ಮರೆಯಲಾಗದ ಮದುವೆ (ಭಾಗ 11): ನಾರಾಯಣ ಎಮ್ ಎಸ್

-೧೧-

ಗಂಡಿನಮನೆಯವರನ್ನು ಸ್ವಾಗತಿಸಲೆಂದು ಈಗಾಗಲೇ ರೈಲ್ವೇಸ್ಟೇಷನ್ನಿಗೆ ಬಂದಿದ್ದ ಕೃಷ್ಣಯ್ಯರ್ ಮಕ್ಕಳಾದ ಶೇಖರ್ ಮತ್ತು ಮೋಹನ್ ತಮ್ಮ ಪತ್ನಿಯರೊಂದಿಗೆ ಅಯ್ಯರ್ ಕುಟುಂಬದವರಿಗಾಗಿ ಕಾಯುತ್ತಿದ್ದರು. ಸುಮಾರು ನಾಲ್ಕು ಘಂಟೆಹೊತ್ತಿಗೆ ತಿರುವಾರೂರಿನ ರೈಲು ವಿಶಾಖಪಟ್ಟಣ ಸ್ಟೇಷನ್ನಿಗೆ ಬಂದು ತಲುಪಿತು. ಜೋತುಮೋರೆ ಹಾಕಿಕೊಂಡು ಒಲ್ಲದ ಮನಸ್ಸಿನಿಂದ ಯಾಂತ್ರಿಕವಾಗಿ ಒಬ್ಬೊಬ್ಬರೇ ರೈಲಿನಿಂದಿಳಿಯುತ್ತಿದ್ದ ಗಂಡಿನ ಮನೆಯವರನ್ನು ಕಂಡ ಶೇಖರ್ ಮತ್ತು ಮೋಹನರಿಗೆ ಎಲ್ಲವೂ ಸರಿಯಿಲ್ಲವೆಂಬ ಸುಳಿವು ಮೇಲ್ನೋಟಕ್ಕೇ ಸಿಕ್ಕಿಹೋಯಿತು. ಅತಿಥಿಗಳ ಲಗೇಜುಗಳನ್ನು ಒತ್ತಾಯದಿಂದ ಕೆಳಗಿಳಿಸಿಕೊಳ್ಳುವಾಗ ಹೆಂಗಸರು ಸಣ್ಣಗೆ ಅಳುತ್ತಿದ್ದುದು ಗಮನಿಸಿ ಏನೋ ಎಡವಟ್ಟಾಗಿರಬೇಕೆಂದು ಗಾಬರಿಯಾಯ್ತು. ಸುಬ್ಬುವನ್ನು ನೋಡಿ ಆತಂಕದಿಂದ “ಯಾಕ್ಬಾವ ಎಲ್ಲಾ ಒಂಥರಾ… ಇದೀರ ಯಾಕೆ ಏನಾಯ್ತು?” ಮೋಹನ್ ಕೇಳಿದ. ಅದಕ್ಕೆ ಸುಬ್ಬು “ಅಯ್ಯೋ…ನಾನೇನೂಂತ್ಹೇಳ್ಲಪ್ಪಾ…ನಮ್ಮಪ್ಪಾ…ನಮ್ಮಪ್ಪಾ…” ಎನ್ನುತ್ತಾ ಗೊಳೋ ಎಂದು ಅಳಲಾರಂಭಿಸಿದ. ಅಷ್ಟು ಹೊತ್ತಿಗೆ ಅಯ್ಯರ್ ಇಲ್ಲದ್ದನ್ನು ಗಮನಿಸಿದ ಶೇಖರ್ “ನಿಮ್ತಂದೆಯವರೆಲ್ಲೀ ಭಾವಾ,,,ಕಾಣಿಸ್ತಿಲ್ಲಾ” ಎಂದು ಕೇಳಿದ್ದಕ್ಕೆ “ಅದ್ನೇ ಕಣಪ್ಪಾ ನಾನೂ ಬೆಳಗ್ಗೆಯಿಂದ ಬಡ್ಕೋತಿರೋದೂ… ನಮ್ಮಪ್ಪ ಎಲ್ಲೋ ಕಾಣಿಸ್ತಿಲ್ಲಾ…” ಸುಬ್ಬು ತನ್ನ ಕೀರಲು ದನಿಯನ್ನು ಇನ್ನಷ್ಟು ಕೀರಲಾಗಿಸಿ ಕಿರುಚಿದ. ಭಾವನ ಉತ್ತರದಿಂದ ತಬ್ಬಿಬ್ಬಾದಂತಿದ್ದ ಹೆಣ್ಣಿನ ಮನೆಯವರಿಗೆ ಶರವಣ ನಡೆದಿದ್ದ ಅನಾಹುತವನ್ನು ನಿಧಾನವಾಗಿ ವಿವರಿಸಿದ. ಇಂಥಾ ವಿಚಿತ್ರ ಸನ್ನಿವೇಶದಲ್ಲಿ ಅವರಿಗೂ ಏನು ಹೇಳಬೇಕೆಂದು ತಿಳಿಯಲಿಲ್ಲ. ಅಷ್ಟರಲ್ಲಿ ರೈಲು ನಿಧಾನಕ್ಕೆ ವಿಶಾಖಪಟ್ಟಣ ಸ್ಟೇಷನ್ನಿನಿಂದ ಮುಂದೆ ಹೊರಟಿತು.

