ಮರೆಯಲಾಗದ ಮದುವೆ (ಭಾಗ 8): ನಾರಾಯಣ ಎಮ್ ಎಸ್

-೮-

ಹನುಮಾನ್ ಜಂಕ್ಷನ್ನಿನ ಪೋಲೀಸ್ ಚೌಕಿಯಲ್ಲಿ ಅಯ್ಯರ್ ಕಾಣೆಯಾಗಿದ್ದ ದೂರನ್ನು ಅಧಿಕೃತವಾಗಿ ದಾಖಲಿಸಲು ತಂಗಮಣಿಯವರಿಗೆ ಸಾಕಷ್ಟು ಸಮಯ ಹಿಡಿಯಿತು. ಪೋಲೀಸರು ಅಯ್ಯರ್ ಹಿನ್ನಲೆ ಕುರಿತು ಹತ್ತುಹಲವು ಪ್ರಶ್ನೆಗಳನ್ನು ಕೇಳಿದರು. ವೇಲಾಯಧನ್ ಮತ್ತು ತಂಗಮಣಿ ತಮಗೆ ತಿಳಿದಿದ್ದ ಎಲ್ಲ ಮಾಹಿತಿಗಳನ್ನು ಒದಗಿಸಿದರು. ಮದ್ರಾಸು ಸ್ಟೇಷನ್ನಿನಿಂದ ರೈಲು ಹೊರಟಾಗ ಅಯ್ಯರ್ ರೈಲಿನಲ್ಲಿದ್ದುದು ರೈಲ್ವೇ ಪೋಲೀಸರಿಗೆ ಖಾತ್ರಿಯಾಗಿತ್ತು. ಹಾಗಾಗಿ ಹನುಮಾನ್ ಜಂಕ್ಷನ್ನಿನಿಂದ ಹಿಡಿದು ಮದ್ರಾಸಿನವರೆಗೆ ಆ ಮಾರ್ಗದಲ್ಲಿದ್ದ ಎಲ್ಲಾ ನಿಗದಿತ ನಿಲ್ದಾಣಗಳಿಗೂ ಅಯ್ಯರ್ ಕಾಣೆಯಾಗಿದ್ದ ದೂರಿನ ಮಾಹಿತಿ ಕಳುಹಿಸುವ ವ್ಯವಸ್ಥೆ ಮಾಡಿದರು. ಅಯ್ಯರ್ ಭಾವಚಿತ್ರವನ್ನು ಬಳಸಿ ಅವರ ಗುರುತು, ಚರ್ಯೆಗಳ ವಿವರದೊಂದಿಗೆ ಭಿತ್ತಿಪತ್ರ ಪ್ರಕಟಿಸಲಿರುವುದಾಗಿ ತಿಳಿಸಿದರು. ಯಾರಾದರೂ ಅಯ್ಯರನ್ನು ಕಂಡವರು ಥಟ್ಟನೆ ಸಂಪರ್ಕಿಸಿ ಮಾಹಿತಿ ತಲುಪಿಸಲು ಅನುಕೂಲವಾಗುವಂತೆ ಭಿತ್ತಿಪತ್ರದಲ್ಲಿ ಮುದ್ರಿಸಲು ಒಂದು ದೂರವಾಣಿ ಸಂಖ್ಯೆ ಕೊಡಬೇಕೆಂದು ತಂಗಮಣಿಯವರನ್ನು ಕೇಳಿದರು. ತಕ್ಷಣಕ್ಕೆ ಯಾವ ನಂಬರ್ಕೊಡಬೇಕೆಂದು ತಂಗಮಣಿಯವರಿಗೆ ತೋಚಲಿಲ್ಲ. ವಿಚಾರ ಸೂಕ್ಷ್ಮವಾಗಿದ್ದ ಕಾರಣ ಯಾರ್ಯಾರದೋ ನಂಬರ್ ಕೊಡಲು ಬರುತ್ತಿರಲಿಲ್ಲ. ದೊರೆತ ಮಾಹತಿಯನ್ನು ನಿಖರವಾಗಿ ಪಡೆದು