ಕಥಾಲೋಕ

ಮರೆಯಲಾಗದ ಮದುವೆ (ಭಾಗ 5): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ

-೪-

ದಿನಕಳೆದಂತೆ ಕಾವಶ್ಶೇರಿಯ ದನದಕೊಟ್ಟಿಗೆಯಲ್ಲಾದ ಮುಖಭಂಗದ ನೆನೆಪು ಮಾಸಿದಂತಾಗಿ ಕೊನೆಗೆ ಗುರುತುಸಿಕ್ಕದಂತೆ ಅಯ್ಯರ್ ಮನದಾಳದಲ್ಲೆಲ್ಲೋ ಹೂತುಹೋಗಿತ್ತು. ಹೆಚ್ಚೂಕಮ್ಮಿ ವರುಷ ಎರಡು ವರುಷಕ್ಕೊಂದರಂತೆ ಅಯ್ಯರ್ ಒಬ್ಬೊಬ್ಬರೇ ಹೆಣ್ಣುಮಕ್ಕಳ ಮದುವೆ ಮಾಡಿಮುಗಿಸಿದರು. ಅವುಗಳ ಪೈಕಿ ಯಾವುದಾದರೊಂದು ಮದುವೆಗೆ ಮುಕ್ತಾ ಬಂದಿದ್ದರೆ ಮಾಸಿದ ನೆನಪು ಮತ್ತೆ ಹಸಿರಾಗುತ್ತಿತ್ತೇನೋ! ಆದರೆ ಹೈದ್ರಾಬಾದಿನ ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದ ಮುರಳೀಧರರಿಗೆ ಉದ್ಯೋಗದಲ್ಲಿ ಭಡ್ತಿ ದೊರೆತಂತೆಲ್ಲಾ ಮೂರುನಾಲ್ಕು ವರ್ಷಗಳಿಗೊಮ್ಮೆ ಬಾಂಬೆ, ಡೆಲ್ಲಿ, ಕಲ್ಕತ್ತಾ, ಎಂದು ವರ್ಗವಾಗುತ್ತಲೇ ಇತ್ತು. ಅಲ್ಲದೇ ಉದ್ಯೋಗನಿಮಿತ್ತ ಕಾಲಿಗೆಚಕ್ರಕಟ್ಟಿಕೊಂಡಂತೆ ಸುತ್ತುತ್ತಿದ್ದ ಅವರಿಗೆ ಮದುವೆ ಮುಂಜಿಗಳೆಂದು ದೂರದೂರುಗಳಿಗೆ ಬರಲು ರಜೆಯೂ ಸಿಕ್ಕುತ್ತಿರಲಿಲ್ಲ. ಇತ್ತ ಅಯ್ಯರ್ ಸಹ ವ್ಯವಹಾರ ವಿಸ್ತರಿಸುತ್ತಾ ಏಳಿಗೆಯ ಪಥದಲ್ಲಿ ವ್ಯಸ್ತರಾಗಿದ್ದ ಕಾರಣ ಹತ್ತಾರುವರ್ಷಗಳಿಂದ ಮುಕ್ತಾಳ ಕುಟುಂಬದೊಂದಿಗೆ ಸಂಪರ್ಕಕ್ಕೆ ಆವಕಾಶವೇ ಆಗಿರಲಿಲ್ಲ. ಈ ಅವಧಿಯಲ್ಲಿ ಅಪರೂಪಕ್ಕೆಂಬಂತೆ ಆಗೊಮ್ಮೆ ಈಗೊಮ್ಮೆ ನಡೆದಿದ್ದ ಪತ್ರವ್ಯವಹಾರದಿಂದ ಮುಕ್ತಳಿಗೆ ಒಂದು ಹೆಣ್ಣೂ ಒಂದು ಗಂಡೂ ಆಗಿತ್ತೆನ್ನುವ ಮಾಹಿತಿ ಮಾತ್ರ ದೊರೆತಿತ್ತು. ಇತ್ತೀಚೆಗೆ ಉನ್ನತಹುದ್ದೆಗೆ ಭಡ್ತಿ ಪಡೆದ ಮುರಳೀಧರರು ಬೆಂಗಳೂರಿನಲ್ಲಿ ನೆಲೆಸಿರುವುದೂ ತಿಳಿದುಬಂದಿತ್ತು.

