ಪಂಜು-ವಿಶೇಷ

ಮರಣ ಬಾವಿಯೊಳಗೆ ಬದುಕು ಕಟ್ಟಿಕೊಂಡವನ ಕಥೆ: ಶರತ್ ಹೆಚ್. ಕೆ.

 

ಬಾವಿ ಆಕಾರದ ಮೃತ್ಯುಕೂಪ. ಅದರೊಳಗೆ ಶರವೇಗದಲ್ಲಿ ಚಲಿಸುವ ಬೈಕು-ಕಾರುಗಳು. ಜೀವ ಪಣಕ್ಕಿಟ್ಟು ಬೈಕು-ಕಾರಿನ ಮೇಲೆ ಕಸರತ್ತು ಮಾಡುತ್ತ ನೋಡುವ ಕಣ್ಣುಗಳಿಗೆ ಬೆರಗಿನ ಗುಳಿಗೆ ಉಣಿಸುವ ಹುಡುಗರು. ಮೃತ್ಯುಕೂಪದ ಮೇಲ್ತುದಿಯಲ್ಲಿ ನಿಂತು ನೋಡುತ್ತಿರುವ ಯಾವನೋ ಕೈಯಲ್ಲಿ ನೋಟು ಹಿಡಿದರೆ, ಕಸರತ್ತು ಮಾಡುತ್ತಲೇ ನೋಟು ಕಸಿದು ಬಾಯಿಗಿಟ್ಟುಕೊಳ್ಳುವ ಆ ಪರಿ… ಅರೆ ಕ್ಷಣ ಎಚ್ಚರ ತಪ್ಪಿದರೂ ಬದುಕಿಗೆ ಪೂರ್ಣವಿರಾಮ ಇಟ್ಟುಕೊಂಡಂತೆ.

ಮರಣ ಬಾವಿಯೊಳಗೆ ಬೈಕು ಚಲಾಯಿಸುವ ಹುಡುಗನೊಂದಿಗೆ ಆ ದಿನ ಮಧ್ಯಾಹ್ನವಷ್ಟೇ ಮಾತುಕತೆ ನಡೆಸಿದ್ದೆವು. ಅವನ ಹೆಸರು ಮಹಮ್ಮದ್ ಸನ್ಯಾದ್. ಉತ್ತರ ಪ್ರದೇಶದ ಮುಜಾಫರ್‌ನಗರದ ೨೩ರ ಹರೆಯದ ಹುಡುಗ. ಮಧ್ಯಾಹ್ನ ಮುಖದ ಮೇಲೆ ನಗೆ ತುಳುಕಿಸುತ್ತಿದ್ದವನು ಈಗ ಆತಂಕದ ಛಾಯೆ ಹೊದ್ದು ಜೀವ ಪಣಕ್ಕಿಟ್ಟು ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ.

ಬದುಕನ್ನು ರೇಸಿಗೆ ಹೋಲಿಸಿಕೊಂಡು ಗಡಿಬಿಡಿಯ ಹಾವಳಿಯಲ್ಲಿ ಕಳಕೊಂಡ ಸುಖಗಳ ಕುರಿತು ಕನವರಿಸುವ ನಮಗೆ ಬಾವಿಯಂಥ ಮೃತ್ಯುಕೂಪದ ಮರದ ಅಟ್ಟಣಿಗೆಯ ಮೇಲೆ ಶರವೇಗದಲ್ಲಿ ಬೈಕು-ಕಾರು ಚಲಾಯಿಸಿಕೊಂಡು ಬದುಕು ಕಟ್ಟಿಕೊಂಡವರ ಭಾವಜಗತ್ತಿನ ಚಿತ್ರಣ ಅಪರಿಚಿತ.

