ಕಥಾಲೋಕ

ಮರೆಯಲಾಗದ ಮದುವೆ (ಭಾಗ 1): ನಾರಾಯಣ ಎಂ ಎಸ್


ಇದು ನೆನ್ನೆಮೊನ್ನೆಯ ಮಾತಲ್ಲ. ಸುಮಾರು ಹತ್ತಿಪ್ಪತ್ತು ವರ್ಷಗಳೇ ಕಳೆದಿರಬೇಕು. ಆ ಕಾಲಕ್ಕಾಗಲೇ ಊರ ಕಣ್ಣಲ್ಲಿ ರಾಜನ್ಅಯ್ಯರ್ ಒಬ್ಬ ಹಿರೀಕನೆನಿಸಿದ್ದರು. ಆಗಲೇ ಎರಡು ಮೊಮ್ಮಕ್ಕಳಿಗೆ ಅಜ್ಜನಾಗಿದ್ದ ಅಯ್ಯರನ್ನು ಊರ ಜನ ಹಿರಿಯನೆನ್ನದೆ ಮತ್ತಿನ್ನೇನು ತಾನೇ ಅಂದೀತು? ಆದರೆ ಅಜ್ಜನಾದ ಬೆನ್ನಲ್ಲೇ ರಸಿಕ ರಾಜನ್ ಅಯ್ಯರ್ ಆ ಇಳಿವಯಸ್ಸಿನಲ್ಲೂ ಮಡದಿ ಸೀತಮ್ಮಳನ್ನು ಮತ್ತೊಮ್ಮೆ ಬಸಿರಾಗಿಸಿ ಹಲ್ಗಿಂಜುತ್ತಲೇ ಊರವರು ಆತುರದಲ್ಲಿ ಕಟ್ಟಿದ ಹಿರೀಕನ ಪಟ್ಟವನ್ನು ಮುಗುಮ್ಮಾಗಿ ಪಕ್ಕಕ್ಕೆ ಸರಿಸಿಟ್ಟುಬಿಟ್ಟಿದ್ದರು. ಅದೇಕೋ ಅಯ್ಯರಿಗೆ ಈ ಹಿರಿಯನೆಂಬ ಹೊಸ ಗೌರವದ ಹಣೆಪಟ್ಟಿಗಿಂತ ಲಾಗಾಯ್ತಿನಿಂದ ತನಗಿದ್ದ ಸೊಗಸುಗಾರ ಪುಟ್ಸಾಮಿಯ ಛಬಿಯೇ ಹಿತವೆನಿಸಿತ್ತು. ಈ ಘಟನೆ ಕಳೆದು ವರುಷ ಹತ್ತಾದರೂ ಮುಪ್ಪಾದ ಈ ಮರದ ಹುಳಿಗೆ ಮಾತ್ರ ಮುಪ್ಪು ತಗುಲಿದಂತೆ ಕಾಣಲಿಲ್ಲ. ವಾರಕ್ಕೊಮ್ಮೆ ಕೂದಲು ಕಪ್ಪಾಗಿಸಿ ಮಿರಿ ಮಿರಿ ಮಿಂಚುವ ಮೈನರ್ ಚೈನು ಧರಿಸಿ, ಗರಿಗರಿ ಜರಿ ಪಂಚೆಯಟ್ಟು, ಪಳಪಳ ಹೊಳೆವ ಸಿಲ್ಕಿನ ಶರ್ಟುತೊಟ್ಟು ಕಳೆಗಟ್ಟಿಸುವ ಗಂಧ ಕುಂಕುಮಾಂಕಿತನಾಗಿ ಅಯ್ಯರ್ಸ್ ಕೆಫೆಯ ಗಲ್ಲಾದಲ್ಲಿ ಬಂದು ಕುಳಿತನೆಂದರೆ ರಾಜನ್ ಅಯ್ಯರ್ ಖದರಿಗೆ ಬೆರಗಾಗದವರಿಲ್ಲ.

ದೈವಾನುಗ್ರಹದಿಂದ ಅಯ್ಯರ್ಸ್ ಕೆಫೆಯ ವ್ಯಾಪಾರ ಸಕಾಲದಲ್ಲಿ ಕೈಹತ್ತಲಾಗಿ ಅಯ್ಯರಿಗೆ ತನ್ನ ನಾಲ್ಕು ಹೆಣ್ಮಕ್ಕಳನ್ನು ಒಂದು ದಡ ಸೇರಿಸುವುದು ಅಂಥಾ ದೊಡ್ಡ ಶ್ರಮವೆನಿಸಲಿಲ್ಲ. ಮೊದಮೊದಲು ಹಿರಿಮಗ ಸುಬ್ರಹ್ಮಣ್ಯ ಹೋಟೆಲಿನಲ್ಲಿ ಅಯ್ಯರಿಗೆ ಒತ್ತಾಸೆಯಾಗಿ ನಿಂತಿದ್ದನಾದರೂ ಕ್ರಮೇಣ ಗಲ್ಲಾ ಲೆಕ್ಕಾಚಾರದಲ್ಲುಂಟಾಗುತ್ತಿದ್ದ ಏರುಪೇರು ಗಮನಿಸಿದ ಅಯ್ಯರ್ ಆತನಿಗೊಂದು ಸ್ಟೀಲ್ಪಾತ್ರೆ ಅಂಗಡಿ ಹಾಕಿಕೊಟ್ಟು ನಯವಾಗಿಯೇ ಹೋಟೆಲ್ಲಿನಿಂದ ದೂರವಿರಿಸಿದ್ದರು. ಈಗೆರಡು ವರ್ಷಗಳಿಂದ ಇನ್ನಿಬ್ಬರು ಗಂಡು ಮಕ್ಕಳು ಬಾಂಬೆ ಸೇರಿ ಉದ್ಯೋಗ ಉದ್ಯಮ ಎಂದು ತೊಡಗಿಸಿಕೊಂಡಿದ್ದರು. ಕಿರಿಮಗಳು ಶಾರದೆ ಡಿಗ್ರೀ ಓದುತ್ತಿದ್ದರೆ ಕೊನೇ ಮಗ ಗಣೇಶ ಇನ್ನೂ ಹೈಸ್ಕೂಲಿಗೆ ಹೋಗುತ್ತಿದ್ದ.