ಆದರೆ ಎಂದಿನಂತೆ ಸಾಗಿದ್ದ ಅಯ್ಯರ್ ಬದುಕಿನ ಲಯ ಮತ್ತೆ ಕೆಟ್ಟದ್ದು ಈಗೊಂದೆರಡು ವರ್ಷಗಳ ಕೆಳಗೆ ಸಣ್ಣ ಬಿರುಗಾಳಿಯಂಥದ್ದು ಬೀಸಿದಾಗ. ಆದದ್ದಿಷ್ಟು. ಅದೊಂದು ದಿನ ಅಯ್ಯರ್ ಎಂದಿನಂತೆ ಹೋಟೆಲಿನ ಕೆಲಸದಲ್ಲಿ ಮಗ್ನರಾಗಿದ್ದರು. ಟ್ರಿಣ್… ಟ್ರಿಣ್ ಎಂದ ಫೋನೆತ್ತಿದಾಗ ಮಾತನಾಡಿದ ಮಗ ಗಣೇಶ ತಕ್ಷಣವೇ ಹೋಟೆಲಿನಿಂದ ಸ್ವಲ್ಪ ಸ್ವೀಟುತೆಗೆದುಕೊಂಡು ತಡಮಾಡದೇ ಮನೆಗೆ ಬರಬೇಕೆಂದೂ ಮನೆಯಲ್ಲಿ ಅವರಿಗೊಂದು ಅಚ್ಚರಿಕಾದಿದೆಯೆಂದೂ ಹೇಳಿ ಫೋನಿಟ್ಟುಬಿಟ್ಟ. ಮತ್ತೆ ಫೋನಾಯಿಸಿ ವಿಚಾರ ತಿಳಿಯಲು ಅಯ್ಯರ್ ಮನೆಯಲ್ಲಿ ಫೋನಿರಲಿಲ್ಲ. ಕುತೂಹಲ ಹತ್ತಿಕ್ಕಲಾರದೆ ಸ್ವೀಟುಹಿಡಿದು ಮನೆಯತ್ತ ಧಾವಿಸಿದ ಅಯ್ಯರ್ ಹೊರಗೆ ನಿಂತ ಟ್ಯಾಕ್ಸಿ ಕಂಡು ಯಾರು ಬಂದಿರಬಹುದು… ಎಂದುಕೊಳ್ಳುತ್ತಾ ಮನೆಯೊಳಗೆ ಪ್ರವೇಶಿಸಿದರು. ಮುಕ್ತಾ ಬಂದಿರಬಹುದೆಂಬ ಸಣ್ಣ ಸುಳಿವೂ ಅಯ್ಯರಿಗಿರಲಿಲ್ಲ. ಹಾಗಾಗಿ ಮಗಳು ಯುಕ್ತಾಳೊಂದಿಗೆ ಹೀಗೆ ಅಚಾನಕ್ ಬಂದಿಳಿದಿದ್ದ ಮುಕ್ತಾಳನ್ನು ಕಂಡ ಅಯ್ಯರಿಗೆ ಅರೆಕ್ಷಣ ಹೇಗೆ ಪ್ರತಿಕ್ರಿಯಿಸಬೇಕೆಂದೇ ತಿಳಿಯಲಿಲ್ಲ. ವಿಚಾರಿಸಿದಾಗ ಯುಕ್ತಾ ಕಲಿಯುತ್ತಿದ್ದ ಸಂಗೀತಶಾಲೆಯ ಶಿಕ್ಷಕರು ಮತ್ತು ಶಿಷ್ಯವರ್ಗ ತ್ಯಾಗರಾಜರ ಆರಾಧನೆಗೆಂದು ತಿರುವಯ್ಯಾರಿಗೆ ಬಂದಿದ್ದರೆಂದೂ ಹಾಗೇ ಅಕ್ಕ ಹಾಗೂ ಅಕ್ಕನ ಕುಟುಂಬವನ್ನು ಕಂಡುಹೋಗಲು ಬಂದುದಾಗಿ ಹೇಳಿದರು.
ಸೀತಮ್ಮನ ಹಿಗ್ಗು ಹೇಳತೀರದು. ಅಯ್ಯರ್ ಮುಖವೂ ಮೊರದಗಲವಾಗಿತ್ತು. ಆಧುನಿಕತೆಗೆ ತೆರೆದುಕೊಂಡಿದ್ದ ಹಳ್ಳಿಹುಡುಗಿ ಮುಕ್ತಾ ಸಾಕಷ್ಟು ಬದಲಾಗಿದ್ದಳು. ಬಾಂಬೆ, ಡೆಲ್ಲಿ, ಕಲ್ಕತ್ತಾದಂತ ಮಹಾನಗರಗಳಲ್ಲಿ ಕ್ಲಬ್ಬು, ಕಿಟ್ಟಿಪಾರ್ಟಿಗಳ ಜೀವನಶೈಲಿಗೆ ಹೊಂದಿಕೊಂಡಿದ್ದ ಮುಕ್ತಾಳ ಉಡುಗೆತೊಡುಗೆ ಅವಳ ಸೌಂದರ್ಯಪ್ರಜ್ಞೆಗೆ ಕನ್ನಡಿ ಹಿಡಿಯುವಂತಿತ್ತು. ನಗರದ ನಾಜೂಕು ಅವಳ ಒಟ್ಟಂದಕ್ಕೆ ಪುಟವಿಟ್ಟಂತಿತ್ತು. ನಳನಳಿಸುತ್ತಿದ್ದ ಮುಕ್ತಾಳ ಅಂದಕ್ಕೆ ಅಯ್ಯರ್ ದಂಗುಹೊಡೆದರು. ಇಷ್ಟು ವರ್ಷಗಳ ಬಳಿಕವೂ ಹಾಗೇ ಕಾಪಿಟ್ಟುಕೊಂಡಿದ್ದ ಮುಕ್ತಾಳ ಅಂದವನ್ನು ಬೆರಗಿನಿಂದ ಕಣ್ತುಂಬಿಕೊಂಡರು.

