ಮರೆಯಲಾಗದ ಮದುವೆ (ಭಾಗ 7): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ

-೭-

’ಶ್ಯೀ…ಕುಯ್ಯ್… ಶ್ಯೀ…ಕುಯ್ಯ್… ಶ್ಯೀ…ಕುಯ್ಯ್… ಕುಯ್ಯ್…’ ಎಂದಾದ ಸದ್ದಿಗೆ ಅಯ್ಯರಿಗೆ ಎಚ್ಚರವಾಯ್ತು. ಕೂತಲ್ಲೇ ಕಣ್ತೆರೆದರು. ಎದುರಿಗೆ ಒಂದು ಬಡಕಲು ಕುನ್ನಿ ಕಂಡಿತು. ಅದೀಗ ಸ್ವಲ್ಪದೂರದಲ್ಲಿ ಬಿದ್ದಿದ್ದ ನಶ್ಯದಕವರಿನತ್ತ ದಿಟ್ಟಿಸಿ ತನ್ನ ಕೋರೆಹಲ್ಲು ತೋರುತ್ತಾ ಗುರ್ರ್ ಎಂದು ಗುರುಗುಟ್ಟತೊಡಗಿತು. ಪಾಪ ಪ್ರಾಣಿ ಏನೋ ತಿನ್ನಲು ಸಿಕ್ಕಿತೆಂದು ನಶ್ಯದಕವರಿಗೆ ಬಾಯಿಹಾಕಿರಬೇಕು. ನಶ್ಯದ ಫಾಟಿಗೆ ಸೀನುಬಂದು ನಾಯಿ ಗಾಬರಿಗೊಂಡಿತ್ತು. ಅಯ್ಯರಿಗೆ ತಾನೆಲ್ಲಿದ್ದೇನೆ ತಿಳಿಯಲಿಲ್ಲ. ಅಪರಾತ್ರಿಯ ನೀರವತೆಯಲ್ಲಿ ದೂರದಲ್ಲೆಲ್ಲೋ ಜೀರುಂಡೆಗಳು ಗುಯ್ಗುಟ್ಟುತ್ತಿದ್ದುವು. ನಿಧಾನಕ್ಕೆ ಸಿಕ್ಕಿಕೊಂಡಿದ್ದ ಪರಿಸ್ಥಿತಿ ಅರಿವಾಗಹತ್ತಿತು. ಕೈಯಲ್ಲಿ ಬಿಡುಗಾಸಿಲ್ಲ. ಮೈಮೇಲೆ ಹಾಕಿದ್ದ ಬನೀನು, ಉಟ್ಟಿದ್ದ ಪಂಚೆ ಬಿಟ್ರೆ ಹೆಗಲಮೇಲೊಂದು ಚೌಕವಿತ್ತು. ಕಾಲಿಗೆ ಚಪ್ಪಲಿಯೂ ಇರಲಿಲ್ಲ. ಕತ್ತು ತಿರುಗಿಸಿ ಆಚೆ ಈಚೆ ನೋಡಿದರು, ಪ್ಲಾಟ್ಫಾರಮ್ಮಿನಲ್ಲಿ ಪ್ರತಿ ಐವತ್ತರವತ್ತಡಿಗೊಂದರಂತೆ ಒರಗಿಕೂರಬಹುದಾದ ಕಲ್ಲಿನ ಉದ್ದನೆಯ ಬೆಂಚುಗಳಿದ್ದುವು. ತಾವು ಕುಳಿತಿದ್ದ ಬೆಂಚುದಾಟಿ ಬಲಕ್ಕೆ ಸುಮಾರು ಇನ್ನೂರುಮೀಟರ್ ಕಳೆದು ಪ್ಲಾಟ್ಫಾರಂ ಕೊನೆಗೊಳ್ಳುತ್ತಿತ್ತು. ಅದ್ಯಾವುದೋ ಸಣ್ಣ ಸ್ಟೇಷನ್ ಇರಬೇಕು… ಕೇವಲ ಎರಡು ಪ್ಲಾಟ್ಫಾರಂಗಳಷ್ಟೇ ಇದ್ದುವು. ಇನ್ನೂರು ಮೀಟರ್ ನಡೆದು ಬೋರ್ಡ್ನೋಡಿ ಯಾವ ಸ್ಟೇಷನ್ನೆಂದು ತಿಳಿಯಲು ಅಯ್ಯರಿಗೆ ತ್ರಾಣವಿರಲಿಲ್ಲ. ದೂರದಲ್ಲಿ ರೈಲುಹಳಿಗಳನ್ನು ದಾಟಿ ಒಂದು ಸಣ್ಣ ಬೋರ್ಡಿದ್ದಂತಿತ್ತು. ಮೆಲ್ಲನೆ ಎದ್ದು ನಾಲ್ಕು ಹೆಜ್ಜೆ ಮುಂದೆಬಂದು ಕಣ್ಣು ಕಿರಿದಾಗಿಸಿ ದೂರದಲ್ಲಿದ್ದ ಆ ಸಣ್ಣ ಬೋರ್ಡನ್ನೇ ದಿಟ್ಟಿಸಿದರು. ಸರಿಯಾಗಿ ಕಾಣಲಿಲ್ಲ.

