ಆ ದಿನ ರಾತ್ರಿ ಮನೆಯ ಹಿತ್ತಲಿನ ಗೋಡೆಯ ಒಂದು ಮೂಲೆಯಲ್ಲಿ ಅದೇನೋ ಶಬ್ದ. ಇಡೀ ರಾತ್ರಿ ಅದಾವುದೋ ಬೆಕ್ಕು ಬುಸುಗುಡುವ ಶಬ್ದ. ಆಗಾಗ ನಾಯಿ ಬೊಗಳುವ ಶಬ್ದ ಬೇರೆ. ರಾತ್ರಿ ಎದ್ದು ಆ ಬೆಕ್ಕು ಮತ್ತು ನಾಯಿ ಎರಡನ್ನೂ ಓಡಿಸೋಣ ಎಂದುಕೊಂಡರೆ ಮನದಲ್ಲಿ ಅದೇನೋ ಭಯ. ಆದರೂ ದೈರ್ಯ ತಂದುಕೊಂಡು ಕೈಯಲ್ಲಿ ಟಾರ್ಚ ಹಾಗೂ ಮೂಲೆಯಲ್ಲಿದ್ದ ಕೋಲನ್ನು ಹಿಡಿದು ನಿಧಾನವಾಗಿ ಬಾಗಿಲನ್ನು ತರೆದು ಹೊರ ಬಂದೆ. ವಿದ್ಯುತ್ ಕೈ ಕೊಟ್ಟಿದ್ದರಿಂದ ಹೊರಗಿನ ಬಲ್ಬ್ ಉರಿಯುತ್ತಿರಲಿಲ್ಲ. ಧೈರ್ಯ ತಂದುಕೊಂಡು ಮನೆ ದೇವರ ನೂರು ಸಾರಿ ನೆನೆಯುತ್ತಾ ಕೈಯಲ್ಲಿ ಕೋಲನ್ನು ಬಿಗಿಯಾಗಿ ಹಿಡಿದುಕೊಂಡು ಶಬ್ದ ಬರುತ್ತಿದ್ದ ಕಡೆಗೆ ಬೆಳಕು ಹರಿಸಿದೆ. ಅರೆ, ಆ ಬೆಕ್ಕು ನಮ್ದೆ . ನಮ್ಮ ಕುಟುಂಬದಲ್ಲಿ ಒಬ್ಬ ಸದಸ್ಯನಂತೆ ಇರುವ ಅದು ಎಲ್ಲರಿಗೂ ಅಚ್ಚು ಮೆಚ್ಚು. ನಿನ್ನೆಯಿಂದ ಅದೇಕೋ ಕಾಣೆಯಾಗಿತ್ತು. ಗರ್ಭವತಿಯಾಗಿದ್ದ ಅದು ಯಾವುದೋ ಸ್ಥಳದಲ್ಲಿ ಮರಿ ಹಾಕಿರಬಹುದೆಂದು ಮನೆಯ ಸದಸ್ಯರರಲ್ಲ ಅಂದುಕೊಂಡಿದ್ದೆವು. ಆದರೂ ಅದು ಬೇರೆ ಕಡೆ ಮರಿ ಹಾಕಿದ್ದು ತುಂಬಾ ಕಡಿಮೆ. ಮರಿ ಹಾಕುವ ದಿನ ನಮ್ಮ ಮನೆ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಮನೆಯ ಹಿತ್ತಲಿನ ಗುಜರಿ ಸಾಮಾನುಗಳ ಒಂದು ಸುರಕ್ಷಿತ ಸ್ಥಳದಲ್ಲಿ ಮರಿ ಹಾಕುತ್ತಿತ್ತು. ಮರಿ ಹಾಕಿದ ನಂತರ ನೇರವಾಗಿ ಮನೆಯೊಳಗೆ ಬಂದು ಮನೆಯವರ ಕಾಲು ಸವರುತ್ತಾ ಮಿಯಾಂ ಮಿಯಾಂ ಎನ್ನುತ್ತಾ ಅದೇನೋ ಹೇಳಲು ಪ್ರಯತ್ನಿಸುತ್ತಿತ್ತು. ಅದರ ಟೊಳ್ಳಾದ ಹೊಟ್ಟೆಯನ್ನು