ಮೇ ತಿಂಗಳೆಂದರೆ ಎಲ್ಲೆಡೆ ಬಿಸಿಲು-ತೀರಲಾರದ ಬೇಸಿಗೆ. ಮುಂಗಾರು ಶುರುವಾಗುವ ಮುಂಚಿನ ತಿಂಗಳು. ಒಂಥರಾ ಅನಾಹುತಗಳ ತಿಂಗಳು. ಕೆಲವಡೆ ಹಿಂಗಾರಿನ ಹೊಡೆತಕ್ಕೆ ಸಿಕ್ಕು ನಲುಗುವವರು, ಮತ್ತೆ ಕೆಲವೆಡೆ ಬಿಸಿಲಿನ ತಾಪಕ್ಕೆ ಕರಗುವವರು. ಫಸಲು ಕೈಗೆ ಬರುವಷ್ಟರಲ್ಲಿ ವರುಣನ ಅವಕೃಪೆಯಿಂದಾಗಿ ಬೆಳೆ ನಷ್ಟ, ರೈತನ ಇಡೀ ಶ್ರಮ ನೀರಿನಲ್ಲಿ ಹೋಮ. ಪ್ರತಿವರ್ಷ ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಿವೆ. ದಕ್ಷಿಣ ಭಾರತದಲ್ಲೇ ಎರಡು ರೀತಿಯ ನೈಸರ್ಗಿಕ ವಿಕೋಪಗಳ ತಾಂಡವ ನೃತ್ಯ ನಡೆಯಿತು. ಬಳ್ಳಾರಿಯಂತಹ ಬಿರುಬೇಸಿಗೆ ನಾಡಿನಲ್ಲಿ ಆಲಿಕಲ್ಲು ಮಳೆ ಬಂದು ಇಳೆ ಕೊಂಚ ತಂಪಾಯಿತು. ಜೊತೆಗೆ ಸಿಪ್ಪೆತೆಂಗಿನ ಗಾತ್ರದ ಆಲಿಕಲ್ಲುಗಳು ಹಾರುವ ಹಕ್ಕಿಗಳನ್ನೂ ಬಿಡದೆ ಬಲಿ ತೆಗೆದುಕೊಂಡಿತು. ರೈತ ನೇರವಾಗಿ ಪ್ರಾಣಾಪಾಯಕ್ಕೆ ಒಳಗಾಗದಿದ್ದರೂ, ಇಡೀ ದುಡಿಮೆ ಮಣ್ಣು ಪಾಲಾಯಿತು. ನಮ್ಮಲ್ಲಿ ಈ ಕಥೆಯಾದರೆ ಅತ್ತ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸೂರ್ಯ ಅಕ್ಷರಷ: ಬೆಂಕಿಯುಂಡೆಯಾಗಿಯೇ ಅಪ್ಪಳಿಸಿದ. ಬಿಸಿಗಾಳಿಗೆ ದೇಶಾದ್ಯಂತ ಪ್ರಾಣ ತೆತ್ತವರ ಸಂಖ್ಯೆ 1000ಕ್ಕೂ ಮಿಕ್ಕಿತು ಎಂದು ಸರ್ಕಾರಿ ಲೆಕ್ಕ ಹೇಳುತ್ತದೆಯಾದರೂ, ಈ ಲೆಕ್ಕ ಇನ್ನೂ ಹೆಚ್ಚಿದೆ. ಹಾಗಾದರೆ ಏನಿದು ಬಿಸಿಗಾಳಿ?
