ಕೆ ಟಿ ಸೋಮಶೇಖರ್ ಅಂಕಣ

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ..?: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

ಭಕ್ತಿಯೇ ತುಂಬಿತುಳುಕಬೇಕಿರುವ ಭಗವಂತನ ಸನ್ನಿಧಿಯಲ್ಲಿ ಮಧ ಮತ್ಸರ ಲೋಬ ವಿಷಯಾದಿಗಳು ತುಂಬಿ ತುಳುಕುತ್ತಿರಬೇಕಾದರೆ ಅಲ್ಲಿ ಭಗವಂತ ನೆಲೆಸಲು ಹೇಗೆ ಸಾಧ್ಯ? ಸುಳ್ಳು ಕಪಟಗಳು ನನ್ನಲ್ಲಿ ನೆಲೆಸಲು ನಾನೇ ಆಶ್ರಯ ನೀಡಿ ಭಗವಂತ ನನ್ನಲ್ಲಿ ನೆಲೆಸಲು ಆಗದಂತೆ ನಾನೇ ಮಾಡಿದೆನಲ್ಲಾ ಎಂಬ ವಿಷಾದದ ದನಿಯೊಂದಿಗೆ ಕೆಳಗಿನ ಬಸವಣ್ಣನವರ ವಚನ ಕೊನೆಯಾಗುತ್ತದೆ.

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯಲ್ಲಿ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ
ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲಾ ಕೂಡಲಸಂಗಮದೇವಾ

ಬಸವಣ್ಣನವರ ಈ ಚಿಕ್ಕ ವಚನ ಒಂದು ಸನ್ನಿವೇಶದ ಚಿತ್ರಣವನ್ನೇ ಸೃಷ್ಟಿಸಿದೆ. ಒಬ್ಬ ವ್ಯಕ್ತಿ ತಾನು ಬಯಸಿದ ಮನೆಯ ಯಜಮಾನನ್ನು ಅರಸುತ್ತಾ ಆ ಯಜಮಾನನಿರುವ ಮನೆಯ ಕಡೆಗೆ ” ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ” ಎಂಬ ಸಂಶಯ ವ್ಯಕ್ತಪಡಿಸುತ್ತಾ ಬರುವುದು, ಬಾಗಿಲಿನ ಬಳಿ ಬಂದು ಹೊಸ್ತಿಲನ್ನು ನೋಡುವುದು ಅದರ ಮೇಲೆ ಹುಲ್ಲು ಹುಟ್ಟಿರುವುದ ಕಾಣುವುದು ಸಂಶಯ ಹೆಚ್ಚಿಸಿಕೊಂಡು ಒಳ ಪ್ರವೇಶಿಸಿ ಮನೆಯನ್ನೆಲ್ಲಾ ವೀಕ್ಷಿವುದು ಅಲ್ಲಿ ಧೂಳು ತುಂಬಿರುವುದ ಕಂಡು ಮನೆಯೊಡೆಯನ ಕಾಣದೆ ಮನೆಯೊಡೆಯನಿಲ್ಲವಲ್ಲಾ ಎಂದು ವಿಷಾಧಿಸುವ ಚಿತ್ರಣವಿದೆ.

