ಈ ಪ್ರಪಂಚದ ಬಹುತೇಕ ಜನಸಂಖ್ಯೆ ಕಾಡು ಇರುವುದು ಕಡಿಯಲಿಕ್ಕೆ, ಪ್ರಾಣಿಗಳು ಇರುವುದು ತಿನ್ನಲಿಕ್ಕೆ ಎಂಬು ಭಾವಿಸಿಕೊಂಡಂತಿದೆ. ಈ ಮನೋಭಾವದಿಂದಾಗಿಯೇ ಜಗತ್ತಿನ ಬಹಳಷ್ಟು ಕಾಡು ಹಾಗೂ ವನ್ಯಸಂಪತ್ತು ನಶಿಸಿಹೋಗುತ್ತಿದೆ. ಕಾಡು ಇಲ್ಲದೆ ಮಳೆಯಿಲ್ಲ, ಮಳೆಯಿಲ್ಲದೆ ನೀರಿಲ್ಲ, ನೀರಿಲ್ಲದೆ ಮನುಷ್ಯನ ಜೀವನವಿಲ್ಲ ಎಂಬ ಸತ್ಯ ಇದೀಗ ನಿಧಾನವಾಗಿ ಅರಿವಿನ ಹಂತಕ್ಕೆ ಬರುತ್ತಿದೆ. ಅದರಲ್ಲೂ ನೀರಿಗಾಗಿ, ಕಾಡಿಗಾಗಿ ಜೀವಮಾನವನ್ನೇ ತೇಯ್ದ ಹಲವರು ನಮ್ಮ ಮುಂದಿದ್ದಾರೆ. ಇವರ ನಿಸ್ವಾರ್ಥ ಸೇವೆ ಜಗತ್ತಿನ ಧುರೀಣರಿಗೆ ಮಾದರಿಯಾಗಬೇಕು ಅಂತದೊಂದು ಸಾಹಸಗಾಥೆಯನ್ನು ಅನಾವರಣಗೊಳಿಸುವ ಮೊದಲು ನಮ್ಮ ಕಾಲಬುಡದಲ್ಲಿ ಏನೇನು ಘಟಿಸುತ್ತಿದೆ ಎಂಬುದನ್ನು ಕೊಂಚ ನೋಡೋಣವೆ?
ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ದಿನಾಂಕ:12/04/2016ರಂದು ಸಾಗರದಲ್ಲಿ ಸಭೆ ನಡೆಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರಾಜ್ಯದಲ್ಲಿ ಅರಣ್ಯ ಇಲಾಖೆಯ ವಶದಲ್ಲಿರುವ 2 ಲಕ್ಷ ಎಕರೆ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಾಸು ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂಬ ಅಂಶವನ್ನು ಬಹಿರಂಗ ಪಡಿಸಿದರು. ಇದೇ ಹೊತ್ತಿನಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ 5 ಸಾವಿರ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು ಎಂಬ ಇರಾದೆಯನ್ನು ಸನ್ಮಾನ್ಯ ವಿಧಾನಸಭಾಧ್ಯಕ್ಷರು ಹೊಂದಿದ್ದಾರೆ. ಉಳುವವನಿಗೆ ಭೂಮಿಯ ಹಕ್ಕು ಕೊಡುವುದು ಸಾಮಾಜಿಕ ನ್ಯಾಯವೇ ಹೌದು. ನಿಯಮಾನುಸಾರ ಪ್ರಕ್ರಿಯೆಗಳನ್ನು ಅನುಸರಿಸಿ ಅರಣ್ಯ ಹಕ್ಕು ನೀಡಿದರೆ ಉತ್ಪಾತವೇನು