ನೋಡುತ್ತಿದ್ದಂತೆಯೇ ಮರಿ ಹಾಕಿದೆ ಎಂಬುದು ಮನೆಯವರಿಗೆಲ್ಲಾ ಅರ್ಥವಾಗುತ್ತಿತ್ತು. ನಮ್ಮ ಅಮ್ಮಗೆ ಆ ಬೆಕ್ಕಿನ ಮೇಲೆ ನಮಗಿಂತಲೂ ವಿಶೇಷ ಪ್ರೀತಿ. ಪಾಪ ಬಾಣಂತಿ ಎನ್ನುತ್ತಾ ಒಂದು ಬಟ್ಟಲು ತುಂಬಾ ಹಾಲನ್ನು ಅದಕ್ಕೆ ಕುಡಿಯಲು ಕೊಡುತ್ತಿದ್ದಳು. ಮರಿ ಹಾಕುವ ಮುಂಚೆ ನಮಗೋ ತುಂಬಾ ಕುತೂಹಲ . ಮರಿ ಎಷ್ಟಿರಬಹುದು ಎಂಬುದನ್ನು ಅದರ ಹೊಟ್ಟೆ ಸವರುತ್ತಾ ಲೆಕ್ಕ ಹಾಕುತ್ತಿದ್ದೆವು. ಅದೂ ಕೂಡಾ ನಾವೇನೆ ಮಾಡಿದರೂ ಸುಮ್ಮನಿರುತ್ತಿತ್ತು. ಆಗಾಗ ಮೀಸೆ ಜಗ್ಗುವುದು, ಅದರ ನಿದ್ದೆ ಕೆಡಿಸುವ ತರ್ಲೆ ಕೆಲಸಗಳನ್ನು ಮಾಡಿದರೂ ಪಾಪ ಮಿಯಾಂ ಎನ್ನುತ್ತಿತ್ತೆ ಹೊರತು ಕಡಿಯುವುದಾಗಲೀ ಪಂಜಿನಿಂದ ಹೊಡೆಯುವುದಾಗಲಿ ಮಾಡುತ್ತಿರಲಿಲ್ಲ. ಮರಿ ಹಾಕಿದ ಜಾಗಕ್ಕೆ ಅದು ಹೋದಾಗ ಅದರ ಮರಿಗಳೊಂದಿಗೆ ನಾವು ಆಟ ಆಡುತ್ತಿದ್ದೆವು. ಬಾಣಂತಿಗೆ ತೊಂದರೆಯಾಗಬಾರದೆಂದುಕೊಂಡು ಮರಿಗಳಿದ್ದ ಜಾಗದಲ್ಲಿ ಹಾಲು ಅನ್ನ ಕಲಿಸಿ ಒಂದು ಬಟ್ಟಲಲ್ಲಿ ಇಟ್ಟಾಗ ಅದು ಅಲ್ಲೆ ತಿಂದು ತನ್ನ ಮರಿಗಳೊಂದಿಗೆ ಇರುತ್ತಿತ್ತು. ಅದೇನು ತಾಯಿ ಹೃದಯವೂ ನಾ ಕಾಣೆ ತಾನು ಬೇಟೆಯಾಡಿ ತಂದ ಇಲಿಗಳನ್ನು ತನ್ನ ಮರಿಗಳಿಗೆ ತಿನ್ನಲು ತರುತ್ತಿತ್ತು. ಪಾಪ ಅಸುಳೆ ಮರಿಗಳು ಅವೇನು ತಿನ್ನತ್ತವೆ? ಬೆಕ್ಕು ಹೊರಗಡೆ ಹೋದಾಗ ನಾವೇ ಆ ಸತ್ತ ಇಲಿಯನ್ನು ಹೊರಗಡೆ ಬಿಸಾಕುತ್ತಿದ್ದೆವು. ಕೆಲವೊಮ್ಮೆ ಸಿಟ್ಟಿನಿಂದ ನಾಲ್ಕು ಬಾರಿಸಿದರೂ ಮನೆ ಬಿಟ್ಟು ಹೋಗುತ್ತಿರಲಿಲ್ಲ. ಆದರೆ ನಿನ್ನೆಯಿಂದ ಅದು ಕಾಣೆಯಾಗಿತ್ತು. ಇಂದು ರಾತ್ರಿ ಆ ಗೋಡೆಯ ಮೂಲೆಯಲ್ಲಿ ಕುಳಿತು ಬುಸುಗುಡುತ್ತಿತ್ತು.