ಇನ್ನು ಹೆಚ್ಚು ಹೊತ್ತು ಹಾಗೇ ನಿಂತಿರಲಾಗುವುದಿಲ್ಲವೆನಿಸಿ ಸೀತಮ್ಮನವರು ಪ್ಲಾಟ್ಫಾರಮ್ಮಿನಲ್ಲಿ ಅಲ್ಲೇಪಕ್ಕದಲ್ಲಿದ್ದ ಕಲ್ಬೆಂಚೊಂದರ ತುಂಬಾ ತಮ್ಮ ಶರೀರವನ್ನು ಹರವಿ ಕುಳಿತುಕೊಂಡರು. ತಮ್ಮ ಜೊತೆಯಲ್ಲಿದ್ದ ಮಕ್ಕಳೊಂದಿಗೆ ಉಳಿದ ಹೆಂಗಸರೂ ಸಹ ಅಲ್ಲೇ ಕೆಳಗೆ ನೆಲದ ಮೇಲಿಟ್ಟಿದ್ದ ಲಗೇಜಿನ ಸುತ್ತ ಕುಳಿತರು. ಸುಬ್ಬು ಅಲ್ಲಿದ್ದ ದೊಡ್ಡ ಸೂಟ್ಕೇಸೊಂದರ ಮೇಲೆ ಅಂಡೂರಿದ. ಏನು ಮಾಡಬೇಕೆಂದು ತಿಳಿಯದೆ ಶೇಖರ್ ಮತ್ತು ಮೋಹನ್ ತಮ್ಮ ಪತ್ನಿಯರೊಂದಿಗೆ ಕಕ್ಕಾಬಿಕ್ಕಿಯಾಗಿ ನಿಂತಿದ್ದರು. ಅಷ್ಟರಲ್ಲಿ ಮೋಹನ್ ಸ್ವಲ್ಪ ಧೈರ್ಯ ಮಾಡಿ “ಬನ್ನಿ ಮೊದ್ಲು ಎಲ್ರೂ ಇಲ್ಲಿಂದ ನಮ್ಹೋಟೆಲ್ಲಿಗೆ ಹೋಗಿ ಮುಂದೇನ್ಮಾಡೋದು ಯೋಚ್ನೆಮಾಡೋಣ” ಎಂದ ಕ್ಷೀಣವಾಗಿ. ಆದರೆ ಅದೇ ವೇಳೆಗೆ ಸೀತಮ್ಮನವರು ತಮ್ಮ ಬಲಕುಂಡೆಯನ್ನೆತ್ತಿ ಡುರ್ರೆಂದು ಜೋರಾಗಿ ಹೂಸಿದ ಸದ್ದಿನಡಿಯಲ್ಲಿ ಹುದುಗಿಹೋಗಿದ ಮೋಹನನ ದನಿ ಯಾರಿಗೂ ಕೇಳಿಸಲಿಲ್ಲ. ಅಜ್ಜಿ ಹೂಸಿದ್ದನ್ನ ಕೇಳಿ ಗೊಳ್ಳೆಂದು ನಕ್ಕ ಮೊಮ್ಮಗ ಕಣ್ಣನನ್ನು ಅವರಮ್ಮ ಶ್ರುತಿ ಕೆಕ್ಕರುಗಣ್ಣಿಂದ ದಿಟ್ಟಿಸಿ ಸುಮ್ಮನಾಗಿಸಿದಳು. ಪಾಪ ನಾಕುವರ್ಷದ ಕೂಸಿಗೆ ಪರಿಸ್ಥಿತಿಯ ಗಂಭೀರತೆ ಹೇಗೆ ತಾನೆ ತಿಳಿಯಬೇಕು.

“ಬನ್ನಿ ಮೊದ್ಲು ಎಲ್ರೂ ಇಲ್ಲಿಂದ ನಮ್ಹೋಟೆಲ್ಲಿಗೆ ಹೋಗೋಣ ಅಲ್ಲಿ ಕುಳಿತು ಮುಂದೇನ್ಮಾಡೋದು ಯೋಚ್ನೆಮಾಡಿದ್ರಾಯ್ತು” ಮೋಹನ್ ಈ ಬಾರಿ ಹೆಚ್ಚಿನ ಆತ್ಮವಿಶ್ವಾಸದಿಂದ ಗಟ್ಟಿಯಾಗಿ ಹೇಳಿದ. ಅದನ್ನು ಕೇಳಿದ ಸುಬ್ಬು ಸೂಟ್ಕೇಸಿನ ಮೇಲಿಂದೆದ್ದು “ಚಾನ್ಸೇ ಇಲ್ಲ, ನಮ್ಮಪ್ಪ ಸಿಕ್ದೆ ನಾನಿಲ್ಲಿಂದ ಅಲ್ಲಾಡಲ್ಲ” ಎಂದು ದೃಢವಾಗಿ ಹೇಳಿ ಪ್ಲಾಟ್ಫಾರಮ್ಮಿನ ನೆಲದಮೇಲೆ ಕರ್ಚೀಪುಹಾಸಿ ಕುಳಿತುಬಿಟ್ಟ. ಮದುವೆಯ ಗಂಡೇ ಹಾಗೆ ಅಸಹಕಾರ ಚಳುವಳಿಯಲ್ಲಿ ಕುಳಿತಂತೆ ಕೂತದ್ದು ಕಂಡು ಇನ್ನೂ ನಿಂತಿದ್ದವರೆಲ್ಲಾ ಹಾಗೇ ಒಬ್ಬೊಬ್ಬರಾಗಿ ಅಲ್ಲೇ ಸಿಕ್ಕ ಸಿಕ್ಕ ಜಾಗದಲ್ಲಿ ಕುಳಿತುಬಿಟ್ಟರು. ಯಾವುದೋ ಪ್ರತಿಭಟನೆಯಲ್ಲಿ ಕುಳಿತಂತೆ ಕುಳಿತ ಗಂಡಿನಮನೆಯವರನ್ನು ಹೇಗೆ ಓಲೈಸಬೇಕೆಂದು ತಿಳಿಯದೆ ಶೇಖರ್ ಮತ್ತು ಮೋಹನ್ ಅಲ್ಲೇ ಸ್ವಲ್ಪ ದೂರ ನಿಂತು ತಮ್ಮಲ್ಲೇ ಗುಸುಗುಸು ಮಾತಾಡಿಕೊಂಡರು. ಏನೂ ತೋಚಲಿಲ್ಲ. ಸ್ವಲ್ಪ ಹೊತ್ತು ಚರ್ಚಿಸಿ ತಂದೆಗೆ ಫೋನುಮಾಡಿ ಅವರೊಂದಿಗೆ ಸಮಾಲೋಚಿಸಿ ಮುನ್ನಡೆಯುವ ನಿರ್ಧಾರ ಕೈಗೊಂಡರು.