ಇತ್ತೀಚೆಗೆ ಗೆಳೆಯನ ಜೊತೆ ಹಾಸನದಲ್ಲಿ ನಡೆಯುತ್ತಿದ್ದ ಎಕ್ಸಿಬಿಷನ್ ಮೈದಾನಕ್ಕೆ ಹೋದಾಗ ನಮ್ಮ ಎದುರು ತೆರೆದುಕೊಂಡದ್ದು ಹೊಟ್ಟೆಪಾಡಿಗಾಗಿ ಪ್ರತಿದಿನವೂ ಜೀವ ಪಣಕ್ಕಿಡುವವನ ಬದುಕಿನ ತುಣುಕುಗಳು.

ಆಗಷ್ಟೇ ಸೂರ್ಯ ತನ್ನ ಪ್ರಖರತೆ ಕಳೆದುಕೊಂಡು ಹೊಸ ದಿರಿಸು ತೊಟ್ಟುಕೊಳ್ಳುತ್ತಿದ್ದ. ಅಲ್ಲಿದ್ದವರು ಕತ್ತಲಾವರಿಸಿದ ಮೇಲೆ ಶುರುವಾಗಲಿರುವ ತಮ್ಮ ಕಸರತ್ತಿಗೆ ತಯಾರಿ ಆರಂಭಿಸಿದ್ದರು. ರಾತ್ರಿ ವೇಳೆ ಬುರ್ರೋ… ಎಂದು ಸದ್ದು ಮಾಡಿಕೊಂಡು ತಿರುಗುವ ಬೈಕು-ಕಾರುಗಳು ಮೈ ಹುಳುಕು ತೆಗೆಸಿಕೊಳ್ಳುತ್ತಿದ್ದವು. ಬೈಕಿನ ಟೈರು ಬಿಚ್ಚಿಕೊಂಡು ರಿಪೇರಿಯಲ್ಲಿ ತೊಡಗಿದ್ದವರು ನಮ್ಮನ್ನು ಬೈಕ್-ಕಾರು ಸವಾರ ಮಹಮ್ಮದ್ ಸನ್ಯಾದ್‌ಗೆ ಪರಿಚಯಿಸಿದರು. ಅಲ್ಲೇ ಇದ್ದ ಕಾರಿನೊಳಗೆ ನಮ್ಮ ಮಾತುಕತೆ ಶುರುವಾಯಿತು.

’ನಿಮ್ದು ಯಾವ ಊರು?’

’ಯು.ಪಿ.’

’ಯು.ಪಿ.ಯಲ್ಲಿ?’

’ಮುಜಾಫರ್‌ನಗರ’

’ಈ ರಿಸ್ಕಿ ಫೀಲ್ಡ್‌ನ ಯಾಕೆ ಆಯ್ಕೆ ಮಾಡ್ಕೊಂಡ್ರಿ?’

’ಹೊಟ್ಟೆಪಾಡಿಗೆ ಏನಾದ್ರೂ ಮಾಡ್ಲೇಬೇಕಲ್ವ ಸಾಬ್?’

’ಆದ್ರು ಬೇರೆ ಕೆಲ್ಸ ಮಾಡ್ಬಹುದಲ್ವ?’

’ಮಾಡ್ಬಹ್ದು ಆದ್ರೆ ಈ ಬದ್ಕಿಗೆ ಅಡ್ಜಸ್ಟ್ ಆಗಿದ್ದೀನಿ.’

’ಮನೇಲಿ ಯಾರ್‍ಯಾರಿದ್ದಾರೆ?’

’ಅಮ್ಮ-ಅಪ್ಪ, ಸೋದರ-ಸೋದರಿಯರು.’

’ನಿಮ್ ಕೆಲ್ಸುದ್ ಬಗ್ಗೆ ಅವ್ರು ಏನಂತಾರೆ?’

’ಏನಂತಾರೆ… ಏನೇ ಆದ್ರೂ ಯಾವ್ದಾದ್ರೂ ಕೆಲ್ಸ ಮಾಡ್ಲೇಬೇಕಲ್ವ?’

’ಇದು ತುಂಬಾ ರಿಸ್ಕಿ ಅಲ್ವಾ?’