ಸೀತಮ್ಮ ತರಾತುರಿಯಲ್ಲಿ ಲಗುಬಗೆಯಿಂದ ಬಗೆಬಗೆ ಅಡುಗೆಮಾಡಲು ತಯಾರಿ ನಡೆಸುವುದನ್ನು ಕಂಡ ಮುಕ್ತಾ “ಏನೂ ಮಾಡ್ಬೇಡಕ್ಕಾ ಬರೀ ತಿಳ್ಸಾರು ಉಪ್ಪಿನ್ಕಾಯಿ ಸಾಕು, ಬಾಯ್ತುಂಬಾ ಮಾತಾಡೋಣ, ನಂಗೆ ಹೆಚ್ಚು ಟೈಮಿಲ್ಲ ಸಂಜೆ ಹೊತ್ಗೆ ತಿರುವಯ್ಯಾರಲ್ಲಿ ಇರ್ಬೇಕು. ರಾತ್ರಿ ವ್ಯಾನಲ್ಲಿ ಬೆಂಗ್ಳೂರ್ಗೆ ಹೊರಡ್ಬೇಕು ನಮ್ ಟೀಮೌರೆಲ್ಲಾ ಕಾಯ್ತಿರ್ತಾರೆ” ಎಂದಾಗ ಸೀತಕ್ಕಳಿಗೆ ನಿರಾಸೆಯಾಗಿ ಮುನಿಸಿಕೊಂಡಳು. ಮುಕ್ತಾ ಅಕ್ಕಳನ್ನು ಓಲೈಸಿದಳು. ಮತ್ತೊಮ್ಮೆ ಅದಕ್ಕೆಂದೇ ಬಂದು ಅಕ್ಕನೊಂದಿಗೆ ನಾಲ್ಕು ದಿನ ಇದ್ದು ಹೋಗುವುದಾಗಿ ಹೇಳಿದಳು. “ ಕುದ್ರೆಮೇಲೆ ಬಂದ್ಹಾಗ್ ಬಂದು ಹೀಗ್ಬಂದ್ ಹಾಗ್ ಹೊರಟ್ನಿಂತ್ರೆ ಹೆಂಗಮ್ಮಾ… ಒಂದೆರಡ್ದಿನ ಆದ್ರೂ ಇದ್ ಹೋಗ್ಬಾರ್ದೇ?…” ಅಯ್ಯರ್ ಕಕ್ಕುಲತೆಯಿಂದ ಒತ್ತಾಯಿಸಿದರು. “ನನ್ಗೇನ್ ಆಸೆ ಇಲ್ವಾ ಭಾವಾ… ನಿಮ್ಮೆಲ್ರ ಜೊತೆ ನಾಕ್ದಿನ ಮಜ್ವಾಗಿರ್ಬೇಕೂಂತಾ….? ಆದ್ರೇನ್ ಮಾಡೋದು ಮಕ್ಳಿಗ್ ಸ್ಕೂಲು ಕಾಲೇಜಿದ್ಯಲ್ಲಾ…!” ಎಂದು ಅಸಹಾಯಕತೆ ಮುಂದುಮಾಡಿ “ಅಲ್ಲಾ ರಾಜೂಭಾವಾ…. ನೀವೇ ಸೀತಕ್ಕನ್ಜೊತೆ ಬೆಂಗ್ಳೂರಿಗ್ಬಂದು ಒಂದ್ವಾರ ಇದ್ದು ಹೋಗಕ್ಕೇನು ಧಾಡೀಂತೀನಿ ?” ಸಲುಗೆಯಿಂದ ಅಯ್ಯರ್ ಹತ್ತಿರ ಬಂದು ನಗುತ್ತಾ ಪ್ರಶ್ನಿಸಿದಳು. ನಂತರ ಅವರ ಕೈ ಹಿಡಿದು “ಈ ವರ್ಷ ನೀವೂ ಅಕ್ಕಾನೂ ಬೆಂಗ್ಳೂರಿಗ್ ಬರ್ದೇ ಇದ್ರೆ ನೋಡಿ ಆ ಮೇಲ್ ನಾ ನಿಮ್ಮಿಬ್ರನ್ನೂ ಮಾತಾಡ್ಸೋದೇ ಇಲ್ಲಾ” ಹುಸಿಮುನಿಸಿನಿಂದ ಹೇಳಿದಾಗ ಮುಕ್ತಾಳ ಕೈ ಸಹಜವಾಗಿ ಅಯ್ಯರ್ ತೋಳನ್ನು ಹಿಡಿದಿತ್ತು.
ವಿದ್ಯುತ್ ಸಂಚಲನವಾಯ್ತು. ಅಯ್ಯರ್ ಕಾಯಕ್ಕೀಗ ಸುಮಾರು ಅರವತ್ತರ ಆಸುಪಾಸು. ಆದರೇನು? ಅಯ್ಯರ್ ಕಣ್ಣಲ್ಲಿ ಕಾಯದ ಪ್ರಾಯಕ್ಕೆ ಕವಡೆ ಕಿಮ್ಮತ್ತಿರಲಿಲ್ಲ. ಈಗ ಕೂದಲಿಗೆ ಬಣ್ಣಹಚ್ಚುವಾಗ ಸುಕ್ಕುಗಟ್ಟುತ್ತಿದ್ದ ಮುಖಕ್ಕೆ ಹೊಂದುವಂತೆ ಎರಡೂ ಕಿವಿಗಳಮುಂದೆ ಉದ್ದಕ್ಕೆ ಇಳಿಬಿಟ್ಟಿದ್ದ ಸೈಡ್ಲಾಕನ್ನು ಬೇಕೆಂದೇ ಬೆಳ್ಳಗೆ ಉಳಿಸಿ ಈಗಷ್ಟೆ ಸವೆಯುತ್ತಿದ್ದ ತಲೆಯನ್ನಷ್ಟೆ ಕಪ್ಪಾಗಿಸುತ್ತಿದ್ದರು. ಇತ್ತೀಚೆಗೆ ಮೂಗೇರಿದ್ದ ಚಿನ್ನದ ಫ್ರೇಮಿನ ಕನ್ನಡಕ ಅವರ ಹೊಸ ಗೆಟಪ್ಪಿನ ಘನತೆ ಹೆಚ್ಚಿಸಿತ್ತು. ವರುಷಗಳ ನಂತರದ ಮುಕ್ತಾಳ ಮುಕ್ತವಾದ ನಡವಳಿಕೆಯಿಂದ ಹಿಂದೆಂದೋ ಮುದುಡಿ ಹೋಗಿದ್ದ ಅಯ್ಯರ್ ಆಸೆಗೆ ಜೀವಜಲದ ಸಿಂಚನವಾದಂತಿತ್ತು. ತಿರುವಾರೂರನಲ್ಲಿ ಹೀಗೆ ಕಾಣಿಸಿಕೊಂಡು ಹಾಗೆ ಮಾಯಳಾದ ಮುಕ್ತಾ ಅವಳಿಗರಿವಿಲ್ಲದಂತೆ ಅಯ್ಯರ್ ಎದೆಯಾಳದಲ್ಲಿ ಸುಪ್ತವಾಗಿ ಮಲಗಿದ್ದ ಬಯಕೆಯೊಂದನ್ನು ಬಡಿದೆಬ್ಬಿಸಿಬಿಟ್ಟಿದ್ದಳು.