ಗಂಡಿನ ಮನೆಯವರ ದಾರಿ ಕಾಯುತ್ತಾ ಗ್ರ್ಯಾಂಡ್ ರೆಸಿಡೆನ್ಸಿಯ ಲಾಬಿಯಲ್ಲಿ ಕುಳಿತಿದ್ದ ಕೃಷ್ಣಯ್ಯರ್ ಮಗ ಶೇಖರ್ ಲೈನಿನ್ನಲ್ಲಿರುವುದಾಗಿ ಹೇಳಿದ ರಿಸೆಪ್ಷನಿಸ್ಟ್ ಮಾತುಕೇಳಿ ಫೋನು ತೆಗೆದುಕೊಂಡರು. ರಾಜನ್ ಅಯ್ಯರ್ರವರು ದಾರಿಯಲ್ಲೆಲ್ಲೋ ನಾಪತ್ತೆಯಾಗಿರುವುದಾಗಿಯೂ, ಗಂಡಿನಮನೆಯವರು ತಮ್ಮೊಂದಿಗೆ ಹೋಟೆಲ್ಲಿಗೆ ಬರಲು ಸುತರಾಂ ಒಪ್ಪುತ್ತಿಲ್ಲವೆಂದೂ ಶೇಖರ ಹೇಳಿದ. ಬೀಗರು ಪತ್ತೆಯಿಲ್ಲವೆಂಬ ವಿಚಾರ ಕೇಳಿ ಕೃಷ್ಣಯ್ಯರಿಗೆ ಅಘಾತವಾಯಿತು. ದಿಗಿಲಿನಿಂದ ಏನು ಮಾಡಬೇಕೆಂದು ತಿಳಿಯದೆ ಮತ್ತೆ ಕರೆಮಾಡಬೇಕೆಂದು ಮಗನಿಗೆ ತಿಳಿಸಿ ಅಲ್ಲೇ ಇದ್ದ ಸೋಫಾದಲ್ಲಿ ಕುಸಿದು ಕುಳಿತರು. ಕೃಷ್ಣಯ್ಯರ್ ಸುಸ್ತಾಗಿ ಕುಳಿತದ್ದು ಕಂಡ ರಿಸೆಪ್ಷನಿಸ್ಟ್ ಬಂದು ಒಂದು ಲೋಟ ನೀರು ಕೊಟ್ಟು ಏನಾಯಿತೆಂದು ವಿಚಾರಿಸಿದಳು. ನೀರು ಕುಡಿದ ಕೃಷ್ಣಯ್ಯರ್ ಸ್ವಲ್ಪ ಚೇತರಿಸಿಕೊಂಡು ಇಂಟರ್ಕಾಮಿನಲ್ಲಿ ಮುರಳೀಧರರ ಕೋಣೆಯನ್ನು ಸಂಪರ್ಕಿಸಿ ಮುರಳಿಯವರಿಗೆ ಒಂದು ಸಮಸ್ಯೆಯಾಗಿರುವುದಾಗಿ ತಿಳಿಸಿ ತುರ್ತಾಗಿ ಹೊರಗೆ ಹೋಗಲು ತಯಾರಾಗಿ ತಮ್ಮ ಛೇಂಬರಿಗೆ ಬರುವಂತೆ ಹೇಳಿದರು. ಮುರಳಿ ಛೇಂಬರಿಗೆ ಹೋದಾಗ ಕಣ್ಣುಮುಚ್ಚಿ ಕೈಮುಗಿದು ಶ್ರೀಕೃಷ್ಣನ ಫೋಟೋದ ಎದುರು ನಿಂತಿದ್ದ ಕೃಷ್ಣಯ್ಯರ್ ಮುಖದಲ್ಲಿ ದುಗುಡ ಎದ್ದುಕಾಣುತ್ತಿತ್ತು.

ಪ್ರಾರ್ಥನೆ ಮುಗಿಸಿ ಕಣ್ತೆರೆದ ಕೃಷ್ಣಯ್ಯರ್ ಮುರಳಿ ಬಂದಿರುವುದನ್ನು ಕಂಡು ಹತ್ತಿರ ಬಂದು ಗಟ್ಟಿಯಾಗಿ ಕೈ ಹಿಡಿದು “ಹಾ… ಮುರಳೀ ಬಂದ್ಯಾಪ್ಪಾ…,ನೋಡು ಇವತ್ತು ಆ ಶ್ರೀಕೃಷ್ಣನೇ ನಿನ್ನನ್ನ ನನ್ಹತ್ರ ಕಳ್ಸಿರ್ಬೇಕು. ಈ ಮದ್ವೆ ನಿಂತ್ಹೋದ್ರೆ ನನ್ಮಗ್ಳು ವೈದೇಹಿಗೆ ಶ್ರೇಯಸ್ಸಾಗಲ್ಲಾಂತ ನನ್ಮನಸ್ಸು ಹೇಳ್ತಿದೆ. ಎಲ್ಲಾ ಸರಿಹೋಗ್ಬೇಕು ಅಂದ್ರೆ ನಿನ್ಪಾತ್ರ ಮುಖ್ಯ ನೋಡು, ನೀನೆ ನನ್ಕೈ ಹಿಡೀಬೇಕಪ್ಪಾ” ಎಂದರು ಕಳಕಳಿಯಿಂದ. ಮುರಳಿಗೆ ವಿಚಾರ ಅರ್ಥವಾಗದೆ “ಯಾಕ್ಮಾವ ಏನಾಯ್ತು? ಅದ್ಯಾಕದೇನೇನೋ ಮಾತಾಡ್ತಿದೀರ?” ಎಂದಾಗ “ಓ ನಾನ್ನೋಡು ಮೈನ್ ವಿಚಾರಾನೇ ಹೇಳ್ದೆ ಏನೇನೋ ಹೇಳ್ತಿದೀನಿ, ಬಾ ಲೇಟ್ಮಾಡೋದ್ಬೇಡ ಕಾರಲ್ಹೋಗ್ತ ಮಾತಾಡೋಣ್ವಂತೆ” ಎನ್ನುತ್ತಾ ಹೋಟೆಲ್ಲಿನ ಹೊರನಡೆದರು. ಮುರಳಿ ಕುತೂಹಲದಿಂದ ಕೃಷ್ಣಯ್ಯರನ್ನು ಹಿಂಬಾಲಿಸಿದರು. ಇವರಿಗಾಗಿಯೇ ಪೋರ್ಟಿಕೋದಲ್ಲಿ ಕಾಯುತ್ತಿದ್ದ ಡ್ರೈವರ್ ಇವರು ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಗಾಡಿಯನ್ನು ರೈಲ್ವೇಸ್ಟೇಷನ್ನಿನತ್ತ ದೌಡಾಯಿಸಿದ. ದಾರಿಯಲ್ಲಿ ಕೃಷ್ಣಯ್ಯರ್ ಮುರಳಿಗೆ ಅಯ್ಯರ್ರವರು ದಾರಿಯಲ್ಲೆಲ್ಲೋ ನಾಪತ್ತೆಯಾಗಿರುವ ವಿಷಯ ತಿಳಿಸಿ, ಅಯ್ಯರ್ ಎಲ್ಲಿದ್ದರೂ ಸುರಕ್ಷಿತವಾಗಿರುವರೆಂಬ ವಿಶ್ವಾಸ ಅವರಿಗೆ ಇರುವುದಾಗಿ ಹೇಳಿದರು. ಈ ಘಟನೆಯಿಂದ ಮಗಳ ಮದುವೆ ನಿಂತು ಹೋದರೆ ಮುಂದೆ ಅದೇ ಕಾರಣಕ್ಕೆ ವೈದೇಹಿಗೆ ಕಳಂಕ ತಗುಲಿ ಮದುವೆಯೇ ಆಗದಿದ್ದರೆ ಹೇಗೆಂದು ಅಲವತ್ತುಕೊಂಡು ಹೇಗಾದರೂ ಮಾಡಿ ಈ ಮದುವೆ ನಿಲ್ಲದಂತೆ ನೋಡಿಕೊಳ್ಳಬೇಕೆಂದು ಮುರಳಿಯಲ್ಲಿ ಅಂಗಲಾಚಿದರು. ಕೃಷ್ಣಯ್ಯರ್ ಪರಿಸ್ಥಿತಿ ಅರ್ಥಮಾಡಿಕೊಳ್ಳಬಲ್ಲವರಾಗಿದ್ದ ಮುರಳಿ “ಜಾಸ್ತಿ ಚಿಂತೆ ಮಾಡ್ಬೇಡಿ ಮಾವ, ಆ ದೇವ್ರಮೇಲೆ ಭಾರ ಹಾಕಿ, ಎಲ್ಲಾ ಒಳ್ಳೇದೇ ಆಗತ್ತೆ” ಎಂದು ಧೈರ್ಯ ತುಂಬಿದರು.