’ರಿಸ್ಕಿನೇ, ಆದ್ರೂ ದೇವ್ರ ಮೇಲೆ ಭಾರ ಹಾಕಿ ಮಾಡ್ಲೆಬೇಕು.’

’ಅಟ್‌ಲೀಸ್ಟ್ ಬೈಕ್ ಓಡುಸ್ವಾಗ ಹೆಲ್ಮೆಟ್ ಆದ್ರೂ ಹಾಕೊಬಹುದಲ್ವ?’

’ಮೇಲಿರೋನ್ಗೆ ಕರುಸ್ಕಬೇಕು ಅನ್ಸಿದ್ರೆ ಏನ್ ಹಾಕೊಂಡ್ರೂ ಕರುಸ್ಕೊಳ್ತಾನೆ ಅಲ್ವಾ ಸಾಬ್?’

’ನಿಮ್ಗೆ ಎಷ್ಟು ಸಂಬ್ಳ ಕೊಡ್ತಾರೆ?’

’ತಿಂಗ್ಳಿಗಾ…?’

’ಹ್ಞುಂ…’

’ಹತ್ತು ಸಾವ್ರ.’

’ಬರಿ ಹತ್ತು ಸಾವ್ರಕ್ಕೆ ಜೀವ ಪಣಕ್ಕಿಡ್ಬೇಕಾ?’

’ಹೌದು ಸಾಬ್.’

’ಶೋ ಟೈಮಲ್ಲಿ ಜನ ಕೊಡೋ ಟಿಪ್ಸ್‌ನ ಏನ್ ಮಾಡ್ತೀರಿ? ಅದ್ನೂ ನಿಮ್ ಬಾಸ್‌ಗೆ ಕೊಡ್ತೀರಾ?’

’ಇಲ್ಲ ನಾವೇ ಹಂಚ್ಕೊಳ್ತೀವಿ.’

’ಎಷ್ಟು ಜನ ಇದ್ದೀರಿ?’

’ಒಟ್ಟು ಹತ್ತು ಜನ. ಆದ್ರೆ ಬೈಕ್-ಕಾರು ರೈಡ್ ಮಾಡೋದು ಐದು ಜನ ಮಾತ್ರ.’

’ಕೆಲ್ಸ ಇದ್ರೆ ಮಾತ್ರ ಸಂಬ್ಳನಾ?’

’ಇಲ್ಲ, ಶೋ ಇಲ್ದಿದ್ರೂ ನಮ್ ಯಜಮಾನ ತಿಂಗ್ಳಿಗೆ ೧೦ ಸಾವ್ರ ಕೊಡ್ತಾನೆ.’

ಮಾತುಕತೆ ನಡೆಯುವಾಗಲೇ ಸನ್ಯಾದ್ ಮೊಬೈಲ್‌ಗೆ ಕಾಲ್ ಬಂತು. ನೋಡಿ ಕಟ್ ಮಾಡಿದ.

’ನಿಮ್ಗೆ ಗರ್ಲ್‌ಫ್ರೆಂಡ್ ಇಲ್ವಾ?’

’ಈಗ ಕಾಲ್ ಮಾಡಿದ್ದು ಅವ್ಳೇ!’

’ಅವಳ್ದು ಯಾವ ಊರು?’

’ಮಹಾರಾಷ್ಟ್ರದಲ್ಲಿರೋ ಕೊಲ್ಹಾಪುರ.’

’ಹೇಗೆ ಲವ್ ಶುರುವಾಗಿದ್ದು?’

’ಅವ್ಳೂ ನಮ್ ಜೊತೆನೇ ಇದೇ ಕಂಪ್ನೀಲಿ ಕೆಲ್ಸ ಮಾಡ್ತಿದ್ಲು. ಜಾಯಿಂಟ್ ವ್ಹೀಲ್‌ನ ಕಲೆಕ್ಷನ್ ಕೌಂಟರ್‌ನಲ್ಲಿ ಇರ್‍ತಿದ್ಲು. ಹಂಗೇ ಶುರುವಾಯ್ತು. ಐದು ವರ್ಷ ಆಯ್ತು.’

