ಕೋಣೆ ಅನ್ನುವುದು ಹೆಚ್ಚಿನೆಲ್ಲಾ ಮನೆಗಳಲ್ಲಿ ಚೌಕವೋ ಆಯತವೋ ಇರುವುದರಿಂದ ಒಂದು ಕೋಣೆಗೆ ನಾಲ್ಕು ಮೂಲೆಗಳು ಇದ್ದೇ ಇರುತ್ತವೆ. ಅವುಗಳಲ್ಲಿ ಒಂದೆರಡು ಹೊರ ಜಗತ್ತಿಗೆ ತೆರೆದಿದ್ದರೆ ಮತ್ತುಳಿದವು ತಮ್ಮನ್ನು ಮಂಚವೋ, ಮೇಜೋ, ಕುರ್ಚಿಯೋ ಹೀಗೇ ಯಾವುದಾದರೂ ವಸ್ತುಗಳಿಂದ ಆವರಿಸಿಕೊಂಡಿರುತ್ತವೆ. ಇವುಗಳೇ ಮನೆಯ ಅತ್ಯದ್ಭುತ ಸ್ಥಳ ಎಂದು ನನ್ನ ಅಭಿಪ್ರಾಯ. ಇವುಗಳು ಮುಚ್ಚಿಟ್ಟುಕೊಂಡಿರುವ ರಹಸ್ಯಗಳೇ ಹಾಗಿರುತ್ತವೆ. ಪಕ್ಕನೆ ಮನೆ ಒಳಗೆ ನುಗ್ಗಿದವರಿಗೆ ಕಾಣಬಾರದ, ಕಸ, ಕಸಬರಿಕೆ, ಬಿಸುಡಲು ಮನಸ್ಸಿಲ್ಲದ ಹಳೆಯ ಬಟ್ಟೆಯ ಗಂಟು, ಮುರಿದ ಪಾತ್ರೆ ಪಡಗಗಳು, ಮನೆಯ ಹೆಚ್ಚುವರಿ ಸಾಮಾನುಗಳು … ಹೀಗೇ ಮನೆಯ ಮೂಲೆಯನ್ನು ಅಲಂಕರಿಸುವ ವಸ್ತುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕೆಲವು ಸ್ಥಳಗಳನ್ನು ರಕ್ಷಣೆಯ ದೃಷ್ಟಿಯಿಂದ ’ಪ್ರೋಹಿಬಿಟೆಡ್ ಏರಿಯಾ’ ಎಂದು ಹೆಸರಿಸುವಂತೆ ಮನೆಯ ಮೂಲೆಯನ್ನು ಆ ಹೆಸರಲ್ಲಿ ಕರೆಯಬಹುದು. ಮನೆಯ ಒಳಗಿನ ಎಲ್ಲಾ ಅಚ್ಚರಿಗಳನ್ನು, ಹೊರ ಜಗತ್ತಿಗೆ ಕಾಣಬಾರದ ವಸ್ತುಗಳನ್ನು ಅವು ತಮ್ಮಲ್ಲೇ ರಹಸ್ಯವಾಗಿ ಉಳಿಸಿಕೊಳ್ಳುತ್ತವೆ.
