ಮನೆ ಖಾಲಿಯಿದೆ: ವೇದಾವತಿ ಹೆಚ್. ಎಸ್.

ಮಧ್ಯಾಹ್ನದ ಬಿರಿ ಬಿಸಿಲಿನಲ್ಲಿ ಸುಮ ಮೂರು ವರ್ಷದ ಮಗುವನ್ನು ಜೊತೆಯಲ್ಲಿ ಕರೆದುಕೊಂಡು ನಮ್ಮ ಮನೆಗೆ ಬಂದಿದ್ದಳು.ಅವಳ ಮುಖ ಬಿಸಿಲಿನ ತಾಪಕ್ಕೆ ಕೆಂಪು ಕೆಂಪಾಗಿ ಬಾಡಿ ಹೋಗಿತ್ತು.ಅವಳನ್ನು ಮನೆಯ ಒಳಗೆ ಬರ ಮಾಡಿಕೊಂಡು ಕುಳಿತು ಕೊಳ್ಳಲು ಹೇಳಿ ಪ್ಯಾನನ್ನು ಹಾಕಿ ನಿಂಬೆ ಹಣ್ಣಿನ ಜ್ಯೂಸ್ ಮಾಡಲು ಅಡುಗೆ ಮನೆಯ ಕಡೆಗೆ ಹೋದೆ.

ಜ್ಯೂಸನ್ನು ಮೆಲ್ಲನೆ ಹೀರುತ್ತಾ ತನ್ನ ಸಂಕಟ ಹೇಳಲು ಪ್ರಾರಂಭ ಮಾಡಿದಳು. “ಈ ಬೆಂಗಳೂರು ಎಂಬ ಮಹಾನಗರದಲ್ಲಿ ಒಂದು ನೆಟ್ಟಗೆ ಮನೆಗಳು ಬಾಡಿಗೆಗೆ ಸಿಗುತ್ತಿಲ್ಲ. ಒಂದು ಸರಿಯಾಗಿದ್ದರೆ ಇನ್ನೊಂದು ಸರಿಯಿರುವುದಿಲ್ಲ.ನಾವು ಚೆನ್ನಾಗಿದೆ ಇಂತಹ ಮನೆಯೆಂದು ಯೋಚನೆ ಮಾಡುವಾಗ ಅವುಗಳಲ್ಲಿ ಒಂದೇ ಬಾಡಿಗೆ ಜಾಸ್ತಿಯಾಗಿರುತ್ತದೆ,ಇಲ್ಲವೇ ಮನೆಯ ಮಾಲಿಕನ ಡಿಮ್ಯಾಂಡ್ ಒಂದಾದ ಮೇಲೊಂದರಂತೆ ಹರಿದು ಬರುತ್ತದೆ. ನಾವು ಇರುವುದು ಇಬ್ಬರು ಮತ್ತು ಈ ಚಿಕ್ಕ ಮಗು. ಅದರೂ ಅವರುಗಳ ಕಂಡಿಷನ್ಸಗಳು ಕೇಳಿ ತಲೆ ತಿರುಗುತ್ತದೆ.ಮಗನನ್ನು ಈ ವರ್ಷ ಶಾಲೆಗೆ ಸೇರಿಸಬೇಕು.ಈ ಏರಿಯಾದಲ್ಲಿರುವ ಶಾಲೆಯಲ್ಲಿ ಚೆನ್ನಾಗಿ ಪಾಠವನ್ನು ಕಲಿಸಲಾಗುತ್ತದೆಯೆಂದು ತುಂಬಾ ಪೋಷಕರು ನನ್ನಲ್ಲಿ ಹೇಳಿದ್ದಾರೆ. ಅದಕ್ಕೆ ಈ ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಯನ್ನು ಮಾಡೋಣವೆಂದು ಬಾಡಿಗೆ ಮನೆಯನ್ನು ಹುಡುಕುತ್ತಾ ಇದ್ದೇನಿ.ಇಷ್ಟೊಂದು ಖಾಲಿ ಮನೆಗಳಿದ್ದರೂ ನನಗೆ ಇಷ್ಟವಾದ ಮನೆಗಳು ನಮ್ಮ ಕೈಗೆ ಎಟುಕುತ್ತಲಿಲ್ಲ.ವಿಪರೀತ ಬಾಡಿಗೆ ಹೇಳುತ್ತಾರೆ.ಅವುಗಳಲ್ಲಿ ಕೆಲವು ತುಂಬಾ ಹಳೆಯ ಮನೆಗಳು ಮತ್ತು ನೀರಿನ ಸೌಲಭ್ಯ ಸರಿಯಿಲ್ಲ.ಅಂತಹ ಮನೆಗಳು ನಮ್ಮ ಬಜೆಟ್ನಲ್ಲಿ ಸಿಗುತ್ತದೆ.ಆದರೆ ಅವುಗಳಲ್ಲಿ ವಾಸ ಮಾಡಲು ಹೋಗಿ ಒದ್ದಾಡುವುದು ನನಗೆ ಇಷ್ಟವಿಲ್ಲ”ಹೀಗೆ ಬಾಡಿಗೆ ಮನೆಯನ್ನು ಹುಡುಕಿ ಕೊಂಡು ಸುಸ್ತಾಗಿ ಬಂದ ಸುಮಳ ಮಾತು ಇದಾಗಿತ್ತು.

