
ತಿಂಡಿ ಮುಗಿಸಿ ಸುಬ್ಬು, ಮುರಳಿ, ಸೀತಮ್ಮನವರು, ಮೋಹನ ಮತ್ತು ಕೃಷ್ಣಯ್ಯರ್ ಸ್ವಾಮಿ ಸರ್ವೋತ್ತಮಾನಂದರ ಆಶ್ರಮಕ್ಕೆ ಕಾರಿನಲ್ಲಿ ಹೊರಟರು. ಸುಮಾರು ಹದಿನೈದು ಮೈಲು ದೂರದ ಆಶ್ರಮವನ್ನು ತಲುಪಲು ಅರ್ಧ ಘಂಟೆಯಾಗಬಹುದೆಂದು ಡ್ರೈವ್ ಮಾಡುತ್ತಿದ್ದ ಮೋಹನ ಹೇಳಿದ. ಸ್ವಾಮೀಜಿಯೊಂದಿಗೆ ಸಮಾಲೋಚಿಸಿ ಮದುವೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮುರಳಿಯವರ ನಿರ್ಧಾರ ಸುಬ್ಬುವಿಗೆ ಸಮಾಧಾನ ತಂದಿರಲಿಲ್ಲ. ಆದರೆ ಸಾಧುಸಂತರ ಬಗ್ಗೆ ತನ್ನ ತಾಯಿಗಿದ್ದ ಅಪಾರ ಶ್ರದ್ಧಾಭಕ್ತಿಯ ಅರಿವಿದ್ದುದರಿಂದ ಈ ವಿಚಾರದಲ್ಲಿ ತನಗೆ ಅಮ್ಮನ ಬೆಂಬಲ ಸಿಕ್ಕುವ ನಂಬಿಕೆಯಿರಲಿಲ್ಲ. ಇನ್ನು ಮುರಳಿ ಚಿಕ್ಕಪ್ಪನ ತರ್ಕಬದ್ಧವಾದ ವಾದ ಮಂಡನೆಯನ್ನೆದುರಿಸುವ ವಿಶ್ವಾಸವಂತೂ ಮೊದಲೇ ಇರಲಿಲ್ಲ. ಕಡ್ಡಿ ತುಂಡು ಮಾಡಿದಂತೆ ಯಾರೇನು ಹೇಳಿದರೂ ತಂದೆಯವರಿಲ್ಲದೆ ತಾನು ಮದುವೆಯಾಗುವುದಿಲ್ಲವೆಂದು ಹೇಳಬೇಕೆನಿಸಿದರೂ ಧೈರ್ಯ ಸಾಲಲಿಲ್ಲ. ಆದರೂ “ಅಪ್ಪ ಎಲ್ಲಿದಾರೆ ಹ್ಯಾಗಿದಾರೇಂತ ಇಲ್ಕೂತಿರೋ ಸ್ವಾಮ್ಗಳ್ಗೆ ಹೆಂಗೊತ್ತಾಗತ್ತೆ ಚಿಕ್ಕಪ್ಪಾ” ಎಂದು ಲಾಜಿಕಲ್ ಪ್ರಶ್ನೆ ಎತ್ತಿದ. “ಅದಕ್ಕೇ ಅಲ್ವೇನೋ ರಾಜ ದಾಸ್ರು ನಂಬಿ ಕೆಟ್ಟವರಿಲ್ಲವೋ…ಅಂತ್ಹಾಡಿರೋದೂ” ಎಂಬ ಚಿಕ್ಕಪ್ಪನ ಸಿದ್ಧ ಉತ್ತರ ಕೇಳಿದವನು “ಮದ್ವೆ ನಡಿಬೋದೋ ನಡೀಬಾರ್ದೋ ಅಂತ ಸ್ವಾಮೀಜೀನ ನಾನೇ ಡೈರೆಕ್ಟಾಗಿ ಕೇಳ್ಬೋದಲ್ವಾ” ಅಂದ. ಅದಕ್ಕೆ “ವೈ ನಾಟ್? ನಿಂಗೇನ್ಕೇಳ್ಬೇಕೋ ಎಲ್ಲಾ ಕೇಳ್ಕೊಳಪ್ಪಾ, ನೀನು ತೃಪ್ತಿಯಿಂದ ಒಪ್ಕೋಳ್ದೆ ನಿನ್ಮದ್ವೆ ಮಾಡಲ್ಲಾ ಕಣಯ್ಯಾ…ರೆಸ್ಟ್ ಅಶ್ಶೂರ್ಡ್” ಮುರಳಿಯವರು ಅಭಯವಿತ್ತರು. “ನಿಮ್ಗೆ ತೆಲುಗೂ ಬರತ್ತಾ ಭಾವಾ, ಸ್ವಾಮ್ಗಳ್ಗೆ ತೆಲುಗ್ಬಿಟ್ರೆ ಬೇರೆ ಭಾಷೆ ಬರೋದ್ಕಾಣೆ” ಎಂದು ಮೋಹನ ಟೆಕ್ನಿಕಲ್ ಪ್ರಾಬ್ಲಂ ಎತ್ತಿದ. “ಅಯ್ಯೋ ಹುಡುಗ್ರಾ… ಮನದಿಂಗಿತ ಅರಿಯೋ ಮಹಾತ್ಮರಿಗೆ ಭಾಷೆಯ ಹಂಗೇ?” ಗಲ್ಲ ಬಡಿದುಕೊಂಡು ಹೇಳಿದರು ಮುರಳಿ. “ನಾಳೆ ಸ್ವಾಮ್ಗಳ ಮಾತು ಸುಳ್ಳಾಗಲ್ಲಾಂತ ಏನ್ ಗ್ಯಾರಂಟಿ” ಮಗನ ಮಾತು ಕೇಳಿದ ಸೀತಮ್ಮನಿಗೆ ರೇಗಿಹೋಯಿತು. “ತೆಪ್ಪಗ್ ಕೂತ್ಕಳೋ ಬೆಪ್ತಕಡೀ…ವಿತಂಡ್ವಾದಕ್ಕೂ ಒಂದ್ಮಿತಿ ಇರ್ಬೇಕು” ಎಂದು ಸಿಟ್ಟುಗೊಂಡ ಅಮ್ಮನಿಂದ ಉಗಿಸಿಕೊಂಡ ಸುಬ್ಬು ಗಪ್ಪಾದ. ಅಷ್ಟರಲ್ಲಿ ಕಾರು ಆಶ್ರಮ ತಲುಪಿತ್ತು.