ನಾವು ಚಿಕ್ಕವರಿರುವಾಗ ನಮಗೂ ಮನೆಯ ಮೂಲೆ ಎಂಬುದು ಯಾವತ್ತೂ ಕುತೂಹಲಕಾರಿಯಾಗಿಯೇ ಕಾಣುತ್ತಿತ್ತು. ಅಮ್ಮ ಉಪಯೋಗವಿಲ್ಲ ಎಂದು ಎಸೆದಿರುವ ಹಲವು ವಸ್ತುಗಳು ನಮಗೆ ಬೆಲೆಬಾಳುವ ವಸ್ತುಗಳಂತೆ ಕಂಡು ನಮ್ಮ ಆಟದ ಮನೆಯ ಖಜಾನೆ ಸೇರುತ್ತಿದ್ದವು. ಇದರಲ್ಲಿ ಮುಖ್ಯವಾಗಿ ಅಪ್ಪನ ಕ್ಲಿನಿಕ್ಕಿನಿಂದ ಮನೆಗೆ ಬರುತ್ತಿದ್ದ ಖಾಲಿ ರಟ್ಟಿನ ಪೆಟ್ಟಿಗೆ.ಅದರಲ್ಲಿ ನೋಡುವವರಿಗೆ ಕಸವಾಗಿ ಕಾಣುತ್ತಿದ್ದ ಇಂಜೆಕ್ಷನ್ನಿನ ಖಾಲಿ ಬಾಟಲಿಗಳು, ಅಪ್ಪ ಮಾತ್ರ ಓದುತ್ತಿದ್ದ ಸೋವಿಯತ್ ಯೂನಿಯನ್ ಪುಸ್ತಕಗಳು ಇದ್ದವು. ಇವುಗಳೆಲ್ಲ ನಮಗೆ ಅಮೂಲ್ಯವಾಗಿ ಕಾಣಿಸಲು ಬೇರೆ ಕಾರಣಗಳೂ ಇತ್ತೆನ್ನಿ. ರಟ್ಟಿನ ಪೆಟ್ಟಿಗೆಗಳು ನಮ್ಮ ’ಮನೆ ಆಟ’ದ ಕಚ್ಚಾ ಪದಾರ್ಥಗಳಾಗಿದ್ದವು. ಇಂಜೆಕ್ಷನ್ನಿನ ಬಾಟಲಿಗಳು ಆಗಿನ ಕಾಲದಲ್ಲಿ ಎಲ್ಲರ ಖಯಾಲಿಯಾಗಿದ್ದ ಗಾಜಿನ ಬಾಟಲಿಗಳ ಮಂಟಪ ಮಾಡುವ ಮೂಲ ವಸ್ತುಗಳಾಗಿದ್ದವು.ಆ ಬಾಟಲಿಗಳ ರಬ್ಬರಿನ ಬಿರಡೆಗಳು ನಮ್ಮ ಪೆನ್ಸಿಲ್ ಬರಹದ ತಪ್ಪುಗಳನ್ನು ಅಳಿಸುವ ಇರೇಸರ್ ಗಳಾಗಿ ಮಾರ್ಪಾಡು ಹೊಂದುತ್ತಿದ್ದವು. ಮಾತ್ರವಲ್ಲ ಇವು ನಮ್ಮ ಕರೆನ್ಸಿಗಳಂತೆಯೂ ಉಪಯೋಗವಾಗುತ್ತಿತ್ತು ಎಂದರೂ ಅತಿಶಯೋಕ್ತಿಯೇನಲ್ಲ. ಎರಡು ಪೇರಳೆ ಹಣ್ಣಿಗೋ, ಮಾವಿನ ಹಣ್ಣಿಗೋ ಅಥವಾ ಈಗಿನ ಮಕ್ಕಳಿಗೆ ಹೆಸರು ಕೇಳಿಯೂ ಗೊತ್ತಿಲ್ಲದ ಅಮೆ ಹಣ್ಣು, ಮಡಿಕೆ ಹಣ್ಣು,ಕೂಮೆ ಹಣ್ಣು, ಕರ್ಮಂಜಿ ಹಣ್ಣು, ಪಾಲೆ ಹಣ್ಣು, ಸೋಮಾರಿ ಹಣ್ಣು ಮುಂತಾದ ಹಣ್ಣುಗಳ ವಿನಿಮಯಕ್ಕೆ ಉಪಯೋಗವಾಗುತ್ತಿತ್ತು. ಇದೇ ರಬ್ಬರಿನ ಬಿರಡೆ, ಒಂದು ಬಳಪಕ್ಕೆ ಬದಲಾಗಿ ಅಥವಾ ಕೆಲವೊಮ್ಮೆ ಕಾಡುತ್ತಿದ್ದ ಗಣಿತದ ಸಮಸ್ಯೆಗಳನ್ನು ಇನ್ನೊಬ್ಬರಿಂದ ಕಾಪಿ ಹೊಡೆಯಬೇಕಾದರೆ ಕೊಡಬೇಕಾದ ಲಂಚ ರೂಪದಲ್ಲಿಯೂ ಬಳಸಲ್ಪಡುತ್ತಿತ್ತು. ಹಾಗಾಗಿ ಇದಕ್ಕೆ ಕರೆನ್ಸಿಗಿಂತ ಕಡಿಮೆ ಸ್ಥಾನ ಮಾನ ನೀಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇನ್ನು ಅಪ್ಪ ಮಾತ್ರ ಓದುತ್ತಿದ್ದ ಆ ಇಂಗ್ಲೀಷ್ ಪುಸ್ತಕ ನಮಗೆ ನಮ್ಮ ನೋಟ್ ಪುಸ್ತಕಕ್ಕೆ ಬೈಂಡ್ ಆಗಿ ಬಳಕೆಯಾಗುತ್ತಿತ್ತು. ಪುಸ್ತಕದ ಹೊದಿಕೆಯಾಗಿ ಮಾರ್ಪಡುತ್ತಿದ್ದ ಆ ಆಕರ್ಷಕ ಚಿತ್ರಗಳನ್ನೊಳಗೊಂಡ ನುಣುಪು ಕಾಗದ ನಮ್ಮ ಕ್ಲಾಸ್ ಟೀಚರಿನ ಗಮನ ಸೆಳೆದು ಅವರು ಬೈಂಡ್ ಬಿಡಿಸಿ ನೋಡುವಂತೆ ಮಾಡುತ್ತಿದ್ದವು.ಇದರಿಂದಾಗಿ ನೋಟ್ಸ್ ಪುಸ್ತಕದಲ್ಲಿ ನುಸುಳುವ ತಪ್ಪುಗಳು ಅವರ ಕಣ್ಣಿಗೆ ಬೀಳದೆ ಬೆತ್ತ ಪೂಜೆಯ ಸನ್ನಿವೇಶಗಳು ಕಡಿಮೆಯಾಗುತ್ತಿದ್ದವು.
ಸ್ವಲ್ಪ ದೊಡ್ಡವರಾದಂತೆ ಮನೆಯ ಮೂಲೆಯ ಉಪಯೋಗ ಇನ್ನಷ್ಟು ಹೆಚ್ಚಿತು. ಮನೆಗೆ ನಮ್ಮ ಟೀಚರುಗಳೇನಾದರೂ ಬಂದರೆ ಅವರೆದುರಿನಲ್ಲಿ ಅಮ್ಮನ ಹತ್ತಿರ ಮತ್ತಷ್ಟು ಬಯ್ಯಿಸಿಕೊಳ್ಳದಂತೆ ಅಡಗಿ ಕೂರಲು ಉಪಯೋಗವಾಗುತ್ತಿತ್ತು. ವಠಾರದ ಮನೆಯಲ್ಲಿ ಇದ್ದ ಕಾರಣ ಎಲ್ಲರೂ ಬಳಸುವ ಒಂದೇ ಅಂಗಳವನ್ನು ಎಲ್ಲರೂ ಗುಡಿಸಿ ಸ್ವಚ್ಛಗೊಳಿಸಲೂ ಬೇಕಿತ್ತು. ಆ ಕೆಲಸ ಪ್ರತಿ ದಿನ ಸಂಜೆ ನಿಗದಿತ ಹೊತ್ತಿನಲ್ಲಿ ನಡೆಯುತ್ತಿತ್ತು. ಆ ಹೊತ್ತು ಮುಗಿಯುವವರೆಗೆ ಕಣ್ಣಿಗೆ ಕಾಣದಂತೆ ಕೂರಲು ಈ ಮೂಲೆಯೇ ಪ್ರಯೋಜನಕ್ಕೆ ಬರುತ್ತಿತ್ತು. ಇಂತಹ ಹತ್ತು ಹಲವು ಉಪಕಾರಗಳನ್ನು ಮಾಡುತ್ತಿದ್ದ ಈ ಮೂಲೆ ನನಗೆ ಬಲು ಪ್ರಿಯವಾಗಿತ್ತು. ಇದರ ಬಹು ದೊಡ್ಡ ಪ್ರಯೋಜನ ಆದುದು ನನ್ನ ಹೈಸ್ಕೂಲಿನ ದಿನಗಳಲ್ಲಿ.