ಕೆಲವರುಷಗಳ ಕೆಳಗೆ ಅಯ್ಯರ್ ಹೋಟೆಲ್ಲಿನ ರಜತೋತ್ಸವದ ಆಚರಣೆಗೆಂದು ಅಯ್ಯರ್ಸ್ ಕೆಫೆಯನ್ನು ನವೀಕರಣಗೊಳಿಸುವ ಬಗ್ಗೆ ಯೋಚಿಸುತ್ತಿದ್ದರು. ಅದೇ ಹೊತ್ತಿಗೆ ಕಾಕತಾಳೀಯವಾಗಿ ಹೋಟೆಲ್ಲಿನ ಪಕ್ಕದ ಮಳಿಗೆಗಳು ಖಾಲಿಯಾಗುತ್ತಿರುವ ಸುದ್ದಿ ಕಿವಿಗೆ ಬಿತ್ತು. ವ್ಯವಹಾರ ಚತುರರಾದ ಅಯ್ಯರ್ ಕೂಡಲೇ ಸಂಬಂಧಿಸಿದವರೊಡನೆ ಡೀಲು ಕುದುರಿಸಿ ಬ್ಯಾಂಕಿನಿಂದ ಸ್ವಲ್ಪ ಸಾಲ ಪಡೆದು ಹೋಟೆಲನ್ನು ತಕ್ಕಮಟ್ಟಿಗೆ ವಿಶಾಲವಾಗಿಯೇ ವಿಸ್ತರಿಸಿಬಿಟ್ಟರು. ಹಿಂದಿನಿಂದಲೂ ಇಡೀ ಊರಲ್ಲೇ ಡಿಗ್ರೀ ಕಾಫಿ ಹಾಗೂ ಖಾಲಿ ದೋಸೆಗೆ ಅಯ್ಯರ್ಸ್ ಕೆಫೆ ಫೇಮಸ್ಸಾಗಿತ್ತು. ಈಗಾಗಲೇ ಹೆಸರಾಗಿದ್ದ ಹೋಟೆಲ್ಲಿನ ಮೆನು ಕಾರ್ಡಿಗೆ ವಿಸ್ತರಣೆಯ ನಂತರ ಶುಚಿರುಚಿಯಾದ ಮತ್ತಷ್ಟು ಹೊಸ ವ್ಯಂಜನಗಳು ಸೇರಿ ಅಯ್ಯರ್ಸ್ ಕೆಫೆಯ ವ್ಯಾಪಾರ ಚೆನ್ನಾಗಿಯೇ ಕುದುರಿತು. ಹೀಗಾಗಿ ಬಹುಬೇಗ ಊರಿನ ಗಣ್ಯಉದ್ಯಮಿಗಳ ಪಟ್ಟಿಯಲ್ಲಿ ರಾಜನ್ ಅಯ್ಯರ್ ಹೆಸರೂ ಸೇರಿಕೊಂಡಿತು.

ಅಯ್ಯರ್ ಹೆಚ್ಚು ಕಲಿತಿರದಿದ್ದರೂ ವ್ಯವಹಾರದಲ್ಲಿ ಬಲು ಚುರುಕು. ವಹಿವಾಟು ಹೆಚ್ಚಿದಂತೆಲ್ಲಾ ಸುಳ್ಳು ಲೆಕ್ಖ ಬರೆದು ಆದಾಯ ತೆರಿಗೆ ವಂಚಿಸುವುದು, ಆಗೊಮ್ಮೆ ಈಗೊಮ್ಮೆ ನಡೆಯುತ್ತಿದ್ದ ತೆರಿಗೆ ದಾಳಿಗಳನ್ನು ನಿಭಾಯಿಸುವುದು ಇತ್ಯಾದಿಗಳಲ್ಲಿ ಬಹುಬೇಗ ಪರಿಣಿತಿ ಗಳಿಸಿ ಸಾಕಷ್ಟು ಕಪ್ಪುಹಣ ಗುಡ್ಡೆ ಹಾಕಿಕೊಂಡಿದ್ದರು. ಆ ದಿನಗಳಲ್ಲಿ ಒಮ್ಮೆ ಮೊರಾರ್ಜಿಯವರ ನೇತೃತ್ವದ ಸರ್ಕಾರ ಇದ್ದಕ್ಕಿದ್ದಂತೆ ಒಂದು, ಐದು ಮತ್ತು ಹತ್ತು ಸಾವಿರದ ದೊಡ್ಡ ನೋಟುಗಳನ್ನು ಅಮಾನ್ಯಗೊಳಿಸಿದ್ದು ನಿಜಕ್ಕೂ ಅಯ್ಯರನ್ನು ಗಾಬರಿಬೀಳಿಸಿತ್ತು. ಹಠಾತ್ತನೆ ಎದುರಾದ ಈ ಸವಾಲಿನಿಂದ ಅಯ್ಯರ್ ತಕ್ಷಣಕ್ಕೆ ವಿಚಲಿತಗೊಂಡರಾದರೂ ಬೇಗನೇ ಚೇತರಿಸಿಕೊಂಡರು. ಜಾಣ್ಮೆಯಿಂದ ಸರ್ಕಾರಿ ಹಾಗೂ ಸಾರ್ವಜನಿಕ ವಲಯದಲ್ಲಿ ಅವರು ಹೊಂದಿದ್ದ ಉತ್ತಮ ಸಂಪರ್ಕಗಳನ್ನು ಸಮರ್ಥವಾಗಿ ಬಳಸಿಕೊಂಡರು. ಹೆಚ್ಚಿನ ನಷ್ಟವಿಲ್ಲದೇ ಪರಿಸ್ಥಿತಿಯನ್ನು ಅತ್ಯಂತ ಚತುರತೆಯಿಂದ ನಿರ್ವಹಿಸಿದ ಪರಿ ಅವರ ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿತು. ಈ ಎಲ್ಲ ಬೆಳವಣಿಗೆಗಳಿಂದ ಅಯ್ಯರ್ ಊರಿನ ಉದ್ಯಮಿಗಳ ವಲಯದಲ್ಲಿ ಸೈ ಅನ್ನಿಸಿಕೊಂಡರು.

