-೩-
ಇತ್ತೀಚೆಗೆ ಸೀತಮ್ಮನ ತಂದೆಯವರ ಆರೋಗ್ಯ ಕ್ಷೀಣಿಸಿ ಹಾಸಿಗೆ ಹಿಡಿದುಬಿಟ್ಟಿದ್ದರು. ಮಧುರಮ್ಮನವರಲ್ಲೂ ಮುಂಚಿನ ಕಸುವು ಉಳಿದಿರಲಿಲ್ಲ. ಹಾಗಾಗಿ ಈ ಬಾರಿ ತನ್ನ ಏಳನೇ ಹೆರಿಗೆಗೆ ಸೀತಮ್ಮ ಕಾವಶ್ಯೇರಿಗೆ ಹೋಗಲಿಲ್ಲ. ಆದರೆ ಬಸುರಿ ಹೆಂಗಸಿಗೆ ತಗುಲಿದ ಟಯ್ಫಾಡ್ ಖಾಯಿಲೆ ಸೀತಮ್ಮಳನ್ನು ಹಣಿದುಬಿಟ್ಟಿತು. ಸಾಲದ್ದಕ್ಕೆ ಏಳನೇ ತಿಂಗಳಿಗೆ ಗರ್ಭಪಾತವೂ ಆಗಿಹೋಯಿತು. ಸೀತಮ್ಮಳ ಪುಣ್ಯ! ಅವಳ ಆಯಸ್ಸು ಗಟ್ಟಿಯಿದ್ದಿರಬೇಕು. ತಿರವಾರೂರಿನಲ್ಲಿ ಉಳಿಯದೆ ವಾಡಿಕೆಯಂತೆ ಕಾವಶ್ಯೇರಿಗೆ ಹೋಗಿಬಿಟ್ಟಿದ್ದರೆ ಏನೇನೂ ವೈದ್ಯಕೀಯ ಸೌಕರ್ಯಗಳಿಲ್ಲದ ಆ ಕುಗ್ರಾಮದಲ್ಲಿ ಅವಳು ಬದುಕುಳಿಯುತ್ತಿದ್ದದು ಅನಮಾನವೇ. ಒಂದೆರಡು ತಿಂಗಳಲ್ಲಿ ಸೀತಮ್ಮ ದೈಹಿಕವಾಗಿ ತಕ್ಕಮಟ್ಟಿಗೆ ಚೇತರಿಸಿಕೊಂಡಳಾದರೂ ಆಕೆಗೆ ಹಿಡಿದಿದ್ದ ಸನ್ನಿಯಿನ್ನೂ ಬಿಟ್ಟಿರಲಿಲ್ಲ. ಸೀತಮ್ಮನ ಸಧ್ಯದ ಸ್ಥಿತಿ ಅಯ್ಯರಿಗೆ ಹಲವಾರು ಸಮಸ್ಯೆಗಳನ್ನು ತಂದೊಡ್ಡಿತ್ತು. ಹದಿನಾರು ತುಂಬಿದ್ದ ಬೃಂದಾಳಿಗೆ ತಡಮಾಡದೆ ಗಂಡು ನೋಡಬೇಕಿತ್ತು. ಸೀತಮ್ಮನ ಈಗಿನ ಸ್ಥಿತಿಯಿಂದಾಗಿ ಒಳ್ಳೆಯ ಸಂಬಂಧಗಳು ಕೈತಪ್ಪುವ ಸಾಧ್ಯತೆಗಳಿಲ್ಲದಿರಲಿಲ್ಲ. ಆ ಚಿಂತೆ ಒಂದೆಡೆಯಾದರೆ ದಿನಕಳೆದಂತೆ ಏರುತ್ತಿದ್ದ ತಮ್ಮ ಲೈಂಗಿಕ ದಾಹವನ್ನು ತಣಿಸುವ ದಾರಿಕಾಣದೆ ಅಯ್ಯರ್ ಚಿಂತೆಗೀಡಾಗಿದ್ದರು. ಈ ಎಲ್ಲ ಬೆಳವಣಿಗೆಗಳ ಒತ್ತಡದಿಂದ ಅಯ್ಯರ್ ಕಂಗಾಲಾಗಿ ಹೋಗಿದ್ದರು.