ಪಕ್ಕದಲ್ಲೇ ಆ ನಾಯಿ . ಅದು ಬೇರೆ ಯಾವುದೋ ನಾಯಿ ಅಲ್ಲ. ಅದು ನಮ್ಮದೇ ನಾಯಿ . ನಾವು ಪ್ರೀತಿಯಿಂದ ಸಾಕಿದ ಹೆಣ್ಣು ನಾಯಿ. ಅದು ಕೂಡ ಬೆಕ್ಕಿನಂತೆ ಮನೆಯವರೊಂದಿಗೆ ತುಂಬಾ ಸಲಿಗೆಯಂದಿದ್ದ ನಾಯಿ. ಮಳೆ ಬರಲಿ ಚಳಿ ಇರಲಿ ಮನೆಯ ಬಾಗಿಲ ಬಳಿ ಮಲಗಿರುತ್ತಿತ್ತು. ಕಡಕಲು ರೊಟ್ಟಿಯಾದರೂ ಸರಿ ಪ್ರೀತಿಯಿಂದ ಸ್ವೀಕರಿಸುತ್ತಿತ್ತು. ಬೆಕ್ಕು ಹಾಗೂ ನಾಯಿ ಅದೆಷ್ಟು ಅನ್ಯೋನ್ಯ ವಾಗಿದ್ದವೆಂದರೆ ಕೆಲವೊಮ್ಮೆ ಅಕ್ಕ ಪಕ್ಕದಲ್ಲೇ ಮಲಗಿರುತ್ತಿದ್ದವು. ನಮ್ಮ ತರ್ಲೆ ಕೆಲಸಗಳಿಗೆ ಅವೆಂದೂ ಜಗಳವಾಡಿದ್ದು ನಾವು ಕಂಡಿಲ್ಲ. ಮರಿಗಳಿದ್ದಾಗಿನಿಂದ ಒಟ್ಟಾಗಿ ಬೆಳೆದಿದ್ದ ಅವುಗಳ ಮಧ್ಯೆ ಒಂದು ಅನ್ಯೋನ್ಯ ಸಂಬಂಧವಿತ್ತು. ನಾಯಿಗೆ ನಮ್ಮ ಕುಟುಂಬದ ಮೇಲೆ ಅದೆಂತಹ ಕೃತಜ್ಞತೆ ಇತ್ತೆಂದರೆ ನಾವು ಯಾವುದೋ ಊರಿಗೆ ಹೋಗುವಾಗ ನಾವು ಬಸ್ ಏರುವವರೆಗೂ ನಮ್ಮ ಜೊತೆಗೆ ಬರುತ್ತಿತ್ತು. ಕೆಲವು ಸಾರಿ ಕಂಡಕ್ಟರ್ ನಮ್ಮ ನಾಯಿಯನ್ನು ಓಡಿಸಿದ ಉದಾಹರಣೆಗಳೂ ಇವೆ. ಒಮ್ಮೆ ಮನಕಲಕುವ ಸಂದರ್ಭವೇ ನಡೆಯಿದು. ಅದು ಮಳೆಗಾಲದ ದಿನ . ಮೂರು ನಾಲ್ಕು ದಿನಗಳ ಕಾಲ ನಿರಂತರ ಮಳೆ. ಮಳೆ ನಿಂತ ಬೆಳಗ್ಗೆ ಕದ ತೆರೆಯುತ್ತಿಂತೆಯೇ ನಾಯಿ ತನ್ನ ಬಾಯಲ್ಲಿ ತನ್ನ ಮರಿಗಳನ್ನು ಹಿಡಿದುಕೊಂಡು ಬಂದು ಬಾಗಿಲ ಮುಂದೆ ಬಿಡುತ್ತಿತ್ತು. ಮಳೆಯಲ್ಲಿ ಕಣ್ಣು ಬಿಟ್ಟಿರದ ಮರಿಗಳು ನಡುಗುತ್ತಿರುವುದನ್ನು ಕಂಡು ಅಯ್ಯೋ ಎನಿಸಿತ್ತು. ತಕ್ಷಣ ಹಿತ್ತಲಿನ ಒಂದು ಬೆಚ್ಚಗಿನ ಸ್ಥಳದಲ್ಲಿ ಒಂದು ಗೋಣಿಚೀಲವನ್ನು ಹಾಕಿ ತಾಯಿ ಹಾಗೂ ಮರಿಗಳಿಗಳಿಗೆ ಇರಲು ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ಆ ಸಂದರ್ಭ ನಮ್ಮ ಕುಟುಂಬದ ಪ್ರತಿಯೊಬ್ಬರ ಮನಸ್ಸನ್ನು ಕಲುಕಿತ್ತು.