… “ಅಮ್ಮಾ ಬೆಂಗ್ಳೂರಿನ ಮುಕ್ತಾ ಚಿಕ್ಕಮ್ಮಂಗೆ ತಿರುವಾರೂರಿಗ್ ಬಂದು ನಮ್ಜೊತೆನೇ ಮದ್ವೇಗ್ ಬರೋಕ್ ಹೇಳಿ ಕಾಗ್ದಾ ಬರ್ಯಮ್ಮಾ…” ಅಂದ ಗಣೇಶನ ದನಿ ಕೇಳಿದ ಅಯ್ಯರ್ ಮನ ಖುಷಿಯಿಂದ ಕುಣಿಯಿತು. ಪುರೊಸುತ್ತಿಲ್ಲದಷ್ಟು ಮದುವೆ ತಯಾರಿ ಕೆಲಸಗಳ ನಡುವೆ ಮದುವೆಮನೆಯಲ್ಲಿ ಮುಕ್ತಾಳ ಸುಂದರ ಸಾಮಿಪ್ಯದ ರೋಮಾಂಚನದ ಕಲ್ಪನೆ ಬೇರೆ. ಕಾಲ ಸರಿದದ್ದೇ ತಿಳಿಯಲಿಲ್ಲ. ಮುಕ್ತಾ ತಿರುವಾರೂರಿಗೆ ಬರಲಿಲ್ಲ. ಅವರ ಕುಟುಂಬ ಬೆಂಗಳೂರಿನಿಂದ ನೇರವಾಗಿ ವಿಶಾಖಪಟ್ಟಣಕ್ಕೆ ಬರುತ್ತಿತ್ತು. ಅಯ್ಯರಿಗೆ ಮಗನ ಮದುವೆಯ ಸಂಭ್ರಮ ಹೆಚ್ಚಿತ್ತೋ ಮುಕ್ತಾಳನ್ನು ಕಾಣುವ ತವಕ ಹೆಚ್ಚಿತ್ತೋ ತಿಳಿಯುತ್ತಿರಲಿಲ್ಲ. ಒಟ್ಟಾರೆ ಬರುವ ಸೋಮವಾರ ರೈಲಲ್ಲಿ ವಿಶಾಖಪಟ್ಟಣಕ್ಕೆ ಹೊರಡಲು ಕ್ಷಣಗಣನೆಯಲ್ಲಿದ್ದರವರು.

-೫-

ಸೋಮವಾರ ಬೆಳಗ್ಗೆ ಅಯ್ಯರ್ ಮನೆಯಲ್ಲಿ ದೇವರಿಗೆ ಸಣ್ಣದೊಂದು ಪೂಜೆ ಸಲ್ಲಿಸಿ ತಿಂಡಿ ತಿಂದು ಎಲ್ಲರೂ ಪ್ರಯಾಣಕ್ಕೆ ತಯಾರಾದರು. ಸುಮಾರು ಹನ್ನೊಂದಕ್ಕೆಲ್ಲಾ ವರನ ಕಡೆಯ ಒಂದು ದೊಡ್ಡ ತಂಡವೇ ವಿಶಾಖಪಟ್ಟಣಕ್ಕೆ ಹೊರಟುನಿಂತಿತ್ತು. ವಿಶಾಖಪಟ್ಟಣಕ್ಕೆ ಹೋಗುವ ರೈಲು ತಿರುವಾರೂರು ಸ್ಟೇಷನ್ನಿಗೆ ಬರುತ್ತಿರಲಿಲ್ಲ. ರೈಲು ಹಿಡಿಯಲು ಹತ್ತಿರದ ಕುಂಭಕೋಣಂ ಸ್ಟೇಷನ್ನಿಗೆ ಹೋಗಬೇಕಿತ್ತು. ಅಯ್ಯರ್ ಕುಟುಂಬದವರು ಹದಿಮೂರು ಜನರಿದ್ದರೆ, ಹೋಟೆಲ್ ಸಿಬ್ಬಂದಿ, ಆಳುಕಾಳು ಸೇರಿ ಪೂರ್ತಿ ಪರಿವಾರದವರು ಇಪ್ಪತ್ಮೂರು ಸೇರಿ ಒಟ್ಟು ಮೂವತ್ತಾರು ಜನರಿದ್ದರು. ಒಂದು ಕಾರು ಮತ್ತೊಂದು ವ್ಯಾನುಮಾಡಿಕೊಂಡು ಕುಂಭಕೋಣಂ ತಲುಪಿದಾಗ ರೈಲು ಅರ್ಧ ಘಂಟೆ ತಡವಾಗಿ ಬರುವುದೆಂದು ತಿಳಿಯಿತು. ರೈಲು ಬಂದಾಗ ಮಧ್ಯಾಹ್ನ ಸಮಯ ಒಂದಾಗಿತ್ತು. ಸ್ಟೇಷನ್ನಿನಲ್ಲಿ ರೈಲು ಕೇವಲ ಎರಡೇ ನಿಮಿಷ ನಿಲ್ಲುತ್ತಿತ್ತಾದ್ದರಿಂದ ಎಲ್ಲರೂ ತರಾತುರಿಯಲ್ಲಿ ಲಗೇಜು ಮತ್ತು ಮಕ್ಕಳೂ ಮರಿಗಳೊಂದಿಗೆ ಬೋಗಿಯನ್ನು ಹತ್ತಿಕೊಂಡರು. ಲಗೇಜುಗಳನ್ನಿಳಿಸಿ ಸೀಟುಗಳಲ್ಲಿ ಕುಳಿತುಕೊಳ್ಳುವ ಮುಂಚೆಯೇ ರೈಲು ನಿಧಾನಕ್ಕೆ ಚಲಿಸಲಾರಂಭಿಸಿತ್ತು.