ಹೀಗಿರುವಾಗ ಒಂದು ಮಧ್ಯಾಹ್ನ ಮನೆಯ ಹಜಾರದಲ್ಲಿದ್ದ ತೂಗುಯ್ಯಾಲೆಯಲ್ಲಿ ಅಯ್ಯರ್ ತೂಕಡಿಸುತ್ತಾ ಕುಳಿತಿದ್ದರು. ಇದ್ದಕ್ಕಿದ್ದಂತೆ ಬಾಗಿಲು ಬಡಿದಂತಾಯಿತು. ಹಿಂದೆಯೇ ಪೋಸ್ಟ್ ಎಂದು ಕೂಗಿದ ಸದ್ದಿನೊಂದಿಗೆ ಕಿಟಕಿಯಿಂದ ಪೋಸ್ಟ್ ಮ್ಯಾನ್ ತೂರಿಬಿಟ್ಟ ಒಂದೂವರಾಣೆ ಪೋಸ್ಟ್ ಕಾರ್ಡು ಗಾಳಿಯಲ್ಲಿ ತೇಲಿ ಬಂದು ಅಯ್ಯರ್ ಕಾಲ ಬಳಿ ಬಿತ್ತು. ಕಾರ್ಡಿನ ಅಂಚುಗಳಿಗೆ ಹಚ್ಚಲಾಗಿದ್ದ ಕಪ್ಪುಮಸಿಯನ್ನು ಕಂಡ ಅಯ್ಯರ್ ಕೂಡಲೇ ಬಂದದ್ದು ಅಶುಭ ಸಮಾಚಾರವೆಂದು ಗ್ರಹಿಸಿದರು. ಕಾಗದ ತೆಗೆದು ನೋಡಿದಾಗ ಮಾವ ವೈದ್ಯನಾಥ ಶಾಸ್ತ್ರಿಗಳ ಮರಣವಾರ್ತೆ ಇತ್ತು.
ತಂದೆಯ ಸಾವಿನಸುದ್ದಿ ತಿಳಿಸಿದರೂ ಸನ್ನಿಹಿಡಿದಿದ್ದ ಸೀತಮ್ಮ ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಮನದಲ್ಲೇ ಲೆಕ್ಖಮಾಡಿ ನೋಡಿ ಇವತ್ತಿಗಾಗಲೇ ಏಳುದಿನ… ಹತ್ತನೇ ದಿನ ಬೆಳಗ್ಗೆ ಧರ್ಮೋದಕಕ್ಕೆ ಕಾವಶ್ಯೇರಿಯಲ್ಲಿರಬೇಕೆಂದರೆ ಮರುದಿನವೇ ಹೊರಡಬೇಕು. ಸಧ್ಯದ ಪರಿಸ್ಥಿತಿಯಲ್ಲಿ ಒಬ್ಬರೇ ಹೊರಡುವುದೇ ಸರಿಯೆನಿಸಿತು. ಮರುದಿನ ರಾತ್ರಿ ಹೊರಟರೆ ಒಂಭತ್ತನೇ ದಿನ ಸಂಜೆಗೆಲ್ಲಾ ಪಾಲ್ಘಾಟ್ ತಲಪಿಬಿಡಬಹುದು. ಆದರೆ ಸಾವಿನಮನೆಗೆ ಒಂಭತ್ತನೇ ದಿನ ಹೋಗುವಂತಿಲ್ಲ. ಸಾವಿಗೆ ಹೋಗುತ್ತಿದ್ದ ಕಾರಣ ಅದಕ್ಕೆ ಮೊದಲು ಬೇರೆ ಯಾವ ನೆಂಟರ ಮನೆಗೂ ಹೋಗುವಂತಿರಲಿಲ್ಲ. ಹಾಗಾಗಿ ರಾತ್ರಿ ಪಾಲ್ಘಾಟಿನ ಯಾವುದಾದರೂ ಹೋಟೆಲ್ಲಿನಲ್ಲಿ ತಂಗಿ ಹತ್ತನೇ ದಿನ ಮುಂಜಾವಿಗೇ ಪಾಲ್ಘಾಟಿನಿಂದ ಕಾವಶ್ಯೇರಿಗೆ ಹೊರಡುವುದೇ ಸರಿಯೆಂದು ತೀರ್ಮಾನಿಸಿದರು. ಅಳಿಯನಿಗೆ ಮೂರು ದಿನಕ್ಕೇ ಸೂತಕ ಕಳೆದಿತ್ತಾದರೂ ಸುದ್ದಿ ತಿಳಿದಿದ್ದಕ್ಕೊಮ್ಮೆ ಸ್ನಾನ ಅಂತ ಮಾಡಿದರು. ರಾತ್ರಿ ಮಕ್ಕಳಿಗೆ ವಿಷಯ ತಿಳಿಸಿ ಮತ್ತೆ ಪ್ರಯಾಣದ ತಯಾರಿ ಮಾಡಿದರಾಯಿತೆಂದುಕೊಂಡು ಕಾಫಿ ಕುಡಿದು ಹೋಟೆಲ್ಲಿಗೆ ಹೊರಟರು.
