಿಗಳ ಗಣಿಗಳಾಗಿ ಬದಲಾಗುತ್ತಿದ್ದೇವೆ. ಭಾವದ ಒಡಲು ಇದೀಗ ನಿಷ್ಕ್ರೀಯ ಕಡಲಾಗಿದೆ. ಇದರಿಂದಾಗಿ ಭಾವ ಸ್ಪಂದನೆ ಶೂನ್ಯವಾಗುತ್ತಿದೆ. ನಮ್ಮೆಲ್ಲರ ಪೂರ್ವಜರು ಅತಿ ಕಡಿಮೆ ಸೌಲಭ್ಯಗಳಲ್ಲೂ ನಗೆಯ ಕಡಲಲ್ಲಿ ಮಿಂದೇಳುತ್ತಿದ್ದರು. ಏಕೆಂದರೆ ಅವರ ಭಾವದ ಒಡಲು ತುಂಬಿತ್ತು. ಇದೀಗ ಸೌಲಭ್ಯಗಳ ಮಹಾಪೂರ ನಮ್ಮ ಎದುರಿಗೆ ಹರಿಯುತ್ತಿದ್ದರೂ ಎರಡಕ್ಷರದ ನಗು ತುಟ್ಟಿಯಾಗಿ ಬಿಟ್ಟಿದೆ. ಇದೇಕೆ ಹೀಗೆ ಎಂದು ತಲೆ ಕೆರೆದುಕೊಂಡು ಯೊಚಿಸಲೂ ಸಮಯ ಸಾಲುತ್ತಿಲ್ಲ ಎನ್ನುವುದು ನಮ್ಮ ಗೋಳಾಗಿದೆ. ಎದೆಯು ತೃಪ್ತಿಗೆ ಜಾಗ ನೀಡುತ್ತಿಲ್ಲವೇಕೆ? ಎನ್ನುವ ಪ್ರಶ್ನೆ ದಿನವೂ ಕಾಡುತ್ತದೆ. ಬುದ್ಧಿ ಯೋಚಿಸಿದಷ್ಟು ದೊಡ್ಡದಾಗಿ ಆಲೋಚಿಸುವಷ್ಟು ಸಹನೆ ನಮ್ಮಲ್ಲಿ ಇಲ್ಲದಂತಾಗಿದೆ.. ಧನ ಕನಕ ವಸ್ತು ಒಡವೆಗಳ ಗೊಡವೆಗೆ ಹೋಗದ ಬಡವರು ಅಂತರಂಗದ ಸಿರಿವಂತಿಕೆಯ ನಗೆ ಬೀರುತ್ತಾರೆ. ನಗೆಯಿಂದ ಹೊಸ ಶಕ್ತಿಯೊಂದು ಮನದಲ್ಲಿ ಮನೆ ಮಾಡುತ್ತದೆ ಬದುಕಿನಲ್ಲಿ ಹೊಸ ಹುಮ್ಮಸ್ಸು ಹೊಸ ಹರುಷ ಹೊಸ ಹುರುಪು ಧಾರಾಳವಾಗಿ ಹರಿಯಬೇಕೆಂದರೆ ನಗು ಬೇಕೇ ಬೇಕು.

