ರಾಹುಲ್ ಎಂದಿನಂತೆ ಆಫೀಸ್ ಪ್ರವೇಶ ಮಾಡುತ್ತಲೇ ಟೈಮ್ ನೋಡಿಕೊಂಡ, ಗಡಿಯಾರದ ಮುಳ್ಳು ಘಂಟೆ ೧೦ರಲ್ಲಿ ತೋರಿಸುತ್ತಿತ್ತು."ಛೆ ಅರ್ಧ ಘಂಟೆ ತಡವಾಯಿತು, ಬಾಸ್ ಏನೆನ್ನುತ್ತಾರೋ.." ಗೊಣಗುತ್ತಲೇ ಚೇಂಬರ್ ಸೇರಿಕೊಂಡು ನಿನ್ನೆ ಬಾಕಿ ಇದ್ದ ಫೈಲ್ ಗಳನ್ನು ಬಿಡಿಸಿ ನೋಡಲಾರಂಭಿಸಿದ.
ಪ್ರೈವೇಟ್ ಕಂಪೆನಿಯೊಂದರ ಆಫೀಸಿನಲ್ಲಿ ಸುಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್. ಪಕ್ಕಾ ಬ್ರಾಹ್ಮಣ ಮನೆತನದ ಅಳುಕು ಸ್ವಭಾವದ ಭಾವನಾತ್ಮಕ ಹುಡುಗ. ಹೀರೋನಂತಿಲ್ಲದಿದ್ದರೂ. ನೋಡುವಂತಹಾ ಸುಂದರ. ಅದೆಲ್ಲ ಇರಲಿ, ನಿನ್ನೆ ಬಾಕಿ ಮಾಡಿ ಹೋದ ಕೆಲಸಗಳನ್ನು ತುರಾತುರಿಯಲ್ಲಿ ಮುಗಿಸುತ್ತಿದ್ದಾಗ ಬಾಸ್ ನಿಂದ ಕರೆ ಬಂತು. "ಥತ್" ಎಂದು ಗೊಣಗುತ್ತಾ ಬಾಸ್ ಚೇಂಬರಿಗೆ "ಮೇ ಐ ಕಮಿನ್ ಸರ್..?" ಎನ್ನುತ್ತಾ ಕಾಲಿಟ್ಟ. "ಬಾರಪ್ಪಾ ರಾಹುಲ, ಕೆಲಸ ಹೇಗೂ ಬಾಕಿ, ಅದಲ್ಲದೆ ಬರೋದೂ ಲೇಟಾ..? ನಿನ್ನ ರೀಸನ್ ಎಲ್ಲಾ ನಾನು ಕೇಳೋದಿಲ್ಲ ಮೀಟ್ ಅವರ್ ನ್ಯೂ ಅಕೌಂಟೆಂಟ್ ವೀಣಾ" ಎಂದರವರು. ಏನೋ ಬೈತಾರೆ ಅಂದುಕೊಂಡು ತಲೆತಗ್ಗಿಸಿ ನಿಂತುಕೊಂಡಿದ್ದ ರಾಹುಲ್ ನಿಟ್ಟುಸಿರು ಬಿಟ್ಟು ತಲೆ ಎತ್ತಿ ವೀಣಾರನ್ನು ನೋಡಿ "ನಮಸ್ಕಾರ" ಅಂದ. ಅವಳೂ ನಕ್ಕು ನಮಸ್ಕರಿಸಿದಳು. ಬಾಸ್ ನಿಂದ ಕೆಲವು ಸಜೆಶನ್ಸ್ ಪಡೆದುಕೊಂಡು ಚೇಂಬರ್ ಸೇರಿದ ರಾಹುಲ್. ಅಕೌಂಟ್ಸ್ ಗಳಿಂದ ಹಿಡಿದು, ಬ್ಯಾಂಕಿಂಗ್ ವ್ಯವಹಾರ ಎಲ್ಲಾ ತನ್ನ ಕೆಲಸದ ಜತೆಗೆ ನೋಡಿಕೊಳ್ಳುತ್ತಿದ್ದ ರಾಹುಲ್ ನ ಕೆಲಸಗಳು ವೀಣಾಳ ಆಗಮನದಿಂದ ಕಡಿಮೆಯಾಯಿತು, ಬಾಸ್ ಗೊ ಇವನೆಂದರೆ ಅಚ್ಚುಮೆಚ್ಚು, ಬಾಸ್ ರಾಹುಲನ ದೂರದ ಸಂಬಂಧಿಕರೂ ಆಗಿದ್ದರು. ಇವನ ಬೇಡಿಕೆಯ ಮೇರೆಗೇ ಅಕೌಂಟೆಂಟ್ ನೇಮಕ ಮಾಡಲಾಗಿತ್ತು.
ವೀಣಾಳಿಗೆ ಅಭ್ಯಾಸ ಆಗೋವರೆಗೆ ದಿನಾಲೂ ಆಫೀಸಿನ ಎಲ್ಲಾ ಲೆಕ್ಕಾಚಾರಗಳ ಬಗೆಗಿನ ವಿಚಾರಗಳನ್ನು ರಾಹುಲ್ ವೀಣಾಳಿಗೆ ತಿಳಿಸಿ ಆ ಕೆಲಸದಿಂದ ಕೈ ತೊಳೆಯಬೇಕಿತ್ತು. ಅದರ ಬಗ್ಗೆ ಎಲ್ಲವನ್ನೂ ಉತ್ಸಾಹದಿಂದ ಹೇಳಿಕೊಡುತ್ತಿದ್ದ. ಆಫೀಸಿನ ಗೆಳೆಯರು ಗೇಲಿ ಮಾಡಲಾರಂಭಿಸಿದರು, "ಏನ್ ಮಗಾ ಸಾಹೇಬ್ರು ಡೈಲೀ ನೇರ ಚೇಂಬರ್ ಗೇ ಹೋಗ್ತಾ ಇದ್ದೋರು ಇವಾಗ ಮೇಡಂ ಹಿಂದೇನೆ ಬೀಳ್ತಾ ಇದಾರಲ್ಲಾ? ಏನ್ ಮಗಾ ಲವ್ವಾ..? " ರಾಹುಲ್ ಗೆ ಮುಜುಗರವಾಯಿತು.
"ಲೋ ಯಾಕ್ರೋ ಹೀಗಂತೀರ ಅಕೌಂಟ್ಸ್ ನೋಡ್ಕೊಂಡಿದ್ದೋನು ನಾನು, ಸಾಧ್ಯ ಇದ್ರೆ ನೀವೇ ಹೇಳ್ಕೊಡ್ರಪ್ಪಾ ನಾನಿಲ್ಲ ಅವ್ಳ ವಿಷ್ಯದಲ್ಲಿ.."