ದೇಶದ ಶಕ್ತಿಕೇಂದ್ರದಲ್ಲಿ ರಾಜಕೀಯವಾಗಿ ಘಾಟಿನ ರಾಜಕಾರಣ ನಡೆಯುತ್ತಿದೆ. ಮೋದಿ-ಕೇಜ್ರಿಯ ಜಿದ್ದಿನ ರಾಜಕಾರಣಕ್ಕೆ ತಲೆ-ಕಿವಿಗೊಡಲು ಆಸ್ಪದವಿಲ್ಲದಂತೆ ಸೂರ್ಯ ನಿಗಿ-ನಿಗಿ ಉರಿಯುತ್ತಾ, ರಾಜಧಾನಿಯ ರಸ್ತೆಗಳನ್ನೇ ಕರಗಿಸಿ ಹಾಕಿದ. ನಿರ್ಜಲೀಕರಣದಿಂದ ಬಳಲಿದ ಸಾಮಾನ್ಯ ಜನತೆ ನೀರಿಗಾಗಿ, ತಂಪಿಗಾಗಿ ಹಾಹಾಕಾರಗೊಂಡರು. ಇದೇ ಧಗೆ ಮುಂದುವರೆಯಲಿದೆ ಎಂಬ ಎಚ್ಚರಿಕೆಯೂ ಹವಾಮಾನ ಇಲಾಖೆಯಿಂದ ಬಂದಿದ್ದು, ಜನರ ನೆಮ್ಮದಿಯನ್ನು ಇನ್ನಷ್ಟು ಕೆಡಿಸಿತು. ಪ್ರತಿವರ್ಷ ಬಿಸಿ ಮತ್ತು ಚಳಿ ಗಾಳಿಯಿಂದ ಕೂಲಿಕಾರ್ಮಿಕರು, ಅದರಲ್ಲೂ ಕಟ್ಟಡ ಕಾರ್ಮಿಕರು ಪ್ರಾಣ ತೆರುವುದು ನಡೆಯುತ್ತಲೇ ಇರುತ್ತದೆ. ಸಾಯಲು ಇರುವ ಎರಡೂ ಕಾರಣಕ್ಕೂ ಇರುವ ಉತ್ತರ ಒಂದೇ, ಅದು ಬಡತನ!!. ಈ ಬಾರಿ ಮಾತ್ರ ಈ ಸಂಖ್ಯೆ ಸಾವಿರವನ್ನೂ ದಾಟಿ, ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬಹುದಾದಷ್ಟು ಹದಗೆಟ್ಟುಹೋಯಿತು.
ವಾತಾವರಣದ ಶಾಖ 45 ಡಿಗ್ರಿ ದಾಟುವ ಹೊತ್ತಿನಲ್ಲೆ ಅಲ್ಲಿ ತೇವಾಂಶದ ಮಟ್ಟವೂ ಹೆಚ್ಚಿದಾಗ ಈ ತರಹದ ಬಿಸಿಗಾಳಿ ಮಾರಾಣಾಂತಿಕವಾಗಿ ಪರಿಣಮಿಸುತ್ತದೆ. ದೇಹದ ನೀರೆಲ್ಲಾ ಬಸಿದು, ವ್ಯಕ್ತಿಯ ದೇಹದ ಶಾಖ ಹೆಚ್ಚುತ್ತಲೇ ಹೋಗುತ್ತದೆ. ಸಕಾಲದಲ್ಲಿ ಎಚ್ಚರಗೊಂಡು ಚಿಕಿತ್ಸೆ ಪಡೆದರೆ ಉಳಿಗಾಲ, ಇಲ್ಲವಾದಲ್ಲಿ ನೇರ ಸಾವಿನ ಮನೆಗೆ ದಾರಿ. ಇಲ್ಲಿ ಸಾಮಾಜಿಕವಾಗಿ ಗಮನಿಸಬೇಕಾದ ಅಂಶವೊಂದಿದೆ. ಸುಲಭವಾಗಿ ಎಲ್ಲೆಂದರಲ್ಲಿ ಕುಡಿಯುವ ನೀರು ಲಭ್ಯವಿದ್ದರೆ, ಈ ತರಹದ ಅವಘಡಗಳು ಸಂಭವಿಸುವುದು ಕಡಿಮೆ. ಪಟ್ಟಣದ ಬಿಸಿಕಾವಿನಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕನಿಗೆ ಸಾಕಷ್ಟು ನೀರು ಲಭ್ಯವಿಲ್ಲ. ಲೀಟರಿಗೆ ಇಪ್ಪತ್ತೋ-ಮುವತ್ತೋ ತೆತ್ತು ಕುಡಿಯಲು ಅವನ ಜೇಬಿನಲ್ಲಿ ಹಣವಿಲ್ಲ. ಹೀಗೆ ನಿರಂತರವಾಗಿ ನೀರಿಲ್ಲದೇ ಕೆಲಸ ಮಾಡುವ ವ್ಯಕ್ತಿಯ ದೇಹ ಕಬ್ಬಿನ ಜಲ್ಲೆಯಿಂದ ರಸವನ್ನು ಹಿಂಡಿದ ಪರಿಸ್ಥಿತಿಯಲ್ಲಿ ಬಳಲುತ್ತಾನೆ. ಅಂತಿಮವಾಗಿ ಮರಣಿಸುತ್ತಾನೆ.
ಪ್ರತಿವರ್ಷ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಸಾಯುವುದು ಕಡುಬಡವರಾಗಿದ್ದರಿಂದ, ಇದೊಂದು ಗಂಭೀರ ವಿಷಯವಾಗಿ ಸರ್ಕಾರದವತಿಯಿಂದ ಪರಿಗಣಿಲ್ಪಟ್ಟಿಲ್ಲ. ಇಡೀ ದೇಶದಲ್ಲಿ ಅಹಮದಾಬಾದಿನ ಪಟ್ಟಣ ಪಂಚಾಯ್ತಿಯಲ್ಲಿ ಇಂತದೊಂದು ಪ್ರಯತ್ನ 2013ರಿಂದ ಜಾರಿಯಲ್ಲಿದೆ. ಬಿಸಿಗಾಳಿಯ ಅಪಾಯದ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು. ಸರ್ಕಾರದ ಎಲ್ಲಾ ಇಲಾಖೆಗಳು ಬಿಸಿಗಾಳಿಯ ಕಾಲದಲ್ಲಿ ಜನರಿಗೆ ಎಚ್ಚರಿಕೆ ನೀಡುವ ಕಾರ್ಯವನ್ನು ಮಾಡಬೇಕು. ಎಲ್ಲೆಲ್ಲೀ ಈ ತರಹದ ಘಟನೆಗಳು ಮರುಕಳಿಸುತ್ತವೆ ಎಂಬುದನ್ನು ಇಂತಹ ಸ್ಥಳಗಳನ್ನು ಅಪಾಯದ ಸ್ಥಳಗಳೆಂದು ಗುರುತಿಸಬೇಕು. ಹಾಗೂ ಇಂತಹ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸುವ್ಯಸ್ಥಿತವಾಗಿ ಮಾಡಬೇಕು. ಈ ನಾಲ್ಕು ಅಂಶಗಳನ್ನಿಟ್ಟುಕೊಂಡು 2013ರಿಂದ ಸ್ಥಳೀಯ ಪ್ರಾಧಿಕಾರ ಇನ್ನಿತರ ಹಲವು ಸಂಸ್ಥೆಗಳೊಂದಿಗೆ ಸೇರಿಕೊಂಡು ಬಿಸಿಗಾಳಿಯಿಂದಾಗುವ ಜನಹಾನಿಯನ್ನು ತಗ್ಗಿಸುವಲ್ಲಿ ಪ್ರಯತ್ನ ನಡೆಸಿದೆ. ಈ ತರಹದ ಬಿಸಿಗಾಳಿಯಿಂದಾಗುವ ಅನಾಹುತಗಳನ್ನು ತಡೆಗಟ್ಟುವಲ್ಲಿ ಈಗಾಗಲೇ ಫ್ರಾನ್ಸ್, ಯು.ಕೆ. ಆಸ್ಟ್ರೇಲಿಯಾಗಳು ರಾಷ್ಟ್ರ ಮಟ್ಟದ ಬಿಸಿಗಾಳಿ ವಿಪತ್ತು ನಿರ್ವಹಣಾ ಪ್ರಾಧಿಕಾರಗಳನ್ನು ಸ್ಥಾಪಿಸಿವೆ.
ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಿದೆ. ಅಲ್ಲಿನ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಮಂಡಳಿಯವರು ಮುನ್ನೆಚ್ಚರಿಕೆಯಂಬಂತೆ ದುಡಿಯುವ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೂ ಯಾವುದೇ ದೈಹಿಕ ಚಟುವಟಿಕೆಗಳನ್ನು ಮಾಡಬಾರದು ಎಂಬ ಸರ್ಕಾರಿ ವಿನಂತಿಯನ್ನು ಮಾಡಿದೆಯಾದರೂ, ಈ ಪ್ರದೇಶದಲ್ಲಿ ರಾತ್ರಿಯ ಹೊತ್ತು ಕೂಡ ಶಾಖ 30 ಡಿಗ್ರಿಗಿಂತ ಕೆಳಕ್ಕಿಳಿಯುತ್ತಿಲ್ಲವೆಂಬುದು ಆತಂಕದ ಸಂಗತಿಯಾಗಿದೆ. ಇತ್ತ ಬಳ್ಳಾರಿಯಲ್ಲಿ ಆಲಿಕಲ್ಲು ಬಿದ್ದು ಸಾವಿರಾರು ಗಿಳಿಗಳು ಸತ್ತಿದ್ದರೆ, ಅತ್ತ ಬೋಪಾಲ್‍ನಲ್ಲಿ ಶಾಖ 45 ಡಿಗ್ರಿ ಮುಟ್ಟಿದಾಗ ನೂರಾರು ಬಾವಲಿಗಳು ಮರದಿಂದ ಕಳಚಿಬಿದ್ದು ಸತ್ತವು. ಇವುಗಳಲ್ಲೂ ಕೆಲವು ಅಲ್ಪ-ಸ್ವಲ್ಪ ನೀರಿರುವ ಕೆರೆಗಳ ಮೇಲಿನಿಂದ ಹಾರುತ್ತ, ತಂಪಾಗುತ್ತಾ ಜೀವ ಉಳಿಸಿಕೊಂಡವು. ಮನುಷ್ಯರಿಗಾದರೆ, ಮಾನವ ನಿರ್ಮಿತ ಶುಶ್ರೂಷಾ ಕೇಂದ್ರಗಳಿವೆ, ಕಾಲ-ಕಾಲಕ್ಕೆ ಎಚ್ಚರಿಕೆ ಕೊಡವು ಹಲವು ಇಲಾಖೆಗಳಿವೆ. ಹವಾಮಾನ ವರದಿಗಾಗಿಯೇ ಪ್ರತ್ಯೇಕ ಇಲಾಖೆಗಳಿವೆ. ವನ್ಯಜೀವಿಗಳಿಗೆ ಅಂತರ್ಗತವಾದ ಹವಾಮಾನ ವೈಪರೀತ್ಯ ತಿಳಿಯುವ ಶಕ್ತಿಯಿದೆ. ಆದರೂ ಅಚಾನಕ್ ಆಗಿ ಎರಗುವ ಆಲಿಕಲ್ಲು ಮಳೆ, ಬಿಸಿಗಾಳಿ ಇವುಗಳನ್ನು ಬಲಿತೆಗೆದುಕೊಳ್ಳುತ್ತದೆ. ವಾತಾವರಣದಲ್ಲಿ ಒತ್ತಡ ಹೆಚ್ಚಾಗಿ ಬಿಸಿಗಾಳಿ ಭೂಮಿಯೆಡೆಗೆ ನುಗ್ಗುತ್ತದೆ, ಸ್ವಾಭಾವಿಕವಾಗಿ ಭೂಮಿಯಿಂದ ಎತ್ತರದಲ್ಲಿರುವ ಗಾಳಿ, ಕೆಳಗಿನ ಗಾಳಿಗಿಂತ ಬಿಸಿಯಾಗಿರುತ್ತದೆ. ಈ ಪರಿಸ್ಥಿತಿ ವಾರದವರೆಗೂ ಮುಂದುವರೆಯಬಹುದು ಅಥವಾ ಮಧ್ಯದಲ್ಲಿ ಮಳೆ ಬಂದು ಇಳೆ ತಂಪಾಗಿ, ಮತ್ತೆ ಇದೇ ಪುನರಾವರ್ತನೆಯಾಗಬಹುದು. ಮಳೆಯಾದ ನಂತರದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಆಗ ಮತ್ತೆ ವಾತಾವರಣ ಬಿಸಿಯೇರಿದರೆ ಅದು ಇನ್ನೂ ಮರಣಾಂತಿಕವಾಗಿ ಪರಿಣಮಿಸುತ್ತದೆ. ಈ ಹೊತ್ತಿನಲ್ಲಿ ಕೆಲವು ಸಲಹೆಗಳನ್ನು ಪಾಲಿಸುವುದು ಸೂಕ್ತ. ಬಿಸಿಗಾಳಿಯಿಂದ ಉಂಟಾಗುವ ಮೊಟ್ಟಮೊದಲ ಪರಿಣಾಮಗಳೆಂದರೆ, ಸ್ನಾಯುಸೆಳೆತ, ಬಾಯುವಿಕೆ, ತಲೆಸುತ್ತುವುದು ಇತ್ಯಾದಿ. ಮಕ್ಕಳು ಹಾಗೂ ವಯಸ್ಕರನ್ನು ಹೆಚ್ಚಾಗಿ ಬಿಸಿಗಾಳಿ ಬಲಿತೆಗೆದುಕೊಳ್ಳುತ್ತದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಹೆಚ್ಚು-ಹೆಚ್ಚು ಶುದ್ಧ ನೀರು ಜೊತೆಗೆ ಉಪ್ಪಿನಂಶವಿರುವ ಪದಾರ್ಥಗಳನ್ನು ಆಗಾಗ ಸೇವಿಸುವುದರಿಂದ ಬಿಸಿಗಾಳಿಯಿಂದಾಗುವ ಅಡ್ಡಪರಿಣಾಮಗಳನ್ನು ತಡೆಗಟ್ಟಬಹುದು. ದಿನದ ಚಟುವಟಿಕೆಗಳನ್ನು ಕಡಿಮೆ ಮಾಡುವುದು, ಪದೇ ಪದೇ ಎಲೆಕ್ಟ್ರೋಲೈಟ್‍ಗಳನ್ನು ಸೇವಿಸುವುದು, ಹೆಚ್ಚಿನ ನೀರನ್ನು ಕುಡಿಯುವುದು, ದೈಹಿಕವಾದ ಶ್ರಮವನ್ನು ಮಾಡದಿರುವುದು ಇತ್ಯಾದಿಗಳು ಕೂಡ ಬಿಸಿಗಾಳಿಯ ಅಡ್ಡಪರಿಣಾಮನ್ನು ಕಡಿಮೆ ಮಾಡುವ ಅಂಶಗಳು.
ಇದೇ ಹೊತ್ತಿನಲ್ಲಿ ಪ್ರಪಂಚದ 20 ಕೊಳಕು ನಗರಗಳನ್ನು ಪಟ್ಟಿ ಮಾಡಲಾಗಿದ್ದು, ಇದರಲ್ಲಿ ದೆಹಲಿ ಮೊಟ್ಟ ಮೊದಲ ಸ್ಥಾನದಲ್ಲಿದೆ. ಇದಕ್ಕಿಂತ ಖೇದಕರ ಸಂಗತಿಯೆಂದರೆ, 20 ರಲ್ಲಿ 13 ನಗರಗಳು ಇಂಡಿಯಾದಲ್ಲೇ ಇವೆ. ಇಲ್ಲಿ ಹವಾಮಾನವೇ ವ್ಯತಿರಿಕ್ತವಾಗಿ ಜನಸಾಮಾನ್ಯರ ಬದುಕನ್ನು ಕಸಿಯುತ್ತಿದೆ. ನಗರಾಭಿವೃದ್ಧಿ, ನಗರೋತ್ಥಾನ ಇತ್ಯಾದಿಗಳ ಹೆಸರಿನಲ್ಲಿ ಪಟ್ಟಣದಲ್ಲಿರುವ ಹಸಿರು ಕಡಿಮೆಯಾಗುತ್ತಿದೆ. ಹವಾನಿಯಂತ್ರಕ ಕಾರು, ಮನೆ ಹೊಂದಿದವ ಸುಲಭವಾಗಿ ಬಿಸಿಗಾಳಿಯಿಂದ ಬಚಾವಾಗಬಲ್ಲ. ಕನಿಷ್ಟ ಬಾಯಾರಿಕೆಯನ್ನೂ ತಣಿಸಲಿಕ್ಕಾಗದ ಬಡವರಿಗೇ ಮೊದಲು ವಿಕೋಪಗಳು ಶತೃವಾಗಿ ಕಾಡುವುದು. ಎತ್ತಣಿಂದ ನೋಡಿದರೂ ಸರ್ಕಾರಗಳ ಉಳ್ಳವರ ಪರವಾದ ಅಭಿವೃದ್ಧಿ ಮಂತ್ರ ಸಾಮಾನ್ಯರಿಗೆ ಶಾಪವಾಗಿಯೇ ಪರಿಣಮಿಸುವುದು. ಇದೇ ವಾರದಲ್ಲಿ ಜೂನ್ 5 ಬರುತ್ತಿದೆ. ವಿಶ್ವ ಪರಿಸರ ದಿನಾಚರಣೆ, ಒಂದೊಂದು ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ಹೊತ್ತುಕೊಳ್ಳೋಣವೇ? ನಮಗಲ್ಲದಿದ್ದರೂ ಮುಂದಿನ ಪೀಳಿಗೆಗಾಗಿ!!! ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಷಯಗಳು.
*****