ತುಳಕಲಿ ಆತ್ಮವಿಶ್ವಾಸದ ನಗು
ಮುಖದ ಕಾಂತಿ ಹೆಚ್ಚಿಸುವ ಮನೋಲ್ಲಾಸ ತರುವ ನಗು ಯಾರಿಗೆ ಬೇಡ ಹೇಳಿ?ನಗುವಿಲ್ಲದ ಜೀವನ ಜಟಿಲವೆನಿಸುತ್ತದೆ. ಸಣ್ಣ ನಗುವಿನಿಂದ ಬಗೆಹರಿಬೇಕಿದ್ದ ಚಿಕ್ಕ ಪುಟ್ಟ ತೊಂದರೆಗಳು ದೊಡ್ಡ ಬಂಡೆಗಲ್ಲಿನಂತಾಗುತ್ತವೆ. ತುಟಿಯ ಮೇಲೆ ಆತ್ಮವಿಶ್ವಾಸ ತುಂಬಿದ ನಗು ತುಂಬಿ ತುಳುಕುತ್ತಿದ್ದರೆ ಸಾಕು ಎಂಥ ಸವಾಲುಗಳೂ ನಗಣ್ಯವೆನಿಸುತ್ತವೆ. ಕಷ್ಟವೆನಿಸುವ ಕಾರ್ಯವೂ ಎಡಗೈ ಕೆಲಸ ಎನಿಸುವುದು.ನಾವೆಲ್ಲರೂ ಎದೆ ತುಂಬಿದ ನಗೆಗಾಗಿ ತವಕಿಸುತ್ತಿರುತ್ತೇವೆ ಆದರೆ ಮನಃಶಾಂತಿ ಇಲ್ಲದೇ ಅದು ದೊರೆಯಲಾರದು. ಮನಃಶಾಂತಿಗೆ ಹೇಳಿ ಮಾಡಿಸಿದ ಮಾಂತ್ರಿಕ ಮದ್ದು ‘ನಗು’. ಎಲ್ಲ ಒತ್ತಡಗಳಿಗೆ ಶಾಶ್ವತವಾಗಿ ಗುಡ್ ಬೈ ಹೇಳುವ ತಾಕತ್ತು ನಗುವಿಗಿದೆ. ಒಂದು ಗಿಡವನ್ನು ಮೃದುವಾಗಿ ಸ್ಪರ್ಶಿಸಿದರೆ ಅದು ಚುಚ್ಚುತ್ತದೆ. ಧೈರ್ಯವಾಗಿ ಕೈನಿಂದ ಹಿಡಿದರೆ ಅದರೆ ಮುಳ್ಳುಗಳು ಮುದುರುತ್ತವೆ.ಕುಟುಂಬದಲ್ಲಿ ಕಛೇರಿಯಲ್ಲಿ ಹೀಗೆ ಎಲ್ಲೆಲ್ಲೂ ನಗುವಿನ ಬುಗ್ಗೆಗಳಿವೆ. ಅದನ್ನು ನೋಡುವ ದೃಷ್ಟಿ ಬೇಕು ಅಷ್ಟೇ. ಗೊಳ್ಳೆಂದು ಹೊಟ್ಟೆ ತುಂಬ ನಗಬೇಕಾದ ಚಟಾಕೆಗಳಿಗೂ ಬಾಯಿಗೆ ಹೊಲಿಗೆ ಹಾಕಿದಂತೆ ವರ್ತಿಸುತ್ತೇವೆ. ಇನ್ನು ಕೆಲವೊಮ್ಮೆ ನಕ್ಕರೆ ಸಿರಿ ಸಂಪತ್ತು ಕಳೆದು ಹೋಗುತ್ತದೆ ಅನ್ನುವ ತರ ಮುಖದಲ್ಲಿ ನೂರೆಂಟು ಗಂಟು ಹಾಕಿ ಕುಳಿತು ಬಿಡುತ್ತೇವೆ. ಗಂಭೀರವಾಗಿದ್ದರೆ ಮಾತ್ರ ಬೆಲೆ ಹೆಚ್ಚು ಎನ್ನುವುದು ನಮ್ಮಲ್ಲಿ ಬಹುತೇಕರ ಆಳವಾದ ನಂಬಿಕೆ. ಮನಃಪೂರ್ವಕ ನಗುವಿಲ್ಲದಿದ್ದರೆ ಧ್ಯೇಯೋದ್ದೇಶ ಗುರಿಗಳಿಗೆ ಆಕರ್ಷಿತರಾಗಲು ಸಾಧ್ಯವಿಲ್ಲ.

