ಕಥಾಲೋಕ

ಮರೆಯಲಾಗದ ಮದುವೆ (ಭಾಗ 4): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ

ಅಂದು ವೈಕುಂಠಸಮಾರಾಧನೆ. ಹನ್ನೆರಡು ದಿನದ ಅಶುಭ ಕಳೆದು ನಡೆಯುತ್ತಿದ್ದ ಶುಭಕಾರ್ಯವದು. ನೆಂಟರಷ್ಟರಿಂದ ತುಂಬಿದ ಮನೆ ಚಟುವಟಿಕೆಗಳ ಗಿಜಿಗಿಜಿಯಿಂದ ತುಂಬಿತ್ತು. ಅಂದಿನ ಸಮಾರಂಭ ಮುಗಿಸಿ ಅಯ್ಯರ್ ಮರುದಿನ ತಿರುವಾರೂರಿಗೆ ಹೊರಡುವವರಿದ್ದರು. ಬೆಳಗಿನ ಕಾಫಿ ಕುಡಿದು ಕೊಳಕ್ಕೆ ಹೋಗಿ ಸ್ನಾನ ಮುಗಿಸಿದ ಅಯ್ಯರ್ ಆಗಷ್ಟೆ ಮನೆಗೆ ಹಿಂತಿರುಗಿ ಹಜಾರದಲ್ಲಿ ಕುಳಿತಿದ್ದ ಇನ್ನೂ ಐದಾರು ಜನರೊಂದಿಗೆ ಕುಳಿತು ತಿಂಡಿತಿನ್ನುತ್ತಿದ್ದರು. ಅಷ್ಟರಲ್ಲಿ ಸಾಲಾಗಿ ಕುಳಿತಿದ್ದವರಿಗೆಲ್ಲಾ ಚಟ್ನಿ ಬಡಿಸಿಕೊಂಡು ಬಂದ ಮುಕ್ತಾಳನ್ನು ಕಂಡ ಅಯ್ಯರಿನ ಸ್ಥಿಮಿತ ತಪ್ಪಿದಂತಾಯಿತು. ಚಿಕ್ಕಚಿಕ್ಕ ವಿಷಯಗಳು ಮಾಡುವ ದೊಡ್ಡ ವ್ಯತ್ಯಾಸವನ್ನು ಕಂಡ ಅಯ್ಯರ್ ಚಕಿತಗೊಂಡರು. ಕಳೆದ ಮೂರುದಿನಗಳೂ ಎಂದಿನ ಸಾಧಾರಣ ಉಡುಗೆಯುಟ್ಟು ಬೋಳುಹಣೆಯಲ್ಲಿದ್ದ ಮುಕ್ತಾಳನ್ನು ಶೋಕದ ಛಾಯೆ ಆವರಿಸಿದ್ದಂತಿತ್ತು. ಅವಳ ಆ ವೇಷಭೂಷಣಗಳು ಅವಳ ಅಪ್ಪಯ್ಯನ ಸಾವನ್ನು ಸಾರುತ್ತಿದ್ದುದು ತನ್ನ ಈವರೆಗಿನ ಮನೋನಿಗ್ರಹಕ್ಕೆ ಬಹಳ ಸಹಕಾರಿಯಾಗಿತ್ತೆಂಬ ಸತ್ಯ ಅವಳನ್ನು ಕಂಡೊಡನೆ ಅಯ್ಯರ್ ಅರಿವಿಗೆ ಬಂತು.

