ಮರೆಯಲಾಗದ ಮದುವೆ (ಭಾಗ 6): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ

-೬-

ರಾತ್ರಿ ಎರಡು ಘಂಟೆಗೆ ರೈಲು ನೆಲ್ಲೂರನ್ನು ತಲುಪಿತು. ಅದು ಎಲ್ಲರೂ ಹೆಣಗಳಂತೆ ನಿದ್ರಿಸುವ ಹೊತ್ತು. ಕಳ್ಳ ಕಾಕರು ಸಕ್ರಿಯರಾಗುವ ಹೊತ್ತು. ಸಾಮಾನ್ಯವಾಗಿ ಆ ಸಮಯದಲ್ಲಿ ರೈಲ್ವೇ ಪೋಲೀಸರು ಪ್ರಯಾಣಿಕರನ್ನು ಜಾಗೃತಗೊಳಿಸುವುದು ಪದ್ಧತಿ. ಅದರಂತೆ ನೆಲ್ಲೂರಿನಲ್ಲಿ ರೈಲುಹತ್ತಿದ ಇಬ್ಬರು ರೈಲ್ವೇ ಪೋಲೀಸರು “ನಿಂ ನಿಂ ಬೆಲೆಬಾಳೋ ವಸ್ತು ಜೋಪಾನಾ… ಕಿಟ್ಕಿ ಬಾಗ್ಲು ಹಾಕ್ಕಳೀ…ಒಡವೆ ವಸ್ತ್ರ ಜೋಪಾನಾ…” ಎಂದು ಪ್ರತಿಬೋಗಿಯಲ್ಲೂ ಕೂಗುತ್ತಾ ಬರುತ್ತಿದ್ದರು. ಅಯ್ಯರ್ ಬೋಗಿಯಲ್ಲಿಯೂ ಬಂದು ಕೂಗುತ್ತಿದ್ದಂತೆ ಅಯ್ಯರ್ ತಂಡಕ್ಕೆ ಸೇರದ ಅಲ್ಲಿದ್ದ ಪ್ರಯಾಣಿಕನೊಬ್ಬ “ಬೋಗಿ ಪೂರಾ ಒಂದೇ ಮನೆಯವರಿರ್ಬೇಕು. ಮದ್ವೆಪಾರ್ಟಿ ಇರುವಂಗದೆ ಕಣಣ್ಣಾ… ದಿನ್ವೆಲ್ಲಾ ಕುಣುದ್ಬುಟ್ಟು ಪಾಪ ಯಣಾ ಮಲುಗ್ದಂಗ್ ಮಲ್ಗವ್ರೆ ಎಲ್ಲಾ ಸೇಫಾಗದಲ್ಲಾ, ಯಾಕ್ ಸುಮ್ಕೆ ಡಿಸ್ಟಪ್ ಮಾಡ್ತೀ… ಆರಾಮಾಗ್ ಮಲೀಕಳ್ಲೀ ಬುಡಣ್ಣೊ” ಅಂದ. ಅದಕ್ಕೆ ಪೋಲೀಸು “ಏನಾದ್ರೂ ನಂ ಡ್ಯೂಟಿ ನಾವ್ಮಾಡ್ಬೇಕಲ್ಲಣ್ಣೋ…” ಎಂದನಾದರೂ ಮತ್ತೆ ಕಿರುಚದೆ ಬೋಗಿಯನ್ನು ದಾಟಿ ಮುಂದೆ ಹೋಗುತ್ತಿದ್ದವನಿಗೆ ಬೋಗಿಯ ಕೊನೆಯಲ್ಲಿ ರೈಲಿನ ಬಾಗಿಲು ತೆರೆದೆದ್ದು ಕಂಡು ಸಿಟ್ಟು ಬಂತು. ತಿರುಗಿಹೋಗಿ ತನಗೆ ಸುಮ್ಮನೇ ಹೋಗಲು ಹೇಳಿದ ವ್ಯಕ್ತಿಗೆ ಬಯ್ಯಬೇಕೆನಿಸಿತಾದರೂ ಮುಂದಿನ ಸ್ಟೇಷನ್ನಿನಲ್ಲಿ ಇಳಿಯುವ ಮುನ್ನ ಇನ್ನೂ ಅನೇಕ ಬೋಗಿಗಳಿಗೆ ಹೋಗಬೇಕಿದ್ದರಿಂದ ಸುಮ್ಮನಾದ. ತೆರೆದ ಬಾಗಿಲು ಮುಚ್ಚಿ ಅಗುಳಿಹಾಕಿ ‘ಈ ಜನಕ್ಕೆಷ್ಟ್ ಏಳುದ್ರೂ ತಿಳಿಯಂಗಿಲ್ಲ ಎಲ್ಲಾ ಒಂದೇಮನೆಯವ್ರೂಂತ ಬಾಗುಲ್ತೆಗೆದ್ಬುಟ್ ಮಲ್ಕಳಿ… ಯಾರಾರ ಬಂದೇನಾರ ವೊತ್ಕವೋದಾಗ್ಬುದ್ದಿಬತ್ತುದೆ’ ಎಂದು ಗೊಣಗುತ್ತಾ ಮುಂದಿನ ಬೋಗಿಗೆ ಹೋದ.