ಸೀಟುಗಳನ್ನು ಗುರುತಿಸಿ ಎಲ್ಲರೂ ಮಟ್ಟಸವಾಗಿ ಕುಳಿತುಕೊಳ್ಳುವಷ್ಟರಲ್ಲಿ ಟ್ರೈನು ನಿಧಾನಕ್ಕೆ ವೇಗ ಪಡೆದುಕೊಳ್ಳುತ್ತಿತ್ತು. ಧೀರ್ಘ ಪ್ರಯಾಣದ ಟ್ರೈನುಗಳಲ್ಲಿ ನಡೆಯುವ ಕಳ್ಳತನ ದರೋಡೆಗಳ ಬಗ್ಗೆ ಅಯ್ಯರ್ ಕೇಳಿತಿಳಿದಿದ್ದರು. ದೊಡ್ಡ ಸೂಟ್ಕೇಸುಗಳನ್ನೂ ಮತ್ತು ಬೆಲೆಬಾಳುವ ವಸ್ತುಗಳಿದ್ದ ಬ್ಯಾಗುಗಳನ್ನು ಅಯ್ಯರ್ ಮುತುವರ್ಜಿಯಿಂದ ತಮ್ಮ ಹಾಗೂ ತಮ್ಮ ಪಕ್ಕದ ಸೀತಮ್ಮನ ಲೋವರ್ ಬರ್ತುಗಳ ಕೆಳಗೆ ಸುರಕ್ಷಿತವಾಗಿಡಿಸಿದರು. ಸ್ವಭಾವತಃ ಮನುಷ್ಯ ಇಂಥಾ ವಿಷಯಗಳಲ್ಲಿ ಬಲು ಹುಷಾರು. ಪ್ರಯಾಣದ ವೇಳೆ ಅವರು ಯಾವುದೇ ಬೆಲೆಬಾಳುವ ವಸ್ತುಗಳನ್ನು ಧರಿಸುತ್ತಿರಲಿಲ್ಲ. ಕಾಯ್ದಿರಿಸಿದ್ದ ಬೋಗಿಯ ಸುಮಾರು ಮುಕ್ಕಾಲು ಭಾಗವನ್ನು ಸುಬ್ಬು ಮದುವೆ ಪಾರ್ಟಿಯೇ ತುಂಬಿದ್ದರಿಂದ ಒಂದು ರೀತಿ ಮನೆಯ ವಾತಾವರಣ ಆವರಿಸಿದ್ದುದು ಅಯ್ಯರಿಗೆ ಒಂದುರೀತಿಯ ಸಮಾಧಾನ ತಂದಿತ್ತು.
ಸಾವಿರಕ್ಕೂ ಹೆಚ್ಚು ಕಿಲೋಮೀಟರುಗಳ ದಾರಿ. ಕುಂಭಕೋಣಮ್ಮಿನಿಂದ ವಿಶಾಖಪಟ್ಟಣಕ್ಕೆ ಬರೋಬ್ಬರಿ ಇಪ್ಪತ್ತಾರು ತಾಸಿನ ಸುಧೀರ್ಘ ಪಯಣ. ಟ್ರೈನು ಮರುದಿನ ಮದ್ಯಾಹ್ನ ಎರಡೂವರೆ ವೇಳೆಗೆ ವಿಶಾಖಪಟ್ಟಣ ಸೇರುವ ನಿರೀಕ್ಷೆಯಿತ್ತು. ತಲುಪುವುದು ಸ್ವಲ್ಪ ತಡವಾದರೂ ಆರೇಳು ಘಂಟೆಗೆ ವರಪೂಜೆಗೆ ಹಾಜರಾಗಲು ಅಡ್ಡಿಯಿರಲಿಲ್ಲ. ಅಲ್ಲಿ ಯಾರಿಗೂ ರೈಲಿನಲ್ಲಿ ಅಷ್ಟು ದೂರ ಪಯಣಿಸಿದ ಅನುಭವವಿರಲಿಲ್ಲ. ಪ್ರಯಾಣದ ಮಜಾ ತೆಗೆದುಕೊಳ್ಳಲು ಎಲ್ಲರೂ ಅತ್ಯುತ್ಸುಕರಾಗಿದ್ದರು. ಅಷ್ಟರಲ್ಲಿ ಅಯ್ಯರ್ ಹೋಟೆಲ್ಲಿನ ಹುಡುಗರು ದೊಡ್ಡ ಕುಕ್ಕೆಯಲ್ಲಿ ತಂದಿದ್ದ ಊಟದ ಪ್ಯಾಕೆಟ್ಟುಗಳನ್ನು ಎಲ್ಲರಿಗೂ ಹಂಚತೊಡಗಿದರು. ಹುಳಿಯನ್ನ ಮೊಸರನ್ನ ಪ್ಯಾಕೆಟ್ಟುಗಳ ಹಿಂದೆಯೇ ಬೇರೆಯಾಗಿ ತಂದಿದ್ದ ಹಲಸಿನಪ್ಪಳವನ್ನೂ ಎಲ್ಲರಿಗೂ ವಿತರಿಸಲಾಯಿತು. ಹರಟೆ ಮಾತಿನಲ್ಲಿ ಒಬ್ಬರಕಾಲೊಬ್ಬರೆಳೆದುಕೊಂಡು ಖುಷಿಯಿಂದ ಕೇಕೆಹಾಕುತ್ತಾ ಊಟಮುಗಿಸಿದರು. ರೈಲು ಶೀರ್ಕಾಳಿ ದಾಟಿ ವಿಳ್ಳುಪುರಂ ಕಡೆಗೆ ಚಲಿಸುತ್ತಿತ್ತು. ಅಯ್ಯರಿಗೆ ಶೀರ್ಕಾಳಿ ಗೋವಿಂದರಾಜನ್ ಭಜನೆ ನೆನಪಾಯಿತು. ಶರವಣನನ್ನು ಕರೆದು ಹಾಡಲು ಹೇಳಿದರು. ಹಲವು ವರ್ಷಗಳಿಂದ ಅಯ್ಯರ್ ಬಳಿ ಕೆಲಸಕ್ಕಿದ್ದ ಶರವಣನದು ಕಂಚಿನ ಕಂಠ. ಅವನಿಗೆ ತಮಿಳು ಭಕ್ತಿಗೀತೆಗಳನ್ನು ಪರವಶನಾಗಿ ಹಾಡುವ ಗೀಳಿತ್ತು.

