ಮದುವೆ ನಿಶ್ಚಯವಾದ ಮನೆಗಳು ಸಡಗರ ಸಂಭ್ರಮಗಳಿಂದ ತುಂಬಿಹೋಗುವುದು ಸಹಜ. ಇನ್ನು ಇಲ್ಲಿ ತೀರ ಎರಡೇ ತಿಂಗಳಲ್ಲಿ ಮದುವೆ ಗೊತ್ತಾಗಿರುವಾಗ ಕೇಳಬೇಕೆ? ಮಾಡಲು ಬೆಟ್ಟದಷ್ಟು ಕೆಲಸಗಳಿದ್ದವು. ವಿಶಾಖಪಟ್ಟಣದ ಕೃಷ್ಣಯ್ಯರ್ ಮನೆಯಲ್ಲಿ ಮದುವೆ ತಯಾರಿಯ ಕಲರವದ ತಾಂಡವ ಜೋರಾಗೇ ನಡೆದಿತ್ತು. ಹಾಗಂತ ತಿರುವಾರೂರಿನ ಗಂಡಿನ ಮನೆಯಲ್ಲೇನೂ ಕಡಿಮೆ ಗದ್ದಲವಿರಲಿಲ್ಲ. ಮುದ್ರಿಸಬೇಕಿದ್ದ ಲಗ್ನಪತ್ರಿಕೆಯ ವಿನ್ಯಾಸ, ಕರೆಯಬೇಕಿದ್ದ ಅತಿಥಿಗಳ ಪಟ್ಟಿ, ಕೊಡಬೇಕಿದ್ದ ಉಡುಗೊರೆಗಳು, ತೆಗೆಯಬೇಕಾದ ಜವಳಿ, ಗೊತ್ತುಮಾಡಬೇಕಿದ್ದ ಫೋಟೋಗ್ರಾಫರ್ ಒಂದೇ… ಎರಡೇ? ಪ್ರತಿಯೊಂದಕ್ಕೂ ಚರ್ಚೆ, ಸಮಾಲೋಚನೆ ಅಭಿಪ್ರಾಯ ಭೇದಗಳಿಂದ ದಿನವಿಡೀ ಮನೆ ಗಿಜಿಗಿಜಿಸುತ್ತಿತ್ತು. ಮದುವೆ ದೂರದ ವಿಶಾಖಪಟ್ಟಣದಲ್ಲಿ ನಡೆಯುತ್ತಿತ್ತಾದ್ದರಿಂದ ಮದುವೆ ಕಳೆದು ಹತ್ತು ದಿನಕ್ಕೆ ಸರಿಯಾಗಿ ತಿರುವಾರೂರಿನ ಸ್ಥಳೀಯರಿಗಾಗಿ ಗಂಡಿನ ಮನೆಯವರ ಕಡೆಯಿಂದ ಒಂದು ಆರತಕ್ಷತೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರ ತಯಾರಿಗೂ ಸಾಕಷ್ಟು ಕೆಲಸಗಳಿದ್ದುವು. ಹಿರಿಮಗನ ಮದುವೆಯಲ್ಲಿ ತುಂಬಿದಮನೆಯೊಡಯ ಅಯ್ಯರ್ ಸಡಗರಕ್ಕೆ ಎಣೆಯಿರಲಿಲ್ಲ. ಮನೆಯ ಎಲ್ಲ ಸದಸ್ಯರಿಗೂ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಿ ನಂಬುಗೆಯ ಹೋಟೆಲ್ ಸಿಬ್ಬಂದಿಗಳನ್ನು ವಿವಿಧ ಕೆಲಸಗಳಿಗೆ ನಿಯೋಜಿಸಿ ಎಲ್ಲ ಕಾರ್ಯಗಳ ಉಸ್ತುವಾರಿಯಲ್ಲಿ ಮುಳುಗಿಹೋಗಿದ್ದರು.
ಈ ದಿನಗಳಲ್ಲಿ ಅಯ್ಯರ್ ದಿನಚರಿಯಲ್ಲಿ ಕೊಂಚ ವ್ಯತ್ಯಯಗಳಾಗಿತ್ತು. ಸಾಮಾನ್ಯವಾಗಿ ಮಧ್ಯಾಹ್ನ ಊಟಕ್ಕೆ ಮನೆಗೆಬಂದ ಅಯ್ಯರ್ ಊಟಮುಗಿಸಿ, ಸಣ್ಣದೊಂದು ನಿದ್ದೆತೆಗೆದು ಕಾಫಿ ಕುಡಿದು ಹೋಟೆಲ್ಲಿಗೆ ಮರಳುತ್ತಿದ್ದುದು ವಾಡಿಕೆ. ಆದರೆ ಈಗ ಮದುವೆ ತಯಾರಿ ಕೆಲಸಗಳಿದ್ದುದರಿಂದ ಮಧ್ಯಾಹ್ನ ಮನೆಯಲ್ಲೇ ಇದ್ದು ಆಗಬೇಕಿದ್ದ ಕೆಲಸಗಳ ಯೋಜನೆ ಮತ್ತು ನಿರ್ವಹಣೆಗಳತ್ತ ಗಮನವಿತ್ತು ಮುಸ್ಸಂಜೆಯ ವೇಳೆಗಷ್ಟೇ ಹೋಟೆಲ್ಲಿಗೆ ಹೋಗುತ್ತಿದ್ದರು. ಅಂಥಾ ಒಂದು ಮಧ್ಯಾಹ್ನದ ಸಮಯ ಸುಮಾರು ನಾಲ್ಕಿದ್ದೀತು. ಎಂದಿನಂತೆ ಅಯ್ಯರ್ ಹಜಾರದಲ್ಲಿದ್ದ ದೊಡ್ಡ ಮರದ ಉಯ್ಯಾಲೆಯಲ್ಲಿ ಕುಳಿತು ಕಾಫಿ ಹೀರುತ್ತಿದ್ದರು. ತುಸುದೂರದಲ್ಲಿ ಕಂಬದ ಬದಿಯಲ್ಲಿ ಕುಳಿತ ಸೀತಮ್ಮ, ಯಾರಿಗೆ ಕೇವಲ ಲಗ್ನಪತ್ರಿಕೆಯನ್ನು ಮಾತ್ರ ಕಳಿಸಿದರೆ ಸಾಕು ಮತ್ತು ಯಾರಿಗೆ ಲಗ್ನಪತ್ರಿಕೆಯೊಂದಿಗೆ ಪ್ರತ್ಯೇಕ ಪತ್ರವನ್ನೂ ಬರೆದು ಕಳಿಸಬೇಕು ಎಂದು ವಿಂಗಡಿಸಿಡುತ್ತಿದ್ದರು. ಪಕ್ಕದಲ್ಲೇ ಕುಳಿತು ಆಗಾಗ್ಗೆ ಅಮ್ಮನಿಂದ ಅಗತ್ಯ ಮಾಹಿತಿಗಳನ್ನು ಪಡೆಯುತ್ತಾ ಲಗ್ನಪತ್ರಿಕೆಯ ಲಕೋಟೆಗಳ ಮೇಲೆ ವಿಳಾಸಗಳನ್ನು ಬರೆಯುತ್ತಿದ್ದ ಕಿರಿಮಗ ಗಣೇಶ ಇದ್ದಕ್ಕಿದ್ದಂತೆ “ಅಮ್ಮಾ ಬೆಂಗ್ಳೂರಿನ ಮುಕ್ತಾ ಚಿಕ್ಕಮ್ಮಂಗೆ ತಿರುವಾರೂರಿಗ್ ಬಂದು ನಮ್ಜೊತೆನೇ ಮದ್ವೇಗ್ ಬರೋಕ್ ಹೇಳಿ ಕಾಗ್ದಾ ಬರ್ಯಮ್ಮಾ…” ಅಂದ.