ಕಗ್ಗತ್ತಲನ್ನು ಸೀಳಿಕೊಂಡು ರೈಲು ಶರವೇಗದಲ್ಲಿ ಚಲಿಸುತ್ತಿತ್ತು. ಮಧ್ಯದಲ್ಲಿ ಸಿಗುತ್ತಿದ್ದ ಸ್ಟೇಷನ್ನುಗಳ ಪೈಕಿ ಕೆಲವು ಕಡೆ ಮಾತ್ರ ರೈಲು ನಿಂತು ಮತ್ತೆ ಹೊರಡುತ್ತಿತ್ತು. ಗಾಡಿ ನಿಂತಾಗ ಕೆಲವರು ಮಲಗಿದ್ದಲ್ಲೇ ಮಿಸುಕಾಡಿ ಮಗ್ಗುಲು ಬದಲಿಸುತ್ತಿದ್ದರು. ಆದರೆ ಬಹುತೇಕ ಪ್ರಯಾಣಿಕರೆಲ್ಲ ಗಾಢ ನಿದ್ದೆಯಲ್ಲಿದ್ದರು. ನಡೆದಿದ್ದ ಅನಾಹುತದ ಅರಿವಿಲ್ಲದ ಮದುವೆ ತಂಡವೂ ಆಳ ನಿದ್ರೆಯಲ್ಲಿ ಮುಳುಗಿದಂತಿತ್ತು. ಎರಗಲಿದ್ದ ಅಘಾತದ ಸುಳಿವಿಲ್ಲದೆ ಅಯ್ಯರ್ ಕುಟುಂಬಸ್ಥರು ಸಕ್ಕರೆ ನಿದ್ದೆ ಸವಿಯುತ್ತಿದ್ದರು. ತುಸು ಹೊತ್ತಿನಲ್ಲಿ ನಸುಕು ಹರಿಯುವಂತೆ ಕಂಡಿತು. ರೈಲು ಕೂ… ಕೂ…ಎಂದು ಶಿಳ್ಳೆಹಾಕುತ್ತಾ ಸಾಗುತ್ತಿತ್ತು. ನಿಧಾನಕ್ಕೆ ವೇಗ ಕಳೆದುಕೊಂಡು ರೈಲು ವಿಜಯವಾಡ ಸ್ಟೇಷನ್ನಲ್ಲಿ ನಿಂತಾಗ ಬೆಳಕು ಹರಿದಿತ್ತು. ಸ್ಟೇಷನ್ ಬರುವುದನ್ನು ನಿರೀಕ್ಷಿಸುತ್ತಿದ್ದ ಕೆಲ ಪ್ರಯಾಣಿಕರು ಇಳಿಯುತ್ತಿದ್ದಂತೆ “ಕಾಫೀ…ಚಾಯ್…” ಎಂದು ಕಿರುಚುತ್ತಿದ್ದ ಹುಡುಗರು ಬೇರೆ ಬೇರೆ ಬೋಗಿಗಳನ್ನು ಹತ್ತುತ್ತಿದ್ದರು.

ತಲೆಗೆ ಇಟ್ಟುಕೊಂಡಿದ್ದ ದಿಂಬಿನಿಂದ ಗಾಳಿ ತೆಗೆದು ಹೊದ್ದಿದ್ದ ಬೆಡ್ಶೀಟನ್ನು ಮಡಿಸಿಡುತ್ತಿದ್ದ ಸೀತಮ್ಮ ಪಕ್ಕದ ಬರ್ತಿನಲ್ಲಿ ಅಯ್ಯರಿಲ್ಲದಿರುವುದನ್ನು ಗಮನಿಸಿದರು. ಆಗಲೇ ಎದ್ದು ಟಾಯ್ಲೆಟ್ಟಿಗೆ ಹೋಗಿರಬೇಕೆಂದು ಕೊಂಡು ಮಧ್ಯದ ಬರ್ತಿನಲ್ಲಿ ಮಲಗಿದ್ದ ಬೃಂದಳನ್ನೊಮ್ಮೆ ಎಬ್ಬಿಸಿ ಟಾಯ್ಲೆಟ್ಟಿನಕಡೆ ನಡೆದರು. ಒಬ್ಬೊಬ್ಬರೇ ಎದ್ದು ಹಲ್ಪುಡಿ, ಪೇಸ್ಟು, ಸೋಪು, ಟವಲ್ಲುಗಳನ್ನು ಹಿಡಿದು ಹೊರಟಿದ್ದರಿಂದ ಬೋಗಿಯಲ್ಲಿದ್ದ ಎರಡೂ ನಲ್ಲಿಗಳ ಬಳಿ ನೂಕುನುಗ್ಗಲಾಗಿ ಕೆಲವರು ಪ್ಲಾಟ್ಫಾರಮ್ಮಿನಲ್ಲಿ ಕಂಡ ಕೊಳಾಯಿಗಳತ್ತ ನಡೆದರು. ನಿತ್ಯಕರ್ಮ ಮುಗಿಸಿ ಹಿಂತಿರುಗಿದ ಸೀತಮ್ಮ ಈಗಲೂ ಅಯ್ಯರ್ ಕಾಣದ್ದು ಕಂಡು ಅಚ್ಚರಿಗೊಂಡರು. ರಾತ್ರಿ ಎಂದಿನಂತೆ ಎರಡು ಬಾಳೇಹಣ್ಣು ತಿಂದಿದ್ದರೆಂದು ನೆನಪಾಯಿತು. ಪ್ರಯಾಣದಿಂದ ಸ್ವಲ್ಪ ವ್ಯತ್ಯಾಸವಾಗಿರಲಿಕ್ಕೆ ಸಾಕು ಎಂದುಕೊಂಡು ಇನ್ನೂ ಮಲಗಿದ್ದ ಬೃಂದಳನ್ನ ಕಂಡು ರೇಗಿ ಎಬ್ಬಿಸಿದರು. ಅಮ್ಮನನ್ನು ಶಪಿಸುತ್ತ ಎದ್ದ ಬೃಂದಾ ತನ್ನ ದಿಂಬು ಬೆಡ್ಶೀಟನ್ನು ಕೆಳಗಿನ ಅಯ್ಯರ್ ಸೀಟಿನಮೇಲೆ ಹಾಕಿ ಬರ್ತಿನಿಂದ ಕೆಳಗಿಳಿದಳು. ಮೇಲಿನ ಬರ್ತಿಗೆ ಕಟ್ಟಿದ್ದ ಸರಪಳಿಗಳನ್ನು ಬಿಚ್ಚಿ ಮಧ್ಯದ ಬರ್ತನ್ನು ಕೆಳಗಿಳಿಸಿದಳು. ಅಷ್ಟರಲ್ಲಿ ಬ್ಯಾಗಿನಿಂದ ತೆಗೆದ ಟವಲ್ಲು ಹೆಗೆಲಿಗೇರಿಸಿ “ಅಪ್ಪ ಎಲ್ಲೂ ಕಾಣಿಸ್ತಿಲ್ಲ ಸ್ವಲ್ಪ ನೋಡೇ…” ಎಂದ ಸೀತಮ್ಮ ಪೇಸ್ಟು ಬ್ರಶ್ಶು ಕುಂಕುಮದ ಡಬ್ಬಿ ತೆಗೆದುಕೊಂಡು ಮತ್ತೆ ನಲ್ಲಿಯತ್ತ ಹೊರಟರು. “ಇಲ್ಲೇ ಎಲ್ಲೋ ಇರ್ತಾರಮ್ಮ… ಬೆಳಗಾಗೋದೆ ತಡ ಶುರು ಇವಳ್ದು” ಎಂದು ಗೊಣಗುತ್ತಾ ತನ್ನ ಬೆಡ್ಶೀಟ್ ಮಡಿಸಿಟ್ಟಳು.