ಸುಮಾರು ಎರಡೆಕರೆಯಷ್ಟಿದ್ದ ತೋಟದ ಹಸಿರಿನ ಮಧ್ಯದಲ್ಲಿ ಕುಟೀರದ ವಿನ್ಯಾಸದಲ್ಲಿದ್ದ ಕಟ್ಟಡದ ಮುಂದೆ ಕಾರು ನಿಂತಿತು. ವಿಶಾಖಪಟ್ಟಣದ ಜನಜಂಗುಳಿಯನ್ನು ದಾಟಿ ಊರಿನ ಹೊರವಲಯದಲ್ಲಿ ನಿರ್ಮಿಸಲಾಗಿದ್ದ ಆಶ್ರಮದಲ್ಲಿ ನಿಜಕ್ಕೂ ಪ್ರಶಾಂತ ವಾತಾವರಣವಿತ್ತು. ಕುಟೀರದ ಅಂಗಳವನ್ನು ದಾಟಿ ವಿಶಾಲವಾದ ಹಜಾರ ಪ್ರವೇಶಿಸುತ್ತಿದ್ದಂತೆ ಹಜಾರದ ಮಧ್ಯದಲ್ಲಿದ್ದ ಪುಟ್ಟ ವೇದಿಕೆಯಲ್ಲಿ ಧ್ಯಾನಸ್ಥರಾಗಿದ್ದ ಸ್ವಾಮಿ ಸರ್ವೋತ್ತಮಾನಂದರು ವಿರಾಜಮಾನರಾಗಿದ್ದರು. ಹತ್ತಾರು ಭಕ್ತಾದಿಗಳನ್ನು ಬಿಟ್ಟರೆ ಹಜಾರದಲ್ಲಿ ಹೆಚ್ಚು ಜನಸಂದಣಿಯಿರಲಿಲ್ಲ. ಒಂದು ಬದಿಯಲ್ಲಿ ಹಾರ್ಮೋನಿಯಂ, ಏಕನಾದ, ಡೋಲಕ್, ಚಿಟಿಕೆ ಮೊದಲಾದ ವಾದ್ಯಗಳೊಂದಿಗೆ ಐದಾರು ಜನರ ಭಜನೆಯ ತಂಡವೊಂದು ಕುಳಿತಿತ್ತು. ಕೃಷ್ಣಯ್ಯರ್ ಸ್ವಾಮಿಗಳು ಕುಳಿತಿದ್ದ ವೇದಿಕೆಯನ್ನು ಸಮೀಪಿಸಿ ತಮ್ಮೊಂದಿಗೆ ತಂದಿದ್ದ ಹಣ್ಣುಹಂಪಲುಗಳ ಹರಿವಾಣವನ್ನು ಸ್ವಾಮಿಗಳ ಮುಂದಿಟ್ಟು ಸಾಷ್ಟಾಂಗ ನಮಸ್ಕರಿಸಿ ಕೆಳಗೆ ಹಾಸಿದ್ದ ಜಮಕಾನದ ಮೇಲೆ ಕುಳಿತರು. ಅವರ ಜೊತೆಗೆ ಹೋಗಿದ್ದವರೆಲ್ಲರೂ ಸ್ವಾಮಿಗಳಿಗೆ ನಮಸ್ಕರಿಸಿ ಕೃಷ್ಣಯ್ಯರೊಂದಿಗೆ ಆಸೀನರಾದರು. ಕಾವಿಯುಟ್ಟು ವಿಭೂತಿಯಿಟ್ಟಿದ್ದ ಮಹಾತ್ಮರು ರುದ್ರಾಕ್ಷಿ ಧರಿಸಿದ್ದರು. ಕಪ್ಪು ಮಿಶ್ರಿತ ಬಿಳೀ ಗಡ್ಡಮೀಸೆಗಳ ಹಿಂದಿದ್ದ ಸ್ವಾಮೀಜಿಗಳ ಮುಖದ ತೇಜಸ್ಸನ್ನು ಕಂಡ ಸೀತಮ್ಮನವರಿಗೆ ಆ ಭಗವಂತ ಸರಿಯಾದವರ ಬಳಿಗೇ ಕಳುಹಿಸಿಕೊಟ್ಟಿರುವನೆಂದು ಅನಿಸದಿರಲಿಲ್ಲ. ಅಷ್ಟರಲ್ಲಿ ಸ್ವಾಮಿ ಸರ್ವೋತ್ತಮಾನಂದರು ತಮ್ಮ ನಿಮೀಲಿತ ನೇತ್ರಗಳನ್ನು ತೆರೆದು ಮಂದಸ್ಮಿತರಾಗಿ ಭಕ್ತವರ್ಗದತ್ತ ದಿವ್ಯನೋಟವನ್ನು ಬೀರಿದರು. ಭಕ್ತನೊಬ್ಬ “ಬೋಲೋ ಸ್ವಾಮಿ ಸರ್ವೋತ್ತಮಾನಂದ ಮಹರಾಜ್ ಕೀ…” ಎಂದು ಕಿರುಚಿದೊಡನೆ ಭಕ್ತವರ್ಗ “ಜೈ….” ಎಂದು ಜೈಕಾರ ಹಾಕಿತು. ಸ್ವಾಮಿಗಳು ನಗುತ್ತಾ ತಮ್ಮ ಎರಡೂ ಹಸ್ತಗಳನ್ನೆತ್ತಿ ಶಾಂತರಾಗುವಂತೆ ಸಂಜ್ಞೆಮಾಡಿ ಮುಂದೆ ಕುಳಿತ ಕೃಷ್ಣಯ್ಯರ್ ಬಳಗದತ್ತ ನೋಡಿ “ಮೀ ಸಮಸ್ಯ ಏಮಿಟಿ ಅನಿ ಚೆಪ್ಪಂಡಿ” ಎಂದರು. ಕೃಷ್ಣಯ್ಯರ್ ಮುರಳಿಯವರತ್ತ ಕೈಚಾಚಿ ಮಾತನಾಡುವಂತೆ ಸನ್ನೆ ಮಾಡಿದರು.
ಮುರಳಿಯವರು ಸಂಕ್ಷಿಪ್ತವಾಗಿ ಭಾವನವರು ಕಾಣೆಯಾಗಿರುವ ವಿಚಾರವನ್ನು ತೆಲುಗಿನಲ್ಲಿ ಹೇಳಿ ಅವರ ಕ್ಷೇಮದ ಕುರಿತು ತಿಳಿಯಬೇಕೆಂದೂ ಅವರು ಯಾವಾಗ ದೊರೆಯಬಹುದೆಂದು ಹೇಳಬೇಕೆಂದೂ ಅರಿಕೆ ಮಾಡಿಕೊಂಡರು. ಆಗ ಸ್ವಾಮಿಗಳು “ತಪ್ಪಿಪೋಯನ ವ್ಯಕ್ತಿ ಪೇರು ಏವಟಿ?” ಎಂದು ಕೇಳಿದ್ದಕ್ಕೆ ಮುರಳಿಯವರು “ರಾಜನ್ ಅಯ್ಯರ್” ಎಂದುತ್ತರಿಸಿದರು. ಸ್ವಾಮಿ ಸರ್ವೋತ್ತಮಾನಂದರು ಒಂದು ಕ್ಷಣ ತಮ್ಮ ಕಣ್ಣುಗಳನ್ನು ಮುಚ್ಚಿ ತಮ್ಮ ದಿವ್ಯ ದೃಷ್ಠಿಯಿಂದ ಯಾವುದೋ ಒಳನೋಟ ಪಡೆದವರಂತೆ ಮತ್ತೆ ಕಣ್ತೆರೆದು ಮುರಳಿಯವರನ್ನು ನೋಡಿ ನಕ್ಕು “ಕಂಗಾರು ಪಡದ್ದು, ಪ್ರತಿ ಘಟನ ವೆನಕಾಲ ಒಕ ಕಾರಣಮುಂಟುಂದಿ. ಏದಿ ಜರುಗಿನ ಮಂಚಿಯೇ ಜರುಗಿಂದಿನಿ ಅನ್ಕೋವದಮುಲು ಲಾಭಮು. ಮೀ ಮನಿಷಿ ಭದ್ರಂಗಾ ಉನ್ನಾಡು. ಮೂಡು ರೋಜಲೋ ಮೀ ವದ್ದಕಿ ಚೇರುತಾಡು” ಎಂದರು. ಭಾಷೆತಿಳಿಯದ ಸುಬ್ಬು ಬಿಟ್ಟ ಕಣ್ಗಳಿಂದ ಸ್ವಾಮಿಗಳನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಮಹಾತ್ಮರ ದನಿಯಲ್ಲಿದ್ದ ಕಕ್ಕುಲತೆಯ ಆದ್ರತೆಗೆ ಮಾರುಹೋದ ಸೀತಮ್ಮನವರಿಗೆ ಭಾಷೆಯ ತೊಡಕು ಅರಿವಿಗೆ ಬರಲಿಲ್ಲ. ಅಷ್ಟರಲ್ಲಿ ಮುಖವರಳಿಸಿದ ಮುರಳಿಯವರು ಭಾವುಕತೆಯಿಂದ ಎದ್ದು ನಿಂತು ಎರಡೂ ಕೈಗಳನ್ನೆತ್ತಿ “ಸ್ವಾಮಿ ಸರ್ವೋತ್ತಮಾನಂದಾ ಆಪತ್ಭಾಂಧವಾ…” ಎಂದು ಗಟ್ಟಿಯಾಗಿ ಕೂಗುತ್ತಿದ್ದಂತೆ “ಓಂ ಗುರು ಓಂ ಗುರು ಪರಾತ್ಪರಾ ಗುರು…. ಓಂ ಗುರು ಓಂ ಗುರು ಪರಾತ್ಪರಾ ಗುರು, ಓಂಕಾರಾ ಗುರು ತವ ಶರಣಂ…” ಉಚ್ಛ ಸ್ಥಾಯಿಯಲ್ಲಿ ವಾದ್ಯವೃಂದದೊಂದಿಗೆ ಶುರುವಾದ ಭಜನೆಯ ನಾದ ಇಡೀ ಹಜಾರದಲ್ಲಿ ತುಂಬಿಹೋಯಿತು. ಗಲಿಬಿಲಿಗೊಂಡ ಸುಬ್ಬು ಅತ್ತಿತ್ತ ನೋಡುತ್ತಾ ಕಣ್ಕಣ್ ಬಿಡುತ್ತಿದ್ದ.
ಮುರಳಿಯವರಿಂದ ಮೊದಲ್ಗೊಂಡು ಒಬ್ಬೊಬ್ಬರೇ ಸ್ವಾಮಿಗಳಿಗೆ ಧೀರ್ಘದಂಡ ನಮಸ್ಕಾರ ಮಾಡಲಾರಂಭಿಸಿದರು. ಸ್ವಾಮಿಗಳು ನಮಸ್ಕರಿಸಿದವರಿಗೆಲ್ಲಾ ಹರಿವಾಣದಲ್ಲಿದ್ದ ಒಂದೊಂದೇ ಹಣ್ಣು ತೆಗೆದು ಪ್ರಸಾದವಾಗಿ ದಯಪಾಲಿಸುತ್ತಿದ್ದರು. ಸರೀ ಲಾ ಪಾಯಿಂಟುಹಾಕಿ ಸ್ವಾಮಿಗಳಿಗೆ ಕ್ರಾಸ್ಮಾಡಬೇಕೆಂದುಕೊಂಡಿದ್ದ ಸುಬ್ಬು ಮಾತ್ರ ತಬ್ಬಿಬ್ಬಾಗಿ ಇನ್ನೂ ಕೂತೇ ಇದ್ದ. ಮುರಳಿಯವರು ಸುಬ್ಬುವಿಗೆ “ಯಾಕ್ಸುಬ್ಬೂ ಕೂತೇ ಇದಿ! ಭಜ್ನೆ ತುಂಬಾ ಇಂಪಾಗಿದ್ಯಾ, ಒಂದಿನಾ ನಿಂಗೇಂತಾನೆ ಭಜ್ನೆ ಅರೇಂಜ್ಮಾಡಿದ್ರಾಯ್ತು ಆವಾಗಾರಾಮಾಗಿ ಕೂತ್ಕಡ್ ಕೇಳೂವಂತಿ, ಈಗ್ಹೊರ್ಡಪ್ಪಾ… ನಿನ್ ವೈದೇಹಿ ಕಾಯ್ತಿರ್ತಾಳೇ” ಎಂದರು ನಗುತ್ತಾ. “ಸ್ವಲ್ಪ ತಡೀರಿ ಚಿಕ್ಕಪ್ಪಾ, ಸ್ವಾಮ್ಗಳ್ನ ನಾನಿನ್ನೂ ಏನೋ ಕೇಳ್ಬೇಕು” ಅಂದ ವೀಕಾಗಿ. “ನೀನಿನ್ನೇನೋ ಕೇಳೋದು, ನಿಮ್ಚಿಕ್ಕಪ್ಪ ಎಲ್ಲಾ ಕೇಳಾಯ್ತು. ನಡಿ, ನಡಿ ಮುಹೂರ್ತಕ್ಹೊತ್ತಾಯ್ತು, ಮಹಾನುಭಾವರ ಆಶೀರ್ವಾದ ತಗೊಂಡು ಹೊರಡೋದ್ನೋಡು” ರೇಗಿದರು ಸೀತಮ್ಮ. ಏನೇನೋ ಕೇಳ್ಬೇಕೆಂದುಕೊಂಡಿದ್ದ ಸುಬ್ಬು ಸ್ವಾಮಿಗಳಿಗೆ ಅಡ್ಡಬಿದ್ದು ಹಣ್ಣು ಪಡೆದು ಗಪ್ಪಗೆ ಅಮ್ಮನನ್ನು ಹಿಂಬಾಲಿಸಿದ.
ಕುಟೀರದಿಂದ ಹೊರಬಂದವರೆಲ್ಲಾ ಕಾರುಹತ್ತಿ ಕುಳಿತ ನಂತರ ಮೋಹನ ಗಾಡಿ ಸ್ಟಾರ್ಟ್ ಮಾಡಿದ. ಮುರಳಿಯವರು “ಸ್ವಾಮ್ಗಳ ಮಖದಲ್ಲೀ ಆದೇನು ವರ್ಚಸ್ಸಲ್ವಾ ಸೀತಕ್ಕಾ…” ಎಂದರು. ಸೀತಮ್ಮ ಕುಳಿತಲ್ಲೇ ಕಣ್ಮುಚ್ಚಿ ಕೈಮುಗಿದು “ಮಹಾನ್ಸಾಧಕರೂ ಅನ್ಸುತ್ತೆ. ನಾನಂತೂ ನಿರ್ಧಾರ ಮಾಡ್ಬಿಟ್ಟಿದೀನಿ. ಇವರು ಬಂದ್ಮೇಲೆ ನಾವಿಬ್ರೂ ದಂಪತಿಗ್ಳು ಒಂದ್ಸರ್ತಿ ಒಟ್ಗೆ ಇಲ್ಲೀಗೆ ಬಂದು ಸ್ವಾಮ್ಗಳ ಪಾದ್ಪೂಜೆ ಮಾಡೇ ತೀರ್ಬೇಕೂಂತ” ಎಂದರು ಲವಲವಿಕೆಯಿಂದ. “ನಿಂಗೂ ಸಮಾಧಾನ ಆಯ್ತಲ್ವೇನೊ ಸುಬ್ಬೂ…?” ಮುರಳಿ ಕೇಳಿದರು. “ನಂಗೆಲ್ತೆಲುಗ್ ಬರತ್ತೆ, ಅವರ್ಹೇಳಿದ್ದೇನೂ ನಂಗೊತ್ತೇ ಆಗ್ಲಿಲ್ಲ” ಅಂದ ಸುಬ್ಬು ಬೇಸರದಿಂದ. “ನಾನೀಗ್ಹೇಳ್ತೀನಿ ಬಿಡು ನಿಂಗೆ, ಅದಕ್ಯಾಕ್ತಲೆ ಕೆಡುಸ್ಕೋತಿ. ಭಾವ್ನೋರು ಯಾವ್ದೇ ಅಪಾಯ್ವಿಲ್ದೆ ದಕ್ಷಿಣದಿಕ್ನಲ್ಲಿ ಸುರಕ್ಷಿತ್ವಾಗಿದಾರಂತೆ. ಆಗಿದ್ದೆಲ್ಲಾ ಒಳ್ಳೇದಕ್ಕೇ ಅಂತೆ, ನಿಂಗೆ ಭಗವಂತನ ಆಶೀರ್ವಾದ ಇರೋದ್ರಿಂದ ಮದ್ವೆ ವಿಚಾರದಲ್ಲಿ ಧಾರಾಳ್ವಾಗಿ ಮುಂದ್ವರೀಬೋದಂತೆ…ನಿನ್ಗಿವತ್ತು ಮದ್ವೆ ಆಗ್ದಿದ್ರೆ ಇನ್ನೀ ಜನ್ಮದಲ್ನಿಂಗೆ ಮದ್ವೇನೇ ಆಗಲ್ವಂತೆ. ಇನ್ ಫ್ಯಾಕ್ಟ್ ಭಾವ್ನೋರ ಜೀವಕ್ಕೆ ಕಂಟಕ್ವಿತ್ತಂತೆ…ಅಕ್ಕನ ಮಾಂಗಲ್ಯಬಲ ಗಟ್ಟಿಯಿದ್ದಿದ್ರಿಂದ ಬರೀ ಹೀಗೊಂದು ಗಾಬ್ರಿ ಹುಟ್ಸಿ ಹೊಟೋಯ್ತಂತೆ” ಎಂದು ಹೇಳಿ ಕೃಷ್ಣಯ್ಯರಿಗೆ “ಎಲ್ಲಾ ಸರೀಗ್ ಹೇಳಿದೀನಾ ಮಾವ… ಏನೂ ಬಿಟ್ಟಿಲ್ಲಾ ತಾನೆ” ಎಂದು ಕೇಳಿದರು. ತಮ್ಮ ಮಾಂಗಲ್ಯಬಲ ಗಟ್ಟಿಯಿದ್ದಿದ್ರಿಂದ ಯಜಮಾನರ ಜೀವಕ್ಕಿದ್ದ ಕಂಟಕ ಬರೀ ಹೀಗೊಂದು ಗಾಬ್ರಿ ಹುಟ್ಸಿ ಹೋದದ್ದು ತಿಳಿದು ಸೀತಮ್ಮನಿಗಾದ ಹರ್ಷ ಅಷ್ಟಿಷ್ಟಲ್ಲ. ಮಾಂಗಲ್ಯವನ್ನು ಕಣ್ಣಿಗೊತ್ತಿಕೊಂಡು ಖುಷಿಯಿಂದ ಸುರಿದ ಆನಂದಬಾಷ್ಪವನ್ನು ಸೆರಗಿನಿಂದೊರೆಸಿ ಮನದಲ್ಲೇ ದೇವರಿಗೆ ನಮಿಸಿದರು. ಮುರಳಿಯ ಮಾತಿನ ವರಸೆಯಿಂದ ಸುಸ್ತಾದಂತೆ ಕಂಡ ಕೃಷ್ಣಯ್ಯರ್ “ಏನ್ಮೆಮೋರಿ ಪವರಪ್ಪ ನಿಂದು ಒಂದೂ ಬಿಡ್ದೆ ಎಲ್ಲಾ ಒಪ್ಸಿದಿ ನೋಡು” ಎಂದು ತಲೆದೂಗಿದರು. ಸ್ವಾಮಿಗಳು ಹೇಳಿದ್ದ ಕೇವಲ ಮೂರ್ನಾಲ್ಕು ಮಾತಲ್ಲಿ ಇಷ್ಟೆಲ್ಲಾ ವಿಚಾರವಿರುವುದು ಕಂಡು ಸುಬ್ಬುವಿಗೆ ಅಚ್ಚರಿಯಾಯ್ತು. ಇಷ್ಟೆಲ್ಲಾ ವಿಚಾರವನ್ನು ಅಷ್ಟು ಸಂಕ್ಷಿಪ್ತವಾಗಿ ಕಟ್ಟಿಕೊಡಬಲ್ಲ ತೆಲುಗು ಭಾಷೆಯ ಸ್ವರೂಪದ ಬಗ್ಗೆ ಕುತೂಹಲ ಮೂಡಿ ಮದುವೆಯಾದ ಮೇಲೆ ವೈದೇಹಿ ಹತ್ತಿರ ತೆಲುಗು ಹೇಳಿಸಿಕೊಳ್ಳಬೇಕೆಂದುಕೊಂಡ. ಅಷ್ಟರಲ್ಲಿ ಕಾರು ಗ್ರ್ಯಾಂಡ್ ರೆಸಿಡೆನ್ಸಿಯ ’ಸುಬ್ರಹ್ಮಣ್ಯ ಅಯ್ಯರ್ ವೆಡ್ಸ್ ವೈದೇಹಿ” ಎಂದು ಬರೆದಿದ್ದ ಪುಷ್ಪಾಲಂಕೃತ ಕಮಾನಿನೊಳಗೆ ನುಸುಳಿ ಪೋರ್ಟಿಕೋದಲ್ಲಿ ಬಂದು ನಿಂತಿತು.
ಅದುವರೆಗೂ ಕೇವಲ ಯಾಂತ್ರಿಕವಾಗಿ ಸಾಗುತ್ತಿದ್ದ ಮದುವೆಯ ಚಟುವಟಿಕೆಗಳಿಗೆ ಸ್ವಾಮಿ ಸರ್ವೋತ್ತಮಾನಂದರ ಆಶ್ರಮದ ಭೇಟಿಯ ಬಳಿಕ ಸ್ವಲ್ಪ ಜೀವಂತಿಕೆ ಬಂದಂತೆ ಕಂಡಿತು. ಸೀತಮ್ಮ ಮತ್ತು ಮುರಳಿಯವರನ್ನು ಕೃಷ್ಣಯ್ಯರ್ ನಯವಾಗಿ ವಿನಂತಿಸಿ ಮಂಗಳವಾದ್ಯ ಮೊಳಗಿಸಲು ಅನುಮತಿ ಪಡೆದ ಬಳಿಕ ಮದುವೆ ಮನೆಗೆ ಒಂದಷ್ಟು ಮದುವೆ ಮನೆಯ ಕಳೆ ಬಂದಂತಾಯಿತು. ಮುರಳಿಯವರು ಆಶ್ರಮದಲ್ಲಿ ಸ್ವಾಮಿಗಳೊಂದಿಗೆ ನಡೆದ ಸಮಾಲೋಚನೆಯನ್ನು ರಸವತ್ತಾಗಿ ವಿವರಿಸಿ ಮನೆಮಂದಿಗೆಲ್ಲಾ ಸ್ಫೂರ್ತಿ ತುಂಬಿದರು. ಆಶ್ರಮದಿಂದ ಮರಳಿದ ಸೀತಮ್ಮನವರಲ್ಲಿ ಕಂಡ ಬದಲಾವಣೆ ಮುರಳಿಯವರ ಮಾತುಗಳಿಗೆ ಪೂರಕವಾಗಿ ತೋರಿ ಉಳಿದವರಿಗೂ ಒಂದಷ್ಟು ಚೈತನ್ಯ ಮೂಡಿತು. ಒಟ್ಟಾರೆ ಮುರಳಿಯವರು ಬಯಸಿದ್ದಂತೆ ಮದುವೆಗೆ ಮುಂಚೆ ಮನೆಯವರೆಲ್ಲಾ ಒಂದು ಮಟ್ಟಕ್ಕೆ ಸಮಾಧಾನದ ಸ್ಥಿತಿಯಲ್ಲಿದ್ದರಾದರೂ ಸುಬ್ಬು ಮಾತ್ರ ಇನ್ನೂ ಸ್ವಲ್ಪ ತುಮುಲದಲ್ಲೇ ಇದ್ದಂತಿತ್ತು. ತಂದೆಯ ಅನುಪಸ್ಥಿತಿಯೊಂದಿಗೆ ತನ್ನ ಭಾವನೆಗಳನ್ನು ಹೊರಹಾಕಲಾಗದ ಅಸಹಾಯಕತೆ ಸೇರಿ ಸುಬ್ಬು ಹೇಳಲಾರದ ಯಾತನೆ ಅನುಭವಿಸುತ್ತಿದ್ದ. ಇನ್ನೇನು ಮುಹೂರ್ತದ ಸಮಯ ಸಮೀಪಿಸುತ್ತಿತ್ತು.
ಕೃಷ್ಣಯ್ಯರ್ ಹೆಂಡತಿ ಕಳೆದುಕೊಂಡ ವಿಧುರರಾಗಿದ್ದರಿಂದ ಅವರಿಗೆ ಕನ್ಯಾದಾನ ಮಾಡುವ ಅರ್ಹತೆಯಿರಲಿಲ್ಲ. ಹಾಗಾಗಿ ಹೆಣ್ಣಿನ ಹಿರಯಣ್ಣ ಶೇಖರ ಮತ್ತವನ ಮಡದಿ ತಂದೆತಾಯಿಯರ ಸ್ಥಾನದಲ್ಲಿ ನಿಂತು ಕನ್ಯಾದಾನ ಮಾಡುವವರಿದ್ದರು. ಹಾಗೇಯೇ ಅಯ್ಯರ್ ನಾಪತ್ತೆಯಾಗಿದ್ದರಿಂದ ಸುಬ್ಬುವಿನ ತಂದೆತಾಯಿಯರ ಸ್ಥಾನದಲ್ಲಿ ಮುಕ್ತಾ ಮತ್ತು ಮುರಳೀಧರರು ನಿಂತು ಮದುವೆ ನಡಸಿಕೊಡಬೇಕೆಂದು ಸೀತಮ್ಮನವರು ಬಯಸಿದರು. ಆದರೆ ಇದಕ್ಕೊಪ್ಪದ ಮುರಳಿ ಹಿರಿಯರಾದ ಸುಬ್ಬುವಿನ ದೊಡ್ಡಮ್ಮ ದೊಡ್ಡಪ್ಪ ಇರುವಾಗ ತಾವು ಆ ಸ್ಥಾನದಲ್ಲಿ ನಿಲ್ಲುವುದು ಸರಿಯಲ್ಲವೆಂದು ಹೇಳಿ ಆಲತ್ತೂರಿನ ರಾಘು ಭಾವ ಮತ್ತು ಪಾರ್ವತಕ್ಕ ಅಯ್ಯರ್ ಮತ್ತು ಸೀತಕ್ಕನ ಸ್ಥಾನದಲ್ಲಿದ್ದು ಮದುವೆ ನಡಸಿಕೊಡುವಂತೆ ವ್ಯವಸ್ಥೆ ಮಾಡಿದರು. ಅಷ್ಟರಲ್ಲಿ ಹಿರಿಯರು ಸುಬ್ಬುವನ್ನು ಕಾಶಿಯಾತ್ರೆಗೆ ಹೊರಡುವಂತೆ ಆಗ್ರಹಿಸಿದರು.
ಶಾಸ್ತ್ರೋಕ್ತವಾಗಿ ಕನ್ಯಾದಾನಕ್ಕೆ ಮೊದಲು ಕಾಶಿಯಾತ್ರೆ ನಡೆಸುವುದು ಸಂಪ್ರದಾಯ. ಕಾಶಿಯಾತ್ರೆಯಲ್ಲಿ ಲೌಕಿಕ ಜೀವನದಿಂದ ವಿರಕ್ತನಾದ ವರನು ಒಂದು ಛತ್ರಿ, ಬೀಸಣಿಗೆ, ಊರುಗೋಲು, ಸ್ವಲ್ಪ ಆಹಾರ ಪದಾರ್ಥಗಳು ಇತ್ಯಾದಿ ಸಾಮಗ್ರಿಗಳೂಂದಿಗೆ ಕಾಶಿಗೆ ಹೊರಟವನಂತೆ ನಟಿಸುತ್ತಾನೆ. ಈ ಹಂತದಲ್ಲಿ ಹೆಣ್ಣಿನ ತಂದೆಯು ಮಧ್ಯ ಪ್ರವೇಶಿಸಿ ಪಾರಮಾರ್ಥಿಕ ಸತ್ಯವನ್ನು ಹುಡುಕಲು ಸನ್ಯಾಸ ಸ್ವೀಕರಿಸುವ ನಿರ್ಧಾರ ಮಾಡಿ ಕಾಶಿಯಾತ್ರೆ ಕೈಗೊಂಡ ವರನನ್ನು ಮಾರ್ಗಮಧ್ಯೆ ತಡೆದು ಕಾಶಿಗೆ ಹೋಗಿ ಸನ್ಯಾಸ ಸ್ವೀಕರಿಸಬಾರದೆಂದು ವಿನಂತಿಸುತ್ತಾನೆ. ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಕೊಡುವುದಾಗಿ ಹೇಳಿ ಕನ್ಯಾದಾನವನ್ನು ಸ್ವೀಕರಿಸಿ ಗೃಹಸ್ಥಾಶ್ರಮದಲ್ಲಿದ್ದು ಪರಮಾರ್ಥದ ಸಾಧನೆಗೈಯ್ಯುವುದು ಹೆಚ್ಚು ಶ್ರೇಷ್ಠವೆಂದು ಓಲೈಸಿ ವರನನ್ನು ಮದುವೆ ಮಂಟಪಕ್ಕೆ ಕರೆತರುತ್ತಾನೆ. ವರ ಮದುವೆ ಮಂಟಪಕ್ಕೆ ಮರಳಿದ ಬಳಿಕ ವಧೂವರರು ಮೊಟ್ಟಮೊದಲಿಗೆ ಮುಖಾಮುಖಿಯಾಗಿ ಒಬ್ಬರಿಗೊಬ್ಬರು ಪುಷ್ಪಹಾರಗಳನ್ನು ಹಾಕಿಕೊಳ್ಳುವುದರೊಂದಿಗೆ ಮುಂದಿನ ಕಾರ್ಯಕ್ರಮವಾದ ಉಯ್ಯಾಲೋತ್ಸವಕ್ಕೆ ಚಾಲನೆ ದೊರೆಯುತ್ತದೆ.
ಅನ್ಯಮನಸ್ಕನಾಗಿ ಕಾಶಿಯಾತ್ರೆಗೆ ಹೊರಟಾಗ ಸುಬ್ಬುವಿನ ತಲೆಯಲ್ಲಿ ನಿಜಕ್ಕೂ ಕಾಶಿಗೆ ಹೋಗಿ ಸನ್ಯಾಸ ಸ್ವೀಕರಿಸಿಬಿಡಬೇಕೆಂಬ ಐಡಿಯಾ ಸುಳಿದಾಡತೊಡಗಿತು. ಯಾರ ಓಲೈಕೆಗೂ ಮಣಿಯದೆ ಕಾಶಿಗೆ ಹೊರಟೇ ಹೋಗಬೇಕೆಂದುಕೊಳ್ಳುತ್ತಿದ್ದಾಗ ಶೇಖರ ಬಂದು ಸುಬ್ಬುವನ್ನು ತಡೆದು ಕಾಶಿಗೆ ಹೋಗುವ ಯೋಜನೆಯನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದ. “ಇಲ್ಲ ಆಗಲ್ಲ, ನಾನ್ಕಾಶೀಗೆ ಹೋಗೇ ಹೋಗ್ತೀನಿ” ಅವನಿಗರಿವಿಲ್ಲದೇ ಸುಬ್ಬುವಿನ ಮನದ ಮಾತು ಹೊರಬಂದಿತ್ತು. ಸುಬ್ಬು ತಮಾಷೆ ಮಾಡುತ್ತಿದ್ದಾನೆಂದು ತಿಳಿದು ಅಲ್ಲಿದ್ದವರೆಲ್ಲಾ ಘೊಳ್ಳೆಂದು ನಕ್ಕರು. “ಸ್ವಲ್ಪ ಈ ಕಡೆ ತಿರುಗಿ ಅಳಿಯಂದ್ರೇ” ತಮ್ಮ ಕ್ಯಾನನ್ ಕ್ಯಾಮರಾ ಫೋಕಸ್ ಮಾಡುತ್ತಿದ್ದ ಪರಮೇಶ್ವರನ್ ಹೇಳಿದರು. ಅವರನ್ನು ಕಂಡದ್ದೇ ಸುಬ್ಬುವಿಗೆ ಪರಮೇಶ್ವರನ್ ಅದೇ ಕ್ಯಾಮರಾದಲ್ಲಿ ನಿಶ್ಚಿತಾರ್ಥದ ಫೋಟೋ ತೆಗೆದದ್ದು ನೆನಪಾಯ್ತು. ಜೊತೆಯಲ್ಲೇ ಅವರು ಹೈಕೋರ್ಟ್ ವಕೀಲರೆಂದೂ ನೆನಪಾಗಿ ಗಾಬರಿಯಾಯ್ತು. ಎಂಗೇಜ್ಮೆಂಟ್ ಮಾಡಿಕೊಂಡು ಮದುವೆ ಮುರಿದದ್ದಕ್ಕೆ ಕೇಸು ಜಡಿದು ಕೋರ್ಟಿನ ಮೆಟ್ಟಿಲು ಹತ್ತಿಸಿದರೆ ಗತಿಯೇನೆನಿಸಿ ಕಾಶಿಗೆ ಹೋಗುವ ಐಡಿಯಾ ಮಕಾಡೆ ಮಲಗಿತು. ಅಷ್ಟರಲ್ಲಿ “ದಯಮಾಡಿ ಕನ್ಯಾದಾನ ಸ್ವೀಕರಿಸಬೇಕು ಭಾವಾ” ಎಂದ ಶೇಖರನ ದನಿ ಕೇಳಿದ ಸುಬ್ಬು “ಆಗ್ಬೋದು…ಆಗ್ಬೋದು” ಎಂದು ಹಿಂತಿರುಗಿ ಮದುವೆ ಮಂಟಪದೆಡೆಗೆ ನಡೆದ.