ತಡಮಾಡದೆ ಅದನ್ನು ಸಂಬಂಧಿಸಿದವರಿಗೆ ತಲುಪಿಸುವವರಾಗಬೇಕಿತ್ತು. ತಿರುವಾರೂರಿನಲ್ಲಿ ಪ್ರಸ್ತುತ ಯಾರೂ ಇರದಿದ್ದ ಕಾರಣ ಅಲ್ಲಿನ ಹೋಟೆಲ್ಲಿನ ನಂಬರ್ ಕೊಡುವುದರಲ್ಲಿ ಅರ್ಥವಿರಲಿಲ್ಲ. ವಿಶಾಖಪಟ್ಟಣದ ಕೃಷ್ಣಯ್ಯರ್ ಹೋಟೆಲಿನ ನಂಬರ್ ತಂಗಮಣಿಯವರಿಗೆ ಬಳಿ ಇರಲಿಲ್ಲ. ಹಾಗಾಗಿ ತಂಗಮಣಿಯವರು ಹನುಮಾನ್ ಜಂಕ್ಷನ್ನಿನ ಪೋಲೀಸ್ ಚೌಕಿಯ ದೂರವಾಣಿ ಸಂಖ್ಯೆಪಡೆದು ಶೀಘ್ರದಲ್ಲೇ ಕರೆಮಾಡಿ ಸಂಪರ್ಕಿಸಲು ಸೂಕ್ತವಾದ ದೂರವಾಣಿ ಸಂಖ್ಯೆಯನ್ನು ತಿಳಿಸುವುದಾಗಿ ಹೇಳಿದರು. ಅಲ್ಲಿನ ಕೆಲಸ ಮುಗಿದದ್ದರಿಂದ ವೇಲಾಯಧನ್ ಮತ್ತು ತಂಗಮಣಿ ಪೋಲೀಸ್ ಚೌಕಿಯಿಂದ ಹೊರಬಂದರು. ಅಲ್ಲೇ ಒಂದುಕಡೆ ಕುಳಿತು ತಮ್ಮಲ್ಲೇ ಚರ್ಚಿಸುತ್ತಾ ಅಯ್ಯರನ್ನು ಹುಡುಕಲು ತಕ್ಕಮಟ್ಟಿಗೆ ವ್ಯವಸ್ಥಿತವಾದ ಯೋಜನೆ ರೂಪಿಸಿಕೊಂಡರು.

ಹನುಮಾನ್ ಜಂಕ್ಷನ್ನಿನಿಂದ ಹಿಡಿದು ಮದ್ರಾಸಿನವರೆಗೆ ತಾವು ಹಿಂದಿನದಿನ ಪಯಣಿಸಿದ್ದ ಮಾರ್ಗದಲ್ಲಿದ್ದ ಎಲ್ಲಾ ನಿಗದಿತ ನಿಲ್ದಾಣಗಳಿಗೂ ಖುದ್ದಾಗಿ ಹೋಗಿ ಹುಡುಕಬೇಕಿತ್ತು. ಅದರಂತೆ ಅವರು ವಿಜಯವಾಡ, ನೆಲ್ಲೂರು, ಗೂಡೂರು ಸೇರಿ ಒಟ್ಟು ಮೂರುಸ್ಟೇಷನ್ನುಗಳ ತಪಾಸಣೆ ಮಾಡಬೇಕಿತ್ತು. ಸಮಯ ಆಗಲೇ ಹನ್ನೊಂದಾಗುತ್ತಿತ್ತು. ಮದರಾಸು ಬಿಡುವಾಗ ಅಯ್ಯರ್ ಇನ್ನೂ ತಮ್ಮೊಂದಿಗೇ ಇದ್ದಿದ್ದರಿಂದ ಅಲ್ಲಿ ಹುಡುಕುವ ಅಗತ್ಯವಿರಲಿಲ್ಲ. “ವಿಜಯವಾಡಾ ಸ್ಟೇಷನ್ನನ್ನು ಇಂಚಿಂಚೂ ಹುಡುಕ್ಬೇಕು, ನನ್ಗೇನೋ ಯಜಮಾನ್ರು