ಹಾಸ್ಯ

ಮನೆ ಬಾಡಿಗೆಗಿದೆ!: ಎಸ್.ಜಿ.ಶಿವಶಂಕರ್

ಹೌದು, ನನ್ನ ಮನೆಯ ಮೊದಲ ಮಹಡಿ ಮನೆ ಬಾಡಿಗೆಗಿದೆ!
ಫ್ಯಾಕ್ಟ್ರಿ ಕೆಲಸ ಮಾಡಿದವರಿಗೆ ನನ್ನ ಕಾಲದಲ್ಲಿ ಪೆನ್ಷನ್ ಇರಲಿಲ್ಲ. ಅದಕ್ಕೇ ಪಿಎಫ್ ಸಾಲ ತೆಗೆದು ಬಾಡಿಗೇಗೇಂತ ಇಪ್ಪತ್ತು ವರ್ಷದ ಹಿಂದೆ ಮಹಡಿ ಮೇಲೊಂದು ಮನೆ ಕಟ್ಟಿಸಿದ್ದೆ. ಕೆಳಗೆ ನಾನು ವಾಸ, ಮೇಲಿನದು ಬಾಡಿಗೆಗೇಂತ ಯೋಜನೆ ಮಾಡಿ ಕಾರ್ಯ ಅರೂಪಕ್ಕಿಳಿಸಿದ್ದೆ. ಕಳೆದ ಇಪ್ಪತ್ತು ವರ್ಷದಲ್ಲಿ ಐದಾರು ಜನ ಬಾಡಿಗೆದಾರರು ನೆಮ್ಮದಿಯಿಂದ ಇದ್ದು ಹೋದರು. ಆದರೆ ಈಗ ಮಾತ್ರ ವಿಚಿತ್ರ ಪರಿಸ್ಥಿತಿ ಎದುರಾಗಿತ್ತು. ಪ್ರತೀ ರೂಮಿಗೂ ಅಟ್ಯಾಚ್ಡ್ ಬಾತ್ರೂಮು ಕೇಳುತ್ತಿದ್ದರು! ಬರೀ ಅಷ್ಟೇ ಅಲ್ಲದೆ ಇನ್ನೂ ಏನೇನೋ ಕೇಳುತ್ತಿದ್ದರು. ಮನೆ ನೋಡುವ ಮುಂಚೆ ಫೋನಿನಲ್ಲೇ ಮೊದಲು ವಿಚಾರಣೆ ಮಾಡುತ್ತಿದ್ದರು. ಎಲ್ಲಾ ವಿವರಗಳನ್ನೂ ತಿಳಿದುಕೊಂಡು ಮನೆ ನೋಡುವುದೋ ಬೇಡವೋ ಎಂದು ಪೂರ್ವ ನಿರ್ಧಾರ ಮಾಡಿಬಿಡುತ್ತಿದ್ದರು! ಇನ್ನು ಕೆಲವರು ಮನೆಗೆ ಬಂದು ಕ್ರಿಮಿನಲ್ ಕೇಸಿನಲ್ಲಿ ಪೊಲೀಸರು ಕೇಳಿವಂತೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಜೊತೆಗೆ ಹಲವು ಬೇಡಿಕೆಯ ಬಾಣ ಬಿಡುತ್ತಿದ್ದರು! ಹಿಂದೆಂದೂ ಇಂತಾ ಅನುಭವ ಆಗಿರಲಿಲ್ಲ! ಇಪ್ಪತ್ತು ವರ್ಷಗಳಲ್ಲಿ ನಮ್ಮ ಜನರ ಅಭಿರುಚಿ, ಅಗತ್ಯಗಳು ಅಮೂಲಾಗ್ರವಾಗಿ ಬದಲಾಗಿರುವುದು ಅರಿವಾಗಿ ಬೆರಗಾಗಿದ್ದೇನೆ. ಹೀಗೆ ಮನೆ ನೋಡಲುಬಂದ ಭಾವೀ ಬಾಡಿಗೆದಾರರ ಜೊತೆ ನಡೆದ ಸಂವಾದದ ಕೆಲವು ಸ್ಯಾಂಪಲ್ಲುಗಳನ್ನು ಒಕ್ಕಣಿಸಿದ್ದೇನೆ.

