ಮರೆಯದ ಮಾಣಿಕ್ಯ ನನ್ನಜ್ಜ: ಸಿದ್ರಾಮ ತಳವಾರ


ನಮ್ಮದು ಉತ್ತರ ಕರ್ನಾಟಕವಾದ್ದರಿಂದ ತಂದೆಯ ತಂದೆಗೆ ನಾವು ಅಜ್ಜ ಅಂತಾ ಕರೆಯುವುದು ವಾಡಿಕೆ. ನನ್ನಜ್ಜ ಮರೆಯಾಗಿ ದಶಕಗಳು ಕಳೆಯುತ್ತ ಬಂದರೂ ನನ್ನಜ್ಜನೊಂದಿಗೆ ಕಳೆದ ಕ್ಷಣಗಳು ಮಾತ್ರ ನನ್ನಿಂದ ಮರೆಯಾಗದೇ ಮನದ ಮೂಲೆಯಲ್ಲಿ ಅಚ್ಚೊತ್ತಿದಂತೆ ಚಿರಸ್ಥಾಯಿಯಾಗಿ ಉಳಿದುಬಿಟ್ಟಿದೆ.

ಊರಲ್ಲಿ ತಳವಾರಕೀ ಮಾಡುತ್ತಿದ್ದ ನನ್ನಜ್ಜ ಅತೀವ ಬಲಶಾಲಿಯಾದ್ದರಿಂದ ಊರಲ್ಲಿ ಸಲಗನೆಂದೇ (ಗಂಡಾನೆ) ಎಲ್ಲರೂ ಕರೆಯುತ್ತಿದ್ದುದು ವಾಡಿಕೆಯಾಗಿತ್ತು. (ಯಾವಾಗಲೋ ಒಂದು ಸಾರಿ ಈ ಕುರಿತು ನನ್ನಜ್ಜನನ್ನೇ ಕೇಳಿ ತಿಳಿದುಕೊಂಡಿದ್ದು) ಅನಕ್ಷರಸ್ಥನಾದ ನನ್ನಜ್ಜ ಅಕ್ಷರ ಲೋಕವೊಂದನ್ನು ಬಿಟ್ಟು ಮಿಕ್ಕೆಲ್ಲದರಲ್ಲೂ ಎತ್ತಿದ ಕೈ ಎಂದೇ ಹೇಳಬಹುದು. ತೀರ ಬಡತನದ ಕುಟುಂಬವಾದರೂ ನನ್ನಜ್ಜಿ ಮತ್ತವನ 10 ಮಕ್ಕಳನ್ನು ಎಂದಿಗೂ ಕೂಲಿಗೆ ಕಳಿಸುವ ಸಂದರ್ಭ ಸೃಷ್ಟಿಸದ ನನ್ನಜ್ಜ ಒಂದಷ್ಟು ತಳವಾರಕೀ ಜಮೀನನ್ನೂ ಪಡೆದುಕೊಂಡಿದ್ದ ನಿಷ್ಠಾವಂತ ಪ್ರಾಮಾಣಿಕ ರೈತನಾಗಿದ್ದ. 

ನಮ್ಮದು ದಲಿತ ಬಡ ಕುಟುಂಬವಾದ್ದರಿಂದ ನಾನು ಕೂಡ ನನ್ನಜ್ಜನ ಜೊತೆ ಸಾಕಷ್ಟು ದಲಿತಪರ ಕಾಳಜಿಯ ಕೆಲಸದಲ್ಲಿ ಮೂಕ ಪ್ರೇಕ್ಷಕನಾಗಿ ಭಾಗವಹಿಸಿದ್ದೇನೆ. ಕೆಲವೊಂದು ಕೆಲಸಗಳನ್ನು ನಮ್ಮವರಿಗೆ ಮೀಸಲಿಟ್ಟ ಮೇಲ್ವರ್ಗದ ಧೋರಣೆಯ ಕುರಿತು ಚರ್ಚಿಸಿದಾಗ ಇವೆಲ್ಲದಕ್ಕೂ ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ,,,  ಎಂಬ ದಾಸರ ಸಾಲನ್ನು ನನ್ನಜ್ಜ ಹಲವು ಸಲ ಗುಣುಗಿದ್ದೂ ಉಂಟು.

ಚರ್ಮದ ಕಾಯಕ ಮಾಡುತ್ತಿದ್ದ ನನ್ನಜ್ಜ ನಾಗರ ಪಂಚಮಿ ಹಬ್ಬದಲ್ಲಿ ಬಾರುಕೋಲು ತಯಾರು ಮಾಡುತ್ತಿದ್ದ ನನ್ನಜ್ಜನಿಗೆ ಇಂತಿಷ್ಟು ಭತ್ತದೊಂದಿಗೆ ಪುಡಿಗಾಸನ್ನೂ ನೀಡುತ್ತಿದ್ದ ಜನ ಜೊತೆಗೆ ಸೇದಲು ಸಿನ್ನರ್ ಬೀಡಿ ಕಟ್ಟೊಂದನ್ನೂ ಉಡುಗೊರೆಯಾಗಿ ನೀಡುತ್ತಿದ್ದರು. ಶಾಲಾ ದಿನಗಳ ನನ್ನ ಸಾಕಷ್ಟು ಅವಶ್ಯಕತೆಗಳಿಗೆ ನನ್ನಜ್ಜನ ಈ ಕೂಡಿಟ್ಟ ಹಣವೇ ನನಗೆ ಆಸರೆಯಾಗಿತ್ತು. ಚರ್ಮ ವಾದ್ಯ ಪ್ರಾವೀಣನಾದ ನನ್ನಜ್ಜ ಹಲಗೆ ಬಾರಿಸುತ್ತಿದ್ದರೆ ಊರಲ್ಲೆಲ್ಲ ಜನ ತಂಡೋಪತಂಡವಾಗಿ ನನ್ನಜ್ಜನ ಹಲಗೆ ವಾದನ ಕುರಿತು ಮಾತನಾಡುತ್ತಿದ್ದರು.