"ಬೇಡ ತಂದೆ.. ನೀವೇ ನೋಡ್ಕಳಿ" ಅಂತ ಸುಮ್ಮನಾಗಿದ್ರು.
ಹುಂ ಅವ್ಳೂ ನೋಡೋಕೆ ಚೆನ್ನಾಗಿದಾಳೆ, ಇವನಿಗೆ ಅವಳ ಮಾತು-ನಗು ಎಲ್ಲಾ ಇಷ್ಟ ಆಗಿತ್ತು, ಹುಡ್ಗೀರಂದ್ರೆ ನಾಚಿಕೆ ಪಡ್ತಿದ್ದೋನು ವೀಣಾಳ ಬಳಿ ತುಂಬಾನೇ ಬೆರೀತಿದ್ದ. ಇವನ ಕೆಲ್ಸ ಆದ ಕೂಡಲೇ ಅಕೌಂಟ್ಸ್ ಕೊಡೋ ನೆಪ ಮಾಡ್ಕೊಂಡು ಅವಳ ಟೇಬಲ್ ಮುಂದೆ ಚೇರ್ ಹಾಕ್ಕೊಂಡು ಅವಳ ಮುಖಾನೇ ಅಳತೆ ಮಾಡ್ತಾ ಇದ್ದ. ಅವಳು ಸ್ವಲ್ಪ ನಾಚುತ್ತಾ ನಗುತ್ತಾ ಮಾತಾಡುತ್ತಿದ್ದಳು. ಇವನು ಆ ನಗುವಲ್ಲಿ ರೋಮಾಂಚನಗೊಳ್ಳುತ್ತಿದ್ದ. ಅಲ್ಲೇ ಕಸ ಗುಡಿಸುತ್ತಾ ಬಂದ ಹೌಸ್ ಕೀಪಿಂಗ್ ನೋಳು ಎಲ್ಲಾರಿಗೂ ಕೇಳಿಸೋತರ, " ನೋಡ್ರೋ ನಮ್ಮ ರಾಹುಲ್ ಸಾಹೇಬರು ನಮ್ಮ ವೋಸಾ ಅಮ್ಮಾವ್ರಿಗೆ ಲೈನ್ ಹೊಡಿತಿದಾರೆ ಅನಿಸುತ್ತೆ" ಅಂದಳು.
ರಾಹುಲ್ ಗೆ ಸಿಟ್ಟು ಬಂತು "ಯೇನೇ ನಿಂದು ಅಧಿಕ ಪ್ರಸಂಗ. ನಿನ್ನ ಕೆಲ್ಸ ಮಾಡ್ಕೊಂಡು ಹೋಗು. ನಾನ್ಯಾಕ್ರೀ ವೀಣಾಗೆ ಲೈನ್ ಹೊಡೀಲೀ..? ಬೇಕಾದ್ರೆ ಅವ್ರತ್ರಾನೇ ಕೇಳು. ನಾನು ನಿಮ್ಗೆ ಲೈನ್ ಹೊಡಿತೀನಿ ಅನಿಸುತ್ತಾ ವೀಣಾ ಅವ್ರೆ?
ವೀಣಾ ನಾಚಿ ತಲೆ ಅಡಿಗೆ ಹಾಕ್ಕೊಂಡೇ ಇಲ್ಲ ಅಂತ ತಲೆಯಾಡಿಸಿದಳು. "ನೋಡಮ್ಮಾ ಗೊತ್ತಾಯ್ತಾ.. ನೋಡು ನಿನ್ನಿಂದ ಅವ್ರಿಗೆಷ್ಟು ಅವಮಾನ ಆಯ್ತು. ಹೋಗ್ ನಿನ್ನ ಕೆಲ್ಸ ನೋಡು ಹೋಗು.." ಬೈದ ರಾಹುಲ್. ಮೆಲ್ಲ ಸುತ್ತಲೂ ನೋಡಿದ ಎಲ್ಲಾ ಸಹೋದ್ಯೋಗಿಗಳೂ ಗೆಳೆಯರೂ ನೋಡಿ ಮುಸಿ ಮುಸಿ ನಗುತ್ತಿದ್ದರು. ರಾಹುಲ್ ಗೆ ನಾಚಿಕೆಯಾಗಿ ಚೇಂಬರ್ ಗೆ ಹೋಗಿ ಬಾಗಿಲು ಹಾಕ್ಕೊಂಡು ಫ್ಯಾನ್ ಆನ್ ಮಾಡಿ ಚೇರ್ನಲ್ಲಿ ಕುಳಿತುಕೊಂಡ. ಕೆಲಸದವಳ ಮಾತು ತಲೆಯಲ್ಲಿ ಗಿರಕಿ ಹೊಡೆಯತ್ತಾ ಇತ್ತು..
" ನೋಡ್ರೋ ನಮ್ಮ ರಾಹುಲ್ ಸಾಹೇಬರು ನಮ್ಮ ವೋಸಾ ಅಮ್ಮಾವ್ರಿಗೆ ಲೈನ್ ಹೊಡಿತಿದಾರೆ ಅನಿಸುತ್ತೆ.."
ರಾಹುಲನ ಮುಖದಲ್ಲಿ ತಿಳಿಯಾದ ನಗು ಮೂಡಿ ಬಂತು. ಹೌದಾ ನಾನು ನಿಜ್ವಾಗಿಯೂ ಅವ್ಳಿಗೆ ಲೈನ್ ಹೊಡಿತಾ ಇದ್ನಾ..? ಲವ್ವೇ ಮಾಡ್ತಾ ಇದೀನಾ.. ಮನಸಿನಲ್ಲಿ ನವಿರಾದ ಗೊಂದಲಗಳು ನಲಿದಾಡುತ್ತಿದ್ದವು. ರಾಹುಲ್ ನ ಬಾಯಿ-ಮನಸ್ಸು ಹಳೆಯ ಚಲನಚಿತ್ರಗಳ ರೊಮ್ಯಾಂಟಿಕ್ ಗೀತೆಗಳನ್ನು ಗುನುಗುಣಿಸಲಾರಂಬಿಸಿತು. ಹೇಗಾದ್ರೂ ವೀಣಾಳ ಸೆಲ್ ನಂಬರ್ ತಗೊಂಡ್ರೆ ಹೇಗೇ ಅನ್ನೋ ಆಸೆ ಮೂಡಿತು. ತಕ್ಷಣ ಬಾಸ್ ಹೇಳಿದ ಕೆಲಸಗಳು ನೆನಪಾಗಿ ಕೆಲಸದಲ್ಲಿ ತೊಡಗಿದ.