ಆಗ ಶಾಲೆಗೆ ಬುತ್ತಿ ತೆಗೆದುಕೊಂಡು ಹೋಗುವುದೆಂದರೆ ದೊಡ್ಡ ಹಿಂಸೆ ಎಂದು ನನ್ನ ಭಾವನೆ. ಶಾಲೆಯ ಪುಸ್ತಕದ ಹೊರೆಯ ಜೊತೆಗೆ ಬ್ಯಾಗಿನ ಸುಂದರ ಆಕಾರವನ್ನು ಕೆಡಿಸುವ ಈ ಬುತ್ತಿ ನನ್ನ ದೊಡ್ಡ ಶತ್ರುವಾಗಿತ್ತು. ಇಷ್ಟು ಮಾತ್ರವಲ್ಲ. ಬುತ್ತಿ ಊಟ ಮಾಡುವ ಹೊತ್ತು ಕೂಡಾ ನನ್ನ ದಿನದ ಅತ್ಯಮೂಲ್ಯ ಗಳಿಗೆಗಳನ್ನು ಕಸಿಯುತ್ತಿತ್ತು. ಆ ಅಮೂಲ್ಯ ಗಳಿಗೆ ಶಾಲೆಯಲ್ಲಿ ಮದ್ಯಾಹ್ನದ ಊಟದ ಗಂಟೆ ಹೊಡೆದ ಕೂಡಲೇ ಬರುತ್ತಿತ್ತು. ತಕ್ಷಣ ಆಟದ ಕೋರ್ಟಿಗಿಳಿದರೆ ಬ್ಯಾಡ್ಮಿಂಟನ್ ನ ಎರಡು ಗೇಮ್ ಗಳನ್ನು ಪೂರೈಸಲು ಸಾಧ್ಯವಾಗುತ್ತಿತ್ತು. ಈ ಬುತ್ತಿ ತಂದು ಊಟ ಮಾಡಿದರೆ ಬುತ್ತಿ ಪಾತ್ರೆಯನ್ನು ತೊಳೆಯಲು ಪರ್ಲಾಂಗಿನಾಚೆ ಇದ್ದ ಕಾವೇರಿ ನದಿಗೆ ಹೋಗಬೇಕಿತ್ತು. ಅಲ್ಲಿಯವರೆಗೆ ನಡೆದರೆ ಸಾಕೇ.. ಬಳಲಿದ ಕಾಲಿಗೆ ಒಂದಿಷ್ಟು ನೀರನ್ನು ತಾಕಿಸಲೆಂದು ನೀರಿಗಿಳಿದರೆ ಮತ್ತೆ ಹೊತ್ತಿನ ಪರಿವೆಯೇ ಇರುತ್ತಿರಲಿಲ್ಲ. ಮರಳಿ ಬರುವಾಗ ಕ್ಲಾಸಿಗೆ ಸರ್ ಬಂದು ಬೆತ್ತ ಝಳಪಿಸುತ್ತಾ ಕುಳಿತಿರುತ್ತಿದ್ದರು. ಇದೆಲ್ಲದಕ್ಕೂ ಸುಲಭ ಪರಿಹಾರ ಒದಗಿಸಿದ್ದು ಮನೆಯ ಮೂಲೆ. ನನ್ನಮ್ಮ ನಿತ್ಯದ ಕೆಲಸಕ್ಕೆ ಬಾರದ ಸ್ಟೀಲ್ ಪಾತ್ರೆಗಳನ್ನು ಒಂದು ಮೂಲೆಯಲ್ಲಿ ಬೋರಲು ಹಾಕಿರುತ್ತಿದ್ದಳು. ಅಮ್ಮ ತುಂಬಿಸಿ ಕೊಟ್ಟ ಬುತ್ತಿಯನ್ನು ಮೆಲ್ಲನೆ ಆ ಪಾತ್ರೆಗಳ ಅಡಿಯಲ್ಲಿಟ್ಟು ಶಾಲೆಗೆ ಹೋಗುತ್ತಿದ್ದ ನಾನು ಮರಳಿ ಬಂದು ಅಮ್ಮನಿಗೆ ಅರಿವಾಗದಂತೆ ಅದನ್ನು ಅಲ್ಲಿಂದ ತೆಗೆದು ಬೀದಿ ನಾಯಿಗಳಿಗೆ ಊಟ ಹಾಕುವ ಸಮಾರಂಭ ಏರ್ಪಡಿಸುತ್ತಿದ್ದೆ. ಒಮ್ಮೆ ಮನೆಗೆ ಇದ್ದಕ್ಕಿದ್ದಂತೆ ಹೆಚ್ಚಿನ ಸಂಖ್ಯೆಯ ನೆಂಟರು ಬಂದಾಗ ಅಮ್ಮ ಅಡುಗೆ ಮಾಡಲು ಮೂಲೆಯಲ್ಲಿಟ್ಟಿದ್ದ ಈ ಹೆಚ್ಚುವರಿ ಪಾತ್ರೆಗಳನ್ನು ತೆಗೆಯಬೇಕಾದ ದಿನದವರೆಗೆ ನನ್ನ ರಹಸ್ಯ ಕಾರ್ಯಾಚರಣೆಗೆ ಕುತ್ತುಂಟಾಗಿರಲಿಲ್ಲ. ನಂತರವೂ ಕೆಲ ದಿನ ಬುತ್ತಿ ಹೊರಬೇಕಾಯಿತಷ್ಟೇ.. ಮನೆಯ ಮೂಲೆ ಮತ್ತೆ ನನಗೆ ಅಭಯವನ್ನಿತ್ತು ಕಾಪಾಡಿತು.