ಕೃಷ್ಣಯ್ಯರ್ ಮತ್ತು ಮುರಳಿ ರೈಲ್ವೇಸ್ಟೇಷನ್ನಿಗೆ ಹೋದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅಪ್ಪ ಸಿಗದೆ ಕುಳಿತಿದ್ದ ಜಾಗ ಬಿಟ್ಟು ಕದಲುವ ಪ್ರಶ್ನೆಯೇ ಇಲ್ಲವೆಂದು ಸುಬ್ಬು ರಚ್ಚೆ ಹಿಡಿದಿದ್ದ. ಶಂಕರನಾರಾಯಣ ಮತ್ತು ಚಿದಂಬರಂ ತಮ್ಮ ಬುದ್ಧಿಯೆಲ್ಲಾ ಖರ್ಚುಮಾಡಿ ಮೈದುನನಿಗೆ ಸಾಂತ್ವನಹೇಳಲು ಪ್ರಯತ್ನಿಸಿ ಸೋಲೊಪ್ಪಿದಂತಿತ್ತು. ಸುತ್ತಲೂ ಒಂದಷ್ಟು ಜನ ನಿಂತು ರೈಲ್ವೇ ಪ್ಲಾಟ್ಫಾರಮ್ಮಿನಲ್ಲಿ ನಡೆಯುತ್ತಿದ್ದ ಪ್ರಸಂಗವನ್ನು ನೋಡುತ್ತಾ ಪುಕ್ಕಟೆ ಮನರಂಜನೆ ಪಡೆಯತ್ತಿದ್ದರು. ಸ್ಥಳಕ್ಕೆ ಆಗಮಿಸಿದ ಮುರಳಿಯವರಿಗೆ ಅಲ್ಲಿನ ಸನ್ನಿವೇಶವನ್ನು ಗ್ರಹಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ನೇರ ಸುಬ್ಬುವಿನ ಬಳಿ ಹೋಗಿ ಅವನ ಕೈ ಹಿಡಿದು ಎಬ್ಬಿಸಿ ತಬ್ಬಿಕೊಂಡರು. ಹಾಗೇ ತಬ್ಬಿ ಹಿಡಿದು ನವಿರಾಗಿ ಅವನ ತಲೆ ನೇವರಿಸಿದರು. ತನ್ನ ಅಸಹಾಯಕ ಪರಿಸ್ಥಿತಿಯಿಂದ ಸಿಟ್ಟಿಗೆದ್ದಿದ್ದ ಸುಬ್ಬುವಿನ ಉದ್ವೇಗ ಮುರಳಿಯವರ ಆತ್ಮೀಯ ಸ್ಪರ್ಶದಿಂದ ದುಃಖವಾಗಿ ಬದಲಾಗಿ ಸುಬ್ಬು “ಚಿಕ್ಕಪ್ಪಾ…”ಎಂದು ಮುರಳಿಯವರನ್ನು ತಬ್ಬಿ ಮಗುವಿನಂತೆ ಬಿಕ್ಕೀ ಬಿಕ್ಕೀ ಅಳಲಾರಂಭಿಸಿದ. ಸುಬ್ಬುವನ್ನು ಇನ್ನಷ್ಟು ಬಿಗಿಯಾಗಿ ಅಪ್ಪಿದ ಮುರಳಿಯವರು “ಆಯ್ತ್ಕಣೊ ರಾಜ ಅತ್ಬುಡೋ ನಿನ್ಮನ್ಸು ಹಗುರ ಆಗೋವರ್ಗೂ ಅತ್ಬುಡೊ ಸುಬ್ಬು” ಎಂದು ಹಗೂರಕ್ಕೆ ಅವನ ಬೆನ್ನು ಸವರುತ್ತಾ ನಿಂತರು. ಕೊಂಚ ಕಾಲ ಕಣ್ಣೀರಿಟ್ಟ ಸುಬ್ಬುವಿಗೆ ತುಸು ಸಮಾಧಾನವಾದಂತೆ ಕಂಡಿತು. ಬಹಳ ಅತ್ತಿದ್ದರಿಂದ ನಡುನಡುವೆ ಉಸಿರು ಸಿಕ್ಕಿಕೊಂಡಂತಾಗಿ ಆಗಾಗ್ಗೆ ನಡುಗುತ್ತಾ ಉಸಿರೆಳೆದುಕೊಳ್ಳುತ್ತಾ ನಿಂತಿದ್ದ ಸುಬ್ಬುವಿನ ಬೆನ್ನು ನೇವರಸುತ್ತಲೇ ಕಿಸೆಯಿಂದ ಕರ್ಚೀಫು ತೆಗೆದು ಕೊಟ್ಟು “ ಈಗೊಂದ್ಸೊಲ್ಪ ಮುಖ ಒರೆಸ್ಕೊಂಡು ಒಂದ್ಸಲಿ ಮೂಗ್ಸೀನು ಕಂದ” ಅಕ್ಕರೆಯಿಂದ ಹೇಳಿದರು. ಪುಟ್ಟಮಗುವಿನಂತೆ ಸುಬ್ಬು ಮುರಳಿಯವರು ಹೇಳಿದ್ದನ್ನು ಪಾಲಿಸಿದ. ನೆಲದಮೇಲಿದ್ದ ಸ್ಟೀಲ್ ರೈಲುಚೊಂಬನ್ನು ತೆಗೆದು ಅದರೊಳಗಿನ ಬಟ್ಟಲಿಗೆ ಒಂದಿಷ್ಟು ನೀರು ಬಗ್ಗಿಸಿಕೊಟ್ಟು “ಸ್ವಲ್ಪ ನೀರ್ಕುಡೀತೀಯ ರಾಜಾ?” ಎಂದು ಕೇಳಿದರು. ಮೌನವಾಗಿ ಬಟ್ಟಲು ಇಸ್ಕೊಂಡು ನೀರು ಕುಡಿದ ಸುಬ್ಬು ಇನ್ನಷ್ಟು ಬೇಕೆಂಬಂತೆ ಬಟ್ಟಲು ಮುಂದೊಡ್ಡಿದ. ಮುರಳಿಯವರು ಮತ್ತೊಮ್ಮೆ ಬಟ್ಟಲಿಗೆ ತುಂಬಿಸಿದ ನೀರನ್ನೂ ಕುಡಿದಮೇಲೆ ಸುಬ್ಬುವಿಗೆ ನಿಜಕ್ಕೂ ಸ್ವಲ್ಪ ಆರಾಮೆನಿಸಿತ್ತು.

