ಲೇಖನ

ಮರದ ಆಸರೆ ಬಯಸಿದ ಬಳ್ಳಿ: ನಾಗಭೂಷಣ ಬಿ ಕೆ, ಚಂದ್ರಶೇಖರಪುರ

nagabhushan-b-k

ನಯನಮನೋಹರಿಯಾದ ಅವಳ ಅಂದ ಚಂದ ನೋಡಿದರೆ ನೋಡುತಲೇ ಇರಬೇಕು ಎನ್ನುವಷ್ಟು ಆಕರ್ಷಕ ಮೊಗದವಳು. ತಲೆಯ ಮದ್ಯಕ್ಕೆ ಬೈತಲೆ ತೆಗೆದ ಮಾರುದ್ದ ಜಡೆಯವಳು.ಕತ್ತು ಆಡಿಸುತ್ತ ಮುತ್ತಿನಂತ ಮಾತುಗಳ ಹಾಡುತಿದ್ದರೆ ಕಿವಿಯ ಓಲೆಗಳು ನರ್ತಿಸುತಲಿರುತ್ತವೆ. ಆ ನರ್ತನ ಕಾಣಲು ನಿಜಕ್ಕೂ ಕಣ್ಗಳ ಪುಣ್ಯವೆ ಸರಿ. ಕಪ್ಪು ಕಾಡಿಗೆ ಬಳಿದ ಆ ಕಣ್ಣುಗಳ ನೋಟದಲ್ಲೂ ಒಂದು ಆಕರ್ಷಣೆ. ನಕ್ಕರೆ ನಾಜೂಕು ಕೆನ್ನೆಯ ಮೇಲೆ ಗುಳಿಯೊಂದು ಮೂಡಿ ಅವಳ ಅಂದವನು ಹೆಚ್ಚಿಸಿ ಎತ್ತಿ ತೋರಿತಲಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಹೊಳೆವ ಹುಣ್ಣಿಮೆಯ ಪೂರ್ಣಚಂದಿರನಂತೆ ಇರುತಿತ್ತು ಅವಳ ಮುಖ . ಈ ವರ್ಣನೆಗಿಂತಲೂ ಅವಳು ಸುಂದರವಾಗಿರುವುದಂತು ಸುಳ್ಳಲ್ಲ..!

ಮಗಳ ಭವಿಷ್ಯದ ಬಗ್ಗೆ ಮಗಳಿಗಂತ ಹೆಚ್ಚಾಗಿ ಕೊರಗಿ ಕೊರಗಿ ನೋವುಂಡ ಜೀವವೆಂದರೆ ಅವಳ ತಾಯಿ. ಕಂಡ ಕಂಡ ಕಲ್ಲು ದೇವರುಗಳ ಬಳಿ ನಿಂತು ಬೇಡುತಿರುವುದನ್ನು ನೋಡಿದವರ ಕಲ್ಲು ಮನಸ್ಸುಗಳು ಕೂಡ ಕರಗಿ ನೀರಾಗಿ ಕಂಬನಿಯ ರೂಪದಲ್ಲಿ ಕನಿಕರವಾಗಿ ಹೊರ ಬರುವಂತಿರುತಿತ್ತು ಭಕ್ತಿಯ ಭಾವ. ಆ ಮಹಾತಾಯಿ ಹೆತ್ತ ನಾಲ್ಕು ಮಕ್ಕಳಲ್ಲಿ ಮೂರು ಹೆಣ್ಣುಮಕ್ಕಳು ಅದರಲ್ಲೂ ಹಿರಿಯ ಮಗಳಾಗಿ ಹುಟ್ಟಿದವಳ ಕಾಲಿಗೆ ಅದೇನೋ ಆಗಿ ಹುಟ್ಟಿನಿಂದಲೆ ಕುಂಟುತ ಓಡಾಡುವಂತಾಗಿಬಿಟ್ಟಿದ್ದಳು…! ಎರೆಡನೆ ಮಗಳ ಮದುವೆ ಮಾಡಿದಾಗ ಹಿರಿಮಗಳ ಮುಖ ಕಂಡಾಗಲೆಲ್ಲ ಆ ತಾಯಿಯ ಕರುಳು ಕಿವಿಚಿದಂತಾಗುತಿತ್ತು. ಹಾಗಂತ ಮಿಕ್ಕೆರೆಡು ಹೆಣ್ಣು ಮಕ್ಕಳಿಗಾಗಲಿ ಮಗನಿಗಾಗಲಿ ತಾಯಿ ತನ್ನ ಪ್ರೀತಿಯ ಹಂಚಿಕೆಯಲ್ಲಿ ಕೊಂಚವೂ ವ್ಯತ್ಯಾಸವಂತು ಮಾಡಿದವಳಲ್ಲ. ಎಷ್ಟೇ ಆದರು ತಾಯಿ ತಾಯಿನೆ ಅಲ್ವೆ..?