ಅಂದುಕೊಂಡಂತೆ ಹತ್ತನೆಯ ದಿನ ಬೆಳಗ್ಗೆ ಒಂಭತ್ತು ಘಂಟೆಗೆಲ್ಲಾ ಅಯ್ಯರ್ ಕಾವಶ್ಯೇರಿ ತಲುಪಿದ್ದರು. ಮಾವನಮನೆ ಇನ್ನೂ ತುಸುದೂರವಿರುವಂತೆ ಇದ್ದ ಶಿವನ ದೇವಸ್ಥಾನ ದಾಟುತ್ತಿದ್ದಾಗಲೇ ಮಂತ್ರಘೋಷ ಕಿವಿಗೆಬಿದ್ದು ವೈದಿಕರು ಈಗಾಗಲೇ ಕಾರ್ಯ ಆರಂಭಿಸಿರಬೇಕೆಂದುಕೊಂಡರು. ಮನೆಯ ಮುಂದಿನ ಜಗುಲಿಯ ಬಳಿ ಇದ್ದ ಚೊಂಬು ತೆಗೆದುಕೊಂಡು ಪಕ್ಕದಲ್ಲಿದ್ದ ಕೊಪ್ಪರಿಗೆಯಿಂದ ನೀರುಮೊಗೆದು ಕೈಕಾಲು ತೊಳೆದುಕೊಂಡರು. ಓಣಿಯಂತಿದ್ದ ಮುಂಗೋಣೆಯನ್ನು ದಾಟಿ ಹಜಾರ ಪ್ರವೇಶಿಸಿದರು. ಹಜಾರದ ಮಧ್ಯದಲ್ಲಿದ್ದ ತೊಟ್ಟಿಯ ಪಕ್ಕದಲ್ಲಿ ಮಣೆಗಳ ಮೇಲೆ ಕುಳಿತ ವೈದಿಕರಿಬ್ಬರು ಎದುರು ಕುಳಿತಿದ್ದ ಅಯ್ಯರ್ ಭಾವಮೈದುನರಿಗೆ ನಡೆಯುತ್ತಿದ್ದ ಕಾರ್ಯದ ಮಾರ್ಗದರ್ಶನ ಮಾಡುತ್ತಿದ್ದರು. ಕೇಶಮುಂಡನ ಮಾಡಿಸಿಕೊಂಡ ಮೈದುನರೆಲ್ಲರೂ ಸಾಲಾಗಿ ಕುಳಿತು ತಂದೆಯ ಅಪರಕಾರ್ಯಗಳಲ್ಲಿ ತೊಡಗಿಕೊಂಡಿದ್ದ ದೃಶ್ಯಕಂಡು ಅಯ್ಯರ್ ಕರುಳು ಜಗ್ಗಿತು. ಸಣ್ಣಗೆ ನಿಡುಸುಯ್ದು ಅಲ್ಲೇ ಕೆಳಗೆ ನೆಲದ ಮೇಲೆ ಕುಳಿತರು. ಅಷ್ಟರಲ್ಲಿ ಇವರನ್ನು ಗಮನಿಸಿದ ನೆರೆಯ ಆಲತ್ತೂರಿನ ದೊಡ್ಡ ಶಡ್ಡಕ ರಾಘು ಅಣ್ಣ ಬಳಿಬಂದು ಮುಗುಳ್ನಕ್ಕು ಅಯ್ಯರ್ ಬೆನ್ನುಸವರಿ ತಮ್ಮೊಡನೆ ಬರುವಂತೆ ಸನ್ನೆಮಾಡಿ ಹೊರನಡೆದರು. ಅಯ್ಯರ್ ಅವರನ್ನು ಹಿಂಬಾಲಿಸಿದರು.
ಹೊರಬಂದೊಡನೆ ಶಡ್ಡಕರು “ಏನು ರಾಜನ್ ಹೆಂಗಿದೀಯ? ಪ್ರಯಾಣದಲ್ಲೇನೂ ಕಷ್ಟವಾಗ್ಲಿಲ್ವಲ್ಲ? ಊರಲ್ಲಿ ಸೀತಾ, ಮಕ್ಳೂ ಎಲ್ಲಾ ಚೆನ್ನಾಗಿದಾರ್ತಾನೆ?” ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. “ಹೂಂ, ಎಲ್ಲಾ ಮಾಮೂಲೀನೆ… ವಿಶೇಷವೇನಿಲ್ಲ” ಅಂದರು ಅಯ್ಯರ್ ಚುಟುಕಾಗಿ. “ಧರ್ಮೋದಕಕ್ಕೆ ಇನ್ನೂ ಹೊತ್ತಿದೆ. ಅಷ್ಟರಲ್ಲಿ ಕೊಳದಲ್ಲೊಂದು ಮುಳುಗುಹಾಕಿ ಬಂದ್ಬಿಡುವಂತೆ ಬಾ…” ಶಡ್ಡಕರೆಂದರು. ಅಯ್ಯರ್ ಹಜಾರಕ್ಕೆ ಹೋಗಿ ಅಲ್ಲಿ ಕಿಟಕಿಯ ಬಡುವಿನಲ್ಲಿಟ್ಟಿದ್ದ ತನ್ನ ಕಿಟ್ ಬ್ಯಾಗಿನಿಂದ ಒಂದು ಪಂಚೆ, ಚೌಕ ತೆಗೆದುಕೊಂಡು ಹೊರಬಂದರು.
