ಮರೆಯಲಾಗದ ಮದುವೆ (ಭಾಗ 12): ನಾರಾಯಣ ಎಮ್ ಎಸ್

“ಸಾರ್… ರೈಲ್ವೇಸಿಂದ ಫೋನು, ಅದ್ಯಾವ್ದೋ ಕಾವ್ಲೀ ಅನ್ನೋ ಸ್ಟೇಷನ್ನಲ್ಲಿ ಯಾವ್ದೋ ವಯ್ಸಾಗಿರೋರ ಹೆಣಾ ಸಿಕ್ಕಿದ್ಯಂತೇ…ಈಗ್ಲೇ ಯಾರಾರೂ ಬಾಡಿ ಐಡೆಂಟಿಫೈ ಮಾಡಕ್ಕೋಗ್ಬೇಕಂತೆ” ರಿಸೆಪ್ಷನ್ ಕೌಂಟರಿನಿಂದ ಯಾವನೋ ಅವಿವೇಕಿ ಗಟ್ಟಿಯಾಗಿ ಕಿರುಚಿದ್ದ. ಲಾಬಿಯಿಡೀ ನೀರವ ಮೌನ ಆವರಿಸಿತು. ಪಾಪ ಸೀತಮ್ಮನವರ ಹೊಟ್ಟೆ ತಳಮಳಗುಟ್ಟಿತು. ಮೆಲ್ಲನೆ ತಮ್ಮ ಎಡಕುಂಡೆಯನ್ನೆತ್ತಿ ಸುಧೀರ್ಘವಾಗಿ ’ಠುಯ್ಯ್…………………’ ಎಂದು ತಾರಕಸ್ಥಾಯಿಯಲ್ಲಿ ಸದ್ದು ಹೊರಡಿಸಿ ಕಣ್ಣು ತೇಲಿಸಿಬಿಟ್ಟರು. ಮೊಮ್ಮಗ ಕಣ್ಣನ್ ಕಣ್ಣರಳಿಸಿ ಸುರುಳಿಯಾಗಿಸಿದ ಅಂಗೈಯನ್ನು ಬಾಯಿನ ಸುತ್ತ ಹಿಡಿದು ’ಠುಯ್ಯ್…………………’ ಎಂದು ನಕಲು ಮಾಡಿ ಪಕಪಕನೆ ನಕ್ಕ. ಇದರಿಂದ ಕೆರಳಿದ ಶ್ರುತಿ ಅವನ ಬೆತ್ತಲೆ ಮುಕುಳಿಯ ಮೇಲೆ ಛಟೀರೆಂದು ಬಿಗಿದಳು. ಗಂಡ ಕಾಣೆಯಾದಾಗಿನಿಂದ ಪಾಪ ಸೀತಮ್ಮನವರ ಗ್ಯಾಸ್ಟ್ರೈಟಿಸ್ ಉಲ್ಬಣಗೊಂಡಿತ್ತು. ತುತ್ತು ಸರಿಯಾಗಿ ಗಂಟಲಿಗಿಳಿಯದೆ ಖಾಲಿಯಿದ್ದ ಸೀತಜ್ಜಿಯ ದೊಡ್ಡ ಹೊಟ್ಟೆಯಿಂದ ಹೊರಡುತ್ತಿದ್ದ ತರಾವರೀ ಸದ್ದುಗಳನ್ನು ನಕಲು ಮಾಡುತ್ತಾ ನಗಾಡುತ್ತಿದ್ದ ಪೋರನ ವರ್ತನೆಯಿಂದ ರೋಸಿಹೋಗಿದ್ದ ಶ್ರುತಿ ಮಗುವಿಗೆ ಸರೀ… ಕೊಟ್ಟಿದ್ದಳು. ಕೆಂಪಾದ ಮುಕುಳಿ ಸವರಿಕೊಂಡು ಮಗು ಹೋ… ಎಂದು ರಂಪಮಾಡಿ ಕೆಳಗೆ ಬಿದ್ದು ಕೈಕಾಲು ಬಡಿಯುತ್ತಾ ನೆಲೆದ ಮೇಲೆ ಹೊರಳಾಡಲಾರಂಭಿಸಿತು. “ಅದೇನೋ ಮಗು ತಿಳೀದೆ ಹಾಗಾಡತ್ತೆ ಅಂದ್ರೆ ನಿಂಗಾದ್ರೂ ಬುದ್ಧಿ ಬೇಡ್ವೆ” ಎಂದು ಹೆಂಡತಿಯಮೇಲೆ ರೇಗಿದ ಚಿದಂಬರಂ ಮಗುವನ್ನೆತ್ತಿಕೊಂಡು ಸಂತೈಸತೊಡಗಿದರು.