’ಮದ್ವೆ ಯಾವಾಗ ಆಗ್ತೀರ?’

’ಇನ್ನೆರಡು ಮೂರು ವರ್ಷ.’

’ನಿಮಗೋಸ್ಕರ ಅವಳು ಐದು ವರ್ಷದಿಂದ ಕಾಯ್ತಿದ್ದಾಳ?’

’ಹ್ಞು… ಐದು ವರ್ಷ ಕಾಯೋದೆಲ್ಲ ಯಾವ ದೊಡ್ ವಿಷ್ಯ ಬಿಡಿ.’

’ಈಗ ನಿಮ್ಗೆ ಎಷ್ಟು ವರ್ಷ?’

’ಇಪ್ಪತ್ಮೂರು.’

’ನೀವು ಬೈಕ್ ಓಡ್ಸೋದ್ನ ನೋಡಿ ಇಂಪ್ರೆಸ್ ಅಗಿ ಯಾವ್ದಾದ್ರೂ ಹುಡ್ಗಿ ಬಂದು ಪ್ರಪೋಸ್ ಮಾಡಿದ್ದುಂಟಾ?’

’ಆ ಥರ ಬರ್‍ತಿರ್ತಾರೆ ಸಾಬ್. ನಾವು ಹೆಚ್ಚು ಅಂದ್ರೆ ಒಂದ್ಕಡೆ ಹತ್ತು ದಿನ ಇರ್‍ತೀವಿ. ಹತ್ತು ದಿನ ಲವ್ ಮಾಡಿ ಆಮೇಲೆ ಏನ್ ಮಾಡೋದು?’

’ಸಿನ್ಮಾ ನೋಡೊ ಅಭ್ಯಾಸ ಇಲ್ವಾ?’

’ಇದೆ, ಆದ್ರೆ ಥಿಯೇಟರ್‌ಗೆ ಹೋಗಿ ನೋಡಲ್ಲ. ನಮ್ ಟೆಂಟಲ್ಲೇ ಒಂದು ದೊಡ್ ಟಿವಿ ಇದೆ. ಅದ್ರಲ್ಲೇ ಕ್ಯಾಸೆಟ್ ಹಾಕೊಂಡು ನೋಡ್ತೀವಿ.’

’ದಿನಾ ಏನ್ ತಿಂತೀರಿ?’

’ಮಧ್ಯಾಹ್ನ ಚಪಾತಿ, ರಾತ್ರಿ ರೋಟಿ.’

’ಊರಿಗೆ ಎಷ್ಟು ದಿನಕ್ಕೊಂದು ಸಲ ಹೋಗ್ತೀರಿ?’

’ಒಂದ್ ಕಡೆಯಿಂದ ಪ್ಯಾಕ್ ಮಾಡಿ ಮತ್ತೆ ಇನ್ನೊಂದ್ ಕಡೆ ಎಲ್ಲ ಫಿಟ್ ಮಾಡ್ಬೇಕು ಅಂದ್ರೆ ಹತ್ತು ದಿನ ಆಗುತ್ತೆ. ಆ ಟೈಮಲ್ಲಿ ಊರಿಗೆ ಹೋಗಿ ಬರ್‍ತೀನಿ.’

’ಈ ಕೆಲ್ಸನಾ ಇನ್ನು ಎಷ್ಟು ವರ್ಷ ಮಾಡ್ಬೇಕು ಅಂತಿದ್ದೀರಿ?’

’ನೋಡೋಣ, ನಮ್ ಹಣೆಬರಹ ಬರ್‍ಯೋನು ಮೇಲಿರೋನು ಸಾಬ್!’