ಶಡ್ಡಕರಿಬ್ಬರೂ ಹತ್ತಿರದಲ್ಲಿದ್ದ ಕೊಳದತ್ತ ನಡೆದರು. “ಮಾವನೋರ್ಗೆ ಎಪ್ಪತ್ತಾಗಿದ್ರೂ ಸಾಯೋ ಅಂಥದ್ದೇನಾಗಿರ್ಲಿಲ್ಲ… ಆರೋಗ್ಯವಾಗೇ ಇದ್ರು” ಅಂದ ಶೆಡ್ಡುಕರಿಗೆ “ಎಲ್ಲಾ ಹ್ಯಾಗಾಯ್ತು ರಾಘು ಅಣ್ಣ?” ಅಂತ ಅಯ್ಯರ್ ಕೇಳಿದರು. “ಏನು ಹೇಳೋದಪ್ಪ… ಎಲ್ಲಾವಿಧಿ ಅನ್ಬೇಕಷ್ಟೆ” ಎನ್ನುತ್ತಾ ರಾಘು ಅಣ್ಣ ಹೆಗಲಿನಲ್ಲಿದ್ದ ಚೌಕವನ್ನು ತೆಗೆದು ಕೊಳದ ಮೆಟ್ಟಿಲಮೇಲಿನ ಧೂಳನ್ನು ಕೊಡವಿ ಕುಳಿತುಕೊಂಡರು. ಇನ್ನೂ ಕೆಳಗಿದ್ದ ಐದಾರು ಮೆಟ್ಟಿಲುಗಳನ್ನಿಳಿದ ಅಯ್ಯರ್ ಅಲ್ಲೇ ಒಂದು ಮೆಟ್ಟಿಲಮೇಲೆ ಪಂಚೆ ಚೌಕವನ್ನಿರಿಸಿ ಉಟ್ಟ ಪಂಚೆಯಲ್ಲೇ ನಿಧಾನಕ್ಕೆ ಕೊಳದಲ್ಲಿಳಿದು ಒಂದು ಮುಳುಗುಹಾಕಿ ಎದ್ದು ಬಂದರು. ಛಳಿಯಿಂದ ನಡುಗುತ್ತಾ ಮೆಟ್ಟಿಲಮೇಲೆ ನಿಂತ ಅಯ್ಯರ್ ಚೌಕದಿಂದ ಮೈಯೊರೆಸಿಕೊಳ್ಳುತ್ತಿದ್ದಂತೆಯೇ ರಾಘು ಅಣ್ಣ ಮಾತು ಮುಂದುವರೆಸಿದರು, ನನ್ಗನ್ಸತ್ತೇ…ಸಾಯುವ ಹಿಂದಿನದಿನವೇ ಮಾವನೋರ್ಗೆ ಹಾರ್ಟ್ ಅಟ್ಯಾಕ್ ಆಗಿರ್ಬೇಕೂಂತ. ಸ್ನಾನ ಮಾಡ್ತಿದ್ದೋರ್ಗೆ ಎದೆನೋವು ಕಾಣಿಸ್ಕೊಂಡು ತುಂಬಾ ಸುಸ್ತೂ ಅನ್ಸಿ ಚೆನ್ನಾಗಿ ಬೆವೆತ್ರಂತೆ… ಸ್ನಾನ ಮಾಡ್ದೋರು ತೀರ ಪೂಜೇನೂ ಮಾಡ್ದೆ ಸ್ವಲ್ಪ ರೆಸ್ಟ್ ತಗೋತೀನಿ ಅಂತ ಹೋಗಿ ಮಲಕ್ಕೊಂಡ್ರೂ ಅಂದ್ರೆ ಲೆಕ್ಕ ಹಾಕ್ಕೋ…”, ಅದಕ್ಕೆ ಅಯ್ಯರ್ “ಅಯ್ಯೋ ದೇವ್ರೆ ಇಷ್ಟಾದ್ರೂ ಯಾರೂ ಮಾವನ್ನ ಡಾಕ್ಟ್ರತ್ರ ಕರ್ಕೊಂಡ್ ಹೋಗ್ಲಿಲ್ವೇ?!” ಅಂದರು ಆಶ್ಚರ್ಯದಿಂದ. “ನೀನೂ ಸರಿ, ಈ ಕೊಂಪೇಲಿ ಡಾಕ್ಟರಿಗೆಲ್ಲಿದೆ ಗತಿ… ಇನ್ನು ಮಾವನೋರ ಹಠ ಗೊತ್ತಿಲ್ವೇ, ಪಾಲ್ಘಾಟ್ಗೋಗೋಣ ಅಂದ ಮಕ್ಳಿಗೆ, ಏನೋ ವಾತ ನಿಶ್ಶಕ್ತಿ ಇರ್ಬೇಕು ಎರಡ್ದಿನ ಆರೈಕೆ ಮಾಡ್ಕೊಂಡ್ರೆ ತಾನೇ ಸರ್ಯಾಗತ್ತೆ ಅಂತ ಗದರಿ ಸುಮ್ನಾಗ್ಸಿದಾರೆ… ರಾತ್ರಿ ಶಿವಾಂತ ಮಲಗ್ದೋರು ಬೆಳಗ್ಗೆ ಏಳ್ಲೇ ಇಲ್ಲ ನೋಡು” ಅಂದದ್ದಕ್ಕೆ “ಏನೋ ಪುಣ್ಯಾತ್ಮ ಸುಖಮರಣ ಪಡೆದ್ರು, ಸದ್ಯ ಮನುಷ್ಯ ನರಳಲಿಲ್ಲ” ಅಂದರು ಅಯ್ಯರ್.