ಈ ಬಾಲೆ ಬಾಲ್ಯದಿಂದಲೂ ತನ್ನ ತಂಗಿಯಂದಿರು ಹಾಗೂ ತಮ್ಮನಿಗಿಂತ ತುಂಬಾನೆ ಜಾಣೆ ಓದುವುದರಲ್ಲೂ, ಬರೆಯುವುದರಲ್ಲೂ, ಆಟ ಪಾಠಗಳಲ್ಲೂ ಚಾಣಾಕಿಯಾಗಿರುತಿದ್ದಳು. ಪದವಿಯವರೆಗೆ ವಿದ್ಯಾಭ್ಯಾಸ ಮುಗಿಸಿದ ಅವಳಿಗೆ ತನ್ನ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವ ಆಸೆಯೊಂದಿಗೆ ಬಾಳ ಸಂಗಾತಿಯ ಕನಸನ್ನು ಸುಂದರವಾಗಿ ಕಟ್ಟಿಕೊಂಡಿದ್ದಳು ಅ ಚೆಲುವೆ.

ನನ್ನ ಕೈ ಹಿಡಿಯುವವನು ಬಡವನಾಗಿರಲಿ ಶ್ರೀಮಂತನಾಗಿರಲಿ ಅದರ ಚಿಂತೆ ನನಗಿಲ್ಲ, ಅಂದಕ್ಕೆ ಅಂದ ತರುವಂತಹ ಸುಂದರ, ರಾಜಕುಮಾರನಂತಹ ಹುಡುಗ ನನ್ನವನಾಗಬೇಕು. ನನಗಿಲ್ಲದ ಭಾಗ್ಯವೆಲ್ಲವನು ನನ್ನವನಾಗುವವನಲ್ಲಿ ಕಂಡು ತೃಪ್ತಳಾಗಿ ಬಾಳುವೆ ಎಂಬ ಸಾವಿರಾರು ಸ್ವಪ್ನಗಳ ಮಹಪೂರವನೆ ಹೊತ್ತು ಕೂತಿರುವ ಆ ಅಪ್ಸರೆಗೆ ಅಂಗವಿಕಲೆಯಾದ ನನ್ನನು ಬಾಳ ಸಂಗಾತಿಯಾಗಿ ಸ್ವೀಕರಿಸುವವನು ಯಾರು..? ಎಂಬ ಪ್ರಶ್ನೆಗೆ ಉತ್ತರದ ಕೊರತೆ ಅವಳನ್ನು ಕಾಡುತಿದೆ.

ಈ ನನ್ನ ಸಹೋದರಿಯಂತಹ ಅದೆಷ್ಟೊ ಹೆಣ್ಣುಮಕ್ಕಳು ಮರದ ಆಸರೆ ಸಿಗದೆ ನೆಲಕಚ್ಚಿ ಹೋದ ಬಳ್ಳಿಗಳಂತೆ ಆಗಿಹೋದ ಸಂಗತಿಗಳ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ನನ್ನದೊಂದು ಕಿವಿಮಾತು, ಎಲ್ಲಾರನ್ನು ನೋಡುವ ರೀತಿಯಲ್ಲಿ ಸಮಾಜ ನಿಮ್ಮನ್ನು ನೋಡದು. ಅದರ ಅರ್ಥ ನೀವು ಎಲ್ಲಾರಿಗಿಂತ ಭಿನ್ನ, ವಿಶೇಷವಾದವರು. ನಿಮಗೆ ಒಂದು ಪ್ರತ್ಯೇಕ ಸ್ಥಾನವಿದೆ. ಯಾವುದೇ ಚುಚ್ಚು ಮಾತುಗಳಿಗೆ ಕುಗ್ಗದೆ ಮುನ್ನುಗ್ಗುತಿರಿ ಹಿಂಜರಿಯದಿರಿ ನಿಮಗೂ ಒಳ್ಳೆ ದಿನಗಳು ಬಂದೆ ಬರುತ್ತವೆ, ಆತ್ಮವಿಶ್ವಾಸ ಕಳೆದುಕೊಳ್ಳದಿರಿ.
• ನಾಗಭೂಷಣ ಬಿ ಕೆ, ಚಂದ್ರಶೇಖರಪುರ
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮರದ ಆಸರೆ ಬಯಸಿದ ಬಳ್ಳಿ: ನಾಗಭೂಷಣ ಬಿ ಕೆ, ಚಂದ್ರಶೇಖರಪುರ

Leave a Reply

Your email address will not be published. Required fields are marked *