“ಈಗ ಸ್ವಲ್ಪ ಚಿಕ್ಕಪ್ಪನ್ಜೊತೆ ಬರ್ತೀಯಾಪ್ಪಾ… ನಂಗೆ ನಿನ್ಹತ್ರ ಒಂಚೂರ್ ಮಾತಾಡೋದಿದೆ” ಎಂದು ಸುಬ್ಬುವಿನ ಹೆಗಲಮೇಲೆ ಕೈ ಹಾಕಿ ಸ್ವಲ್ಪದೂರ ಜೊತೆಯಲ್ಲಿ ನಡೆದು ಅಲ್ಲೊಂದು ಕಲ್ಬೆಂಚಿನಮೇಲೆ ಅವನನ್ನೂ ಕೂರಿಸಿ ಪಕ್ಕದಲ್ಲಿ ತಾವೂ ಕುಳಿತರು. ಇಷ್ಟು ಹೊತ್ತೂ ಕುಳಿತಲ್ಲಿಂದ ಒಂದಿಂಚೂ ಕದಲುವುದಿಲ್ಲವೆಂದು ರಚ್ಚೆಹಿಡಿದು ರಂಪ ಮಾಡುತ್ತಿದ್ದ ಸುಬ್ಬು ಇದ್ದಕ್ಕಿದ್ದಂತೆ ಹೀಗೆ ವಿಧೇಯನಾಗಿ ಮುರಳಿಯವರು ಹೇಳಿದಂತೆ ಕೇಳುತ್ತಿದ್ದುದು ಕಂಡು ಅಲ್ಲಿದ್ದವರಿಗೆ ಅಚ್ಚರಿಯಾಗದಿರಲಿಲ್ಲ. ಸುಬ್ಬುವಿನೊಂದಿಗೆ ಏಕಾಂತದಲ್ಲಿ ಕುಳಿತ ಮುರುಳಿ “ನೋಡಪ್ಪಾ ಸುಬ್ಬೂ ನಿನ್ಪರಿಸ್ಥಿತಿ ನಿನ್ಭಾವ್ನೆಗಳು ನನ್ಗರ್ಥ ಆಗತ್ತೆ. ಆದ್ರೆ ಒಂದ್ ಡೀಸೆಂಟ್ ಫ್ಯಾಮಿಲಿಯಿಂದ ಬಂದಿರೋ ನಾವು ಹೀಗೆ ರೈಲ್ವೇ ಪ್ಲಾಟ್ಫಾರಮ್ಮಲ್ಲಿ ಇಷ್ಟ್ ಜನದ್ಮುಂದೆ ಸೀನ್ಕ್ರಿಯೇಟ್ ಮಾಡೋದೆಷ್ಟ್ ಚೆನ್ನಾಗಿರತ್ತೆ ಹೇಳು. ಅಯ್ಯರ್ಸ್ ಕಫೆ ಅಯ್ಯರ್ಮಗ ರೈಲ್ವೇ ಪ್ಲಾಟ್ಫಾರಮ್ಮಲ್ಲಿ ಹೀಗಾಡ್ತಿದ್ದಾಂದ್ರೆ ನಿಮ್ಮಪ್ಪಂಗೆ ಖುಷಿಯಾಗತ್ತೆ ಅನ್ಕೊಂಡಿದೀಯಾ?” ಸುಬ್ಬು ಉತ್ತರಿಸದೆ ನೆಲಾನೋಡುತ್ತಾ ಕುಳಿತ. “ನಿಂಗೆ ನಿನ್ಮುರಳೀ ಚಿಕ್ಕಪ್ಪನ್ಮೇಲೆ ಗೌರ್ವ ಇದೇ ತಾನೇ? ನನ್ಮಾತ್ಗೆ ಬೆಲೆ ಕೊಡ್ತೀ ತಾನೆ?” ಮುರಳಿ ಕೇಳಿದರು. “ಇದೂ ಕೇಳೋ ಮಾತಾ ಚಿಕ್ಕಪ್ಪಾ?” ಮೆಲ್ಲನೆ ಉತ್ತರಿಸಿದ. “ಹಾಗಿದ್ರೆ ನನ್ಮಾತ್ಕೇಳು, ಗಂಭೀರ್ವಾಗಿ ನಂಜೊತೆ ಹೋಟೆಲ್ಲಿಗೆ ನಡಿ, ಭಾವ ಕಳ್ದೋಗಿರೋ ಚಿಂತೆ ನಮ್ಗೇನಿಲ್ದೆ ಇಲ್ಲ. ದೊಡ್ಡೋರೂಂತ ನಾವೆಲ್ಲಾ ಇದೀವಿ. ಎಲ್ಲಾರೂ ಸೇರಿ ಏನಾರ ಮಾಡೋಣಂತೆ, ಮೊದ್ಲು ಇಲ್ಲಿಂದ ನಡಿ” ಎಂದು ಬೆನ್ನುತಟ್ಟಿ ಕಲ್ಬೆಂಚಿನಿಂದೆದ್ದರು. ಹಿಂದೆಯೇ ಎದ್ದ ಸುಬ್ಬುವಿನ ಹೆಗಲಮೇಲೆ ಕೈ ಹಾಕಿ ಉಳಿದವರತ್ತ ತಿರುಗಿ “ಬನ್ನಿ ಎಲ್ರೂ ಹೋಟೆಲ್ಲಿಗ್ಹೋಗೋಣ” ಎಂದು ಮುಂದೆ ನಡೆದರು.