ನಕ್ಕರೆ ಕೆಲಸ ಸಲೀಸು
ಸಂಪೂರ್ಣ ನಿರುತ್ಸಾಹದ ಸಂದರ್ಭದಲ್ಲೂ ಉತ್ಸಾಹದ ಚಿಲುಮೆಯನ್ನು ಚಿಮ್ಮಿಸುವ ಅಗಾಧ ಶಕ್ತಿ ಈ ನಗುವೆಂಬ ಮಂತ್ರದಂಡಕ್ಕಿದೆ. ಉನ್ನತ ಕಾರ್ಯಗಳಲ್ಲಿ ಅತ್ಯನ್ನುತ ಕಾರ್ಯಾಚರಣೆಯಲ್ಲೂ ನಗುವಿನ ಚೀಲವನ್ನು ತಪ್ಪದೇ ಹೊತ್ತೊಯ್ಯುವವರನ್ನು ಕಂಡು ಅಚ್ಚರಿಯೆನಿಸುವುದು.ಅಂಥವರ ದಾರಿಯಲ್ಲಿ ನಾವೂ ಹೆಜ್ಜೆ ಹಾಕಬೇಕಿದೆ. ಹೋದಲೆಲ್ಲ ಮನ ಬಿಚ್ಚಿ ನಗುವವರು ಮಾತ್ರ ಇತರರನ್ನು ನಗಿಸಲು ಸಾಧ್ಯ. ಸದಾ ನಗುತ್ತ ಮಾತನಾಡುವವರನ್ನು ಎಲ್ಲರೂ ಇಷ್ಟಪಡುತ್ತಾರೆ. ನಾವು ನಕ್ಕರೆ ಸಾಲದು ಇತರರ ನಗೆಯಲ್ಲಿ ಭಾಗಿಯಾಗಬೇಕು. ಪರರ ನಗೆಗೆ ನಾವು ಕಾರಣವಾಗಬೇಕು.ಇತರರನ್ನು ನಗಿಸಿ ನಮ್ಮ ಬದುಕನ್ನು ಮತ್ತಷ್ಟು ಸುಂದರಗೊಳಿಸುವ ಅವಕಾಶ ನಮ್ಮ ಕೈಯಲ್ಲೇ ಇದೆ. ನಗಿಸುವುದು ಎಲ್ಲರಿಗೂ ಬರುವುದಿಲ್ಲ. ಅದೊಂದು ಕಲೆ. ಕಲೆಯನ್ನು ಕರತಲಾಮಲಕ ಮಾಡಿಕೊಂಡವರೆಡೆಗೆ ಜನರು ಆಕರ್ಷಿತರಾಗುತ್ತಾರೆ. ನಗುವವರು ಮತ್ತು ನಗಿಸುವವರು ಎಂಥ ಕಷ್ಟಕರ ಕೆಲಸಗಳನ್ನು ಸಲೀಸಾಗಿ ಮಾಡಿ ಮುಗಿಸುತ್ತಾರೆ.

ನಗುವು ಸಹಜ ಧರ್ಮ ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳ್ಳೊ ಮಂಕುತಿಮ್ಮ.
ಎಂದು ಡಿವಿಜಿಯವರು ಕಗ್ಗದಲ್ಲಿ ಮನೋಜ್ಞವಾಗಿ ಹೇಳಿದ್ದಾರೆ.

ಪುಟಿದೇಳಲಿ ಕಾರಂಜಿಯ ನಗು
ಆಧುನಿಕತೆಯ ಹೆಸರಿನಲ್ಲಿ ನಾಗರಿಕತೆ ತೆರೆಯ ಮುಚ್ಚುತ್ತಿದ್ದೇವೆ. ನಕ್ಕು ನಲಿಯುವುದರ ಫಲವು ರುಚಿಯಾಗಿರುತ್ತದೆ ಎನ್ನುವುದನ್ನು ಹೃದಯದಲ್ಲಿ ಚೆನ್ನಾಗಿ ದಾಖಲಿಸಿಕೊಳ್ಳುತ್ತಿಲ್ಲ. ನೋವು ತುಂಬಿದ ಮನದ ಬಾಗಿಲನ್ನೂ ಮತ್ತಿಷ್ಟು ನೋವುಗಳಿ ಒಳ ನುಗ್ಗುವಂತೆ ಅರ್ಧ ತೆರೆದಿಟ್ಟಿದ್ದೇವೆ. ‘ನಾಗರಿಕತೆ ಎಷ್ಟು ಮುಂದುವರೆದರೂ ಅದನ್ನು ಹತೋಟಿಯಲ್ಲಿಟ್ಟುಕೊಳ್ಳುವ ಅಧಿಕಾರ ನಮಗಿಲ್ಲವಾದರೆ ನಾವು ನಾಶವಾಗುತ್ತೇವೆ.’