ಬದುಕಿನ ಸನ್ನಿವೇಶಗಳು ಒದಗಿಸುವ ಅವಕಾಶಗಳನ್ನು ಗುರುತಿಸಿ ಅವುಗಳನ್ನು ಸಮರ್ಥವಾಗಿ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಕಲೆ ಅಯ್ಯರಿಗೆ ಕರಗತವಾಗಿತ್ತು. ಸುಧೀರ್ಘ ಜೀವನಾನುಭವ ಆ ಹೊತ್ತಿಗಾಗಲೇ ಅದನ್ನವರಿಗೆ ಕಲಿಸಿಕೊಟ್ಟಿತ್ತು. ಹಾಗಾಗಿ ಹೈದರಾಬಾದಿನಲ್ಲಿ ನಡೆದ ಯಶಸ್ವೀ ಹೋಟೆಲ್ ಉದ್ಯಮಿಗಳ ಸಮಾವೇಶದಲ್ಲಿ ಹೊಸದಾಗಿ ಪರಿಚಿತರಾದ ಕೃಷ್ಣಯ್ಯರ್ ಜೊತೆ ಆತ್ಮೀಯತೆಯಿಂದ ನಡೆದುಕೊಂಡು ಮೊದಲ ಭೇಟಿಯಲ್ಲೇ ಒಂದು ಹಂತದ ಸಲುಗೆ ಬೆಳೆಸುವಲ್ಲಿ ಸಫಲರಾದರು. ಊರಿಗೆ ಹಿಂದಿರುಗಿದವರೇ ಜಾತ್ಯಸ್ಥರಾದ ಕೃಷ್ಣಯ್ಯರ್ ಕುಟುಂಬದ ಹಿನ್ನಲೆ, ಕುಲ, ಗೋತ್ರ, ಆರ್ಥಿಕ ಸ್ಥಿತಿಗತಿ ಇತ್ಯಾದಿ ಮಾಹಿತಿ ಸಂಗ್ರಹದಲ್ಲಿ ಮಗ್ನರಾಗಿಬಿಟ್ಟರು. ಕೃಷ್ಣಯ್ಯರಿಗೆ ತಮ್ಮ ಹಿರಿಮಗ ಸುಬ್ಬುವಿಗೆ ಆಗಬಹುದಾದಂಥಾ ಮಗಳಿರುವುದಾಗಿ ತಿಳಿದುಬಂತು. ಆತುರ ಪಡದೆ, ಕಲೆಹಾಕಿದ ಉಳಿದ ಮಾಹಿತಿಗಳ ಸತ್ಯಾಸತ್ಯತೆಯನ್ನು ಖಾತ್ರಿಪಡಿಸಿಕೊಂಡರು. ಮುಂದೆ ತಮ್ಮ ವ್ಯವಹಾರದ ಅಭಿವೃದ್ಧಿಗೆ ಪೂರಕವಾಗುವಂಥಾ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಸಿದ್ಧರಾದರು.
ಹೆಂಡತಿಯೊಡನೆ ಈ ಸಂಬಂಧದ ವಿಚಾರವನ್ನು ಚರ್ಚಿಸುವ ಉಮೇದಿನಲ್ಲಿ ಅಂದು ಸಂಜೆ ಅಯ್ಯರ್ ಹೋಟೆಲ್ಲಿನಿಂದ ಬೇಗನೇ ಮನೆಗೆ ಹೊರಟರು. ಆದರೆ ಸೀತಮ್ಮ ಮನೆಯಲ್ಲಿರಲಿಲ್ಲ. ಕೆಲದಿನಗಳಿಂದ ತಿರುವಾರೂರಿನ ರಾಮಮಂದಿರದಲ್ಲಿ ಎಲ್ಲಿಂದಲೋ ಬಂದಿದ್ದ ಸನ್ಯಾಸಿಗಳೊಬ್ಬರು ತಂಗಿದ್ದರೆಂದು ಅಯ್ಯರ್ ಕೇಳಿ ತಿಳಿದಿದ್ದರು. ಸೀತಮ್ಮ ಸ್ವಾಮೀಜಿಗಳ ಪ್ರವಚನ ಕೇಳಲು ಹೋಗಿದ್ದು ಕೇಳಿ ನಿರಾಸೆಯಾಯಿತು. ಸೀತಳಿಗೆ ಹಿಂದಿನಿಂದಲೂ ಇದ್ದ ಈ ಸಾಧುಸಂತರ ಗೀಳು ಇತ್ತೀಚೆಗೆ ಸ್ವಲ್ಪ ಹೆಚ್ಚಾಗಿದ್ದುದನ್ನು ಅಯ್ಯರ್ ಗಮನಿಸಿದ್ದರು. ’ಇವತ್ತೇ ಹೋಗ್ಬೇಕಿತ್ತ ಇವ್ಳಿಗೆ ಪ್ರವಚ್ನಕ್ಕೇ…’ ಅಂತ ಅಂಡು ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿದ್ದರು.