ವರನಕಡೆಯವರನ್ನು ಕರೆತರಲು ವ್ಯವಸ್ಥೆಮಾಡಲಾಗಿದ್ದ ವ್ಯಾನಿನಲ್ಲಿ ಮುರಳಿ ಸುಬ್ಬುವಿನ ಪಕ್ಕದಲ್ಲಿ ಕುಳಿತರು. ಮುಖ್ಯವಾಗಿ ಸುಬ್ಬು ಮತ್ತು ಸೀತಮ್ಮನವರಿಗೆ ಧೈರ್ಯ ಹೇಳುತ್ತಾ “ಮುಹೂರ್ತದ ಸಮಯಕ್ಕೆ ಮುಂಚೆ ಖಂಡಿತ ಭಾವನೋರ್ನ ಕಾಂಟ್ಯಾಕ್ಟ್ ಮಾಡ್ಬೋದು ಅನ್ನೋ ವಿಶ್ವಾಸ ನಂಗಿದೆ. ಅಲ್ಲೀವರ್ಗೆ ವರ್ಪೂಜೆ ಮತ್ಬಾಕಿ ಶಾಸ್ತ್ರಾನೆಲ್ಲಾ ಸಿಂಪಲ್ಲಾಗಿ ಮುಗಿಸ್ಕೊಂಡಿರೋಣ. ಭಾವ್ನೋರು ಕ್ಷೇಮವಾಗಿರೋದ್ಗೊತ್ತಾದ್ರೆ ಮಾತ್ರ ಧಾರೆ ಇಟ್ಕೋಳೋದು… ಏನಂತೀರಿ” ಎಂದು ಎಲ್ಲರನ್ನೂ ಒಮ್ಮೆ ನೋಡಿದರು. ಸೀತಮ್ಮ ಸಮ್ಮನೆ ಬಿಕ್ಕಿದರು. “ಅದ್ಹೆಂಗ್ ಚಿಕ್ಕಪ್ಪ ಅಪ್ಪಾನೆ ಇಲ್ದೆ ನನ್ಮದ್ವೇನಾ, ಮದ್ವೇ ಪೋಸ್ಟ್ಪೋನ್ ಮಾಡಕ್ಕಾಗಲ್ವೇ?” ಅಂದ ಸುಬ್ಬು. “ಭಾವ ಎಲ್ಲೋ ಒಂದ್ಕಡೆ ಚೆನ್ನಾಗಿದಾರೇಂದ್ಮೇಲೆ ಸುಮ್ನೆ ಮದ್ವೆ ಮುಂದ್ಹಾಕೋದನ್ನ ಖಂಡಿತಾ ಅವ್ರೇ ಒಪ್ಪಲ್ಲ ಕಣೋ. ಗೊತ್ತಾದ ಮದ್ವೆ ಕಡೇ ಗಳ್ಗೇಲಿ ಕ್ಯಾನ್ಸಲ್ಮಾಡಿದ್ರೆ ಯಾರ್ಗೂ ಶ್ರೇಯಸ್ಸಲ್ಲ ತಿಳ್ಕೊ. ನಿನ್ಚಿಕ್ಕಪ್ಪ ನಾನಿಲ್ವೇ… ನಾನೂ ಮುಕ್ತ ಹುಡ್ಗನ ತಂದೆತಾಯಿ ಸ್ಥಾನ್ದಲ್ಲಿ ಕೂತ್ಕೋತೀವಿ, ಅಲ್ವಾ ಸೀತಕ್ಕಾ…” ಮುರಳಿ ಸೀತಮ್ಮನವರತ್ತ ನೋಡಿ ಕೇಳಿದರು. “ಏನೋಪ್ಪ ಒಳ್ಳೇ ದಿನ್ಗಳಲ್ಲೇ ನಂಗ್ತಿಳ್ಯೋದು ಅಷ್ಟ್ರಲ್ಲೇ ಇದೆ. ಇನ್ನೀಗಂತೂ ನಂಗೇನೂ ತೋಚ್ತಿಲ್ಲ. ನಿಮ್ಗೆಲ್ಲಾ ಸರೀಕಂಡ್ಹಾಗ್ ಮಾಡಿ” ಎಂದು ಹೇಳಿ ಸೀತಮ್ಮ ಸುಮ್ಮನಾದರು. ಅಷ್ಟರಲ್ಲಿ ವರನ ಸ್ವಾಗತ ಮಾಡಲು ಮೊಳಗಿದ ಮಂಗಳವಾದ್ಯ ಕೇಳಿ ವ್ಯಾನು ಗ್ರ್ಯಾಂಡ್ ರೆಸಿಡೆನ್ಸಿಯ ಪೋರ್ಟಿಕೋ ತಲುಪಿರುವುದು ತಿಳಿಯಿತು.

ಅಯ್ಯರ್ ಬಯಸಿದಂತೆ ಮದವೆಗೆ ತಂಜಾವೂರಿನ ಖ್ಯಾತ ನಾದಸ್ವರದ ತಂಡವನ್ನು ಗೊತ್ತುಮಾಡಲಾಗಿತ್ತು. ವ್ಯಾನಿನಿಂದ ಕೆಳಗಿಳಿದೊಡನೆ ಮುರಳೀಧರ್ ಹೆಣ್ಣಿನಮನೆಯವರಿಗೆ ಸಿಟ್ಟಿನಿಂದ “ನೋಡ್ರೀ… ನಿಮ್ಮಾತಿಗ್ಬೆಲೆಕೊಟ್ಟು ನಮ್ಹುಡ್ಗಾ ನಾವೂ ಎಲ್ಲಾ ಸ್ಟೇಷನ್ನಿಂದ ಹೊರಟ್ಬಂದಿದೀವಿ ಹಾಗಿರುವಾಗ ನೀವೂ ನಂ ಪರಿಸ್ಥಿತಿ ಅರ್ಥ ಮಾಡ್ಕಂಡು ಎಲ್ಲಾ ಶಾಸ್ತ್ರಾನೂ ಸ್ವಲ್ಪ ಸಿಂಪಲ್ಲಾಗ್ಮಾಡಿ ಗೊತ್ತಾಯ್ತಾ? ತೀರಾ ಸಂಬ್ರಮ್ಸೋ ಸ್ಥಿತೀಲಿ ನಾವಿಲ್ಲ ಅನ್ನೋ ಪರಿಜ್ಞಾನ ಇರ್ಲಿ” ಅಂದರು. ತಕ್ಷಣ ಮುರಳಿಯವರ ಮಾತಿನ ಮರ್ಮ ಅರಿತ ಕೃಷ್ಣಯ್ಯರ್ ಅವರ ಕೈಹಿಡಿದು “ತಪ್ಪಾಯ್ತಪ್ಪಾ ಕ್ಷಮೆಯಿರ್ಲಿ” ಎಂದು ಮಂಗಳವಾದ್ಯದವರತ್ತ ತಿರುಗಿ “ಸ್ವಲ್ಪ ಸುಮ್ನಿರ್ರಪ್ಪಾ ಶಾಸ್ತ್ರಕ್ನುಡ್ಸಾಯ್ತಲ್ಲ ಇನ್ಸಾಕು ಸುಮ್ನಿರಿ” ಅಂದರು. ಕೃಷ್ಣಯ್ಯರ್ ಪರಿವಾರದವರು ಸುಬ್ಬುವಿಗೊಂದು ಹಾರ ಹಾಕಿ ಆರತಿಯೆತ್ತಿ ಒಳಗೆ ಬರಮಾಡಿಕೊಂಡರು. ಹೋಟೆಲ್ಲಿನ ಸಿಬ್ಬಂದಿ ಗಂಡಿನ ಮನೆಯವರನ್ನು ಕೇಳಿ ಅವರ ನಿರ್ದೇಶನಕ್ಕೆ ಅನುಸಾರವಾಗಿ ಲಗೇಜುಗಳನ್ನು ಬೇರೆ ಬೇರೆ ಕೊಠಡಿಗಳಿಗೆ ತಲುಪಿಸಿದರು. ಬೆಳಗ್ಗಿನಿಂದ ಯಾರದ್ದೂ ಸ್ನಾನವಾಗಿರಲಿಲ್ಲವಾದ್ದರಿಂದ ಎಲ್ಲರೂ ಸ್ನಾನ ಮಾಡಿ ಬಟ್ಟೆಬದಲಿಸಿಕೊಳ್ಳುವಷ್ಟರಲ್ಲಿ ಕತ್ತಲಾಗಿತ್ತು.