ಹೋಟೆಲ್ಲಿನ ಸೂಪರ್ವೈಸರ್ ತಂಗಮಣಿ ಎಡ ಕಂಕುಳಲ್ಲಿ ಮನಿಪರ್ಸ್ ಸಿಕ್ಕಿಸಿಕೊಂಡು ಬಲಗೈಲಿ ಕಾಫಿ ಹಿಡಿದು ಟೀ ಹುಡುಗನಿಗೆ “ನೋಡೂ ಈ ಬೋಗೀಲಿ ಈ ಕಡೆಗಿರೋರೆಲ್ಲಾ ನಮ್ಮೋರೇ…. ಕಾಫಿ ಕೇಳ್ದೋರ್ಗೆ ಕಾಫಿ ಕೊಟ್ಟು ಟೀ ಕೇಳ್ದೋರ್ಗೆ ಟೀ ಕೊಡು ಗೊತ್ತಾಯ್ತಾ… ಎಲ್ಲಾ ಒಟ್ಟು ದುಡ್ಡು ನನ್ನತ್ರ ತೊಗೋಳೋವಂತಿ” ಎನ್ನುತ್ತಿದ್ದರು. ವಿಜಯವಾಡದಲ್ಲಿ ಒಂದಷ್ಟುಜನ ರೈಲು ಹತ್ತಿದರು. ಹತ್ತುವವರ ಇಳಿಯುವವರ ಜೊತೆ ಟೀ ಹುಡುಗರ ಓಡಾಟ, ಸಾಲದ್ದಕ್ಕೆ ನಲ್ಲಿಗೆ, ಟಾಯ್ಲೆಟ್ಟಿಗೆಂದು ಬ್ರಶ್ಶು ಸೋಪು ಹಿಡಿದು ಓಡಾಡುವವರು ಬೇರೆ. ಹಲ್ಲುಜ್ಜಿ ಮುಖ ತೊಳೆದ ಸೀತಮ್ಮ ಈ ಜನಜಂಗುಳಿಯಲ್ಲಿ ತಮ್ಮ ಧಡೂತಿ ದೇಹ ತೂರಿಸಿಕೊಂಡು ಸೀಟಿಗೆ ಮರಳುವಷ್ಟರಲ್ಲಿ ಪೂರ್ತಿ ಬೆವೆತಿದ್ದರು. ಇನ್ನೂ ಅಯ್ಯರನ್ನು ಕಾಣದ್ದು ಅವರನ್ನು ನಿಜಕ್ಕೂ ಕಂಗಾಲಾಗಿಸಿತು. “ಏ…ಸುಬ್ಬೂ, ಗಣೇಶಾ ನಿಮ್ಮಪ್ಪ ಎಲ್ಲಿದಾರೆ ಸ್ವಲ್ಪ ನೋಡ್ರೋ…ಬೇಜವಾಬ್ದಾರಿ ಮುಂಡೇವಾ… ಇಲ್ಲೊಬ್ಳು ಅಷ್ಟೊತ್ತಿಂದ ಬಡ್ಕೋತಿದೀನಿ ಒಂದಕ್ಕಾದ್ರೂ ಗ್ಯಾನ ಬೇಡಾ…” ಗಟ್ಟಿದನಿಯಲ್ಲಿ ಕಿರುಚಿದರು. “ಯಾವತ್ತೂ ಅಷ್ಟೇ ನಿಮ್ಗಳ್ಗೆ, ನನ್ಮಾತೂ ಅಂದ್ರೆ ಸಸಾರ, ನಿಮ್ಮಪ್ಪ ಕಾಣಿಸ್ತಿಲ್ಲ ಸೊಲ್ಪ ನೋಡ್ರೋ” ಎಂದಾಗ ಕಣ್ಣಲ್ಲಿ ನೀರು ತುಂಬಿ ಸ್ವರ ಗದ್ಗದಿತವಾಗಿತ್ತು.

ವಾತಾವರಣ ಒಮ್ಮೆಗೇ ಗಂಭೀರವಾಯಿತು. ಇದೀಗ ಮೊದಲಬಾರಿಗೆ ರೈಲಲ್ಲಿ ಅಯ್ಯರ್ ಕಾಣದಿದ್ದುದು ಎಲ್ಲರ ಗಮನಕ್ಕೆ ಬಂತು. ಒಡನೆ ಒಂದಿಬ್ಬರು ಹುಡುಗರು ಕೆಳಗಿಳಿದು ಪ್ಲಾಟ್ಫಾರಮ್ಮಿನ ಕೊಳಾಯಿಗಳ ಬಳಿ ಅಯ್ಯರಿಗಾಗಿ ಹುಡುಕತೊಡಗಿದರು. ಬೇರೆ ನಾಲ್ಕಾರು ಜನ ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಹೋಗಿ ಎಲ್ಲ ಪಾಯ್ಖಾನೆಗಳಲ್ಲೂ ಪರಶೀಲಿಸಲು ಶುರುಮಾಡಿದರು. ಅಷ್ಟರಲ್ಲಿ ರೈಲು ನಿಧಾನಕ್ಕೆ ವಿಜಯವಾಡ ಸ್ಟೇಷನ್ನಿನಿಂದ ಹೊರಟಿತು. ಪ್ಲಾಟ್ಫಾರಮ್ ಕೊಳಾಯಿಗಳ ಬಳಿ ಅಯ್ಯರನ್ನು ಹುಡುಕಹೋಗಿದ್ದ ಹುಡುಗರು ಬೇಗ ಓಡಿಬಂದು ಚಲಿಸುತ್ತಿದ್ದ ರೈಲು ಹತ್ತಿಕೊಂಡರು. ಸೀತಮ್ಮ ಹೋ…ಎಂದು ಅಳಲು ಶುರುವಿಟ್ಟುಕೊಂಡರು. ಹಿಂದೆಯೇ ಬೃಂದಾ ಮತ್ತವಳ ತಂಗಿ ಶ್ರುತಿ ದನಿಗೂಡಿಸಿದರು. ಸುಬ್ಬು, ಗಣೇಶರೊಂದಿಗೆ ಪಕ್ಕದ ಸೀಟುಗಳ ಜೊತೆಯ ಬರ್ತಿನಲ್ಲಿದ್ದ ಕಿರಿಮಗಳು ಶಾರದೆಯ ರೋದನವೂ ಸೇರಿಕೊಂಡಿತು.