“ಮನೆ ಖಾಲಿಯಿದೆ”ಎಂಬ ನಾಮ ಫಲಕ ಮನೆ ಗೇಟಿನಲ್ಲಿ ತೂಗು ಹಾಕಿರುವುದು ಮಾರ್ಚ್ ತಿಂಗಳಿನಿಂದ ಪ್ರಾರಂಭವಾಗಿ ಮೇ ತಿಂಗಳವರೆಗೂ ಬೆಂಗಳೂರಿನ ರಸ್ತೆಯಲ್ಲಿ ಅಲ್ಲಲ್ಲಿ ಜಾಸ್ತಿಯಾಗಿ ಕಾಣ ಸಿಗುತ್ತದೆ.ಏಕೆಂದರೆ ಮಕ್ಕಳಿಗೆ ರಜೆ ಬಂದಾಗ ಪೋಷಕರು ತಮಗೆ ಅನುಕೂಲವಾಗುವಂತಹ ಮನೆಯನ್ನು ಹುಡುಕುವುದು ಬೆಂಗಳೂರಿನ ನಗರದಲ್ಲಿ ಅದೊಂದು ಸಾಮಾನ್ಯ ದೃಶ್ಯವೆನ್ನ ಬಹುದು.ಹಿಂದೆಲ್ಲಾ ಬ್ರೋಕರ್ ಮೂಲಕ ವ್ಯವಹಾರಗಳನ್ನು ನಡೆಸುತ್ತಿದ್ದ ಜನರು ಅವರ ಕೆಲವೊಂದು ನಿಯಮಗಳು ಹಾಗೂ ವ್ಯವಹಾರದಲ್ಲಿ ಇಷ್ಟು ಬಾಡಿಗೆಯಿರುವ ಮನೆಗೆ ತಮಗಿಷ್ಟು ಪರ್ಸೆಂಟ್ ಕೊಡಬೇಕೆಂದು ಹೇಳುವುದರಿಂದ ಮನೆಯ ಮಾಲಿಕರು ಮತ್ತು ಬಾಡಿಗೆದಾರರು ನೇರನೇರ ವ್ಯವಹಾರವನ್ನು ಮಾಡಿ ಒಂದು ಒಪ್ಪಂದಕ್ಕೆ ಬರುವುದು ಈದಿನಗಳಲ್ಲಿ ಸಾಮಾನ್ಯವಾದ ವಿಷಯವಾಗಿದೆ.