ಅಲ್ಲೇ ಮಿಸ್ಸಾಗಿರೋದೂ ಅನ್ಸತ್ತೆ” ವೇಲಾಯುಧನ್ ಹೇಳಿದರು. ಅದಕ್ಕೆ ತಂಗಮಣಿ ತಲೆಯಾಡಿಸುತ್ತಾ “ಹೌದೌದು ನಂಗೂ ಹಂಗೇ ಅನ್ಸುತ್ತೆ, ಬೇರೆ ಎಲ್ಲೂ ಇಳ್ದಿರೋ ಚಾನ್ಸಿಲ್ಲ, ಎಲ್ಲೆಲ್ಲೋ ಯಾಕಿಳಿತಾರೇಂತೀನಿ” ಎಂದರು. ಸ್ಟೇಷನ್ ಕೌಂಟರಿನಲ್ಲಿ ವಿಚಾರಿಸಿದಾಗ ಹನ್ನೊಂದೂವರೆಗೆ ವಿಜಯವಾಡ ಮಾರ್ಗವಾಗಿ ಗೂಡೂರಿಗೆ ಹೋಗುವ ರೈಲಿರುವುದಾಗಿ ತಿಳಿದುಬಂತು. ಇನ್ನು ಹತ್ತೇನಿಮಿಷ ಸಮಯವಿತ್ತು. ವಿಜಯವಾಡಕ್ಕೆ ಎರಡು ಟಿಕೆಟ್ ಕೊಂಡು ಇಬ್ಬರೂ ಆತುರಾತುರದಿಂದ ಟ್ರೈನು ಹಿಡಿಯಲು ಓಡಿದರು. ಟ್ರೈನಿನಲ್ಲಿ ಸೀಟುಹಿಡಿದು ಕುಳಿತಾಗ ಹೊಟ್ಟೆ ಕವಕವ ಅನ್ನುವುದು ತಿಳಿದು ಬೆಳಗಿನಿಂದ ಏನೂ ತಿಂದಿಲ್ಲವೆಂದು ನೆನಪಾಯಿತು. ವಿಜಯವಾಡ ತಲುಪಲು ಕನಿಷ್ಠ ಒಂದುತಾಸಿನ ಪಯಣ. ಅಲ್ಲಿ ತಲುಪಿ ನೇರವಾಗಿ ಊಟವನ್ನೇ ಮಾಡಿ ನಂತರ ಯಜಮಾನರನ್ನ ಹುಡುಕಲು ತೊಡಗುವುದೆಂದು ನಿರ್ಧರಿಸಿದರು.

ವಿಜಯವಾಡ ಸ್ಟೇಷನ್ ತಲುಪುವಷ್ಟರಲ್ಲಿ ತಂಗಮಣಿಯವರ ತಲೆಯಲ್ಲೊಂದು ಯೋಜನೆ ಸಿದ್ಧವಾದಂತಿತ್ತು. ಸ್ಟೇಷನ್ನಿನಲ್ಲಿ ಇಳಿದೊಡನೆ ಅಲ್ಲೇ ಇದ್ದ ಹೋಟೆಲೊಂದಕ್ಕೆ ಹೋಗಿ ಇಬ್ಬರೂ ಊಟ ಮುಗಿಸಿದರು. ಬಿಲ್ಲುಕೊಡುವಾಗ ಗಲ್ಲಾದಲ್ಲಿ ಕುಳಿತಿದ್ದವರ ಬಳಿ ಹತ್ತಿರದಲ್ಲಿ ಪ್ರತಿಷ್ಠಿತವಾದ ದೊಡ್ಡ ಹೋಟೆಲ್ ಯಾವುದಿದೆಯೆಂದು ವಿಚಾರಿಸಿದರು. ಸ್ಟೇಷನ್ ಪಕ್ಕದಲ್ಲೇ ಆಂಧ್ರಾ ಪ್ಯಾರಡೈಸ್ ಎಂಬ ತ್ರಿತಾರಾ ಹೊಟೇಲಿರುವುದಾಗಿ ತಿಳಿದುಬಂತು. ತಡಮಾಡದೆ ವೇಲಾಯುಧರನ್ನು ಕರೆದುಕೊಂಡು ಆಂಧ್ರಾ ಪ್ಯಾರಡೈಸ್ ಹೋಟೆಲ್ಲಿಗೆ ಹೋಗಿ ಎರಡು ತಂಪುಪಾನೀಯ ಆರ್ಡರ್ ಮಾಡಿದರು. ತಂಗಮಣಿ ಏನುಮಾಡುತ್ತಿರುವರೆಂದು ತಿಳಿಯದೆ ವೇಲಾಯುಧನ್ ಗೊಂದಲಕ್ಕೊಳಗಾಗಿದ್ದಂತಿತ್ತು. ಇಬ್ಬರೂ ಜ್ಯೂಸ್ ಕುಡಿದಮೇಲೆ ವೆಯ್ಟರ್ ತಂದಿಟ್ಟ ಬಿಲ್ಲನ್ನು ಪಾವತಿಸಿ ವೇಲಾಯುಧರನ್ನ ಹೋಟೆಲ್ಲಿನ ಲಾಬಿಯಲ್ಲಿ ಕೂರಿಸಿ ನೇರವಾಗಿ ರಿಸೆಪ್ಷನ್ ಕೌಂಟರಿಗೆ ಹೋಗಿ ತಮ್ಮ ಪರಿಚಯ ಹೇಳಿಕೊಂಡರು. ದೊಡ್ಡ ಹೋಟೆಲ್ ಮಾಲೀಕರಾದ ತಮ್ಮ ಯಜಮಾನರು ಕಾಣೆಯಾಗಿರುವ ವಿಚಾರ ತಿಳಿಸಿದರು. ತಮಗೆ ತುರ್ತಾಗಿ ವಿಶಾಖಪಟ್ಟಣದ ಹೋಟೆಲ್ ಗ್ರ್ಯಾಂಡ್ ರೆಸಿಡೆನ್ಸಿಯ ವಿಳಾಸ ಮತ್ತು ಫೋನ್ ನಂಬರಿನ ಅಗತ್ಯವಿರುವುದಾಗಿ ಹೇಳಿ ಸಹಾಯ ಮಾಡಬೇಕೆಂದು ವಿನಂತಿಸಿಕೊಂಡರು. ಇವರ ಪರಿಸ್ಥಿತಿ ಅರಿತ ಸ್ವಾಗತಕಾರಿಣಿ ಒಂದು ನಿಮಿಷ ಯೋಚಿಸಿ ಕಬೋರ್ಡಿನಿಂದ Directory of Indian Hotels & Restaurants ಎಂಬ ಪುಸ್ತಕ ತೆಗದುಕೊಟ್ಟು “ಇದರಿಂದ ಏನಾದರೂ ಹೆಲ್ಪಾಗ್ಬೋದಾ ನೋಡಿ ಸರ್” ಎಂದಳು. ಅವಳಿಗೆ ಧನ್ಯವಾದ ಹೇಳಿ ತಂಗಮಣಿಯವರು ಲಾಬಿಯಲ್ಲಿ ಕುಳಿತಿದ್ದ ವೇಲಾಯುಧನ್ ಪಕ್ಕದಲ್ಲಿ ಕುಳಿತು ಸ್ವಲ್ಪಹೊತ್ತು ಪುಸ್ತಕದ ಪುಟಗಳನ್ನು ಹಿಂದೆಮುಂದೆ ತಿರುವುತ್ತಿದ್ದರು. ಅವರೇನು ಮಾಡುತ್ತಿರುವರೆಂಬ ಅರಿವಿರದ ವೇಲಾಯುಧನ್ ಕುತೂಹಲದಿಂದ ತಂಗಮಣಿಯವರನ್ನೇ ನೋಡುತ್ತಿದ್ದರು. ಅಷ್ಟರಲ್ಲಿ ತಂಗಮಣಿ ಮುಖ ಅರಳಿಸಿ, “ಸಿಕ್ತು, ಸಿಕ್ತು ಇದೇ… ಇದೇ.., ವೇಲು… ಸ್ವಲ್ಪ ಒಂದು ಪೆನ್ನು ಪೇಪರ್ರು ಈಸ್ಕೋಳಿ” ಅಂದರು. ವೇಲಾಯುಧನ್ ಹೋಟೆಲ್ಲಿನವರನ್ನು ಕೇಳಿ ಪೆನ್ನು ಮತ್ತು ಬರೆಯಲು ಒಂದು ಚೀಟಿ ಈಸಿ ತಂದರು. “ಹೋಟೆಲ್ ಗ್ರ್ಯಾಂಡ್ ರೆಸಿಡೆನ್ಸಿ…. ಹುಡ್ಗೀ ತಂದೆ ಕೃಷ್ಣಯ್ಯರ್ ಹೋಟೆಲ್, ವಿಶಾಖಪಟ್ನದ ಅಡ್ರೆಸ್ಸೂ…ಫೋನ್ನಂಬರ್ರೂ ಎಲ್ಲಾ ಇದೆ ನೋಡಿ” ಎನ್ನುತ್ತಾ ಪೆನ್ನು ಪೇಪರ್ತೆಗೆದುಕೊಂಡು ಬರೆದುಕೊಂಡರು. ವೇಲಾಯುಧನ್ ಕಣ್ಣಲ್ಲಿ ತಂಗಮಣಿಯವರ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ಮೂಡಿತು.

ಹೋಟೆಲ್ಲಿನವರಿಗೆ ಧನ್ಯವಾದ ಸಲ್ಲಿಸಿ ಪೆನ್ನೂ ಪುಸ್ತಕ ಮರಳಿಕೊಟ್ಟು ತಂಗಮಣಿ ನೇರವಾಗಿ ರೈಲ್ವೇ ಸ್ಟೇಷನ್ನಿನ ಸಾರ್ವಜನಿಕ ದೂರವಾಣಿ ಬೂತಿಗೆ ಹೋಗಿ ಹನುಮಾನ್ ಜಂಕ್ಷನ್ನಿನ ಪೋಲೀಸ್ ಚೌಕಿಯ ನಂಬರಿಗೆ ಫೋನು ಮಿಲಾಯಿಸಿ ಕೊಡಲು ಹೇಳಿದರು. ಫೋನುಸಿಕ್ಕೊಡನೆ ಆ ಕಡೆಯಿದ್ದ ಪೋಲೀಸರಿಗೆ ತನ್ನ ಪರಿಚಯ ಹೇಳಿಕೊಂಡು ತಾನು ಬೆಳಗ್ಗೆ ಕೊಟ್ಟ ರಾಜನ್ ಅಯ್ಯರ್ ಮಿಸ್ಸಿಂಗ್ ಕಂಪ್ಲೈಂಟ್ ಬಗ್ಗೆ ನೆನಪಿಸಿದರು. ಪೋಲೀಸಿನವನು “ಅಲ್ಲಾ ಸಾರ್ ಸ್ವಲ್ಪ ಸಮಯ ಹಿಡ್ಯತ್ತೇ ಸಾರ್ ಈ ಕಡೆ ಕಂಪ್ಲೈಂಟ್ ಕೊಟ್ಬುಟ್ಟು ಆ ಕಡೆಯಿಂದ ಫೋನ್ಮಾಡಿದ್ರೆ ಹ್ಯಾಗೆ…” ಎಂದು ಬೇಸರಿಸಿಕೊಂಡ. ತಂಗಮಣಿಯವರು ಕರೆಮಾಡಿದ ಕಾರಣ ಸ್ಪಷ್ಟಪಡಿಸಿ ವಿಶಾಖಪಟ್ಟಣದ ಗ್ರ್ಯಾಂಡ್ ರೆಸಿಡೆನ್ಸಿಯ ನಂಬರ್ ಮತ್ತು ಅಡ್ರಸ್ಕೊಟ್ಟು