ಯಜಮಾನರ ಆಣತಿಗೇ ಕಾಯುತ್ತಿದ್ದಹಾಗೆ ಶರವಣ ತನ್ನ ಕಡತದಿಂದ ಒಂದೊಂದೇ ಹಾಡು ತೆಗೆದು ಸುಶ್ರಾವ್ಯವಾಗಿ ಹರಿಯಬಿಟ್ಟ. ಇಡೀ ತಂಡ ಲಯಬದ್ಧವಾಗಿ ಕೈತಾಳ ಹಾಕತೊಡಗಿತು. ಪದ ಗೊತ್ತಿದ್ದವರು ಅಲ್ಲಲ್ಲಿ ದನಿಗೂಡಿಸಿದರು. ಹೊಟ್ಟೆತುಂಬ ಉಂಡವರಿಗೆ ಜೋಗುಳದಂಥಾ ಭಜನೆ ಕೇಳಿ ಜೋಂಪು ಹತ್ತಿತು. ಒಬ್ಬೊಬ್ಬರೇ ನಿದ್ದೆಗೆ ಜಾರ ಹತ್ತಿದ್ದರು. ಅಯ್ಯರಂತೂ ಆಳವಾದ ನಿದ್ದೆಯಲ್ಲಿದ್ದರು.
ಎಚ್ಚರವಾದಾಗ ಆಗಲೇ ಸಂಜೆಯಾಗಿತ್ತು. ವಿಳ್ಳುಪುರಂ ಸ್ಟೇಷನ್ನಿನಲ್ಲಿ ದಾರಿಸವೆಸಲು ತಂದಿದ್ದ ಕುರುಕುಲು ತಿಂಡಿಗಳೊಡನೆ ಎಲ್ಲರಿಗೂ ಕಾಫಿ ಸಂತರ್ಪಣೆಯಾಯಿತು. ರೈಲು ಸ್ಟೇಷನ್ನಿನಿಂದ ಹೊರಟಾಗ ಆಗಲೇ ಬಾನು ಕೆಂಪಾಗಿ ಕತ್ತಲು ಕವಿಯುತ್ತಿದ್ದದು ಅರಿವಿಗೆ ಬಂತು. ಹಿರಿಯರು ಅದೂ ಇದೂ ಹರಟುತ್ತಾ ಕೂತಿರಲು ಉಳಿದವರು ಅಂತ್ಯಾಕ್ಷರಿ ಆಟದಲ್ಲಿ ನಿರತರಾಗಿದ್ದರು. ಸೆಕೆ ಹೆಚ್ಚಿದ್ದುದರಿಂದ ಬಹುತೇಕ ಗಂಡಸರು ಅಂಗಿ ಕಳಚಿ ಬರೀ ಬನೀನು ಪಂಚೆಯಲ್ಲಿ ಕುಳಿತಿದ್ದರು. ಹೆಂಗಸರು ತಲೆಗೂದಲನ್ನು ಮೇಲಕ್ಕೆ ಎತ್ತಿ ಗಂಟುಕಟ್ಟಿ ಸೆರಗಿನಿಂದಲೋ ಮತ್ತೊಂದರಿಂದಲೋ ಗಾಳಿ ಹೊಡೆದುಕೊಳ್ಳುತ್ತಿದ್ದರು. ಫ್ಯಾನುಗಳು ಕೆಲಸಮಾಡುತ್ತಿದ್ದುವಾದರೂ ಅದರಿಂದ ಹೊಮ್ಮುತ್ತಿದ್ದ ಬಿಸಿಗಾಳಿಯಿಂದ ಸುಖವಿರಲಿಲ್ಲ. ಸಣ್ಣಮಕ್ಕಳಂತೂ ದಿಗಂಬರರಾಗಿ ಸುತ್ತುತ್ತಿದ್ದರು. ದಾರಿಯುದ್ದಕ್ಕೂ ತಿಂದ ಕಡ್ಲೇಕಾಯಿ, ಕುರುಕುಲು ತಿಂಡಿಯಿಂದಾಗಿ ಇನ್ನೂ ಯಾರಿಗೂ ಹಸಿವಿದ್ದಂತಿರಲಿಲ್ಲ. ರಾತ್ರಿ ಊಟವನ್ನೂ ಕಟ್ಟಿಕೊಂಡು ತಂದಿದ್ದರು. ಮರುದಿನದ ತಿಂಡಿ, ಮಧ್ಯಾಹ್ನದ ಊಟವನ್ನು ಮಾತ್ರ ಹೊರಗೆ ಹೋಟೆಲಲ್ಲಿ ಕೊಂಡು ಮಾಡಬೇಕಿತ್ತು. ಮದ್ರಾಸಿನಲ್ಲಿ ರೈಲು ಮುಕ್ಕಾಲು ತಾಸು ನಿಲ್ಲುತ್ತಾದ್ದರಿಂದ ಸ್ವಲ್ಪ ತಡವಾದರೂ ಅಲ್ಲೇ ಊಟಮಾಡುವುದೆಂದಾಯಿತು. ಆದರೆ ಮದ್ರಾಸು ಬರುವ ಮೊದಲೇ ಕೆಲವು ಮಕ್ಕಳು ಹಸಿವೆಂದು ವರಾತ ತೆಗೆದರು. ಹೆಂಗಸರು ಆ ಮಕ್ಕಳಿಗೆ ಹಣ್ಣು ಹಂಪಲು ಇತ್ಯಾದಿ ಕೊಟ್ಟು ರಮಿಸಿ ಸುಮ್ಮನಾಗಿಸಿದರು.