ಈ ಎರಡೂ ಜೀವಿಗಳು ಈ ರಾತ್ರಿ ಅದೇಕೋ ಜಗಳವಾಡುತ್ತಿವೆಲ್ಲ ಎಂದೆನಿಸಿ ಬೆಕ್ಕು ಮತ್ತು ನಾಯಿ ಎರಡನ್ನೂ ಓಡಿಸಿ , ಮತ್ತೆ ಬಂದು ನಿದ್ದೆ ಹೋದೆ. ಒಂದೆರಡು ಗಂಟೆಗಳ ನಂತರ ಮತ್ತೆ ಅದೇ ಸದ್ದು. ಅವೆರಡನ್ನೂ ಎಲ್ಲಾದರೂ ದೂರ ಬಿಟ್ಟು ಬರಬೇಕೆಂಎನಿಸಿತ್ತು. ಆದರೂ ಮನೆಯವರೆಲ್ಲಾ ಸುಮ್ಮನೇ ನಿದ್ದೆ ಹೋದರು.
ಬೆಳಿಗ್ಗೆ ಎದ್ದು ಅದೇ ಸ್ಥಳಕ್ಕೆ ಹೋದಾಗ ಅವೆರಡೂ ಅಲ್ಲೆ ಇದ್ದವು. ಇವಕ್ಕೇನೋ ತಲೆ ಕೆಟ್ಟಿರಬೇಕು ಎಂದುಕೊಂಡು ಆ ಸ್ಥಳದ ಹತ್ತಿರಕ್ಕೆ ಹೋದಾಗ ಯಾವುದೋ ಜಾತಿಯ ಹಾವು ಅರೆ ಜೀವವಾಗಿ ಬಿದ್ದಿತು. ಈಗ ಮನೆಯವರಿಗೆಲ್ಲಾ ಆ ಎರಡೂ ಜೀವಿಗಳ ರಾತ್ರಿ ಇಡೀ ಹೋರಾಟದ ಕಾರಣ ಅರ್ಥವಾಯಿತು. ಮನೆಯವರ ರಕ್ಷಣೆಗಾಗಿ ಬೆಕ್ಕು ಹಾಗೂ ನಾಯಿ ಸತತ ಎರಡು ದಿನಗಳ ಕಾಲ ಹೋರಾಟ ಮಾಡಿದ್ದವು. ಬೆಕ್ಕಿನ ಪಂಜಿನ ಹೊಡೆತಕ್ಕೆ ಹಾವು ಅರೆ ಜೀವವಾಗಿತ್ತು. ನಾಯಿ ಹಾವನ್ನು ಮನೆಯೊಳಗೆ ನುಸುಳದಂತೆ ತಡೆಯಿಡಿದಿತ್ತು. ಇವುಗಳ ಹೋರಾಟವನ್ನು ಕಂಡು ನಾನಂತೂ ಮೂಕವಿಸ್ಮಿತನಾದೆ. ಕೊನೆಗೆ ಆ ಹಾವಿಗೆ ನಾವೇ ಒಂದು ಗತಿ ಕಾಣಿಸಲೇಬೇಕಾಯಿತು. ಆಗ ಆ ಎರಡೂ ಜೀವಿಗಳ ಹೋರಾಟ ಕೊನೆಕಂಡಿತ್ತು.