ಮಹಾನಗರವಾದ ಬೆಂಗಳೂರಿನಲ್ಲಿ ಕೆಲವೊಬ್ಬರು ಬಾಡಿಗೆಗೆಂದು ಮನೆಗಳನ್ನು ಕಟ್ಟಿಸಿರುವುದು ಕಾಣುತ್ತೇವೆ. ಅವರುಗಳು ಬಾಡಿಗೆ ಕೊಡಲೆಂದು ಅತಿ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಅಂತಹ ಮನೆಯನ್ನು ನಿರ್ಮಾಣ ಮಾಡಿರುತ್ತಾರೆ. ಅಲ್ಲಿ ಎರಡು ಬೆಡ್ ರೂಮ್, ಎರಡು ಬಾತ್ ರೂಮ್,ಹಾಲ್,ಕಿಚನ್ ಎಲ್ಲವೂ ಚಿಕ್ಕ ಚಿಕ್ಕದಾಗಿ ಕಟ್ಟಿಸಿ ಅದಕ್ಕೆ ತಕ್ಕಂತೆ ಟೈಲ್ಸ್ ಸಹ ಕಡಿಮೆ ವೆಚ್ಚದಲ್ಲಿ ಹಾಕಿ ಇಂತಿಷ್ಟು ಬಾಡಿಗೆ ಈ ಮನೆಗೆ ಎಂದು ಒಂದು ಸೈಟಿನಲ್ಲಿ ಹತ್ತು ಮನೆಯನ್ನು ಒಂದರಮೇಲೊಂದು ಕಟ್ಟಿಸಿ ಅಪಾರ್ಟ್ಮೆಂಟ್ ರೀತಿಯಲ್ಲಿ ಹೊರಗಡೆಯಿಂದ ನೋಡಲು ಸುಂದರವಾದ ರೀತಿಯಲ್ಲಿ ಕಟ್ಟಿಸಿ ಬಾಡಿಗೆದಾರರನ್ನು ಸೆಳೆಯಲು ಎಲ್ಲಾ ಕಸರತ್ತುಗಳನ್ನು ಮನೆಯ ಮಾಲಿಕರು ಮಾಡಿರುತ್ತಾರೆ.

ಇಂತಹ ಮನೆಗಳ ಮುಂದೆ ಗೇಟಿನಲ್ಲಿ ತೂಗು ಹಾಕಿರುವ ಫಲಕವನ್ನು ನೋಡಿ ಬರುವ ಬಾಡಿಗೆದಾರರು ಅದರಲ್ಲಿ ಹಾಕಿರುವ ಫೋನ್ ಮೂಲಕ ಸಂಭಾಷಣೆ ಪ್ರಾರಂಭ ಮಾಡಿದಾಗ ಅವರ ಪೂರ್ತಿ ವಿವರವನ್ನು ಸಂಗ್ರಹಿಸಿ ಮಾಲಿಕರು ಮನೆಯನ್ನು ತೋರಿಸುತ್ತಾರೆ. ಮಾಲಿಕರುಗಳು ಬಾಡಿಗೆದಾರರಿಗೆ ಕೆಲವೊಂದು ಕಂಡಿಷನ್ಸುಗಳುನ್ನು ಮನೆಯನ್ನು ತೋರಿಸುವ ಮೊದಲೇ ಹಾಕುವುದಿದೆ.