ಪುಣ್ಯಕ್ಕೆ ಅಯ್ಯರನ್ನು ಹೆಚ್ಚು ಕಾಯಿಸದೆ ಅಂದು ಸೀತಮ್ಮ ಬೇಗನೇ ಹಿಂತಿರುಗಿದರು. ಬಂದವರೇ “ಏನೂಂದ್ರೇ ಇವತ್ಮನೇಗೆ ಬೇಗ್ನೆ ಬಂದಿರೋಹಾಗಿದೇ…ಯಾವಾಗ್ಬಂದ್ರೀ? ತುಂಬಾ ಹೊತ್ತಾಯ್ತಾ? ಕಾಫೀ ಕುಡುದ್ರಾ…ಇಲ್ಲಾ ಬೆರಸ್ಕೊಡ್ಲಾ?” ಎಂದು ಉತ್ತರಕ್ಕೇ ಎಡೆಗೊಡದೇ ಪ್ರಶ್ನೆಗಳನ್ನು ಸುರಿಸಿದರು. “ಏ…ಕಾಫೀಗೀಫೀ ಏನ್ಬೇಡ್ವೆ, ನಮ್ಸುಬ್ಬೂಗೆ ಒಂದೊಳ್ಳೇ ಸಂಬಂಧ ಕುದ್ರೋಹಾಗಿದೆ. ನಿನ್ಹತ್ರ ಮಾತಾಡೋಣಾಂತ ಬಂದ್ರೆ ನೀ ನೋಡುದ್ರೆ ಅದೆಲ್ಲೋ ಹೋಗಿ ಕೂತಿದಿ” ಅಂದರು. ಅದಕ್ಕೆ ಸೀತಮ್ಮ “ಏ…ಅದ್ಯಾಕ್ ಹಂಗಂತೀರಿ. ಅವಧೂತರಂತೆ ಕಣ್ರೀ…ಮುಖದಲ್ಲಿ ಅದೇನ್ ಕಳೇಂತೀರಿ,” ಪ್ರಸಾದ ಕೈಗಿಟ್ಟು ಜೊತೆಗೆ ತಂದಿದ್ದ ಅವಧೂತರ ಫೋಟೋ ತೋರಿಸಿ ಹೇಳಿದರು. ಪ್ರಸಾದ ತೆಗೆದುಕೊಂಡ ಅಯ್ಯರ್ “ನಮ್ಮಲ್ಲೇನ್ ದೇವ್ರುಗಳಿಗೆ ಬರವೇ? ಈ ನರಮನುಷ್ಯರ ಫೋಟೋಗಳ್ನೂ ನೀನು ದೇವರ್ಮನೇ ತುಂಬ ಇಟ್ರೆ ಜಾಗ ಎಲ್ಲೇ ಸಾಕಾಗ್ಬೇಕೂ?” ಎಂದು ಲೇವಡಿಮಾಡಿದರು. “ಅಯ್ಯೋ ಬಿಡ್ತು ಅನ್ನಿ, ಯಾವ್ಹುತ್ತದಲ್ಲಿ ಯಾವ್ಹಾವೋ ಬಲ್ಲೋರ್ಯಾರು… ಹಾಗೆಲ್ಲ ಅನ್ಬಾರ್ದಪ್ಪಾ ಅಂಥೋರ ಆಶೀರ್ವಾದ ಇರ್ಬೇಕು ನಮ್ಮೇಲೆ” ಸೀತಮ್ಮ ಭಯಭಕ್ತಿಯಿಂದ ಗಲ್ಲಬಡಿದುಕೊಂಡು ಫೋಟೋ ತೆಗೆದುಕೊಂಡು ಹೋಗಿ ದೇವರಕೋಣೆಯಲ್ಲಿ ಇಟ್ಟುಬಂದರು.

ಅಯ್ಯರ್ ತಡಮಾಡದೆ ನೇರವಾಗಿ ವಿಚಾರಕ್ಕೆ ಬಂದರು. “ನೋಡೇ…, ಹುಡ್ಗೀ ವಿಶಾಖಪಟ್ನದ್ದು, ನಮ್ಮೋರೇ…, ಹುಡ್ಗೀ ಹೆಸ್ರು ವೈದೇಹಿ, ಅವರಪ್ಪ ಕೃಷ್ಣಯ್ಯರ್ ದೊಡ್ಡ ಕುಳ. ಭಾಳಾ ಒಳ್ಯೋರು… ನಮ್ಸುಬ್ಬೂಗೆ ಅದೃಷ್ಟ ಇದ್ರೆ ಈ ಸಂಬಂಧ ಕೂಡ್ಬರುತ್ತೇನ್ಸತ್ತೆ ನನ್ಗೆ” ರೂಪದಲ್ಲಿ ಸುಬ್ಬು ತನ್ನ ತಂದೆತಾಯಿಯರಿಬ್ಬರನ್ನೂ ಹೋಲುತ್ತಿರಲಿಲ್ಲ. ಚಿಕ್ಕವಯಸ್ಸಿಗೇ ತಲೆ ಬೊಕ್ಕಲು ಬೀಳುತ್ತಿತ್ತು. ಉಬ್ಬಿದ ಹಲ್ಲುಗಳು. ಒಳಗೆ ಗುಳಿಯಲ್ಲಿದ್ದಂತೆ ಕಾಣುತ್ತಿದ್ದ ದೊಡ್ಡ ಕಣ್ಣುಗಳು. ಎತ್ತರವಾಗಿದ್ದ ಶರೀರ ಸಪೂರವಾಗಿದ್ದರಿಂದ ತಾಳೆಮರದಂತೆ ಕಾಣುತ್ತಿದ್ದ. ಬಾಯ್ತೆರೆದು ಮಾತಾಡಿದರೆ ಮಾತ್ರ ಅವನ ಕೀರಲು ದನಿ ಆ ವ್ಯಕ್ತಿತ್ವಕ್ಕೆ ತಾಳೆಯಾಗುತ್ತಿರಲಿಲ್ಲ. “ಅಲ್ರೀ…ದೊಡ್ಜನಾಂತೀರಿ, ಮಗ್ಳನ್ನ ಇಷ್ಟ್ ದೂರ ಕೊಡಕ್ಕೊಪ್ತಾರೇನ್ರೀ” ಸೂಕ್ಷ್ಮವಾಗಿ ಅನುಮಾನ ಹೊರಹಾಕಿದರು. “ಋಣಾನುಬಂಧ ಕೂಡ್ಬಂದ್ರೆ ಯಾರ್ತಪ್ಸಕ್ಕಾಗತ್ತೆ, ನಮ್ ಪ್ರಯತ್ನಾ ನಾವ್ಮಾಡೋದು ಬಾಕಿ ದೈವೇಚ್ಛೆ, ನಿನಗೊಪ್ಗೆ ತಾನೆ” ಅಯ್ಯರ್ ಕೇಳಿದರು. “ನೀವು ಯೋಚ್ನೆ ಮಾಡೇ ತೀರ್ಮಾನ ತಗೊಂಡಿರ್ತೀರಿ, ಇನ್ನದ್ರಲ್ ನನ್ದೇನಿದೆ? ದೇವ್ರಿದಾನೆ ಮುಂದ್ವರ್ಯೋಣ” ಎಂದು ಒಪ್ಪಿಗೆ ಸೂಚಿಸಿ ಅಯ್ಯರನ್ನು ಊಟಕ್ಕೆಬ್ಬಿಸಿದರು.

ಊಟ ಮುಗಿಸಿದ ಅಯ್ಯರ್ ವೀಳ್ಯ ಮೆಲ್ಲುತ್ತಾ ಮನೆಹೊರಗಿನ ಜಗುಲಿಯ ಮೇಲೆ ಬಂದು ಕುಳಿತರು. ತಮಗೂ ಮತ್ತು ಕೃಷ್ಣಯ್ಯರ್ ಅವರಿಗೂ ಒಳ್ಳೆಯ ಗೆಳಯರಾಗಿದ್ದ ನೆಲ್ಲೂರಿನ ಲಕ್ಷ್ಮೀವಿಲಾಸ್ ಹೋಟೆಲ್ಲಿನ ಮಾಲೀಕರಾದ ವೆಂಕಟೇಶ್ವರ ರಾಯರಿಗೆ ಬರೆಯಲು ಆಲೋಚಿಸಿದ್ದ ಪತ್ರದ ಬಗ್ಗೆ ಸ್ವಲ್ಪ ಹೊತ್ತು ಧೇನಿಸಿದರು. ಬೀಸುತ್ತಿದ್ದ ತಣ್ಣನೆ ಗಾಳಿ ಹಿತವೆನಿಸಿತ್ತು. ಸ್ವಲ್ಪ ಸ್ಪಷ್ಟತೆ ಮೂಡಿದಂತಾಗಿ ಮನಸ್ಸಿಗೆ ತುಸು ಸಮಾಧಾನವೆನಿಸಿತು. ಚಿಟಿಕೆ ನಶ್ಯ ಮೂಗೇರಿತು. ಖುಷಿಯೆನಿಸಿ ಮಧ್ಯಮಾವತಿ ರಾಗದ ತುಣುಕೊಂದನ್ನು ಮೆಲ್ಲನೆ ಗುನುಗುತ್ತಾ ತಮ್ಮ ಕೋಣೆಗೆ ತೆರಳಿದರು. ಕಾಗದ ಪೆನ್ನು ತೆಗೆದುಕೊಂಡು ಯೋಚಿಸಿದ್ದಂತೆ ರಾಯರಿಗೆ ಪತ್ರಬರೆದರು. ಬರೆದ ಪತ್ರವನ್ನೊಮ್ಮೆ ಜತನದಿಂದ ಓದಿದರು. ನಿರುಮ್ಮಳರಾಗಿ ಹಾಸಿಗೆಯಮೇಲೆ ಅಡ್ಡಾದರು.