ಸಮಯದ ಅರಿವಿರಲಿಲ್ಲ, ಕೆಲಸ ಮುಗಿಯುವುದಿಲ್ಲ., ಕಾಲ ನಿಲ್ಲುವುದಿಲ್ಲ. ರಾಹುಲನಿಗೆ ಹೊಟ್ಟೆ ಹಸಿವಾಗುತ್ತಿತ್ತು. ಟೈಪಿಂಗ್ ನಿಲ್ಲಿಸಿ ವಾಚ್ ನೋಡಿಕೊಂಡ, ಗಡಿಯಾರದ ಮುಳ್ಳುಗಳು ೨.೩೦ ತೋರಿಸುತ್ತಿತ್ತು. ಬಹಳ ಹೊತ್ತೇನೂ ಆಗಿಲ್ಲ ಅಂದುಕೊಂಡು ಚೇಂಬರ್ ನಿಂದ ಹೊರಗೆ ಬಂದು ವೀಣಾಳ ಟೇಬಲ್ ನತ್ತ ಕಣ್ಣು ಹಾಯಿಸಿದ. ಅವಳು ತಿರುಗಿ ಕುಳಿತು ಟಿಫನ್ ಬಾಕ್ಸ್ ನಲ್ಲಿ ಊಟ ಮಾಡುತ್ತಿದ್ದಳು. ರಾಹುಲನಿಗೆ ಕುತೂಹಲವಾಯಿತು. " ವೀಣಾ ಅವ್ರೆ ಊಟ ಮಾಡ್ತಾ ಇದೀರಾ..? ಏನು ಸ್ಪೆಶಲ್..?"
"ಸ್ಪೆಶಲ್ ಏನೂ ಇಲ್ಲಾ ರಾಹುಲ್ ಅವ್ರೇ ಊಟ ಮಾಡ್ತಾ ಇದೀನಿ, ಅಮ್ಮಾ ನಂಗಿಷ್ಟ ಅಂತ ಒಣ ಮೀನಿನ ಪಲ್ಯ ಮಾಡಿದಾರೆ" ಅಂದಳು ನಗುತ್ತಾ.
" ಓಹೋ ಮುಂದುವರಿಸಿ ನಾನು ಊಟ ಮಾಡ್ಕೊಂಡು ಬರ್ತೀನಿ." ಅನ್ನುತ್ತಾ ಹೊರಬಿದ್ದ..
ಊಟ ಮಾಡ್ತಾ ಇದ್ದ ರಾಹುಲನಿಗೆ ವೀಣಾಳ ಮಾತುಗಳು ತಲೆಯಲ್ಲಿ ಸರ್ಕಸ್ ಮಾಡಲಾರಂಭಿಸಿದವು..
""ಸ್ಪೆಶಲ್ ಏನೂ ಇಲ್ಲಾ ರಾಹುಲ್ ಅವ್ರೇ ಊಟ ಮಾಡ್ತಾ ಇದೀನಿ, ಅಮ್ಮಾ ನಂಗಿಷ್ಟ ಅಂತ ಒಣ ಮೀನಿನ ಪಲ್ಯ ಮಾಡಿದಾರೆ"
ಥತ್ತೇರಿ ಇವಳು ನಾನ್ ವೆಜ್ಜು.. ಆದ್ರೆ ನಾನು ವೆಜ್ಜು, ಕಾಂಬಿನೇಶನ್ ಮಿಸ್ ಆಯ್ತಲ್ಲಾ.. ಹಾಂ ಹೌದು ಅವಳ ಅಪ್ಲಿಕೇಶನ್ ನಲ್ಲಿ ವೀಣಾ ಗೌಡ ಅಂತ ಓದಿದ ನೆನಪು.., ಅಂದ್ರೆ ಅವ್ರು ಗೌಡಾಸ್.
ತಲೆನೋವು ಶುರುವಾಯಿತು. ಅವಳಿಗೆ ನನ್ನ ಮೇಲೆ ಸಣ್ಣ ಕ್ರಶ್ ಇದೆ, ನಂಗಂತೂ ತುಂಬಾ ಇದೆ. ಆಲೋಚನೆ ಮಾಡ್ತಾ ಇರೋವಾಗಲೇ ಮೊಬೈಲ್ ರಿಂಗ್ ಆಯ್ತು. ಎಡಗೈಯಿಂದ ಕಷ್ಟ ಪಟ್ಟು ಪ್ಯಾಂಟ್ ಕಿಸೆಯಿಂದ ತೆಗೆದು ರಿಸೀವ್ ಮಾಡಬೇಕು ಅನ್ನುವಷ್ಟರಲ್ಲಿ ಕಾಲ್ ಕಟ್ ಆಯ್ತು. ಯಾವುದೋ ಅನ್ನೌನ್ ನಂಬರ್. ಇರಲಿ ಊಟ ಮಾಡ್ಕೊಂಡು ಆಮೇಲೆ ನೋಡೋಣ ಅಂತ ಅದೇ ಜೇಬೊಳಗೆ ಮೊಬೈಲ್ ಹಾಕಿ ಇನ್ನೊಂದು ತುತ್ತು ತಿನ್ನುವಷ್ಟರಲ್ಲಿ ಪುನಃ ರಿಂಗ್ ಆಯ್ತು, ಪುನಃ ಹಾಗೇ ಕಟ್ ಆಯ್ತು. ಇನ್ನು ಕಾಲ್ ಬಂದ್ರೆ ಕಷ್ಟ ಆಗೋದು ಬೇಡ ಅಂತ ಮೊಬೈಲ್ ಅನ್ನು ತೆಗೆದು ಅಂಗಿಯ ಜೇಬೊಳಗೆ ಇಟ್ಟುಕೊಂಡ. ಆದರೆ ಈ ಬಾರಿ ಕಾಲ್ ಬರಲೇ ಇಲ್ಲ. ಊಟ ಮುಗಿಸಿ ಆಫೀಸಿಗೆ ಬಂದು ಚೇಂಬರಿನ ಫ್ಯಾನ್ ಆನ್ ಮಾಡಿ ತನ್ನ ಚೇರಿನಲ್ಲಿ ಕಾಲು ಉದ್ದ ಮಾಡಿ ಆಸೀನನಾದ. ಅರ್ಧ ಘಂಟೆ ಊಟ ಟೈಮು. ಇನ್ನೂ ಹದಿನೈದು ನಿಮಿಷ ಬಾಕಿ ಇದೆ. ಸ್ವಲ್ಪ ನಿದ್ದೆ ಮಾಡೋಣ ಅಂದುಕೊಳ್ಳುತ್ತಿದ್ದಂತೆ ಪುನಹ ಮೊಬೈಲ್ ಗೆ ಮಿಸ್ಡ್ ಕಾಲ್ ಬಂತು, ಹೌದು ಅದೇ ನಂಬರ್.. ಈ ಬಾರಿ ಎರಡು ದಬಾಯಿಸಲೇ ಬೇಕು ಅಂದುಕೊಂಡು ಫೋನಾಯಿಸಿದ. ರಿಂಗ್ ಆಗ್ತಾ ಇತ್ತು ರಿಸೀವ್ ಆಗಲೇ ಇಲ್ಲ. ಪುನಃ ಮಾಡಿದ, ಯಾವುದೇ ರೀತಿಯ ರೆಸ್ಪೋನ್ಸ್ ಇಲ್ಲ
ಯಾರಿಗೋ ಮಾಡಕ್ಕೆ ಕೆಲ್ಸ ಇಲ್ಲ, ಆದ್ರೆ ನಂಗಿದೆ ಅನ್ನುತ್ತಾ ಪಿಸಿ ಆನ್ ಮಾಡಿ ಎದುರಿನಲ್ಲಿ ನಾಲ್ಕೈದು ಫೈಲ್ ಬಿಡಿಸಿಟ್ಟು ತನ್ನ ಕೆಲಸ ಶುರು ಮಾಡಿದ.