ನನ್ನಜ್ಜನ ಹೆಗಲ ಮೇಲೆ ಕೂತು ನಾಟಕ, ಬಯಲಾಟ, ಬಂಡಿ ಶರ್ಯತ್ತು, ಕುಸ್ತಿ ನೋಡುವಾಗಿನ ಮಜವೇ ಬೇರೆ. ಆ ಸಂದರ್ಭದಲಿ ಪುಟಾಣಿ, ಕಡಲೇ ಬೀಜವನ್ನು ತಾನೇ ಕೈಯಾರೆ ನನಗೆ ತಿನಿಸಿದ್ದೂ ಇಂದಿಗೂ ನನ್ನಜ್ಜನ ಮೇಲಿನ ಪ್ರೀತಿಯನ್ನು ನೂರ್ಮಡಿಗೊಳಿಸುತ್ತದೆ. ಒಂದೂ ಸಲವೂ ಬೈಯದ ನನ್ನಜ್ಜ ಶಾಲೆ ತಪ್ಪಿಸಿದಾಗ ನನ್ನಪ್ಪನ ಚಡಿಯೇಟಿನಿಂದ ಹಲವಾರು ಸಲ ನನ್ನನ್ನು ಪಾರು ಮಾಡಿದ್ದೂ ಉಂಟು. 

ತನ್ನ 86 ರ ವಯಸ್ಸಿನಲ್ಲಿ ಕಫದ ಕೆಮ್ಮಿನಿಂದ ಬಳಲುತ್ತಿದ್ದ ಕೊನೆಯ ದಿನಗಳಲ್ಲಿ ನನ್ನಜ್ಜನಿಗೆ ತನ್ನ ಹತ್ತಿರ ದುಡ್ಡಿರದ ಕಾರಣ ಕಲ್ಲು ಸಕ್ಕರೆ ತಿನ್ನಲು ಖಾಲಿಯಾದ್ದರಿಂದ ಕಾಲೊತ್ತುತ್ತ ಕೂತ ನನಗೆ ತರುವಂತೆ ಕನ್ಸನ್ನೆ ಮಾಡಿದ. ಮನೆಯಲ್ಲಿ ಯಾರೂ ಇರದಿದ್ದರಿಂದ ನನ್ನ ಹತ್ತಿರ ಬಿಡಿಗಾಸೂ ಇಲ್ಲದ ಕಾರಣ ಮನದಲ್ಲೇ ಮರುಗಿ ನನ್ನಜ್ಜನಿಗೆ ತಲೆಯಾಡಿಸಿ ತರುತ್ತೇನೆಂದು ಹೊರಹೋಗಿ ಸುಮಾರು ಎರಡು ಗಂಟೆಗಳ ನಂತರ ಹೇಗೋ ಕಲ್ಲು ಸಕ್ಕರೆ ತರುವಷ್ಟರಲ್ಲಿಯೇ ನನ್ನಜ್ಜ ನನ್ನಿಂದ ಮರೆಯಾಗಿಬಿಟ್ಟಿದ್ದ.

ಇಂದು ನನ್ನ ಹತ್ತಿರ ಸಾಕಷ್ಟು ದುಡ್ಡಿದೆ ಕಲ್ಲು ಸಕ್ಕರೆಯ ಚೀಲವನ್ನೇ ತಂದಿಡಬಹುದು ಆದರೆ ತಿನ್ನಲು ನನ್ನಜ್ಜನಿಲ್ಲವಲ್ಲಾ ಎಂಬುದೇ ನನ್ನ ನೋವಿಗೆ ಕಾರಣವಾದುದು. ಇಂದಿಗೂ ವೃದ್ದಾಪ್ಯದ ಯಾರೇ ಆಗಲೀ ಏನೆ ಕೇಳಿದರೂ ನಾನು ಇಲ್ಲವೆನ್ನುವುದಿಲ್ಲಾ. ಮನೆ, ಊರು, ದೇಶದ ಬಗ್ಗೆ ಅತೀವ ಕಳಕಳಿ, ನ್ಯಾಯ, ನೀತಿ ಪರಸ್ಪರ ಗೌರವ ಮರ್ಯಾದೆ, ಉತ್ತಮ ಶಿಕ್ಷಣ ಇದೆಲ್ಲವನ್ನೂ ಉದಾರವಾಗಿ ಬಳುವಳಿಯಾಗಿ ನಮಗೆ ನೀಡಿದ ನನ್ನಜ್ಜ ಮರೆಯಾಗಿ ದಶಕಗಳಾಗಿ ಹೋದರೂ ನನ್ನ ಸ್ಮøತಿ ಪಟಲದಲ್ಲಿ ಸದಾ ಅವಿಸ್ಮರಣೀಯವಾಗಿ ಮರೆಯಲಾರದ ಮಾಣಿಕ್ಯನಾಗಿ ಚಿರಸ್ಥಾಯಿಯಾಗಿದ್ದಾನೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x