ಮುಕ್ತಾ ಚಿಕ್ಕಮ್ಮ…ಎಂದು ಸಹಜವಾಗಿ ಮಗ ಆಡಿದ್ದ ಮಾತು ಯಾವುದೋ ಗುಂಗಿನಲ್ಲಿ ಕಾಫಿ ಕುಡಿಯುತ್ತಿದ್ದ ಅಯ್ಯರ್ ಕಿವಿಗೆ ಬಿದ್ದೊಡನೆ ಅದು ಅವರೊಳಗಿನ ಯಾವುದೋ ಸೂಕ್ಷ್ಮ ತಂತುವೊಂದನ್ನು ನವಿರಾಗಿ ತಾಕಿತು. ಎಂದಿನಂತೆ ’ಮುಕ್ತಾ’ ಎಂಬ ಪದ ಅವರಲ್ಲೊಂದು ಸಣ್ಣ ಸಂಚಲನವನ್ನೇ ಉಂಟುಮಾಡಿತ್ತು. ಪ್ರತಿಸಲ ಈ ಸಂಚಲನದ ಅನುಭವವಾದಾಗಲೆಲ್ಲಾ ಅಯ್ಯರ್ ಮನದಲ್ಲಿ ಪುಳಕ ಹಾಗೂ ಪಾಪಪ್ರಜ್ಞೆ ಏಕಕಾಲಕ್ಕೆ ಜಾಗೃತವಾಗಿಬಿಡುತ್ತಿತ್ತು. ಈ ಮಿಶ್ರಭಾವದ ಜಾಡುಹಿಡಿದು ಹೊರಟ ಅಯ್ಯರ್ ಮನಸ್ಸು ಸರಿಸುಮಾರು ನಲವತ್ತು ವರ್ಷ ಹಿಂದೆ ಹೋಗಿತ್ತು.
-೨-
. . . ಸ್ವತಂತ್ರ ಹೋರಾಟ ನಿಧಾನಕ್ಕೆ ಕಾವು ಪಡೆದುಕೊಳ್ಳುತ್ತಿದ್ದ ಕಾಲವದು. ಅಮ್ಮ ಮಕ್ಕಳಿಗೆ ಒಟ್ಟೊಟ್ಟಿಗೆ ಬಸಿರು ಬಾಣಂತನಗಳಾಗುತ್ತಿದ್ದ ಕಾಲವೂ ಹೌದು. ಸೀತಮ್ಮ ಚೊಚ್ಚಲ ಹೆರಿಗೆಗೆಂದು ತವರಿಗೆ ಹೋಗಿದ್ದಳು. ಸ್ವತಃ ತುಂಬು ಗರ್ಭಿಣಿಯಾಗಿದ್ದ ಮಧುರಮ್ಮನವರಿಗೆ ಮಗಳ ಚೊಚ್ಚಲ ಬಸಿರಿನ ಸಂಭ್ರಮ ಬೇರೆ. ತುಂಬ ಆಸ್ಥೆಯಿಂದ ಮಗಳ ಆರೈಕೆಯಲ್ಲಿ ತೊಡಗಿದ್ದರು. ಸೀತಮ್ಮನಿಗಾದರೂ ಇನ್ನೂ ಹದಿನಾರು ತುಂಬಿರಲಿಲ್ಲ. ಹುಡುಗಿ ಹೆರಿಗೆಯ ಕುರಿತಾಗಿ ಆತಂಕಗೊಂಡಿದ್ದಳು. ಖುದ್ದು ಬಸುರಿಯಾಗಿದ್ದ ಅಮ್ಮನ ಧೈರ್ಯ ಸಾಂತ್ವನದ ಮಾತುಗಳಿಂದ ಭದ್ರತೆಯ ಭಾವ ಮೂಡುತ್ತಿತ್ತಾದರೂ ಪಕ್ಕದಲ್ಲಿ ಅಯ್ಯರ್ ಇಲ್ಲದ್ದು ಪಿಚ್ಚೆನಿಸುತ್ತಿತ್ತು.