ಅದು ಭಾನುವಾರದ ಮಧ್ಯಾನ್ಹ. ಆಗ ತಾನೆ ಮಧ್ಯಾನ್ಹದ ಊಟ ಶುರುಮಾಡಿದ್ದೆ. ಇನ್ನೇನು ತುತ್ತು ಬಾಯಿಗಿಡಬೇಕೆನ್ನುವಾಗ ಮೊಬೈಲು ರಿಂಗಾಯಿತು. ಅದು ಬಾಡಿಗೆಗೆ ವಿಚಾರಣೆ ಎಂದು ಬೇರೆ ಹೇಳಬೇಕಾಗಿರಲಿಲ್ಲ. ಸಹನೆಯಿಂದಲೇ ಮೊಬೈಲು ಕೈಗೆತ್ತಿಕೊಂಡೆ.
‘ಆಚೆ ಟು ಲೆಟ್ ಬೋರ್ಡ್ ನೋಡಿದೆ. ಏನು ಅಕಾಮಿಡೇಷನ್ನು?’
‘ಟೂ ಬಿಹೆಚ್‍ಕೆ ‘ (ಇದು ಈಗಿನ ಭಾಷೆ. ಬಿಹೆಚ್‍ಕೆ ಅಂದರೆ ಬೆಡ್ರೂಮು, ಹಾಲ್ ಮತ್ತು ಕಿಚನ್ ಎಂದು)
‘ಅಟ್ಯಾಚ್ಡ್ ಬಾತ್ರೂಮಾ..?’
‘ಇಲ್ಲ ಡಿಟ್ಯಾಚ್ಡ್ ಬಾತ್ರೂಮು’
ನನ್ನ ಅರ್ಧಾಂಗಿ ನಡುವೆ ಬಾಯಿ ಹಾಕಿದಳು.
‘ಹೀಗೆ ಅಡ್ಡಾದಿಡ್ಡಿ ಮಾತಾಡಿದ್ರೆ ಬಾಡಿಗೆಗೆ ಯಾರು ಬರ್ತಾರೆ..?’
ಅವಳಿಗುತ್ತರಿಸದೆ ಭಾವೀ ಬಾಡಿಗೆದಾರನ ಮಾತು ಆಲಿಸಿದೆ.

‘ಬಾತ್ರೂಮು ಒಂದಾ ಎರಡಾ..?’
‘ಒಂದು ಮನೆಗೆ ಒಂದೇ..’
‘ಸೋಲಾರ್ ಇದೆಯಾ..?’
‘ಇಲ್ಲ..’
‘ವಿಟ್ರಿಫೈಡ್ ಟೈಲ್ಸಾ..?’
‘ಇಲ್ಲಾ..ಮೊಸಾಯಿಕ್ ಇದೆ’
‘ಬಾಡಿಗೆ ಎಷ್ಟು? ಅಡ್ವಾನ್ಸು..?’
‘ಬಾಡಿಗೆ ಹನ್ನೆರಡು ಸಾವಿರ, ಅಡ್ವಾನ್ಸು ಐದು ತಿಂಗಳ ಬಾಡಿಗೆ’
‘ಕಡಿಮೆ ಮಾಡ್ಕೋತೀರಾ..?’
‘ಇಲ್ಲಾ’
‘ನನಗೆ ಒನ್ ಬಿಹೆಚ್‍ಕೆ ಬೇಕಾಗಿತ್ತು..ಇದೆಯಾ..?’
‘ಇರೋದೊಂದೇ ಮನೆ..ಅದು ಟೂಬಿಹೆಚ್‍ಕೆ’
ನನ್ನ ಉತ್ತರಕ್ಕೆ ಫೋನ್ ಕಟ್.

ಇನ್ನೊಂದು ಭಾನುವಾರ ಅದೇ ಸ್ಥಿತಿಯಲ್ಲಿದ್ದಾಗ ಮತ್ತೊಂದು ಫೋನ್. ಪ್ರಾರಂಭಿಕ ವಿಚಾರಣೆ ನಂತರದ ಮಾತುಕತೆ.
‘ಮನೆ ನೋಡಬಹುದಾ..?’
‘ಒಂದ್ನಿಮಿಷ ಬರ್ತೀನಿ..’
ಊಟ ಮಾಡುತ್ತಿದ್ದವನು ಕೈತೊಳೆದು ಮನೆಯಿಂದೀಚೆ ಬಂದೆ. ಗೇಟಿನ ಬಳಿ ಇಬ್ಬರು ಗಂಡಸರು ನಿಂತಿದ್ದರು. ನಲವತ್ತರ ಅಂಚಿನಲ್ಲಿದ್ದವರು ಬಹುಶಃ ಸ್ನೇಹಿತರಿರಬಹುದು.
‘ಬಾಡಿಗೆ ನೆಗೋಷಿಯಬಲ್ಲಾ..?’
‘ಮೊದಲು ಮನೆ ನೋಡಿ, ಆಮೇಲೆ ಅದೆಲ್ಲಾ..’
‘ಇಟ್ಯಾಲಿಯನ್ ಕಿಚನ್ನಾ..?’
‘ಇಲ್ಲ. ಇದು ಇಂಡಿಯಾ..ಅದಕ್ಕೇ ಇಂಡಿಯನ್ ಕಿಚನ್ನು. ಇಟ್ಯಾಲಿಯನ್ ಕಿಚನ್ ಬೇಕಾದ್ರೆ ಇಟಲಿಗೆ ಹೋಗಿ’
ರೇಗಿದೆ.
‘ಅದಕ್ಯಾಕೆ ರೇಗ್ತೀರಾ..? ಯೂಪಿಎಸ್ ಇದೆಯಾ..?’
‘ಇಲ್ಲಾ..’
‘ಫರ್ನಿಷ್ಡಾ?’
‘ಇಲ್ಲ, ಮನೆ ನೋಡ್ತೀವಿ ಅಂದ್ರಲ್ಲಾ..? ಬನ್ನಿ..’
ಅವರು ಮನೆಯನ್ನು ಕೂಲಂಕುಶವಾಗಿ ನೋಡಿದರು.

‘ಒಂದೆರಡು ಸ್ನಾಪ್ ತೆಗೀಬಹುದಾ..?’
‘ಷರ್ಟು ಹಾಕ್ಕೊಂಡು, ತಲೆ ಬಾಚ್ಕೊಂಡು ಬರ್ತೀನಿ’
‘ನಿಮ್ಮದಲ್ಲಾ ಸಾರ್! ನಿಮ್ಮ ಸ್ನಾಪು ನಮಗ್ಯಾಕೆ ಬೇಕು? ಮನೇದು ಸ್ನಾಪ್ ಬೇಕು ನಿಮಗೇನೂ ಅಭ್ಯಂತರ ಇಲ್ಲವೆ?’
‘ಸರಿ ತಗೊಳ್ಳಿ..’
‘ತ್ಯಾಂಕ್ಸ್’
ಹಾಲಿನಲ್ಲಿ, ಬೆಡ್ರೂಮುಗಳಲ್ಲಿ, ಕಿಚನ್ನು, ಬಾತ್ರೂಮುಗಳಲ್ಲಿ ಫೋಟೋಗಳನ್ನು ಮೊಬೈಲಲ್ಲಿ ತೆಗೆದುಕೊಂಡರು. ಯಾಕೋ ಇದೆಲ್ಲಾ ಅತಿಯೆನ್ನಿಸಿತು! ‘ಹೀಗೂ ಉಂಟೆ’ಯ ಒಂದು ಎಪಿಸೋಡ್ ಆದೀತು ಎನ್ನಿಸಿತು!
‘ಸರಿ ಸಾರ್..ನಮ್ಮ ಮನೆಯವರ ಜೊತೆ ಮಾತಾಡಿ ನಿಮಗೆ ತಿಳಿಸ್ತೀವಿ..ಇದೇ ನಂಬರಿಗೆ ಫೋನ್ ಮಾಡ್ತೀನಿ. ಆಕ್ಚುಯಲಿ ನಮಗೆ ಸಿಂಗಲ್ ಬೆಡ್ರೂಮ್ ಮನೆ ಬೇಕಿತ್ತು..’
‘ಮೊದಲೇ ಯಾಕೆ ಹೇಳಲಿಲ್ಲ?’ ಎನ್ನುವ ಪ್ರಶ್ನೆ ಮನಸ್ಸಿಗೆ ಬಂದರೂ ಬಾಯಿಂದ ಈಚೆ ಬರಲಿಲ್ಲ.