ಮರುದಿನ ಬೆಳಗ್ಗೆ ಲಗುಬಗೆಯಿಂದ ಎದ್ದ ಅಯ್ಯರ್ ನಿತ್ಯಕರ್ಮಗಳನ್ನು ಮುಗಿಸಿ ಈಗಾಗಲೇ ಬರೆದಿಟ್ಟಿದ್ದ ಪತ್ರವನ್ನು ಮೊದಲ ಅಂಚೆಗೆ ಪೋಸ್ಟ್ ಮಾಡಿ ನಂತರ ಹೋಟೆಲ್ಲಿಗೆ ಹೋದರು. ವೆಂಕಟೇಶ್ವರರಾಯರ ಬಳಿ ಫೋನ್ ಇಲ್ಲದ ಕಾರಣ ಅಯ್ಯರಿಗೆ ರಾಯರನ್ನು ಫೋನಿನ ಮೂಲಕ ಸಂಪರ್ಕಿಸುವ ಅವಕಾಶವಿರಲಿಲ್ಲ. ಮೂರು ದಿನದ ನಂತರ ರಾಯರೇ ಟ್ರಂಕಾಲ್ ಬುಕ್ ಮಾಡಿ ಅಯ್ಯರನ್ನು ಸಂಪರ್ಕಿಸಿ ಅಂದೇ ತುರ್ತಾಗಿ ಕೃಷ್ಣಯ್ಯರಿಗೆ ಪತ್ರಬರೆಯುವುದಾಗಿ ತಿಳಿಸಿದರು. ಎರಡು ಮೂರುವಾರಗಳ ಸತತ ಪತ್ರ ವ್ಯವಹಾರ ನಡೆದು ಹುಡುಗ ಹುಡುಗಿಯರ ಫೋಟೋಗಳ ವಿನಿಮಯವೂ ನಡೆಯಿತು. ಬಳಿಕ ಕೃಷ್ಣಯ್ಯರ್ ಮೊದಲ ಅಳಿಯ ಪರಮೇಶ್ವರನ್ರವರ ಮದರಾಸಿನ ಮನೆಯಲ್ಲಿ ಹುಡುಗಿ ನೋಡುವ ಶಾಸ್ತ್ರ ಇಟ್ಟುಕೊಳ್ಳುವುದೆಂದು ತೀರ್ಮಾನವಾಯಿತು. ಪರಮೇಶ್ವರನ್ ಮದರಾಸಿನ ಹೈಕೋರ್ಟಿನಲ್ಲಿ ಹಿರಿಯ ವಕೀಲರಾಗಿದ್ದರು. ವಿಶಾಖಪಟ್ಟಣ ತಿರುವಾರೂರಿನಿಂದ ಬಹಳ ದೂರವಿದ್ದ ಕಾರಣ ಮದ್ರಾಸಿನಲ್ಲಿ ಹೆಣ್ಣುನೋಡುವ ಈ ವ್ಯವಸ್ಥೆ ಉಭಯ ಪಕ್ಷಗಳಿಗೂ ಒಪ್ಪಿಗೆಯಾಯಿತು.
ನಿಗದಿತ ದಿನದಂದು ಬೆಳಗ್ಗೆ ಹೊತ್ತಿನಂತೆ ತಿರುವಾರೂರಿನಿಂದ ಬಸ್ಸಿನಲ್ಲಿ ಹೊರಟ ಅಯ್ಯರ್, ಸೀತಮ್ಮ ಮತ್ತು ಸುಬ್ಬು ಮಧ್ಯಾಹ್ನ ಊಟದ ವೇಳೆಗೆ ಮದರಾಸ್ ತಲುಪಿದರು. ಬಸ್ ನಿಲ್ದಾಣದ ಬಳಿಯಿದ್ದ ಹೋಟೆಲೊಂದರಲ್ಲಿ ರೂಮ್ ಮಾಡಿ ಅದೇ ಹೋಟೆಲ್ಲಿನಲ್ಲೇ ಊಟ ಮುಗಿಸಿ ಸ್ವಲ್ಪ ವಿಶ್ರಮಿಸಿದರು. ಬಳಿಕ ಮೂವರೂ ತಯಾರಾಗಿ ಆಟೋ ಹಿಡಿದು ಎಗ್ಮೋರಿನಲ್ಲಿದ್ದ ಪರಮೇಶ್ವರರ ಮನೆಗೆ ಹೋದರು. ಈಗಾಗಲೇ ಕೃಷ್ಣಯ್ಯರ್ ಕುಟುಂಬದ ಅಂತಸ್ತಿನ ಅರಿವಿದ್ದ ಅಯ್ಯರಿಗೆ ಈಗ ವಿಶಾಲವಾದ ಕಾಂಪೌಂಡಿನಲ್ಲಿದ್ದ ಪರಮೇಶ್ವರರ ದೊಡ್ಡಮನೆ, ಮನೆ ಮುಂದಿದ್ದ ಐಷಾರಾಮಿ ಕಾರನ್ನು ಕಂಡು ಒಂದು ಕ್ಷಣ ತಾವು ತಮ್ಮ ಅಂತಸ್ತಿಗೆ ಮೀರಿದ ಸಂಬಂಧ ಬಯಸುತ್ತಿರುವ ಭಾವನೆ ಮೂಡದಿರಲಿಲ್ಲ. ಗೇಟು ತೆಗೆದ ಸದ್ದು ಕೇಳಿ ಹೊರಬಂದ ಕೃಷ್ಣಯ್ಯರ್ ಮತ್ತವರ ಪರಿವಾರದವರು ಬಹಳ ಆತ್ಮೀಯತೆಯಿಂದ ಅಯ್ಯರ್ ಕುಟುಂಬವನ್ನು ಸ್ವಾಗತಿಸಿದರು. ಒಳ್ಳೆಯ ಅಭಿರುಚಿಯಿಂದ ಸಿಂಗರಿಸಲಾಗಿದ್ದ ದೊಡ್ಡ ಹಾಲಿನಲ್ಲಿ ಹಾಕಲಾಗಿದ್ದ ಮೆತ್ತನೆಯ ಸೋಫಾಗಳಲ್ಲಿ ಕುಳಿತು ಸ್ವಲ್ಪ ಹೊತ್ತು ಉಭಯ ಕುಶಲೋಪರಿ ಮಾತಾಡಿದರು. ಎಲ್ಲರಿಗೂ ಲಘು ಉಪಹಾರ ನೀಡಲಾಯಿತು.