ಚಟ್ನಿ ಬಡಿಸಲೆಂದು ಮುಕ್ತಾ ಹತ್ತಿರ ಬಂದೊಡನೆ ಅವಳು ಮುಡಿದಿದ್ದ ಮಲ್ಲಿಗೆಯ ಹಿತವಾದ ಘಮ ಅಯ್ಯರ್ ಮೂಗಿಗೆ ಬಡಿಯಿತು. ಎವೆಯಿಕ್ಕದೆ ನಾದಿನಿಯನ್ನೇ ದಿಟ್ಟಿಸಿದರು. ಆಗಿನ್ನೂ ತಲೇ ಸ್ನಾನಮಾಡಿದ್ದ ಮುಕ್ತಾ ತನ್ನ ದಟ್ಟ ಕೇಶರಾಶಿಯನ್ನು ಅಳಕವಾಗಿ ನೀರ್ಜಡೆ ಹಾಕಿದ್ದಳು. ಹಸಿರು-ಕೆಂಪು ಲಂಗಾದಾವಣಿ ತೊಟ್ಟು ಹಿತಮಿತವಾಗಿ ಅಲಂಕರಿಸಿಕೊಂಡಿದ್ದಳು. ಅಗಲವಾದ ಹಣೆಗೆ ಸಣ್ಣದಾಗಿ ಇಟ್ಟಿದ್ದ ಕೆಂಪು ಕುಂಕುಮಕ್ಕೆ ಸ್ವಲ್ಪ ಮೇಲಿಟ್ಟಿದ್ದ ಚಿಕ್ಕದಾದ ಅಡ್ಡ-ಚಂದನ ಅವಳ ಚೆಲುವಿಗೆ ವಿಶೇಷ ಮೆರಗು ತಂದಿತ್ತು. ಒಟ್ಟಾರೆ ಲಕಲಕ ಹೊಳೆಯುತ್ತಿದ್ದ ಹುಡುಗಿಯ ಬೆಡಗನ್ನು ಅಷ್ಟು ಹತ್ತಿರದಿಂದ ಕಂಡದ್ದು ಅಯ್ಯರನ್ನು ತಬ್ಬಿಬ್ಬಾಗಿಸಿತ್ತು. ಇನ್ನೊಮ್ಮೆ ಅವಳನ್ನು ದಿಟ್ಟಿಸಿದರೆ ಏನು ಅವಾಂತರವಾದೀತೋ ಎಂದು ಗಾಬರಿಗೊಂಡಂತೆ ಅಯ್ಯರ್ ತಗ್ಗಿಸಿದ ತಲೆ ಮೇಲೆತ್ತದೆ ಇಡ್ಲೀ ಚೆಟ್ನಿಯಮೇಲೆ ನೆಟ್ಟ ಗಮನ ಕದಲಿಸದೆ ಕುಳಿತರು.

ಸಂಪ್ರದಾಯದಂತೆ ಹನ್ನೆರಡು ದಿನ ಸತತವಾಗಿ ನೆರವೇರಿಸಿದ ವಿವಿಧ ಕರ್ಮಗಳಿಂದ ಸತ್ತವರ ಆತ್ಮ ಸ್ವರ್ಗಸೇರಿತೆಂಬ ನಂಬಿಕೆಯಲ್ಲಿ ವೈಕುಂಠಸಮಾರಾಧನೆಯ ದಿನ ವೈದಿಕ ಬ್ರಾಹ್ಮಣರಿಗೆ ಬಗೆಬಗೆಯ ದಾನಗಳನ್ನುಕೊಟ್ಟು ಬಂಧುಮಿತ್ರರಿಗೆ ಔತಣದ ವ್ಯವಸ್ಥೆ ಮಾಡಲಾಗಿತ್ತು. ಭೂರಿಭೋಜನವನ್ನು ಸವಿದು ಸಂತೃಪ್ತರಾದ ಅತಿಥಿಗಳು ಶ್ರದ್ಧಾಭಕ್ತಿಯಿಂದ ಕ್ರಿಯಾಕರ್ಮಗಳನ್ನು ಪೂರೈಸಿದ ಮಕ್ಕಳನ್ನು ಹರಸಿ ದಿವಂಗತ ವೈದ್ಯನಾಥ ಶಾಸ್ತ್ರಿಗಳ ಬಗ್ಗೆ ನಾಲ್ಕು ಒಳ್ಳೆಯಮಾತುಗಳನ್ನಾಡಿ ಹೋದರು. ಕೆಲಹೊತ್ತಿನಲ್ಲೇ ಬಂದಿದ್ದ ನೆಂಟರಿಷ್ಟರೆಲ್ಲಾ ತಮ್ಮ ತಮ್ಮ ಊರಿನ ದಾರಿಹಿಡಿದರು. ಸಂಜೆಯ ವೇಳೆಗೆ ತುಂಬಿದ್ದ ಮನೆಯ ಗುಂಪು ಕರಗಿ ಮರುದಿನ ಹೊರಡಲಿದ್ದ ಹತ್ತಿರದ ಬಂಧುಗಳಷ್ಟೇ ಉಳಿದಿದ್ದರು. ಹಜಾರದಲ್ಲಿ ಬೆಳಗಿನ ಪ್ರಯಾಣಕ್ಕೆ ಲಗೇಜು ಸಿದ್ಧಪಡಿಸಿಕೊಳ್ಳುತ್ತಿದ್ದ ಅಳಿಯಂದಿರಿಗೆ ಊರಿಗೆ ಒಯ್ಯಲು ವೈಕುಂಠಸಮಾರಾಧನೆಯ ತಿಂಡಿಗಳ ದೊಡ್ಡ ಪೊಟ್ಟಣ ತಂದಿತ್ತ ಮಧುರಮ್ಮನವರು “ಮುಕ್ತಾ… ದನಗಳಿಗೊಂದಿಷ್ಟು ಕಲಗಚ್ಚಿಟ್ಟು ಬಾಮ್ಮಾ…” ಎಂದು ಕೂಗಿ ಹೇಳಿದರು. ಮುಕ್ತಾ ಅಡುಗೆಮನೆಗೆ ಹೋಗಿ ಕಲಗಚ್ಚಿನ ಬಕೀಟನ್ನೆತ್ತಿಕೊಂಡು ಕೊಟ್ಟಿಗೆಯತ್ತ ಹೊರಟದ್ದನ್ನು ಕಂಡ ಅಯ್ಯರ್ “ಬಂದು ನಾಕ್ದಿನ ಆದ್ರೂ ಕೊಟ್ಗೇ ಕಡೇನೇ ಹೋಗ್ಲಿಲ್ಲಾ ನೋಡು…” ಅನ್ನುತ್ತಾ ಹಿತ್ತಲಿನತ್ತ ಹೆಜ್ಜೆಹಾಕಿದರು.

