ಮರೆಯಲಾಗದ ಮದುವೆ (ಕೊನೆಯ ಭಾಗ): ನಾರಾಯಣ ಎಮ್ ಎಸ್

ಅಯ್ಯರೊಂದಿಗೆ ಮಾತಾಡಿದ್ದು ಎಲ್ಲರಿಗೂ ಸಮಾಧಾನ ತಂದಿತ್ತು. ತನಿಯಾವರ್ತನದ ನಂತರ ಸಿಂಧು ಭೈರವಿ, ತಿಲಂಗ್ ಮತ್ತು ಶಿವರಂಜನಿಯಲ್ಲಿ ಹಾಡಿದ ದೇವರನಾಮಗಳು ಮುದ ಕೊಟ್ಟವು. ಕಛೇರಿ ಕೊನೆಯ ಭಾಗ ತಲುಪಿದ್ದರಿಂದ ಮೈಕು ಹಿಡಿದ ಮೋಹನ ವೇದಿಕೆ ಹತ್ತಿದ. ನೇದನೂರಿಯವರಿಂದ ಪ್ರಾರಂಭಿಸಿ, ಒಬ್ಬೊಬ್ಬರಾಗಿ ಪಿಟೀಲು, ಮೃದಂಗ, ಖಂಜಿರ ಮತ್ತು ತಂಬೂರಿಯಲ್ಲಿ ಸಾಥ್ ನೀಡಿದ ಪ್ರತಿಯೊಬ್ಬ ಕಲಾವಿದರ ಬಗ್ಗೆಯೂ ಒಂದೆರಡು ಒಳ್ಳೆಯ ಮಾತನಾಡಿ ಧನ್ಯವಾದ ಅರ್ಪಿಸಿದ. ಒಬ್ಬೊಬ್ಬರಿಗೂ ಧನ್ಯವಾದ ಹೇಳಿದ ಬೆನ್ನಲ್ಲೇ ಕ್ರಮವಾಗಿ ಆಯಾ ಕಲಾವಿದರಿಗೆ ಕೃಷ್ಣಯ್ಯರ್ ಖುದ್ದು ತಮ್ಮ ಹಸ್ತದಿಂದ ಸೂಕ್ತ ಮರ್ಯಾದೆಗಳೊಂದಿಗೆ ಗೌರವ ಸಲ್ಲಿಸಿದರು. ಬಹಶಃ ಅಯ್ಯರಿದ್ದಿದ್ದರೆ ಹೀಗೆ ಕೇವಲ ಔಪಚಾರಿಕವಾಗಿ ಧನ್ಯವಾದ ಸಲ್ಲಿಸದೆ ಇಡೀ ಕಛೇರಿಯ ವಿಸ್ತೃತವಾದ ವಿಮರ್ಶಾತ್ಮಕ ವಿಶ್ಲೇಷಣೆ ಮಾಡದೆ ಬಿಡುತ್ತಿರಲಿಲ್ಲ. ಇನ್ನೇನು ವಂದನಾರ್ಪಣೆಯ ಕಾರ್ಯಕ್ರಮ ಕೊನೆಯಾಯಿತೆಂದು ಕೊಳ್ಳುತ್ತಿರುವಾಗ ಸ್ವಭಾವತಃ ಮಿತಭಾಷಿಗಳಾದ ಕೃಷ್ಣಯ್ಯರ್ ಮೈಕೆತ್ತಿಕೊಂಡು ನಾಲ್ಕು ಮಾತನಾಡುವ ಅಭಿಲಾಶೆ ವ್ಯಕ್ತಪಡಿಸಿದ್ದು ನೆರೆದಿದ್ದವರನ್ನು ಅಚ್ಚರಿಗೊಳಿಸದಿರಲಿಲ್ಲ.