ಹೆಂಡತಿಯನ್ನು ತವರಿಗೆ ಕಳಿಸಿದ ಅಯ್ಯರ್ ಊಟ ತಿಂಡಿಗಳೆಲ್ಲಾ ಹೋಟೆಲ್ಲಿನಲ್ಲೇ ನಡೆಯುತ್ತಿದ್ದುವು. ಅಂದು ಬೆಳಗ್ಗೆ ಸಹ ಅಯ್ಯರ್ಸ್ ಕೆಫೆಯ ರೇಡಿಯೋದಲ್ಲಿ ಎಂದಿನಂತೆ ಕರ್ನಾಟಕ ಶಾಸ್ತ್ರೀಯ ಸಂಗೀತ ಬಿತ್ತರವಾಗುತ್ತಿತ್ತು. ತಿರುವಾರೂರಿನ ಜನಕ್ಕೆ ಸ್ವಲ್ಪ ಅತೀ ಎನಿಸುವಷ್ಟೇ ಸಂಗೀತದ ಗೀಳೆನ್ನಬಹುದು. ಅಲ್ಲಿಯ ಗಾಳಿಯೇ ಹಾಗೆ. ಎಷ್ಟಾದರೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹಾನ್ ತ್ರಿಮೂರ್ತಿಗಳು ಸಮಕಾಲೀನರಾಗಿ ಬಾಳಿ ಬದುಕಿದ ಪುಣ್ಯಭೂಮಿಯಲ್ಲವೆ ತಿರುವಾರೂರು! ಸದ್ಯ, ರೇಡಿಯೋ ’ಮಥುರಾ ನಗರಿಲೋ ಚೆಲ್ಲನಮ್ಮ ಪೋದು’ ಎಂದು ಹಾಡುತ್ತಿತ್ತು. ಆ ಕಾಲಕ್ಕೆ ಪ್ರಸಿದ್ಧ ಜೋಡಿ ಎನಿಸಿದ್ದ ತನ್ನ ನೆಚ್ಚಿನ ಬೃಂದಾ–ಮುಕ್ತಾರ ಆನಂದಭೈರವಿಯಲ್ಲಿ ಮುಳುಗೇಳುತ್ತಿದ್ದ ಅಯ್ಯರನ್ನು, “ಟೆಲಿಗ್ರಾಂ… ಟೆಲಿಗ್ರಾಂ…” ಎಂದ ಪೋಸ್ಟ್ ಮ್ಯಾನ್ ತಂಬಿದೊರೈ ದನಿ ಎಚ್ಚರಿಸಿತ್ತು. ಟೆಲಿಗ್ರಾಂ ನೋಡುವಾಗ ಹಿಂದಿನದಿನ ಸೀತಮ್ಮನಿಗೆ ಹೆಣ್ಣುಮಗು ಆಗಿರುವುದಾಗಿ ತಿಳಿಯಿತು. ಅಯ್ಯರ್ ಆನಂದ ಹೇಳತೀರದು. “ಮನೆಗೆ ಲಕ್ಷ್ಮೀ ಬಂದವ್ಳೆ ಭಕ್ಷೀಸು ನೋಡ್ಕಂಡ್ ಕೊಡ್ಬೇಕು” ಎಂದ ತಂತಿ ತಂದ ತಂಬಿದೊರೈ. ಅವನಿಗೆ ಎರಡು ರೂಪಾಯನ್ನಿತ್ತು ತಿಂಡಿ ಕಾಫಿ ಕೊಡಲು ಹುಡುಗರಿಗೆ ಹೇಳಿದ ಅಯ್ಯರ್ ಮುಂಜಾವಿಗೆ ಪಾಲಘಾಟಿಗೆ ಬಂದ ಮೈದುನ ತಂತಿಕಳಿಸಿರಬೇಕೆಂದು ಅಂದಾಜು ಮಾಡಿದರು. ಅಯ್ಯರಿಗೆ ತುರ್ತಾಗಿ ಮಗಳನ್ನು ನೋಡಬೇಕೆನಿಸಿತು. ಆನಂದಭೈರವಿಯ ಆನಂದಕ್ಕೆ ಪಾರವಿರಲಿಲ್ಲ.
ಆದರೆ ಅಯ್ಯರ್ ಹಾಗೆ ಎಣಿಸಿದೊಡನೆ ದಂಧೆ ಬಿಟ್ಟು ಹೊರಡುವ ಸ್ಥಿತಿಯಲ್ಲಿರಲಿಲ್ಲ. ಸಣ್ಣ ಹೋಟೆಲ್ ವ್ಯವಹಾರವಾದರೂ ವ್ಯಾಪಾರ ಬಿಟ್ಟು ಹೆಚ್ಚುದಿನ ಇರುವುದು ಅಷ್ಟು ಜಾಣತನವಲ್ಲ. ಹೋಟೆಲ್ ಮುಚ್ಚಿದರೆ ಖಾಯಂ ಗಿರಾಕಿಗಳಿಗೆ ಬದಲಿ ವ್ಯವಸ್ಥೆ ಹುಡುಕಿಕೊಳ್ಳಲು ಅವಕಾಶಮಾಡಿ ಕೊಟ್ಟಂತೆ. ಆ ದಿನಗಳಲ್ಲಿದ್ದ ಸೌಕರ್ಯಗಳಲ್ಲಿ ತಿರುವಾರೂರಿನಿಂದ ಪಾಲ್ಘಾಟಿನ ಬಳಿಯ ಕಾವಶ್ಯೇರಿ ಎಂಬ ಕುಗ್ರಾಮವನ್ನು ತಲುಪುಷ್ಟರಲ್ಲಿ ಮನುಷ್ಯ ಹೈರಾಣಾಗಿಬಿಡುತ್ತಿದ್ದ. ಹೀಗಾಗಿ ತನ್ನ ಗೈರಿನಲ್ಲಿ ವ್ಯವಹಾರಕ್ಕೆ ಆಗಬೇಕಿದ್ದ ಪರ್ಯಾಯ ವ್ಯವಸ್ಥೆಗಳನ್ನು ಮಾಡಿ ಅಯ್ಯರ್ ಕಾವಶ್ಯೇರಿ ತಲುಪಿ ಹೆಂಡತಿ ಮಕ್ಕಳ ಮುಖಕಾಣುವಾಗ ವಾರ ಎರಡಾಗಿತ್ತು. “ಮಗಳು ಅಪ್ಪನಂತೆಯೇ…” ಅಂದರು ಮಾವನವರು. ಅಯ್ಯರಿಗೂ ಹೌದೆನಿಸಿತು.