ಅಷ್ಟರಲ್ಲಿ ಮನೆ ಬಂತು. ಶಡ್ಡಕರಿಬ್ಬರೂ ಜಗಲಿಯಮೇಲೆ ಕುಳಿತು ಮಾತು ಮುಂದವರೆಸಿದರು. “ಏನೇ ಅನ್ನು, ಮಾವ್ನೋರ ಕಣ್ಮುಂದೇನೆ ಈ ಮುಕ್ತಂದೊಂದು ಮದ್ವೇಂತ ಆಗ್ಬಿಡ್ಬೇಕಿತ್ತು ನೋಡು. ಪಾಪ ಅವ್ರಿದ್ದ ಹಾಗೇ ಈ ಮಗೂ ಜವಾಬ್ದಾರೀನೂ ಮುಗ್ದೋಗಿದ್ದಿದ್ರೆ ಚೆನ್ನಾಗಿರ್ತಿತ್ತು”. ಎಂಬ ರಾಘು ಅಣ್ಣನ ಮಾತಿಗೆ “ಅದ್ಯಾಕ್ ಲೇಟ್ಮಾಡಿದ್ರೋ! ಈ ಮನೆ ರಿವಾಜಿನಂತೆ ನಡ್ದಿದ್ರೆ ಇಷ್ಟೊತ್ಗೆ ಮುಕ್ತಾ ಮದ್ವೆ ಆಗ್ಹೋಗಿ ಬಿಡಬೇಕಿತ್ತಲ್ಲಾ!” ಅಯ್ಯರ್ ಹೇಳಿದರು. “ಮಾವನೋರ್ಗೆ ಕಿರಿಮಗಳ ಮೇಲೆ ಎಲ್ಲಿಲ್ಲದ ಮಮತೆ, ಆ ಹುಡ್ಗೀಗೂ ಅಪ್ಪಾಂದ್ರೆ ಯಾರಿಗೂ ಇಲ್ಲದ ಸಲುಗೆ. ಮದ್ವೆ ಮಾತೆತ್ತಿದ್ರೆ ಉರಿದು ಬೀಳ್ತಿದ್ಲಂತೆ ಕಾಲೇಜು ಕಲೀಲೇಬೇಕೂಂತ ಒಂಟೀಕಾಲಲ್ ನಿಂತಿದ್ಲಂತೆ. ಪಾಪ ಮಗಳ ಆಸೆ ಹೊಸಕಿಹಾಕೋದ್ಬೇಡಾ… ಎಸೆಲ್ಸಿನಾರೂ ಮುಗಿಸ್ಲಿ ಅಂತ ಮಾವ್ನೋರೂ ಸುಮ್ನಿದ್ರಂತೆ. ಎಲ್ಲಾ ನಾವಂದ್ಕೊಂಡಂಗೆ ಎಲ್ನಡ್ಯತ್ತೆ ಹೇಳು. ಈಗ್ನೋಡು ಎಸೆಲ್ಸಿ ರಿಸಲ್ಟ್ ಬರೋಕ್ ವಾರ ಇರೋಹಂಗೆ ಮಾವ್ನೋರು ಶಿವನ್ಪಾದ ಸೇರ್ಬಿಟ್ರು. ಈಗ ನೋಡಿದ್ರೆ ಆ ಮಗು ಫಸ್ಟ್ ಕ್ಲಾಸಲ್ ಪಾಸಾಗಿದ್ಯಂತೆ!” ರಾಘು ಅಣ್ಣ ಪೂರ್ತಿ ಪ್ರವರಾನೆ ಒಪ್ಪಿಸಿದ್ದರು. ಅದೇ ಹೊತ್ತಿಗೆ ಒಂದು ತಟ್ಟೆಯಲ್ಲಿ ಎರಡು ಲೋಟ ಕಾಫಿ ಹಿಡಿದುಬಂದ ಮುಕ್ತಾ ಇಬ್ಬರು ಭಾವಂದಿರಿಗೂ ಕಾಫಿಕೊಟ್ಟು ಒಳಹೋದಳು. ವರುಷಗಳ ನಂತರ ಮುಕ್ತಾಳನ್ನು ನೋಡುತ್ತಿದ್ದ ಅಯ್ಯರ್ ಯಾಕೋ ಅವಳನ್ನು ಕಂಡಕೂಡಲೆ ಗರ ಬಡಿದಂತಾಗಿಬಿಟ್ಟರು. ರಾಘು ಅಣ್ಣ ಉತ್ಸಾಹದಿಂದ ಮಾತು ಮುಂದುವರೆಸಿದ್ದರಾದರೂ ಅಯ್ಯರ್ ಮಾತ್ರ ಒಂಥರ ಮಂಕಾಗಿ ಕುಳಿತುಬಿಟ್ಟಿದ್ದರು.
“ಎಲ್ರೂ ಧರ್ಮೋದ್ಕಕ್ ಬನ್ನೀ…” ಹಜಾರದಿಂದ ತೇಲಿಬಂದ ಪುರೋಹಿತರ ಗಟ್ಟಿದನಿ ಅಯ್ಯರನ್ನು ತಾಕಲಿಲ್ಲ. ರಾಘು ಅಣ್ಣ, ಅಯ್ಯರ್ ಮೈಯಲುಗಿಸಿ “ಎದ್ದೇಳಪ್ಪ ರಾಜನ್, ಧರ್ಮೋದ್ಕಕ್ ಹೊತ್ತಾಯ್ತಂತೆ… ವೈದಿಕರು ಕರೀತಿದಾರೆ, ಬಾ ಹೋಗಣ” ಎಂದರು. ಅಯ್ಯರ್ ರಾಘು ಅಣ್ಣನನ್ನು ಹಿಂಬಾಲಿಸುತ್ತಾ ಒಳನಡೆದರು. ವೈದಿಕರ ಮಾರ್ಗದರ್ಶನದಂತೆ ಉಳಿದವರೊಂದಿಗೆ ಮಾವನವರಿಗೆ ಅರ್ಘ್ಯ ಅರ್ಪಿಸುವ ಕಾರ್ಯವನ್ನು ಯಾಂತ್ರಿಕವಾಗಿ ನೆರವೇರಿಸುತ್ತಿದ್ದರಾದರೂ ಅಯ್ಯರ್ ಮನದಕಣ್ಣಿಂದ ಮುಕ್ತಾಳ ಚಿತ್ರ ಮರೆಯಾಗಿರಲಿಲ್ಲ. ಅಬ್ಬಬ್ಬಾ! ಅದೇ ರೂಪ! ಅದೇನು ಹೋಲಿಕೆ?! ಹೊಸದಾಗಿ ಮದುವೆಯಾದ ದಿನಗಳಲ್ಲಿ ತನಗೆ ಮತ್ತೇರಿಸಿದ್ದ ತನ್ನ ವಧು ಸೀತಳದ್ದೇ ತದ್ರೂಪು. ನಿಜಕ್ಕೂ ಯಾರಿಗಾದರೂ ದಂಗುಹೊಡೆಸುವಂತೆ ಮುಕ್ತಾ ಸಾಕ್ಷಾತ್ ಸೀತಳ ಪ್ರತಿರೂಪವೇ ಆಗಿದ್ದಳು. ಮೊದಲೇ ಹೇಳೀ ಕೇಳೀ ಅಯ್ಯರ್ ನಲವತ್ತೈದರ ಆಸುಪಾಸಿನಲ್ಲಿದ್ದ ಚಪಲ ಚೆನ್ನಿಗರಾಯ! ಇಪ್ಪತ್ತು ವರ್ಷಗಳ ಕೆಳಗಿನ ತನ್ನ ಪ್ರಾಯದ ನವವಧು ಇದ್ದಕ್ಕಿದ್ದಂತೆ ಹೀಗೆ ಧುತ್ತನೆ ಎದುರಾದಂತಾದರೆ ಪಾಪ ಆ ಜೀವ ಅದೇನು ಪಡಿಪಾಟಲು ಪಟ್ಟಿರಬೇಕು? ಧರ್ಮೋದಕ ಮುಗಿದು ಎಲ್ಲರೊಂದಿಗೆ ಊಟ ಮಾಡುವಾಗಲೂ ಅಯ್ಯರಿಗೆ ಒಮ್ಮೆಯೂ ಮುಕ್ತಾಳನ್ನು ದಿಟ್ಟಿಸಿ ನೋಡಲು ಧೈರ್ಯ ಸಾಲಲಿಲ್ಲ.