ಹಾಗೆಂದು ಇದರಿಂದ ಪಚೀತಿ ಪಟ್ಟಿದ್ದೂ ಇಲ್ಲವೆನ್ನುವಂತಿಲ್ಲ. ಮನೆಯ ಮೂಲೆಯಲ್ಲಿ ಸೊಳ್ಳೆ ಜಿರಲೆಗಳೊಂದಿಗೆ ಜೇಡರ ಹುಳುಗಳೂ ಸಾಮರಸ್ಯದಿಂದ ಬಾಳುತ್ತವೆ. ಹೀಗೆ ನಮ್ಮ ಮನೆಯಲ್ಲಿ ಸೆರಿಕೊಂಡಿದ್ದ ಜಿರಲೆಯೊಂದು ನಾನು ಏಳನೇ ಕ್ಲಾಸಿನ ಪರೀಕ್ಷಾ ಫಲಿತಾಂಶ ನೋಡಲೆಂದು ಹಾಲ್ ಟಿಕೆಟ್ ನಂಬರ್ ಬರೆದು ಜತನದಿಂದ ಕಾಪಾಡಿಕೊಂಡಿದ್ದ ಚೀಟಿಯಲ್ಲಿದ್ದ ನಂಬರನ್ನೇ ತಿರುಚಿ ಹಾಕಿ ಪೇಚಿಗೆ ಸಿಲುಕಿಸಿತ್ತು. ಫಲಿತಾಂಶದ ಪಟ್ಟಿಯಲ್ಲಿ ಹೆಸರಿಗೆ ಬದಲು ನಂಬರನ್ನೇ ನಮೂದಿಸುವ ಕಾರಣ ನಾನು ಕೈಯ್ಯಲ್ಲಿ ಹಿಡಿದ ಚೀಟಿಯೊಂದಿಗೆ ಕಾತುರದಿಂದ ನನ್ನ ನಂಬರನ್ನು ಹುಡುಕುತ್ತಿದ್ದೆ. ಮೊದಲಿಗೆ ಥರ್ಡ್ ಕ್ಲಾಸಿನಲ್ಲಿ ಪಾಸಾದವರ ಲಿಸ್ಟಿನಲ್ಲಿ ಕಣ್ಣು ಹಾಯಿಸಿದೆ. ಸದ್ಯ ಅಲ್ಲಿ ನನ್ನ ಸಂಖ್ಯೆ ಇರಲಿಲ್ಲ. ಮತ್ತೆ ಸೆಕೆಂಡ್ ಹಾಗೂ ಪಸ್ಟ್ ಕ್ಲಾಸ್ ಬಂದವರ ಪಟ್ಟಿ ನೋಡಿದೆ. ಅಯ್ಯೋ ಅಲ್ಲೂ ನನ್ನ ನಂಬರ್ ಇರಲಿಲ್ಲ ! ಹಾಗಿದ್ದರೆ ನಾನು ಪೇಲ್ ಆಗಿದ್ದೇನೋ ಹೇಗೆ !? ಆ ಕಡೆ ನೋಡಲು ಮನಸು ಕೇಳಲೇ ಇಲ್ಲ. ಕಣ್ಣಲ್ಲಿ ಗಂಗಾ ಯಮುನೆಯರು ಇಣುಕಿ ನೋಡುತ್ತಿದ್ದರು. ಅಷ್ಟರಲ್ಲಿ ಅಲ್ಲೇ ಪಕ್ಕದಲ್ಲಿ ಸುಳಿದ ನನ್ನ ಕ್ಲಾಸ್ ಟೀಚರ್ ನನ್ನ ಭುಜಕ್ಕೆ ಕೈ ಹಾಕಿ ಅನಿತಾ ನೀನು ಪಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದೀಯ ಮರಿ ಅನ್ನುತ್ತಾ ನನ್ನ ನಂಬರಿನತ್ತ ಕೈ ತೋರಿಸಿದರು. ನಾನು ಕಕ್ಕಾವಿಕ್ಕಿಯಾಗಿ ನನ್ನ ಕೈಯ್ಯಲ್ಲಿದ್ದ ನಂಬರನ್ನೂ ಪಟ್ಟಿಯಲ್ಲಿದ್ದ ನಂಬರನ್ನೂ ತಾಳೆ ಹಾಕಿ ನೋಡಿದರೆ, ಕೊನೆಯ ಸಂಖ್ಯೆ ೭ ಅಂತ ಇದ್ದದ್ದನ್ನು ಯಾವುದೋ ಜಿರಳೆ ಹೊತ್ತು ಹೋಗದಿದ್ದದ್ದಕ್ಕೆ ಚೂರು ತಿಂದು ೧ ಅಂತ ಮಾರ್ಪಡಿಸಿ ಆನಂದ ಹೊಂದಿತ್ತು !