ಅಯ್ಯರ್ ತಾವು ಮೊದಲೇ ಕುಳಿತಿದ್ದ ಸೀಟಿಗೆ ಮತ್ತೆ ಮರಳಿದರು. ಸಮಯದ ಸುಳಿವು ಸಿಕ್ಕಲಿಲ್ಲ. ಪ್ರಯಾಣ ಮಾಡುವಾಗ ಒಂದು ವಾಚಾಗಲೀ ಉಂಗುರವಾಗಲೀ ಧರಿಸದ ತಮ್ಮ ಅತಿಜಾಗರೂಕತೆ ಬಗ್ಗೆ ಮೊದಲಬಾರಿಗೆ ಖೇದವೆನಿಸಿತು. ಏನು ಮಾಡಲೂ ತೋಚಲಿಲ್ಲ. ಇಳಿಬಿಟ್ಟಿದ್ದ ಕಾಲುಗಳನ್ನು ಮೇಲಿಟ್ಟುಕೊಂಡು ತಲೆಮೇಲೆ ಕೈಹೊತ್ತು ಬೆಪ್ಪನಂತೆ ಕುಳಿತರು. ಈಗ ನಾಯಿ ಬಾಲ ಅಲ್ಲಾಡಿಸುತ್ತಾ ಅಯ್ಯರನ್ನೇ ನೋಡುತ್ತಿತ್ತು. ಎಲುಬಿನ ಹಂದರಕ್ಕೆ ತೊಗಲು ತೊಡಿಸಿದಂತಿದ್ದ ನಾಯಿ ನೋಡಲು ದಯನೀಯವಾಗಿತ್ತು. ಇದ್ದಕ್ಕಿದ್ದಂತೆ ನಾಲಿಗೆ ಹೊರಚಾಚಿ ತನ್ನ ಮೈಕೈ ನೆಕ್ಕಿಕೊಂಡು ಕುಯ್ ಕುಯ್ ಅನ್ನುತ್ತಾ ಅಯ್ಯರ್ ಕುಳಿತಿದ್ದ ಬೆಂಚಿನ ಕೆಳಗೆ ಹೋಗಿ ಮೂಲೆ ಸೇರಿ ಮಲಗಿಕೊಂಡಿತು. ಏನುಮಾಡುವುದಕ್ಕೂ ಬೆಳಕುಹರಿಯುವುದನ್ನು ಕಾಯುವುದಲ್ಲದೇ ಬೇರೆ ದಾರಿಯಿರಲಿಲ್ಲ. ಸ್ವಲ್ಪಹೊತ್ತು ಹಾಗೇ ಕೂತಿದ್ದರು. ನಿದ್ರೆ ಬಾರದಿದ್ದರೂ ದೇಹಕ್ಕೆ ತುಸು ರೆಸ್ಟಾದರೂ ಸಿಗಲೆಂದು ಅಯ್ಯರ್ ಅಲ್ಲೇ ಮೈಹರವಿಕೊಂಡರು.

ಬೆಂಚಿನಮೇಲೆ ಅಡ್ಡಾದ ಅಯ್ಯರ್ ಮನದಲ್ಲಿ ’ಮುಂದೇನು?!’ ಎಂಬ ಪ್ರಶ್ನೆ ಭೂತಾಕಾರಕ್ಕೆ ಬೆಳೆದು ನಿಂತಿತು. ಉತ್ತರ ಕಾಣಲಿಲ್ಲ. ಆ ನಡುರಾತ್ರಿಯಲ್ಲೂ ವಾತಾವರಣದಲ್ಲಿ ತಂಪಿರಲಿಲ್ಲ. ’ಯಾವುದೇ ಗಮ್ಯವನ್ನು ಗುರಿಯಾಗಿಸಿಕೊಳ್ಳುವ ಮೊದಲು ನಮ್ಮ ಇರುವಿನ ತಾಣದ ಅರಿವಿರಬೇಕಲ್ಲವೇ, ಇರುವುದೆಲ್ಲೆಂದೇ ಅರಿಯದೆ ಎಲ್ಲಿಗೆ ತಾನೆ ಹೋಗುವುದು!’ ತಮ್ಮ ಈ ಶೋಚನೀಯ ಸ್ಥಿತಿ ನೆನೆದು ಸ್ವಾನುಕಂಪದಿಂದ ನರಳಿದರು. ದುಃಖ ಉಮ್ಮಳಿಸಿ ಬಂತು. ಕೆಳಗಿನ ಬರ್ತಿನಿಂದ ಕುಯ್… ಕುಯ್… ಎಂದು ಮುಲುಗಿದ್ದು ಕೇಳಿಸಿತು. ತನ್ನ ಈಗಿನ ಸ್ಥಿತಿ ಆ ಕುನ್ನಿಯ ಸ್ಥಿತಿಗಿಂತ ಹೆಚ್ಚೇನೂ ಭಿನ್ನವಲ್ಲವೆನಿಸಿತು. ಬದುಕಿನ ಪಯಣದ ಈ ಕ್ಷಣದಲ್ಲಿ ಅದು ತನ್ನ ಸಹಪಯಣಿಗ ಎನ್ನುವುದು ವಿಧಿಲಿಖಿತವಲ್ಲದೆ ಮತ್ತೇನು ಅನ್ನಿಸಿತು. ಆಜನ್ಮ ಶತ್ರುವಿಗೂ ಇಂಥಾ ಗತಿ ಬರಬಾರದು ಅಂದುಕೊಂಡರು. ತನಗಾದರೂ ಇಂಥ ಗತಿ ಏಕೆ ಬಂದಿತೆನಿಸಿತು? ತನಗೇ ಏಕೆ ಈ ಪರಿಸ್ಥಿತಿ ಬರಬೇಕಿತ್ತು ಎಂದೂ ಅನಿಸಿತು. ಉತ್ತರ ತಿಳಿಯಲಿಲ್ಲ. ತುರ್ತಾಗಿ ಈ ಪ್ರಶ್ನೆಗಳಿಗೆ ಉತ್ತರ ಬೇಕೇ ಬೇಕೆನ್ನುವ ಉದ್ವಿಗ್ನತೆ ಉಂಟಾಯಿತು. ಅರಿಯದಂತೆ ಮಂಪರು ಕವಿಯತೊಡಗಿತು. ಮುಂದೆ ನಡೆದ ನಿದ್ದೆಎಚ್ಚರಗಳ ಆಟದಲ್ಲಿ ಅಯ್ಯರ್ ಅನುಭವಿಸಿದ ಯಾತನೆ ಮಾತ್ರ ಮಾತುಗಳಿಗೆಟುಕದ್ದು.
ಸತ್ಯಮಿಥ್ಯೆಯ ನಡುವಿನ ಜೋಕಾಲಿಯನ್ನು ಅಯ್ಯರ್ ಜೋರು ಜೀಕುತ್ತಿದ್ದರು. ಎದುರಿಗೆ ವಿಶಾಖಪಟ್ಟಣದ ರೈಲು ಸ್ಟೇಷನ್ ಬಿಟ್ಟು ಹೊರಡುತ್ತಿದೆ. ಜೋಕಾಲಿಯಿಂದ ಇಳಿದು ರೈಲು ಹಿಡಿಯಲೇಬೇಕು, ಆದರೆ ಸಾಧ್ಯವಾಗುತ್ತಿಲ್ಲ. ಜೋಕಾಲಿ ವೇಗ ನಿಯಂತ್ರಣಕ್ಕೆ ಸಿಗದೆ ರಭಸ ಹೆಚ್ಚುತ್ತಲೇ ಇದೆ. ಛೇ… ರೈಲು ಕಣ್ಮುಂದೆಯೇ ಸಣ್ಣ ಚುಕ್ಕೆಯಾಗಿ ಕೊನೆಗೆ ಪೂರ್ತಿ ಕಣ್ಮರೆಯಾಯಿತು. ರೆಕಾರ್ಡ್ ಡ್ಯಾನ್ಸ್ ಕನಕವಲ್ಲಿಯ ಉಬ್ಬಿದ ಮೊಲೆಗಳ ನಡುವೆ ಸುರಿದ ಸೆರೆಯನ್ನು ನಾಲಿಗೆಯಿಂದ ನೆಕ್ಕುತ್ತಿದ್ದರಿಗೆ ಯಾರೋ ರಪರಪನೇ ಕೆನ್ನೆಗೆ ಬಾರಿಸಿದ್ದರು. ನಿಧಾನಕ್ಕೆ ತಲೆಯೆತ್ತಿ ಹೊಡೆದವರತ್ತ ನೋಡಿದರೆ, ಕೈಯಲ್ಲಿ ಚಾಟಿಹಿಡಿದ ಮುಕ್ತಾ ಗಹಗಹಿಸಿ ನಗುತ್ತಿದ್ದಾಳೆ. “ನಿಮ್ಮಗಳು ಬೃಂದಕ್ಕನ್ಹತ್ರಾನೂ ಇದೇ ನಾಚಿಕ್ಗೇಡಿನ್ ಕೆಲ್ಸ ಮಾಡ್ತೀರೇನು?” ಛಟೀರೆಂದು ಬಿತ್ತು ಛಾಟಿಯೇಟು. “ಛೀ… ಥೂ…” ಕ್ಯಾಕರಿಸಿ ಉಗಿದದ್ದು ಸರಿಯಾಗಿ ಏಟುತಿಂದ ಕೆನ್ನೆಮೇಲೆ ಬಂದು ಕೂತದ್ದು ತಿಳಿಯಿತು. ಕೆನ್ನೆಯಮೇಲೆ ಬಿದ್ದ ಉಗುಳನ್ನು ಅಕ್ಕರೆಯಿಂದ ಒರೆಸಿದ ಕೈಗಳು ದೇವರಕೋಣೆಯ ಫೋಟೋದಲ್ಲಿದ್ದ ಅವಧೂತರದ್ದು!