ಆಗುವುದಿಲ್ಲ. ಆದರೆ, ನಿಯಮಬಾಹಿರವಾಗಿ ನೀಡಿದರೆ, ಇಲ್ಲಿನ ಒಟ್ಟಾರೆ ಜೀವಿವೈವಿಧ್ಯ ಸಂಕಷ್ಟಕ್ಕೆ ಸಿಲುಕುತ್ತದೆ. ಭೂಮಿಯ ಹಕ್ಕು ಪಡೆದವರು ಸುಸ್ಥಿರ ಕೃಷಿಯನ್ನು ಅಳವಡಿಸಿಕೊಂಡು ರೈತಾಪಿ ಬದುಕನ್ನು ನಡೆಸಿದರೂ ಯಾವುದೇ ಅಪಾಯವಿಲ್ಲ. ಆದರೆ, ಶುಂಠಿಗಾಗಿ, ಜೋಳಕ್ಕಾಗಿ ಅಪರಿಮಿತ ರಾಸಾಯನಿಕಗಳನ್ನು ಬಳಸುತ್ತಾ ಹೋದರೆ, ಭೂಮಿ ಬರಡಾಗಿ ಮರಳುಗಾಡಾಗಿ ರೂಪುಗೊಳ್ಳುವ ಸಂದರ್ಭವೇ ಹೆಚ್ಚಾಗಿದೆ. ಮಲೆನಾಡಿನ ಬಹುಭಾಗವನ್ನು ಕೇರಳದ ಮಂದಿ ಈಗಾಗಲೇ ಬಹಳಷ್ಟು ಆಕ್ರಮಿಸಿಕೊಂಡು ಹಾಳುಗೆಡವಿದ ನಿದರ್ಶನ ಕಣ್ಣೆದುರೇ ಇದೆ. ಹಾಗಂತ ಹೇರಳ ಒಳಸುರಿ ಸುರಿದ ರೈತರೇನು ಉದ್ಧಾರವಾದರೆ ಕೇಳಿದರೆ ಅದೂ ಇಲ್ಲ. ಅವರೆಲ್ಲರೂ ಸಾಲದಲ್ಲೇ ಮುಳುಗಿದ್ದಾರೆ. ಎರಡು ವರ್ಷದಿಂದ ಮಳೆಯ ತೀವ್ರವಾದ ಅಭಾವಕ್ಕೆ ಕಾರಣ ಇಲ್ಲಿನ ಕಾಡು ನಾಶವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೊನ್ನೆ ಭಾನುವಾರ ಸೊರಬ ರಸ್ತೆಯಲ್ಲಿ ಮರಸದ ಹತ್ತಿರ ಹೋಗುತ್ತಿರುವಾಗ ಕಂಡ ದೃಶ್ಯ ಯಾರಿಗಾದರೂ ಆಶ್ಚರ್ಯವಾಗುವಂತೆ ಇತ್ತು. ನೆಲವನ್ನು ಹದಮಾಡುವ ಸಲುವಾಗಿ ಹಸಿ ಮರಕ್ಕೆ ಬೆಂಕಿ ಹಚ್ಚಿದ್ದರು. ನೆತ್ತಿಸುಡುವ ಬಿಸಿಲಿನ ಹೊತ್ತಿನಲ್ಲಿ ಹಸೀಮರಗಳ ಧಗ-ಧಗ ಉರಿಯುವ ದೃಶ್ಯ, ಮುಂದೆ ಬರುವ ಪ್ರಳಯದ ಭೀಕರತೆಯನ್ನು ಸಾರುವಂತೆ ತೋರುತ್ತಿತ್ತು. ಅತ್ತ ತ್ಯಾಗಾರ್ಥಿ, ಬರೂರು ಕಡೆಗಳಲ್ಲೂ ಇದೇ ದೃಶ್ಯ ಕಂಡು ಬರುತ್ತದೆ. ಮರಗಳನ್ನು ಉಳಿಸಿಕೊಂಡೇ ಕೃಷಿಯಲ್ಲಿ ಲಾಭ ಮಾಡುವ ಸಾಧ್ಯತೆಗಳನ್ನು ಹೀಗೆ ಹಸೀಮರಗಳನ್ನು ಸುಟ್ಟು ಹಾಕುವುದರ ಮೂಲಕ ರೈತ ಕಳೆದುಕೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಅರಣ್ಯವನ್ನು ರಕ್ಷಿಸಬೇಕಾದ ಅರಣ್ಯ ಇಲಾಖೆ ಯಾಕೆ ಇಂತವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಎಂಬ ಪ್ರಶ್ನೆಗೆ ಮತ್ತದೇ ರಾಜಕೀಯ ಪ್ರವೇಶ ಮಾಡುತ್ತದೆ. ರಾಜಕಾರಣಿಗಳ ದೂರವಾಣಿ ಇಲಾಖೆಯವರು ಕ್ರಮ ಕೈಗೊಳ್ಳುವುದನ್ನು ನಿರ್ಭಂದಿಸುತ್ತದೆ. ಈಗಲಾದರೂ ಈ ಪ್ರದೇಶದ ರೈತರು ಎಚ್ಚೆತ್ತುಕೊಳ್ಳದಿದ್ದಲ್ಲಿ, ಮುಂದಿನ ಪರಿಣಾಮ ಅತ್ಯಂತ ಭೀಕರವಾಗಲಿದೆ. ಬರಗಾಲದಿಂದ ಬಸವಳಿಯುವ ಬಯಲುಸೀಮೆಯ ಮಂದಿ ಮಲೆನಾಡಿನ ಕಡೆ ಗುಳೆಯದ್ದು ಬರುತ್ತಾರೆ. ಮಲೆನಾಡಿನಲ್ಲೆ ಬರ ಬಂದರೆ, ಇಲ್ಲಿಂದ ಬೇರೆಲ್ಲಿಗೆ ಗುಳೆ ಹೋಗುವುದು? ಮಲೆನಾಡಿನಿಂದ ಗುಳೆ ಹೋಗಲು ಬೇರೆ ಸ್ಥಳವಿಲ್ಲ. ಈಗ ತುರ್ತಾಗಿ ಆಗಬೇಕಾದ ಕೆಲಸವೆಂದರೆ, ಅರಣ್ಯಭೂಮಿಯ ವ್ಯಾಪ್ತಿಯ ನಿಖರ ಗಡಿಯನ್ನು ಗುರುತಿಸಿ ಸಂರಕ್ಷಿಸುವುದು. ನಿಜವಾದ ಸಂತ್ರಸ್ಥರಿಗೆ ಅರಣ್ಯಹಕ್ಕು ಕಾಯ್ದೆಯಡಿಯಲ್ಲಿ ಅಗತ್ಯ ಭೂಮಿಯನ್ನು ನೀಡುವುದು. ತಾಲ್ಲೂಕಿನ ಎಲ್ಲಾ ತರಹದ ರೈತರಿಗೆ ಸಾವಯವ-ಸುಸ್ಥಿರ ಕೃಷಿಯ ಲಾಭದ ಕುರಿತು ಮನವರಿಕೆ ಮಾಡುವುದು. ಜಾಗತೀಕರಣದ ನಂತರದಲ್ಲಿ ಸಾವಯವ ಉತ್ಪನ್ನಗಳಿಗೆ ಬಲು ಬೇಡಿಕೆಯಿದೆ. ಇಲ್ಲಿನ ರೈತರು ಮಾರುಕಟ್ಟೆಯ ಕೊರತೆಯಿಂದಷ್ಟೇ ಲಾಭದಿಂದ ವಂಚಿತರಾಗುತ್ತಿದ್ದಾರೆ. ಸಾವಯವ ಉತ್ಪನ್ನಗಳ ಖರೀದಿಗಾಗಿಯೇ ಪರ್ಯಾಯ ವ್ಯವಸ್ಥೆ ಮಾಡುವುದು. ಬೇಕಾಬಿಟ್ಟಿ ಕೀಟನಾಶಕಗಳನ್ನು ಮಾರುವುದು ಹಾಗೂ ಕೊಳ್ಳುವುದರ ಮೇಲೆ ತೀವ್ರ ನಿಗಾ ಇಡುವುದು. ಅಪಾಯ ಬರುವುದಕ್ಕೆ ಮುಂಚೆ ಕನಿಷ್ಟ ಈ ಕ್ರಮಗಳನ್ನು ತೆಗೆದುಕೊಳ್ಳುವುದು ಸಾಮೂಹಿಕ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು, ಸರ್ಕಾರಗಳು, ಜನಪ್ರತಿನಿಧಿಗಳು, ರೈತಸಂಘಗಳು ಕ್ರಮ ಕೈಗೊಳ್ಳುವ ಬದ್ಧತೆ ತೋರಬೇಕು. ಕೃಷಿ-ತೋಟಗಾರಿಕಾ ಇಲಾಖೆಗಳು ಹಾಸಿಗೆಯಿಂದ ಎದ್ದೇಳಬೇಕು. ಇಲ್ಲವಾದಲ್ಲಿ ಮುಂದೆ ವಿವರಿಸಲಾಗುವ ಘಟನೆಗಳು ನಮ್ಮಲ್ಲೂ ನಡೆಯುವ ದಿನ ದೂರವಿಲ್ಲ.