ಪ್ರಕರಣದ ಕುರಿತು ಯಾವುದೇ ಮಾಹಿತಿ ಸಿಕ್ಕರೂ ದಯಮಾಡಿ ಈ ನಂಬರಿಗೆ ತಿಳಿಸಬೇಕೆಂದೂ ಭಿತ್ತಿಪತ್ರಕ್ಕೂ ಇದೇ ನಂಬರ್ ಬಳಸಿಕೊಳ್ಳಬೇಕೆಂದು ವಿನಂತಿಸಿದರು. ಫೋನಿಟ್ಟು ಹಣಕೊಟ್ಟು ಸಮಯ ನೋಡಿದರು ಮಧ್ಯಾಹ್ನ ಒಂದೂವರೆ…ಇನ್ನೂ ರೈಲು ವಿಶಾಖಪಟ್ಟಣ ತಲುಪಿರುವುದಿಲ್ಲವೆಂದು ಅಂದಾಜಾಯಿತು. ಈಗಲೇ ಗ್ರ್ಯಾಂಡ್ ರೆಸಿಡೆನ್ಸಿಗೆ ಫೋನುಹಚ್ಚಿ ಅವರನ್ನು ಗಾಬರಿಗೊಳಿಸುವುದು ಬೇಡವೆನಿಸಿತು. ಸಂಜೆ ಮೇಲೆ ಅಲ್ಲಿಗೆ ಫೋನುಮಾಡುವುದೇ ಸರಿಯೆಂದುಕೊಂಡು ವೇಲಾಯುಧರತ್ತ ತಿರುಗಿ “ಬನ್ನೀ ವೇಲು ಒಂದ್ಕಡೆಯಿಂದ ಇಡೀ ಸ್ಟೇಷನ್ನೇ ಜಾಲಾಡಿಬಿಡೋಣ, ಯಜ್ಮಾನ್ರು ಅದ್ಯಾಕ್ಸಿಕ್ಕಲ್ವೋ ನೋಡೇಬಿಡೋಣ” ಎಂದು ಹುಮ್ಮಸ್ಸಿನಿಂದ ಹೇಳಿದರು. ನಂಬರ್ ಸಿಕ್ಕ ಖುಷಿಯಿಂದ ತಂಗಮಣಿಯವರು ಉತ್ತೇಜಿತರಾದಂತಿತ್ತು.

ಇತ್ತ ದುಃಖತಪ್ತ ಮದುವೆತಂಡವನ್ನು ಹೊತ್ತು ಹನುಮಾನ್ ಜಂಕ್ಷನ್ನಿನಿಂದ ಹೊರಟ ರೈಲಿನಲ್ಲಿ ಶರವಣ ವೇಲೂಅಣ್ಣನ ಆಣತಿಯಂತೆ ಎಲ್ಲರಿಗೂ ಹೊತ್ತಿಗೆ ಸರೀಗೆ ಒಂದೆರಡು ತುತ್ತು ತಿನ್ನಿಸುವ ಪ್ರಯತ್ನ ಮಾಡಿ ಸೋತಿದ್ದ. ತಿಂಡಿಪೊಟ್ಟಣ ಮುಂದೆಹಿಡಿದರೆ ಪ್ರತಿಯೊಬ್ಬರೂ ಕಣ್ತುಂಬಿಕೊಂಡು ಮುಖ ತಿರುಗಿಸಿ ಬಿಡುತ್ತಿದ್ದರು. ಹೆಣ್ಮಕ್ಕಳಂತೂ ತಿಂಡಿಪೊಟ್ಟಣ ಕಂಡೊಡನೆ ಹಾವುಕಂಡಂತೆ ಅಳು ಜೋರುಮಾಡುತ್ತಿದ್ದರು. ಒಂದು ಹಂತದಲ್ಲಿ ರೈಲು ಯಾವುದೋ ನದಿಯ ಸೇತುವೆಯ ಮೇಲೆ ಚಲಿಸುತ್ತಿತ್ತು. ನದೀ ಕಂಡು ಅದೇನು ಸ್ಫೂರ್ತಿ ಉಕ್ಕಿತೋ ಕಿರಿಮಗಳು ಶಾರದೆ ಇದ್ದಕ್ಕಿದ್ದಂತೆ “ಅಪ್ಪನೇ ಇಲ್ಲದ ಮೇಲೆ ನನಗೆ ಈ ಬದುಕೇ ಬೇಡಾ” ಎಂದು ಕಿರುಚುತ್ತಾ ನದಿಗೆ ಹಾರಿಕೊಳ್ಳಲು ಬಾಗಿಲಿನತ್ತ ಓಡಿದಳು. ಹೋ…ಎಂಬ ಹೆಂಗಸರ ರೋದನ ಮುಗಿಲುಮುಟ್ಟಿತು. ಅಲ್ಲೇ ಕುಳಿತಿದ್ದ ಎರಡನೇ ಅಳಿಯ ಚಿದಂಬರಂ ಶಾರದೆಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಶಾರದೆ ತನ್ನೆಲ್ಲ ಶಕ್ತಿ ಸೇರಿಸಿ ಭಾವನನ್ನು ತಳ್ಳಲು ಪ್ರಯತ್ನಿಸಿದಳು. ಚಿದಂಬರರಿಗೆ ಸಿಟ್ಟೇರಿ ಶಾರದೆಯ ಕೆನ್ನೆಗೆ ಒಂದು ಬಿಗಿದರು. ಶಾರದೆ ಅಳುತ್ತಾ ಅಲ್ಲೇ ಸೀಟಿನಮೇಲೆ ಕುಸಿದು ಕುಳಿತಳು. ಅಷ್ಟರಲ್ಲಿ ರೈಲು ಸೇತುವೆದಾಟಿ ಬಯಲಲ್ಲಿ ಸಾಗುತ್ತಿತ್ತು. ಚಿದಂಬರಂ ಸಿಟ್ಟಿನಿಂದ ಅತ್ರೇ ಸತ್ರೇ ಮಾವ್ನೋರು ಬರೋದಿದ್ರೆ ಎಷ್ಟಾದ್ರೂ ಅಳಿ, ನಾನೂ ಬೆಳಗ್ಗೆಯಿಂದ ನೋಡ್ತಿದೀನಿ… ಎಲ್ಲಾತಕ್ಕೂ ಒಂದ್ಮಿತಿ ಇರ್ಬೇಕು. ಇನ್ಯಾರ್ದಾದ್ರೂ ಅಳೋ ಸದ್ ಕೇಳಿದ್ರೆ ನೋಡಿ…! ಮನುಷ್ಯಂಗೇ ಇಂಥಾ ಹೊತ್ನಲ್ಲೇ ಅಲ್ವೇ ತಾಳ್ಮೆ ಬೇಕಾಗೋದು, ಸುಮ್ನೆ ರಂಪಾ ಮಾಡೋದ್ರಿಂದ ಏನ್ಸಿಕ್ಕತ್ತೆ” ಎಂದು ಗುಡುಗಿದರು. ಬೋಗಿಯಲ್ಲಿ ಅಸಹನೀಯ ಮೌನ ಆವರಿಸಿತು. ಕೊಂಚ ಹೊತ್ತಿನ ನಂತರ ಚಿದಂಬರರೇ ಮೌನ ಮುರಿದು “ಶಂಕ್ರಣ್ಣಾ ನಾನ್ತಿಂಡಿ ತಿನ್ತಿದೀನಿ…ನೀವೂ ಬರೋದಿದ್ರೆ ಬನ್ನಿ” ಎಂದು ತಿಂಡಿ ಬ್ಯಾಗಿದ್ದ ಕಡೆಗೆ ನಡೆದರು. ಹಿರಿಯಳಿಯ ಶಂಕರನಾರಾಯಣರು ವಿಧೇಯರಾಗಿ ಹಿಂಬಾಲಿಸಿದರು.