ಮೈಕು ಹಿಡಿದು ಗಂಟಲು ಸರಿಮಾಡಿಕೊಂಡ ಕೃಷ್ಣಯ್ಯರ್ ಮಾತನಾಡಲಾರಂಭಿಸಿದರು. “ನನಗೆ ಹೆಚ್ಚಿಗೆ ಭಾಷಣ ಬಿಗಿದು ಅಭ್ಯಾಸವಿಲ್ಲ, ಹಾಗೆ ನೋಡಿದರೆ ವೇದಿಕೆ ಮೇಲೆ ನಿಂತು ಮಾತಾಡಕ್ಕೆ ಸ್ವಲ್ಪ ಸಂಕೋಚಾಂತಾನೇ ಹೇಳ್ಬೋದು. ಆದ್ರೂ ಕರ್ತವ್ಯಾ ಅಂತ್ಬಂದಾಗ ವಿಮುಖನಾಗ್ಬಾರ್ದು ಅನ್ನೋ ಒಂದೇ ಕಾರಣಕ್ಕೆ ಇವತ್ತು ಮೈಕ್ ಹಿಡ್ದು ಹೀಗ್ನಿಮ್ಮುಂದೆ ನಿಂತಿದೀನಿ” ಎಂದು ಒಮ್ಮೆ ಸುತ್ತಲೂ ನೋಡಿದರು. ಶ್ರೋತೃಗಳು ನಿಶ್ಶಬ್ದವಾಗಿ ಕುತೂಹಲದಿಂದ ಕಾಯುತ್ತಿದ್ದರು. “ಯಾವ್ದೇ ಒಂದ್ಕೆಲ್ಸ ಯಶಸ್ವಿಯಾಗಿ ಪೂರ್ಣವಾಗ್ಬೇಕಾದ್ರೆ ನಾಲ್ಕುಜನಗಳ ಸಹಕಾರ ಅನಿವಾರ್ಯ. ಇನ್ನು ಈಥರ ಮದ್ವೆ ನಡೆಸ್ಬೇಕೂಂದ್ರೆ ನೂರಾರ್ಜನ ಕೈಜೋಡಿಸ್ಲೇ ಬೇಕು. ಏನೇ ದುಡ್ಡೂ ಕಾಸೂ ಇದ್ರೂ ಒಂದಷ್ಟು ನಂಬಿಕಸ್ಥರ ಒಂದು ಟೀಮಂತೂ ಬೇಕೇಬೇಕಾಗತ್ತೆ. ಏನೋ ನನ್ ಪುಣ್ಯ, ಈ ವಿಚಾರದಲ್ಲಿ ನಂಗೆ ದೈವಾನುಗ್ರಹ ಚೆನ್ನಾಗೇ ಇದೆ. ನನ್ಸುತ್ತಾ ಮುತ್ತಾ ನನ್ನ ಹಿತೈಷಿಗಳ ದಂಡೇ ಇದೆ. ಹಾಗಾಗಿ ಅಂಥ ನಿಮ್ಮೆಲ್ಲರ ಪ್ರತ್ಯಕ್ಷ ಪರೋಕ್ಷ ಸಹಕಾರದಿಂದ ನೆನ್ನೆ ಮತ್ತೀವತ್ತು ಎಲ್ಲಾ ಕಾರ್ಯಕ್ರಮಾನೂ ಅಚ್ಕಟ್ಟಾಗಿ ನಡೀತು. ನಿಮ್ಮೆಲ್ಲರ ತುಂಬು ಹೃದಯದ ಸಹಕಾರಕ್ಕೆ ನಾನು ಚಿರಋಣಿ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು” ಸಭಾಂಗಣ ಚಪ್ಪಾಳೆಯಿಂದ ತುಂಬಿಹೋಯಿತು.