ಅವರು ಗೇಟಿಂದಾಚೆ ಹೋದಮೇಲೆ ಮತ್ತೆ ಮನೆ ಸೇರಿ ತಟ್ಟೆಯಲ್ಲಿ ಆಗಲೇ ಕಲೆಸಿದ್ದ, ಒಣಗಿದ ತುತ್ತು ಬಾಯಿಗಿಟ್ಟೆ. ಮತ್ತೆ ಫೋನು ರಿಂಗಾಯಿತು.
‘ಈ ಸಲ ಊಟ ಮುಗಿಸಿ ಹೋಗಿ. ಅವರಿಗೆ ಅರ್ಧ ಗಂಟೆ ಬಿಟ್ಕೊಂಡು ಬನ್ನಿ ಅಂತ ಹೇಳಿ..’
ಫೋನಿಗೆ ಕಂಪಿಸಿದ ನನ್ನ ಸ್ಥಿತಿಗೆ ಅನುಕಂಪಿಸಿ ಮನೆಯವಳು ಹೇಳಿದಳು.
ಮೊಬೈಲು ಆನ್ ಮಾಡಿ ನೇರವಾಗಿ ‘ಅರ್ಧ ಗಂಟೆ ಬಿಟ್ಟು ಬಂದ್ರೆ ಮನೆ ನೋಡಬಹುದು’ ಎಂದು ಹೇಳಿದೆ.
‘ಅರೆ, ನಾನು ಕಣೋ ವಿಶ್ವಾ..’
ಸ್ನೇಹಿತ ವಿಶ್ವನ ದನಿ ಕೇಳಿ ಪೆಚ್ಚಾದೆ.
‘ಸಾರಿ ವಿಶ್ವ..ಇವತ್ತು ಭಾನುವಾರ ನೋಡು. ಮನೆ ನೋಡೋರ ಕಾಟ..ನಾಲ್ಕು ತಿಂಗಳಿಂದ ನೂರು ಜನ ನೋಡಿ ಹೋಗಿದಾರೆ..’
‘ಆದ್ರೆ ಯಾರೂ ಬಾಡಿಗೆಗೆ ಬಂದಿಲ್ಲ..ಅಲ್ವಾ..? ಅದಿರ್ಲಿ ಸಂಜೆ ದಂಪತಿ ಸಮೇತ ಮನೆಗೆ ಬಾ..’
‘ಏನು ವಿಷಯ..?’
‘ಪಿಂಕಿ ಬರ್ತ್‍ಡೇ..’
‘ಓಕೆ ಬರ್ತೀನಿ ತ್ಯಾಂಕ್ಸ್ ಫಾರ್ ಇನ್ವೈಟಿಂಗ್’
ಫೋನ್ ಕಟ್. ಮತ್ತೆ ತುತ್ತು ಬಾಯಿಯವರೆಗೆ ಹೋಯಿತು.

‘ರೀ..ನಾವು ತಪ್ಪುಮಾಡಿದೆವೇನೋ..? ಬಾಡಿಗೆಗೇಂತ ಮನೇನೆ ಕಟ್ಟಿಸಬಾರದಿತ್ತು!’ ಅರ್ಧಾಂಗಿ ಸ್ವಗತದಂತೆ ಹೇಳೀಕೊಂಡಳು.
‘ಯಾರಿಗೆ ಗೊತ್ತಿತ್ತು. ಇಂತಾ ಸ್ಥಿತಿ ಬರುತ್ತೇಂತ..?’ ಗೊಣಗಿದೆ.
‘ಮೊನ್ನೆ ಬಂದಿದ್ರಲ್ಲ ಅವರೇನಂದ್ರು..?’
‘ಅವರಿಗೆ ಲೀಸಿಗೆ ಬೇಕಂತೆ. ಈಗ ಬ್ಯಾಂಕುಗಳಲ್ಲಿ ಬಡ್ಡಿ ಹೆಚ್ಚಿಗೆ ಬರೊಲ್ಲ. ಅದಕ್ಕೇ ಅದನ್ನ ನಮಗೆ ಕೊಟ್ಟು ಬಾಡಿಗೆ ಇಲ್ಲದ ಹಾಗೆ ಮಾಡ್ಕೊಳ್ಳೋದು ಅವರ ಐಡಿಯಾ! ಅಷ್ಟೇ ಅಲ್ಲ. ವಾಸ್ತು ಪ್ರಕಾರ ಅವರಿಗೆ ಅಡಿಗೆ ಮನೆ ಬದಲಾಯಿಸಬೇಕಂತೆ. ವೆಸ್ಟ್ರನ್ ಕಮೋಡ್ ತೆಗೆದು ಇಂಡಿಯನ್ ಹಾಕಿಸಬೇಕಂತೆ! ಸೋಲಾರ್, ಯೂಪಿಎಸ್ ಹಾಕಿಸಿ ಅವರಿಗೆ ಫೋನು ಮಾಡಿದ್ರೆ ಬಂದು ನೋಡ್ತಾರಂತೆ!’
‘ಇದೇನು ಕರ್ಮ! ಮನೆ ಕಟ್ಟಿಸಿದ ತಪ್ಪಿಗೆ ಇದೆಲ್ಲಾ..ಅನುಭವಿಸಬೇಕು!’
ಹೇಗೋ ಅಂತೂ ಅರ್ಧ ಊಟ ಮುಗಿಸಿದ್ದೆ. ಅಷ್ಟರಲ್ಲಿ ಮತ್ತೊಂದು ಕರೆ.