ಪಾಯ್ಖಾನೆಶೋಧಕ್ಕೆ ಹೋದವರಿಗೆ ಫಲಸಿಗುವಂತೆ ಕಾಣುತ್ತಿರಲಿಲ್ಲ. ಕೆಲವೊಂದು ಕದವಿಕ್ಕಿದ ಲೆಟ್ರೀನುಗಳು ಭರವಸೆ ಮೂಡಿಸುತ್ತಿದ್ದುವಾದರೂ ಉತ್ಸಾಹದಿಂದ ಬಾಗಿಲುಬಡಿದಾಗ ಒಳಗೆ ಕಾರ್ಯನಿರತರಾದವರ ಕೆಲಸಕ್ಕೆ ಭಂಗವಾಗಿ ಕೆರಳುತ್ತಿದ್ದರು. ಹೆಚ್ಚಿನವರಿಂದ ಬಾಯಿಗೆ ಬಂದಂತೆ ಬೈಸಿಕೊಂಡದ್ದೇ ಬಂತು. ಎರಡೂ ಕಡೆಯ ಎಲ್ಲ ಟಾಯ್ಲೆಟ್ಟುಗಳ ಪರಿಶೀಲನೆ ಮಗಿದು ಹುಡುಕಹೋದವರು ನಿರಾಶರಾಗಿ ಮರಳಿದರು. ಇದ್ದ ಒಂದು ಆಸೆಯೂ ಕಮರಿ ಹೋಯಿತು. ಯಾರಿಗೂ ಏನೂ ಮಾತು ತೋಚಲಿಲ್ಲ. “ಬೆಳಗ್ಗೆ ಮೊದಲು ಯಾರು ಬೋಗಿಯ ಬಾಗಿಲು ತೆಗೆದದ್ದು?” ಸೂಪರ್ವೈಸರ್ ತಂಗಮಣಿ ತಮ್ಮಷ್ಟಕ್ಕೇ ಹೇಳಿಕೊಂಡರು. “ನಮ್ಕಡೆ ಬಾಗ್ಲನ್ನ ಯಾರೋ ವಿಜಯವಾಡದಲ್ಲಿ ಇಳಿದ ಪ್ಯಾಸೆಂಜರ್ ತೆಗ್ದಿದ್ದನ್ನ ನಾ ನೋಡ್ದೆ ಸರ್” ಶರವಣ ಉತ್ತರಿಸಿದ. “ಯಜಮಾನರ ಹತ್ರದ್ ಬಾಗ್ಲು?!” ತಂಗಮಣಿ ಕೇಳಿದರು. “ನಲ್ಲಿ ಹತ್ರ ರಶ್ ನೋಡಿ ನಾನೇ ತೆಗ್ದಿದ್ದು… ಬಾಗ್ಲು ಮುಚ್ಚೇ ಇತ್ತು” ಗಣೇಶ ಹೇಳಿದ. ಬೋಗಿಗಿದ್ದ ನಾಲ್ಕು ಬಾಗಿಲಲ್ಲಿ ಎರಡುಮಾತ್ರ ಪ್ಲಾಟ್ಫಾರಂ ಕಡೆಗಿದ್ದುವು. ಎರಡೂ ಬಾಗ್ಲೂ ಮುಚ್ಚೇ ಇದ್ದು, ಟಾಯ್ಲೆಟ್ಟಲ್ಲೂ ಇಲ್ಲಾಂದ್ರೆ ಮನುಷ್ಯ ಮಾಯವಾಗಿದ್ದಾದ್ರೂ ಹ್ಯಾಗೆ?!” ಅಯ್ಯರ್ಸ್ ಕೆಫೆ ಹೆಡ್ಕುಕ್ ವೇಲಾಯುಧನ್ ಹೇಳಿದರು. ಹತಾಶನಾಗಿ ಕುಳಿತಿದ್ದ ಮದುವೆಗಂಡು ಸುಬ್ಬು ಇದ್ದಕ್ಕಿದ್ದಂತೆ ಎದ್ದು ತಲೆ ತಲೆ ಚಚ್ಚಿಕೊಂಡು ದಿಕ್ಕೆಟ್ಟ ಹುಚ್ಚನಂತೆ ಅತ್ತಿತ್ತ ಅಡ್ಡಾಡತೊಡಗಿದ. ಅದೇನು ತೋಚಿತೋ?! ನೇರ ಹೋಗಿ ರೈಲಿನಲ್ಲಿದ್ದ ಕೆಂಪು ಚೈನನ್ನೆಳೆದು ಬಿಟ್ಟ. ಒಡನೆ ರೈಲಿನ ಚಲನೆಯ ವೇಗ ಕುಂಠಿತಗೊಂಡು ಸ್ವಲ್ಪದೂರದಲ್ಲಿ ನಿಧಾನಕ್ಕೆ ರೈಲು ನಿಂತಿತು.