ಎಂದೊಮ್ಮೆ ಕವಿ ರವೀಂದ್ರರು ನುಡಿದ ನುಡಿ ನಿಜಕ್ಕೂ ಅರ್ಥಪೂರ್ಣ. ಸಾಧನೆ ಮೆರೆದಾಗ ಹೆತ್ತವರ ಕಂಗಳಲ್ಲಿ ಹೊಳೆಯುವ ಹೆಮ್ಮೆಯ ನಗು, ಗೆಳೆಯರ ಮುಖ ಕಂಡಾಗ ನಲಿವಿನ ನಗು, ಅಕ್ಕ ತಂಗಿ ಅಣ್ಣ ತಮ್ಮಂದಿರ ಛೇಷ್ಟೆ ಸಲಿಗೆಯ ನಗು, ಪ್ರೀತಿಗೆ ಹಾತೊರೆಯುವ ಹದಿಹರೆಯದಲ್ಲಿ ನಾಚಿಕೆಯ ನಗು, ಇಷ್ಟಪಡುವವರ ಹೂನಗು, ಜೀವಕ್ಕಿಂತ ಹೆಚ್ಚು ಪ್ರೀತಿಸುವವರ ಬಳಿ ಪ್ರೀತಿಯ ನಗು, ಅಪರಿಚಿತರ ಮೊಗದಲ್ಲಿನ ಕಿರುನಗೆ, ಕಷ್ಟ ಸಂಕಟ ತಾಪತ್ರಯಗಳನ್ನು ಮರೆಸುವ ಮುದ್ದು ಮಕ್ಕಳ ನಗುವನ್ನೂ ತಪ್ಪಿಸಿಕೊಳ್ಳುತ್ತಿದ್ದೆವೆ. ಮಕ್ಕಳೊಂದಿಗೆ ಮಕ್ಕಳಾಗಿ ನಗುವ ಮಗುವಿನ ಮುಗ್ಧ ನಗು, ಹಿರಿಯರ ಕನಸು ನನಸಾಗಿಸಿದಾಗ ಕಿರಿಯರ ಮುಖದಲ್ಲಿನ ನೆಮ್ಮದಿಯ ನಗು ಜವಾಬ್ದಾರಿ ನೀಗಿಸಿದಾಗ ಸಮಾಧಾನದ ನಗು ಇವೆಲ್ಲ ದೂರ ಹೋದಂತಿವೆ. ಮಧುರ ಮಮತೆಯ ಬಂಧಗಳಲ್ಲಿ ಮಿಡಿವ ಹೃದಯದ ಪ್ರೀತಿ ಸ್ನೇಹಗಳಲ್ಲಿ ಅರಳುವ ನಗು ವಿರಳವಾಗಿದೆ. ನಗುವಿನ ಕಾರಂಜಿ ಪುಟಿದೇಳಿಸುವ ಸಂದರ್ಭಗಳು ವಿಪುಲವಾಗಿವೆ. ಆದರೆ ಅವುಗಳೆಡೆ ಕಣ್ಣು ಹಾಯಿಸದಷ್ಟು ದಾವಂತವನ್ನು ದೊಡ್ಡದಾಗಿಸಿದ್ದೇವೆ.

ಕೊನೆ ಹನಿ
ನಗುವಾಗ ನೊವು ಇರಲ್ಲ. ನೋವಿರುವಾಗ ನಗು ಬರಲ್ಲ. ನೋವಿನ ಕುರಿತು ಯೋಚಿಸುತ್ತಿದ್ದರೆ ಅದಕ್ಕೆ ಕೊನೆಯೇ ಇರಲ್ಲ. ಆದ್ದರಿಂದ ನೋವಿನ ಯೋಚನೆ ಬಿಡೋಣ. ನಗು ನಗುತ್ತಾ ಇರೋಣ. ಸಮಯ ಮತ್ತು ನಗು ಜೀವನದ ವಿಚಿತ್ರಗಳು. ಕೆಲವೊಮ್ಮೆ ಸಮಯ ನಗುವುದನ್ನೇ ಮರೆಸಿ ಬಿಡುತ್ತದೆ. ಮತ್ತೊಮ್ಮೆ ನಗು ಸಮಯವನ್ನೇ ಮರೆಸಿಬಿಡುತ್ತದೆ. ವಿಸ್ಮಯಗಳು ಪ್ರತಿ ದಿನ ಉಂಟಾಗುತ್ತವೆ. ವಿಸ್ಮಯಗಳೆಡೆ ಕಣ್ಣು ನೆಡೋಣ. ವಿಶಾಲ ತುಟಿ ಬಿರಿಯೋಣ.ಏನನ್ನೋ ಪಡೆಯಲು ಹವಣಿಸುವ ಭರದಲ್ಲಿ ನೊವು ಮರೆಸುವ ನಗುವ ಮರೆಯದಿರೋಣ.ಮರೆತು ಕೊರಗದಿರೋಣ ಕೊರಗುಗಳು ಕೊರಗಿ ಕೊರಗಿ ಕರಗಲಿ ಸುಂದರ ನಗೆಯ ರಸ ಬಳ್ಳಿ ಹಬ್ಬಲಿ ಅಲ್ಲವೇ?

-ಜಯಶ್ರೀ.ಜೆ. ಅಬ್ಬಿಗೇರಿ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x