’ಹಾಗಂತ ನಾನೇನು ಕಚ್ಚೆಹರುಕ್ನೇ… ಜೀವನ್ದಲ್ಲಿ ನಿಮ್ಮಕ್ಕನ್ನ ಬಿಟ್ರೆ ಇನ್ನೊಂದ್ ಹೆಣ್ಣನ್ನು ಸೇರ್ದವ್ನಲ್ಲ ನಾನು ಗೊತ್ತಾಯ್ತೇ’ ಮುಕ್ತಾಳನ್ನು ದಿಟ್ಟಿಸಿ ಹೇಳಿದ್ದರು. ಅವಳ ಕೈಯಲ್ಲೀಗ ಚಾಟಿಯಿರಲಿಲ್ಲ. ಕೆಂಪು ಸೀರೆಯುಟ್ಟು ತಲೆಗೂದಲನ್ನು ಇಳಿಬಿಟ್ಟಿದ್ದಳು. ಉಗ್ರಗೊಂಡಿದ್ದ ಮುಕ್ತಾಳ ಮುಖ ನೋಡಿ ಅಯ್ಯರಿಗೆ ಭಯವಾಯಿತು. ಅದೆಷ್ಟು ಕೈಗಳಿದ್ದವೋ ಪಕ್ಕನೆ ಗುರುತಾಗಲಿಲ್ಲ. ಒಟ್ಟು ಅಷ್ಟೂ ಕೈಗಳಲ್ಲಿ ತರಾವರಿ ಆಯುಧಗಳಿದ್ದುವು. ಮುಕ್ತಾ ರಣೋತ್ಸಾಹದ ಕೇಕೆ ಹಾಕಿ ಭರ್ಜಿಯಿಂದ ಅಯ್ಯರ್ ಎದೆಯನ್ನು ಚುಚ್ಚೇಬಿಟ್ಟಳು. ಎದೆಯಲ್ಲಿ ಆಳವಾದ ಗಾಯವಾಗಿ ಬುಳಬುಳನೆ ರಕ್ತ ಸುರಿಯತೊಡಗಿತು. “ನಿಜ ನೀನು ಒಂದೇ ಸರ್ತಿ ಅಲ್ಲಿಗೆ ಹೋದದ್ದು, ಆಗಲೂ ನಿನ್ನಿಂದ ಕೆಲಸ ಸಾಧ್ಯವಾಗಲಿಲ್ಲ. ಹಾಗಂತ ಸ್ವಪ್ನಸಂಭೋಗದಲ್ಲಿ ನೀನು ಯಾವ್ದಾದ್ರೂ ಹೆಣ್ಣನ್ನ ಅನುಭವಿಸದೇ ಬಿಟ್ಟೀದೀಯ ಕಂದಾ…?” ಗಾಯಕ್ಕೆ ಮದ್ದುಹಚ್ಚುತ್ತಾ ಕೇಳಿದ ಅವಧೂತರ ತಣ್ಣಗಿನ ದನಿಯಲ್ಲಿ ಕೊಂಕಿರಲಿಲ್ಲ. “ಹೌದು ಮಗು ನಾನೇನು ದೇವ್ರಲ್ಲ ನೀ ಹೇಳಿದ್ಹಾಗೆ ನಾನೇನೋ ನರಮನುಷ್ಯನೇ ಆದ್ರೆ ನೀನು… ಕಂದಾ ನೀನು?! ನೀನು ಕನಿಷ್ಠ ಮನುಷ್ಯನಾಗೋದು ಯಾವಾಗ?” ಅಕ್ಕರೆ ತುಂಬಿದ ದನಿಯಲ್ಲಿ ಕೇಳಿದ್ದರು.
ಬೆಂಚಿನಮೇಲೆ ಮಲಗಿದ್ದ ಅಯ್ಯರ್ ಬೆವರುತ್ತಿದ್ದರು. ’ಕನಸು ವಾಸ್ತವಗಳಿಗೆ ವೆತ್ಯಾಸವೇ ಇಲ್ಲವೇ? ಸರಿತಪ್ಪುಗಳ ನ್ಯಾಯನಿರ್ಣಯದಲ್ಲಿ ಮಾನಸಿಕ ವ್ಯಭಿಚಾರಕ್ಕೆ ರಿಯಾಯತಿ ಬೇಡವೇ?’ ಮುಚ್ಚಿದ್ದ ಕಣ್ರೆಪ್ಪೆಗಳಡಿಯಲ್ಲಿ ಕಣ್ಗುಡ್ಡೆಗಳು ಚುರುಕಾಗಿ ಚಲಿಸುತ್ತಿದ್ದುದು ತಿಳಿಯುತ್ತಿತ್ತು. ’ನಮ್ಮ ಕನಸು ಕಲ್ಪನೆಗಳು ನಮ್ಮನ್ನು ಮಾತ್ರ ಬಾಧಿಸುತ್ತದೆ. ಇನ್ನೊಬ್ಬರನ್ನಲ್ಲ, ಅದು ತಪ್ಪು ಹೇಗಾಗತ್ತೆ?’ ಅಯ್ಯರ್ ಹಪಹಪಿ ಕಂಡು ಹಸನ್ಮುಖಿ ಅವಧೂತರು ದೊಡ್ಡದಾಗಿ ಮುಗುಳ್ನಕ್ಕರು.“ಸರಿತಪ್ಪುಗಳ ಲೆಕ್ಕಾಚಾರದ ತಾಕಲಾಟ ನಮ್ಮ ವಿವೇಕಕ್ಕೆ ನಿಲುಕದ್ದು ಕಂದಾ. ಅದನ್ನೆಲ್ಲಾ ಆ ತಿಮ್ಮಪ್ಪನಿಗೆ ಬಿಡು. ನಾವು ನಮ್ಮ ನಿಯತ್ತು ನಮ್ಮ ಆತ್ಮಸಾಕ್ಷಿ ಶುದ್ಧ ಇಟ್ಕೋಳೋದಷ್ಟೆ ಮುಖ್ಯ ನೋಡು, ಉಳಿದದ್ದೆಲ್ಲಾ ಆ ಭಗವಂತ ನೋಡ್ಕೋತಾನೆ” ಎಂದ ಅವಧೂತರ ಚಿತ್ತಾರ ನಿಧಾನಕ್ಕೆ ಮರೆಯಾಯಿತು. ಬೆಳಕಿನ ಪ್ರಖರತೆ ಕಮ್ಮಿಯಾದಂತಾಗಿ ಅಯ್ಯರ್ ಮುಖ ತಿಳಿಗೊಂಡಿತು. ನಿಧಾನಕ್ಕೆ ಆಳವಾದ ನಿದ್ರೆಗೆ ಜಾರಿದ್ದರು.