ಈಗ ರೈಲು ರಾಜಮಂಡ್ರಿ ದಾಟಿ ಸಮಲ್ಕೋಟ್ ಜಂಕ್ಷನ್ನಿನೆಡೆಗೆ ಸಾಗುತ್ತಿತ್ತು. ಸಮಯ ಆಗಲೇ ಒಂದು ಘಂಟೆ ದಾಟಿತ್ತು. ಸೀತಮ್ಮನ ಮಕ್ಕಳು ಬಾಯಿಗೆ ಸೆರಗು ಸಿಕ್ಕಿಸಿಕೊಂಡು ಸಣ್ಣಗೆ ಮುಲುಗುತ್ತಿದ್ದ ಸದ್ದು ಕೇಳುತ್ತಿತ್ತು. ಚಿದಂಬರರ ರೌದ್ರಾವತಾರದ ಬಳಿಕ ಜೋರಾಗಿ ಸದ್ದುಮಾಡಿ ಅಳುವುದು ನಿಯಂತ್ರಣಕ್ಕೆ ಬಂದಂತಿತ್ತು. ಪಿಟಿಪಿಟಿ ಮಂತ್ರ ಪಠಿಸುತ್ತಿದ್ದ ಸೀತಮ್ಮ ಬ್ಯಾಗಿನಿಂದ ಕರವಸ್ತ್ರ ತೆಗೆದು ಅದರಲ್ಲಿ ಸ್ವಲ್ಪ ದುಡ್ಡಿಟ್ಟು ವೆಂಕಟೇಶ್ವರನಿಗೆ ಮುಡಿಪು ಕಟ್ಟಿಟ್ಟರು. ಎದುರು ಕುಳಿತಿದ್ದ ಶಂಕರಣ್ಣ ಗಮನಿಸಿದಂತೆ ಸೀತಮ್ಮ ಈಗ ಕಟ್ಟಿಟ್ಟದ್ದು ನಾಲ್ಕನೆಯ ಮುಡಿಪಿರಬೇಕು. ಮೊದಲೇ ದೈವಭಕ್ತರಾಗಿದ್ದ ಸೀತಮ್ಮನ ಭಕ್ತಿ ಈಗಿನ ಪರಿಸ್ಥಿತಿಯಲ್ಲಿ ಸಹಜವಾಗಿಯೇ ಉಲ್ಬಣಗೊಂಡಿತ್ತು. ಈ ನಡುವೆ ಶರವಣನ ಪಕ್ಕದಲ್ಲಿದ್ದ ತಿಂಡಿ ಬ್ಯಾಗು ಕ್ರಮೇಣ ಹಗುರಗೊಳ್ಳತೊಡಗಿತ್ತು. ಯಾವುದೇ ಒತ್ತಾಯವಿಲ್ಲದೇ ಒಬ್ಬೊಬ್ಬರೇ ಬಂದು ತಿಂಡಿಪೊಟ್ಟಣ ತೆಗೆದುಕೊಂಡು ಹೋಗುತ್ತಿದ್ದುದನ್ನು ಕಂಡ ಶರವಣ ತಾನೂ ಒಂದು ಪೊಟ್ಟಣ ತೆಗೆದುಕೊಂಡ. ಪೊಟ್ಟಣ ಬಿಚ್ಚಿ ಮೊದಲ ತುತ್ತು ಬಾಯಿಗಿಟ್ಟಂತೆ ಲೋಕದಲ್ಲಿ ಬಹುಶಃ ಹಸಿವಿಗಿಂತ ದೊಡ್ಡದು ಏನೂ ಇರಲಾರದೆನಿಸಿತು.

ನಾರಾಯಣ ಎಮ್ ಎಸ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Vishwanath
Vishwanath
3 years ago

Superb 👍

Narayana M S
Narayana M S
3 years ago

Thanks Vishwanath 🙏

3
0
Would love your thoughts, please comment.x
()
x