ಸುಬ್ಬುವಿನ ಕಣ್ಣುಗಳು ಇನ್ನೂ ಕಾಣಿಸಿಕೊಳ್ಳದಿದ್ದ ವೈದೇಹಿಯ ನಿರೀಕ್ಷೆಯಲ್ಲಿದ್ದವು. ಅಷ್ಟರಲ್ಲಿ ತಲೆತಗ್ಗಿಸಿ ತಟ್ಟೆಯೊಂದರಲ್ಲಿ ಎಲ್ಲರಿಗೂ ಕಾಫಿ ಹಿಡಿದು ಬಂದ ವೈದೇಹಿಯ ಪ್ರವೇಶವಾಯಿತು. ಎಲ್ಲರಿಗೂ ಕಾಫೀಕೊಟ್ಟ ವೈದೇಹಿ ಅಯ್ಯರ್ ದಂಪತಿಗಳಿಗೆ ನಮಸ್ಕರಿಸಿ ಸೋಫಾದಲ್ಲಿ ಕುಳಿತಿದ್ದ ಕೃಷ್ಣಯ್ಯರ್ ಪಕ್ಕದಲ್ಲಿ ಹೋಗಿ ನಿಂತು ಸುಬ್ಬುವಿನತ್ತ ಓರೆನೋಟ ಬೀರಿದಳು. ವೈದೇಹಿಯ ಕಣ್ಣುಗಳು ಅರೆಕ್ಷಣ ಅವಳನ್ನೇ ಎವೆಯಿಕ್ಕದೆ ನೋಡುತ್ತಿದ್ದ ಸುಬ್ಬುವಿನ ಕಂಗಳನ್ನು ಸಂಧಿಸಿದುವು. ಒಡನೆ ನಸುನಾಚಿದ ವೈದೇಹಿಯ ಕಣ್ಣುಗಳು ನೆಲ ನೋಡಿದುವು.
“ಹುಡ್ಗೀಗೆ ಸಂಗೀತ ಬರುತ್ಯೇ?” ಅಯ್ಯರ್ ಕೇಳಿದರು. ವೈದೇಹಿಗೆ ಒಂದೆರಡು ಹಾಡುಗಳು ಗೊತ್ತಿತ್ತಾದರೂ ಆಕೆ ಸಂಗೀತವೇನೂ ಕಲಿತಿರಲಿಲ್ಲ. ತಿರುವಾರೂರಿನ ಜನರ ಸಂಗೀತ ಜ್ಞಾನದ ಅರಿವಿದ್ದ ಕೃಷ್ಣಯ್ಯರ್ ರಿಸ್ಕ್ ತೆಗದುಕೊಳ್ಳದೆ ಮಗಳಿಗೆ ಸಂಗೀತ ಬರುವುದಿಲ್ಲವೆಂದೂ ಅವಳಿಗೆ ಚಿತ್ರಕಲೆಯಲ್ಲಿ ಸಾಕಷ್ಟು ಪರಿಣಿತಿಯಿರುವುದಾಗಿಯೂ ತಿಳಿಸಿದರು. ವೈದೇಹಿಗೆ ಡ್ರಾಯಿಂಗ್ ಟೆಸ್ಟ್ ಕೊಡುವುದರಲ್ಲಿ ಅಯ್ಯರ್ಮನೆಯವರಿಗೆ ಆಸಕ್ತಿಯಿದ್ದಂತಿರಲಿಲ್ಲ. ಭಾರೀ ಶ್ರೀಮಂತರ ಮನೆಯ ಅಳಿಯನಾಗುವ ಸಾಧ್ಯತೆಯಿಂದ ಪುಳಕಗೊಂಡಿದ್ದ ಸುಬ್ಬುವಂತೂ ಮಾವನವರ ಆಸ್ತಿಪಾಸ್ತಿಯೆದರು ಸಂಗೀತ ಚಿತ್ರಕಲೆಗಳನ್ನು ಗೌಣವೆಂದೇ ಬಗೆದಿದ್ದ. ವೈದೇಹಿ ಒಳಗೆದ್ದು ಹೋದ ಮೇಲೆ ಮನೆಯ ಹಿರಿಯರು ಖಾಸಗಿಯಾಗಿ ಸುಬ್ಬು ಮತ್ತು ವೈದೇಹಿಯ ಅಭಿಪ್ರಾಯ ಕೇಳಿದಾಗ ಹುಡುಗ ಹುಡುಗಿಯರಿಬ್ಬರೂ ಪರಸ್ಪರ ಒಪ್ಪಿಗೆ ಸೂಚಿಸಿದರು.

ವೈದೇಹಿಯೇನೂ ಮಹಾ ರೂಪವತಿ ಎನ್ನುವಂತಿರಲಿಲ್ಲ. ಆದರೂ ಈಗಾಗಲೇ ಒಂದೆರಡು ಹೆಣ್ಣುಗಳಿಂದ ತಿರಸ್ಕೃತಗೊಂಡಿದ್ದ ಸುಬ್ಬುವನ್ನು ಆಕೆ ಒಪ್ಪಿದ್ದು ಸೀತಮ್ಮನವರಿಗೆ ಅಚ್ಚರಿಯನ್ನೂ ಸಂತೋಷವನ್ನೂ ಉಂಟುಮಾಡಿತು. ಔಪಚಾರಿಕವಾಗಿ ಕೃಷ್ಣಯ್ಯರ್ ಮದುವೆ, ವರೋಪಚಾರ ಇತ್ಯಾದಿ ವಿಷಯಗಳಲ್ಲಿ ಅಯ್ಯರ್ ಮನೆಯವರ ನಿರೀಕ್ಷೆಗಳೇನೆಂದು ಕೇಳಿದರು. ಚಾಣಾಕ್ಷರಾದ ಅಯ್ಯರ್ ಸಿರಿವಂತರ ಮನೆಯ ಹೆಣ್ಣುತರುವಾಗ ಸಣ್ಣಪುಟ್ಟ ಬೇಡಿಕೆಗಳನ್ನಿಟ್ಟು ಅಲ್ಪರಾಗುವುದು ಅವಿವೇಕವೆಂದು ಬಗೆದು “ಅಯ್ಯೋ ನಮ್ಕಡೆಯಿಂದೇನೂ ನಿರೀಕ್ಷೆಯಿಲ್ಲಪ್ಪ, ನಿಮ್ಮ ಮಗ್ಳ ಮದ್ವೆ ನೀವು ಅಚ್ಕಟ್ಟಾಗಿ ಮಾಡೇ ಮಾಡ್ತೀರಿ. ನಿಮಗ್ಗೊತ್ತಿರೂ ಹಾಗೆ ನಮ್ಮನೇಲೆಲ್ಲಾ ಸಂಗೀತ ರಸಿಕ್ರು. ಹಾಗಾಗಿ ಒಳ್ಳೇ ಮಂಗಳವಾದ್ಯ ಏರ್ಪಾಡು ಮಾಡಿ ಆರತಕ್ಷತೇಲಿ ಯಾವ್ದಾರೂ ಒಂದೊಳ್ಳೇ ಕಛೇರಿ ಇಡಿಸ್ಬಿಡಿ. ಬಾಕಿಯೆಲ್ಲಾ ನಿಮ್ಸಂತೋಷ್ದಂತೆ ನಡೀಲಿ” ಎಂದು ದೊಡ್ಡತನ ಮೆರೆದರು.

