ಮರೆಯಲಾಗದ ಮಾತಿನ ಮಲ್ಲ: ಪರಮೇಶ್ವರಪ್ಪ ಕುದರಿ

“ ರವಿ ಬೆಳಗೆರೆ “ ಹೆಸರೇ ಒಂದು ರೋಮಾಂಚನ ! ಕನ್ನಡ ಪತ್ರಿಕಾರಂಗ ಕಂಡ ಅದ್ಭುತ ಪ್ರತಿಭಾವಂತ ಬರಹಗಾರ ರವಿ ಬೆಳಗೆರೆ. ಅವರ “ ಹಾಯ್ ಬೆಂಗಳೂರು “ ಪತ್ರಿಕೆಯ ಹೆಸರೂ ವಿಶಿಷ್ಟ , ಆ ಪತ್ರಿಕೆಯ ಕಪ್ಪು – ಬಿಳುಪು ರೂಪ ವಿನ್ಯಾಸವೂ ವಿಭಿನ್ನ ! ಪ್ರಾರಂಭದ ದಿನಗಳಲ್ಲಿ ಪತ್ರಿಕೆಯ ರೂಪು – ರೇಷೆಗಳನ್ನು ನೋಡಿದವರು ಆಡಿಕೊಂಡದ್ದೇ ಹೆಚ್ಚು. ಆದರೆ ರವಿ ಸರ್ ತಮ್ಮ ಬರವಣಿಗೆಯ ವಿಶಿಷ್ಟ ಶೈಲಿಯಿಂದ ನಾಡಿನ ಮನೆ ಮಾತಾದರು. ಮೊದ ಮೊದಲು ಕ್ರೈಮ್ ಸುದ್ದಿಗಳಿಗೇ ಮೀಸಲಾಗಿದ್ದ ಪತ್ರಿಕೆ ಕ್ರಮೇಣ ಖಾಸ್ ಬಾತ್ ನಂತಹ ವಿಶಿಷ್ಟ ಅಂಕಣಗಳಿಂದ , ತುಂಟ ಕತೆ- ಕವನಗಳಿಂದ ಹಾಗೂ ಸಿನಿ ಲೇಖನಗಳಿಂದ ಪತ್ರಿಕೆ ಮಿಂಚಿತು! ಕೆಲವು ಹೊಸ – ಹೊಸ ಬರಹಗಾರರ ಸೇರ್ಪಡೆಯಿಂದ “ ಹಾಯ್ ಬೆಂಗಳೂರು “ ಕನ್ನಡ ಪತ್ರಿಕಾರಂಗದ ಅದ್ವಿತೀಯ ಪತ್ರಿಕೆಯಾಗಿ ಬೆಳೆಯಿತು, ತನ್ಮೂಲಕ ರವಿ ಬೆಳಗೆರೆಯವರು ಬೆಳೆದರು…. ಕನ್ನಡಿಗರ ಮನದಲ್ಲಿ ಮೊಳೆದರು !

ಪತ್ರಿಕೆ ಪ್ರಾರಂಭದಿಂದಲೂ ನಾನು ಅವರ ಬರಹಗಳ ದೊಡ್ಡ ಅಭಿಮಾನಿ. ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗಿ ಕಣ್ತುಂಬಿಕೊಳ್ಳುತ್ತಿದ್ದ ಆ ದಿನಗಳನ್ನು ನಾನು ಮರೆಯಲಾರೆ. ಒಂದೇ ಒಂದು ಸಾರಿ ರವಿಯವರನ್ನು ಕಂಡು ಮಾತನಾಡಿಸಿದ್ದನ್ನಂತೂ ಮರೆಯಲಾರೆ. ತುಂಬಾ ಆತ್ಮೀಯವಾಗಿ ಮಾತನಾಡಿದ್ದರು. ನಾನು ಕನ್ನಡ ಶಾಯಿರಿ ಬರೆಯುತ್ತಿರುವುದನ್ನು ಹೇಳಿದಾಗ “ಕಳಿಸಿ ……. ಪ್ರಕಟಿಸೋಣ “ ಎಂದಿದ್ದರು. ಮುಂದಿನ ದಿನಗಳಲ್ಲಿ ಅವರ ಸಲಹೆಯ ಮೇರೆಗೆ ಶಾಯಿರಿಗಳನ್ನು ಕಳಿಸಿದೆ, ಅವು “ಹಾಯ್ ಬೆಂಗಳೂರು” ಪತ್ರಿಕೆಯಲ್ಲಿ ಪ್ರಕಟವಾದಾಗ ನನಗಾದ ಸಂತಸಕ್ಕೆ ಪಾರವೇ ಇರಲಿಲ್ಲ! ಗೌರವ ಪ್ರತಿಯೊಂದಿಗೆ ಕೆಲವು ಅಮೂಲ್ಯವಾದ ಪುಸ್ತಕಗಳನ್ನು ಕಾಣಿಕೆಯಾಗಿ ಕಳಿಸಿದ್ದರು!