ಕಗ್ಗತ್ತಲ ಖಂಡವೆಂದು ಕರೆಯಲಾಗುವ ಆಫ್ರಿಕಾ ಖಂಡದ ಉತ್ತರ ಭಾಗದ ಒಂದು ದೇಶ ಬರ್ಕಿನಾ. ಇದೇ ಬರ್ಕಿನಾದ ಒಂದು ಹಳ್ಳಿಯ ಹೆಸರು ಸಹೇಲ್. ಸಹರಾ ಮರುಭೂಮಿಯಂಚಿನ ಈ ಹಳ್ಳಿಯು ಕೃಷಿ, ಅರಣ್ಯ ನಾಶ, ಅತೀವ ಹೈನುಗಾರಿಕೆ ಇನ್ನಿತರ ಕಾರಣಗಳಿಂದ ಅಲ್ಲಿನ ಮಣ್ಣು ಸವಕಳಿಯಾಗಿ, ಮಳೆ ಕಡಿಮೆಯಾಗಿ ಬರಗಾಲ ಪೀಡಿತವಾಗಿತ್ತು. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಅಲ್ಲಿನ ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ವಿಫಲವಾಗಿದ್ದವು. 1980ರಲ್ಲಿ ವಾಡಿಕೆಗಿಂತ ಶೇ.80ರಷ್ಟು ಮಳೆಯ ಪ್ರಮಾಣ ಕಡಿಮೆಯಾಯಿತು. ಜನ ಇನ್ನು ಅಲ್ಲಿ ಬದುಕಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಗುಳೆ ಹೋದರು. ಆದರೆ ಒಬ್ಬ ಮಾತ್ರ ಇದಕ್ಕೊಂದು ಪರಿಹಾರ ಹುಡುಕಲೇ ಬೇಕು ಎಂಬ ದೃಢ ನಿಶ್ಚಯದೊಂದಿಗೆ ಅಲ್ಲಿಯೇ ನೆಲೆ ನಿಂತ. ಹಾಗೆ ನಿಂತವನ ಸಂಸಾರವೂ ತೀರಾ ದೊಡ್ಡದಾಗಿತ್ತು. 3 ಹೆಂಡಿರು ಹಾಗೂ 31 ಮಕ್ಕಳು. ಇವರ ಹೊಟ್ಟೆ ಹೊರೆಯುವ ಜವಾಬ್ದಾರಿಯ ಜೊತೆ ಮರಳಿನ ಪ್ರವಾಹವನ್ನು ಎದುರಿಸುವ ಸವಾಲು. ಆಫ್ರಿಕಾದ ಪುರಾತನ ಕೃಷಿ ಪದ್ದತಿಯ ಹೆಸರು ಝಾಯ್. ತೀರಾ ಸರಳ ವಿಧಾನ ಈ ಕೃಷಿ ಪದ್ಧತಿಯನ್ನು ಆಧುನಿಕ ಕೃಷಿ ಪದ್ಧತಿಯು ನುಂಗಿ ಹಾಕಿ ಹಲವು ವರ್ಷಗಳಾಗಿತ್ತು. ಹೊಸ ತಲೆಮಾರಿಗೆ ಇದರ ಪರಿಚಯವಿರಲಿಲ್ಲ. ತನ್ನ ಅಜ್ಜಂದಿರು ಮಾಡುತ್ತಿದ್ದ ಈ ಸರಳ ಪದ್ಧತಿಯನ್ನು ಜಾರಿಗೆ ತಂದವನ ಹೆಸರು ಯಾಕುಬಾ ಸಾವಡ್ಗೋ!. ಕೈಯಲ್ಲಿ ಚಿಕ್ಕದೊಂದು ಪಿಕಾಸು ಹಿಡಿದು ಬರದಿಂದ ಬೇಯುತ್ತಿರುವ ಭೂಮಿಯಲ್ಲಿ ಚಿಕ್ಕ-ಚಿಕ್ಕ ಗುಂಡಿಗಳನ್ನು ಮಾಡುವುದು. ಅದರೊಳಗೆ ಸಾವಯವ ಪದಾರ್ಥ, ಗೊಬ್ಬರಗಳನ್ನು ತುಂಬಿ ಬೆಳೆಯಬೇಕಾದ ಬೀಜಗಳನ್ನು ಅದರಲ್ಲಿ ಹಾಕಿ ಮುಚ್ಚುವುದು. ಮಳೆ ಬಂದ ನಂತರದಲ್ಲಿ ಬೀಜ ಮೊಳಕೆಯಾಗಿ, ಅಲ್ಲಿಯ ಸಾವಯವ ಪದಾರ್ಥಗಳನ್ನು ಹೀರಿಕೊಂಡು ಸಸಿಯಾಗುವುದು. ಆಹಾರದ ಬೆಳೆಗೂ ಇದೇ ಪದ್ದತಿ, ಕಾಡು ಬೆಳೆಯಲಿಕ್ಕೂ ಇದೇ ಪದ್ದತಿ. ಇವನ ಈ ಕೃಷಿ ಪದ್ಧತಿಯನ್ನು ಅಲ್ಲಿನ ಜನ ಗೇಲಿ ಮಾಡಿದರು. ನಕ್ಕರು. ಹುಚ್ಚನೆಂದು ಕರೆದು ಜರಿದರು. ಇದ್ಯಾವದಕ್ಕೂ ಯಾಕುಬಾ ಬಗ್ಗಲಿಲ್ಲ. ತಪಸ್ಸಿನಂತೆ ತನ್ನ ಕೆಲಸದಲ್ಲಿ ತಲ್ಲೀನನಾದ. ಮೊದಲ ವರ್ಷದಲ್ಲೇ ತನ್ನ ಕುಟುಂಬಕ್ಕೆ ಬೇಕಾಗುವಷ್ಟು ಆಹಾರ ಬೆಳೆದುಕೊಂಡ. ಜೊತೆಗೆ ಹಸಿರು ಕಾಡು ಮೇಲೆದ್ದು ಬಂತು. ಇಡೀ 30 ಎಕರೆ ಪ್ರದೇಶ 60 ವಿವಿಧ ಜಾತಿಯ ಮರಗಳ ಹಸುರಿನಿಂದ ಕಂಗೊಳಿಸಿತು. ಮಣ್ಣಿನ ಆರೋಗ್ಯ ಗಣನೀಯವಾಗಿ ಸುಧಾರಿಸಿತು. ಇದಕ್ಕಿಂತ ಹೆಚ್ಚಾಗಿ ಮರಳುಗಾಡು ತನ್ನ ವಿಸ್ತರಣೆಯನ್ನು ನಿಲ್ಲಿಸಿತು. ಹೀಗೆ ಸತತ 30 ವರ್ಷಗಳ ಕಾಲ ಯಾಕುಬಾರ ಈ ಪ್ರಯೋಗ ಮುಂದುವರೆಯಿತು. ಗುಳೆ ಹೋದ, ಗೇಲಿ ಮಾಡಿದ ಜನರೆಲ್ಲಾ ನಿಧಾನವಾಗಿ ಯಾಕುಬಾರ ಹತ್ತಿರ ಬರತೊಡಗಿದರು. ತನ್ನ ಸಾಹಸದ ಕತೆಯನ್ನು ಯಾಕುಬಾ ಬಚ್ಚಿಡಲಿಲ್ಲ. ಬಂದವರಿಗೆ, ಕೇಳಿದವರಿಗೆಲ್ಲಾ ತನ್ನ ಪದ್ದತಿಯನ್ನು ಧಾರೆಯರೆದ. ಉತ್ತಮ ಗುಣಮಟ್ಟದ ಬೀಜಗಳನ್ನು ನೀಡಿದ. ಸಹರೈತರು ಈ ಪದ್ಧತಿಯನ್ನು ಅನುಸರಿಸಿ ಯಶಸ್ವಿಯಾಗತೊಡಗಿದರು. ಈ ಸಾಹಸಗಾಥೆ ನಿಧಾನವಾಗಿ ಮಾಧ್ಯಮದವರ ಕಿವಿಗೂ ಬಿತ್ತು. 