ದೊಡ್ಡ ಸದ್ದಿನೊಂದಿಗೆ ನೆಲ ಗಡಗಡ ನಡುಗಿದಂತಾಗಿ ಅಯ್ಯರ್ ಧಿಗ್ಗನೆದ್ದು ಕುಳಿತರು. ಇವರ ಪಕ್ಕದಲ್ಲಿ ಅತಿವೇಗದಲ್ಲಿ ಸಾಗುತ್ತಿದ್ದ ರೈಲು ಕ್ಷಣಗಳಲ್ಲಿ ಸ್ಟೇಷನ್ ದಾಟಿ ಮರೆಯಾಯ್ತು. ರೈಲು ವಿಶಾಖಪಟ್ಟಣದ ದಿಕ್ಕಿನಲ್ಲೇ ಹೋಗಿದ್ದು ಕಂಡು ಹಾಳು ರೈಲು ಒಂದು ಗಳಿಗೆ ನಿಂತಿದ್ದಿದ್ದರೆ ಹತ್ತಿ ಹೋಗಿಬಿಡಬಹುದಿತ್ತಲ್ಲಾ ಎಂದುಕೊಂಡರು. ಅಷ್ಟರಲ್ಲಿ ಕಾಸಿರಲಿ, ಕಿಸೆಯೇ ಇಲ್ಲದ್ದು ನೆನಪಾಯಿತು. ಏರುತ್ತಿದ್ದ ಬಿಸಿಲು ಕಂಡು ಸಮಯ ಆಗಲೇ ಒಂಭತ್ತಾಗಿರಬೇಕೆನಿಸಿತು. ಸೀಟಿನಕೆಳಗೆ ಬಗ್ಗಿ ನೋಡಿದರು. ನಾಯಿ ಇರಲಿಲ್ಲ. ನಿತ್ಯಕರ್ಮದ ನೆನಪಾಗಿ ಸುತ್ತಲೂ ನೋಡಿದರು. ಸ್ವಲ್ಪದೂರದಲ್ಲಿ ಕಂಡ ಶೌಚಾಲಯದತ್ತ ನಡೆದರು. ಕದ ತೆರೆದಾಗ ಗಪ್ಪೆಂದು ಹೊಡೆದ ದುರ್ನಾತಕ್ಕೆ ಕಿಬ್ಬೊಟ್ಟೆಯಿಂದ ಒತ್ತರಿಸಿಕೊಂಡು ಬಂತು. ಹೆದರುತ್ತಲೇ ಒಳಗೆ ನೋಡಿದರು. ನಲ್ಲಿಯಕೆಳಗಿದ್ದ ಹಳೇ ಪೈಂಟ್ ಡಬ್ಬ ಕಂಡಿತು. ಮೆಲ್ಲಗೆ ಹತ್ತಿರ ಹೋಗಿ ಕತ್ತು ವಿರುದ್ಧ ದಿಕ್ಕಿಗೆ ತಿರುಗಿಸಿ ಕೈ ಚಾಚಿ ಡಬ್ಬ ಎತ್ತಿಕೊಂಡು ದೂರ ಬಂದರು. ನೇರ ಪ್ಲಾಟ್ಫಾರಮ್ಮಿನ ನಲ್ಲಿಗೆ ಹೋಗಿ ನೀರುಹಿಡಿದುಕೊಂಡು ಪ್ಲಾಟ್ಫಾರಮ್ಮಿನಾಚೆಗಿದ್ದ ಗದ್ದೆಬಯಲಿನತ್ತ ನಡೆದರು. ಸ್ವಲ್ಪ ದೂರ ಹೋದಾಗ ಪ್ಲಾಟ್ಫಾರಮ್ಮಿನ ಕೊನೆಯಲ್ಲಿದ್ದ ಸ್ಟೇಷನ್ ಬೋರ್ಡು ಹತ್ತಿರವಾಯ್ತು. ಓಡುನಡಿಗೆಯಲ್ಲಿ ಹೋದ ಅಯ್ಯರ್ ಇಂಗ್ಲಿಷಿನಲ್ಲಿ ಬರೆದದ್ದನ್ನು ನಿಧಾನಕ್ಕೆ K O.. M M A… RA…PU..DI ಎಂದು ಕೂಡಿಸಿಕೊಂಡು ಓದಿದರು. ಬೋರ್ಡು ಮೂರುಭಾಷೆಗಳಲ್ಲಿತ್ತಾದರೂ ಅಯ್ಯರಿಗೆ ಹಿಂದಿ, ತೆಲುಗು ಓದಲು ಬರುತ್ತಿರಲಿಲ್ಲ. ಕೊಮ್ಮರಪುಡಿ… ಕೊಮ್ಮರಪುಡಿ ಎಂದು ಒಂದಕ್ಕೆರಡು ಸರತಿ ತಮಗೆತಾವೇ ಹೇಳಿಕೊಂಡು ರೈಲ್ವೇಹಳಿಯ ಬಳಿ ಬಯಲಿನಲ್ಲಿ ಕುಳಿತರು. ಕೆಲಸಮುಗಿಸಿ ಬಂದು ಪೈಂಟ್ ಡಬ್ಬಿಯನ್ನು ಶೌಚಾಲಯದ ಹೊರಗಿಟ್ಟರು. ನಲ್ಲಿಯಲ್ಲಿ ಮುಖ ತೊಳೆದು ಬಾಯಿಮುಕ್ಕಳಿಸಿದರು. ಮುಂದೇನೆಂದು ಯೋಚಿಸುತ್ತಿರುವಾಗ ಬೆಂಚಿನ ಕೆಳಗಿನ ಸಹಪ್ರಯಾಣಿಕ ಹಿಂತಿರುಗಿದ್ದು ಕಾಣಿಸಿತ್ತು. ಅದರ ಬಾಯಲ್ಲಿದ್ದ ಬ್ರೆಡ್ಪೀಸುಕಂಡು ಹೊಟ್ಟೆ ಚುರ್ರ್ ಅಂದಿತು.