ಹನ್ನೊಂದು ಮತ್ತು ಹನ್ನೆರಡನೇ ದಿನ ಊನಮಾಸಿಕ, ಸಪಿಂಡೀಕರಣ ಹಾಗೂ ಮಾಸಿಕದ ಕಾರ್ಯಕ್ರಮಗಳು. ಈ ಕಾರ್ಯಗಳಿಗೆ ಅಗತ್ಯವಿದ್ದ ಸುತ್ತುಕೆಲಸಗಳಿಗೆ ಅಯ್ಯರ್ ಒತ್ತಾಸೆಯಾಗಿ ನಿಂತರು. ಹಾಗೇ ಕೆಲಸಗಳಲ್ಲಿ ಭಾಗಿಯಾಗುತ್ತಲೇ ಸೂಕ್ಷ್ಮವಾಗಿ ಆಗೊಮ್ಮೆ ಈಗೊಮ್ಮೆ ಅವಕಾಶ ಸಿಕ್ಕಾಗ ಮುಕ್ತಾಳನ್ನು ಓರಗಣ್ಣಿನಿಂದ ಗಮನಿಸದಿರಲಿಲ್ಲ. ಮುಕ್ತಾಳ ಇರುವಿಕೆನಿಂದ ತಮ್ಮ ಎದೆಬಡಿತ ಹೆಚ್ಚುತ್ತಿದ್ದುದು ಅವರ ಗಮನಕ್ಕೆ ಬಾರದಿರಲಿಲ್ಲ. ’ಮುಕ್ತಾ ನಿನ್ನ ಮಗಳಿದ್ದಂತೆ ಕಣೋ, ಮುಟ್ಠಾಳ’ ಎಂದು ಅಯ್ಯರ್ ಹುಚ್ಚುಮನಸ್ಸಿಗೆ ಅವರ ವಿವೇಕ ಬುದ್ಧಿಹೇಳಿದಂತಾಗುತ್ತಿತ್ತು. ಅದಕ್ಕೆ ಕಿವಿಗೊಡದ ಮನಸ್ಸು ತನ್ನದೇ ಹಾದಿ ಹಿಡಿದಂತಿತ್ತು. ಒಟ್ರಾಶಿ ಅಯ್ಯರ್ ಗೊಂದಲದ ಗೂಡಾಗಿ ಹೋಗಿದ್ದರು. ಮರುದಿನದ ಸಮಾರಂಭಕ್ಕೆ ಕೆಲವು ಅಗತ್ಯ ಸಾಮಗ್ರಿಗಳನ್ನು ತರಲು ರಾಘು ಅಣ್ಣ ಮತ್ತು ಅಯ್ಯರ್ ಸಂಜೆ ಪಾಲ್ಘಾಟಿಗೆ ಹೋಗಬೇಕಿತ್ತು. ಅದಕ್ಕಿನ್ನೂ ಸಮಯವಿದ್ದುದರಿಂದ ಸ್ವಲ್ಪ ವಿಶ್ರಮಿಸಲೆಂದು ಕೊಳದ ಪಕ್ಕದಲ್ಲಿದ್ದ ಅರಳೀಕಟ್ಟೆಯ ಮೇಲೆ ಚೌಕಹಾಸಿ ಹಾಗೇ ಅಡ್ಡಾದರು. ಒಡನೆ ಜೋಂಪು ಹತ್ತಿತು.