ಇತ್ತ ಸೀತಮ್ಮನವರಿಗೆ ಬವಳಿ ಬಂದು ಪ್ರಜ್ಞೆ ತಪ್ಪಿದ್ದನ್ನು ಕಂಡು ಗಾಬರಿಯಾದ ಹೆಣ್ಣುಮಕ್ಕಳು ಅಳಲು ಶುರುವಿಟ್ಟುಕೊಂಡರು. ಅದೇ ವೇಳೆಗೆ ದೇವಸ್ಥಾನದಿಂದ ಹಿಂತಿರುಗಿದ ಕೃಷ್ಣಯ್ಯರ್ ಲಾಬಿಯಲ್ಲಾಗುತ್ತಿದ್ದ ಗದ್ದಲ ಕೇಳಿ ಅಲ್ಲಿಗೆ ಧಾವಿಸಿದರು. ಅಲ್ಲಿ ಸೀತಮ್ಮನವರನ್ನು ಆ ಸ್ಥಿತಿಯಲ್ಲಿ ಕಂಡು ಬಹಳ ಕಳವಳಗೊಂಡರು. ಅಷ್ಟರಲ್ಲಾಗಲೇ ಮುರಳೀಧರ್ ರಿಸೆಪ್ಷನ್ ಕೌಂಟರಿನಿಂದ ವೈದ್ಯರಿಗೆ ಕರೆಮಾಡಿ ತುರ್ತಾಗಿ ಗ್ರ್ಯಾಂಡ್ ರೆಸಿಡೆನ್ಸಿಗೆ ಬರಬೇಕೆಂದು ವಿನಂತಿಸುತ್ತಿದ್ದರು. ಹೋಟೆಲ್ ಸಿಬ್ಬಂದಿಯವರು ಹರಸಾಹಸಮಾಡಿ ಸೀತಮ್ಮನವರನ್ನು ವೀಲ್ಛೇರಿನಲ್ಲಿ ಕೂರಿಸಿ ಲಿಫ್ಟಿನಮೂಲಕ ಮೂರನೇ ಅಂತಸ್ತಿನಲ್ಲಿದ್ದ ಅವರ ಕೋಣೆಗೆ ಕೊಂಡೊಯ್ಯುವಷ್ಟರಲ್ಲಿ ಡಾಕ್ಟರು ಬಂದರು. ಸೀತಮ್ಮನವರ ಪರೀಕ್ಷೆಮಾಡಿ ಅತಿಯಾದ ಮಾನಸಿಕ ಒತ್ತಡ ಹಾಗೂ ನಿಶ್ಶ್ಯಕ್ತಿಯಿಂದ ರಕ್ತದೊತ್ತಡದಲ್ಲಿ ಏರುಪೇರಾಗಿ ಪ್ರಜ್ಞೆ ತಪ್ಪಿರಬಹುದೆಂದು ಹೇಳಿ ಸೀತಮ್ಮನವರಿಗೆ ಡ್ರಿಪ್ಸ್ ಹಾಕಿ ನಿದ್ರೆಗೆ ಔಷಧಿಕೊಟ್ಟರು. ಗಾಬರಿಯಾಗುವ ಅಗತ್ಯವಿಲ್ಲವೆಂದೂ ಚೆನ್ನಾಗಿ ನಿದ್ರೆಮಾಡಿದರೆ ಬೆಳಗಿನವೇಳೆಗೆ ಅವರ ಆರೋಗ್ಯ ಸುಧಾರಿಸುವುದೆಂದು ಭರವಸೆ ನೀಡಿದರು. ಇಂತಹ ಪರಿಸ್ಥಿತಿಯಲ್ಲಿ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯವಾದರೂ ಮುರಳಿಯವರಿಗೆ ಇದು ಕೇವಲ ಒಬ್ಬ ವೈದ್ಯರಿಂದ ಬಗೆಹರಿಸಬಹುದಾದ ಸಮಸ್ಯೆಯಲ್ಲವೆನಿಸಿತು.

ಎಂತಹ ಸವಾಲಿನ ಸನ್ನಿವೇಶದಲ್ಲೂ ಸ್ಥಿಮಿತ ಕಳೆದುಕೊಳ್ಳದೇ ಪರಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಛಾತಿಯಿದ್ದ ಮುರಳಿಯವರೂ ಕೂಡ ಯಾಕೋ ಸ್ವಲ್ಪ ವಿಚಲಿತರಾದಂತಿತ್ತು. ಆದರೂ ಮಾಡಬೇಕಿದ್ದ ಕೆಲಸದ ಕಡೆ ಗಮನ ಹರಿಸಬೇಕಾದ ಅರಿವಿಲ್ಲದಿರಲಿಲ್ಲ. ಶರವಣನನ್ನು ಕರೆದು ಅವನಿಗೆ ಸ್ವಲ್ಪ ಹಣ ಕೊಟ್ಟು ತತಕ್ಷಣವೇ ಕಾವಲಿಯ ಮಾರ್ಚುರಿಗೆ ಹೋಗಿ ಶವ ನೋಡಿಬರಬೇಕೆಂದು ಹೇಳಿದರು. ಏನೇ ವಿಷಯವಿದ್ದರೂ ಕರೆಮಾಡಿ ತಿಳಿಸಬೇಕೆಂದು ಹೇಳಿ ಗ್ರ್ಯಾಂಡ್ ರೆಸಿಡೆನ್ಸಿಯ ನಂಬರ್ ಕೊಟ್ಟು ಕಳುಹಿಸಿದರು. ಸುಬ್ಬು ಮತ್ತವನ ಅಕ್ಕತಂಗಿಯರ ಸ್ಥಿತಿ ಕಂಡು ಮುರಳಿಯವರಿಗೆ ಕನಿಕರವೆನಿಸಿತು. ಮದುವೆಗೆ ಮೊದಲೇ ನಾಪತ್ತೆಯಾಗಿದ್ದ ತಂದೆ, ಜೊತೆಗೀಗ ಆರೋಗ್ಯವೂ ಕೆಟ್ಟು ಹಾಸಿಗೆ ಹಿಡಿದ ತಾಯಿ. ಸಹಜವಾಗಿ ಮನೆಮಂದಿಯೆಲ್ಲಾ ಕಂಗಾಲಾಗಿಹೋಗಿದ್ದರು. ಉರಿವ ಗಾಯಕ್ಕೆ ಉಪ್ಪುಹಚ್ಚಿದಂತೆ ಈಗ ಅದ್ಯಾವುದೋ ಹೆಣ ಸಿಕ್ಕ ಸುದ್ದಿ ಸಿಕ್ಕು ಶವವನ್ನು ಗುರುತಿಸುಲು ಹೋಗಬೇಕೆಂಬ ಕರೆ ಬೇರೆ ಬಂದಿತ್ತು. ಇಂಥಾ ಸಂಧಿಗ್ದ ಪರಿಸ್ಥಿತಿಯಲ್ಲಿ ಬೆಳಗ್ಗೆ ಮದುವೆಯೆಂದರೆ ಪಾಪ ಆ ಮಕ್ಕಳಿಗೆ ಅದೆಷ್ಟು ಸಂಕಟವಾಗಬಹುದೆಂದೆನಿಸಿ ಬೇಸರವಾಯಿತು. ಹಾಗಂತ ವರಪೂಜೆಯೂ ಮುಗಿದ ಈ ಹೊತ್ತಿನಲ್ಲಿ ಮದುವೆ ರದ್ದುಗೊಳಿಸುವುದೂ ಸರಿಕಾಣಲಿಲ್ಲ. ಕೃಷ್ಣಯ್ಯರೊಂದಿಗೆ ಚರ್ಚಸಿದರೆ ಸ್ವಲ್ಪ ಸ್ಪಷ್ಟತೆ ಸಿಕ್ಕಬಹುದೆನಿಸಿತು. ಕೃಷ್ಣಯ್ಯರಿಗೆ ಅವರೊಂದಿಗೆ ಸ್ವಲ್ಪ ಖಾಸಗಿಯಾಗಿ ಮಾತಾನಾಡುವುದಿದೆಯೆಂದು ಹೇಳಿದರು. ಕೃಷ್ಣಯ್ಯರ್ ಮುರಳಿಯವರನ್ನು ಕರೆದುಕೊಂಡು ತಮ್ಮ ಛೇಂಬರಿಗೆ ನಡೆದರು.

ಒಳಗೆ ಹೋಗಿ ಕುಳಿತೊಡನೆ ಕೃಷ್ಣಯ್ಯರ್ “ಹೇಳಪ್ಪಾ ಮುರಳೀ, ಅದೇನೋ ಮಾತಾಡ್ಬೇಕೂಂದ್ಯಲ್ಲ” ಕುತೂಹಲ ಮತ್ತು ಆತಂಕ ಬೆರೆತ ದನಿಯಲ್ಲಿ ಕೇಳಿದರು. ಮುರಳಿಯವರ ಮನದಲ್ಲೂ ತುಮುಲ ತುಂಬಿದ್ದರಿಂದ ತಕ್ಷಣಕ್ಕೆ ಮಾತು ಹೊರಡದೆ ಛೇಂಬರಿನಲ್ಲಿ ಕೆಲಕಾಲ ಅಸಹನೀಯ ಮೌನ ನೆಲೆಸಿತ್ತು. “ಈಗೇನ್ಮಾವಾ ಮಾಡೋದೂ…? ಯಾಕೋ ಮುಹೂರ್ತ ಹತ್ರವಾಗ್ತಿದ್ದಂಗೆ ಪರಿಸ್ಥಿತಿ ಬಿಗಡಾಯಿಸ್ತಾನೇ ಹೋಗ್ತಿದ್ಯಲ್ಲಾ…ನಿಮ್ಗೇನನ್ಸತ್ತೆ ದೇವರ್ಮೇಲ್ಭಾರ ಹಾಕಿ ಮದ್ವೇ ಮುಗ್ಸೇಬಿಡೋದೂಂತೀರೋ ಇಲ್ಲಾ…..” ಮೌನ ಮುರಿದಾಗ ಮುರಳಿ ಮದುವೆ ರದ್ದುಗೊಳಿಸುವ ಆಯ್ಕೆಯನ್ನು ಬಾಯಿಬಿಟ್ಟು ಹೇಳಲಿಲ್ಲ. “ನಂಗೇನೋ ಈಗ್ಲೂ ಶ್ರೀ ಕೃಷ್ಣ ನನ್ಕೈಬಿಡಲ್ಲಾನ್ನೋ ವಿಶ್ವಾಸ್ವಿದೆ, ಆದ್ರೂ ಅಳಿಯಂದ್ರ ಮನೆಯೋರ ಸಂಕ್ಟ ನೋಡುವಾಗ ನಂಗೇನೂ ಹೇಳಕ್ತೋಚ್ತಿಲ್ಲ” ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಕೃಷ್ಣಯ್ಯರ್ ಹೇಳಿದರೂ ಮುರಳಿಯವರಿಗೆ ಅವರ ಮನದಿಂಗಿತ ತಿಳಿಯದಿರಲಿಲ್ಲ. “ನೋಡಿ ಮಾವಾ…ಇಂಥಾ ಹೊತ್ನಲ್ಲಿ ಹೀಗೇ ಮಾಡ್ಬೇಕೂಂತ ನಿಖರ್ವಾಗಿ ಯಾವ ಬೃಹಸ್ಪತೀನೂ ಹೇಳಕ್ಕಾಗಲ್ಲ. ನಾವೇನ್ಮಾಡುದ್ರೂ ಒಂದ್ ಎಲಿಮೆಂಟಾಫ್ ರಿಸ್ಕನ್ನೋದಿದ್ದೇ ಇರತ್ತೆ. ನಾವೇ ಶಿವಾಂತ ಗಟ್ಟೀ ಮನಸ್ಮಾಡಿ ಒಂದ್ನಿರ್ಧಾರ ತಗೋಬೇಕಷ್ಟೆ” ಅಂದ ಮುರಳಿ ಎದುರಿಗಿದ್ದ ಫೋನು ತಗೆದುಕೊಂಡು “ಮಾವಾ ರಿಸೆಪ್ಷನ್ ಕೌಂಟರ್ ಫೋನ್ ನಂಬರ್ಸ್ವಲ್ಪ ಹೇಳಿ” ಅಂದಾಗ ಕೃಷ್ಣಯ್ಯರ್ ಫೋನಿನ ಪಕ್ಕದಲ್ಲಿದ್ದ ಇಂಟರ್ಕಾಮನ್ನು ಮುಂದೆ ತಳ್ಳಿ ಅದರಲ್ಲಿ ಮಾತನಾಡಲು ಹೇಳಿದಾಗ ಮುರಳಿ “ಇಲ್ಲಾ ಮಾವಾ… ನೀವು ಸ್ವಲ್ಪ ರಿಸೆಪ್ಷನ್ ಫೋನ್ನಂಬರ್ಕೊಡೀಪ್ಪಾ” ಎಂದೊತ್ತಾಯಿಸಿ ಕೃಷ್ಣಯ್ಯರ್ ಹೇಳಿದ ನಂಬರಿಗೆ ಫೋನು ಹಚ್ಚಿದರು.

ಪಕ್ಕದ ರಿಸೆಪ್ಷನ್ ಕೌಂಟರಿನಲ್ಲಿ ರಿಂಗಾದ ಫೋನು ತೆಗೆದುಕೊಂಡವರು “ಹೋಟೆಲ್ ಗ್ರ್ಯಾಂಡ್ ರೆಸಿಡೆನ್ಸಿ ಎನ್ನುತ್ತಿದ್ದಂತೆಯೇ ಮುರಳಿಯವರು ಫೋನಿನ ಮೌತ್ ಪೀಸನ್ನು ತಮ್ಮ ಕರ್ಚೀಫಿನಿಂದ ಮುಚ್ಚಿ ದನಿ ಸ್ವಲ್ಪ ಬದಲಿಸಿ “ವಿಜಯ್ವಾಡಾ ರೈಲ್ವೇ ಪೋಲೀಸ್ಮಾತಾಡೋದು, ಕಾವ್ಲೀಲಿ ಸಿಕ್ಕಿದ್ಬಾಡೀನ ನೆಲ್ಲೂರಿಂದ ಬಂದೋರು ಯಾರೋ ಅವರ ಕಡೆಯೂರೂಮ್ಟಾ ಐಡೆಂಟಿಫೈ ಮಾಡಿದಾರ್ರೀ…ಹಾಗಾಗಿ ನಿಮ್ಮೋರು ಯಾರೂ ಬರೋ ಅಗತ್ಯ ಇಲ್ಲ ಗೊತ್ತಾಯ್ತಾ… ನಿಮ್ಮ ಮಿಸ್ಸಿಂಗ್ ಕಂಪ್ಲೈಂಟ್ ಬಗ್ಗೇ ಏನಾರ ಕ್ಲೂ ಸಿಕ್ಕಿದ್ರೆ ನಮ್ಮೋರೇ ನಿಮ್ಗೆ ಫೋನ್ಮಾಡ್ತಾರೆ ಆಗ್ಬೋದಾ” ಅಂದರು. ಅದಕ್ಕೆ ಫೋನಿನಲ್ಲಿದ್ದ ಹೋಟೆಲ್ ಸಿಬ್ಬಂದಿ “ಒಂದ್ನಿಂಶ ಲೈನಲ್ಲಿರಿ ಸಾರ್…. ನಂ ಸಾವ್ಕಾರ್ರಿಗೆ ಸೊಲ್ಪ ಕರೀತೀನಿ” ಎನ್ನಲು “ರೀ…ನಂಗೇನ್ಬೇರೆ ಕೆಲ್ಸ ಇಲ್ವಾ ಪದೇ ಪದೇ ಹೇಳಿದ್ದನ್ನೇ ಎಷ್ಟ್ ಜನಕ್ರೀ ಹೇಳೋದೂ? ಅವ್ರಿಗೆ ನೀವೇ ವಿಚಾರ ತಲ್ಪಿಸ್ಕೋಳಿ” ಎಂದು ಕೃಷ್ಣಯ್ಯರಿನತ್ತ ನೋಡಿ ಕಣ್ಣುಹೊಡೆದು ಫೋನು ಕುಕ್ಕಿದರು. ಫೋನಿಟ್ಟ ಆ ನೌಕರ ರಿಸೆಪ್ಷನ್ ಕೌಂಟರಿನಿಂದ ಕ್ಷಣಾರ್ಧದಲ್ಲಿ ಕೃಷ್ಣಯ್ಯರ್ ಛೇಂಬರಿಗೆ ಬಂದು “ಸರ್ ವಿಜಯವಾಡ ರೈಲ್ವೇ ಪೋಲೀಸ್ ಸ್ಟೇಷನ್ನಿಂದ ಫೋನ್ಬಂದಿತ್ತು. ಕಾವ್ಲೀಲಿ ಸಿಕ್ಕಿದ್ಬಾಡಿ ಬೇರೆ ಯಾರ್ದೋ ಅಂತೆ… ಶವಗುರುತ್ಸಕ್ಕೆ ನೀವ್ಯಾರೂ ಬರೋ ಅಗತ್ಯ ಇಲ್ಲಾಂದ್ರು. ಏನಾರ ವಿಷ್ಯ ಇದ್ರೆ ಅವ್ರೇ ಫೋನ್ಮಾಡ್ತಾರಂತೆ” ಎಂದು ಒಂದೇ ಉಸುರಿಗೆ ವಿಷಯ ಒಪ್ಪಿಸಿದ. ಸುದ್ದಿ ಕೇಳಿದ ಮುರಳಿ “ಶಿವಾ ಪರ್ಮಾತ್ಮಾ ಭಾವ್ನೋರು ನೂರ್ಕಾಲ ಚೆನ್ನಾಗಿರ್ಬೇಕು, ಎಲ್ರಿಗೂ ವಿಚಾರ ತಿಳುಸ್ಬುಡಪ್ಪಾ…ಸದ್ಯ ಈಗ್ಸೊಲ್ಪ ಸಮಾಧಾನ್ವಾಯ್ತು ನೋಡು” ಎಂದು ನಿರಾಳ ನಟಿಸಿ “ಹೋಗಪ್ಪಾ ಇನ್ನೂ ಇಲ್ಲೇ ಏನ್ನೋಡ್ತಾ ನಿಂತಿದೀಯ? ಹೋಗು ಎಲ್ಲಾರ್ಗೂ ಒಳ್ಳೇ ಸುದ್ದಿ ಕೊಟ್ಬಾ ಹೋಗು” ಎಂದರು. ಅವನು ಹೊರಗೆ ಹೋದೊಡನೆ ಕೃಷ್ಣಯ್ಯರಿಗೆ “ಮಾವಾ ನೀವಿಲ್ಲೇ ಇರಿ, ನಿಮ್ಹತ್ರ ಇನ್ನೂ ಒಂದಷ್ಟ್ ಮಾತಾಡೋದಿದೆ. ವಿಜಯ್ವಾಡದಿಂದ ಬಂದಿರೋ ಒಳ್ಳೇ ಸುದ್ದೀನ ಎಲ್ರಜೊತೆ ಹಂಚ್ಕೊಂಡು ನಾನೀಗ್ಬಂದ್ಬುಡ್ತೀನಿ” ಎಂದು ಹೊರಟ ಮುರಳಿಯವರನ್ನು ಕೃಷ್ಣಯ್ಯರ್ ಕಣ್ಣೂ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದರು.

ಮುರಳಿ ಕೃಷ್ಣಯ್ಯರ್ ಛೇಂಬರಿನಿಂದ ಹೋಗುವಷ್ಟರಲ್ಲಿ ಕಾವಲಿಯಲ್ಲಿ ಸಿಕ್ಕ ಹೆಣ ಬೇರೆ ಯಾರದೋ ಎಂಬ ಸುದ್ದಿ ಮೂರನೆ ಅಂತಸ್ತಿಗೆ ತಲುಪಿಯಾಗಿತ್ತು. ಆದರೂ ಮುರಳಿಯವರು ಮತ್ತೊಮ್ಮೆ ಅಲ್ಲಿ ಬೇರೆ ಬೇರೆ ಕೊಠಡಿಗಳಲ್ಲಿದ್ದ ಮನೆಮಂದಿಗೆಲ್ಲಾ ಕಾವ್ಲಿಯಲ್ಲಿ ಸಿಕ್ಕಿದ್ದ ಹೆಣ ಬೇರೆ ಯಾರದ್ದೋ ಎಂದು ಈಗಾಗಲೇ ಗುರುತಿಸಲ್ಪಟ್ಟಿದೆಯೆಂದು ತಿಳಿಸಿ ಯಾರೂ ಚಿಂತೆ ಮಾಡುವ ಅಗತ್ಯವಿಲ್ಲವೆಂದು ಹೇಳಿ ಎಲ್ಲರಿಗೂ ಧೈರ್ಯ ತುಂಬಿದರು. ಬೆಳಗಿನ ಹೊತ್ತಿಗೆ ಅಯ್ಯರ್ ಕ್ಷೇಮವಾಗಿರುವ ಬಗ್ಗೆ ಮಾಹಿತಿ ದೊರೆಯುವ ಬಗ್ಗೆ ತಮಗೆ ವಿಶ್ವಾಸವಿರುವುದಾಗಿ ಆಶಾಭಾವನೆಯನ್ನೂ ವ್ಯಕ್ತಪಡಿಸಿದರು. ಔಷಧಿಯ ಪ್ರಭಾವದಿಂದ ಗಾಢ ನಿದ್ರೆಯಲ್ಲಿದ್ದ ಸೀತಮ್ಮನವರಿಗೆ ಮಾತ್ರ ಈ ಸುದ್ದಿ ತಿಳಿಸಲಾಗಲಿಲ್ಲ. ಯಾರೋ ವಯಸ್ಸಾದವರ ಹೆಣ ಸಿಕ್ಕ ವಿಷಯ ಕೇಳಿ ಹತಾಶರಾಗಿದ್ದ ಕುಟುಂಬವರ್ಗದವರಿಗೆ ಈ ಸುದ್ದಿ ತಿಳಿದು ಸ್ವಲ್ಪ ಚೈತನ್ಯ ಬಂದಂತಾಯಿತು. “ಈ ವಿಷ್ಯ ಗೊತ್ತಾಗ್ದೆ ಇದ್ದಿದ್ರೆ ನಾಳೆ ಮದ್ವೆ ಕ್ಯಾನ್ಸಲ್ ಮಾಡ್ದೆ ಬೇರೆ ದಾರಿನೇ ಇರ್ತಿರ್ಲಿಲ್ಲ, ನಡೀರಿ ಈಗೆಲ್ರೂ ನಿಮ್ನಿಮ್ ರೂಮಿಗ್ಹೋಗಿ ಸ್ವಲ್ಪ ನೆಮ್ದಿಯಿಂದ ನಿದ್ದೆ ಮಾಡೋರಂತೆ. ನೋಡೋಣ… ದೈವೇಚ್ಛೆ ಇದ್ರೆ ನಾಳೆ ಎಲ್ಲಾ ಸರಿಹೋಗ್ಬೋದು.” ಎಂದು ಎಲ್ಲರನ್ನೂ ಅವರವರ ಕೊಠಡಿಗೆ ಕಳುಹಿಸಿ ತಾವೂ ತಮ್ಮ ರೂಮಿಗೆ ಹೋದರು. ತಮ್ಮ ರೂಮಿನಿಂದ ಇಂಟರ್ಕಾಮಿನಲ್ಲಿ ಕೃಷ್ಣಯ್ಯರಿಗೆ ಫೋನಾಯಿಸಿ “ಮಾವಾ, ಈಗ್ಲೇ ಇವತ್ತು ಸೀತಕ್ಕನ್ನ ನೋಡಿದ ಡಾಕ್ಟರಿಗೊಂದು ಫೋನ್ಮಾಡಿ ನಾಳೆ ಹೊತ್ನಂತೆ ಬಂದು ಅಕ್ಕನ್ನ ಒಂದ್ಸಲಿ ನೋಡಿ ಹೋಗಕ್ಹೇಳಿ ಅಲ್ಲೇ ಒಂದು ಐದ್ನಿಂಶ ನಿಮ್ ಛೇಂಬರ್ರಲ್ಲೇ ಕಾಯ್ತಿರಿ, ನಾನೀಗ್ಲೆ ಬರ್ತೀನಿ. ಸಾಧ್ಯವಾದ್ರೆ ಹಾಗೆ ನಿಮ್ಮ ಶೇಖ್ರ ಮೋಹನನ್ನೂ ಸ್ವಲ್ಪ ಕರ್ಸಿ. ನಾಳೆಗೆ ಒಂದ್ಚೂರ್ ಪ್ಲ್ಯಾನ್ ಮಾಡೋದಿದೆ” ಎಂದು ಹೇಳಿದರು.

ಮುರಳಿ ಕೃಷ್ಣಯ್ಯರ್ ಛೇಂಬರಿಗೆ ಮರಳಿದಾಗ ಅಪ್ಪ ಮಕ್ಕಳು ಅಲ್ಲಾಗಲೇ ಇವರಿಗಾಗಿ ಕುತೂಹಲದಿಂದ ಕಾದು ಕುಳಿತಿದ್ದರು. ಒಳ ಬರುತ್ತಿದ್ದಂತೆ ಮುರಳಿ ಬೆಳಗ್ಗೆ ಬರುವಂತೆ ಡಾಕ್ಟರಿಗೆ ಕೃಷ್ಣಯ್ಯರ್ ಫೋನುಮಾಡಿರುವುದನ್ನು ಖಾತ್ರಿಪಡಿಸಿಕೊಂಡರು. ನಂತರ ಅಲ್ಲಿದ್ದ ಛೇರಿನಲ್ಲಿ ಕುಳಿತು “ನಿಮ್ಗೆಲ್ಲಾ ಗೊತ್ತಿರೋ ಹಾಗೆ ಪರಿಸ್ಥಿತಿ ಭಾಳ ಸೂಕ್ಷ್ಮ ಇದೆ. ಸೂತ್ಕದ ಛಾಯೆ ಇಟ್ಕೊಂಡು ಶುಭ ಸಮಾರಂಭ ಮಾಡೋದು ಏನ್ ಚೆನ್ನಾಗಿರತ್ಹೇಳಿ. ಹಾಗಂತ ಕೊನೇ ಗಳ್ಗೇಲಿ ಮದ್ವೆ ಕ್ಯಾನ್ಸಲ್ ಮಾಡಕ್ಕೂ ಆಗಲ್ವೇ? ಅದಕ್ಕೇ ಏನ್ಮಾಡೋದು ಹ್ಯಾಗ್ಮಾಡೋದು ಅಂತ ನಾವೊಂದ್ ನಾಕ್ಜನ ಮೊದ್ಲೆ ಕೂತು ಮಾತಾಡ್ಕೊಂಡಿದ್ರೆ ಅನ್ಕೂಲಾಂತ ನಿಮ್ಮನ್ನೆಲ್ಲಾ ಬರೇಳ್ದೆ” ಅಂದರು. ಕೃಷ್ಣಯ್ಯರ್ ಕುಳಿತಲ್ಲಿಂದ ಎದ್ದುಬಂದು ಮುರಳಿಯ ಕೈಗಳನ್ನು ಹಿಡಿದು “ನೋಡಪ್ಪಾ ಮುರ್ಳೀ ನಂಗೂ ನಿಂಗೂ ಅದೇನ್ ಋಣಾನ್ಬಂಧಾನೋ ಗೊತ್ತಿಲ್ಲ. ಇವತ್ಬೆಳಗ್ಗೆ ಭೇಟಿಯಾದ್ವಿ, ಆಮೇಲ್ನೋಡಿದ್ರೆ ನೀನನ್ನಳಿಯ ಆಗ್ಬೇಕೂಂತ ತಿಳೀತು. ನಿನ್ಮುಂದೆ ನಿನ್ಮುಖಸ್ತುತಿ ಮಾಡ್ಬೇಕೂಂತ ಹೇಳ್ತಿಲ್ಲ, ನಂಗೇನೋ ಈ ಮದ್ವೇನ ಅಚ್ಕಟ್ಟಾಗಿ ನಡೆಸ್ಕೊಡ್ಲಿ ಅಂತ್ಲೇ ಆ ಕೃಷ್ಣ ಪರಮಾತ್ಮ ನಿನ್ನಿಲ್ಲೀಗೆ ಕಳ್ಸಿರ್ಬೇಕೂ ಅನ್ನಿಸ್ತಿದೆ. ಎಲ್ವೂ ನೀ ಹೇಳ್ದಾಗೇ ನಡೀಲಿ. ಹೇಳು ಈಗೇನ್ಮಾಡೋಣ” ಎಂದು ದೈನ್ಯರಾಗಿ ನುಡಿದರು. ಅದಕ್ಕೆ ಮುರಳಿ ಸಂಕೋಚದಿಂದ “ಅಯ್ಯೋ ಇದೇನ್ಮಾವ ನೀವು, ಒಂದ್ಮನೆಯವ್ರೂಂತ ಆದ್ಮೇಲೆ ಈ ಥರದ ಮಾತೆಲ್ಲಾ ಯಾಕೇಂತೀನಿ? ಈಗ ಆಗ್ಬೇಕಾಗಿರೋ ಕೆಲ್ಸದ್ಕಡೆ ಗಮ್ನಕೊಡೋದ್ ನೋಡಿ. ನಮ್ಹತ್ರ ಜಾಸ್ತಿ ಟೈಮಿಲ್ಲ” ಎಂದರು. “ಆಯ್ತು ಈಗೇನ್ಮಾಡ್ಬೇಕು ಹೇಳಪ್ಪಾ…ವ್ಯವಸ್ಥೆ ಮಾಡೋಣಂತೆ” ಕೃಷ್ಣಯ್ಯರ್ ಭರವಸೆ ಕೊಟ್ಟರು. “ನಾನಾಗ್ಲೇ ಹೇಳ್ದಾಗೆ ನಂಪೈಕಿ ಯಾರೂ ಈಗ ಮದ್ವೆ ಸಂಭ್ರಮಿಸೋ ಮನಸ್ಥಿತೀಲಿ ಇಲ್ಲ. ಮನಸ್ಗೆ ಕನಿಷ್ಠ ಒಂದ್ಮಟ್ಟದ ಸಮಾಧಾನ್ವೂ ಇಲ್ದೆ ಮದ್ವೆ ನಡ್ಯೋದು ಹ್ಯಾಗ್ಸಾಧ್ಯ ಹೇಳಿ. ಈಗಿರೋ ಪರಿಸ್ಥಿತೀಲಿ ಎಲ್ರಿಗೂ ಸ್ವಲ್ಪನಾದ್ರೂ ಸಮಾಧಾನ ಸಿಗ್ಬೇಕು ಅಂದ್ರೆ ಒಂದಿಷ್ಟು ಡ್ರಾಮ ಮಾಡೋದು ಅನಿವಾರ್ಯ ಅನ್ಸುತ್ತೆ ನನ್ಗೆ. ಅದಕ್ಕೆ ನಂಗೆ ಅರ್ಜೆಂಟಾಗಿ ಸ್ವಲ್ಪ ರಿಸೋರ್ಸಸ್ ಬೇಕು. ಮೊದ್ಲು ಅದನ್ನ ಅರೇಂಜ್ ಮಾಡ್ಕೋಬೇಕು” ಅಂದರು ಮುರಳೀಧರ್.

“ಅದೇನ್ಬೇಕು ಹೇಳಿ ಅಂಕಲ್, ನಾವ್ ಅರೇಂಜ್ಮಾಡ್ತೀವಿ” ಮೋಹನ ಹೇಳಿದ. “ಅರ್ಜೆಂಟಾಗಿ ಯಾರಾದ್ರೂ ನಾಟಕ್ದೋರು ಸಿಕ್ತಾರೇನಪ್ಪಾ? ಸ್ವಾಮೀಜಿ ರೋಲು ಮಾಡ್ಬೇಕು, ಒಂದ್ಟೆನ್ಮಿನಿಟ್ಸ್ ಕೆಲ್ಸ ಅಷ್ಟೇ” ಎಂದು ಮುರಳಿಯವರು ಹೇಳಿದ್ದಕ್ಕೆ ಕೃಷ್ಣಯ್ಯರ್ “ನಾಟಕ್ದೋರ!? ಸ್ವಾಮೀಜಿ ರೋಲ!? ಅದ್ಯಾಕ್ಮುರಳೀ” ಅಂದರು ಆಶ್ಚರ್ಯದಿಂದ. ಅದಕ್ಕೆ ಮುರಳಿಯವರು “ಮಾವಾ…ನಂಭಾವ ಇಲ್ದೆ ಮದ್ವೆ ನಡೀಬೇಕೂಂದ್ರೆ ಮೊದ್ಲು ನಂ ಸೀತಕ್ಕ ಒಪ್ಕೋಬೇಕಲ್ವೇ… ಬೆಳಗ್ಗೆ ಎದ್ದಾಗ ಅವರಾರೋಗ್ಯಾ ಹ್ಯಾಗಿರತ್ತೋ… ಅವ್ರೇನಂತಾರೋ ಯಾರಿಗ್ಗೊತ್ತು? ಹೌದೂ ತಾನೆ” ಅಂದು ಕೃಷ್ಣಯ್ಯರ್ ಪ್ರತಿಕ್ರಿಯೆಗೆ ಕಾದರು. ಅದಕ್ಕೆ ಕೃಷ್ಣಯ್ಯರ್ “ಸರೀ ಮಾರಾಯಾ, ಅದಕ್ಕೆ ಸ್ವಾಮೀಜಿ ಯಾಕಪ್ಪಾ” ಕೃಷ್ಣಯ್ಯರ್ ಗೊಂದಲದಿಂದ ಕೇಳಿದರು. “ಹೇಳ್ತೀನಿ ಇರಿ, ನಂಗೆ ತಿಳಿದ್ಹಾಗೆ ನಮ್ಮ ಸೀತಕ್ಕಂಗೆ ಸಾಧುಸಂತರೂಂದ್ರೆ ಎಲ್ಲಿಲ್ಲದ ನಂಬ್ಕೆ. ಸೀತಕ್ನೆದ್ರುಗೆ ಯಾರಾದ್ರೂ ಸ್ವಾಮ್ಗಳಕೈಲಿ ಮದ್ವೆ ನಡೀಬೋದೂಂತ ಹೇಳುಸ್ಬುಟ್ರೆ ಕೆಲ್ಸ ಸಲೀಸಾಗೋಗತ್ತೆ. ಆಮೇಲೆ ಸುಬ್ಬೂನ ಕನ್ವಿನ್ಸ್ ಮಾಡೋದೇನೂ ಕಷ್ಟ ಆಗಲ್ಲಾಂತ ನನ್ಲೆಕ್ಕಾಚಾರ, ಏನಂತೀರಿ” ಮುರಳಿ ವಿವರಿಸಿದರು. ಯಾಕೋ ಕೃಷ್ಣಯ್ಯರಿಗೆ ಈ ದಾರಿ ಸರಿಕಾಣಲಿಲ್ಲ. “ಸಾಧುಸಂತರೂಂದ್ರೆ ನಂಗೂ ತುಂಬಾನೇ ಗೌರ್ವ ಭಕ್ತಿ ಕಣಪ್ಪಾ. ಆದ್ರೂ ಒಬ್ರ ನಂಬ್ಕೆ ಜೊತೆ ಈ ಥರ ಆಟ ಆಡೋದು ಯಾಕೋ ನನ್ಮನಸ್ಗೆ ಒಪ್ಗೆ ಆಗ್ತಿಲ್ಲ ನೋಡು” ಎಂದುಬಿಟ್ಟರು.

ಮುರಳಿಯವರಿಗೆ ತಮ್ಮ ಐಡಿಯಾಗೆ ಕೃಷ್ಣಯ್ಯರಿಂದಲೇ ಪ್ರತಿರೋಧ ಬರಬಹುದೆಂಬ ಕಲ್ಪನೆಯೂ ಇರಲಿಲ್ಲ. ಒಂದು ಕ್ಷಣ ವಿಚಲಿತರಾದರಾದರೂ ಒಡನೆ ಚೇತರಿಸಿಕೊಂಡು “ಇಷ್ಟಕ್ಕೂ ಯಾರ್ನಂಬ್ಕೆ ಜೊತೇನೋ ಆಟ ಆಡಿ ನಂಗೇನಾಗ್ಬೇಕ್ಮಾವಾ… ಇದ್ರಲ್ಲಿ ನಂಗ್ಯಾವ ದುರುದ್ದೇಶ ಇದೇಂತೀನಿ” ಎಂದರು ಮುನಿಸಿನಿಂದ. “ನನ್ನ ತಪ್ತಿಳ್ಕೋಬೇಡಪ್ಪಾ ಸಾಧುಸಂತರ ವಿಷ್ಯದಲ್ಲಿ ಹುಡ್ಗಾಟ ಒಳ್ಳೇದಲ್ಲಾಂತ ಹೇಳ್ದೆ ಅಷ್ಟೇ” ಅಂದರು ಕೃಷ್ಣಯ್ಯರ್. “ಆಯ್ತ್ಮಾವ ನಿಮ್ಗೆ ಯಾರಾದ್ರೂ ರಿಯಲ್ ಸ್ವಾಮೀಜಿ ಗೊತ್ತಿದ್ರೆ ಇನ್ನೂ ಒಳ್ಳೇದೆ. ಅವರನ್ನ ಒಂದ್ಮಾತು ಕೇಳಿ ಅವರು ಮದ್ವೆ ನಡೀಲೀಂದ್ರೆ ನಡೀಲಿ, ಬೇಡಾಂದ್ರೆ ಬೇಡ ಸರೀನಾ?” ಮುಗ್ಧರಂತೆ ಸವಾಲೆಸೆದರು ಮುರಳಿ. ಸರ್ಪ್ರೈಸ್ ಟೆಸ್ಟ್ ಕೊಟ್ಟ ಗಣಿತದ ಮೇಷ್ಟ್ರನ್ನು ನೋಡುವಂತೆ ಮುರಳಿಯವರನ್ನು ನೋಡಿದ ಕೃಷ್ಣಯ್ಯರ್ “ಹ್ಹಿಹ್ಹಿ… ಹಾಗಲ್ಲಾಪ್ಪಾ… ಏನೋ ಒಂದ್ಮಾತಿಗೆ ಹಾಗಂದ್ರೆ ನೀ ನನ್ನೇ ಸಿಕ್ಕಿಸ್ತಿದೀಯಲ್ಲಾ… ಹಾಗೆಲ್ಲಾ ಸಾಧು ಮಹಾತ್ಮರನ್ನ ನೇರವಾಗಿ ಪ್ರಶ್ನೆಮಾಡಿ ಇಕ್ಕಟ್ಟಿಗೆ ಸಿಕ್ಸೋದು ಶಿಷ್ಟಾಚಾರ ಅಲ್ಲ ಕಣೋ. ಜೊತೆಗೆ ನಂ ಸ್ವಾಮೀಜಿಗೆ ತೆಲ್ಗು ಬಿಟ್ರೆ ಬೇರೆ ಭಾಷೆ ಬರಲ್ಲ. ಸೀತಮ್ನೋರ್ಗೆ ತೆಲುಗ್ಬರಲ್ಲ ಮತ್ತೇನ್ಕೇಳಿ ಏನ್ ಪ್ರಯೋಜ್ನ ಹೇಳು ಹ್ಹಿಹ್ಹಿ..” ಅಂದರು. ಅದನ್ನು ಕೇಳಿ ಉತ್ಸುಕರಾದ ಮುರಳಿ “ಏನೂ… ಸ್ವಾಮೀಜಿಗೆ ತೆಲ್ಗು ಬಿಟ್ರೆ ಬೇರೆ ಭಾಷೆ ಬರಲ್ವಾ…ಅದಕ್ಕಿಂತ ಬೇರೆ ಪ್ಲಸ್ ಪಾಯಿಂಟ್ ಬೇಕಾ… ಅಷ್ಟು ಸಾಕ್ಬಿಡಿ ಮಾವ, ಮಿಕ್ಕಿದ್ದೆಲ್ಲಾ ನಾ ಮ್ಯಾನೇಜ್ ಮಾಡ್ಕೋತೀನಿ, ನೀವ್ತಲೇನೇ ಕೆಡುಸ್ಕೋಬೇಡಿ ನೀವ್ಹೇಳಿದ ಶಿಷ್ಟಾಚಾರವೇ ನಮ್ಗೆ ಶ್ರೀರಕ್ಷೆ, ನಾಳೆ ಅವರಾಶೀರ್ವಾದ ತಗೊಂಡೇ ಮದುವೆ ನಡೀಲಿ, ಬೆಳಗ್ಗೇನೇ ಸ್ವಾಮ್ಗಳ ದರ್ಶನಕ್ಕೆ ವ್ಯವಸ್ಥೆ ಮಾಡ್ಸಿ” ಎಂದು ಗೆಲುವಿನಿಂದ ಹೇಳಿದರು.

“ಹಾಗೇ ಯಾರಾದ್ರೂ ಭಜನೆಯವರನ್ನ ಗೊತ್ಮಾಡಿದ್ರೆ ಹೆಲ್ಪಾಗ್ಬೋದು, ಸಾಧ್ಯವೇನ್ರಪ್ಪಾ?” ಹುಡುಗರತ್ತ ತಿರುಗಿ ಕೇಳಿದರು. “ಅದಕ್ಕೇನು ನಂ ರಾಮ್ಮಂದ್ರದ ಭಜನಮಂಡ್ಲಿಯವರಿಗೆ ಹೇಳಿದ್ರಾಯ್ತು ಬಂದು ಭಜನೆ ನಡೆಸ್ಕೊಡ್ತಾರೆ ಬಟ್ ಭಜನೆಯೋರು ಯಾಕೆ ಅಂಕಲ್” ಮೋಹನ ಕೇಳಿದ ಕುತೂಹಲ ತಡೆಯಲಾಗದೆ. “ಹಂಗಾದ್ರೆ ಅರೇಂಜ್ ಮಾಡ್ಬುಡು ರಾಜ, ಜಸ್ಟ್ ಒಂದ್ ಸೇಫ್ಟೀಗೆ ಇರ್ಲೀಂತಷ್ಟೆ, ಹೆಚ್ಚೇನಿಲ್ಲ ಟೆನ್ಮಿನಿಟ್ಸ್ ಕೆಲ್ಸ ಅಷ್ಟೇ…” ಎಂದ ಮುರಳಿ “ಅಂದ್ಹಾಗೆ ಸ್ವಾಮ್ಗಳ ಹೆಸ್ರೇನು ಮಾವಾ” ಕೃಷ್ಣಯ್ಯರನ್ನು ಕೇಳಿದರು. “ಸ್ವಾಮಿ ಸರ್ವೋತ್ತಮಾನಂದ ಅಂತ… ಮಹಾ ಜ್ಞಾನಿಗಳು” ಕೃಷ್ಣಯ್ಯರ್ ಉತ್ತರಿಸಿದರು. ಮುರಳಿಯವರು ಭಕ್ತಿಯಿಂದ ತಮ್ಮ ಕೈಗಳನ್ನು ಗಲ್ಲದಮೇಲೆ ಬಡಿದುಕೊಂಡು “ನಾಳೆ ಬೆಳಗ್ಗೆ ನಾನೂ, ಸುಬ್ಬು ಸೀತಕ್ಕ ನಿಮ್ಜೊತೆ ಆಶ್ರಮಕ್ಕೆ ಬರ್ತೀವಿ. ಅಷ್ಟ್ರಲ್ಲಿ ಭಜ್ನೆಯೋರು ಅಲ್ಲಿರೋಹಾಗೆ ಅರೇಂಜ್ ಮಾಡ್ರಪ್ಪ. ನಾನು ’ಸ್ವಾಮಿ ಸರ್ವೋತ್ತಮಾನಂದಾ ಆಪತ್ಭಾಂಧವಾ…’ ಅಂತಿದ್ಹಾಗೆ ಗಟ್ಯಾಗಿ ಭಜ್ನೆ ಶುರೂ ಆಗ್ಬುಡ್ಬೇಕು ಗೊತ್ತಾಯ್ತಾ…. ಭಜ್ನೆಯೋರ್ಗೆ ಅದೇ ಕ್ಯೂ ಲೈನು, ಮರೀದೆ ಹೇಳ್ಬುಡಿ…” ಎಂದು ಗಡಿಯಾರ ನೋಡಿಕೊಂಡು “ಅಯ್ಯೋ ದೇವ್ರೆ ಆಗ್ಲೇ ಘಂಟೆ ಹನ್ನೊಂದಾಯ್ತು ನಂಗೂ ನಿದ್ದೆ ಎಳೀತಿದೆ, ನೀವೂ ಹೋಗ್ ಮಲ್ಗಿ ಮಾವ… ಗುಡ್ನೈಟ್ ಮಕ್ಳಾ…ನಾ ಹೇಳಿದ್ಯಾವ್ದೂ ಮರೀಬಾರ್ದು ಗೊತ್ತಾಯ್ತ… ’ಸ್ವಾಮಿ ಸರ್ವೋತ್ತಮಾನಂದಾ ಆಪತ್ಭಾಂಧವಾ…’ ಅನ್ನೋದೇ ಭಜ್ನೆಯೋರ್ಗೆ ಕ್ಯೂ ಲೈನು… ಗುಡ್ನೈಟ್ ಬೆಳಗ್ಗೆ ಸಿಗೋಣ” ಎಂದು ಹೇಳುತ್ತಾ ಸರಸರನೆ ಹೋಗಿ ಲಿಫ್ಟಿನಲ್ಲಿ ಮರೆಯಾದರು.

ನಾರಾಯಣ ಎಮ್ ಎಸ್


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x