ಮನೆಯೊಡೆಯನ ಅರಸಿ ಮನೆಯ ಕಡೆಗೆ ಬರುವ ವ್ಯಕ್ತಿಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎಂಬ ಅನುಮಾನ ಹೊಸ್ತಿಲ ಬಳಿ ಬರುವ ಮುನ್ನವೆ ಉಂಟಾಗಿರುವುದರಿಂದ ಆ ಮನೆ ದೂರದಿಂದ ನೋಡಲು ವಾಸ ಯೋಗ್ಯವಾಗಿಲ್ಲ ಎಂಬಂತಹ ಸಾಕ್ಷಗಳ ಆ ವ್ಯಕ್ತಿಗೆ ಒದಗಿಸಿರಬೇಕು. ಆದ್ದರಿಂದ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎಂಬ ಸಂಶಯವನ್ನು ಹೊಸ್ತಿಲ ಬಳಿ ಬರುವ ಮುನ್ನವೆ ವ್ಯಕ್ತಪಡಿಸುವನು. ಬಾಗಿಲ ಬಳಿ ಬಂದು ಹೊಸ್ತಿಲಲ್ಲಿ ಹುಲ್ಲು ಹುಟ್ಟಿರುವುದ, ಒಳ ಹೋಗಿ ಮನೆಯೊಳಗೆ ಧೂಳು ತುಂಬಿರುವುದ ಕಂಡು ಮನೆಯೊಳಗೆ ಮನೆಯೊಡೆಯ ಇದ್ದಿದ್ದರೆ ಹೊಸ್ತಿಲಲ್ಲಿ ಹುಲ್ಲು ಹುಟ್ಟಲು ಮನೆಯೊಳಗೆ ರಜ ತುಂಬಲು ಬಿಡುತ್ತಿರಲಿಲ್ಲ ಮನಯೊಳಗೆ ಮನೆಯೊಡೆಯ ಇರಲಿಕ್ಕಿಲ್ಲ ಎಂಬ ಸಂಶಯಕ್ಕೆ ಬಲ ತುಂಬುವನು. ಮನೆಯಲ್ಲಿ ಮನೆಯೊಡೆಯನಿಲ್ಲ ಎನ್ನಲು ಹೊಸ್ತಿಲಲ್ಲಿ ಹುಲ್ಲು ಹುಟ್ಟಿರುವುದು, ಮನೆಯೊಳಗೆ ರಜ ತುಂಬಿರುವುದು ಕ್ರಮವಾಗಿ ಒಂದು ಮತ್ತು ಎರಡನೆಯ ಸಾಕ್ಷಿಗಳಾಗುತ್ತವೆ.

” ತನುವಿನಲ್ಲಿ ವಿಷಯ ತುಂಬಿ ಮನದಲ್ಲಿ ಹುಸಿ ತುಂಬಿ ” ಎಂಬ ಮಾತು ಮನೆ ಎಂಬುವಂತಹದ್ದು ತನುವಾಗಿ, ತನು ಎಂಬುದು ಮನವಾಗಿ ಹಂತ ಹಂತವಾಗಿ ಬದಲಾಗಿ ಮನೆಯಲ್ಲಿ ಮನೆಯೊಡೆಯನ, ತನುವಿನೊಳಗೆ ತನುವಿನೊಡೆಯನ, ಮನದೊಳಗೆ ಮನದೊಡೆಯನ ಅರಸುವ ಪ್ರಕ್ರಿಯೆಯಾಗಿ ಬದಲಾಗುತ್ತದೆ. ತನುವಿನಲ್ಲಿ ಹುಸಿ, ಮನಸ್ಸಿನಲ್ಲಿ ವಿಷಯ, ಅಂದರೆ ಅರಿಷಡ್ಚರ್ಗಗಳು ತುಂಬಿರುವುದರಿಂದ ಮನದಲ್ಲಿ ಮನದೊಡೆಯನಿರಲು ಹೇಗೆ ಸಾಧ್ಯವಿಲ್ಲವೋ ಹಾಗೆ ತನುವಿನಲ್ಲಿ ತನುವಿನೊಡೆಯನು ಇರಲು ಸಾಧ್ಯವಿಲ್ಲ! ಮನೆಯೊಡೆಯ ಇಲ್ಲದಿರುವುದಕ್ಕಿಂತಾ ಮನೆಯೊಡೆಯ ವಾಸಿಸಲು ಆಗದಂತೆ ಮನೆ ಕೊಳೆಯಾದುದಕ್ಕೆ ವಿಷಾದಿಸುತ್ತಾನೆ. ಮನೆಯೊಳಗೆ ” ಮನೆಯೊಡೆಯನಿಲ್ಲ ಕೂಡಲಸಂಗಮದೇವ ” ಎನ್ನುವಲ್ಲಿ ಮನೆಯೊಡೆಯ ಬೇರೆ ಯಾರೂ ಅಲ್ಲ ಅವ ಕೂಡಲಸಂಗಮದೇವ ಎಂಬುದು ತಿಳಿದು ಬರುವುದು. ಮನೆ ಎಂಬುದು ದೇಹವಾಗುವುದು. ಇಲ್ಲಿ ” ಉಳ್ಳವರು ಶಿವಾಲಯವ ಮಾಡವರು ” ಎಂಬ ಇವರ ವಚನ ” ದೇಹವೆ ದೇವಾಲಯ ” ಎಂಬುದ ನೆನಪಿಸುವುದು. ತನ್ನ ತನು ಮನದಲ್ಲಿ ಸುಳ್ಳು ವಿಷಯ ಅರಿಷಡ್ವರ್ಗಗಳು ತುಂಬಿರಲು ಕೂಡಲಸಂಗಮ ದೇವನು ಹೇಗೆ ನನ್ನಲ್ಲಿ ಇರಲು ಸಾಧ್ಯ? ಎಂಬ ಪ್ರಶ್ನೆ ಅವನು ನೆಲೆಸಲಾಗದಂತೆ ತನು ಮನವ ಹೊಲಸು ನಾನೆ ಮಾಡಿದೆನಲ್ಲಾ ಎಂಬ ಸಹಿಸಲಸಾಧ್ಯವಾದ ವಿಷಾದ ” ಮನೆಯೊಳಗೆ ಮನೆಯೊಡೆಯನಿಲ್ಲ ” ಎಂಬ ಕೊನೆಯ ಸಾಲಿನಲ್ಲಿ ವ್ಯಕ್ತವಾಗುತ್ತದೆ! ಇದು ಆತ್ಮ ವಿಮರ್ಶೆಯ ಕಡೆಗೆ ಹೊರಳಿಸುತ್ತದೆ. ಈ ವಚನದಲ್ಲಿ ಒಂದನೇ ಸಾಲಿನ ಪುನರುಕ್ತಿ ಪರಿಣಾಮಕಾರಿಯಾಗಿದೆ.