ಎರಡೂ ಕೈಗಳನ್ನೆತ್ತಿ ಸ್ವಲ್ಪ ಸುಮ್ಮನಿರುವಂತೆ ನರೆದಿದ್ದವರನ್ನು ವಿನಂತಿಸಿದ ಕೃಷ್ಣಯ್ಯರ್ ಮಾತು ಮುಂದುವರೆಸಿದರು. “ಎಂಥದ್ದೇ ಟೀಮಿದ್ರು ಅದಕ್ಕೊಬ್ಬ ಲೀಡ್ರು ಬೇಕಲ್ವೇ… ಮಾರ್ಗದರ್ಶನ ಮಾಡಕ್ಕೆ ಒಬ್ಬ ನಾಯ್ಕಾಂತ ಇಲ್ದಿದ್ರೆ ಯಾವ್ಕೆಲ್ಸ ತಾನೇ ಆಗತ್ತೆ ಹೇಳಿ?” ಕೃಷ್ಣಯ್ಯರ್ ಏನು ಹೇಳಲು ಹೊರಟಿದ್ದರೆಂಬುದು ಯಾರಿಗೂ ತಿಳಿಯದೆ ಎಲ್ಲರೂ ಗೊಂದಲಕ್ಕೆ ಬಿದ್ದಂತಿತ್ತು. “ಅಂಥಾ ನಾಯ್ಕಾನೇ ಸೋತು ಕೈಚೆಲ್ಲಿ ಕೂತ್ರೆ ಗುರಿ ಹ್ಯಾಗೆ ತಲ್ಪಕ್ಕಾಗತ್ತೆ?! ನಾನಿದೆಲ್ಲಾ ಈಗ್ಯಾಕ್ ಹೇಳ್ತಿದೀನೀಂದ್ರೆ… ನೆನ್ನೆ ಇಲ್ಲಿ ಅಂಥದ್ದೊಂದು ಘಟನೆ ನಡೀತು. ನಾಯ್ಕ ಅನ್ನುಸ್ಕೊಂಡೋನು ನಾನು ಸೋತು ಕೈಚೆಲ್ಲಿ ಕೂರೋಂಥ ಪರಿಸ್ಥಿತಿ ಬಂದಿತ್ತು. ದೇವ್ರು ದೊಡ್ಡೋನು. ಇಲ್ಲಾ ಕಣಪ್ಪ ಇದ್ನಿನ್ಕೈಲಿ ಆಗೋ ಕೆಲ್ಸ ಅಲ್ಲಾ, ಸ್ವಲ್ಪ ಪಕ್ಕಕೆ ಬಾ…ನಿನ್ಸಹಾಯಕ್ಕೆ ನಾನಿನ್ನೊಬ್ಬ ನಾಯ್ಕನ್ನ ಕಳ್ಸಿದೀನಿ. ಎಲ್ಲಾ ಅವ್ನಿಗೆ ಬಿಟ್ಬಿಡೂ…ಅವ್ನೆಲ್ಲಾ ನೋಡ್ಕೋತಾನೇಂದ. ಇವತ್ತು ಭಾಗವತರು ಹಾಡಿದ್ರಲ್ಲ ನಂಬಿ ಕೆಟ್ಟವರಿಲ್ಲವೋ…ಅಂತ, ಹಾಗೇ ನಾನೂ ಅವನನ್ನಂಬಿ ಕೃಷ್ಣಾ…ವಾಸುದೇವಾ…ಮುರಳೀಧರಾಂತ ನೆಮ್ದಿ ತಗೊಂಬಿಟ್ಟೆ. ನಾ ನಂಬಿದ ಮುರಳೀಧರ ನನ್ಕೈಬಿಡ್ದೆ ದಡ ಸೇರ್ಸಿದಾನೆ…ನಿಜ ಹೇಳ್ತಿದೀನಿ ಅವ್ನಿಲ್ದೆ ಇದ್ದಿದ್ರೆ ಖಂಡಿತ ಈ ಮದ್ವೆ ನಡೀತಿರ್ಲಿಲ್ಲ, ಆತ ಬೇರೆ ಯಾರೂ ಅಲ್ಲ ಅವ್ನು ನಂಗಳಿಯಾನೇ ಆಗ್ಬೇಕು” ಎಂದು ಅಭಿಮಾನದಿಂದ ಹೇಳಿ ಮುರಳಿಯತ್ತ ತಿರುಗಿ “ಏ ಮುರ್ಳೀ ಬಾಪ್ಪಾ ಇಲ್ಲೀ ವೇದ್ಕೇಮೇಲ್ಬಾ ರಾಜ, ಎಲ್ಲಿ ನಿನ್ಹೆಂಡ್ತಿ ಎಲ್ಲಿ ಅವಳ್ನೂ ಕರಿ” ಎಂದು ಮುರಳಿ ವೇದಿಕೆಯೇರಲು ಕಾದು ನಿಂತರು. ಮನೆಯವರು ಮೊದಲ್ಗೊಂಡು ಜನರೆಲ್ಲಾ ಚಪ್ಪಾಳೆ ತಟ್ಟುತ್ತಾ “ಮುರ್ಳೀ, ಮುರ್ಳೀ, ಮುರ್ಳೀ, ಮುರ್ಳೀ…” ಎಂದು ಕೂಗಲಾರಂಭಿಸಿದರು. ಮುರಳಿಗಾದ ಮುಜಗರ ಅಷ್ಟಿಷ್ಟಲ್ಲ. ವೇದಿಕೆಯ ಮೇಲೆ ಬರುವುದಿಲ್ಲವೆಂದು ಹಠ ಹಿಡಿದೇ ಹಿಡಿದರು. ಯಾರೂ ಕೇಳಲು ತಯಾರಿರಲಿಲ್ಲ. ಸಂಕೋಚದ ಮುದ್ದೆಯಾಗಿದ್ದ ಮುರಳಿ ಕೊನೆಗೆ ಅನಿವಾರ್ಯವಾಗಿ ಮುಕ್ತಳೊಂದಿಗೆ ವೇದಿಕೆ ಹತ್ತಬೇಕಾಯಿತು.