ಗಾಡಿ ನಿಂತ ಜಾಗದಲ್ಲಿ ರೈಲು ಹಳಿಯ ಒಂದು ಕಡೆ ದೊಡ್ಡ ದೊಡ್ಡ ಬೋಳು ಗುಡ್ಡಗಳಿದ್ದರೆ ಇನ್ನೊಂದು ಕಡೆ ಕಂಡಷ್ಟೂ ದೂರಕ್ಕೆ ಬರೀ ಬೆಂಗಾಡು. ಕೆಲವೇ ನಿಮಿಷಗಳಲ್ಲಿ ಇಬ್ಬರು ರೈಲ್ವೇ ಅಧಿಕಾರಿಗಳು ನೇರವಾಗಿ ಇದೇ ಬೋಗಿಯತ್ತ ಬಂದವರೇ “ಏ ಯಾರ್ರೀ ಅದೂ…ಚೈನೆಳ್ದಿದ್ದೂ… ಯಾಕ್ರೀ… ಏನಾಯ್ತ್ರೀ…” ಅಸಹನೆಯಿಂದ ಕೇಳುತ್ತಲೇ ಮೆಟ್ಟಿಲುಹತ್ತಿ ಒಳಬಂದು “ಯಾವೋನ್ರೀ ಅದು ಚೈನೆಳ್ದಿದ್ದೂ” ಅಂದರು ಕಡಕ್ಕಾಗಿ. ಹೆಂಗಸರ ಅಳು ಜೋರಾಯಿತು. “ನಾನು…” ಎನ್ನುತ್ತಾ ಸುಬ್ಬು ಎದ್ದು ನಿಂತ. “ಅದೇ ಯಾಕೇಂತ” ಸಿಟ್ಟಿನಿಂದ ಕೇಳಿದರು. “ಯಾಕೇಂದ್ರೇ… ನಾವ್ ವಾಪಸ್ ಹೋಗ್ಬೇಕೂ…ನಮ್ಮಪ್ಪನ್ ಹುಡುಕ್ಬೇಕೂ ಅದುಕ್ಕೆ” ತನ್ನ ಕೀರಲು ದನಿಯಲ್ಲಿ ಸುಬ್ಬು ದಿಟ್ಟವಾಗಿ ಉತ್ತರಿಸಿದ. ಅಧಿಕಾರಿಗಳಿಗೆ ತಲೆ ಬುಡ ತಿಳಿಯಲಿಲ್ಲ. ಅನುಮಾನದಿಂದ ಉಳಿದವರತ್ತ ನೋಡಿದರು. ತಂಗಮಣಿ ಮತ್ತು ವೇಲಾಯುಧನ್ ಅಧಿಕಾರಿಗಳಿಗೆ ಪರಿಸ್ಥಿತಿ ವಿವರಿಸಿ ಹೇಳಿದರು. ಅಧಿಕಾರಿಗಳಿಬ್ಬರೂ ತಮ್ಮಲ್ಲೇ ಏನೋ ಮಾತನಾಡಿಕೊಂಡರು. ನಂತರ ಇವರ ಬಳಿಬಂದ ಅಧಿಕಾರಿ “ಹಂಗೆಲ್ಲಾ ಸುಮ್ಸುಮ್ನೆ ಚೈನೆಳಿಬಾರ್ದು ಕಣ್ರೀ….ಇಂಥದ್ದೇನಾದ್ರೂ ಇದ್ರೆ ನಮ್ಗಮನಕ್ಕೆ ತರ್ಬೇಕೂರೀ, ಜಿನೈನ್ ಕೇಸೂಂತ ಬಿಡ್ತಿದೀವಿ ಇಲ್ದೇ ಇದ್ರೆ ದಂಡ ಬೀಳ್ತಿತ್ತುಗೊತ್ತಾಯ್ತಾ…” ಇನ್ನೊಬ್ಬ ಅಧಿಕಾರಿ “ಆಯ್ತು ಬಿಡಿ ಇನ್ನೊಂದ್ ಅರ್ಧ ಘಂಟೆ ಕಳೆದ್ರೆ ಹನುಮಾನ್ ಜಂಕ್ಷನ್ ಅಂತ ಸಿಕ್ಕತ್ತೆ. ಅಲ್ಲಿ ನಿಮ್ಗೆ ಎಲ್ಲಾ ಕಡೆಗೂ ಬಸ್ಸೂ ಟ್ರೈನೂ ಎಲ್ಲಾ ಸಿಕ್ಕತ್ತೆ. ಅಲ್ಲಿಳ್ಕೊಂಡದೇನ್ಬೇಕೋ ಮಾಡಿ.” ಎಂದರು. ಮೊದಲ ಅಧಿಕಾರಿ ಯಾವುದೋ ಫಾರಮ್ಮಿನಲ್ಲಿ ಸುಬ್ಬುವಿನ ಸೈನ್ ಪಡೆದು “ಹನುಮಾನ್ ಜಂಕ್ಷನ್ನಲ್ಲಿ ರೈಲ್ವೇ ಪೋಲೀಸಿಗೆ ಮಿಸ್ಸಿಂಗ್ ಕಂಪ್ಲೈಂಟ್ ಕೊಡ್ಬೇಕು, ಗೊತ್ತಾಯ್ತಾ…ನಿಂ ಪುಣ್ಯ ಅಲ್ಲಿ ಗಾಡಿ ಇಪ್ಪತ್ನಿಂಷ ಹಾಲ್ಟ್…ಅಲ್ಲೀತಂಕ ಅದೇನ್ಮಾಡ್ತೀರೋ ವಿಚಾರ ಮಾಡಿ” ಎಂದರು. ಇಬ್ಬರು ಅಧಿಕಾರಿಗಳೂ ಟ್ರೈನಿಂದಿಳಿದು ಓಡುನಡಿಗೆಯಲ್ಲಿ ತಮ್ಮ ಬೋಗಿಯತ್ತ ಧಾವಿಸಿದರು. ಒಂದೈದು ನಿಮಿಷದಲ್ಲಿ ರೈಲು ಮತ್ತೆ ಚಲಿಸಲಾರಂಭಿಸಿತು.