ಟೈಪಿಂಗು, ಎಂಟ್ರೀ, ಡಾಟಾ ಸೆಂಡಿಂಗೂ ಎಲ್ಲಾ ಮುಗೀತು. ಟೈಮ್ ನೋಡಿದಾಗ ೫.೩೦. ಹಾಂ ಆಫೀಸ್ ಕ್ಲೋಸ್ ಇನ್ನೇನು ಆಗುತ್ತೆ ಅನ್ನೋವಷ್ಟರಲ್ಲಿ ಎಲ್ಲಾ ಫೈಲ್ ಗಳನ್ನು ಬಾಸ್ ಗೆ ಸಬ್ಮಿಟ್ ಮಾಡಿ ಗುಡ್ ಅನ್ನಿಸಿಕೊಂಡು ಮನೆಗೆ ಹೊರಟ ಹೊರಡುವಾಗೊಮ್ಮೆ ವೀಣಾ ಟೇಬಲ್ ಕಡೆಗೆ ಕಣ್ಣು ಹಾಯಿಸಿದ. ಅವಳು ಹೋಗಿಯಾಗಿತ್ತು.
" ಇವಾಗ ಹೋದ್ರೇನಂತೆ ಸಾರ್ ನಾಳೆ ಬತ್ತಾರೆ ನೀವು ತಲೆಬಿಸಿ ಮಾಡ್ಕಬೇಡಿ.."
ರಾಹುಲ ತಿರುಗಿ ನೋಡಿದ. ಕೆಲ್ಸದೋಳು ಕಸ ಗುಡಿಸ್ತಾ ಇದ್ದಳು. ಅವನ್ನೊಮ್ಮೆ ದುರುಗುಟ್ಟಿ ನೋಡಿ ಅಲ್ಲಿಂದ ಕಾಲುಕಿತ್ತ..
ಯೇ ಮೇರಾ ದಿಲ್.. ಆಯೇಗಾ ಯೇ ಆಯೇ ವೋ ..ಗಾಯೇಗಾ, ಕಾಹೋನಾ ಪ್ಯಾರ್ ಹೇ ಚಿತ್ರದ ಗೀತೆ ಬರ್ತಾ ಇತ್ತು ಟಿವಿಯಲ್ಲಿ. ಸೋಫಾದಲ್ಲಿ ಕಾಲು ಮೇಲೆ ಮಾಡಿ ಮಲಗಿಕೊಂಡು ಟಿವಿ ನೋಡುತ್ತಾ ಇದ್ದ ರಾಹುಲ್., ಟಿಂಟಿಂ ಟಿಂಟಿಂ ಮೊಬೈಲ್ ಗೆ ಮೆಸೇಜ್ ಬಂತು, ಓಪನ್ ನೋಡಿ ನೋಡಿದ. ಅದೇ ಗೊತ್ತಿಲ್ಲದ ನಂಬರಿಂದ.. "ಹಾಯ್ ರಾಹುಲ್ 😉 "
ರಾಹುಲ್ ರಿಪ್ಲಯ್ ಮಾಡಿದ.
" ಮೇ ಐ ನೋ ಹು ಆರ್ ಯು..?"
"ನಾನು ಕಣ್ರೀ ಗೊತ್ತಾಗಿಲ್ವಾ..?"
" ಹೇಳಿದ್ರೆ ತಾನೆ ಗೊತ್ತಗೋದು..?"
" ಹಮ್ ಹಾಗೆಲ್ಲಾ ಹೇಳೊಕಾಗಲ್ಲ ನೀವೇ ಕಂಡುಹಿಡಿಬೇಕು.."
"ಹೇಳೋಕೆ ಮನಸಿದ್ರೆ ಹೇಳಿ ಒತ್ತಾಯ ಮಾಡೋದಿಲ್ಲ" ರಾಹುಲ್ ಗೆ ಸಿಟ್ಟು ಬಂದಿತ್ತು.
ಆದ್ರೆ ಆಕಡೆಯಿಂದ ಉತ್ತರ ಬರಲಿಲ್ಲ, ರಾಹುಲ್ ನಿದ್ದೆ ಬರಲಾರಂಭಿಸಿತು., ಟಿವಿ ಆಫ್ ಮಾಡಿ ಮಲಗಿದ. ನಿದ್ದೆ ಬರಲಿಲ್ಲ , ವೀಣಾನ ನೆನಪುಗಳು ಕಾಡುತ್ತಿದ್ದವು. ತಲೆದಿಂಬನ್ನು ಎದೆಗೊತ್ತಿ ಮಲಗಿದ. ನವಿರಾದ ನಿದ್ದೆಯಲ್ಲಿ ನವಿರಾದ ಕನಸುಗಳು…
ಬೆಳಗ್ಗೆ ಅಮ್ಮ ಎಬ್ಬಿಸಿದಾಗ ಕಣ್ಣುಜ್ಜುತ್ತಾ ಎದ್ದು ಮೊಬೈಲ್ ನಲ್ಲಿ ಟೈಮ್ ನೋಡಿದ 7.00am ಆಗಿತ್ತು. ಜತೆಗೊಂದು ಅದೇ ಗೊತ್ತಿಲ್ಲದ ನಂಬರಿಂದ ಮೆಸೇಜ್. " ಗುಡ್ ನೈಟ್ ಡಿಯರ್. ಕೋಪ ಮಾಡ್ಕೋಬೇಡಿ.."