ಮದುವೆ ಮಂಟಪದಲ್ಲಿ ಶೇಖರ ಮತ್ತವನ ಪತ್ನಿ ವಿದ್ಯುಕ್ತವಾಗಿ ಸುಬ್ಬುವಿಗೆ ಪಾದಪೂಜೆ ಸಲ್ಲಿಸಿದರು. ಮೇಲ್ನೋಟಕ್ಕೆ ಸುಬ್ಬುವಿಗೆ ಪಾದಪೂಜೆಯ ರಾಜಮರ್ಯಾದೆ ನಡೆಯುತ್ತಿತ್ತಾದರೂ ಅವನಿಗೆ ನೆನ್ನೆಯಿಂದ ತನ್ನ ಮಾತಿಗೆ ಮೂರುಕಾಸಿನ ಕಿಮ್ಮತ್ತು ಸಿಗುತ್ತಿಲ್ಲವೆಂದೆನಿಸುತ್ತಿತ್ತು. ತನ್ನಿಚ್ಛೆಗೆ ವಿರುದ್ಧವಾಗಿ ಎಲ್ಲವೂ ನಡೆಯುತ್ತಿದ್ದರೂ ಹೇತ್ಲಾಂಡಿಯಂತೆ ಎಲ್ಲಕ್ಕೂ ಹೊಂದಿಕೊಂಡು ಹೋಗಬೇಕಾಗಿ ಬರುತ್ತಿದ್ದರಿಂದ ಖೇದವಾಗುತ್ತಿತ್ತು. ಪಾದಪೂಜೆಯ ಬಳಿಕ ವಧೂವರರು ಹಾರ ಬದಲಿಸಿಕೊಳ್ಳುವ ಆಟವಾಡುವುದು ವಾಡಿಕೆ. ಒಂದೆಡೆ ಗಂಡಿನ ಕಡೆಯವರು ಸುಬ್ಬುವನ್ನು ಎತ್ತಿಕೊಂಡರೆ ಮತ್ತೊಂದೆಡೆ ಹೆಣ್ಣಿನ ಮನೆಯವರು ವೈದೇಹಿಯನ್ನೆತ್ತಿಕೊಂಡು ಗಂಡು ಹೆಣ್ಣುಗಳಿಬ್ಬರಿಗೂ ಒಬ್ಬರಿಗೊಬ್ಬರು ಹಾರಹಾಕಲಾಗದಂತೆ ಜಗ್ಗಾಡಿ ಆಟವಾಡಿಸಿ ಕೊನೆಗೆ ವಧೂವರರು ಪರಸ್ಪರ ಹಾರಹಾಕಿಕೊಳ್ಳಲು ಬಿಡುತ್ತಾರೆ. ಎಷ್ಟಾದರೂ ಇನ್ನೂ ಗಂಡಿನ ತಂದೆಯ ಬಗ್ಗೆ ಖಬರು ಸಿಕ್ಕಿರದಿದ್ದ ಕಾರಣ ಇಂತಹ ಸಮಯದಲ್ಲಿ ಸಾಮಾನ್ಯವಾಗಿ ಇತರ ಮದುವೆಗಳಲ್ಲಿ ಕಾಣಸಿಗುವಷ್ಟು ಉತ್ಸಾಹದ ನೂಕಾಟ ಜಗ್ಗಾಟಗಳಿಲ್ಲದೇ ಮಾಲೆ ಬದಲಿಸಿಕೊಳ್ಳುವ ಪ್ರಕ್ರಿಯೆ ಮುಗಿಸಿದರು. ನಂತರ ನಡೆದ ಉಯ್ಯಾಲೋತ್ಸವದಲ್ಲಿ ಪುಷ್ಪಾಲಂಕೃತ ಉಯ್ಯಾಲೆಯಲ್ಲಿ ವಧೂವರರನ್ನು ಕೂರಿಸಿ ಎರಡೂ ಮನೆಯ ಹೆಂಗಸರು ಒಬ್ಬೊಬ್ಬರಾಗಿ ಇಬ್ಬರಿಗೂ ಹಾಲು ಹಣ್ಣು ಉಣಿಸಿ “ಸುಬ್ಬೂ ಕಲ್ಯಾಣ…ವೈದೇಹಿ ಕಲ್ಯಾಣ ವೈಭೋಗಮೇ” ಎಂದು ನೀಲಾಂಬರೀ ರಾಗದಲ್ಲಿ ಹಾಡುತ್ತಾ ಉಯ್ಯಾಲೆ ತೂಗಿದರು.
ಹಲವಾರು ಗೊಂದಲಗಳ ನಡುವೆಯೂ ಹಾಗೂ ಹೀಗೂ ಸುಬ್ಬು ಮದುವೆ ಕನ್ಯಾದಾನದ ಹಂತ ತಲುಪಿತು. ಉಯ್ಯಾಲೆಯಿಂದಿಳಿದ ವರನ ಅಂಗವಸ್ತ್ರದ ತುದಿಯನ್ನು ವಧುವಿನ ಸೀರೆಯ ತುದಿಗೆ ಗಂಟುಹಾಕಿದರು. ಶೇಖರನ ಪತ್ನಿ ಸುಬ್ಬುವಿನ ಕಣ್ಣಿಗೆ ಕಣ್ಕಪ್ಪಿಟ್ಟ ಬಳಿಕ ಶೇಖರ ಸುಬ್ಬುವಿನ ಕಾಲು ತೊಳೆದು ಒಂದೆಡೆ ಕೂರಿಸಿದ. ಸುಬ್ಬುವಿನೆದುರು ಕುಳಿತ ಶೇಖರ ತನ್ನ ತೊಡೆಯ ಮೇಲೆ ತಂಗಿ ವೈದೇಹಿಯನ್ನು ಕುಳ್ಳಿರಿಸಿಕೊಂಡು ವೈದೇಹಿಯ ಕೈಯ್ಯಲ್ಲಿದ್ದ ತೆಂಗಿನಕಾಯಿಯ ಸಮೇತ ಅವಳ ಕೈಗಳನ್ನು ಸುಬ್ಬುವಿನ ಕೈಗಳಿಗೊಪ್ಪಿಸಿದ. ಶೇಖರನ ಪತ್ನಿ ಆ ತೆಂಗಿನಕಾಯಿಯ ಮೇಲೆ ಪವಿತ್ರಜಲವನ್ನು ಬಿಡುವುದರೊಂದಿಗೆ ಕನ್ಯಾದಾನದ ಶಾಸ್ತ್ರ ಪೂರ್ಣಗೊಂಡಂತಾಯಿತು. ಈ ಹಂತದಲ್ಲಿ ರಾಘೂಭಾವ ಮತ್ತು ಪಾರ್ವತಮ್ಮನವರು ವೈದೇಹಿಗೆ ಉಡುಗೊರೆಯಾಗಿ ಕೊಟ್ಟ ಒಂಬತ್ತು ಗಜದ ಸೀರೆಯನ್ನು ಅವಳ ಹೆಗಲಸುತ್ತ ಹಾಕಿ ಸುಬ್ಬುವಿನಕೈಲಿ ಆಕೆಯ ಬೈತಲೆಗೆ ಕುಂಕುಮ ಹಚ್ಚಿಸಿದರು. ನಂತರ ವೈದೇಹಿಗೆ ಉಡುಗೊರೆಯಾಗಿ ದೊರೆತ ಸೀರೆಯನ್ನುಟ್ಟು ಮಾಂಗಲ್ಯ ಧಾರಣೆಗೆ ಬರಲು ಹೇಳಲಾಯಿತು. ಪುರೋಹಿತರು ಮಂತ್ರಿಸಿದ ಮಾಂಗಲ್ಯವನ್ನು ಸುಬ್ಬುವಿನ ಕೈಗೆ ಕೊಟ್ಟು ಸೀರೆ ಬದಲಿಸಿ ಬಂದ ವೈದೇಹಿಯ ಕೊರಳಿಗೆ ಕಟ್ಟುವಂತೆ ತಿಳಿಸಿದರು. ಮುರಳಿಯವರು ಕೈಯಲ್ಲಾಡಿಸುತ್ತಾ “ಗಟ್ಟಿಮೇಳಂ…” ಎಂದು ಕೂಗಿದರು “ಮಾಂಗಲ್ಯಂ ತಂತುನಾನೇನ…ಮಮಜೀವನ ಹೇತುನಾ” ಗಟ್ಟಿಯಾಗಿ ಹೊರಟ ವೈದಿಕರ ಮಂತ್ರಘೋಷ ಮಂಗಳವಾದ್ಯಗಳ ಅಬ್ಬರದಲ್ಲಿ ಹುದುಗಿಹೋಯಿತು. ತಾಳಿಗೆ ಸುಬ್ಬು ಎರಡು ಗಂಟು ಹಾಕಿದೊಡನೆ ಹಿಂದೆ ತಯಾರಿದ್ದ ತಂಗಿ ಶಾರದೆ ಮೂರನೇ ಗಂಟು ಹಾಕುವುದರೊಂದಿಗೆ ಸುಬ್ಬು ಮತ್ತು ವೈದೇಹಿ ವಿದ್ಯುಕ್ತವಾಗಿ ಪತಿಪತ್ನಿಯರಾದರು. ಇಬ್ಬರ ಮಿಲನದ ಸಂಕೇತವಾಗಿ ಸೂಕ್ತ ಮಂತ್ರಗಳೊಂದಿಗೆ ಪುರೋಹಿತರು ವಧೂವರರನ್ನು ಸಪ್ತಪದಿ ತುಳಿಸಿದರು.
ಎಲ್ಲ ಸಮಸ್ಯೆಗಳ ಹೊರತಾಗಿಯೂ ಅಂತೂ ಇಂತೂ ಮಗಳ ಮದುವೆ ಮುಗಿದದ್ದು ಕಂಡು ಕೃಷ್ಣಯ್ಯರ್ ನಿರಾಳವಾದರು. ಸಂದಿಗ್ಧ ಪರಿಸ್ಥಿತಿಯಲ್ಲಿ ಒತ್ತಾಸೆಯಾಗಿ ನಿಂತ ಮುರಳಿಯವರ ಬಳಿಬಂದು ಬರಸೆಳೆದು ಅಪ್ಪಿದಾಗ ಮಾತು ಹೊರಡದೆ ಕಣ್ಣು ಒದ್ದೆಯಾಗಿತ್ತು. ಮುರಳಿಯವರು ಕೊಸರಿಕೊಂಡು “ಮಾವಾ, ದಯ್ಮಾಡಿ ಇಲ್ಲೀಗೆ ಮದ್ವೆ ಕಾರ್ಯಕ್ರಮ ಎಲ್ಲಾ ನಿಲ್ಲಿಸ್ಬಿಡಿ. ಆರ್ತಕ್ಷತೆ ಅದೂ ಇದೂ ಒಂದೂ ಬೇಡ, ಇನ್ನು ನಮ್ಮ ಪೂರ್ತಿ ಫೋಕಸ್ ಭಾವ್ನೋರನ್ನ ಹುಡ್ಕೋದ್ರ ಕಡೇಗಿರ್ಬೇಕು” ಅಂದರು ಕಳಕಳಿಯಿಂದ. “ಖಂಡಿತಾ, ಖಂಡಿತಾ ಕಣಪ್ಪಾ…ನೀ ಹ್ಯಾಗ್ಹೇಳ್ತೀಯೋ ಹಾಗೆ, ಹೇಳು ಈಗೇನ್ಮಾಡ್ಬೇಕು” ಎಂದರು ಕೃಷ್ಣಯ್ಯರ್. “ಒಂದ್ಹತ್ ನಿಮಿಷ್ದಲ್ಲಿ ನಿಮ್ ಛೇಂಬರ್ನಲ್ಲಿ ಸೇರ್ಕೋಳೋಣ, ಲೆಟ್ ಅಸ್ ಸೀ ವಾಟ್ ವಿ ಕೆನ್ ಡೂ” ಎಂದರು ಮುರಳಿ. ಹೇಗಾದರೂ ಮದುವೆ ಮುಗಿದರೆ ಸಾಕೆಂಬ ಚಿಂತೆಯಲ್ಲಿದ್ದ ಕೃಷ್ಣಯ್ಯರಿಗೆ ಮದುವೆಯ ನಂತರದ ಕಾರ್ಯಕ್ರಮಗಳನ್ನು ರದ್ದು ಗೊಳಿಸಬೇಕಾದೀತೆಂಬ ಯೋಚನೆಯೇ ಬಂದಿರಲಿಲ್ಲ. ಬೀಗರ ಬಯಕೆಯಂತೆ ಸಂಜೆ ಆರತಕ್ಷತೆಗೆ ಕೃಷ್ಣಯ್ಯರ್ ಖ್ಯಾತ ಸಂಗೀತ ವಿದ್ವಾಂಸರಾದ ನೇದನೂರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ಸಂಗೀತ ಕಛೇರಿ ಬೇರೆ ಏರ್ಪಡಿಸಿಬಿಟ್ಟಿದ್ದರು. ಸಂಜೆ ನಾಲ್ಕೈದು ಘಂಟೆಗೆ ಅಲ್ಲಿಗೆ ಆಗಮಿಸಲಿದ್ದ ಕಛೇರಿ ತಂಡದವರಿಗೆ ಈಗ ಏನು ಹೇಳುವುದೆಂದು ತಕ್ಷಣಕ್ಕೆ ತೋಚಲಿಲ್ಲ. ಆಮೇಲೆ ಬಂದ ಕಲಾವಿದರಿಗೆ ಮಾತನಾಡಿದ್ದ ಸಂಭಾವನೆಯನ್ನಿತ್ತು ಸೂಕ್ತ ಮರ್ಯಾದೆ ಮಾಡಿ ಪರಿಸ್ಥಿತಿ ತಿಳಿಸಿದರಾಯಿತೆಂದುಕೊಂಡರು.
–ನಾರಾಯಣ ಎಮ್ ಎಸ್
ಮುಂದುವರೆಯುವುದು…
[…] ಇಲ್ಲಿಯವರೆಗೆ […]