ಮನೆಯ ಹಿಂಬಾಗಿಲಿನಾಚೆಗೆ ಸುಮಾರು ನೂರುಮೀಟರಿನಷ್ಟಿದ್ದ ಹಿತ್ತಲಿನ ಕೈತೋಟದಲ್ಲಿ ಐದಾರು ತೆಂಗಿನ ಮರಗಳಲ್ಲದೆ ಬಸಳೆ, ಮೆಂತೆ, ಕರಿಬೇವು, ಬಾಳೆ, ಬೆಂಡೆ ಬದನೆ, ನಿಂಬೆ, ಹೆರಳೆ ಮುಂತಾದ ಸೊಪ್ಪು ತರಕಾರಿಗಳ ಗಿಡಗಳಿದ್ದುವು. ಆ ಪುಟ್ಟ ತೋಟವನ್ನು ದಾಟಿದಂತೆ ದನದ ಕೊಟ್ಟಿಗೆಯಿತ್ತು. ತುಸುದೂರದಲ್ಲಿ ಬಲಗೈಯಲ್ಲಿ ಕಲಗಚ್ಚಿನ ಬಕೀಟುಹಿಡಿದು ಹೊರಚಾಚಿದ ಎಡಗೈಯನ್ನಾಡಿಸುತ್ತಾ ಮುಕ್ತಾ ಕೊಟ್ಟಿಗೆಯತ್ತ ನಡೆಯುತ್ತಿದ್ದಳು. ಹಿಂದೆನಿಂತು ಅವಳ ಮಾಟವಾದ ಅಂಗಸೌಷ್ಟವವನ್ನೇ ದಿಟ್ಟಿಸಿದ ಅಯ್ಯರ್ ’ಹಳ್ಳಿ ಚಾಕರಿಯಿಂದ ಹದಗೊಂಡ ವಿಗ್ರಹ… ಸೀತಾಗಿಂತ ಒಂದೆರಡಿಂಚು ಎತ್ತರ ಇರ್ಬೇಕು’ ಅಂದುಕೊಂಡರು. ಕಿಸೆಯಿಂದ ನಶ್ಯದ ಡಬ್ಬಿ ತೆಗೆದು ಭರ್ತಿ ಒಂದು ಚಿಟಿಕೆ ಮೂಗಿಗೇರಿಸಿದರು. ಹುರುಪೇರಿದಂತಾಗಿ ಲಗುಬಗೆಯಿಂದ ಕೊಟ್ಟಿಗೆಯತ್ತ ನಡೆದರು.