ಮೂಕಪ್ರಾಣಿಗಳಲ್ಲಿ ಅದೆಂತಹ ಕೃತಜ್ಞತೆ ಇರುತ್ತದೆ ಎಂಬುದಕ್ಕೆ ಆ ಘಟನೆ ಸಾಕ್ಷಿಯಾಗಿತ್ತು. ಆದರೆ ಇಂದು ಆ ಎರಡೂ ಜೀವಿಗಳು ನಮ್ಮೊಂದಿಗಿಲ್ಲ. ಅವೆರಡೂ ನಮ್ಮಿಂದ ದೂರವಾಗಲು ಕೂಡಾ ಒಂದು ಮನಕಲಕುವ ಘಟನೆ ಇದೆ. ನಮ್ಮ ನಾಯಿ ಹೊರಗಡೆ ವಾಯುವಿಹಾರಕ್ಕೆ ಹೋದಾಗ ಯಾವುದೋ ಹುಚ್ಚು ನಾಯಿಯೊಂದಿಗೆ ಜಗಳವಾಡಿ ಕಚ್ಚಿಸಿಕೊಂಡು ಬಂದಿತ್ತು. ಅದು ನಮಗೆ ಅರ್ಥವಾಗಿದ್ದು ಅದಕ್ಕೆ ಹುಚ್ಚು ಹೆಚ್ಚಾದಾಗಲೇ. ಆದರೆ ಅದು ಮನೆಯವರಿಗೆ , ಜನರಿಗೆ ತೊಂದರೆ ಕೊಟ್ಟಿರಲಿಲ್ಲ. ಆದರೆ ಅಕ್ಕ ಪಕ್ಕದ ಬೀದಿ ನಾಯಿಗಳೊಂದಿಗೆ ಅದರ ಜಗಳ ಮಿತಿಮೀರಿ ಹೋಯಿತು. ಒಮ್ಮೆಯಂತೂ ತುಂಬಾ ಆತ್ಮೀಯತೆಯಿಂದ ಇದ್ದ ನಮ್ಮ ಬೆಕ್ಕಿನೊಂದಿಗೆ ಜಗಳವಾಡಿ ಬೆಕ್ಕಿಗೆ ಅಂತ್ಯ ಕಾಣಿಸಿತ್ತು. ಜನರ ಒತ್ತಡಕ್ಕೆ ಮಣಿದು ದೂರ ಬಿಟ್ಟು ಬಂದಾಗ ಊರಿನ ಜನರು ಅದಕ್ಕೆ ಅಂತ್ಯ ಕಾಣಿಸಿದ್ದು ಆನಂತರ ತಿಳಿಯಿತು. ಒಂದೇ ದಿನ ಆ ಎರಡೂ ಜೀವಗಳೂ ನಮ್ಮ ಕುಟುಂಬದಿಂದ ದೂರವಾದವು. ಮನೆಯೊಳಗೆ ಅದೊಂದು ಸೂತಕದ ಛಾಯೆ ಆವರಿಸಿತ್ತು. ವಿಧಿಯ ಆಟಕ್ಕೆ ಎರಡೂ ಜೀವಿಗಳು ಬಲಿಯಾಗಿದ್ದು ನಮ್ಮ ಕುಟುಂಬಕ್ಕೆ ತುಂಬಾ ನೋವುಂಟಾಗಿತ್ತು. ಅವುಗಳು ನಮ್ಮೊಂದಿಗೆ ಇದ್ದ ಪ್ರತಿ ಕ್ಷಣಗಳನ್ನು ಕುಟುಂಬದ ಸದಸ್ಯರು ಮೆಲುಕು ಹಾಕುತ್ತಿದ್ದರು. ಬದುಕಿಗಾಗಿ ಆ ಜೀವಿಗಳ ಹೋರಾಟ, ನಮ್ಮ ಕುಟುಂಬದ ರಕ್ಷಣೆಗೆ ಅವುಗಳ ತ್ಯಾಗ, ಅವುಗಳ ನಿಷ್ಠೆ, ಕೃತಜ್ಞತೆ ,ಪ್ರೀತಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ನಿಜ ಹೇಳಬೇಕೆಂದರೆ ಆ ಎರಡೂ ಜೀವಿಗಳು ನಮ್ಮ ಕುಟುಂಬವೆಂದೂ ಮರೆಯಲಾಗದ ಬಂಧುಗಳು.
-ವೆಂಕಟೇಶ ಚಾಗಿ