ನಿದ್ದೆ ಹತ್ತಿ ಇನ್ನೂ ಅರೆ ತಾಸೂ ಆಗಿರಲಿಕ್ಕಿಲ್ಲ. ಅಷ್ಟರಲ್ಲಿ ಕರೆಂಟು ಹೊಡೆದವರಂತೆ ಧಿಗ್ಗನೆ ಎದ್ದು ಕುಳಿತರು ಅಯ್ಯರ್! ಛೇ… ಎಂಥಾ ಹೊಲಸುಕನಸು ಬಿತ್ತು ಎಂದು ತನ್ನಲ್ಲೇ ಅಲವತ್ತುಕೊಂಡರು. ತಮ್ಮ ಮಗಳಂಥಾ ಮುಕ್ತಳೊಂದಿಗೆ ನಗ್ನರಾಗಿ ಹಾಸಿಗೆ ಹಂಚಿಕೊಂಡಂತೆ ಕನಸು. ತೆರೆದ ಬಯಲಿನಲ್ಲಿ ಮಟಮಟ ಮಧ್ಯಾಹ್ನ ಅರಳೀಮರದ ಕೆಳಗೆ ಕಂಡ ದರಿದ್ರ ಕನಸಿನಿಂದಾಗಿ ಅವರ ಮೈಬಿಸಿಯೇರಿತ್ತು. ತೊಡೆಯ ನಡುವಿನ ಕಾಷ್ಠ ಸೆಟೆದುನಿಂತಿತ್ತು. ನಿಜಕ್ಕೂ ಅಯ್ಯರಿಗೆ ಬಲು ಕೆಡುಕೆನಿಸಿತು. ತಮ್ಮ ವಿಕೃತಮನಸ್ಸಿನ ಬಗ್ಗೆ ಹೇಸಿಗೆಯೆನಿಸಿತು. ನೇರ ಎದುರುಕಂಡ ಕೊಳಕ್ಕಿಳಿದು ಮನಸ್ಸಿನಲ್ಲೇ ಶಾಂತಂ ಪಾಪಂ ಶಾಂತಂ ಪಾಪಂ ಎಂದು ಹೇಳಿಕೊಳ್ಳುತ್ತಾ ಮತ್ತೆ ಮತ್ತೆ ಮುಳುಗುಹಾಕಿದರು. ಮೈ ತೊಳೆದರೂ ಮನ ತೊಳೆದಂತಾಗಲಿಲ್ಲ. ಅಷ್ಟರಲ್ಲಿ ’ಅರರೆ… ಕನಸಿನಲ್ಲಿ ಕಂಡದ್ದು ತನ್ನ ಸೀತಳೇ ಏಕಾಗಿರಬಾರದು? ಅಕ್ಕತಂಗಿಯರಿಬ್ಬರೂ ಪಡಿಯಚ್ಚಿನಂತಿದ್ದರೆ ತನ್ನ ತಪ್ಪು ಹೇಗಾದೀತು?’ ಅನ್ನಿಸಿತು. ’ಗಂಡ ತನ್ನ ಹೆಂಡತಿಯೊಡನೆ ಮಲಗಿದಂತೆ ಕನಸು ಕಂಡರೆ ತಪ್ಪೇನಿದೆ?’ ಎಂಬ ಸಮರ್ಥನೆ ಹುಟ್ಟಿತು. ಅದರ ಹಿಂದೆಯೇ…ಅಂದರೆ ಕನಸಿನಲ್ಲಿ ಇಪ್ಪತ್ತು ವರ್ಷ ಹಿಂದಿನ ಸೀತ ಬಂದಿದ್ದಳೇ ಎಂದು ಅನುಮಾನವಾಯಿತು. ಕನಸಿನಲ್ಲಿ ತಮ್ಮ ಪ್ರಾಯ ಎಷ್ಟಿದ್ದಿರಬಹುದೆಂದು ನೆನೆಪಿಸಿಕೊಳ್ಳಲು ಪ್ರಯತ್ನಿಸಿದರು. ಸ್ಪಷ್ಟವಾಗಲಿಲ್ಲ. ಯಾಕೋ ಅವರ ಸಮರ್ಥನೆ ಅವರಿಗೇ ಸಮಾಧಾನ ತಂದಂತಿರಲಿಲ್ಲ. ಬೆಪ್ಪಾಗಿ ಹಾಗೇ ನೀರಲ್ಲೇ ನಿಂತಿದ್ದರು ಅಷ್ಟರಲ್ಲಿ “ಇದೇನೋ ಇದೂ… ಸರೊತ್ನಲ್ಲಿ ಒಬ್ಬೊಬ್ನೇ ಜಲಕ್ರೀಡೇ… ಪಾಲ್ಘಾಟ್ಗೋಗ್ಬೇಕು ನೆನ್ಪಿದೆ ತಾನೇ…” ರಾಘು ಅಣ್ಣನ ದನಿ. “ಏನಿಲ್ಲಣ್ಣ… ಯಾಕೋ ಸೆಕೆ ಅನ್ನುಸ್ತೂ ಅದಕ್ಕೇ..ಹ್ಹಿಹಿ… ಹ್ಹಿಹಿಹಿ” ಎಂದು ಪೆಚ್ಚು ಪೆಚ್ಚಾಗಿ ನಕ್ಕು “ಇದೋ ಬಂದೆ, ಬಟ್ಟೆ ಬದ್ಲಾಯ್ಸಿ ಬರ್ತೀನಿ” ಅಂದು ಮನೆಕಡೆ ದಾಪುಗಾಲು ಹಾಕಿದರು.
-ನಾರಾಯಣ ಎಂ.ಎಸ್.
ಮುಂದುವರೆಯುವುದು
Interesting
ಧನ್ಯವಾದಗಳು ವಿಶ್ವನಾಥ್
[…] ಇಲ್ಲಿಯವರೆಗೆ […]