ಕೊಟ್ಟಿಗೆಯ ಬಾಗಿಲಿನ ಬದಿಯಲ್ಲಿ ಕಲಗಚ್ಚಿನ ಬಕೀಟನ್ನಿಟ್ಟ ಮುಕ್ತಾ, ಒಂದುಕಡೆಯಿಂದ ಕೊಟ್ಟಿಗೆಯಲ್ಲಿದ್ದ ಸೆಗಣಿಯನ್ನೆಲ್ಲಾ ಗುಡ್ಡೆಮಾಡಿ ಮಕರಿಯೊಂದಕ್ಕೆ ಹಾಕುವುದರಲ್ಲಿ ನಿರತಳಾಗಿದ್ದಳು. ಹಿಂದೆಯೇ ಕೊಟ್ಟಿಗೆ ಹೊಕ್ಕ ಆಯ್ಯರ್ ಅಲ್ಲಿ ಕಟ್ಟಿದ್ದ ಎರಡು ಹಸು ಮತ್ತು ಒಂದು ಕರುವನ್ನು ಗಮನಿಸುತ್ತಾ, “ಮೂರ್ ಹಸು ಇದ್ದಂಗಿತ್ತಲ್ವಾ… ಇನ್ನೋಂದೆಲ್ಲೋ ಕಾಣಿಸ್ತಿಲ್ಲಾ…“ ಅನ್ನುತ್ತಾ ಹಸುವಿನ ಮೈನೇವರಿಸಲು ಹತ್ತಿರ ಸರಿದರು. ಹೊಸಮುಖ ಕಂಡ ಗಂಗೆ ತುಸು ವ್ಯಗ್ರಳಾಗಿ ಗುಟುರುಹಾಕಿದಳು. ಮುಕ್ತಾ ನಗುತ್ತಾ “ಈ ಕಡೆ ಬನ್ನಿ ಭಾವಾ… ಈ ಗೌರೀನ ನೇವರ್ಸಿ, ಆ ಗಂಗೇಗ್ ಕೊಬ್ಜಾಸ್ತಿ ಹಂಗೆಲ್ಲಾ ಹೊಸಬ್ರನ್ನ ಹತ್ರ ಬಿಟ್ಕೋಳಲ್ಲ” ಎಂದು ಸೆಗಣಿಯ ಮಕರಿಯನ್ನು ಪಕ್ಕಕ್ಕಿಟ್ಟು ಕೈತೊಳೆದುಕೊಂಡಳು. ಗೌರಿಯ ಬಳಿ ಬಂದ ಆಯ್ಯರ್ ಅವಳ ಕತ್ತನ್ನು ಸವರಲು ಶುರುವಿಟ್ಟುಕೊಂಡರು. “ನಿಜ ಭಾವ, ಮೂರ್ಹಸು ಇತ್ತು, ಈಗ ಆರ್ತಿಂಗ್ಳಾಯ್ತು ನೀಲೂನ ರಾಘೂಭಾವ ಆಲತ್ತೂರಿಗೆ ತಗೋಂಡೋಗಿ” ಎಂದ ಮುಕ್ತಾ ಅರ್ಧ ಕಲಗಚ್ಚನ್ನು ಗಂಗೆಯ ಮುಂದಿದ್ದ ಗಂಗಾಳಕ್ಕೆ ಸುರಿದು ಬಕೀಟಿನಲ್ಲುಳಿದಿದ್ದ ಬಾಕಿ ಕಲಗಚ್ಚನ್ನು ಗೌರಿಯಮುಂದಿಕ್ಕಿದಳು. ಬುರುಬುರು ಸದ್ದುಮಾಡುತ್ತಾ ಗಂಗೆಗೌರಿಯರು ಪೈಪೋಟಿಯಲ್ಲಿ ಕಲಗಚ್ಚು ಕುಡಿಯತೊಡಗಿದರು. ಸ್ವಲ್ಪದೂರದಲ್ಲಿ ಕಟ್ಟಿಹಾಕಿದ್ದ ಲಕ್ಷ್ಮಿ ಕರು ಅಷ್ಟರಲ್ಲಾಗಲೇ ಅಶಾಂತಿಯಿಂದ ನಿಂತಲ್ಲೇ ಕುಪ್ಪಳಿಸುತ್ತಿತ್ತು. “ಕುಣೀಬೇಡ್ವೇ…, ಬರ್ತಿದೀನಿ” ಎನ್ನುತ್ತಾ ಮುಕ್ತಾ ಕರುವಿಗೆ ಕಟ್ಟಿದ್ದ ಹಗ್ಗ ಬಿಚ್ಚಿದಳು. ಅದಕ್ಕೆಂದೇ ಕಾಯುತ್ತಿದ್ದ ಲಕ್ಷ್ಮಿ ಛಂಗನೆ ಹಾರುತ್ತಾ ಬಂದು ನೇರ ಗೌರಿಯ ಕೆಚ್ಚಲಿಗೆ ಬಾಯಿಹಾಕಿ ಸೊರಸೊರ ಹಾಲುಕುಡಿಯತೊಡಗಿತು. ಗೌರಿ ಲಕ್ಷ್ಮಿಯನ್ನು ನೆಕ್ಕುತ್ತಾ ಮುದ್ದಿಸುತ್ತಿದ್ದಂತೆ “ಇವ್ಳಾತ್ರ ನೋಡಪ್ಪಾ…” ಎನ್ನುತ್ತಾ ಬಂದ ಮುಕ್ತಾ, ಲಕ್ಷ್ಮಿಯ ಪಕ್ಕಕುಳಿತು ಅದರ ಬೆನ್ನು ನೇವರಿಸಹತ್ತಿದಳು.