ಮುರಳಿಯವರ ಸಲಹೆಯಂತೆ ವರಪೂಜೆ ಕಾರ್ಯಕ್ರಮವನ್ನು ಹೆಚ್ಚು ವಿಸ್ತರಿಸಲಿಲ್ಲ. ಉಭಯ ಪಕ್ಷಗಳೂ ಕೇವಲ ಫಲತಾಂಬೂಲದ ತಟ್ಟೆ ಬದಲಿಸಿಕೊಂಡರು. ಸಾಂಕೇತಿಕವಾಗಿ ಸುಬ್ಬುವಿಗೆ ಒಂದಷ್ಟು ವರೋಪಚಾರದ ಸತ್ಕಾರಮಾಡಿದರು. ಬೆಳಗ್ಗೆಯೇ ನಡೆದಿದ್ದ ದೇವರ ಸಮಾರಾಧನೆಯಲ್ಲಿ ವಧು ಈಗಾಗಲೇ ವ್ರತ ಹಿಡಿದಿದ್ದರಿಂದ ಸುಬ್ಬುವಿನ ಕೈಗೊಂದು ಅರಿಶಿನದ ದಾರ ಕಟ್ಟಿ ಅಂದಿನ ಕಾರ್ಯಕ್ರಮವನ್ನು ಚುಟುಕಾಗಿ ಮುಗಿಸಲಾಯಿತು. ತಿರುವಾರೂರಿನಿಂದ ಬಂದವರೆಲ್ಲರೂ ಎರಡು ದಿನ ಪಯಣಿಸಿ ದಣಿದಿದ್ದಲ್ಲದೆ ಬೆಳಗ್ಗಿನಿಂದ ಮಾನಸಿಕ ಒತ್ತಡ ಅನುಭವಿಸಿ ನಲುಗಿಹೋಗಿದ್ದರು. ಸಾಲದ್ದಕ್ಕೆ ದಿನವಿಡೀ ಯಾರೂ ಸರಿಯಾಗಿ ತಿಂಡಿ ಊಟ ಮಾಡಿರಲಿಲ್ಲ. ಹಾಗಾಗಿ ಹೆಚ್ಚಿಗೆ ಹೇಳಿಸಿಕೊಳ್ಳದೆ ಎಲ್ಲರೂ ಊಟಕ್ಕೆದ್ದರು. ಊಟ ಇನ್ನೂ ಅರ್ಧ ಮುಗಿದಿರಬೇಕಷ್ಟೆ. ಅಷ್ಟರಲ್ಲಿ ವಧುವಿನ ಅಣ್ಣ ಮೋಹನ ಸುಬ್ಬುವಿನ ಬಳಿ ಬಂದು “ಭಾವಾ… ರಿಸೆಪ್ಷನ್ ಕೌಂಟರ್ ಫೋನ್ಗೆ ತಂಗಮಣಿ ಅನ್ನೋರು ನೆಲ್ಲೂರಿನಿಂದ ಕಾಲ್ ಮಾಡಿ ಸುಬ್ಬು ಬೇಕು ಅಂತಿದಾರೆ” ಅಂದ. ಸುಬ್ಬು ಊಟವನ್ನು ಅರ್ಧಕ್ಕೇ ಬಿಟ್ಟು ರಿಸೆಪ್ಷನ್ ಕೌಂಟರಿನತ್ತ ಓಡಿದ.