ಮುಕ್ತಾ ಮುರಳಿ ದಂಪತಿಗಳಿಗೆ ಝರಿ ಪಂಚೆ, ಉತ್ತರೀಯ, ರೇಶ್ಮೆ ಸೀರೆಗಳನ್ನಿತ್ತು ಗೌರವಿಸಿದ ಕೃಷ್ಣಯ್ಯರ್ ದಣಿವಿಲ್ಲದಂತೆ ಮುರಳಿಯ ಗುಣಗಾನ ಮಾಡಿದರು. ನಾಚಿನೀರಾಗಿದ್ದ ಮುರಳಿಯನ್ನು ಕಂಡು ಮುಕ್ತಳಿಗೆ ಹೆಮ್ಮೆಯೆನಿಸಿತು. ಕಾಯ್ದಕಾವಲಿಯ ಮೇಲೆ ನಿಂತಂತೆ ನಿಂತಿದ್ದ ಮುರಳಿಯವರಿಗೆ ಕೊನೆಗೂ ವೇದಿಕೆಯಿಂದಿಳಿದಾಗ ತುಸು ನಿರಾಳವೆನಿಸಿತು. ಯಾರೋ ಈಗಾಗಲೇ ಕಳಿಸಿದ್ದ ಕೋರಿಕೆಯ ಮೇರೆಗೆ ಅಭೇರಿಯಲ್ಲೊಂದು ತಿಲ್ಲಾನ ಹಾಡಿ ಮುಗಿಸಿದ ನೇದನೂರಿಯವರು ಮಂಗಳ ಹಾಡುವುದರೊಂದಿಗೆ ಕಾರ್ಯಕ್ರಮ ಮುಗಿಸಿದರು. ಎಲ್ಲರೂ ಬ್ಯಾಂಕ್ವೆಟ್ ಹಾಲಿಗೆ ಲಗ್ಗೆಯಿಟ್ಟು ರುಚಿಯಾದ ವ್ಯಂಜನಗಳಿದ್ದ ಊಟವನ್ನು ಚಪ್ಪರಿಸಿ ಸವಿದರು.

-೧೪-

ಅಗುಳಿ ಹಾಕದ ರೂಮಿನ ಬಾಗಿಲನ್ನು ಸರಿಸಿ ಒಳಬಂದ ಮುರಳಿ ನಿಲುವುಗನ್ನಡಿಯ ಮುಂದೆ ನಿಂತು ಕೊರಳನ್ನು ಓರೆಯಾಗಿಸಿ ತನ್ನ ಎಡಗಿವಿಯ ಝುಮ್ಕಿ ಕಳಚುತ್ತಿದ್ದ ಮುಕ್ತಾಳನ್ನು ನೋಡಿದರು. ಆಕರ್ಷಕವಾಗಿ ಎತ್ತಿ ಕಟ್ಟಿದ್ದ ತುರುಬನ್ನು ಆಗಷ್ಟೆ ಬಿಚ್ಚಿದ್ದಿರಬೇಕು. ದಟ್ಟವಾದ ಕೇಶರಾಶಿ ಕಪ್ಪು ಜಲಪಾತದಂತೆ ಅವಳ ಎದೆಯ ಬಲಭಾಗದಲ್ಲಿ ಹರವಿಕೊಂಡಿತ್ತು. ಹೊಂಬಣ್ಣದ ಮೈಗೊಪ್ಪುವ ತಿಳಿನೀಲಿ ಮೈಸೂರ್ ಸಿಲ್ಕ್ ಸೀರೆ ಕುಪ್ಪಸದಲ್ಲಿ ಮುಕ್ತಾ ಪುಟವಿಟ್ಟ ಚಿನ್ನದಂತೆ ಕಂಗೊಳಿಸುತ್ತಿದ್ದಳು. ಸದ್ದಿಲ್ಲದೆ ಮುಕ್ತಾಳ ಬಳಿಬಂದ ಮುರಳಿ ಹಿಂದಿನಿಂದ ಅವಳ ತೋಳುಗಳನ್ನು ಹಿಡಿದು ಡೀಪ್ಕಟ್ ಬ್ಲೌಸಿನಲ್ಲಿ ವಿಶಾಲವಾಗಿ ಕಾಣುತ್ತಿದ್ದ ಬೆನ್ನಿನ ಮೇಲ್ಭಾಗವನ್ನು ಹಗೂರಕ್ಕೆ ಚುಂಬಿಸಿದರು. ಮುಕ್ತಳಿಗೆ ಕಚಗುಳಿಯಿಟ್ಟಂತಾಗಿ ಛೀ…ಎಂದು ಪಕ್ಕಕ್ಕೆ ಸರಿದು ಖಿಲ್ಲನೆ ನಕ್ಕಳು. ಒಪ್ಪವಾಗಿ ಸಿಂಗರಿಸಿಕೊಂಡು ರಿಸೆಪ್ಷನ್ನಿನಲ್ಲಿ ಲವಲವಿಕೆಯಿಂದ ಚಿಗುರೆ ಮರಿಯಂತೆ ಅಲ್ಲಿಂದಿಲ್ಲಿಗೆ ಓಡಾಡಿಕೊಂಡಿದ್ದ ಮುಕ್ತಾಳನ್ನು ಕಂಡಾಗಲೇ ಮುರಳಿಗೆ ಎದೆಬಡಿತದ ಲಯ ತಪ್ಪಿತ್ತು. ಈಗ ಏಕಾಂತದಲ್ಲಿ ಇಷ್ಟು ಹತ್ತಿರದಿಂದ ಅವಳ ರೂಪರಾಶಿಯನ್ನು ಕಂಡಾಗ ನಿಯಂತ್ರಣ ಸಾಧ್ಯವಾಗಲಿಲ್ಲ. ಬರಸೆಳೆದು ಮುಖದ ತುಂಬಾ ಮುತ್ತಿನ ಮಳೆಗರೆದರು. “ಥೂ…ಹೋಗೀಪ್ಪಾ” ಎಂದು ಅವರನ್ನು ದೂರ ತಳ್ಳಿದ ಮುಕ್ತಾ “ಬೋಲ್ಟೂ ಹಾಕ್ದೆನೆ ಇದೇನ್ರಿ ಇದು ನೀವು” ಎನ್ನುತ್ತಾ ಹೋಗಿ ಬಾಗಿಲಿನ ಅಗುಳಿ ಹಾಕಿಬಂದಳು.

ಅದಕ್ಕೇ ಕಾಯುತ್ತಿದ್ದಂತೆ ಮುರಳಿ ಆಸೆ ತುಂಬಿದ ಕಣ್ಗಳಿಂದ ಮುಕ್ತಾಳನ್ನೇ ದಿಟ್ಟಿಸುತ್ತಾ ಅವಳ ಬಳಿ ಸರಿದರು. ಗಂಡನ ಹಪಹಪಿ ಕಂಡು ಮುಕ್ತಳಿಗೆ ನಗು ತಡೆಯಲಾಗಲಿಲ್ಲ. ಕೆಂದುಟಿ ಬಿರಿದು ಮಲ್ಲಿಗೆ ಅರಳಿದ್ದು ಕಂಡು ಮುರಳಿಗೆ ಹುಚ್ಚೇ ಹಿಡಿದಂತಾಯಿತು. ಸಂಗಾತಿಯ ತೋಳುಗಳನ್ನು ಗಟ್ಟಿಯಾಗಿ ಹಿಡಿದು ಮೆತ್ತನೆಯ ಹಾಸಿಗೆಮೇಲೆ ತಳ್ಳಿದವರೇ ಹಿಂದೆಯೇ ತಾವೂ ಜಿಗಿದು ಪ್ರೀತಿಯ ದಾಳಿಗಿಳಿದರು. “ಆಹಾ… ಆತ್ರ ನೋಡು… ಅಯ್ಯೋ…ಪ್ಲೀಸ್ ಬಿಡೀಪ್ಪಾ… ಛೀ… ಇನ್ನೇನು ಮದ್ವೇಗ್ಬರೋ ಮಗ್ಳಿದಾಳೆ ಅನ್ನೋ ಪರಿಜ್ಞಾನಾನೂ ಇಲ್ದೆ…ಏ… ಈಗ್ಲೂ,” ಛೇಡಿಸಿ ಮುರಳಿಯ ಕೈಗಳಿಂದ ಕೊಸರಿಸಿಕೊಂಡು