ಯಾರೋ ಏನೋ, ಮೊಬೈಲ್ ಬಿಸಾಕಿ ರೆಡಿಯಾಗಿ ಆಫೀಸಿಗೆ ಹೋದ. ಆಫೀಸ್ ಎಂಟ್ರೀ ಆದ ಹಾಗೆ ಕೊಲೀಗ್ ಹೇಮಾ ಮೇಡಂ ನ ವರದಿಯಾಯ್ತು.
" ಹೇಯ್ ರಾಹುಲ್ ನಿನ್ನೆ ವೀಣಾ ನಿನ್ನ ನಂಬರ್ ತಗೊಂಡ್ಳು ಏನೋ ಅರ್ಜೆಂಟಿದೆಯಂತೆ. ಕಾಲ್ ಮಾಡಿದ್ಲಾ.."
"ಹೌದಾ ಯಾವುದು ಅವಳ ನಂಬರ್ ತೋರಿಸಿ.."
" ನೋಡಿಲ್ಲಿ " ತನ್ನ ಮೊಬೈಲ್ ತೆಗೆದು ತೋರಿಸಿದಳು.
ಹೌದು ಅದೇ ನಂಬರ್ ಅವಳಾ ನನ್ನ ಸತಾಯಿಸಿದ್ದು, ರೋಮಾಂಚನವಾಯಿತು ರಾಹುಲ್ ನಿಗೆ. ವೀಣಾನ ಟೇಬಲ್ ನೋಡಿದ ಅದೇನೋ ಟೈಪಿಂಗ್ ನಲ್ಲಿ ಮಗ್ನವಾಗಿದ್ದಳು. ಅವಳತ್ತ ನೋಡುತ್ತಲೇ ಚೇಂಬರಿಗೆ ಹೋಗುತ್ತಿದ್ದ. ಅವಳು ಸ್ವಲ್ಪವೇ ತಲೆಯೆತ್ತಿ ಇವನತ್ತ ವಾರೆ ಕಣ್ಣಿನಲ್ಲಿ ನೋಡಿ ನಕ್ಕು ಮೆಲುದನಿಯಲ್ಲಿ "ಹಾಯ್" ಅಂದಳು. ರಾಹುಲನ ಎದೆಯೊಳಗೆ ಚಂಡೆ ಬಾರಿಸಿದಂತಾಗಿ ನೇರ ಚೇಂಬರ್ ನ ಒಳಗೆ ಹೋಗಿ ಫ್ಯಾನ್ ಕೆಳಗೆ ಕುಳಿತು ನೀರು ಕುಡಿದು ಸುಧಾರಿಸಿಕೊಂಡ. ರಾಹುಲನಿಗೆ ವಿಪರೀತ ಖುಷಿಯಾಗುತ್ತಿತ್ತು. ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಚಡಪಡಿಸುತ್ತಿದ್ದ.
ವೆಜ್ಜು-ನಾನ್ ವೆಜ್ಜುಗಳು, ಮನೆಯ ಆಚಾರಗಳು ಎಲ್ಲಾ ಮರೆತು ಹೋದವು. ಆ ಗೊತ್ತಿಲ್ಲದ ನಂಬರನ್ನು ವೀಣಾ ಎಂದು ಸೇವ್ ಮಾಡಿ ಕಾಲ್ ಬಟನ್ ಒತ್ತಿದ ರಿಂಗ್ ಆಗುತ್ತಿತ್ತು. ಒತ್ತಡ ತೀವ್ರವಾಗುತ್ತಿತ್ತು, ರಿಸೀವ್ ಆಯಿತು, " ಹಲೋ" ಆಹಾ ಮಧುರವಾದ ದನಿಯನ್ನು ಕೇಳಿ ಮೈ ಮರೆತ ರಾಹುಲ್.
"ಹಲೋ.. ಯಾರು..? ಮಾತಾಡಿ.." ಕಾಲ್ ಕಟ್ ಮಾಡಿದ, ಎದೆಯೊಳಗಿನ ಸದ್ದು ಕಿವಿಗೆ ಬಡಿಯುತ್ತಿತ್ತು, ಕಿವಿಯೊಳಗಿಂದ ಬಿಸಿ ಗಾಳಿ ಬಂದಂತಾಗುತ್ತಿತ್ತು.
ಪುನಃ ಕಾಲ್ ಮಾಡಿದ. ರಿಸೀವ್ ಮಾಡಿದ ತಕ್ಷಣ "ಹಲೋ ವೀಣಾ ಅವ್ರೆ ನಂಗೊತ್ತು ಕಣ್ರೀ ನೀವೇ ಅಂತ ಯಾಕೆ ಆಟ ಆಡ್ತಾ ಇದೀರಾ..?"
" ಸುಮ್ಮನೆ ನೀವಲ್ವಾ ಅದಿಕ್ಕೆ.."
"ಓಹೋ ನಾನಂದ್ರೆ ಅಷ್ಟೊಂದು ಚೀಪಾ ನಿಮ್ಗೆ..?"
" ಆ ಥರ ಅಲ್ಲಾರೀ ನೀವ್ ನನ್ನ ಫ್ರೆಂಡ್ ಅಲ್ವಾ..? ಸಾರೀ ರೀ ಪ್ಲೀಸ್ ಬೇಜಾರಾಯ್ತಾ..??"
ಕಾಲ್ ಕಟ್ ಮಾಡಿ ಮೊಬೈಲ್ ಬದಿಗಿಟ್ಟ. ಅವಳ ಮೆಸೇಜ್ ಬಂತು, " ಸಾರೀ ರಾಹುಲ್ ಡಿಯರ್ ಪ್ಲೀಸ್…"
ರಾಹುಲ್ ಮೆಲ್ಲನೆ ಚೇಂಬರ್ ನಿಂದ ಇಣುಕಿ ನೋಡಿದ. ಅವಳ ಮುಖದಲ್ಲಿ ಬೇಸರದ ಛಾಯೆ ಕಾಣುತ್ತಿತ್ತು.