ಸೀತಮ್ಮ ಹಡೆದು ಎಣಿಸಿದಂತೆ ಹದಿನೆಂಟು ದಿನಕ್ಕೆ ಮಧುರಮ್ಮನವರೂ ಒಂದು ಹೆಣ್ಣು ಹಡೆದರು. ಎರಡು ಹಸುಗೂಸುಗಳು ಮತ್ತು ಇಬ್ಬರು ಬಾಣಂತಿಯರ ಆರೈಕೆಯಲ್ಲಿ ದಿನ ಕಳೆದದ್ದೇ ತಿಳಿಯಲಿಲ್ಲ. ಎರಡೂ ಮಕ್ಕಳ ನಾಮಕರಣಗಳನ್ನೂ ಒಟ್ಟಿಗೆ ಮಾಡುವುದೆಂದಾಯಿತು. ಕೆಲವೊಮ್ಮೆ ರಾತ್ರಿ ಸರೊತ್ತಿನಲ್ಲಿ ಮಕ್ಕಳಿಬ್ಬರೂ ಪಾಳಿಯಲ್ಲಿ ಗಟ್ಟಿಯಾಗಿ ಅಳಲು ಶುರುವಿಟ್ಟುಕೊಂಡು ಎಲ್ಲರ ನಿದ್ದೆ ಹಾಳುಮಾಡುತ್ತಿದ್ದುವು. ಇರುಳಿನ ನೀರವತೆಯಲ್ಲಿ ಮಕ್ಕಳ ಈ ಜುಗಲ್ಬಂದಿ ಕೇಳಿದ ಅಯ್ಯರ್, ಇಬ್ಬರಿಗೂ ಸಂಗೀತ ಕಲಿಸಿ ಬೃಂದಾ-ಮುಕ್ತಾ ಥರ ಸ್ಟೇಜ್ ಹತ್ತಿಸಬೇಕು ಅಂದುಕೊಂಡರು.
ಮರುದಿನ ಸಂಜೆ ಧೋ… ಎಂದು ಮಳೆ ಸುರಿಯುತ್ತಿತ್ತು. ಹಳ್ಳಿಯ ತೊಟ್ಟಿಮನೆಯ ತೊಟ್ಟಿಯ ಸುತ್ತಲೂ ಹೊಂದಿಕೊಂಡಂತಿದ್ದ ಹಜಾರದಲ್ಲಿ ಆಯ್ಯರ್ ಮರದ ಖುರ್ಚಿಯಲ್ಲಿ ಕುಳಿತಿದ್ದರು. ತೊಟ್ಟಿಯಲ್ಲಿ ರಭಸವಾಗಿ ಬೀಳುತ್ತಿದ್ದ ಮಳೆಹನಿಗಳನ್ನ ಚಿಮಣಿ ದೀಪದ ಬೆಳಕಲ್ಲಿ ನೋಡುತ್ತಾ ಕುಳಿತಿದ್ದ ಅಯ್ಯರ್ ಮನದಲ್ಲಿ ಯಾವುದೋ ರಾಗ ಸಂಚಾರ ನಡೆಸಿತ್ತು. “ಶಾಸ್ತ್ರಕ್ಕೆ ಮಕ್ಳಿಗೆ ಹಿರಿಯರ ಹೆಸರಿಟ್ರೂ ಕರೆಯೋಕೆ ಬೇರೆ ಹೆಸ್ರಿಡೋದೆ ತಾನೆ ಇತ್ತೀಚಿನ ವಾಡ್ಕೆ” ಅಂದರು ಪಕ್ಕದ ಕೋಣೆಯಲ್ಲಿ ಕುಳಿತು ಕತ್ತಲಲ್ಲಿ ಮಗುವಿಗೆ ಹಾಲುಣಿಸುತ್ತಿದ್ದ ಮಧುರಮ್ಮ. “ಇದೂ ಒಂಥರಾ ಒಳ್ಳೇ ಸಂಪ್ರದಾಯಾನೆ, ಇದ್ರಿಂದ ನಮ್ ಮಕ್ಳು ಅವ್ರ್ ಮಕ್ಳುನ್ನ ಬಯ್ಯೋ ನೆಪದಲ್ಲಿ ಅಲ್ಲೇ ಇರೋ ನಮ್ ಹೆಸ್ರಿಡ್ದು ಉಗ್ಯೋದ್ ತಪ್ಪುತ್ತೆ” ನೆಲದಮೇಲೆ ಕುಳಿತು ಮರದ ಮಣೆಯ ಮೇಲೆ ಹಲಸಿನಕಾಯಿ ಹೆಚ್ಚುತ್ತಿದ್ದ ಸೀತಮ್ಮನ ತಂದೆ ನಗುತ್ತಾ ಹೇಳಿದರು. ಅಷ್ಟರಲ್ಲಿ ಅಡುಗೆ ಮನೆಯಿಂದ ಬಂದ ಸೀತಮ್ಮ “ಏನೂಂದ್ರೆ… ಮಗಳಿಗೆ ಏನ್ ಹೆಸರಿಡೋದೂಂತ ಮಾಡೀದೀರಿ” ಅನ್ನುತ್ತಾ ಗಂಡ ಕುಳಿತಿದ್ದ ಖುರ್ಚಿಯ ಪಕ್ಕದಲ್ಲಿ ಗೋಡೆಗೊರಗಿ ಕೂತಳು. “ನಮ್ ಮಗ್ಳುಗೆ ಬೃಂದಾ ಅಂತಾನೂ ಅವಳ್ಗಿಂತಾನೂ ಚಿಕ್ಕೋಳಾದ ಅವ್ಳ ಚಿಕ್ಕಮ್ಮಂಗೆ ಮುಕ್ತಾ ಅಂತ ಹೆಸ್ರಿಟ್ರೆ ಹೆಂಗೇ? ಯಾರಿಗ್ಗೊತ್ತು ಸರಸ್ವತಿ ಅನುಗ್ರಹ ಇದ್ರೆ ನಾಳೆ ಇವೂ ಹಂಗೆ ಆಗ್ಬೋದು” ಅಂದರು ಅಯ್ಯರ್. “ಬೃಂದಾ…ಮುಕ್ತಾ… ಹೆಸರುಗಳೇನೋ ಈ ಕಾಲಕ್ಕೆ ತಕ್ಕಹಾಗೆ ಮಾಡರ್ನಾಗೆ ಇದೆ” ಎಂದ ಸೀತಮ್ಮ ಮಗು ಅತ್ತದ್ದುಕೇಳಿ ಮಗುವಿದ್ದ ಕೋಣೆಗೆ ಎದ್ದು ಹೋದಳು.