ದೂರ ಸರಿದವಳೇ ಕಿಂಗ್ ಸೈಜ್ಬೆಡ್ಡಿನ ಇನ್ನೊಂದು ತುದಿ ಸೇರಿ ನಾಲಿಗೆಯನ್ನು ಮೇಲ್ದುಟಿಗೆ ಸೋಕಿಸಿ ಥಮ್ಸಪ್ ಮಾಡಿದ ಬಲಗೈ ಮುಷ್ಠಿಯನ್ನು ಅತ್ತಿಂದಿತ್ತಾ ಅಲುಗಿಸುತ್ತಾ ಮುರಳಿಯನ್ನು ಹಂಗಿಸತೊಡಗಿದಳು. ದೂರದಿಂದ ಮಿಠಾಯಿಯ ಆಸೆ ತೋರಿ ಕೈಗೆ ಕೊಡದೇ ಸತಾಯಿಸಲಾದ ಮಗುವಿನಂತೆ ಮುರಳಿ ಮುಖ ಊದಿಸಿ ಕುಳಿತರು. ಹಾಗೇ ಅರೆಕ್ಷಣ ಹತಾಶರಾಗಿ ಮಂಡಿಯೂರಿ ಕುಳಿತವರು “ಮಾಡೋದೆಲ್ಲಾ ಮಾಡ್ಬುಟ್ಟು ಈಗ ಹೀಗೆ ಸತಾಯ್ಸಿದ್ರೆ ನಾನ್ಸುಮ್ನಿರಲ್ಲಾ ನೋಡು” ಎಂದು ಕೆರಳಿ ನುಡಿದರು. “ಅಯ್ಯೋ ದೇವ್ರೇ…ಇದೊಳ್ಳೇ ಚೆನ್ನಾಯ್ತು…ನಾನೇನ್ರೀ ಮಾಡ್ದೆ ಈಗ!?” ಮುನಿಸು ನಟಿಸಿ ಕಣ್ಣಲ್ಲೇ ಕೊಲ್ಲುವಂತೆ ನೋಡಿದಳು. ಮೊದಲೇ ನೋಡುಗರನ್ನು ಸುಸ್ತು ಹೊಡೆಸುವ ಸುಂದರಿ, ಸಾಲದ್ದಕ್ಕೆ ಈ ಕೊಲ್ಲುವಂಥಾ ನಖರಾಗಳು ಬೇರೆ. ಪಾಪ ಮುರಳಿಗೆ ಮಾತೇ ಹೊರಡಲಿಲ್ಲ, ಸಾವರಸಿಕೊಂಡು “ಅಲ್ಲಾ ಚಿನ್ನಾ…ನೀ ಮಾಮೂಲಿಯಾಗಿದ್ರೇನೇ ನಿನ್ರೂಪ ನೋಡೋರ ಕಣ್ಕುಕ್ಕತ್ತೆ ಇನ್ನೀಥರ ಸಿಂಗಾರ ಬಂಗಾರನೂ ಮಾಡ್ಕೊಂಬಿಟ್ರೆ ನನ್ಕತೆಯೇನಾಗ್ಬೇಕೆ ಮಾರಯ್ತೀ….” ಎಂದದ್ದು ಕೇಳಿ ಮುಕ್ತಾಳ ಕೆನ್ನೆ ಕೆಂಪೇರಿತು. ಮುಂದಿನ ಮಾತಿಗೆ ಅವಕಾಶ ಕೊಡದೆ ಮುನ್ನುಗ್ಗಿದ ಮುರಳಿ ಅವಳ ಮಣಿಕಟ್ಟುಗಳನ್ನು ಹಾಸಿಗೆಗೆ ಒತ್ತಿ ಹಿಡಿದು ಗಟ್ಟಿಯಾಗಿ ತುಟಿಗೆ ತುಟಿಯೊತ್ತಿದರು. ನಗುತ್ತಾ ಪ್ರತಿರೋಧಿಸುತ್ತಿದ್ದ ಮುಕ್ತಾ ನಿಧಾನಕ್ಕೆ ಸಡಿಲಗೊಂಡಳು. ಇಬ್ಬರೂ ಮೈಮರೆತು ಮನಸಾರೆ ಸುಖಿಸಿದರು.