ಭಾವೀ ಬೀಗರಿಬ್ಬರೂ ದೂರದ ಊರುಗಳಲ್ಲಿದ್ದ ಕಾರಣ ಶುಭಕಾರ್ಯವನ್ನು ಮುಂದೂಡುವುದರಲ್ಲಿ ಅರ್ಥವಿಲ್ಲವೆಂದು ನಿರ್ಧರಿಸಿ ಅಂದೇ ಸರಳವಾಗಿ ನಿಶ್ಚಿತಾರ್ಥದ ಶಾಸ್ತ್ರವನ್ನೂ ನೆರವೇರಿಸಿಬಿಟ್ಟರು. ನಿಶ್ಚಿತಾರ್ಥದ ವೇಳೆ ವೈದೇಹಿ ಕೈಯಿಂದ ಸುಬ್ಬುವಿಗೆ ಚಿನ್ನದುಂಗುರ ತೊಡಿಸಿದ್ದನ್ನು ಕಂಡು ಅಯ್ಯರಿಗೆ ಹೆಣ್ಣಿನಮನೆಯವರು ಮಾನಸಿಕವಾಗಿ ಮೊದಲೇ ಈ ಸಮಾರಂಭಕ್ಕೆ ಸಿದ್ಧರಿದ್ದರೆನಿಸಿತು. ಅಯ್ಯರ್ ಮನೆಯವರು ಇಂಥ ಯಾವುದೇ ಸಿದ್ಧತೆಗಳಿಲ್ಲದೆ ಬಂದಿದ್ದರಿಂದ ಸೀತಮ್ಮನವರು ತಾವು ಧರಿಸಿದ್ದ ಉಂಗುರವನ್ನೇ ತೆಗೆದು ಸುಬ್ಬುವಿಗೆ ಕೊಟ್ಟು ವೈದೇಹಿಗೆ ತೊಡಿಸಲು ಹೇಳಿದರು. ವಧೂವರರಿಬ್ಬರೂ ನಾಚಿಕೆಯಿಂದ ಪರಸ್ಪರ ಉಂಗುರ ತೊಡಿಸಿಕೊಂಡದ್ದನ್ನು ಪರಮೇಶ್ವರರು ತಮ್ಮ ಹೊಸ ಕ್ಯಾನನ್ ಕ್ಯಾಮರಾದಲ್ಲಿ ವಿವಿಧ ಕೋನಗಳಿಂದ ಕ್ಲಿಕ್ಕಿಸಿದರು. ಉಭಯ ಪಕ್ಷದವರ ನಡುವೆ ಹಣ್ಣುಹಂಪಲುಗಳು ಮತ್ತು ಉಡುಗೊರೆಗಳಿದ್ದ ತಟ್ಟೆಗಳ ಬದಲಾವಣೆಯೂ ನಡೆಯಿತು. ಎರಡು ತಿಂಗಳ ನಂತರದಲ್ಲಿ ದೊರೆತ ಶುಭಮುಹೂರ್ತದಂದು ಸುಬ್ರಹ್ಮಣ್ಯ ಅಯ್ಯರ್ ಹಾಗೂ ವೈದೇಹಿಯ ವಿವಾಹವನ್ನು ನಿಶ್ಚಯಿಸಲಾಯಿತು. ಅಯ್ಯರ್ ಮತ್ತು ಮನೆಯವರು ಅಂದು ರಾತ್ರಿ ಮದ್ರಾಸಿನ ಹೋಟೆಲ್ಲಿನಲ್ಲೇ ಉಳಿದು ಮರುದಿನ ಬೆಳಗ್ಗೆ ತಿರುವಾರೂರಿಗೆ ಪಯಣ ಬೆಳೆಸಿದರು.
ನಾರಾಯಣ ಎಂ ಎಸ್


ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಮರೆಯಲಾಗದ ಮದುವೆ (ಭಾಗ 1): ನಾರಾಯಣ ಎಂ ಎಸ್

 1. ಕಥೆಯ ನಿರೂಪಣೆ ಹಾಗು ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ ನಿಮ್ಮ ಲೇಖನ ಓದಿ ತುಂಬಾ ಖುಷಿಯಾಯಿತು

 2. ಮದುವೆಯ ಸಿದ್ಧತೆಯ ಪ್ರಾರಂಭದ ದಿನಗಳು ಚೆನ್ನಾಗಿ ಮೂಡಿ ಬಂದಿದೆ ಮಧ್ಯ ಮಧ್ಯೆ ಮುಪ್ಪಿನಹುಳಿಯ
  ಪ್ರಸಂಗ ಹಳೆ ತಲೆಮಾರನ್ನು ನಿಚ್ಚಳವಾಗಿ ನೆನಪಿಸುತ್ತದೆ ಮರೆಯಲಾರದ ಮದುವೆಯ ಪ್ರಾರಂಭ ಮುಪ್ಪಿನ ಹುಳಿಯ ಸಾಹಸ ದೊಂದಿಗೆ ಆಗಿರುವುದು ಓದುಗರ ಕುತೂಹಲವನ್ನು ಎಚ್ಚರದಲ್ಲಿಡುತ್ತಿದೆ. ಲೇಖಕರು ಓದುಗರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಚಿನ್ನದ ಉಂಗುರವಿಲ್ಲ ಅಷ್ಟೇ!
  ಮದುವೆಯ ಮುಂದಿನ ಕಂತುಗಳನ್ನು ಎದುರುನೋಡುತ್ತಿದ್ದೇವೆ.

 3. ಮದುವೆಯ ಸಿದ್ಧತೆಯ ಪ್ರಾರಂಭದ ದಿನಗಳು ಚೆನ್ನಾಗಿ ಮೂಡಿ ಬಂದಿದೆ .ಮಧ್ಯ ಮಧ್ಯೆ ಮುಪ್ಪಿನಹುಳಿಯ
  ಪ್ರಸಂಗ ಹಳೆ ತಲೆಮಾರನ್ನು ನಿಚ್ಚಳವಾಗಿ ನೆನಪಿಸುತ್ತದೆ. ಮರೆಯಲಾರದ ಮದುವೆಯ ಪ್ರಾರಂಭ ಮುಪ್ಪಿನ ಹುಳಿಯ ಸಾಹಸ ದೊಂದಿಗೆ ಆಗಿರುವುದು ಓದುಗರ ಕುತೂಹಲವನ್ನು ಎಚ್ಚರದಲ್ಲಿಡುತ್ತಿದೆ. ಲೇಖಕರು ಓದುಗರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಚಿನ್ನದ ಉಂಗುರವಿಲ್ಲ ಅಷ್ಟೇ!
  ಮದುವೆಯ ಮುಂದಿನ ಕಂತುಗಳನ್ನು ಎದುರುನೋಡುತ್ತಿದ್ದೇವೆ.

Leave a Reply

Your email address will not be published. Required fields are marked *