ರೈಲು ಮದ್ರಾಸ್ ತಲುಪಿದಾಗ ರಾತ್ರಿ ಸುಮಾರು ಹತ್ತು ಘಂಟೆ. ಊಟಕ್ಕೆ ಚಪಾತಿ, ಪಲ್ಯ ಮತ್ತು ಮೊಸರನ್ನದ ವ್ಯವಸ್ಥೆಯಿತ್ತು. ಎಲ್ಲರೂ ಅವರವರ ಹಸಿವಿಗನುಗುಣವಾಗಿ ಉಂಡರು. ಇತ್ತೀಚೆಗೆ ಅಯ್ಯರ್ ಊಟದ ನಂತರ ಎರಡು ಬಾಳೇಹಣ್ಣು ತಿನ್ನುವುದನ್ನು ರೂಢಿಸಿಕೊಂಡಿದ್ದರು. ಇದರಿಂದ ಅವರ ಪ್ರಾಥಃವಿಧಿ ಸಲೀಸಾಗುತ್ತಿತ್ತು. ವಾಡಿಕೆಯಂತೆ ಊಟದ ನಂತರ ಎರಡುಬಾಳೆಹಣ್ಣು ತಿಂದ ಅಯ್ಯರಿಗೆ ಸೀತಮ್ಮ ಅಕ್ಕರೆಯಿಂದ ವೀಳ್ಯ ಸುತ್ತಿ ಕೊಟ್ಟರು. ರೈಲು ನಿಧಾನಕ್ಕೆ ಮದ್ರಾಸಿನಿಂದ ಹೊರಟಿತು. ವೀಳ್ಯ ಬಾಯಿಗೆ ಹಾಕಿದ ಅಯ್ಯರಿಗೆ ಸೆಕೆಯೆನಿಸಿತು. ಬೋಗಿಯ ಕೊನೆಯಲ್ಲಿದ್ದ ಬಾಗಿಲಬಳಿ ಹೋಗಿ ನಿಂತವರೇ ಸ್ವಲ್ಪ ಹೊತ್ತು ಹಾಗೇ ವೀಳ್ಯ ಜಗಿಯುತ್ತಾ ಹೊರಗಿನ ಗಾಳಿತೆಗೆದುಕೊಂಡರು. ತುಸು ಹಾಯೆನಿಸಿತು. ತಾನೇತಾನಾಗಿ ಕೈ ಕಿಸೆಯಲ್ಲಿದ್ದ ನಶ್ಯದ ಡಬ್ಬಿಗೆ ಹೋಯಿತು. ಮುಚ್ಚಳ ತೆಗೆದಾಗ ಡಬ್ಬಿ ಖಾಲಿಯಾಗಿತ್ತು. ನಿರಾಶೆಯಾಯಿತು. ತಮ್ಮ ಬರ್ತಿನ ಕೆಳಗಿಟ್ಟುಕೊಂಡಿದ್ದ ಬ್ಯಾಗಿನಲ್ಲಿ ನಶ್ಯದ ಕವರಿತ್ತು. ಮೊದಲೇ ಡಬ್ಬಿಗೆ ತುಂಬಿಸಿಕೊಳ್ಳದಿದ್ದಕ್ಕೆ ಅಲವತ್ತುಕೊಳ್ಳುವಂತಾಯ್ತು. ಚಲಿಸುವ ರೈಲಿನಲ್ಲಿ ಕವರಿನಿಂದ ಡಬ್ಬಿಗೆ ನಶ್ಯ ವರ್ಗಾಯಿಸುವುದು ಕಷ್ಟದ ಕೆಲಸ. ಹಾಗೆ ಹೀಗೆ ಕೈಯಲುಗಿ ಚೆಲ್ಲಿ ಸುಮ್ಮನೆ ವ್ಯರ್ಥವಾಗುತ್ತೆ. ಮುಂದೆ ರೈಲು ನಿಂತಾಗ ಮರೆಯದೆ ಡಬ್ಬಿ ತುಂಬಿಸಿಕೊಳ್ಳಬೇಕೆಂದು ಕೊಂಡವರು ತಮ್ಮ ಬರ್ತಿಗೆ ಬಂದು ಮೈಚಾಚಿದರು.

ಮಂಪರಿನ ನಡುವೆ ಬೇಡಬೇಡವೆಂದರೂ ಅವರ ಮನಸ್ಸು ತಿಳಿದೂ ತಿಳಿಯದಂತೆ ಮುಕ್ತಳೊಂದಿಗೆ ಆಟಕ್ಕಿಳಿದಿತ್ತು. ಆ ಆಟ ಅದೆಷ್ಟು ಹೊತ್ತು ನಡೆಯಿತೋ ತಿಳಿಯದೆ ಒಂದು ಹೊತ್ತಿನಲ್ಲಿ ಅಯ್ಯರ್ ನಿದ್ದೆಗೆ ಜಾರಿದ್ದರು. ದಿನವಿಡೀ ಮಾಡಿದ್ದ ಪ್ರಯಾಣದ ದಣಿವಿನಿಂದ ಸ್ವಲ್ಪಹೊತ್ತಿನಲ್ಲೇ ಒಬ್ಬೊಬ್ಬರಾಗಿ ಎಲ್ಲರೂ ನಿದ್ದೆಗೆ ಶರಣಾದರು. ದೀಪಗಳನ್ನು ಆರಿಸಿದ್ದರಿಂದ ಕತ್ತಲಿತ್ತು. ಗಿಜಿಗುಡುತ್ತಿದ್ದ ಬೋಗಿಯಲ್ಲಿ ಮೂಡಿದ ಮೌನದಲ್ಲಿ ವೇಗವಾಗಿ ಚಲಿಸುತ್ತಿದ್ದ ರೈಲಿನ ಚುಕಬುಕು ಸದ್ದಿನ ಹಿನ್ನಲೆಯಲ್ಲಿ ತಿರುಗುತ್ತಿದ್ದ ಫ್ಯಾನುಗಳ ಗಿರ್ರನೆಯ ಶಬ್ದ ನಿಚ್ಚಳವಾಗಿ ಕೇಳುತ್ತಿತ್ತು.