ಸುಬ್ಬು ಫೋನ್ ತೆಗೆದುಕೊಂಡು “ಹಲೋ” ಎಂದೊಡನೆ ಆ ಕಡೆಯಿಂದ ಮಾತನಾಡಿದ ತಂಗಮಣಿಯವರು “ಚಿಕ್ಕೆಜ್ಮಾನ್ರೇ… ಹನುಮಾನ್ ಜಂಕ್ಷನ್ ಪೋಲೀಸ್ ಸ್ಟೇಷನ್ನಲ್ಲಿ ಮಿಸ್ಸಿಂಗ್ ಕಂಪ್ಲೈಂಟ್ ಕೆಲ್ಸ ಮುಗ್ಯೋ ಹೊತ್ಗೆ ಮಧ್ಯಾಹ್ನ ಆಗೋಯ್ತು. ವಿಜಯವಾಡಾ ಮತ್ತು ನೆಲ್ಲೂರ್ ಸ್ಟೇಷನ್ಗಳಲ್ಲಿ ಸಾಕಷ್ಟು ಹುಡ್ಕಿದ್ವಿ, ಯಜಮಾನ್ರ ಬಗ್ಗೆ ಏನೂ ಸುಳಿವು ಸಿಕ್ಲಿಲ್ಲ. ಅಷ್ಟೊತ್ಗೆ ಕತ್ಲೆಯಾಗೋಯ್ತು. ಇವತ್ರಾತ್ರಿ ನೆಲ್ಲೂರಲ್ಲೇ ರೂಮ್ಮಾಡ್ಕೊಂಡಿದ್ದು ನಾಳೆ ಬೆಳಗ್ಗೆ ಗೂಡೂರ್ಗ್ಹೋಗಿ ಹುಡ್ಕೋಣಾಂತಿದೀವಿ” ಅಂದರು. ಸುಬ್ಬು ಫೋನಿನಲ್ಲಿ ನಿರಾಶನಾಗಿ ಸುಮ್ಮನೆ ಹೂಗುಟ್ಟುತ್ತಿದ್ದ. ತಂದೆಯ ಬಗ್ಗೆ ಯಾವ ಸುಳಿವೂ ಸಿಕ್ಕದಿದ್ದುದಕ್ಕೆ ಸುಬ್ಬು ಬೇಸರಗೊಂಡಿರುವುದು ಅವನ ದನಿಯಿಂದಲೇ ತಿಳಿಯುತ್ತಿತ್ತು. ಅದನ್ನು ಗ್ರಹಿಸಿದ ತಂಗಮಣಿಯವರು “ನೀವೇನೂ ಚಿಂತೆ ಮಾಡ್ಬೇಡಿ ಚಿಕ್ಕೆಜ್ಮಾನ್ರೇ… ಪೋಲೀಸ್ನೋರು ಈಗಾಗ್ಲೆ ಎಲ್ಲಾ ಸ್ಟೇಷನ್ಗೂ ಯಜ್ಮಾನ್ರ ಫೋಟೋ ಇರೋ ಪೋಸ್ಟರ್ಸ್ ಕಳ್ಸಿರ್ತಾರೆ ನಾಳೆ ನಮ್ಗೆ ಒಳ್ಳೇ ಸುದ್ದಿ ಸಿಕ್ಕೇ ಸಿಗತ್ತೆ.” ಎಂದು ಭರವಸೆಯಿಂದ ಹೇಳಿದರು. ತಂದೆಯ ಸುಳಿವು ಇನ್ನೂ ಸಿಗದಿದ್ದುದರಿಂದ ಸುಬ್ಬುವಿಗೆ ನಿರಾಶೆಯಾಯಿತಾದರೂ ತಂಗಮಣಿ ಮತ್ತು ವೇಲುರವರು ಅಪ್ಪನ ಹುಡುಕಾಟದಲ್ಲಿ ನಿರತರಾಗಿರವುದು ತಿಳಿದು ಸ್ವಲ್ಪ ಸಮಾಧಾನವಾಯಿತು. ಫೋನಿಟ್ಟು ಡೈನಿಂಗ್ಹಾಲಿಗೆ ಮರಳಿದಾಗ ಬಹುತೇಕ ಎಲ್ಲರ ಊಟವೂ ಮುಗಿಯಲು ಬಂದಿತ್ತು. ಸುಬ್ಬು ಊಟ ಮುಂದುವರೆಸದೇ ಒಂದ್ಲೋಟ ಮಜ್ಜಿಗೆ ಮಾತ್ರ ಕುಡಿದು ಮನೆಯವರಿಗೆಲ್ಲಾ ತಂಗಮಣಿಯವರು ಫೋನಲ್ಲಿ ಹೇಳಿದ್ದ ವಿಷಯದ ವರದಿ ಒಪ್ಪಿಸಿದ.

ವಿಷಯ ತಿಳಿದ ಮುರಳಿಯವರಿಗೆ ಸ್ವಲ್ಪ ಆಶಾಭಾವನೆ ಮೂಡಿ ಹ್ಯಾಗಾದ್ರೂ ಬೆಳಗ್ಗೆ ಹೊತ್ಗೆ ಒಂದೊಳ್ಳೆ ಸುದ್ದಿ ಸಿಗ್ಲಪ್ಪಾ ದೇವ್ರೇ ಎಂದು ಮನದಲ್ಲೇ ದೇವರನ್ನು ಬೇಡಿಕೊಂಡರು. ಈ ಸಂಬಂಧವಾಗಿ ರಿಸೆಪ್ಷನ್ನಿಗೆ ಯಾವುದೇ ಫೋನು ಬಂದರೂ ಮೊದಲು ತಮಗೆ ವಿಷಯ ತಿಳಿಸುವಂತೆ ಕೃಷ್ಣಯ್ಯರಿಗೆ ಹೇಳಬೇಕೆಂದುಕೊಂಡು ಅವರಿಗಾಗಿ ಮೋಹನನನ್ನು ವಿಚಾರಿಸಿದರು. ಮದುವೆ ಸಾಂಗವಾಗಿ ನೆರೆವೇರಿ ಎಲ್ಲವೂ ಸುಖಾಂತ್ಯದಲ್ಲಿ ಮುಗಿಯುವಂತೆ ಕೋರಿ ಅವರ ಇಷ್ಟದೇವರಾದ ಶ್ರೀ ಕೃಷ್ಣನಿಗೆ ಪೂಜೆಸಲ್ಲಿಸಲು ದೇವಸ್ಥಾನಕ್ಕೆ ಹೋಗಿದ್ದಾರೆಂದು ತಿಳಿದುಬಂತು. ಧೀರ್ಘ ಪ್ರಯಾಣದ ಆಯಾಸದೊಂದಿಗೆ ಊಟಕ್ಕೆ ಮಾಡಿಸಿದ್ದ ಗಸಗಸೆ ಪಾಯಸದ ಪರಿಣಾಮದಿಂದ ಕೆಲವರು ಈಗಾಗಲೇ ತಮ್ಮ ಕೊಠಡಿ ಸೇರಿ ಮಲಗುವ ತಯಾರಿ ನಡೆಸಿದ್ದರು. ಸುಬ್ಬುವಿನ ಕುಟುಂಬದವರು ಮತ್ತು ನೆಂಟರಿಷ್ಟರೆಲ್ಲರೂ ಹೋಟೆಲಿನ ಲಾಬಿಯಲ್ಲಿ ಕುಳಿತು ಅಯ್ಯರಿಗಾಗಿ ಒಬ್ಬೊಬ್ಬರೂ ಮಾಡಿದ್ದ ಪ್ರಾರ್ಥನೆಗಳನ್ನೂ ಹೊತ್ತಿದ್ದ ಹರಕೆಗಳನ್ನೂ ಹೇಳಿಕೊಂಡು ಪರಸ್ಪರ ಸ್ಥೈರ್ಯ ತುಂಬಿಕೊಳ್ಳುತ್ತಾ ಕುಳಿತಿದ್ದರು. ಕೃಷ್ಣಯ್ಯರ್ ದೇವಸ್ಥಾನದಿಂದ ಹಿಂತಿರುಗುವುದನ್ನು ಕಾಯುತ್ತಿದ್ದ ಮುರಳಿ ಲಾಬಿಗೆ ಬಂದು ಅಲ್ಲಿ ಕುಳಿತಿದ್ದವರನ್ನು ಕೂಡಿಕೊಂಡು ಎಲ್ಲರಿಗೂ ಧೈರ್ಯ ತುಂಬುವ ಮಾತುಗಳನ್ನಾಡುತ್ತಾ ಕುಳಿತರು.

ನಾರಾಯಣ ಎಮ್ ಎಸ್


ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x