“ಅಲ್ಲಾ ಕಣ್ರೀ ದಿನವಿಡೀ ಅಷ್ಟೆಲ್ಲಾ ದಣ್ದಿದೀರಿ, ಇವತ್ತೂ ಇದೆಲ್ಲಾ ಬೇಕಿತ್ತಾ ಅಂತ” ಬಾತ್ರೂಮಿನಿಂದ ಹೊರಬಂದ ಮುಕ್ತಾ ಕೇಳಿದಳು. “ಹೇಳಿದ್ನಲ್ಲಾ…ಇಂಥಾ ದಿನ್ಗಳಲ್ಲೇ ನೀನು ನನ್ನ ಸ್ಪೆಷಲ್ಲಾಗಿ ಕಾಡೋದೂಂತಾ” ಎಂದು ಮುರಳಿ ಮುಗುಳ್ನಕ್ಕರು. “ಪಾಪ ನೀವಾದ್ರು ಏನ್ಕಮ್ಮಿ ದಣ್ದಿದೀರಾ… ಏನೂ ತೊಂದ್ರೆ ಇಲ್ದೆ ಈ ಮದ್ವೆ ನಡೀಬೇಕೂಂತ ನೀವೆಷ್ಟು ಟೆನ್ಷನ್ ತಗೊಂಡಿದೀರಾಂತ ನಂಗೊತ್ತಿಲ್ಲಾನ್ಕೋಬೇಡಿ…” ಎನ್ನುವಾಗ ಮುಕ್ತಾಳ ಕೈಬೆರಳುಗಳು ಮುರಳಿಯ ತಲೆಗೂದಲಿನಲ್ಲಿ ಆಡುತ್ತಿದ್ದುವು.

“ಅದ್ನಿಜ ಕಣಮ್ಮಾ, ನನ್ ಲೈಫಲ್ಲೇ ಇಂಥಾ ಫಜೀತಿ ಮ್ಯಾರೇಜು ಕಂಡಿರ್ಲಿಲ್ಲ ಬಿಡು, ನಮ್ಸುಬ್ಬೂದು ಮಾತ್ರ ಮರೆಯಲಾಗದ ಮದುವೆ ಕಣೆ, ಪುರ್ಸೊತ್ತಿದ್ರೆ ಒಂದ್ಕತೇನೇ ಬರೀಬೋದ್ನೋಡು”
“ರಿಟೈರಾದ್ಮೇಲೆ ನಿಮಗ್ತಾನೆ ಏನ್ಕೆಲ್ಸ, ಕತೆ ಏನು ಕಾದಂಬ್ರೀನೇ ಬರ್ಯೋರಂತೆ”
“ಹೂ ಈಗದೊಂದೆ ತಾನೆ ಬಾಕಿ ಇರೋದು” ಎಂದ ಮುರಳಿಗೆ ನಿದ್ದೆ ಒತ್ತರಿಸಿಕೊಂಡು ಬಂದಿತ್ತು. ಕಣ್ಮುಚ್ಚಿದ ಕ್ಷಣಾರ್ಧದಲ್ಲಿ ಮಗುವಿನಂತೆ ನಿದ್ದೆ ಹೋದರು. ಅಕ್ಕರೆಯಿಂದ ಮುರಳಿಗೆ ಬೆಡ್ಶೀಟು ಹೊದಿಸಿದ ಮುಕ್ತಾ ಅವರ ಕೆನ್ನೆಗೊಂದು ಹೂಮುತ್ತು ಕೊಟ್ಟಳು.


ಮುಗಿಯಿತು..


ಶ್ರೀ ನಾರಾಯಣ‌ ಎಮ್‌ ಎಸ್‌ ರವರು ಪಂಜುವಿಗಾಗಿ ಈ ಕಿರು ಕಾದಂಬರಿಯನ್ನು ಕಳುಹಿಸಿಕೊಟ್ಟಿದ್ದಕ್ಕಾಗಿ ಅನಂತ ಧನ್ಯವಾದಗಳು. ಅವರ ಕಾವ್ಯ ಕೃಷಿ ಹೀಗೆಯೆ ಮುಂದುವರೆಯಲಿ ಎಂದು ಹಾರೈಸುತ್ತೇವೆ.

-ಪಂಜು ಬಳಗ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x