ಗೌರಿಯ ಬದಿಯಲ್ಲಿ ನಿಂತಿದ್ದ ಅಯ್ಯರಿಗೆ ಕೆಳಗೆ ಕುಕ್ಕರಗಾಲಿನಲ್ಲಿ ಕುಳಿತಿದ್ದ ಮುಕ್ತಾಳ ಮೊಲೆಗಳು ಎದ್ದುಕಾಣುತ್ತಿದ್ದುವು. ಮೈಮನದಲ್ಲಿ ಕಾಮವರ್ಧಿನಿಯ ಸ್ವರ ಸಂಚಾರ! “ಅಂತೂ ಅಪ್ಪಯ್ಯನ್ನ ಸ್ವರ್ಗ ಸೇರಿಸ್ದಂಗಾಯ್ತು ಅನ್ನಮ್ಮ” ಎಂದ ಅಯ್ಯರಿಗೆ ಉತ್ತರಿಸದೆ ಮುಕ್ತಾ ಸುಮ್ಮನೆ ನಿಡುಸುಯ್ದಳು. “ನಿನ್ಮದ್ವೆ ನೋಡ್ದೆ ಅಪ್ಪಯ್ಯ ಹೋಗ್ಬುಟ್ರು ಅನ್ನೋದೇ ಬೇಜಾರು ನೋಡು” ಎಂದವರ ಗೌರಿಯಮೇಲಿನ ಹಿಡಿತ ಬಿಗಿಗೊಂಡಿತ್ತು. “ಏನ್ಮಾಡೋದ್ ಭಾವಾ… ನಾನ್ಪಡ್ಕೊಂಬಂದಿದ್ ಅಷ್ಟೇ…” ಎಂದ ಮುಕ್ತಾಳ ಕಣ್ಣಲ್ಲಿ ನೀರಾಡಿತು. “ಅಪ್ಪಯ್ಯ ಇಲ್ಲಾನ್ನೋ ಕೊರಗು ಮುಕ್ತಾಪುಟ್ಟೀನ ಕಾಡ್ಬಾರ್ದು ಗೊತ್ತಾಯ್ತಾ ಚಿನ್ನಾ…” ಎನ್ನುತ್ತಾ ಅಯ್ಯರ್ ಮುಕ್ತಾಳ ಪಕ್ಕ ಕುಕ್ಕರುಗಾಲಿನಲ್ಲಿ ಕುಳಿತು ಅವಳ ತಲೆ ನೇವರಿಸಿದರು. ದುಃಖತಡೆಯಲಾರದೆ ಮುಕ್ತಾ ಅಳಲಾರಂಭಿಸಿದಳು. “ಅಳ್ಬಾರ್ದು ಪುಟ್ಟಾ…” ಎಂದ ಅಯ್ಯರ್ ಕೈಗಳು ಅವಳ ಕೆನ್ನೆಗಳನ್ನು ಸವರುತ್ತಾ ಕುತ್ತಿಗೆಗೆ ಜಾರಿದ್ದುವು. ಮುಕ್ತಳಿಗೆ ಅಯ್ಯರಿನ ಸ್ಪರ್ಶದ ಹಿಂದಿನ ಮರ್ಮದ ಅರಿವಾದಂತಾಗಿ ಮುಖ ವ್ಯಗ್ರಗೊಳ್ಳುತಿದ್ದುದು ಕಾಮಾತುರನ ಅರಿವಿಗೆ ಬರಲಿಲ್ಲ. “ನಿನಗೆ ನಾನ್ಬೇರೆ ಅಲ್ಲ ನಿನ್ನಪ್ಪಯ್ಯ ಬೇರೆ ಅಲ್ಲ…” ಕುತ್ತಿಗೆಯಿಂದ ಇನ್ನಷ್ಟು ಕೆಳಗಿಳಿದ ಕೈಗಳು ಕುಪ್ಪಸದಂಚನ್ನು ದಾಟಿ ಮೊಲೆಗಳನ್ನು ಮುಟ್ಟಿದೊಡನೆ “ಥೂ… ನಿಮ್ಮ ಜನ್ಮಕ್ಕಿಷ್ಟು…” ಎಂದ ಮುಕ್ತಾ ತನ್ನೆಲ್ಲ ಶಕ್ತಿಯನ್ನೊಗ್ಗೂಡಿಸಿ ಅಯ್ಯರನ್ನು ಝಾಡಿಸಿ ತಳ್ಳಿಬಿಟ್ಟಳು. ತಳ್ಳಿದ ರಭಸಕ್ಕೆ ಅಯ್ಯರ್ ಮೂರಡಿ ದೂರ ಹೋಗಿ ಬಿದ್ದರು. “ಅಪ್ಪಾ ಅಂತೆ ಅಪ್ಪಾ, ನಮ್ಮಪ್ಪಯ್ಯನ ಹೆಸರುಹೇಳೋ ಯೋಗ್ಯತೆಯಾದ್ರೂ ಇದ್ಯಾ ನಿಮ್ಗೆ…ನಿಮ್ಮಗಳು ಬೃಂದಕ್ಕನ್ಹತ್ರಾನೂ ಇದೇ ನಾಚಿಕ್ಗೇಡಿನ್ ಕೆಲ್ಸ ಮಾಡ್ತೀರೇನು?” ಎದ್ದುನಿಂತ ಮುಕ್ತಾ ಉಗ್ರಳಾಗಿ ಕಿರುಚುತ್ತಿದ್ದಳು. ಇಷ್ಟುದಿನ ಅತ್ತಿದ್ದರಿಂದಲೋ ಏನೋ ನಿಗಿನಿಗಿ ಸುಡುತ್ತಿದ್ದ ಅವಳ ಕೆಂಡದಂಥ ಕಣ್ಣುಗಳನ್ನು ಕಂಡ ಅಯ್ಯರ್ ಪೂರಾ ಬೆದರಿಹೋದರು. “ನೀ ನನ್ತಪ್ತಿಳೀತಿದ್ದಿ ಮುಕ್ತಾ… ಯಾರಾದ್ರೂ ಕೇಳಿಸ್ಕೊಂಡ್ರೆ ಏನನ್ಕೊಂಡಾರು?!” ಅಯ್ಯರ್ ತೊದಲುತ್ತಿದ್ದರು. “ಅನ್ಕೋಳೋದೇನ್ಬಂತು ನಿಮ್ಮ ಅಯೋಗ್ಯತನ ಎಲ್ಲಾರ್ಗೂ ಗೊತ್ತಾಗತ್ತೇ ಅಷ್ಟೇ…”
“ಬೇಡ ತಾಯೀ… ನಿನ್ಕೈಮುಗೀತೀನಿ, ತಪ್ತಿಳ್ವಳ್ಕೇಲಿ ನನ್ಮಾನ ಕಳೀಬೇಡ್ವೇ… ನೀನ್ಯಾರ್ಗಾದ್ರೂ ಏನಾರ ಹೇಳುದ್ರೆ ನೋಡು ಖಂಡಿತಾ ನಾ ಪ್ರಾಣ ಕಳ್ಕೊಂಬುಡ್ತೀನಿ, ದುಡ್ಕಿ ನಿಮ್ಮಕ್ಕನ್ನ ವಿಧ್ವೆ ಮಾಡ್ಬಿಡ್ಬೇಡ್ವೇ…” ದೈನ್ಯರಾಗಿ ಅಂಗಲಾಚಿದರು.