ಮನೆ ಮಾಲಿಕರು ಸಹ ತಮ್ಮ ಅನುಕೂಲಕ್ಕೆ ತಕ್ಕಂತೆ ಬಾಡಿಗೆದಾರರನ್ನು ಹುಡುಕುತ್ತಾರೆ.
*ಐಟಿ ಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರಾದರೆ ಒಳ್ಳೆಯದು.ಏಕೆಂದರೆ ಅವರು ಮನೆಯಿಂದ ಹೊರ ಹೋಗುವುದು ಮಾತ್ರ ಗೊತ್ತು. ಬರುವುದು ತಡ ರಾತ್ರಿಯಲ್ಲಿ.ಇದರಿಂದ ನೀರಿನ ಉಳಿತಾಯವಾಗುತ್ತದೆ.ಹಾಗೂ ಅವರು ತಿಂಗಳಿಗೆ ಸರಿಯಾಗಿ ಬಾಡಿಗೆ ಚುಕ್ತಾ ಮಾಡುತ್ತಾರೆ. ಅವರಿಂದ ಹೆಚ್ಚಿನ ಬಾಡಿಗೆ ನಿರೀಕ್ಷೆ ಮಾಡಬಹುದು.
*ಆಗಲೇ ಮದುವೆಯಾದ ಪ್ಯಾಮಿಲಿಯಾದರೆ ಒಳ್ಳೆಯದು.ಏಕೆಂದರೆ ವಾರದ ಕೊನೆಯಲ್ಲಿ ಶನಿವಾರ ಭಾನುವಾರ ಮಜ ಮಾಡಲು ಮನೆಯಿಂದ ಹೊರ ಹೋಗುತ್ತಾರೆ.
*ದೂರದ ಊರಿನಲ್ಲಿ ವಾಸ ಮಾಡುವ ಬಾಡಿಗೆದಾರರ ಕುಟುಂಬಗಳಿದ್ದರೆ ಒಳ್ಳೆಯದು. ಏಕೆಂದರೆ ಆಗಾಗ ಅವರ ಸಂಬಂಧಿಕರು ಬಂದು ಈ ಮನೆಯಲ್ಲೇ ಠಿಕಾಣಿ ಹೂಡುವುದಿಲ್ಲ.
*ಬ್ಯಾಚುಲರ್ ಹುಡಗಿಯರು ಅಥವಾ ಹುಡುಗರಿಗೆ ಮನೆಯನ್ನು ಕೊಡುವುದಿಲ್ಲ. ಅವರು ಆ ಪಾರ್ಟಿ, ಈ ಪಾರ್ಟಿಯೆಂದು ಮನೆಯನ್ನು ಹಾಳು ಮಾಡುವುದರ ಜೊತೆಗೆ ಅಕ್ಕಪಕ್ಕದ ಮನೆಯವರ ಕೆಂಗಣ್ಣಿಗೆ ಗುರಿಯಾಗಿ ಮನೆ ಮಾಲಿಕರ ಗೌರವವನ್ನು ಹಾಳಾಗುವಂತೆ ಮಾಡುತ್ತಾರೆ.
*ಕೆಲವೊಮ್ಮೆ ಬಾಡಿಗೆದಾರರು ಅವರ ಸ್ನೇಹಿತರ ಕುಟುಂಬವನ್ನು ಕರೆದು ತಂದು ಅದೇ ಮನೆಯಲ್ಲಿ ಆಶ್ರಯ ಕೊಟ್ಟು ಮನೆಯ ಮಾಲಿಕನಿಗೆ ಗೊತ್ತಾಗದ ರೀತಿಯಲ್ಲಿ ಬಾಡಿಗೆಯನ್ನು ಹಂಚಿಕೊಂಡು ಒಂದೇ ಮನೆಯಲ್ಲಿ ಇದ್ದು ಮನೆ ಮಾಲಿಕನಿಗೆ ಮೋಸ ಮಾಡುವವರು ಇದ್ದಾರೆ.ಇಂತಹ ತೊಂದರೆಯನ್ನು ಅನುಭವಿಸಿದ ಮನೆ ಮಾಲಿಕರು ಮುಂದೆ ಜಾಗ್ರತೆ ವಹಿಸಿ ಎಲ್ಲಾ ರೀತಿಯಲ್ಲಿ ಪರೀಕ್ಷಿಸಿ ಮನೆ ಬಾಡಿಗೆ ಕೊಡುತ್ತಾರೆ.