ರಾಹುಲ್ ನ ಮನಸ್ಸು ತಡೆಯಲಿಲ್ಲ, ಉತ್ತರಿಸಿದ "ಇಟ್ಸ್ ಓಕೆ ಡಿಯರ್.. ;-)"
ದಿನ ಕಳೆದಂತೆ ಮೆಸೇಜ್ ಗಳಲ್ಲಿ ಅತಿಯಾದ ಅತ್ಮೀಯತೆ, ಪ್ರೀತಿ ಕಂಡು ಬರಲಾರಂಭಿಸಿತು. ಫ್ರೆಂಡ್- ಡಿಯರ್ ಅಂತಿದ್ದ ಸಂಬೋಧನೆಗಳು, ಜಾನು-ಚಿನ್ನು, ಮುದ್ದು-ಸ್ವೀಟ್ ಹಾರ್ಟ್ ಗಳಾಗಿ ಬದಲಾದವು. ಹಲೋ ಚಿನ್ನುವಿನಿಂದ ಶುರುವಾದ ಫೋನ್ ಕಾಲ್ ಗಳು ಉಮ್ಮ ಗಳಿಂದ ಅಂತ್ಯವಾಗತೊಡಗಿತು. ಆಫೀಸಿನಲ್ಲಿ ಮುಖತಃ ಮಾತುಕತೆಗಳು ಕಡಿಮೆಯಾದವು. ಲವ್ ಇನ್ ಫೋನ್ ಜಾಸ್ತಿಯಾದವು. ರಾಹುಲ್ ಬಿಡುವಿದ್ದಾಗ ಚೇಂಬರ್ ನಿಂದ ತುಂಟ ಮೆಸೇಜ್ ಗಳನ್ನು ಮಾಡುತ್ತಿದ್ದ. ಅವಳೂ ಕೂಡ, ಕರೆಯನ್ನೂ ಮಾಡುತ್ತಿದ್ದಳು. ಇಬ್ಬರೂ ಮೆಲ್ಲಗೆ ಮಾತಾಡಿಕೊಳ್ಳುತ್ತಿದ್ದರು. ವಿಷಯದ ಅಗತ್ಯ ಬೇಕೇ ಪ್ರೇಮಿಗಳಿಗೆ? ಆಫೀಸಿನಿಂದ ಹೊರಡುವಾಗ ಯಾವಾಗಲೂ ಯಾರಿಗೂ ತಿಳಿಯದಂತೆ ವೀಣಾಳಿಂದ ಸಿಹಿ ಮುತ್ತನ್ನು ಪಡೆಯುತ್ತಿದ್ದ. ಸಿಬ್ಬಂದಿಗಳಿಗೂ ಕ್ರಮೇಣ ಇವರ ಫೋನ್ ಪುರಾಣ ತಿಳಿಯಿತು. ಒಮ್ಮೆ ರಾಹುಲ್ ವೀಣಾಳ ಮುತ್ತು ಪಡೆಯುವಾಗ ಬಾಸ್ ನೋಡಿಬಿಟ್ಟರು. ಬಾಸ್ ನೋಡಿದ್ದು ರಾಹುಲ್ ಗಾಗಲೀ ವೀಣಾಗಾಗಲೀ ತಿಳಿಯಲಿಲ್ಲ. ಒಂದು ದಿನ ರಾಹುಲ್ ನ ಮನೆಯಲ್ಲಿ ಪೂಜಾ ಕಾರ್ಯಕ್ರಮವಿದೆಯೆಂದು ಆಫೀಸಿಗೆ ರಜಾ ಹಾಕಿದ್ದ. ಮಾರನೆ ದಿನ ಭಾನುವಾರ ಹಾಗಾಗಿ ರಾಹುಲನಿಗೆ ವೀಣಾಳನ್ನು ನೋಡಬೇಕೆಂದರೆ ಎರಡು ದಿನ ಕಾಯಬೇಕಿತ್ತು. ಹೇಗಪ್ಪಾ ಅಂತ ಅಂದುಕೊಂಡದ್ದ. ಪೂಜಾ ದಿನ ರಾತ್ರಿ ಮಲಗುವ ಸಮಯದಲ್ಲಿ ವೀಣಾಳಿಂದ ಮೆಸೇಜ್ ಬಂತು.
" ಹಾಯ್ ಚಿನ್ನು, ನಾನು ಸೋಮಾವರದಿಂದ ಬರೋದಿಲ್ಲ."
"ಯಾಕೆ..?" ರಾಹುಲ್ ಆತಂಕದಿಂದ ಕಾಲ್ ಮಾಡಿ ಕೇಳಿದ.
"ಬಾಸ್ ಬರೋದು ಬೇಡ ಅಂತ ಹೇಳಿದ್ರು.."
"ಅದೇ ಯಾಕೆ..?
" ಗೊತ್ತಿಲ್ಲ ಹೇಗೂ ಪ್ರೊಬೆಶನರಿಯಾಗಿ ತೆಗೊಂಡಿದ್ದು, ಬೇಡ ಅಂದ್ರೆ ತೆಗಿತಾರೆ.. ಏನ್ಮಾಡೋದು ಕಣೋ.."
"ನಾನು ಬಾಸ್ ಹತ್ರ ಮಾತಾಡ್ತೀನಿ, ಇರು.." ಕಾಲ್ ಕಟ್ ಮಾಡಿ ಉದ್ವೇಗದಿಂದ ಬಾಸ್ ಗೆ ಕಾಲ್ ಮಾಡಿದ..
ಬಾಸ್ ರಿಸೀವ್ ಮಾಡಿ " ಹಲೋ ಹೇಳಪ್ಪಾ ರಾಹುಲ್.."
"ಏನಿಲ್ಲಾ ಸರ್, ವೀಣಾನ ಕೆಲಸದಿಂದ ತೆಗೆದ್ರಂತೆ..? ಚೆನ್ನಾಗೇ ಕೆಲ್ಸ ಮಾಡ್ತಾ ಇದ್ದಳಲ್ವಾ..??
" ನೋಡು ರಾಹುಲ್ ನನ್ನ ಆಫೀಸ್ ಯಾರನ್ನು ಇಟ್ಕೋಬೇಕು, ಯಾರನ್ನು ತೆಗಿಬೇಕು ಅಂತ ನಂಗೆ ಚೆನ್ನಾಗಿ ಗೊತ್ತು, ಅದಿರ್ಲಿ ನಂಗೆ ನಿನ್ನ ಜತೆ ಪರ್ಸನಲ್ ಆಗಿ ಮಾತಾಡ್ಬೇಕು, ನಾಳೆ ಸಿಗು." ಕಾಲ್ ಕಟ್ ಮಾಡಿದರು..
ರಾಹುಲ್ ಗೆ ವಿಪರೀತವಾದ ಬೇಸರವಾಯಿತು. ಆವತ್ತು ದುಗುಡ ತುಂಬಿದ ಮನಸಿನಲ್ಲಿ ಮಲಗಿದ ರಾಹುಲನಿಗೆ ರಾತ್ರಿ ನಿದ್ದೆಯೇ ಬರಲಿಲ್ಲ.