ಉಳಕೊಂಡವೂ ಕಳಕೊಂಡವೂ ಎಲ್ಲಾ ಸೇರಿ ಈಗಾಗಲೇ ಹದಿನೈದು ಹಡೆದಿದ್ದ ಮಧುರಮ್ಮನಿಗೆ ಮಕ್ಕಳಿಗೆ ಹೆಸರಿಡುವಂಥಾ ವಿಷಯದಲ್ಲಿ ಅಂಥಾ ವಿಶೇಷ ಆಸಕ್ತಿಯೇನೂ ಉಳಿದಿರಲಿಲ್ಲ. ಹೆಣ್ಣು ಮಗು ಬೇರೆ ಆದದ್ದು ಇನ್ನೊಂದು ಹೆರೋ ಯಂತ್ರ ಹಡೆದೆನಲ್ಲಾ ಎಂಬ ಜುಗುಪ್ಸೆ ಜತೆ ಸೇರಿ ಇದನ್ನ ಕರೆಯೋಕೆ ಯಾವ ಹೆಸರಾದರೇನೆಂಬ ನಿರ್ಲಿಪ್ತ ಭಾವ ಮನೆಮಾಡಿತ್ತು. ಆದರೂ ನಿಧಾನಕ್ಕೆ ಅಳಿಯಂದಿರು ಹೇಳಿದ್ದ ’ಮುಕ್ತಾ’ ಅನ್ನೋ ಹೆಸರಲ್ಲಿ ಎಂಥದೋ ಆಕರ್ಷಣೆ ಕಂಡಂತಾಯಿತು. ತನ್ನ ಇಪ್ಪತ್ತು ವರ್ಷಗಳ ಬಸಿರುಬಾಣಂತನಗಳ ನಿರಂತರ ಅಭಿಯಾನಕ್ಕೆ ಈ ಮುಕ್ತಾಳೊಂದಿಗೇ ಮುಕ್ತಿ ಸಿಕ್ಕೀತೆಂಬ ಆಸೆಯೂ ಚಿಗುರಿತು. ಹತ್ತಿರದಲ್ಲೇ ಕೂಡಿಬಂದ ಮುಹೂರ್ತದಲ್ಲಿ ಮಕ್ಕಳಿಬ್ಬರಿಗೂ ನಾಮಕರಣ ಜರುಗಿ, ಸೀತಳ ಮಗಳಿಗೆ ಬೃಂದಾ ಎಂದೂ ಮಧುರಮ್ಮನ ಮಗುವಿಗೆ ಮುಕ್ತಾ ಎಂದೂ ಹೆಸರಿಡಲಾಯಿತು. ಮುಂದಿನ ಒಂಭತ್ತು ತಿಂಗಳಲ್ಲಿ ಬೃಂದಾ-ಮುಕ್ತಾ ಅವಳಿ ಮಕ್ಕಳಂತೆ ಒಂದೇಹಾಸಿಗೆ ಹಂಚಿಕೊಂಡು ಇಬ್ಬರು ತಾಯಂದಿರ ಎದೆಹಾಲನ್ನೂ ಸವಿಯುತ್ತಾ ಪುಷ್ಟಿಗೊಂಡರು.
ಈ ಅವಧಿಯಲ್ಲಿ ಅಯ್ಯರ್ ಒಂದೆರಡು ಬಾರಿ ಕಾವಶ್ಯೇರಿಗೆ ಬಂದುಹೋದರು. ಬರುವಾಗ ಎರಡೂ ಮಕ್ಕಳಿಗೆಂದು ನಿಪ್ಪಲ್, ಬೇಬಿ ಸೋಪ್, ಬೇಬಿ ಪೌಡರ್ ಇತ್ಯಾದಿಗಳನ್ನು ಕೊಂಡುತರುತ್ತಿದ್ದರು. ಕಾವಶ್ಯೇರಿಯಲ್ಲಿದ್ದಷ್ಟೂ ದಿನ ಇಬ್ಬರು ಮಕ್ಕಳೊಂದಿಗೂ ಮನಸಾರೆ ಆಟವಾಡುತ್ತಿದ್ದರು. ತಾನೇ ಹೆಸರಿಟ್ಟಿದ್ದರಿಂದಲೋ ಏನೋ ತನ್ನ ಮಗಳ ಓರಗೆಯ ನಾದಿನಿಯ ಬಗ್ಗೆಯೂ ಅಯ್ಯರಿಗೆ ಮಗಳ ಮಮತೆಯೇ. ಮುಕ್ತಾಳನ್ನೂ ತಿರುವಾರೂರಿನಲ್ಲಿಯೇ ಇಟ್ಟುಕೊಂಡು ಇಬ್ಬರಿಗೂ ಒಳ್ಳೇ ಸಂಗೀತ ಕಲಿಸಬೇಕೆಂದು ಬಯಸಿದರು. ಈಗಾಗಲೇ ಹತ್ತಾರು ಮಕ್ಕಳಿದ್ದು ಇನ್ನೂ ಒಂದು ಕೈಕೂಸಿನೊಂದಿಗಿದ್ದ ಅತ್ತೆಯವರನ್ನು ಓಲೈಸಿಬಿಟ್ಟರೆ ಮಾವನವರನ್ನು ಒಪ್ಪಿಸಿ ಮುಕ್ತಾಳನ್ನು ತಮ್ಮೊಂದಿಗೆ ಕರೆದೊಯ್ಯುವುದು ಕಷ್ಟವಾಗಲಾರದೆಂಬ ವಿಶ್ವಾಸ ಅಯ್ಯರಿಗಿತ್ತು. ಹಾಗಾಗಿ ಮೊದಲಿಗೆ ವಿಚಾರವನ್ನು ಸೀತಮ್ಮನೊಂದಿಗೆ ಪ್ರಸ್ತಾಪಿಸಿದರು. ಅವಳಿಗಾದರೋ ಮುಕ್ತಾ ತನ್ನ ಕೊನೆಯ ತಂಗಿಯೆಂಬ ವಾಂಛೆ ಇಲ್ಲದಿರಲಿಲ್ಲ. ಆದರೆ ತನ್ನೆಲ್ಲಾ ಮನೆಕೆಲಸದೊಂದಿಗೆ ಎರಡೆರಡು ಮಕ್ಕಳ ಜವಾಬ್ದಾರಿಯನ್ನು ಒಟ್ಟೊಟ್ಟಿಗೆ ಹೊರಲು ಇನ್ನೂ ಚಿಕ್ಕಹುಡುಗಿಯಾದ ಸೀತಮ್ಮಳಿಗೆ ಹಿಂಜರಿಕೆಯಾಯ್ತು. ಹಾಗಾಗಿ ಮುಕ್ತಾಳನ್ನು ತನ್ನೊಂದಿಗೆ ಕರೆದೊಯ್ಯುವ ಅಯ್ಯರ್ ಆಸೆಗೆ ಅವಳು ಸೊಪ್ಪು ಹಾಕಲಿಲ್ಲ. ಕೊನೆಗೆ ಮುಕ್ತಾಳನ್ನ ಕಾವಶ್ಯೇರಿಯಲ್ಲೇ ಬಿಟ್ಟು ಸೀತಮ್ಮ ಮತ್ತು ಬೃಂದಾಳನ್ನ ತಿರುವಾರೂರಿಗೆ ಕರದೊಯ್ಯುವಾಗ ಅಯ್ಯರಿಗೆ ಪಿಚ್ಚೆನಿಸಿತ್ತು. ತನ್ನ ಮಗಳಿಂದಲೇ ದೂರವಾಗುತ್ತಿರುವಂತೆನಿಸಿ ಮನಸ್ಸಿಗೆ ಕಹಿಯೆನಿಸಿತು.