“ನನ್ಕಣ್ಮುಂದಿರ್ಬೇಡಿ, ತೊಲಗಿ ಇಲ್ಲಿಂದ” ತಿರಸ್ಕಾರದಿಂದ ಕಿರುಚಿದಳು.
“ಹೋಗ್ತೀನಿ, ಈಗ್ಲೇ ಹೋಗ್ತೀನಿ, ಈ ಮನೆ ಮಾನ ಮರ್ಯಾದೆ ಮಾತ್ರ ನಿನ್ಕೈಲಿದೆ ಅನ್ನೋದ್ಮರೀಬೇಡ ಅಷ್ಟೇ…” ಎಂದು ಗದ್ಗದಿತರಾಗಿ ಹೇಳಿ ಅಯ್ಯರ್ ತಣ್ಣಗೆ ಕೊಟ್ಟಿಗೆಯಿಂದ ಹೊರನಡೆದರು.
ಮುಕ್ತಳಿಗೆ ದುಃಖ ಉಮ್ಮಳಿಸಿ ಬಂತು “ಅಪ್ಪಯ್ಯ ಸತ್ ಎರಡ್ವಾರ ಆಗಿಲ್ಲ ಆಗ್ಲೆ ಸ್ವಂತ ಭಾವನ ಹದ್ದಿನ್ಕಣ್ಣು ಬಿತ್ತೂಂದ್ರೆ ಮುಂದೆ ನನ್ಕತೆ ಹೆಂಗಪ್ಪೋ…” ಎಂದು ಜೋರಾಗಿ ಅಳತೊಡಗಿದಳು. ಒಂದೈದು ನಿಮಿಷ ಹಾಗೇ ಅಳುತ್ತಾ ಕೂತಿದ್ದವಳಿಗೆ ಯಾರಾದರೂ ಬಂದರೆ ಏನು ಹೇಳುವುದೆನ್ನಿಸಿತು. ಬೇಗ ಸಾವರಿಸಿಕೊಂಡು ಧಿಗ್ಗನೆ ಎದ್ದಳು. ಮೊಗೆಮೊಗೆದು ಮುಖಕ್ಕೆ ನೀರು ಹಾಕಿಕೊಂಡ ಮೇಲೆ ಒಂದಷ್ಟು ನಿಗ್ರಹ ಸಾಧ್ಯವಾಯಿತು. ನಿಧಾನಕ್ಕೆ ಮನೆಯತ್ತ ನಡೆದಳು.