ಮಾರನೆಯ ದಿನ ಬೆಳಗ್ಗೆ ಎದ್ದು ರೆಡಿಯಾಗಿ, ಹೊರಗಡೆ ಸ್ವಲ್ಪ ಕೆಲಸವಿದೆಯೆಂದು ಅಮ್ಮನ ಬಳಿ ಹೇಳಿ ಬಾಸ್ ನ ಮನೆಗೆ ಹೊರಟ. ಬೈಕಿನಲ್ಲಿ ಹೋಗುತ್ತಿರುವಾಗ ತಲೆಯಲ್ಲಿ ಒಂದೇ ಆಲೋಚನೆ, ವೀಣಾಳನ್ನು ಹೇಗಾದ್ರು ಮಾಡಿ ಪುನಃ ಆಫೀಸ್ ಸೇರಿಸಲೇ ಬೇಕು ಅಂದುಕೊಂಡನು. ಹತ್ತು ನಿಮಿಷಗಳ ದಾರಿಯ ನಂತರ ಬಾಸ್ ನ ಮನೆ ತಲುಪಿದನು. ಗೇಟು ತೆಗೆದು ಮನೆಯೆದುರು ನಿಂತು ಕಾಲಿಂಗ್ ಬೆಲ್ಲ್ ಒತ್ತಿದ. ಬಾಸ್ ಅವರೇ ಬಂದು ಬಾಗಿಲು ತೆರೆದರು. " ಬಾ ರಾಹುಲ್ ಬಾ ನಿಂಗೇ ಕಾಯ್ತಾ ಇದ್ದೆ.. ತಿಂಡಿ ಆಯ್ತಾ..?' ಇವನು "ಆಯ್ತು" ಎಂದು ಒಂಥರಾ ಮುಖ ಇಟ್ಟುಕೊಂಡ. " ಬಾ ರೂಮಿಗೆ ಹೋಗಿ ಮಾತಾಡೋಣ." ರಾಹುಲ್ ಮರು ಮಾತಾಡದೇ ಅವರ ಹಿಂದೆ ನಡೆದ. ಅವರೊಂದು ಚೇರ್ ನಲ್ಲಿ ಕುಳಿತು ಎದುರುಗಡೆ ಇನ್ನೊಂದು ಚೇರ್ ಇಟ್ಟು ಕುಳಿತುಕೋ ಅಂದರು. ತೆಪ್ಪಗೆ ಕುಳಿತ.
" ನೋಡು ರಾಹುಲ್ ನನ್ನ ಆಫೀಸನ್ನ ಥಿಯೇಟರ್ ಅಂತ ತಿಳ್ಕೊಂಡಿದಿಯಾ..? ಅಥವಾ ಪಾರ್ಕ್ ಅಂತಾನಾ..?"
ರಾಹುಲ್ ಗೆ ಏನೂ ಅರ್ಥ ಆಗಲಿಲ್ಲ.." ಆಫೀಸ್ ಅಂತಾನೇ ತಿಳ್ಕೊಂಡಿದೀನಿ, ಯಾಕೆ.. ಸರ್..?"
" ನೋಡಪ್ಪಾ ನೀನು ವೀಣಾಳನ್ನು ನಿಜವಾಗಿಯೂ ಲವ್ ಮಾಡ್ತಾ ಇದೀಯಾ ಅಥವಾ ಟೈಂ ಪಾಸಾ..??
"ಇಲ್ಲಾ ಸರ್, ಆಥರದ್ದೇನೂ ಇಲ್ಲ"
ನೋಡಪ್ಪಾ ಮೊನ್ನೆ ನಿಮ್ಮ ನಡುವೆ ಕಿಸ್ಸಿಂಗ್ ಆಗ್ತಾ ಇದ್ದಿದ್ದನ್ನ ನಾನು ಕಣ್ಣಾರೆ ನೋಡಿದೀನಿ ನನ್ನ ಹತ್ರಾನೇ ಸುಳ್ಳು ಹೇಳ್ತೀಯಾ..?" ಸ್ವರ ಏರಿಸಿದರು.
ರಾಹುಲ್ ಗೆ ಶಾಕ್ ಆಯಿತು." ಸಾರಿ ಸರ್ ನಾನು ಅವಳನ್ನ ನಿಜ್ವಾಗಿಯೂ ಲವ್ ಮಾಡ್ತಾ ಇದೀನಿ.."
" ಹ ಹ ಲವ್..? ರಿಯಲೀ.. ಇದಿಕ್ಕೆ ನಿಮ್ಮ ಮನೆಯಲ್ಲಿ ಒಪ್ತಾರೆ ಅಂದ್ಕೊಂಡಿದೀಯಾ..?"
ರಾಹುಲ್ ಇಲ್ಲ ಎಂಬಂತೆ ತಲೆಯಾಡಿಸಿದ.
" ಗೊತ್ತಿದ್ದೂ ಯಾಕಪ್ಪಾ ಇಂತಹಾ ಕೆಲ್ಸ ಮಾಡ್ತೀಯಾ? ನಿನ್ನ ಅಪ್ಪ ಅಮ್ಮನಿಗೆ ಗೊತ್ತಾದ್ರೆ ಎಷ್ಟು ಬೇಜಾರ್ ಮಾಡ್ಕೋತಾರೆ ಗೊತ್ತಾ..? ಮನೇಲಿ ಒಪ್ಪಿಲ್ಲಾಂದ್ರೆ ಓಡಿ ಹೋಗಿ ಮದ್ವೆ ಆಗೋ ತಾಕತ್ತು ಇದ್ಯಾ ನಿಂಗೆ? ಅದಿಕ್ಕೆಲ್ಲಾ ಬೇಕಾದಷ್ಟು ದುಡ್ಡು ಇದ್ರೆ ನಡಿಯುತ್ತೆ, ಇಲ್ಲಾಂದ್ರೆ ಏನೂ ಆಗೋಲ್ಲ ಗೊತ್ತಾ. ನಮ್ಮ ಜಾತಿಯೋರೇ ಆಗಿದ್ದಿದ್ದರೆ ನಾನೇ ಮದುವೆ ಮಾಡಿಸ್ತಿದ್ದೆ. ಇಂಟರ್ ಕಾಸ್ಟ್ ಆಗ್ರೋದ್ರಿಂದ ನನ್ನ ಸಪೋರ್ಟ್ ಖಂಡಿತಾ ಇಲ್ಲ. ಅವಳನ್ನು ಮರೆತು ಬಿಡು. ಕೇವಲ ಎರಡು ತಿಂಗಳಿನ ಲವ್ ಗೋಸ್ಕರ ನಿನ್ನ ಇಷ್ಟು ವರ್ಷ ಪ್ರೀತಿಸಿ ಬೆಳೆಸಿದ ನಿನ್ನ ಅಪ್ಪ ಅಮ್ಮನಿಗೆ ನೀನು ಈ ಥರಾನಾ ಋಣ ತೀರಿಸೋದು. ಅಪ್ಪ ಅಮ್ಮ ನೋಡಿದ ಹುಡುಗಿ ಮದುವೆ ಆಗು. ಅಪ್ಪ ಅಮ್ಮನಿಗೆ ಒಳ್ಳೆ ಮಗನಾಗು. ನಿನ್ನ ತಂದೆ ನನ್ನ ಬೆಸ್ಟ್ ಫ್ರೆಂಡ್ ಅಂತಾ ನಿಂಗೆ ಹೀಗೆಲ್ಲಾ ಹೇಳ್ತಾ ಇದೀನಿ. ಜಸ್ಟ್ ಡ್ರಾಪ್ ಇಟ್ ಗೊತ್ತಾಯ್ತಾ..?