ತಿರುವಾರೂರಿಗೆ ಹಿಂತಿರುಗಿದ ಅಯ್ಯರ್ ಜೀವನ ಎಂದಿನಂತೆ ಸಾಗಿತ್ತು. ಕೈಕೂಸಿದ್ದ ಸೀತಮ್ಮಳ ಒತ್ತಾಸೆಗೆ ಗಂಡನ ಮನೆಯಲ್ಲಿ ಬೇರೆ ಹೆಣ್ಣು ದಿಕ್ಕಿರಲಿಲ್ಲ. ಕೆಲಸದ ಹುಡುಗಿ ಪಾತ್ರೆ ಬಟ್ಟೆ ತೊಳೆದು, ಮನೆ ಗುಡಿಸಿ ಒರೆಸಿ ಹೋಗುತ್ತಿದ್ದಳು. ಅಡುಗೆ ಮಾಡಿ ಮಗುವನ್ನು ನೋಡಿಕೊಳ್ಳುವಷ್ಟರಲ್ಲಿ ಸೀತಮ್ಮನಿಗೆ ಸಮಯ ಸರಿಯಾಗುತ್ತಿತ್ತು. ಮಗುವಿನ ಲಾಲನೆ ಪಾಲನೆಯಲ್ಲಿ ಹೊತ್ತು ಹೋದದ್ದೇ ತಿಳಿಯುತ್ತಿರಲಿಲ್ಲ. ಹಾಗಾಗಿ ಬೃಂದಳ ಮೊದಲ ಹುಟ್ಟುಹಬ್ಬದ ಔತಣಕ್ಕೆ ಒಂದಿಷ್ಟು ಆಪ್ತರನ್ನು ಮಾತ್ರ ಮನೆಗೆ ಕರೆದು ಹೋಟೆಲಿನಲ್ಲಿಯೇ ಅಡುಗೆ ಮಾಡಿಸಿದ್ದರು. ಇನ್ನೆರಡು ತಿಂಗಳು ಕಳೆಯುವುದರಲ್ಲಿ ಸೀತಮ್ಮ ಮತ್ತೆ ಬಸಿರಾಗಿದ್ದಳು.
ಅಯ್ಯರ್ಸ್ ಕೆಫೆಯಲ್ಲಿ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ಅವರ ಹೋಟೆಲಿನ ಖಾಲಿ ದೋಸೆ ಹಾಗೂ ಡಿಗ್ರೀ ಕಾಫಿಗೆ ಜನ ಮುಗಿಬೀಳುತ್ತಿದ್ದರು. ವ್ಯಾಪಾರದ ವಿಷಯದಲ್ಲಿ ಅಯ್ಯರ್ ತೋರಿಸುತ್ತಿದ್ದ ಶ್ರದ್ಧಾನಿಷ್ಠೆಗಳು ಇಡೀ ಊರಿಗೇ ಮಾದರಿ ಅನ್ನುವಂತಿತ್ತು. ಸಂಗೀತ ಕಾಶಿಯಂಥಾ ಪ್ರದೇಶದಲ್ಲಿ ವಾಸವಿದ್ದ ಕಾರಣ ರಸಿಕ ಅಯ್ಯರಿಗೆ ಮನರಂಜನೆಯ ಕೊರತೆಯೂ ಇರಲಿಲ್ಲ. ತಿರುವಾರೂರು ಮತ್ತು ತಿರುವಯ್ಯಾರಿನ ಆಸುಪಾಸಿನ ಊರುಗಳಲ್ಲಿ ರಾಮನವಮಿ, ನವರಾತ್ರಿ, ಸ್ಥಳೀಯರೇ ಆದ ಸಂಗೀತಲೋಕದ ಮಹಾನ್ ತ್ರಿಮೂರ್ತಿಗಳ ಆರಾಧನೆ ಹೀಗೆ ಹತ್ತುಹಲವು ಕಾರಣಗಳಿಗೆ ವರ್ಷವಿಡೀ ಒಳ್ಳೊಳ್ಳೆ ಸಂಗೀತ ಕಛೇರಿಗಳು ನಡೆಯುತ್ತಲೇ ಇರುತ್ತಿದ್ದವು. ಎಲ್ಲ ಕಛೇರಿಗಳಿಗೂ ಅಯ್ಯರಿಗೆ ಹೋಗಲಾಗುತ್ತಿರಲಿಲ್ಲವಾದರೂ ಯಾವುದೇ ಒಳ್ಳೆಯ ಕಛೇರಿಗೆ ಅವರು ಹಾಜರಿ ತಪ್ಪಿಸುತ್ತಿರಲಿಲ್ಲ. ಎರಡು ಚಿಟಿಕೆ ನಶ್ಯ ಏರಿಸಿ ಕಛೇರಿ ಕೇಳಲು ಕುಳಿತರೆ ಇಹ ಮರೆತು ನಾದಲೋಕದಲ್ಲಿ ಕಳೆದುಹೋಗುತ್ತಿದ್ದರು. ತನ್ನ ಜೀವನದಲ್ಲಿ ವ್ಯವಹಾರ ನಿರ್ವಹಣೆ, ಸಂಗೀತ ಆಸ್ವಾದನೆಯಷ್ಟೇ ನಿಷ್ಠೆಯಿಂದ ಅಯ್ಯರ್ ಮಾಡುತ್ತಿದ್ದ ಇನ್ನೊಂದು ಕೆಲಸವೆಂದರೆ ಅದು ವಂಶಾಭಿವೃದ್ಧಿ ಮಾತ್ರ. ಹೀಗೆ ಬಿಡುವಿಲ್ಲದ ದಿನಚರಿಯಲ್ಲಿ ಕಾಲ ಸರಿಯುತ್ತಾ ಹೋಗುತ್ತಿತ್ತು.
ಸೀತಮ್ಮ ಐದನೆಯ ಮಗುವಿನೊಂದಿಗೆ ತವರಿನಿಂದ ಹಿಂದಿರುಗಿ ಇನ್ನೂ ಹೆಚ್ಚು ದಿನಗಳಾಗಿರಲಿಲ್ಲ. ಈಗಾಗಲೇ ಐದು ಹೆತ್ತಿದ್ದ ಸೀತಮ್ಮಳ ದೇಹ ಹದ ಕಳೆದುಕೊಂಡಿತ್ತಾದರೂ ಅವಳಿಗಿಂತ ಹತ್ತುವರ್ಷ ಹಿರಿಯರಾದ ಅಯ್ಯರ್ ಮಾತ್ರ ಮೂವತ್ತೇಳರ ಪ್ರಾಯದಲ್ಲೂ ಇನ್ನೂ ಯುವಕನಂತೆ ಕಂಗೊಳಿಸುತ್ತಿದ್ದರು. ಆ ದಿನಗಳಲ್ಲಿ ವಿಶೇಷವಾಗಿ ತಮಿಳುನಾಡಿನ ಅಳಿಯಂದಿರು ಹಾಗೆಲ್ಲಾ ಪದೇ ಪದೇ ಹೆಂಡತಿಯ ಮನೆಗೆ ಹೋಗುತ್ತಿರಲಿಲ್ಲ. ಅಪರೂಪಕ್ಕೊಮ್ಮೊಮ್ಮೆ ಹೋದರೂ ಮುಕ್ತವಾಗಿ ಬೆರೆಯದೆ ಗತ್ತುಗೈರತ್ತುಗಳಿಂದ ಬಿಗುಮಾನ ತೋರುತ್ತಿದ್ದರು. ಆದರೆ ಬುದ್ಧಿ ತಿಳಿಯುವ ಮೊದಲೇ ತಾಯಿಯನ್ನು ಕಳೆದುಕೊಂಡಿದ್ದ ಅಯ್ಯರ್ ಇದಕ್ಕೆ ಅಪವಾದವೆಂಬಂತಿದ್ದರು. ನಿಜವಾಗಿ ಅಯ್ಯರಿಗೆ ತನ್ನ ಮನೆಕಡೆ ಹೇಳಿಕೊಳ್ಳುವಂತ ಹತ್ತಿರದ ನೆಂಟಸ್ತಿಕೆಗಳೇ ಇರಲಿಲ್ಲ. ಹಾಗಾಗಿ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಹೆಂಡತಿ ಮನೆಯವರೊಂದಿಗೆ ಬಹಳ ಅನ್ಯೋನ್ಯತೆಯಿಂದಿರುತ್ತಿದ್ದ ಅಯ್ಯರಿಗೆ ಬಸಿರು ಬಾಣಂತನಗಳಿಗೆಂದು ಹೆಂಡತಿಯನ್ನು ಮತ್ತೆ ಮತ್ತೆ ತವರಿಗೆ ಕಳಿಸುವಲ್ಲಿ ಯಾವುದೇ ಸಂಕೋಚಗಳಿರಲಿಲ್ಲ.
ಈ ಮಧ್ಯೆ ಒಂದು ದಿನ ಈಗಾಗಲೇ ಹನ್ನೆರಡು ತುಂಬಿದ್ದ ಬೃಂದಾ ಮೈನೆರೆತಳು. ನೆರೆಹೊರೆಯವರನ್ನು ಕರೆದು ಆರತಿ ಶಾಸ್ತ್ರ ನೆರವೇರಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಏಳೆಂಟು ಬಾರಿಯಾದರೂ ಅಯ್ಯರ್ ಹೆಂಡತಿಯ ತವರಾದ ಕಾವಶ್ಯೇರಿಗೆ ಹೋಗಿಬಂದಿದ್ದಿರಬೇಕು. ಹಾಗೆ ಅಯ್ಯರ್ ಹೋದಾಗಲೆಲ್ಲ ಕಾವಶ್ಯೇರಿಯ ಸೀತಮ್ಮನ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿ ಬಿಡುತ್ತಿತ್ತು. ಅಯ್ಯರ್ ಬಂದಾಗಲೆಲ್ಲಾ ಆ ಕುಗ್ರಾಮದಲ್ಲಿದ್ದ ಬಾಮೈದುನರನ್ನೂ ನಾದಿನಿಯರನ್ನೂ ಹತ್ತಿರದ ಪಾಲ್ಘಾಟಿಗೆ ಕರೆದೊಯ್ದು ಸಿನಿಮಾ ಹೋಟೆಲ್ ಎಂದು ಚೆನ್ನಾಗಿ ಸುತ್ತಿಸುತ್ತಿದ್ದರು. ಹಾಗಾಗಿ ಅವರೆಲ್ಲಾ ರಾಜೂ ಭಾವನ ಆಗಮನಕ್ಕಾಗಿ ಕಾತುರರಾಗಿ ಕಾಯುತ್ತಿದ್ದರು. ನಾದಿನಿಯರಿಗಂತೂ ಭಾವನೊಂದಿಗೆ ಫ್ಯಾನ್ಸಿ ಸ್ಟೋರಿಗೆ ಹೋಗುವುದೆಂದರೆ ಎಲ್ಲಿಲ್ಲದ ಖುಷಿ. ಮ್ಯಾಚಿಂಗ್ ಹಣೆಬೊಟ್ಟು, ಬಳೆ, ಓಲೆ, ಝುಮ್ಕಿ, ರಿಬ್ಬನ್ ಹೀಗೆ ಏನೆಲ್ಲಾ ಪದಾರ್ಥಗಳನ್ನು ಕೊಂಡರೂ ಹುಡುಗಿಯರಿಗೆ ತೃಪ್ತಿಯಾಗುತ್ತಿರಲ್ಲಿಲ್ಲ. ಯಾವುದಕ್ಕೂ ರಾಜೂಭಾವ ಇಲ್ಲವೆನ್ನುತ್ತಿರಲಿಲ್ಲ.