ರವಿ ಬೆಳಗೆರೆಯವರ ಪ್ರತಿಭೆಯ ಬಗ್ಗೆ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ನಿಜಕ್ಕೂ ಅವರದು ಬಹುಮುಖ ಪ್ರತಿಭೆ. ಸಂಪಾದಕ , ಪತ್ರಕರ್ತ, ಟಿ. ವಿ. ನಿರೂಪಕ , ಚಿತ್ರ ನಟ, ಒಂದೆ ಎರಡೇ! ಕೊನೆ ಕೊನೆಗೆ ಬಿಗ್ ಬಾಸ್ ನಲ್ಲೂ ಕಂಡರು! ಒಂದು ರೀತಿಯಲ್ಲಿ ರವಿ ಸರ್ ಜನ ಸಾಮಾನ್ಯರಿಗೆ ಬಹುತೇಕ ಹತ್ತಿರವಾದದ್ದು ಬಿಗ್ ಬಾಸ್ ನಿಂದಲೇ ಎಂದರೆ ತಪ್ಪಾಗಲಾರದು. ಆ ಕಾರ್ಯಕ್ರಮದಲ್ಲಿ ಅವರ ವರ್ತನೆ, ಮಾತು, ಹಾವ – ಭಾವ ಕಂಡವರು ರವಿ ಹೀಗೂ ಉಂಟೆ ಎಂದು ಬಾಯಿಮೇಲೆ ಬೆರಳಿಟ್ಟುಕೊಂಡದ್ದೂ ಉಂಟು! “ಓ ಮನಸೇ “ ಸಿಡಿಯೂ ಅವರಿಗೆ ವಿಶೇಷವಾದ ಪ್ರಸಿದ್ಧಿಯನ್ನು ತಂದು ಕೊಟ್ಟಿತು. ಆ ಸಿಡಿಯಲ್ಲಿ ಬದುಕಲು ಬೇಕಾದ ಸ್ಫೂರ್ತಿದಾಯಕ ಸಂಗತಿಗಳನ್ನು ಹೇಳಿದ್ದರು. ಅವಿದ್ಯಾವಂತೆಯಾದ ನನ್ನಮ್ಮ ಕೂಡ ಆ ಸಿಡಿಯನ್ನು ಕೇಳಿದಾಗಲೆಲ್ಲಾ ಕಣ್ಣೀರಾಗುತ್ತಿದ್ದರು. ಅಂತಹ ಶಕ್ತಿ ಬೆಳಗೆರೆಯವರ ಲೇಖನಿಯಲ್ಲಿತ್ತು ಎಂದರೆ ಅತಿಶಯೋಕ್ತಿ ಎನ್ನಿಸಲಾರದು!ನಾನು ಆ ಸಿಡಿಯನ್ನು ಪಡೆಯಲು ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗಿದ್ದೆ! ಮುಂದೆ ಅದೇ ಹೆಸರಿನಿಂದ , ಅಂದರೆ “ಓ ಮನಸೇ “ ಎಂಬ ಪಾಕ್ಷಿಕ ಪತ್ರಿಕೆಯನ್ನೂ ಪ್ರಾರಂಭಿಸಿ ರವಿ ಯಶಸ್ವಿಯಾದರು. ಆ ದಿನಗಳಲ್ಲಿ ಯುವ ಜನತೆಯಂತೂ ಆ ಪತ್ರಿಕೆಯ ಬರುವಿಕೆಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು! ಅಂತಹ ಆಕರ್ಷಣೆ , ತಾಕತ್ತು ಬೆಳಗೆರೆಯ ಬರವಣಿಗೆಯಲ್ಲಿತ್ತು.