2010ರಲ್ಲಿ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಮಾರ್ಕ್ ಡೂಡ್ ಯಾಕುಬನ ಸಾಹಸಗಾಥೆಯನ್ನಿಟ್ಟುಕೊಂಡು “ದ ಮ್ಯಾನ್ ಹೂ ಸ್ಟಾಪ್‍ಡ್ ಡೆಸರ್ಟ್” ಎಂಬ ಚಲನಚಿತ್ರವನ್ನು ನಿರ್ಮಿಸಿದ. ಈಗ ಯಾಕುಬಾ ಪ್ರಪಂಚದಾದ್ಯಂತ ಮನೆಮಾತಾದ. ಆಫ್ರಿಕಾ ಖಂಡವೆಂದರೆ ಬರೀ ಬಡತನದ, ಬರಗಾಲದ ದರಿದ್ರ ದೇಶವೆಂದು ಎಲ್ಲಾ ಭಾವಿಸಿದ ಹೊತ್ತಿನಲ್ಲಿ ಲಕ್ಷಾಂತರ ಎಕರೆ ಮರಳಿನಿಂದ ಮುಳುಗಡೆಯಾಗಲಿರುವ ಭೂಮಿಯ ಉಳಿಸಿದ ಘನಕೀರ್ತಿ ಯಾಕುಬನಿಗೆ ಸಲ್ಲಬೇಕು. ಸರ್ಕಾರಗಳು, ಸಂಘ-ಸಂಸ್ಥೆಗಳು ಮಾಡದ ಈ ಅಧ್ಬುತವನ್ನು ಮಾಡಿದ ಯಾಕುಬಾ ಇವತ್ತು ಮುದುಕನಾಗಿದ್ದಾನೆ. ಇನ್ನೂ ಅವನ ಕಾಯಕ ನಿಂತಿಲ್ಲ. ಯಾಕುಬ ಬೆಳೆಸಿದ ಅರಣ್ಯ ಇವತ್ತು ಅಲ್ಲಿನ ಬರವನ್ನು ಹೊಡೆದೋಡಿಸಿದೆ ನಿಜ. ಆದರೆ ಅಲ್ಲೂ ತೊಂದರೆ ಶುರುವಾಗಿದೆ. ಅವನು ಬೆಳೆಸಿದ ಕಾಡಿನ ಒತ್ತುವರಿಯಾಗುತ್ತಿದೆ. ಅಷ್ಟೂ ಕಾಡನ್ನು ಖರೀದಿಸಿ ಕಾಪಾಡುವ ದೊಡ್ಡ ಹೊಣೆ ಯಾಕುಬನ ಮೇಲಿದೆ. ಇದಕ್ಕೆ ಬೇಕಾದ 20 ಸಾವಿರ ಡಾಲರ್‍ಗಾಗಿ ಜೋಳಿಗೆ ಹಿಡಿದು ಹೊರಟಿದ್ದಾರೆ ಯಾಕುಬಾ.
ನೈಸರ್ಗಿಕವಾಗಿ ರೂಪುಗೊಂಡ ಮರಳುಗಾಡು ಕುರುಚಲು ಕಾಡು ಶುರುವಾಗುತ್ತಿದ್ದಂತೆ ತನ್ನ ಮೂಲಸ್ವರೂಪವನ್ನು ಕಳೆದುಕೊಳ್ಳುತ್ತಾ ಸಾಗುತ್ತದೆ. ಕುರುಚಲು ಕಾಡಿನಿಂದ ಅರಣ್ಯಪ್ರದೇಶ ಶುರುವಾಗುತ್ತಿದ್ದಂತೆ ಮರಳುಗಾಡು ಸಂಪೂರ್ಣ ಕೊನೆಗೊಳ್ಳುತ್ತದೆ. ಹಾಗೆಯೇ ಅಲ್ಲಿ ಅರಣ್ಯ ನಾಶವಾದರೆ, ಅಲ್ಲಿನ ಜೀವಿವೈವಿಧ್ಯ ಹಾಳಾದರೆ, ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಮಣ್ಣು ತನ್ನ ನೀರು ಹಿಡಿದಿಡುವ ಶಕ್ತಿಯನ್ನು ಕಳೆದುಕೊಂಡರೆ ಮರಳುಗಾಡು ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಮರಳುಗಾಡಿನಂಚಿನಲ್ಲಿ ಹಸುರು ಬೆಳೆಸಿ ಮರಳುಗಾಡಿನ ವಿಸ್ತೀರ್ಣವನ್ನು ಕಡಿಮೆ ಮಾಡುವ ಪ್ರಯತ್ನಗಳು ಯಶಸ್ವಿಯಾಗುತ್ತಿವೆ.