ಮರುದಿನ ಮುಂಜಾವಿಗೇ ಎದ್ದ ಅಯ್ಯರ್ ಬೇಗಬೇಗನೆ ಸಿದ್ಧಗೊಂಡು ಕಾವಶ್ಶೇರಿಯಿಂದ ಹೊರಟುಬಿಟ್ಟರು. ಮುಕ್ತಳಿನ್ನೂ ಎದ್ದಿರಲಿಲ್ಲ. “ಎಷ್ಟಾದ್ರೂ ಮುಕ್ತಾ ನನ್ನ ಮಗಳಂಗೆ, ಆ ಕೂಸು ಹುಟ್ದಾಗ ನಾನಿಲ್ಲೇ ಇರ್ಲಿಲ್ವೇ, ಆ ಮಗು ಲಗ್ನ ಆಗ್ಲಿಲ್ಲಾಂತ ಯಾರೂ ಚಿಂತಿಸ್ಬೇಡಿ, ನಾನಿಲ್ವೇ ತಂದೇ ಸ್ಥಾನ್ದಲ್ಲಿ… ನಾನೆಲ್ಲಾ ನೋಡ್ಕತೀನಿ ಹ್ಹಿ ಹ್ಹಿ ಹ್ಹಿ, ನಾನೆಲ್ಲಾ ನೋಡ್ಕತೀನಿ… ಬರ್ಲಾ? ಬರ್ತೀನಿ ಹ್ಹಿ ಹ್ಹಿ” ಎಂದು ಪೆಚ್ಚುಪೆಚ್ಚಾಗಿ ಒದರಿ ಕಂಬಿ ಕಿತ್ತರು.

ಮದುವೆಗೆ ಅರ್ಹಳಾದ ಹುಡುಗಿಯ ತಂದೆ ಗತಿಸಿದಲ್ಲಿ, ವರುಷದೊಳಗೆ ಹುಡುಗಿಯ ಲಗ್ನ ನೆರವೇರಿಸುವುದು ವಾಡಿಕೆ. ಹೀಗೆ ಮಾಡುವುದರಿಂದ ಕನ್ಯಾದಾನದ ಪುಣ್ಯವು ದಿವಂಗತ ತಂದೆಗೆ ಲಭಿಸಿ ವಧುವಿಗೂ ಶ್ರೇಯಸ್ಸಾಗುವುದೆಂದು ಹಿಂದೂ ಸಂಪ್ರದಾಯದ ನಂಬಿಕೆ. ಹಾಗಾಗಿ ವೈದ್ಯನಾಥ ಶಾಸ್ತ್ರಿಗಳ ನಿಧನದ ಬೆನ್ನಲ್ಲೇ ಹತ್ತಿರದ ಬಂಧುವರ್ಗದವರೆಲ್ಲಾ ಮುತುವರ್ಜಿವಹಿಸಿ ಮುಕ್ತಳಿಗಾಗಿ ವರಾನ್ವೇಷಣೆಯಲ್ಲಿ ತೊಡಗಿದ್ದರು. ಸುಮಾರು ಆರುತಿಂಗಳೊಳಗೇ ಕಂಕಣಬಲ ಕೂಡಿಬಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಗುಮಾಸ್ತನಾಗಿದ್ದ ಮುರಳೀಧರನೆಂಬ ವರನೊಂದಿಗೆ ಮುಕ್ತಾಳ ಮದುವೆ ನಿಶ್ಚಯವಾಯಿತು. ನಿಶ್ಚಿತಾರ್ಥ ಕಳೆದು ಒಂದುತಿಂಗಳಲ್ಲಿ ಕಾವಶ್ಯೇರಿಯಲ್ಲೇ ಮದುವೆಯೆಂದು ನಿರ್ಧಾರವಾಯಿತು. ಅದರಂತೆ ಹೆಚ್ಚಿನ ಆಡಂಬರವಿಲ್ಲದೆ ಕಾವಶ್ಯೇರಿಯ ಅನಂತಪದ್ಮನಾಭಸ್ವಾಮಿಯ ಗುಡಿಯಲ್ಲಿ ವಿವಾಹ ಆಯೋಜಿಸಲಾಗಿತ್ತು. ಈ ವೇಳೆಗೆ ಸೀತಮ್ಮನಿಗೆ ಹಿಡಿದಿದ್ದ ಸನ್ನಿಯೂ ಗುಣವಾಗಿ ಎಂದಿನಂತಾಗಿದ್ದರು. ಅಯ್ಯರ್ ದಂಪತಿಗಳು ತಮ್ಮ ಕೊನೆಯ ಎರಡು ಮಕ್ಕಳೊಂದಿಗೆ ಮದುವೆಗೆ ಬಂದಿದ್ದರು. ಮನೆಯಲ್ಲಿ ಹಾರ ಹಾಕಲಾಗಿದ್ದ ತಂದೆಯ ಭಾವಚಿತ್ರಕಂಡ ಸೀತಮ್ಮನ ಕರುಳುಜಗ್ಗಿತು. ಸುತ್ತಲಿದ್ದ ಸಂಭ್ರಮದ ವಾತಾವರಣದಲ್ಲಿ ಹೆಚ್ಚಿನ ಪ್ರಲಾಪಕ್ಕೆ ಆಸ್ಪದವಿಲ್ಲವೆಂದು ಮನಗಂಡ ಸೀತಮ್ಮ ಸೀರೆಯ ಸೆರಗಿನಿಂದ ಕಣ್ಣೊರೆಸಿಕೊಂಡು ಸಮ್ಮನಾದರು.