ಮುಂದಿನ ದಾರಿಯಬಗ್ಗೆ ಯೋಚಿಸುತ್ತಾ ಟಿಕೆಟ್ ಕೌಂಟರಿನದಿಕ್ಕಿನಲ್ಲಿ ಒಂದು ನೂರುಮೀಟರ್ ನಡೆದಾಗ ಎಡಕ್ಕೆ ಸಣ್ಣ ಕ್ಯಾಂಟೀನು ಕಂಡುಬಂತು. ಸ್ವತಃ ಹೋಟೆಲಿನವರಾದ್ದರಿಂದ ಹೋಗಿ ನಾಕುಮಾತಾಡಿದರೆ ಏನಾದರೂ ಗಿಟ್ಟೀತೆಂದು ಲೆಕ್ಕಹಾಕಿ ಹೋಟೆಲಿನತ್ತ ನಡೆದರು. ಬಾಗಿಲಿನಲ್ಲೇ ಗಲ್ಲಾ ಇತ್ತು. ಹತ್ತಿರಹೋಗಿ ಗಲ್ಲಾಬಳಿ ನಿಂತಿದ್ದವನ ಬಳಿ ಹಲ್ಗಿಂಜುತ್ತಾ ನಿಂತರು. ಪ್ರತಿಯಾಗಿ ಅವನಿವರನ್ನು ಕೆಕ್ಕರಿಸಿ ನೋಡಿದ. “ನಾನು ರಾಜನ್ ಅಯ್ಯರ್ ಅಂತ” ಅಂದರು ಸಂಕೋಚದಿಂದ. “ಆಯ್ಟೆ ಏಂಟಿ, ನೇನು ನಿನ್ನ ಅಡಗ್ಯಾನ” ತೆಲುಗಿನಲ್ಲಿ ಬಂದ ಉತ್ತರ ಕಟುವಾಗಿದ್ದುದು ಅಯ್ಯರಿಗೆ ತಿಳಿಯಿತು. “ಅಲ್ಲಾ, ತಿರುವಾರೂರಲ್ಲಿ ನಂದೂ ಒಂದು ಹೋಟ್ಲಿದೇ…” ದನಿಯಲ್ಲಿ ದೈನ್ಯತೆಯಿತ್ತು. “ಅಬೇ ನಾಕೆಂದುಕು ನೀ ಪುರಾಣಂ ಚಪ್ತಾವು, ನೇನು ನಿನ್ನ ಅಡಗ್ಯಾನ” ಅಯ್ಯರಿಗೆ ತೆಲುಗು ಮಾತನಾಡಲು ಬರುತ್ತಿರಲಿಲ್ಲವಾದರೂ ಒಂದಷ್ಟಿಷ್ಟು ಅರ್ಥವಾಗುತ್ತಿತ್ತು. “ಹಾಗಲ್ಲಾ…ಅದೇನಾಯ್ತೂಂದ್ರೇ…” “ಚೂಡೂ ನೀಲಾಂಟೆ ಎಂತೋ ಮಂದೀಲುನು ಚೂಸ್ಯಾನು, ಡಬ್ಬುಲುಂಟೇ ಲೋಪಲಿಕಿ ರಾವಾಲಿ, ಲೇದಂಟೆ ದೆಂಗೆ” ತೋರುಬೆರಳನ್ನು ಹೊರಕ್ಕೆ ಬೊಟ್ಟುಮಾಡಿ ಕಾಸಿಲ್ಲದಿದ್ದರೆ ಹೊರನಡೆಯುವಂತೆ ಹೇಳಿದ್ದು ತಿಳಿಯಿತು. ಸಂಕೋಚದ ಮುದ್ದೆಯಾದ ಅಯ್ಯರ್ ಕೊನೆಯದಾಗಿ “ತುಂಬಾ ಹಸಿವೆ ಕಣಪ್ಪಾ…” ಎಂದಾಗ ದನಿ ನಡುಗಿತ್ತು. “ಅಬೆ…ಒಕಸಾರಿ ಚಪ್ಯಾನು ಕಾದಾ…ಗುದ್ಮೂಸ್ಕೋನಿ ಪೋರ ಇಕ್ಕಡ್ನಿಂಚಿ” ಎಂದಾಗ ಅಯ್ಯರಿಗೆ ಕಣ್ತುಂಬಿ ಬಂದು ಇನ್ನು ಸಾಕೆನಿಸಿತು.