ಅಧಿಕಾರಿಗಳು ಇಳಿದುಹೋದದ್ದೇ ತಡ ಸುಬ್ಬು ಆವೇಶದಿಂದ “ಎಲ್ಲಾರೂ ಲಗೇಜುಗಳು ರೆಡಿ ಮಾಡ್ಕಳಿ ಅರ್ಧ ಘಂಟೇಲಿ ಇಳೀಬೇಕು ಜಂಕ್ಷನ್ಬರುತ್ತೆ” ಅಂದ. ಬೋಗಿಯಲ್ಲಿ ಅಸಹನೀಯ ಮೌನ ಕವಿಯಿತು. ತಂಗಮಣಿ ಮತ್ತು ವೇಲಾಯುಧನ್ ಮುಖಮುಖ ನೋಡಿಕೊಂಡರು. ಆತ್ಮೀಯತೆಯಿಂದ ಸುಬ್ಬುವಿನ ಬೆನ್ನಿನಮೇಲೆ ಕೈಯಿಟ್ಟು “ಚಿಕ್ಕೆಜ್ಮಾನ್ರೇ ನಿಮ್ಮದು ಬಿಸೀರಕ್ತ, ಇಂಥಾ ಸಮಯದಲ್ಲಿ ಸ್ವಲ್ಪ ಸಂಯಮ ಬೇಕು. ನೀವೇ ಹೀಗ್ ಹ್ಯಾಗ್ಯಾಗೋ ಆಡುದ್ರೆ ಹ್ಯಾಗೇಂತೀನಿ? ಸ್ವಲ್ಪ ನನ್ಮಾತ್ ಕೇಳೀ ದೇವ್ರೂ…” ಅಂದರು. ತಂಗಮಣಿ ತನ್ನನ್ನು ಗೌರವಿಸಿದ್ದು ಸುಬ್ಬುವಿಗೆ ಹಿಡಿಸಿತು. ಆದರೆ ’ಹೀಗ್ ಹ್ಯಾಗ್ಯಾಗೋ ಆಡುದ್ರೆ ಹ್ಯಾಗೆ’ ಅಂದಿದ್ದು ಅಷ್ಟು ಹಿಡಿಸಲಿಲ್ಲ. ಮೊದಲೇ ಒತ್ತಡದಲ್ಲಿದ್ದಿದ್ದರಿಂದ ಮಾತು ಬೆಳೆಸದೆ “ನೀವೇ ಹೇಳಿ ಅಣ್ಣ ಈಗೇನ್ಮಾಡೋದೂ? ಅಪ್ಪಾನೇ ಇಲ್ದೆ ಈಗ ವಿಶಾಖಪಟ್ಟಣಕ್ಕೆ ಹ್ಯಾಗ್ಹೋಗೋದು? ನಂಗಂತೂ ದಿಕ್ಕೇ ತೋಚ್ತಿಲ್ಲ” ಅಂದ.

ಮುಂದಿನ ಇಪ್ಪತ್ತು ನಿಮಿಷದಲ್ಲಿ ಸೂಪರ್ವೈಸರ್ ತಂಗಮಣಿ ನೇತೃತ್ವದಲ್ಲಿ ತುರ್ತಾಗಿ ಆಗಬೇಕಿದ್ದ ಕೆಲಸಗಳು ಮತ್ತು ನಡೆಯಬೇಕಿದ್ದ ಕಾರ್ಯಾಚರಣೆಯ ಸ್ಥೂಲ ಸ್ವರೂಪದ ಚರ್ಚೆನಡೆಯಿತು. ಹನುಮಾನ್ ಜಂಕ್ಷನ್ನಲ್ಲಿ ಇಳಿದೊಡನೆ ಮೊದಲು ರೈಲ್ವೇ ಪೋಲೀಸಿಗೆ ಕಂಪ್ಲೈಂಟ್ ಕೊಡುವುದೆಂದಾಯಿತು. ತಂಗಮಣಿ ಮತ್ತು ವೇಲಾಯುಧನ್ ಪ್ರಯಾಣ ಮೊಟಕುಗೊಳಿಸಿ ಮತ್ತೆ ಬಂದದಾರಿಯಲ್ಲೇ ಹಿಂತಿರುಗಿ ಹೊರಟು ವಿಜಯವಾಡಾದಿಂದ ಮದ್ರಾಸಿನವರೆಗೆ ಬರುವಾಗ ಟ್ರೈನು ನಿಂತಂಥಾ ಪ್ರತಿ ಸ್ಟೇಷನ್ನಿಗೂ ಹೋಗಿ ಹುಡುಕುವ ಯೋಜನೆ ಹಾಕಿಕೊಂಡರು. ಎಲ್ಲಕ್ಕೂ ಒಪ್ಪಿದ ಸುಬ್ಬು ಅವರಿಬ್ಬರ ಜೊತೆ ತಾನೂ ಬರುವುದಾಗಿ ಹಠ ಹಿಡಿದ. “ಅಲ್ಲಾ ಚಿಕ್ಕೆಜಮಾನ್ರೇ ದೊಡ್ಡೋರು ತಪ್ಪಿಸ್ಕಂಡಿರೋ ಈ ಹೊತ್ನಲ್ಲಿ ನೀವೂ ನಮ್ಜೊತೆ ಬಂದ್ಬುಟ್ರೆ ಕುಟುಂಬದ ಜೊತೆ ಗಂಡ್ದಿಕ್ಕಾಗಿ ಎಲ್ರಿಗೂ ಧೈರ್ಯ ಹೇಳೋರ್ಯಾರು ಹೇಳಿ” ಎಂದು ತಂಗಮಣಿಯವರು ಪುಸಲಾಯಿಸಿದರು. “ಮದುವೆ ಇರೋದು ನಾಳೇ ತಾನೇ ಚಿಕ್ಕೆಜಮಾನ್ರೇ ಎಲ್ರಜೊತೆ ನೀವೀಗ ವಿಶಾಖಪಟ್ಟಣಕ್ಕೆ ಹೋಗಿ. ಯಾರಿಗ್ಗೊತ್ತು? ಅದೃಷ್ಟ ಚೆನ್ನಾಗಿದ್ರೆ ಅಷ್ಟರಲ್ಲಿ ದೊಡ್ಡೋರ್ನೂ ಕರ್ಕಂಡು ನಾವೂ ಮದ್ವೆಹೊತ್ಗಲ್ಲರ್ತೀವಿ. ಎಲ್ಲಾ ಒಳ್ಳೇದೇ ಆಗತ್ತೆ.” ಅಂದರು ವೇಲಾಯುಧನ್. ಸುಬ್ಬು ಗೊಂದಲಕ್ಕೆ ಬಿದ್ದಂತಿತ್ತು. “ನೀವೇನ್ಹೇಳ್ತೀರಮ್ಮ?” ವೇಲಾಯುಧನ್ ಮುಂದುವರೆದು ಸೀತಮ್ಮನವರನ್ನು ಕೇಳಿದರು. ಅದುವರೆಗೂ ಅಳುವದನ್ನು ಮರೆತು ಕಣ್ಣೂ ಬಾಯಿಬಿಟ್ಕಂಡು ನಡೆಯುತ್ತಿದ್ದ ಚರ್ಚೆಯನ್ನು ಗಮನಿಸುತ್ತಿದ್ದ ಸೀತಮ್ಮ ದೊಡ್ಡ ತಪ್ಪುಮಾಡಿದವರಂತೆ ಮತ್ತೆ ಹೋ…ಎಂದು ಅಳಲು ಶುರುವಿಟ್ಟುಕೊಂಡರು. ಅಷ್ಟರಲ್ಲಿ ರೈಲು ಹನುಮಾನ್ ಜಂಕ್ಷನ್ ಸಮೀಪಿಸಿತ್ತು.