ಆದರೆ ಇಷ್ಟು ಒಳ್ಳೆಯವನಂತಿದ್ದ ರಾಜೂಭಾವನ ನಿಯತ್ತು ಎಳ್ಳಷ್ಟು ಖೊಟ್ಟಿಯಿತ್ತೆಂಬದು ಆ ಮುಗ್ಧ ಮಕ್ಕಳಿಗೆ ತಿಳಿಯುತ್ತಿರಲಿಲ್ಲ. ಮಕ್ಕಳಿಗೆಂದು ಅಷ್ಟೆಲ್ಲಾ ಧಾರಾಳವಾಗಿ ದುಡ್ಡು ಖರ್ಚು ಮಾಡುತ್ತಿದ್ದ ರಾಜೂಭಾವನದು ಒಂದು ರೀತಿ ಕರಡಿ ಪ್ರೀತಿ. ಸುಮ್ಮಸುಮ್ಮನೇ ಮಕ್ಕಳನ್ನು ಎಲ್ಲೆಂದರಲ್ಲಿ ಸವರಿ, ಕೆನ್ನೆ ಗಿಳ್ಳಿ, ಜಡೆ ಎಳೆದು ತನ್ನ ತೆವಲು ತೀರಿಸಿಕೊಳ್ಳುತ್ತಿದ್ದರು. ಪಾಪ ಆ ಮಕ್ಕಳಿಗಿನ್ನೂ ಭಾವನ ದುರುದ್ದೇಶ ತಿಳಿಯುವ ಪ್ರಾಯವಲ್ಲ. ಆದರೂ ಈಗಾಗಲೇ ಬೆಳೆದು ನಿಂತಿದ್ದ ಅಯ್ಯರಿನ ಮೊದಲಿಬ್ಬರು ನಾದಿನಿಯರಿಗೆ ಮಾತ್ರ ಭಾವ ಹೀಗೆ ವಿನಾಕಾರಣ ಮುಟ್ಟಬಾರದ ಜಾಗಗಳಲ್ಲಿ ಮುಟ್ಟುವುದು ಮುಜುಗರವನ್ನೂ ಬೇಸರವನ್ನೂ ಉಂಟುಮಾಡುತ್ತಿತ್ತು. ಆದರೆ ಅಂಥ ಸನ್ನಿವೇಶಗಳಲ್ಲಿ ಚಿಕ್ಕಂದಿನಿಂದಲೂ ಭಾವನೊಂದಿಗಿದ್ದ ಸಲುಗೆ ಮತ್ತು ಅವರು ಕೊಡಿಸುತ್ತಿದ್ದ ವಸ್ತುಗಳ ಆಕರ್ಷಣೆಗಳಿಂದ ಆ ಹುಡುಗಿಯರು ಗೊಂದಲಕ್ಕೊಳಗಾಗಿಬಿಡುತ್ತಿದ್ದರು. ಭಾವನ ಅತಿರೇಕದ ವರ್ತನೆಗಳನ್ನು ಕೆಲವೊಮ್ಮೆ ಮುಗ್ಧರಂತೆ ಸಹಿಸಿದರೆ ಕೆಲವೊಮ್ಮೆ ನಯವಾಗಿ ಕೊಸರಿಕೊಂಡು ಹೇಗೋ ಸಂಭಾಳಿಸುತ್ತಿದ್ದರು. ಹಾಗೊಂದು ವೇಳೆ ಸ್ಪಷ್ಟವಾಗಿ ತಿಳಿದರೂ ಪ್ರತಿಭಟಿಸಲಾರದ ತನ್ನ ನಾದಿನಿಯರ ಅಸಹಾಯಕತೆಯ ಅರಿವು ಅಯ್ಯರಿಗಿತ್ತು. ಆ ಧೈರ್ಯದಿಂದ ಒಂದು ಎಲ್ಲೆಯೊಳಗೆ ತನ್ನ ತೀಟೆ ತೀರಿಸಿಕೊಳ್ಳಲು ಸಿಕ್ಕ ಅವಕಾಶಗಳನ್ನು ಅಯ್ಯರ್ ನಿರ್ಲಜ್ಜತೆಯಿಂದ ಬಳಸಿಕೊಂಡು ಬಿಡುತ್ತಿದ್ದರು. ಅಂಥ ಸಮಯಗಳಲ್ಲಿ ತಮ್ಮ ಚಪಲವನ್ನು ಹತ್ತಿಕ್ಕುವ ಗೋಜಿಗೇ ಅವರು ಹೋಗುತ್ತಿರಲಿಲ್ಲ.
–ನಾರಾಯಣ ಎಂ ಎಸ್
ಮುಂದುವರೆಯುವುದು…
ಬಹಳ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಚೆನ್ನಾಗಿದೆ
Nice
ಧನ್ಯವಾದಗಳು ಮುರಳೀಧರನ್ ಮತ್ತು ವಿಶ್ವನಾಥ್.
[…] ಇಲ್ಲಿಯವರೆಗೆ […]