‘ಸಾರ್..ಆಚೆ ಟು ಲೆಟ್ ಬೋರ್ಡು’
‘ಹೌದು. ಫಸ್ಟ್ ಪೊಲೀರಲ್ಲಿ ಮನೆ..ಎರಡು ಬೆಡ್ರೂಮು, ಒಂದೇ ಬಾತ್ರೂಮು, ಮೊಸಾಯಿಕ್ ಟೈಲ್ಸು, ಇಚಿಡಿನಯ್ ಕಿಚನ್ನು, ಸೋಲಾರಿಲ್ಲ, ಯೂಪಿಎಸ್ ಇಲ್ಲ..’ ಹಲವಾರು ಬಾಡಿಗೆದಾರರ ಪ್ರಶ್ನೆಗಳಿಗೆ ಉತ್ತರಿಸಿದ ನನಗೆ ಅವರೇನು ಕೇಳಬಹುದು ಎನ್ನುವುದಾಗಲೇ ತಿಳಿದಿತ್ತು. ರೆಕಾರ್ಡೆಡ್ ಮೆಸೇಜಿನಂತೆ ಒಂದೇ ಸಮನೆ ಹೇಳಿದೆ.
‘ಅದೆಲ್ಲಾ ನಾನು ಕೇಳಲೇ ಇಲ್ಲಾ..?’
‘ನೀವು ಕೇಳದಿದ್ರೂ ನಾನು ಹೇಳ್ತಿದ್ದೀನಿ..’
‘ಬಾಡಿಗೆಗೋ..ಇಲ್ಲಾ ಲೀಸಿಗೋ..?’
‘ಬಾಡಿಗೆಗೆ’
‘ನಮಗೆ ಲೀಸಿಗೆ ಮನೆ ಬೇಕಿತ್ತು’ ಅದರೊಂದಿಗೆ ಫೋನ್ ಕಟ್.

ಮತ್ತೊಂದು ಕರೆ.
‘ಬ್ಯಾಚುಲರ್ಸಿಗೆ ಮನೆ ಕೊಡ್ತೀರಾ..?’
‘ಬನ್ನಿ ನೋಡೋಣ..’
‘ಏನು ಅಕಾಮಿಡೇಷನ್ನು..?’
ಮತ್ತೆ ರೆಕಾರ್ಡೆಡ್ ಮೆಸೇಜಿನಂತೆ ಉಲಿದೆ.
‘ಕಾರ್ ಪಾರ್ಕಿಂಗಿಗೆ ಜಾಗ ಇದೆಯಾ..?’
‘ಇದೆ’
‘ನಾವು ನಾನ್ ವೆಜ್ಜಿನವರು ಆಗಬಹುದಾ..?’
‘ವೆಜ್ಜು, ನಾನ್ವೆಜ್ಜು, ಬೊಜ್ಜಿನವರಾದ್ರೂ ಪರ್ವಾಗಿಲ್ಲ’
‘ತಮಾಷೆಯಾಗಿ ಮಾತಾಡ್ತೀರಿ! ಸರಿ ಸಾರ್ ಮತ್ತೆ ಫೋನ್ ಮಾಡಿ ತಿಳಿಸ್ತೀನಿ..’

ಮತ್ತೆ ಕರೆ:
ಮಾಮೂಲಿನ ಪ್ರಾಥಮಿಕ ವಿಚಾರಣೆ. ನಂತರ:
‘ಪಿಜಿಗೆ ಕೊಡ್ತೀರಾ..?’
‘ಕೆಜಿ ಲೆಕ್ಕದಲ್ಲಾ..? ಮನೇನ ತೂಕ ಮಾಡೋಕಾಗುತ್ತಾ..?’
‘ಅಯ್ಯೋ ಸಾರ್, ಕೆಜಿ ಅಲ್ಲ ಪಿಜಿ! ಅಂದ್ರೆ ಪೇಯಿಂಗ್ ಗೆಸ್ಟ್. ಅದನ್ನ ಮಾಡೋಕೆ ಅವಕಾಶ ಕೊಡ್ತೀರಾ..?’
‘ಬಂದು ನೋಡಿ ಅಮೇಲೆ ಉಳಿದದ್ದು’
ಇದು ಇಲ್ಲೀವರೆಗೆ ನಡೆದಿರೋದು. ಮನೆ ಇನ್ನೂ ಖಾಲಿ ಇದೆ. ಇನ್ನೂ ಎಂತೆಂಥಾ ಜನರ ಸಂಪರ್ಕ ಬರಲಿದೆಯೋ? ಎಂತೆಂಥ ಅನುಭವಳಾಗಲಿವೆಯೋ ಗೊತ್ತಿಲ್ಲ! ಅಂದ ಹಾಗೆ ನೀವೇನಾದರೂ ಬಾಡಿಗೆ ಮನೆ ನೋಡ್ತಿದ್ದೀರಾ..? ಬನ್ನಿ ನಿಮ್ಮ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧನಾಗಿದ್ದೇನೆ! ಆದರೆ ನೀವು ಬಯಸುವ ಅನುಕೂಲಗಳಿಗೆ ಮಾತ್ರ ಬದ್ಧನಾಗಿಲ್ಲ!!

-ಎಸ್.ಜಿ.ಶಿವಶಂಕರ್


ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಮನೆ ಬಾಡಿಗೆಗಿದೆ!: ಎಸ್.ಜಿ.ಶಿವಶಂಕರ್

  1. ಬಹಳ ಚೆನ್ನಾಗಿ ಬರೆದಿದ್ದೀರಿ. ಮನೆಮಾಲೀಕರ ಕಷ್ಟದ ಜೊತೆ ನಿಮ್ಮ ಬರವಣಿಗೆಯ ರೀತಿ ಚಂದ.

  2. ಚೆನ್ನಾಗಿದೆ ಬಾಡಿಗೆ ಮನೆ ತರಾವರಿ ಕಥೆ. ನಂದೂ ಇದೇ ಕಥೆ ಸರ್.ಈ ಬಾಡಿಗೆ ಮನೆ ಕಟ್ಟೋದೂ ಸಾಕು ಒದ್ದಾಡೋದೂ ಸಾಕು ಅನಿಸಿಬಿಟ್ಟಿದೆ. ಚಂದ ಬರೆದಿದ್ದೀರಾ.👌👌

  3. ಎಸ್.ಜಿ. ಶಿವಶಂಕರ್ ರವರ ಹಾಸ್ಯ ಲೇಖನ ನಿಜಕ್ಕೂ ಶ್ಲಾಘನೀಯ. ಬೆಂಗಳೂರಿನ ಮನೆಯ ಮಾಲೀಕನ ಇಂದಿನ ಬವಣೆಗಳನ್ನು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಅಭಿನಂದನೆಗಳು.ಈಗಿನ ದಿನಗಳಿಗೆ ಇದು ಹೆಚ್ಚು ಸಾಂದರ್ಭಿಕ ವಾದ ಲೇಖನ. ಪ್ರಕಟಿಸಿದ್ದಕ್ಕೆ ಪಂಜು ವಿಗು ಅಭಿನಂದನೆಗಳು.

    ಶ್ರೀನಿವಾಸ.

  4. ಎಸ್ ಜಿ ಶಿವಶಂಕರ್ , ಬೆಂಗಳೂರಿನ ಮನೆಯ ಮಾಲೀಕನ ಬವಣೆಗಳನ್ನು ಮನ ಮುಟ್ಟುವಂತೆ ಹೇಳಿದ್ದಾರೆ. ಅಭಿನಂದನೆಗಳು. ಪ್ರಕಟ ಮಾಡಿದುದಕ್ಕೆ ಪಂಜು ಪತ್ರಿಕೆಗೂ ಸಹ ಅಭಿನಂದನೆಗಳು.

  5. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅಂತರಲ್ಲ ಹಾಗಿದೆ!

Leave a Reply

Your email address will not be published. Required fields are marked *