ಇಂತಹ ಆನೇಕ ಕಂಡಿಷನ್ಗಳಿಗೆ ಬಾಡಿಗೆದಾರರು ಒಪ್ಪಿದರೆ ಮನೆಯನ್ನು ಹತ್ತು ಅಥವಾ ಹನ್ನೊಂದು ತಿಂಗಳಿಗೆ ಬರವಣಿಗೆ ಮೂಲಕ ಒಪ್ಪಂದ ಮಾಡಿಕೊಳ್ಳುತ್ತಾರೆ. ಎಲ್ಲಿಯಾದರೂ ಬಾಡಿಗೆದಾರರು ಇಷ್ಟವಾಗಿಲ್ಲವೆಂದರೆ ಮೂರು ತಿಂಗಳ ಮೊದಲು ಯಾವುದೋ ಒಂದು ಕಾರಣ ಹುಡುಕಿ ಬಾಡಿಗೆದಾರರಿಗೆ ಇಂತಹ ದಿನದಲ್ಲಿ ಮನೆ ಖಾಲಿ ಮಾಡಿ ಎನ್ನುವ ಮಾಲಿಕರು ಇದ್ದಾರೆ.

ಎಲ್ಲಾ ಮನೆ ಮಾಲಿಕರು ಒಂದೇ ರೀತಿಯಲ್ಲಿರುವುದಿಲ್ಲ.ಕೆಲವರು ಸುಂದರವಾದ ತಮ್ಮ ಮನೆಯನ್ನು ಕಡಿಮೆ ಬಾಡಿಗೆಗೆ ಕೊಟ್ಟು ಚೆನ್ನಾಗಿ ಸಂಸಾರ ನಡೆಸಿ ಎಂದು ಬಾಡಿಗೆ ಮನೆಯಲ್ಲಿ ವಾಸಿಸುವ ಮಂದಿಗೆ ಹೇಳುವವರು ಇದ್ದಾರೆ. ಅವರಿಗೆ ಮನೆ ಬಾಡಿಗೆಗಿಂತ ಒಳ್ಳೆಯ ಮನಸ್ಸಿನ ಹೃದಯವಂತ ಬಾಡಿಗೆದಾರರು ಬೇಕಾಗಿರುತ್ತಾರೆ.ಅಂತಹ ಮನೆ ಮಾಲಿಕರು ಬಾಡಿಗೆಯನ್ನು ನಿರೀಕ್ಷೆ ಮಾಡುವುದಿಲ್ಲ.ಬಾಡಿಗೆದಾರರನ್ನು ನಮ್ಮ ಕುಟುಂಬದ ಸದಸ್ಯರಂತೆ ನೋಡಿ ಕೊಳ್ಳುತ್ತಾರೆ. ಒಳ್ಳೆಯ ಸಹೃದಯ ಮಾಲಿಕರು ಆನೇಕ ಮಂದಿ ಬೆಂಗಳೂರಿನಲ್ಲಿ ಸಿಗುತ್ತಾರೆ.ಅವರು ಬಾಡಿಗೆಗೆಂದು ಮನೆಯನ್ನು ಕಟ್ಟಿಸಿರುವುದಿಲ್ಲ.ಯಾವುದೋ ಉದ್ದೇಶದಿಂದ ಮನೆಯನ್ನು ಬಾಡಿಗೆ ಕೊಡುವ ಪರಿಸ್ಥಿತಿ ಒದಗಿ ಬಂದಿರುತ್ತದೆ. ಅಂತಹ ಮನೆ ಮಾಲಿಕರ ನಿರೀಕ್ಷೆಯು ತನ್ನ ಸ್ವಂತ ಮನೆಯಂತೆ ಬಾಡಿಗೆದಾರರು ಮನೆಯನ್ನು ನೀಟಾಗಿ ನೋಡಿ ಕೊಂಡರೆ ಸಾಕೆಂದು ತಿಳಿಯುತ್ತಾರೆ.