ಇದು ಆಫ್ರಿಕಾದ ಕೃಷಿ ನಕ್ಷತ್ರದ ಕತೆಯಾದರೆ, ಆಧುನಿಕ ಪ್ರಪಂಚದ ಎಲ್ಲಾ ಸೌಲಭ್ಯಗಳನ್ನು ಹೊಂದಿದ ಥಾಯ್‍ಲ್ಯಾಂಡಿನಲ್ಲಿ ಇನ್ನೊಂದು ತರಹದ ಕ್ರಾಂತಿ ಪ್ರಾರಂಭವಾಗಿದೆ. ವಿವಿಧ ರೀತಿಯ ಬಾಂಬ್ ಬೀಳಿಸಿ ಧರಿತಿಯನ್ನು ಹಾಳುಗೆಡವಿ, ಇದೀಗ ಹಳೆಯದಾಗಿ ಮೂಲೆ ಸೇರಿದ ಯುದ್ಧ ವಿಮಾನಗಳು ಅಲ್ಲೀಗ ಕಾಡು ನಿರ್ಮಿಸುವ ಕೆಲಸ ಮಾಡುತ್ತಿವೆ. ಇದಕ್ಕೆ ಬಾಂಬ್ ಸೀಡಿಂಗ್ ಎಂದು ಕರೆಯಲಾಗುತ್ತಿದೆ. ವೈವಿಧ್ಯಮಯ ಬೀಜಗಳನ್ನು ಸಂಗ್ರಹಿಸಿ, ಸ್ಥಳೀಯವಾಗಿ ಲಭ್ಯವಿರುವ ಜೇಡಿ ಮಣ್ಣನ್ನು ಹದವಾಗಿ ಕಲಸಿ ಅದರಲ್ಲಿ ಕೊಂಚ ಸಾವಯವ ಗೊಬ್ಬರವನ್ನು ಬೆರೆಸಿ, ಅದರೊಳಗೆ ಬೀಜಗಳನ್ನಿಡಲಾಗುತ್ತದೆ. ಹಾಗೂ ಮುಂದಿನ ಭಾಗವಾಗಿ ಸ್ಥಳೀಯವಾಗಿ ಲಭ್ಯವಿರುವ ಸಾವಯವ ಪದಾರ್ಥಗಳನ್ನು ಬಳಸಿ ಮಾಡಿದ ಚೂಪಾದ ಬಾಣದಂತಹ (ಗ್ರೆನೇಡ್) ವಸ್ತುವಿನ ಒಳಗೆ ಈ ಉಂಡೆಗಳು ಕುಳಿತುಕೊಳ್ಳುತ್ತವೆ. ಹೀಗೆ ಗೋಲಿ ರೂಪದ ಸಾವಿರಾರು ಬೀಜಗಳನ್ನು ಹಳೆಯ ಯುದ್ಧ ವಿಮಾನದಲ್ಲಿ ತುಂಬಿಕೊಂಡು ಹೋಗಿ ಬಂಜರು ಪ್ರದೇಶದಲ್ಲಿ ಚೆಲ್ಲಲಾಗುತ್ತದೆ. ವಿಮಾನದಿಂದ ಬಿದ್ದ ಚೂಪಾದ ಸಾವಯವ ಬಾಣಗಳು ನೆಲದಲ್ಲಿ ಕಚ್ಚಿಕೊಳ್ಳುತ್ತವೆ. ಮಳೆ ಬಿದ್ದಾಗ, ಜೇಡಿಮಣ್ಣು ಕರಗಿ ಬೀಜ ಮೊಳಕೆಯೊಡೆದು ಅಲ್ಲೊಂದು ಕಾಡು ನಿರ್ಮಾಣವಾಗುತ್ತದೆ. 2013ರಲ್ಲೇ ಪ್ರಾರಂಭವಾದ ಈ ತಂತ್ರ, ಇದೀಗ ಯಶಸ್ವಿಯಾಗುತ್ತಿದೆ. 