ರಾಹುಲ್ ಮಾತಾಡದೆ ಆಯ್ತು ಎಂಬಂತೆ ತಲೆಯಾಡಿಸಿ ಮನೆಗೆ ಹೋದ. ಮದ್ಯಾಹ್ನ ಊಟ ಸೇರಲಿಲ್ಲ, ಸುಮ್ಮನೆ ರೂಮಲ್ಲಿ ಬಾಗಿಲು ಹಾಕಿ ಮಲಗಿ ಚಿಂತಿಸುತ್ತಿದ್ದ. ತಲೆಯೊಳಗೆ ಬಾಸ್ ನ ಮಾತುಗಳು ಮರಣಬಾವಿಯೊಳಗೆ ಸುತ್ತುವ ವಾಹನಗಳಂತೆ ಸುತ್ತುತ್ತಿದ್ದವು..
" ಕೇವಲ ಎರಡು ತಿಂಗಳಿನ ಲವ್ ಗೋಸ್ಕರ ನಿನ್ನ ಇಷ್ಟು ವರ್ಷ ಪ್ರೀತಿಸಿ ಬೆಳೆಸಿದ ನಿನ್ನ ಅಪ್ಪ ಅಮ್ಮನಿಗೆ ನೀನು ಈ ಥರಾನಾ ಋಣ ತೀರಿಸೋದು"
ಅಪ್ಪ ಅಮ್ಮ ಈ ಪ್ರೀತಿಯನ್ನು ಸುತಾರಾಂ ಒಪ್ಪುವುದಿಲ್ಲ, ಅವರ ಮನಸ್ಸು ನೋಯಿಸುವುದು ಅವನಿಗೂ ಇಷ್ಟವಿಲ್ಲ. ಕೊನೆಗೂ ಒಲ್ಲದ ಮನಸ್ಸನ್ನು ಬಿಗಿಹಿಡಿದು, ಹೇಗೂ ಆಫೀಸು ಬಿಟ್ಟಿದ್ದಾಳೆ, ವೀಣಾಳನ್ನು ದೂರ ಮಾಡುವುದೇ ಉತ್ತಮ ಅಂದುಕೊಂಡು ಹೃದಯವನ್ನು ಕಲ್ಲು ಮಾಡಿಕೊಂಡ.
ಅತ್ತ ವೀಣಾಳು ಮನೆಗೆಲಸ ಮುಗಿಸಿ ಮದ್ಯಾಹ್ನದ ಊಟ ಮಾಡಿ ರಾಹುಲನ ಜತೆಗಿನ ಕ್ಷಣಗಳ ಮಧುರತೆಯನ್ನು ನೆನಪು ಮಾಡಿಕೊಂಡು ಸವಿಯುತ್ತಿದ್ದಳು. ಕನಸು ಕಾಣುತ್ತಿದ್ದಳು. ಮುಖದಲ್ಲಿ ಮುಗುಳುನಗು ಮೂಡುತ್ತಿತ್ತು. ಕನಸಿನಲ್ಲಿ ಎರಡು ಹೃದಯಗಳು ಕೈ ಕೈ ಹಿಡಿದು ಮರ ಸುತ್ತುತ್ತಿದ್ದವು…
-ಶಶಿ ಕಿರಣ್
very good
ಬರೆಯುವ ಶೈಲಿ ಚೆನ್ನಾಗಿದೆ – ತಾನಾಗಿಯೇ ಓದಿಸಿಕೊಂಡು ಹೋಗುತ್ತದೆ. ಕೊನೆಯ ಸಾಲು ಓದಿದ ನಂತರ ಈ ಅಭಿಪ್ರಾಯ(ಕಥೆ ಕಾಲ್ಪನಿಕ ಎಂದು ನಂಬುತ್ತೇನೆ) ಃ
ಪ್ರೀತಿ ಅನ್ನುವುದು ಹುಡುಗಾಟಿಕೆಯೆ? ಇಲ್ಲಿ ಕಾಣುವುದು ಗಂಡು ಹೆಣ್ಣಿನ ಒಂದು ಆಕರ್ಷಣೆ ಅಷ್ಟೆ, ಅದು ಪ್ರೀತಿ ಅಲ್ಲ. ಒಬ್ಬರ ಹೃದಯ ಮತ್ತೊಬ್ಬರು ಅರ್ಥ ಮಾಡಿಕೊಳ್ಳಬೇಕು. ಎರಡೇ ತಿಂಗಳ ಪರಿಚಯದಲ್ಲಿ ಗಂಡು – ಹೆಣ್ಣು ಮುತ್ತಿಡುತ್ತಾರಾದರೆ ಅದು ಪ್ರಿತಿ ಅಲ್ಲ – ದೈಹಿಕ ಆಕರ್ಷಣೆ. ಪ್ರೀತಿ ಪವಿತ್ರವಾದುದು. ಅದರಲ್ಲಿ ದೈಹಿಕ ಆಕರ್ಷಣೆ ಇರುತ್ತದೆ, ಇಲ್ಲವೆಂದಲ್ಲ. ನಿಜವಾದ ಪ್ರೀತಿಸುವವರು ಮದುವೆಯಾಗದೆಯೂ, ದೈಹಿಕ ಆಕರ್ಷಣೆ ಇಲ್ಲದೆಯೂ ಪ್ರೀತಿಸ ಬಲ್ಲರು.
ಮೊದಲೇ ಹೇಳಿಗ ಹಾಗೆ ನೀವು ಚೆನ್ನಾಗಿ ಬರೆಯುತ್ತೀರಿ. ಮುಂದುವರಿಸಿ – ಶುಭವಾಗಲಿ
ಸುಂದರವಾಗಿದೆ.