ಅದೇನೇ ಆದರೂ ಈಗಲೂ ನಮ್ಮ ಮನೆಯ ಮೂಲೆ ನನಗೆ ಪ್ರಿಯವಾದ ತಾಣವೇ.. ನಾನೇ ಅನುಪಯುಕ್ತ ಎಂದು ಬೀಸಿ ಮೂಲೆಗೆಸೆದ ವಸ್ತುಗಳು ಇನ್ಯಾವಾಗಲೋ ಮತ್ತೆ ದರುಶನ ತೋರಿ ಅದರ ಬಗೆಗಿದ್ದ ನನ್ನ ನೆನಪುಗಳನ್ನೆಲ್ಲಾ ಬಡಿದೆಬ್ಬಿಸಿ ಮತ್ತೊಮ್ಮೆ ಆ ಗತಕಾಲದ ವೈಭವವನ್ನು ಕಣ್ಣ ಮುಂದೆ ನಿಲ್ಲಿಸುವ ಪರಿ ಇದೆಯಲ್ಲಾ ಅದನ್ನು ಯಾವ ಪ್ರಖ್ಯಾತ ನಿರ್ದೇಶಕನ ಸಿನಿಮಾವೂ ತೋರಿಸಲಾರದು. ನಿಮಗೂ ನನ್ನ ಮಾತು ನಿಜವೆನ್ನಿಸಬೇಕಾದರೆ ನೀವೂ ನಿಮ್ಮ ನಿಮ್ಮ ಮನೆಗಳ ಮೂಲೆಯ ಉತ್ಕತನಕ್ಕೆ ಕೈ ಹಾಕಿ. ಉತ್ತರ ಪ್ರದೇಶದ ಸ್ವಾಮೀಜಿಯ ಕನಸಲ್ಲಿ ಕಂಡ ಚಿನ್ನದ ಕೊಪ್ಪರಿಗೆಗೆಳು ನಿಮಗೆ ಸಿಗದಿದ್ದರೂ, ಅಲ್ಲಿರುವ ಪ್ರತಿ ವಸ್ತುವಿನೊಡನೆ ನಿಮಗಿದ್ದ ಸಂಬಂಧದ ತಾಜಾ ನೆನಪುಗಳ ನಿಧಿಯು ಸಿಗುವುದಂತೂ ಸತ್ಯ.
-ಅನಿತಾ ನರೇಶ್ ಮಂಚಿ
(ಸಾಹಿತ್ಯಾಸಕ್ತರಿಗೆ ತಮ್ಮ ಲವಲವಿಕೆಯ ಬರಹಗಳಿಂದ ಪರಿಚಿತರಾದ ಅನಿತಾ ನರೇಶ್ ಮಂಚಿ ಅವರ ಅಂಕಣ ಇನ್ಮುಂದೆ ಹದಿನೈದು ದಿನಗಳಿಗೊಮ್ಮೆ ಪಂಜುವಿನಲ್ಲಿ ಕಾಣಿಸಿಕೊಳ್ಳಲಿದೆ.)
ಸಖತ್ ಬರಹ ಅನೀತಕ್ಕ. ಖುಷಿ ಆತು 🙂
tumba chennagede nimma ella baravanigegalu