“ಎಂದೂ ಮರೆಯದ ಹಾಡು “ ಟಿ. ವಿ ಕಾರ್ಯಕ್ರಮವಂತೂ ರವಿಯವರ ಆಕರ್ಷಕ ನಿರೂಪಣೆಯಿಂದ ಎಂದು ಮರೆಯದ ಕಾರ್ಯಕ್ರಮವಾಗೇ ಜನಮಾನಸದಲ್ಲಿ ಉಳಿದುಕೊಂಡುಬಿಟ್ಟಿದೆ. ಪ್ರತಿ ಚಿತ್ರಗೀತೆಗೂ ಅವರು ಕೊಡುತ್ತಿದ್ದ ಹಿನ್ನೆಲೆ ವಿವರವಾದ ಮಾಹಿತಿ, ನಡು ನಡುವೆ ರವಿಯ ವಿಭಿನ್ನ ಶೈಲಿಯ ಹಾಸ್ಯ ಚಟಾಕೆ…ಕೇಳುವುದೇ ಆನಂದ! ಮೂಲತಃ ಹಿಂದಿ ಚಿತ್ರಗೀತೆಗಳ ಹಾಗೂ ಹಳೆಯ ಚಿತ್ರಗಿತೆಗಳನ್ನು ಬಹುವಾಗಿ ಆಲಿಸುತ್ತಿದ್ದ ರವಿ, ಮಹಮ್ಮದ್ ರಫಿ, ಮನ್ನಾಡೆ, ಲತಾ ಮಂಗೇಶ್ಕರ್ ಅಭಿಮಾನಿಯಾಗಿದ್ದರು. ಏಕಾಂತದಲ್ಲಿ ತಮಗಿಷ್ಟವಾದ ಹಾಡುಗಳನ್ನು ಗುನುಗುತ್ತಿದ್ದರಂತೆ. ಹಾಯ್ ಬೆಂಗಳೂರು ಪತ್ರಿಕೆ ಪ್ರಾರಂಭಿಸುವ ಮೊದಲು, ಕರ್ಮವೀರ ಪತ್ರಿಕೆಯಲ್ಲಿ “ಪಾಪಿಗಳ ಲೋಕದಲ್ಲಿ” ಎಂಬ ಅಂಕಣ ಬರೆಯುತ್ತಿದ್ದರು. ಭೂಗತ ದೊರೆಗಳ ಜಿವನದ ಬಗ್ಗೆ ಬರೆಯುತ್ತಿದ್ದ ಆ ಲೇಖನಗಳೇ ರವಿಯವರನ್ನು ಜನಪ್ರಿಯರನ್ನಾಗಿಸಿದ್ದವು! ಇಂತಹ ಪ್ರತಿಭಾವಂತ ಬರಹಗಾರ ರವಿಯವರ ಬಗ್ಗೆ ಆಡಿಕೊಳ್ಳದವರೂ ಇಲ್ಲದಿಲ್ಲ! ರವಿ ಹಾಗಂತೆ… ಹೀಗಂತೆ, ತಮ್ಮ ಬಳಿ ಸದಾ ಮಚ್ಚು, ಲಾಂಗು , ರಿವಾಲ್ವರ್ ಇಟ್ಟುಕೊಂಡಿರುತ್ತಾರಂತೆ ಎಂಬ ಅಂತೆ – ಕಂತೆಗಳಿಗೆ ಬರವೇನಿರಲಿಲ್ಲ! ರವಿಯವರ ವೈಯಕ್ತಿಕ ಜೀವನದ ಬಗ್ಗೆಯಂತೂ ಏನೇನೋ ಊಹಾ-ಪೋಹಗಳು. ತಮ್ಮ ಎರಡನೇ ಮದುವೆಯ ಬಗ್ಗೆ ಮುಚ್ಚಿಟ್ಟುಕೊಳ್ಳದೇ ಎಲ್ಲರೆದುರು ಬಿಚ್ಚಿಟ್ಟ ರೀತಿಯಂತೂ ಅಧ್ಬುತ! “ರಾಜಲೀಲಾ ವಿನೋದ” ಪುಸ್ತಕ ಬಿಡುಗಡೆಯ ಸಮಾರಂಭವನ್ನು, ತಮ್ಮ ಎರಡನೇ ಪತ್ನಿಯ ಮಗನನ್ನು ನಾಡಿಗೆ ಪರಿಚಯಿಸಲು ಬಳಸಿಕೊಂಡದ್ದಂತೂ ವಿಶೇಷವಾಗಿತ್ತು!.

ಇತ್ತೀಚೆಗೆ ರವಿಯವರನ್ನು ಬಿಗ್ ಬಾಸ್ ನಲ್ಲಿ ಕಂಡಾಗ, ಬಹಳ ವೀಕಾಗಿ , ಕೃಶವಾಗಿ ಕಂಡರು. ಆದರೂ ಅವರಲ್ಲಿನ ಉತ್ಸಾಹ ಕಡಿಮೆಯಾಗಿದೆ ಎನ್ನಿಸಲಿಲ್ಲ! ಕೆಲವೇ ದಿನಗಳ ಕಾಲ ಅಲ್ಲಿದ್ದರೂ. . ಎಲ್ಲರ ಮನ ಗೆದ್ದು ಬೀಗಿದರು. ಯವುದೋ ಖಾಸಗಿ ವಾಹಿನಿಗೆ ಕೊನೆಯದಾಗಿ ನೀಡಿದ ಸಂದರ್ಶನವಂತೂ ಮನ ಕಲಕುವಂತಿದೆ!ಸಾಯಲೆಂದೇ ಅಷ್ಟು ಉತ್ಸಾಹದಿಂದ ಮಾತನಾಡಿದರೇನೋ ಎಂದೆನಿಸದಿರಲಾರದು! ಒಟ್ಟಾರೆ, ರವಿ ಬೆಳಗೆರೆ ನಮ್ಮ ನಾಡು ಮರೆಯದ ನಿರ್ಭಿಡೆಯ ಪ್ರತಿಭಾವಂತ ಪತ್ರಕರ್ತ, ಮಾತಿನ ಮಲ್ಲ. ಅವರ ಜನ್ಮ ದಿನದ ಈ ಸಂದರ್ಭದಲ್ಲಿ ಅವರ ನೆನಪು ಚಿರಂತನವಾಗಿಡಲು ಲೇಖನ ಆಹ್ವಾನಿಸಿ , ಬರೆಸಿದ ನಿಮಗೆ ಧನ್ಯವಾದಗಳು. ಆಕಾಶದ ರವಿಯಂತೆಯೇ ನಮ್ಮ ರವಿಯೂ ಅಮರ!!

-ಪರಮೇಶ್ವರಪ್ಪ ಕುದರಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x