2017ರ ಹೊತ್ತಿಗೆ ಬಂಜರು ಭೂಮಿ ಹಸುರಿನಿಂದ ನಳನಳಿಸಲಿದೆ. ಅತ್ತ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲೂ ಇಂತದೊಂದು ಪ್ರಯತ್ನ ಶುರುವಾಗಿದೆ. ಇದಕ್ಕೆ ಕಾರಣ ಮಾತ್ರ ಬೇರೆಯದೇ ಆಗಿದೆ. ಎಗ್ಗಿಲ್ಲದೆ ಬಳಸಿದ ರಾಸಾಯನಿಕಗಳು, ಕೀಟನಾಶಕಗಳು ಅಲ್ಲಿನ ಜೇನು ವೈವಿಧ್ಯವನ್ನು ಸೊನ್ನೆಗೆ ತಂದು ನಿಲ್ಲಿಸಿವೆ. ಅಲ್ಲಿ ಪರಾಗಸ್ಪರ್ಶ ಕ್ರಿಯೆ ನಡೆಯುತ್ತಿಲ್ಲ. ರೈತರು ಕಂಗಾಲಾಗಿದ್ದಾರೆ. ಕೆಲವು ರೈತರು ದೊಡ್ಡ ಗಾಳಿ ಯಂತ್ರಗಳನ್ನು ನಿಲ್ಲಿಸಿ, ಜೋರಾಗಿ ಗಾಳಿ ಬೀಸುವಂತೆ ಮಾಡಿ ಗೋಧಿ ಬೆಳೆಗೆ ಪರಾಗಸ್ಪರ್ಶ ಕ್ರಿಯೆ ಮಾಡುವ ವಿಫಲ ಯತ್ನವನ್ನು ನಡೆಸಿದ್ದಾರೆ. ಆದರೆ ಜೇನಿಗೆ ಸರಿಸಮನಾಗಿ ಮತ್ತೊಂದು ಪರ್ಯಾಯ ವ್ಯವಸ್ಥೆ ಇಲ್ಲ. ಹೀಗಾಗಿ ಜೇನುಗಳನ್ನು ಆಕರ್ಷಿಸಲು ಹೇರಳ ಹೂ ಬಿಡುವ ಮರಗಳ-ಗಿಡಗಳ-ಬಳ್ಳಿಗಳ ಬೀಜಗಳನ್ನು ಸಂಗ್ರಹಿಸಿ, ಸೀಡ್ ಬಾಲ್ ತಯಾರಿಸಿ ವಿಮಾನದ ಮೂಲಕ ಬಿತ್ತುವ ಪ್ರಯತ್ನದಲ್ಲಿ ನಿಧಾನವಾಗಿ ಯಶಸ್ವಿಯಾಗುತ್ತಿದ್ದಾರೆ. ಸಂಪೂರ್ಣ ಸಾವಯವ ಕೃಷಿಕರ ತಂಡವೇ ಸೇರಿ ಈ ಪ್ರಯತ್ನ ಮಾಡುತ್ತಿದೆ.
ಅಖಿಲೇಶ್, ಯಕುಬಾನದು ತುಂಬಾ ಆಶಾದಾಯಕ ಕತೆ! ಓದಿ ಖುಷಿಯಾಯ್ತು…
ನಿಮ್ಮ ಬರಹಗಳು ತುಂಬಾ ಇಷ್ಟವಾಗುತ್ತಿದ್ದವು. ಯಾಕೆ ಬರೀತಾ ಇಲ್ಲ? ಕುರ್ತಕೋಟಿಜೀ
ಸದ್ಯದಲ್ಲೇ ನಿರೀಕ್ಷಿಸಿ