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ ಎನ್ನುವಲ್ಲಿ ಮನೆಯ ಬಹಿರಂಗ ಮತ್ತು ಅಂತರಂಗ ಎರಡೂ ಮಲಿನವಾಗಿರುವುದ, ತನುವಿನಲ್ಲಿ ಹುಸಿ ತುಂಬಿ ಮನದಲ್ಲಿ ವಿಷಯ ತುಂಬಿ ಎನ್ನುವಲ್ಲಿ ವ್ಯಕ್ತಿಯ ಬಹಿರಂಗ ಮತ್ತು ಅಂತರಂಗಗಳೆರಡೂ ಮಲಿನವಾಗಿರುವುದನ್ನು ಸೂಚಿಸಿದೆ. ಒಳಗೊಂದು ಹೊರಗೊಂದು ಇರುವವರ ನೈಜತೆಯ ತಿಳಿಯುವುದು ಕಷ್ಟ! ಒಬ್ಬ ಶುದ್ದನೋ ಅಶುದ್ದನೋ ಅಂತ ತಿಳಿಯುವುದು ಅವನ ಅಂತರಂಗ ಬಹಿರಂಗ ಎರಡರ ಅಧಾರದಮೇಲೆ. ಅಂತರಂಗ ಬಹಿರಂಗ ಎರಡೂ ಸೇರಿ ವ್ಯಕ್ತಿ! ಬಹಿರಂಗದ ಮಾಲಿನ್ಯದಿಂದ ಅಷ್ಟೇ ಅಲ್ಲ ಅಂತರಂಗದ ಮಾಲಿನ್ಯದಿಂದಲೂ ಆರೋಗ್ಯ ಕೆಡುತ್ತದೆ! ಬಹಿರಂಗ ಅಂತರಂಗಗಳೆರಡರಲ್ಲೂ ಮಾಲಿನ್ಯ ಉಂಟಾದರೆ ಆ ದೇಹದಲ್ಲಿ ಜೀವವಾಗಲಿ, ಆತ್ಮವಾಗಲಿ, ಪರಮಾತ್ಮನಾಗಲಿ ಹೇಗೆ ಇರಲು ಸಾಧ್ಯ? ಇಲ್ಲಿ ಬಹಿರಂಗ ಅಂತರಂಗಗಳೆರಡೂ ಮಲಿನವಾಗಿರುವುದರಿಂದ ಭಗವಂತ ಇರಲು ಸಾಧ್ಯವಿಲ್ಲ ಎಂಬ ಧ್ವನಿ ಇದೆ! ಇದನ್ನು ಇವರ ” ಕಳಬೇಡ ಕೊಲಬೇಡ ” ಎಂಬ ವಚನದಲ್ಲಿ ” ಇದೇ ಅಂತರಂಗದ ಶುದ್ಧಿ, ಇದೇ ಬಹಿರಂಗದ ಶದ್ಧಿ, ಇದೇ ನಮ್ಮ ಕೂಡಲ ಸಂಗನ ಒಲಿಸುವ ಪರಿ ” ಎಂಬಲ್ಲಿ ಅಂತರಂಗ ಬಹಿರಂಗಗಳ ಶುದ್ದಿಯೆ ಕೂಡಲಸಂಗನ ಒಲಿಸುವ ರೀತಿ ಎಂದು ಹೇಳಿರುವುದ ಗಮನಸಿ ಅರ್ಥ ಮಾಡಿಕೊಳ್ಳಬೇಕು.