ನಿರಾಸೆಯಿಂದ ತಿರುಗಿ ಹೊರಡುವಷ್ಟರಲ್ಲಿ ಯಾರೋ “ಇಕ್ಕಡ್ಚೂಡಯ್ಯಾ” ಅಂದದ್ದು ಕೇಳಿ ಅಯ್ಯರ್ ಅತ್ತ ನೋಡಿದರು. ತಿಂಡೀ ಕೌಂಟರಿನಲ್ಲಿ ನಿಂತು ಮಾತಾಡಿದ್ದವರು ಮುಂದುವರೆಸಿ “ಚೂಸ್ತೆ ಬ್ರಾಹ್ಮುಣುಡುಲಾ ಉನ್ನಾವು…ಪೊದ್ದುನ ಪೊದ್ದುನ ಏ ಗೊಡವಲು ನಾಕೊದ್ದು ತೆಲಿಸಾ, ಏದಿಚ್ಚಾಮೋ ತೀಸ್ಕೊಂಡ್ ವೆಲ್ಲಿಪೋ” ಅಂದರು. ಬನೀನಿನ ಸಂದಿಯಿಂದಿಣುಕಿದ್ದ ಜನಿವಾರದಿಂದ ಗುರುತಾಗಿರಬೇಕು. “ಹಾಗಲ್ಲಾ ಸ್ವಾಮೀ…ತಿರುವಾರೂರಲ್ಲಿ ನಂದೂ ಒಂದು ಹೋಟ್ಲಿದೇ…” ಎನ್ನುತ್ತಿದ್ದ ಅಯ್ಯರ್ ಕೈಯಲ್ಲಿ ಒಂದೆಲೆಯಲ್ಲಿ ನಾಕಿಡ್ಲಿ ಸ್ವಲ್ಪ ಚಟ್ಣೀ ಕೊಟ್ಟು ಮುಂದೆ ಮಾತನಾಡಗೊಡದೆ “ಗಾಲಿಲೋನಿ ಮಾಟಲು ಒದಿಲೈ, ಖಬರ್ಲು ಚಪ್ಪಬಾಕೂ…ಮರ್ಯಾದಂಗಾ ಊರ್ಕೇ ವೆಲ್ಲಿಪೋ” ಎಂದುಬಿಟ್ಟರು. ಹೋಟೆಲ್ಲಿನ ಒಳಗೂ ಸೇರಿಸದೆ ಹೀಗೆ ಭಿಕ್ಷುಕರಗೆ ಕೊಡುವಂತೆ ಬಾಗಿಲಲ್ಲಿ ನಿಲ್ಲಿಸಿ ಕೈಯಲ್ಲಿಕೊಟ್ಟದ್ದು ಸ್ವಾಭಿಮಾನಿ ಅಯ್ಯರಿಗೆ ಸಹಿಸಲಾಗಲಿಲ್ಲ. ಆದರೆ ಹಸಿವು ಮಾತನಾಡಗೊಡಲಿಲ್ಲ. ತೆಪ್ಪಗೆ ಹತ್ತಿರದ ಪ್ಲಾಟ್ಫಾರಂ ಕಲ್ಬೆಂಚಿನಲ್ಲಿ ಕುಳಿತು ಇಡ್ಲೀ ತಿನ್ನತೊಡಗಿದರು.

ಇಡ್ಲೀ ತಿಂದ ಮೇಲೆ ಸ್ವಲ್ಪ ಸಮಾಧಾನವೆನ್ನಿಸಿತು. ಎರಡು ಗುಟುಕು ಕಾಫಿ ಬಿದ್ದರೆ ಹಿತವಾಗಿರುತ್ತದೆ ಅನ್ನಿಸಿತು. ಕ್ಯಾಂಟೀನಿನಲ್ಲಾಗಿದ್ದ ಅನುಭವದಿಂದ ಮತ್ತೆ ಅಲ್ಲಿಗೆಹೋಗಲು ಮನಸಾಗಲಿಲ್ಲ. ಬದುಕಿನ ಸಣ್ಣಸಣ್ಣ ಅಗತ್ಯಗಳೂ ದೊಡ್ಡಸವಾಲೆನಿಸಿತು. ಇಲ್ಲಿಯವರೆಗೂ ತಾವು ನಡೆಸಿದ್ದ ಸುಭಿಕ್ಷ ಜೀವನದ ಬೆಲೆಯ ಅರಿವುಮೂಡಿಸಲೆಂದೇ ಇಂಥಾ ದುರ್ಗತಿ ಬಂದಿರಬೇಕೆಂದುಕೊಂಡರು. ಎದ್ದು ಸ್ಟೇಷನ್ನಿನ ಟಿಕೆಟ್ ಕೌಂಟರಿನತ್ತ ಹೆಜ್ಜೆಹಾಕಿದರು. ಅಲ್ಲಿದ್ದ ಗೋಡೆ ಗಡಿಯಾರದಲ್ಲಿ ಸಮಯ ಹತ್ತನ್ನು ಸಮೀಪಿಸಿತ್ತು. ಕೌಂಟರಿನಲ್ಲಿ ಇಬ್ಬರು ಸಿಬ್ಬಂದಿಗಳಿದ್ದರು. ಅವರೂ ಮಾತಾಡಿದರೆ ಮುತ್ತು ಉದುರೀತೋ ಎಂಬಂತೆ ಸಿಡುಕುಮೋರೆ ಹಾಕಿಕೊಂಡು ಕೇಳಿದ್ದಕ್ಕಷ್ಟೇ ಉತ್ತರಿಸುತ್ತಿದ್ದರು. ಹಲ್ಲುಗಿಂಜಿ ತಲೆಕೆರೆದು ಅಂತೂ ಅಯ್ಯರ್ ಒಂದಿಷ್ಟು ಮಹತ್ವದ ಮಾಹಿತಿ ಕಲೆಹಾಕಿದರು. ಅವರಿದ್ದ ಕೊಮ್ಮರಪುಡಿ ಒಂದು ಸಣ್ಣ ರೈಲ್ವೇಸ್ಟೇಷನ್. ಅದಕ್ಕಂಟಿಕೊಂಡಂತೆ ಅದೇ ಹೆಸರಿನ ಕುಗ್ರಾಮವಿತ್ತು. ಆ ಮಾರ್ಗವಾಗಿ ಚಲಿಸುತ್ತಿದ್ದ ಒಂದೆರಡು ಶಟ್ಲುಗಾಡಿಗಳನ್ನು ಬಿಟ್ಟರೆ ಹೆಚ್ಚಿನ ಟ್ರೈನುಗಳು ಅಲ್ಲಿ ನಿಲ್ಲುತ್ತಿರಲಿಲ್ಲ. ಕೊಮ್ಮರಪುಡಿಯಿಂದ ಹತ್ತಿರ ಅಂದರೆ ಸುಮಾರು ಹನ್ನೆರಡು ಮೈಲಿಯಾಚೆಗೆ ಗೂಡೂರು ಜಂಕ್ಷನ್ನಿತ್ತು. ಇನ್ನು ವಿಶಾಖಪಟ್ಟಣದ ಕಡೆಗಿದ್ದ ನೆಲ್ಲೂರಿಗೆ ಹದಿನೆಂಟು ಮೈಲಿಯೆಂದು ತಿಳಿದುಬಂತು. ಎಲ್ಲಿಗೆ ಹೋಗುವುದು? ಹೇಗೆ ಹೋಗುವುದು ಎಂದು ಯೋಚಿಸುತ್ತಿದ್ದರು. ಸ್ವಲ್ಪ ನಶ್ಯವಾದರೂ ಇದ್ದಿದ್ದರೆ ಚುರುಕುಮೂಡುತ್ತೆನಿಸಿತು. ದಾಪುಗಾಲಿನಿಂದ ತಾವು ಕುಸಿದುಕುಳಿತ ಕಲ್ಬೆಂಚಿನತ್ತ ಹೊರಟರು.