ಕೆಲವೊಮ್ಮೆ ಎಷ್ಟೋ ಮನೆ ಮಾಲಿಕರು ಐದಾರು ತಿಂಗಳು ಮನೆ ಖಾಲಿ ಬಿದ್ದರು ಪರ್ವಾಗಿಲ್ಲ,ನಾವು ಯೋಚಿಸಿದಷ್ಟು ಬಾಡಿಗೆ ಬರಬೇಕೆಂದು ಆಶಿಸುತ್ತಾರೆ.ಮನೆಯನ್ನು ಖಾಲಿ ಬಿಟ್ಟು ಕುಳಿತು ಕೊಳ್ಳುವುದರಿಂದ ಐದಾರು ತಿಂಗಳ ಬಾಡಿಗೆ ಕಳೆದು ಕೊಳ್ಳುತ್ತಿರುವುದು ಅವರಿಗೆ ಗೊತ್ತೇ ಆಗುವುದಿಲ್ಲ.ಹಾಗೆ ಖಾಲಿ ಬಿಡುವ ಬದಲು ಸ್ವಲ್ಪ ಕಡಿಮೆ ಬಾಡಿಗೆಗೆ ಮನೆಯನ್ನು ಕೊಟ್ಟರೆ ಅದೇ ಅವರು ಯೋಚಿಸುವ ಬಾಡಿಗೆ ಅಲ್ಲಿಯೇ ಸಿಗುತ್ತದೆ ಅಲ್ಲವೇ?ಹೆಚ್ಚಿನ ಬಾಡಿಗೆಗೆ ಗಿರಾಕಿ ಹುಡುಕುತ್ತಾ ದಿನ ತಳ್ಳುವ ಬದಲು ಯಾರೋ ಒಬ್ಬರು ತಮ್ಮ ಬದುಕು ಜೀವನ ಸಾಗಿಸಿದಂತೆ ಆಗುತ್ತದೆ ಎಂಬುದು ನನ್ನ ಅನಿಸಿಕೆ.

ಒಂದೇ ಸೂರಿನಡಿ ಬದಕುವ ಬಾಡಿಗೆದಾರರು ಮತ್ತು ಮನೆ ಮಾಲಿಕರ ನಡುವೆ ಚೆನ್ನಾಗಿ ಬಾಂಧವ್ಯವಿರಬೇಕು.ಚಿಕ್ಕ ಪುಟ್ಟ ವಿಷಯಕ್ಕೂ ಕಲಹ ಬರದಂತೆ ನೋಡಿಕೊಳ್ಳಬೇಕು.ಮನೆ ಮಾಲಿಕರು ಒಂದು ಮನೆಯನ್ನು ಕಟ್ಟಿಸುವಾಗ ತುಂಬಾ ಶ್ರಮವಹಿಸಿ ಕಟ್ಟಿಸಿರುತ್ತಾರೆ.ಆ ಮನೆಯಲ್ಲಿ ವಾಸ ಮಾಡುವ ಬಾಡಿಗೆದಾರರು ತಮ್ಮ ಸ್ವಂತ ಮನೆ ಎಂಬಂತೆ ನೋಡಿಕೊಂಡರೆ ಒಳ್ಳೆಯದು.ಆಗ ಮನೆ ಮಾಲಿಕರ ಕೆಂಗಣ್ಣಿಗೆ ಗುರಿಯಾಗುವುದು ತಪ್ಪಿ,ತಾವು ಸ್ವಂತ ಸೂರು ಮಾಡಿಕೊಳ್ಳುವರೆಗೆ ಆ ಮನೆಯಲ್ಲಿ ವಾಸ ಮಾಡಲು ಮಾಲಿಕರು ನಿಮಗೆ ಸಹಕಾರ ನೀಡುತ್ತಾರೆ.

-ವೇದಾವತಿ ಹೆಚ್. ಎಸ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x