ತಂಗಮಣಿ ಯಾರೂ ರೈಲಿಂದ ಇಳಿಯದೆ ತಮ್ಮ ತಮ್ಮ ಸೀಟಿನಲ್ಲೇ ಕುಳಿತಿರಬೇಕೆಂದು ಎಲ್ಲರಿಗೂ ತಾಕೀತುಮಾಡಿ ತಮ್ಮೊಂದಿಗೆ ಸುಬ್ಬು, ವೇಲಾಯುಧನ್, ಶರವಣರನ್ನು ಮಾತ್ರ ಕರೆದುಕೊಂಡು ಹನುಮಾನ್ ಜಂಕ್ಷನ್ ರೈಲ್ವೇಸ್ಟೇಷನ್ ಪೋಲೀಸ್ ಚೌಕಿಗೆ ಹೋದರು. ಅದೇ ರೈಲಲ್ಲಿ ಸುಬ್ಬು ಉಳಿದವರೊಂದಿಗೆ ವಿಶಾಖಪಟ್ಟಣಕ್ಕೆ ಪ್ರಯಾಣ ಮುಂದುವರೆಸುವುದೆಂದು ನಿರ್ಧಾರವಾಗಿದ್ದರಿಂದ ತಂಗಮಣಿಯವರು ಪೋಲೀಸರಿಗೆ ವಿಷಯ ತಿಳಿಸಿ ಸಹಕರಿಸಬೇಕೆಂದು ವಿನಂತಿಸಿದರು. ಪೋಲೀಸರು ಪಟಪಟನೆ ಅಗತ್ಯ ಮಾಹಿತಿಗಳನ್ನು ಪಡೆದು ಅಯ್ಯರಿನ ಫೋಟೋ ಕೊಟ್ಟರೆ ಅನುಕೂಲವಾಗುವುದೆಂದರು. ಹೋದವರಬಳಿ ಅಯ್ಯರ್ ಫೋಟೋ ಇರಲಿಲ್ಲ. ಶರವಣನನ್ನು ರೈಲಿನಬಳಿ ಹೋಗಿ ಅಯ್ಯರ್ ಫೋಟೋ ಏನಾದರೂ ಇದ್ದರೆ ತರಲು ಹೇಳಿ ಕಳಿಸಿದರು. ಶರವಣ ತಡಮಾಡದೆ ರೈಲು ನಿಂತಿದ್ದ ಮೂರನೇ ಪ್ಲಾಟ್ಫಾರಮ್ಮಿಗೆ ಓಡಿದ. ಬೋಗಿಯಬಳಿ ಹೋಗಿ ಕಿಟಕಿಯ ಪಕ್ಕ ನಿಂತು “ದೊಡ್ಡೆಜಮಾನ್ರ ಫೋಟೋ ಯಾವ್ದಾನ ಇದ್ರೆ ಬೇಕಂತೆ” ಎಂದ ಏದುಸಿರು ಬಿಡುತ್ತಾ. ಒಳಗಿದ್ದವರು ಒಬ್ಬರಮುಖ ಒಬ್ಬರು ನೋಡಿಕೊಂಡರು. ತಲೇಮೇಲೆ ಕೈಹೊತ್ತು ಕುಳಿತಿದ್ದ ಸೀತಮ್ಮ ಮೇಲೆದ್ದು ಸೀಟಿನಡಿಯಲ್ಲಿದ್ದ ಬ್ಯಾಗು ತೆಗೆದರು. ಬ್ಯಾಗಿನೊಳಗಿದ್ದ ಅವರ ಪರ್ಸು ತೆಗೆದು ಅದರಲ್ಲಿದ್ದ ಯಜಮಾನರ ಫೋಟೋ ತೆಗೆದುಕೊಟ್ಟರು. ಸೀತಮ್ಮನವರಿಂದ ಫೋಟೋ ಈಸಿಕೊಂಡ ಬೃಂದಾ ಒಮ್ಮೆ ಅದನ್ನು ನೋಡಿದಳು. ಅದರಲ್ಲಿನ್ನೂ ಅಯ್ಯರಿಗೆ ತುಂಬು ಯೌವ್ವನ…ಹಳೇ ಫೋಟೋ ಅಂದುಕೊಂಡು ಅದನ್ನು ಶರವಣನ ಕೈಗಿತ್ತಳು. ಅದಕ್ಕೇ ಕಾಯುತ್ತಿದ್ದ ಶರವಣ ಪೋಲೀಸ್ ಚೌಕಿಗೆ ಓಡಿದ. ಮೊಮ್ಮೊಕ್ಕಳಾದ ಮೇಲೂ ಅಮ್ಮ ಪರ್ಸಿನಲ್ಲಿ ಗಂಡನ ಫೋಟೋ ಇಟ್ಟುಕೊಂಡಿದ್ದು ಕಂಡ ಬೃಂದಾ ಚಕಿತಗೊಳ್ಳದಿರಲಿಲ್ಲ.