ಅದೆಷ್ಟು ಘಂಟೆಯೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಅಯ್ಯರಿಗೆ ಎಚ್ಚರವಾಯ್ತು. ಅರೆಕ್ಷಣ ಎಲ್ಲಿದ್ದರೆಂಬ ಅರಿವಿರಲಿಲ್ಲ. ನೋಡುವಾಗ ರೈಲು ನಿಂತಿರುವುದು ತಿಳಿಯಿತು. ಮುಚ್ಚಿದ ಗಾಜಿನ ಕಿಟಕಿಗಳ ಹೊರಗಿನಿಂದ ಬೀಳುತ್ತಿದ್ದ ಬೆಳಕಿನಿಂದ ರೈಲು ಯಾವುದೋ ಸ್ಟೇಷನ್ನಿನಲ್ಲಿ ನಿಂತಿರಬೇಕೆಂದು ಊಹಿಸಿದರು. ದೀಪಗಳನ್ನು ಹಾಕಿ ನಿದ್ರಿಸುತ್ತಿದ್ದವರ ನಿದ್ದೆ ಹಾಳುಮಾಡಲು ಅಯ್ಯರಿಗೆ ಮನಸ್ಸೊಪ್ಪಲಿಲ್ಲ. ಚಪ್ಪಲಿಗಳು ಸೀತಮ್ಮ ಮಲಗಿದ್ದ ಪಕ್ಕದಬರ್ತಿನ ಕೆಳಗಿದ್ದುವು. ಎರಡೂವರಡಿ ರೈಲ್ವೇ ಬರ್ತು ಸೀತಮ್ಮನ ಮೈಸಿರಿಗೆ ಏನೇನೂ ಎಟುಕುತ್ತಿರಲಿಲ್ಲ. ಅನಿವಾರ್ಯವಾಗಿ ತಮ್ಮ ಭಾರೀ ಬಲ ತೋಳನ್ನು ಪಕ್ಕಕ್ಕೆ ಇಳಿಬಿಟ್ಟು ಮಗ್ಗುಲು ಮಲಗಿದ್ದರು. ಅದನ್ನು ಸರಿಸಿ ಚಪ್ಪಲಿ ತಗೆಯುವ ಸಾಹಸಕ್ಕೆ ಮನಸ್ಸಾಗಲಿಲ್ಲ. ಗಪ್ಪಗೆ ಬರಿಗಾಲಲ್ಲೇ ಮೂತ್ರವಿಸರ್ಜಿಸಲು ಎದ್ದು ಹೋದರು. ತಿರುಗಿ ಬರುವಾಗ ಕಿಟಕಿಯಮೂಲಕ ಇಣುಕಿದರು. ರೈಲು ಯಾವುದೋ ಸ್ಟೇಷನ್ನಿನಲ್ಲಿ ನಿಂತಿರುವುದು ಖಾತ್ರಿಯಾಯಿತು. ನಶ್ಯದ ನೆನಪಾಯಿತು. ಸದ್ದಿಲ್ಲದೇ ತಮ್ಮ ಬರ್ತಿನಬಳಿ ಬಂದು ಕೆಳಗಿಟ್ಟಿದ್ದ ಬ್ಯಾಗಿನ ಸೈಡಿನ ಜಿಪ್ಪು ತೆಗೆದು ನಶ್ಯದ ಕವರನ್ನು ತೆಗೆದುಕೊಂಡರು. ಪಕ್ಕದಲ್ಲಿ ಬಿಚ್ಚಿಟ್ಟಿದ್ದ ಶರ್ಟಿನ ಕಿಸೆಯಿಂದ ನಶ್ಯದ ಡಬ್ಬಿ ತೆಗೆದುಕೊಂಡು ಬಾಗಿಲಬಳಿ ಬಂದರು. ರೈಲು ನಿಂತು ಸ್ವಲ್ಪ ಹೊತ್ತಾದಂತಿತ್ತು. ಬಾಗಿಲು ತೆಗೆದು ಹೊರಗಿನ ಗಾಳಿಗೆ ಮೈಯೊಡ್ಡಿದರು. ರೈಲು ಹೊರಡುವ ಸೂಚನೆ ಕಾಣಲಿಲ್ಲ. ಕೆಳಗಿಳಿದು ಪ್ಲಾಟ್ಫಾರಂ ಬೆಳಕಿನಲ್ಲಿ ಕವರಿನಿಂದ ನಶ್ಯವನ್ನು ಡಬ್ಬಿಗೆ ತುಂಬಿಸಿಕೊಂಡರು. ಒಂದು ಚಿಟಿಕೆ ಕೈಯ್ಯಲ್ಲಿ ತೆಗೆದುಕೊಂಡು ಇನ್ನೇನು ಏರಿಸಬೇಕೆನ್ನುವಾಗ ಯಾಕೋ ಕಣ್ಣು ಕತ್ತಲಿಟ್ಟಂತಾಯ್ತು. ತಲೆತಿರುಗುವಂತಾಗಿ ಬೇಗನೇ ಪಕ್ಕದಲ್ಲಿದ್ದ ಉದ್ದದ ಸೀಟಿನಮೇಲೆ ಕುಸಿದು ಕುಳಿತರು. ಅಲ್ಲೇ ಹಾಗೇ ಅಯ್ಯರಿಗೆ ಜ್ಞಾನ ತಪ್ಪಿತು.

-ನಾರಾಯಣ ಎಮ್ ಎಸ್


ಮುಂದುವರೆಯುವುದು..

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಮರೆಯಲಾಗದ ಮದುವೆ (ಭಾಗ 5): ನಾರಾಯಣ ಎಮ್ ಎಸ್

Leave a Reply

Your email address will not be published. Required fields are marked *