ಆ ಸ್ಥಳ ತಲುಪಿದೊಡನೆ ಕಣ್ಣುಗಳು ನಶ್ಯದ ಡಬ್ಬಿಗೆ ಹುಡುಕಿದವು. ರಾತ್ರಿ ನಾಯಿಮೂಸಿದ್ದ ಕವರೂ ಕಾಣಲಿಲ್ಲ. ಗಾಳಿಗೆ ಹಾರಿಹೋಗಿರಬೇಕೆನಿಸಿತು. ಹಾಗೇ ಹುಡುಕುತ್ತಾ ಆಚೀಚೆ ನೋಡಿದರು. ಸ್ವಲ್ಪದೂರದಲ್ಲಿ ಬಿಸಿಲಿಗೆ ಏನೋ ಥಳಥಳ ಹೊಳೆಯುತ್ತಿದ್ದ ವಸ್ತು ಕಾಣಿಸಿತು. ಉಮೇದಿನಿಂದ ಹತ್ತಿರ ಹೋಗಿ ನೋಡಲು ಮುಚ್ಚಳ ಬಿಚ್ಚಿದ್ದ ನಶ್ಯದಡಬ್ಬಿ ಗಾಳಿಗುರುಳಿ ಇಷ್ಟು ದೂರ ಬಂದು ಬಿದ್ದಿತ್ತು. ಬಗ್ಗಿ ಎತ್ತಿಕೊಂಡು ನೋಡಿದಾಗ ಡಬ್ಬಿಯಲ್ಲಿ ಇನ್ನೂ ಸ್ವಲ್ಪ ನಶ್ಯ ಉಳಿದಿತ್ತು. ನಿಧಿ ಕಂಡಂತಾಗಿ ಮುಖ ಮೊರದಗಲವಾಯಿತು. ಇಂಥಾ ದಟ್ಟ ದಾರಿದ್ರ್ಯದಲ್ಲೂ ಒಂದು ಚಿಟಿಕೆ ನಶ್ಯ ಕೊಡಬಹದಾದ ಆನಂದಕ್ಕೆ ಬೆಲೆಕಟ್ಟಲಾರದು ಎಂದೆನಿಸಿತು. ಒಂದೇ ಒಂದು ಚಿಟಿಕೆ ತೆಗೆದು ಮೂಗಿಗೇರಿಸಿದರು. ಸ್ವಲ್ಪ ಹುರುಪುಮೂಡಿತು. ಸುತ್ತಮುತ್ತ ಒಂದು ಕಾಗದದ ತುಂಡಿಗಾಗಿ ಹುಡುಕಾಡಿ ಅದು ಸಿಕ್ಕಕೂಡಲೇ ಡಬ್ಬಿಯಲ್ಲುಳಿದಿದ್ದ ನಶ್ಯವನ್ನು ಅದರಲ್ಲಿ ಕಟ್ಟಿಕೊಂಡು ಜತನದಿಂದ ಸೊಂಟಕ್ಕೆ ಸಿಕ್ಕಿಸಿಕೊಂಡರು. ಅಯ್ಯರಿಗೆ ತಮ್ಮ ಮುಂದಿದ್ದ ಆಯ್ಕೆಗಳು ಸ್ಪಷ್ಟವಾಗತೊಡಗಿತು.

ಸಮಯ ಸುಮಾರು ಹತ್ತೂವರೆ. ಅವರಿದ್ದ ಕೊಮ್ಮರಪುಡಿಯಿಂದ ವಿಶಾಖಪಟ್ಟಣ ಸುಮಾರು ಐನೂರುಮೈಲು ದೂರವಿತ್ತು. ಈ ಕ್ಷಣವೇ ಅವರಿಗೆ ರೈಲು ಸಿಕ್ಕಿದ್ದರೂ ಕನಿಷ್ಠ ಹದಿನೈದು ಗಂಟೆ ಪ್ರಯಾಣ… ಅವರು ಮದುವೆ ಸಮಯಕ್ಕೆ ಅಲ್ಲಿಗೆ ತಲುಪುವ ಸಾಧ್ಯತೆಯೇ ಇರಲಿಲ್ಲ. ಮುಂದಿನ ಆಯ್ಕೆ ನೆಲ್ಲೂರಿಗೆ ಹೋಗುವುದು. ನೆಲ್ಲೂರಿಗೆ ಕೇವಲ ಹದಿನೆಂಟು ಮೈಲು. ಅಲ್ಲದೆ ನೆಲ್ಲೂರಿನಲ್ಲಿ ಗೆಳಯ ವೆಂಕಟೇಶ್ವರರಾಯರಿಂದ ಸಹಾಯ ದೊರೆಯುವ ಸಾಧ್ಯತೆ ಇತ್ತು. ನಿಜ ಬಹುತೇಕ ರಾಯರು ನೆಲ್ಲೂರಿನಲ್ಲಿರುವುದಿಲ್ಲ. ತಾವು ಅಲ್ಲಿಗೆ ತಲುಪವಷ್ಟರಲ್ಲಿ ಅವರಾಗಲೇ ವಿಶಾಖಪಟ್ಟಣಕ್ಕೆ ಹೊರಟಿರುತ್ತಾರೆ. ಆದರೂ ಅವರ ಲಕ್ಷ್ಮೀವಿಲಾಸ್ ಹೋಟೆಲನ್ನು ಹುಡುಕಲು ಸಾಧ್ಯವಾದರೆ ಏನಾದರೂ ಸಹಾಯ ಸಿಕ್ಕೇಸಿಕ್ಕುವುದರಲ್ಲಿ ಅನುಮಾನವಿರಲಿಲ್ಲ. ಆದರೆ ಕೊಮ್ಮರಪುಡಿ ಸ್ಟೇಷನ್ನಿನಲ್ಲಿ ನಿಲ್ಲುತ್ತಿದ್ದ ವಿಜಯವಾಡಕ್ಕೆ ಹೋಗುವ ರೈಲು ಸಂಜೆ ನಾಲ್ಕೂಕಾಲಿಗಷ್ಟೇ ಬರುವುದಿತ್ತು. ಅಲ್ಲಿಯವರೆಗೂ ಈ ದರಿದ್ರ ಸ್ಟೇಷನ್ನಿನಲ್ಲಿ ಕೊಳೆಯಲು ಅಯ್ಯರಿಗೆ ಮನಸಾಗಲಿಲ್ಲ. ಆದರೂ ಅವುಡುಗಚ್ಚಿ ಅಲ್ಲಿಯವರೆಗೆ ಕಾದು ಆ ಟ್ರೈನು ಹತ್ತಿದರೆ ಸಂಜೆ ಐದರಹೊತ್ತಿಗೆ ನೆಲ್ಲೂರು ತಲುಪಬಹುದಿತ್ತು. ಆದರೆ ಟ್ರೈನಿನಲ್ಲಿ ಟಿಕೆಟ್ಟಿಲ್ಲದೆ ಹೋಗಬೇಕಿತ್ತು. ಸಿಕ್ಕಿಕೊಂಡರೆ ಅವಮಾನ ಎದುರಿಸಬೇಕಿತ್ತು. ಹಾಗೊಂದು ವೇಳೆ ಸಿಕ್ಕಿಕೊಳ್ಳದೇ ನೆಲ್ಲೂರು ತಲುಪಿದರೂ ಪರಿಚಯವಿಲ್ಲದ ಊರಲ್ಲಿ ಕತ್ತಲಾಗುವ ಮುಂಚೆ ಲಕ್ಷ್ಮೀವಿಲಾಸ್ ಹೋಟೆಲ್ ಪತ್ತೆಯಾಗದಿದ್ದರೆ ತೊಂದರೆಯಾಗಬಹುದೆನಿಸಿ ಭಯವಾಯಿತು.

ಹೇಗಿದ್ದರೂ ಮದುವೆಗೆ ಹೋಗಲಾಗುವುದಿಲ್ಲ ಎಂದಾದಮೇಲೆ ಸುಮ್ಮನೆ ತಿರುವಾರೂರಿಗೆ ಮರಳಿದರೆ ಹೇಗೆ ಅನ್ನಿಸಿತು. ಯಾವುದಕ್ಕೂ ಮೊದಲು ಈ ಕೊಂಪೆ ಬಿಟ್ಟು ನೆಲ್ಲೂರಿಗೋ ಗೂಡೂರಿಗೋ ಹೋಗುವುದು ಅಗತ್ಯ ಎಂದು ತೀರ್ಮಾನಿಸಿದರು. ಗೂಡೂರು ಬರೀ ಹನ್ನೆರಡು ಮೈಲಿಯಾದ್ದರಿಂದ ನಡೆದೇ ಹೋಗಿಬಿಡಬಹುದಿತ್ತು. ಈಗಲೇ ಹೊರಟರೆ ಮಧ್ಯಾಹ್ನದ ಹೊತ್ತಿಗೆಲ್ಲಾ ಗೂಡೂರು ತಲುಪಿಯೇಬಿಡಬಹುದು ಅಂದುಕೊಂಡರು. ಆದರೆ ಅಲ್ಲಿ ಹೋಗಿ ಮಾಡುವದೇನು ಅನ್ನಿಸಿತು. ಊರು ಸ್ವಲ್ಪ ದೊಡ್ಡದಿದ್ದರೆ ಒಂದಲ್ಲಾ ಒಂದು ಹೋಟೆಲ್ಲಿನವರ ಕಡೆಯಿಂದ ಯಾವುದಾದರೂ ಸಂಪರ್ಕದ ಕೊಂಡಿ ಹಿಡಿದು ಸಹಾಯ ಪಡೆಯಬಹುದೆಂದು ವಿಶ್ವಾಸ ಮೂಡಿತು. ತಡಮಾಡದೇ ಹೊರಟುಬಿಡಬೇಕೆನಿಸಿತು. ಕಣ್ಣುಗಳು ನಾಯಿಗಾಗಿ ಹುಡುಕಾಡಿದುವು. ಸ್ವಲ್ಪ ದೂರದಲ್ಲಿ ಕುಕ್ಕುರುಗಾಲಿನಲ್ಲಿ ಕುಳಿತಿದ್ದ ನಾಯಿ ಇವರತ್ತಲೇ ನೋಡುತ್ತಿತ್ತು. ಕೆಲವು ಘಂಟೆಗಳ ಸಾಂಗತ್ಯದಲ್ಲಿ ಅದರೊಂದಿಗೆ ಒಂದು ಬಾಂಧವ್ಯ ಚಿಗುರಿತ್ತು. ಮನದಲ್ಲೇ ಅದಕ್ಕೊಂದು ವಿದಾಯ ಹೇಳಿ ಗೂಡೂರಿಗೆ ಹೊರಟಾಗ ಕೊಮ್ಮರಪುಡಿ ಸ್ಟೇಷನ್ನಿನ ಗೋಡೆ ಗಡಿಯಾರದಲ್ಲಿ ಸಮಯ ಹನ್ನೊಂದು ದಾಟಿತ್ತು.
ನಾರಾಯಣ ಎಮ್ ಎಸ್


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
MamathaRamesha
MamathaRamesha
3 years ago

Sir plz send me the next episode

1
0
Would love your thoughts, please comment.x
()
x