ಶರವಣ ಫೋಟೋ ತೆಗೆದುಕೊಂಡು ಹೋಗುವುದರಲ್ಲಿ ಪೋಲೀಸರು ಅಗತ್ಯವಿದ್ದಲ್ಲೆಲ್ಲಾ ಸುಬ್ಬವಿನ ಸಹಿ ತೆಗೆದುಕೊಂಡಿದ್ದರು. ಶರವಣ ಬಂದವನೇ ಯಜಮಾನರ ಫೋಟೋ ತಲುಪಿಸಿದ. ಫೋಟೋ ನೋಡಿದ ಪೋಲೀಸರು “ಅಲ್ರೀ ಮಿಸ್ಸಾಗಿರೋರ್ಗೆ ವಯಸ್ಸು ಅರವತ್ತೈದೂಂದ್ರಲ್ರೀ…ಇದ್ಯಾವ್ದೂ ಹುಡ್ಗನ ಫೋಟೋ ಇರೋ ಹಂಗಿದ್ಯಲ್ರೀ” ಅಂದರು. ಸದ್ಯಕ್ಕೆ ಅವರಬಳಿ ಬೇರಾವ ಫೋಟೋಗಳೂ ಇರಲಿಲ್ಲವೆಂದು ತಂಗಮಣಿಯವರು ತಿಳಿಸಿದಾಗ ಏನೂ ಇಲ್ಲದಿರುವುದಕ್ಕಿಂತ ಹಳೇ ಫೋಟೋನೇ ವಾಸಿ ಅಂದುಕೊಂಡು ಸುಬ್ಬು ಸಲ್ಲಿಸಿದ ಅರ್ಜಿಗೆ ಅದನ್ನು ಪಿನ್ ಮಾಡಿಕೊಂಡರು. ಸುಬ್ಬೂ ಪ್ರಯಾಣ ಮುಂದವರೆಸಲು ಮರಳಬಹುದೆಂದೂ ಉಳಿದ ಕೆಲಸವನ್ನು ತಂಗಮಣಿಯವರೊಟ್ಟಿಗೆ ಕುಳಿತು ಮಾಡಿಕೊಳ್ಳುವುದಾಗಿ ಹೇಳಿ ಸುಬ್ಬುವನ್ನು ಕಳಿಸಿಕೊಟ್ಟರು. ಪೋಲೀಸರಿಗೆ ಮತ್ತೆ ಬರು ವುದಾಗಿ ಹೇಳಿ ತಂಗಮಣಿ ಸುಬ್ಬು ಮತ್ತು ಶರವಣರೊಂದಿಗೆ ಪೋಲೀಸ್ ಚೌಕಿಯಿಂದ ಹೊರಬಂದರು. ಅದೇ ವೇಳೆಗೆ ತಿಂಡಿ ಕಟ್ಟಿಸಿಕೊಂಡುಬರಲು ಹೋಗಿದ್ದ ವೇಲಾಯುಧನ್ ಸಹ ಬಂದರು. ಶರವಣನ ಕೈಗೆ ಪಾರ್ಸಲ್ ತಿಂಡಿಗಳಿದ್ದ ಎರಡು ದೊಡ್ಡದಾದ ಕವರುಗಳನ್ನು ಹಸ್ತಾಂತರಿಸಿ “ಯಾರೂ ಹಸ್ಕೊಂಡಿದ್ದು ಸಾಧ್ಸೋದೇನೂ ಇಲ್ಲ ಗೊತ್ತಾಯ್ತಾ… ಎಲ್ರಿಗೂ ಹೊತ್ತಿಗೆ ಸರೀಗೆ ಒಂದೆರಡ್ತುತ್ತಾದ್ರೂ ಒಳಕ್ ಹೋಗೋ ಹಾಗೆ ನೋಡ್ಕಳಯ್ಯಾ…ಯಾರೂ ಇಂಥ ಹೊತ್ನಲ್ಲಿ ಅದ್ಬೇಕು ಇದ್ಬೇಕು ಕೇಳಲ್ಲ, ನೀನೇ ನೋಡಿ ಒತ್ತಾಯಮಾಡಿ ತಿನ್ನುಸ್ಬೇಕು, ಅರ್ಥವಾಯ್ತಾ…” ಎಂದಾಗ ಶರವಣ ಸರಿಯೆಂದು ತಲೆಯಾಡಿಸಿ ಕವರುಗಳನ್ನು ಹಿಡಿದು ರೈಲಿನತ್ತ ಓಡಿದ. ತಂಗಮಣಿ ಸುಬ್ಬುವಿಗೆ ಧೈರ್ಯತುಂಬುವ ಮಾತನಾಡಿ ದೇವರಮೇಲೆ ಭಾರಹಾಕಿ ವಿಶಾಖಪಟ್ಟಣಕ್ಕೆ ಹೋಗಬೇಕೆಂದೂ ಹಿಂದೆಯೇ ತಾವು ಅಯ್ಯರೊಂದಿಗೆ ಬಂದು ಸೇರುವುದಾಗಿ ಹೇಳಿದರು. ಓಡುತ್ತಾ ಬಂದ ಸುಬ್ಬು ಶರವಣನ ಹಿಂದೆಯೇ ಬೋಗಿ ಹತ್ತಿಕೊಳ್ಳುವುದಕ್ಕೂ ರೈಲು ಹನುಮಾನ್ ಜಂಕ್ಷನ್ ಬಿಟ್ಟು ಹೊರಡುವುದಕ್ಕೂ ಸರಿಯಾಯಿತು.

ನಾರಾಯಣ ಎಮ್ ಎಸ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x