’ಹೀಗೆ ರೈಡ್ ಮಾಡೋವಾಗ ಆಕ್ಸಿಡೆಂಟ್ ಆಗಿ ಗಾಯಗೊಂಡಿದ್ದು ಅಥವಾ ಯಾರಾದ್ರೂ ಸತ್ತಿದ್ದು ಇಲ್ವಾ?’

’ಯಾಕಿಲ್ಲ ಸಾಬ್, ಈ ಕೆಲ್ಸ ತುಂಬಾ ರಿಸ್ಕಿ. ಕೆಲವ್ರು ಶೋ ಕೊಡ್ವಾಗ ಆಕ್ಸಿಡೆಂಟ್ ಆಗಿ ಸತ್ತಿದ್ದಾರೆ. ಬೈಕ್ ಪಂಕ್ಚರ್ ಆದ್ರೆ, ಚೈನ್ ಬಿಚ್ಕೊಂಡ್ರೆ ಬಿದ್ದು ಏಟಾಗೋದು ಕಾಮನ್.’

’ನೀವು ಬಿದ್ದಿರೋದು ಉಂಟಾ?’

’ಹ್ಞುಂ.’

’ಬಿದ್ದು ಪೆಟ್ಟಾದಾಗ ಈ ಕೆಲ್ಸ ಸಾಕು ಅನ್ಸಲ್ವ?’

’ಎರಡು ದಿನ ಆದ್ರೆ ಎಲ್ಲ ಸರ್ಯಾಗುತ್ತೆ. ಅದ್ಕೆಲ್ಲ ತಲೆ ಕೆಡುಸ್ಕಂದು ಕೆಲ್ಸ ಬಿಡೋಕಾಗುತ್ತಾ?’

’ಎಲ್ಲಿವರ್‍ಗೂ ಓದಿದ್ದೀರಿ?’

’ಆರನೇ ಕ್ಲಾಸ್.’

’ಮುಂದೆ ಯಾಕೆ ಓದ್ಲಿಲ್ಲ?’

’ಮನ್ಸಿರ್‍ಲಿಲ್ಲ… ಮನೆ ಪರಿಸ್ಥಿತಿ…’

’ಎಷ್ಟು ವರ್ಷದಿಂದ ಈ ಕೆಲ್ಸ ಮಾಡ್ತಿದ್ದೀರಿ?’

’ಐದು.’

 

ನಾವು ಹೊರಡ್ತೀವಿ ಅಂದ್ವಿ. ರಾತ್ರಿ ನಮ್ ಶೋ ನೋಡೋಕೆ ಮತ್ತೊಂದ್ ಸಲ ಬನ್ನಿ ಸಾಬ್ ಅಂದ. ಆಯ್ತು ಅಂತೇಳಿ ಅವನಿಗೆ ಬೀಳ್ಕೊಟ್ಟೆವು. ನಮ್ಮೊಳಗೆ ಅವನ ಕಳವಳ ಹೊತ್ತ ನಗು ಅಚ್ಚೊಚ್ಚುತ್ತಿತ್ತು.

-ಶರತ್ ಹೆಚ್. ಕೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಮರಣ ಬಾವಿಯೊಳಗೆ ಬದುಕು ಕಟ್ಟಿಕೊಂಡವನ ಕಥೆ: ಶರತ್ ಹೆಚ್. ಕೆ.

  1. ಉತ್ತಮ ಸಂಭಾಷಣೆ…..ಜೀವನಾನುಭವದೊಂದಿಗೆ ದೈವೀ ಶಕ್ತೀಯ ಮೇಲೆ ಭಾರ ಹಾಕಿ, ಲೈಪ್-ರಿಸ್ಕ್ ತೆಗೆದುಕೊಳ್ಳುವ ಅದೆಷ್ಟು ಪ್ರತಿಭಾವಂತರು ನಿಜಕ್ಕೂ ಧೈರ್ಯವಂತರು !

Leave a Reply

Your email address will not be published. Required fields are marked *