ಮುರಳೀಧರನದು ಮುಕ್ತಾಳ ಅಂದಕ್ಕೆ ತಕ್ಕ ವ್ಯಕ್ತಿತ್ವ. ಗಂಡು ಹೆಣ್ಣಿನ ಜೋಡಿ ಕಣ್ತುಂಬಿಕೊಳ್ಳುವಂತಿತ್ತು. ವಿವಾಹ ಸರಳವಾದರೂ ಶಾಸ್ತ್ರೋಕ್ತವಾಗಿ ನೆರವೇರಿತು. ಬೇಸಗೆ ರಜೆ ಇದ್ದಕಾರಣ ನೆರೆಯ ಸ್ಕೂಲುಮನೆಯಲ್ಲಿ ಆರತಕ್ಷತೆ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೊಟ್ಟಿಗೆಯಲ್ಲಿ ನಡೆದ ಘಟನೆಯ ನೆನಪಿನ ಗುಂಗಿನಿಂದ ಹೊರಬಂದಂತಿದ್ದ ಮುಕ್ತಾ ರಾಜೂಭಾವನೊಂದಿಗೆ ಎಂದಿನಂತೆ ಸಹಜವಾಗಿಯೇ ಇದ್ದಳು. ಆದರೆ ಅಯ್ಯರ್ ಮಾತ್ರ ಮುಕ್ತಾ ನನ್ನ ಮಗಳಿದ್ದಂತೆ ಎಂಬ ಅವಿರತ ಪ್ರಲಾಪ ನಿಲ್ಲಿಸುವಂತೆ ಕಾಣಲಿಲ್ಲ. ವರನ ಮುಂದೆಯೂ ಇದೇ ವರಸೆ ಮುಂದುವರೆದಾಗ ಮಾತ್ರ ಮುಕ್ತಾ ಬೀರಿದ ತಿರಸ್ಕಾರದ ನೋಟವನ್ನು ಅಯ್ಯರ್ ಗಮನಿಸದಿರಲಿಲ್ಲ. ಆದರೆ ಮಗುವಾಗಿದ್ದಾಗ ತನ್ನನ್ನು ಎತ್ತಿ ಆಡಿಸಿದ್ದರೆಂಬ ವಿಶ್ವಾಸಕ್ಕೋ ಇಲ್ಲಾ… ದಿನೇ ದಿನೇ ತುಟ್ಟಿಯಾಗುತ್ತಿದ್ದ ಬಂಗಾರದ ಬೆಲೆಯನ್ನು ಕಂಡೋ ಅಯ್ಯರ್ ಆರತಕ್ಷತೆ ವೇಳೆ ತೊಡಿಸಿದ ಹತ್ತುತೊಲದ ಬಂಗಾರದ ಸರವನ್ನು ಮಾತ್ರ ಮುಕ್ತಾ ತಣ್ಣಗೆ ಸ್ವೀಕರಿಸಿದಳು. ದುಬಾರಿ ಉಡುಗೊರೆ ತೆತ್ತು ಕೊಟ್ಟಿಗೆಯ ಅವಘಡಕ್ಕೆ ತೇಪೆಹಚ್ಚಿದ ಸಮಾಧಾನದಲ್ಲಿ ಅಯ್ಯರ್ ತಿರುವಾರೂರಿಗೆ ಮರಳಿದರು. ಹೈದರಾಬಾದಿಗೆ ತೆರಳಿದ ನವ ವಧೂವರರು ತನ್ನ ಬ್ಯಾಂಕಿನ ಬಳಿಯೇ ಮುರಳೀಧರ ಗೊತ್ತುಮಾಡಿಕೊಂಡಿದ್ದ ಬಾಡಿಗೆಮನೆಯಲ್ಲಿ ಸಂಸಾರ ಹೂಡಿದರು.

-ನಾರಾಯಣ ಎಮ್ ಎಸ್


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಮರೆಯಲಾಗದ ಮದುವೆ (ಭಾಗ 4): ನಾರಾಯಣ ಎಮ್ ಎಸ್

Leave a Reply

Your email address will not be published. Required fields are marked *