ಮನೆಯೊಡೆಯನ ಹುಡುಕಿ ಬಂದವರು ಮತ್ತಾರೂ ಅಲ್ಲ ಬಸವಣ್ಣನವರೇ ಎಂದು ವಚನದ ಕೊನೆಯಲ್ಲಿ ” ಕೂಡಲಸಂಗಮದೇವಾ ” ಎನ್ನುವಲ್ಲಿ ತಿಳಿಯುವುದು. ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ವಿಷಾಧ ಕೂಡಲಸಂಗಮದೇವ ನೆಲೆಸಲು ಪೂರಕ ಮನಸ್ಥಿತಿಯ ತನು ಮನವ ಶುದ್ದವಾಗಿಟ್ಟುಕೊಳ್ಳುವುದರ ಮೂಲಕ ನಾನು ಸೃಜಿಸಬೇಕಿತ್ತು ಎಂಬುದು ಅವರ ಆತ್ಮವಿಮರ್ಶೆಯ ಧ್ವನಿಯಾಗಿದೆ! ಅವನೇ ನನಗೆ ನೆಮ್ಮದಿ. ಅವನು ನೆಲೆಸಿದ್ದರೆ ವಿಷಾದವೇ ಇರುತ್ತಿರಲಿಲ್ಲ ಎಂಬುದು ಸಹ ಈ ವಚನದ ಧ್ವನಿಯಾಗಿದೆ. ತನು ಮನವ ಹುಸಿ ವಿಷಯಗಳಿಂದ ತುಂಬಿಕೊಂಡೆನಲ್ಲಾ ಎಂದು ಬಸವಣ್ಣ ಸಾಮಾನ್ಯ ಮಾನವರಂತೆ ಹೊಯ್ದಾಡುವುದು ಈ ವಚನದಲ್ಲಿ ಕಾಣುತ್ತೇವೆ. ಇದು ಅವರ ದೊಡ್ಡತನದ ಆತ್ಮವಿಮರ್ಶೆ! ಎಲ್ಲರೂ ತನುಮನವ ಪರಿಶುದ್ದವಾಗಿಟ್ಟುಕೊಳ್ಳಿ ಅದು ನೆಮ್ಮದಿಗೆ ಕಾರಣವಾಗುವುದು. ನೆಮ್ಮದಿಗಿಂತ ದೊಡ್ಡದು, ಮುಖ್ಯವಾದುದು ಯಾವುದೂ ಇಲ್ಲ ಎಂಬುದು ವಚನದ ಸಂದೇಶ! ಈ ಸಂದೇಶವ ಸರ್ವರೂ ಪಾಲಿಸಿ ನೆಮ್ಮದಿ ಪಡೆಯಬೇಕಿದೆ!

ಕೆ ಟಿ ಸೋಮಶೇಖರ್ ಹೊಳಲ್ಕೆರೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *