ಮನೆಯೆ ಮೊದಲ ಪಾಠಶಾಲೆ: ಸುಮನ್ ದೇಸಾಯಿ


ಮೊನ್ನೆ ಗದಗ ಜಿಲ್ಲೆಯ ೬ನೇ ಸಾಹಿತ್ಯ ಸಮ್ಮೆಳನಕ್ಕ ಹೋಗಿದ್ದೆ. ಅಲ್ಲೆ ಮಕ್ಕಳ ಕಾವ್ಯವಿಹಾರ ಅನ್ನೊ ಒಂದು ಮಕ್ಕಳ ಕವಿಗೊಷ್ಠಿ ಎರ್ಪಡಿಸಿದ್ರು. ಮಕ್ಕಳು ಏನ ಕವಿತೆ ಬರಿಬಹುದು ಅಂತ ಕೂತುಹಲದಿಂದ ನೋಡ್ಲಿಕತ್ತಿದ್ದೆ. ವೇದಿಕೆ ಮ್ಯಾಲೆ ಒಂದ ಹತ್ತು ಮಕ್ಕಳಿದ್ರು. ಕವಿಗೊಷ್ಠಿ ಶುರುವಾದ ಮ್ಯಾಲೆ ಅ ಮಕ್ಕಳ ಪ್ರತಿಭೆ ನೋಡಿ ಆಶ್ಚರ್ಯ ಅನಿಸ್ತು. ಒಬ್ಬರಕಿಂತಾ ಒಬ್ಬರು ಸುಂದರವಾದ ಕವನಗಳನ್ನ ರಚಿಸಿದ್ರು. ಆ ಕವನಗಳಳೊಗ ಬೆರಗು, ಸೊಗಸು, ಮತ್ತ ಪ್ರಸ್ತುತ ಸಮಾಜದಲ್ಲಿಯ ಸಮಸ್ಯೆಗಳ ನೆರಳಿತ್ತು. ಮಕ್ಕಳ ಈ ಸೂಷ್ಮ ಗ್ರಹಣ ಶಕ್ತಿ ಅಗಾಧವಾಗಿತ್ತು. ಆ ಸಣ್ಣ ಮನಸ್ಸುಗಳೊಳಗಿನ ಭಾವನೆಗಳಿಂದ ಅದ್ಭುತ ಕವನಗಳ ರಚನೆಯಾಗಿ ಹೊರಹೊಮ್ಮಿದ್ವು. ಈ ಮಕ್ಕಳ ಸಾಹಿತ್ಯಾಭಿರುಚಿಯನ್ನ ಗುರುತಿಸಿ ಬೆಳಕಿಗೆ ತರೊ ಪ್ರಯತ್ನ ಮಾಡಬೇಕು. ಎಲ್ಲಾದಕ್ಕಿಂತ ಮೊದಲ ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸವನ್ನ ಬೆಳೆಸಿಕೊಳ್ಳುವತ್ತ ಪ್ರಯತ್ನ ಮಾಡಬೇಕು. ಈಗಿನ ಮಕ್ಕಳೊಳಗ ಇಂಥಾ ಅಭಿರುಚಿಗೊಳು ಮರೆಯಾಗಿ ಹೋಗ್ಯಾವ. 

ನಾವೆಲ್ಲಾ ಸಣ್ಣವರಿದ್ದಾಗ ಚಂದಮಾಮಾ, ಬಾಲಮಿತ್ರ, ಪಂಚತಂತ್ರ, ಮಕ್ಕಳ ರಾಮಾಯಣ, ಮಹಾಭಾರತ, ಹಿಂಗ ಪುಸ್ತಕಗಳನ್ನೊದಿ ದೊಡ್ಡವರಾದ್ವಿ. ದಿನಾ ಸಂಜಿಮುಂದ ಸ್ಕೂಲಿನ ಹೋಮವರ್ಕ ಆದಮ್ಯಾಲೆ ನಮ್ಮ ತಾಯಿಯವರು ನಮಗ ಪೂರೊಚಿ ಅಂತ ಹೇಳಿಸ್ತಿದ್ರು. ಅಂದ್ರ, ಸಂಧ್ಯಾಸಮಯದೊಳಗ ಹೇಳೊ ಅಂಥಾ ಸಣ್ಣ ಸಣ್ಣ ಸ್ತೊತ್ರಗೊಳು, ಮತ್ತ ನೀತಿ ಕಥೆಗೊಳು, ದೇವರ ಪ್ರಾರ್ಥನೆಗಳು, ರಾಮಾಯಣ,ಮಹಾಭಾರತದೊಳಗ ಬರೊ ಉಪಕಥೆಗಳನ್ನ ಹೇಳಿಕೊಡತಿದ್ರು. ದಿನಾ ಸಂಜಿಕೆ ಒಂದು ತಾಸು ಇಂಥಾ ಪೂರೊಚಿ ಅನ್ನೊ ಪದ್ಧತಿಯಿಂದ ನಮಗ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿಸಿಕೊಡೊ ಪ್ರಯತ್ನವನ್ನ ನಮ್ಮ ತಾಯಿಯವರು ಮಾಡಿತಿದ್ರು. ಸಹಸಾ ಈ ಪದ್ಧತಿ ಆಗ ಎಲ್ಲಾರ ಮನ್ಯಾಗನು ಇರತಿತ್ತು. ಆವಾಗ ಇನ್ನು ಈ ಟಿವ್ಹಿ ಸಿರಿಯಲ್‌ಗಳ ಹಾವಳಿ ಇದ್ದಿಲ್ಲಾ. ಆದ್ರ ಈಗಿನ ಮಕ್ಕಳ ಅಭಿರುಚಿನ ಬದಲಾಗೇದ. ಇಗೆಲ್ಲಾ ಕಾರ್ಟೂನ್ ಚಾನಲ್, ವಿಡಿಯೋಗೆಮ್, ಇಂಥಾದ್ರೊಳಗ ಮುಳುಗಿಹೋಗಿ ಬಿಟ್ಟಿರತಾರ. ಯಾವ ಮಕ್ಕಳ ಕೈಯ್ಯಾಗ ನೋಡಿದ್ರುನು ಮೊಬೈಲ್‌ನ್ಯಾಗ ಗೇಮ್ ಆಡಕೊತ ಕೂತಿರತಾರ. ಇಗಿನ ಮಕ್ಕಳ ಈ ಪರಿಸ್ಥಿತಿಗೆ ತಾಯಂದಿರ ಬಹುಪಾಲು ಕಾರಣ ಆದ್ರ, ಈಗಿನ ಶಿಕ್ಷಣ ಪದ್ಧತಿನು ಸಮಾನ ಕಾರಣಿಭೂತ ಆಗೇದ. ಜಗತ್ತು ವೇಗವಾಗಿ ಹೋಗಲಿಕತ್ತದ, ಅದರ ಜೊಡಿಗೆನ ಮಕ್ಕಳು ಓಡಲಿಕ್ಕೆ ರೂಢಿ ಮಾಡ್ಕೊಳ್ಳಲಿ ಅಂತ ಮಕ್ಕಳ ಮ್ಯಾಲೆ ಅವರ ವಯಸ್ಸಿಗೆ ಮತ್ತ ಬುದ್ಧಿಮಟ್ಟಕ್ಕ ಮೀರಿದ ಒತ್ತಡಗಳನ್ನ ಹೇರೊ ಪ್ರಯತ್ನ ಮಾಡತಾರ. ಮೊದಲೆಲ್ಲಾ ಮಕ್ಕಳು,  ಅವ್ವಾ ಅವ್ವಾ ಗೆಣಸ, ಕುಡಿಕ್ಯಾಗ ಹಾಕಿ ಕುದಸ, ತುತ್ತ ಮಾಡಿ ಉಣಸ, ಪಾಟಿಚೀಲ ಕೊಡಸ, ಬಾಲವಾಡಿಗೆ ಕಳಸ  ಅಂತ ಹಾಡತಿದ್ರು. ಆದ್ರ ಈಗಿನ ಮಕ್ಕಳು  ಸ್ಕೂಲು ಸ್ಕೂಲು, ನಾ ಹೋಗೊದಿಲ್ಲ, ಅದು ಜೈಲು  ಅಂತ ಹಾಡತಾರ. ಅಂದ್ರ ಆ ಮಕ್ಕಳಿಗೆ ಅದೆಷ್ಟು ಒತ್ತಾಯದ ಒತ್ತಡ ಇರ್‍ತದ ಅಂತ ಗೊತ್ತಾಗ್ತದ. 

ಭಾಳಾ ಒಳ್ಳೆಯವರು ನಮ್ಮ ಮಿಸ್ಸು. ಅಮ್ಮನ ಹಾಗೆ ಅವರೂನು ಬಿಟ್ಟ ಬರೊಕೆ ಮನಸಿಲ್ಲಾ ಅಂತ ಹಾಡೊ ಮಕ್ಕಳು ಇವತ್ತ, ಶಾಲಿಯೊಳಗ ಟೀಚರ್ ಗೊಳು ಕೊಡೊ ಕಠೀಣವಾದ ಹೋಮ್ವರ್ಕಗೆ ಹೆದರಿ ಶಾಲಿಗೆ ಹೋಗುದಿಲ್ಲಾ ಅಂತ ಹಟಾ ಮಾಡ್ತಾವ. ಮಕ್ಕಳು ಹೂವಿನಂಘ ಇರ್‍ತಾವ. ಮುಕ್ತವಾದ ಆರೋಗ್ಯಕರವಾದ ವಾತಾವರಣ ಕಲ್ಪಿಸಿಕೊಟ್ರ ಛಂದಾಗಿ ಅರಳಿ ಸುವಾಸನೆ ಹರಡ್ತಾವ. ಇಲ್ಲಾ ಅವುಗಳನ್ನ ಅಮುಕಿ ಭಾರ ಹೇರಿದ್ರ ಮುದುಡಿ ಕೊಳತು ಹೋಗತಾವ. ನಮ್ಮ ಉತ್ತರ ಕರ್ನಾಟಕದ ಕಡೆ ಒಂದ ಗಾದಿಮಾತದ,  ಓಣಿ ಕೂಸು ಬೆಳಿತಂತ, ಕ್ವಾಣಿ ಕೂಸು ಕೊಳಿತಂತ ಅಂತ. ಮಕ್ಕಳ ಮನಸ್ಸಿನ ಮ್ಯಾಲೆ ಯಾವುದೇ ರೀತಿ ಒತ್ತಡ ಹೇರಲಾರದ ಒಂದು ಆರೋಗ್ಯಕರವಾದ ಸ್ವಚ್ಛಂದ ವಾತವರಣ ಕಲ್ಪಿಸಿಕೊಡಬೇಕು.  ಮಕ್ಕಳ ಈ ಸ್ಥಿತಿಗೆ ಈಗಿನ ಶಿಕ್ಷಣ ಪದ್ಧತಿನು ಭಾಳಷ್ಟ ಕಾರಣಿಭೂತ ಅದನೊ ಅಷ್ಟ , ಮನಿಯ ವಾತಾವರಣನು ಸರಿಸಮಾ ಪಾತ್ರವಹಿಸ್ತದ. ಮಕ್ಕಳಿಗೆ ಮೊದಲ ಗುರು ತಾಯಿ ಅನ್ನೊದು ನಿತ್ಯ ಸತ್ಯ ಅದ. ಆದರ ಈಗಿನ ದಿನಗಳೊಳಗ ಬಹಳಷ್ಟು ತಾಯಂದಿರು ಟಿವ್ಹಿ ಸಿರಿಯಲ್‌ಗೊಳೊಳಗ ಮುಳುಗಿ ಬಿಟ್ಟಿರತಾರ. ಸಂಜಿ ಹೊತ್ತಿನ್ಯಾಗ ೫.೦೦ ಗಂಟೆಕ್ಕ ಶೂರುವಾದ ಧಾರಾವಹಿಗಳ ಆರ್ಭಟ ಸರ್ರಾತ್ರಿಯಾದ್ರು ಮುಗಿಯಂಗಿಲ್ಲ ಇಂಥಾದ್ರಾಗ ಅವ್ವಂದ್ರಿಗೆ ಪೂರೊಚಿ ಹೇಳಿಕೊಡಲಿಕ್ಕೆ ಟೈಮ್ ಹೆಂಗ ಸಿಗಬೇಕು. ಆ ಧಾರಾವಾಹಿಗಳೊಳಗರ ಎನ ಅಂಥಾ ಜೀವನೊದ್ಧಾರದ ಸಂದೇಶ ಅಡಗಿರತದಂತ ಬಡಕೊಂಡ ಬಡಕೊಂಡ ನೋಡತಾರೊ ಗೊತ್ತಿಲ್ಲ. ನಾಲ್ಕೈದ ವರ್ಷದ ಸುಧೀರ್ಘ ಕಂತಿಗಳೊಳಗ ನಾಲ್ಕೂವರಿ ವರ್ಷದ ತನಕಾ ಬರೆ ಅಸತ್ಯನ ಗೆಲ್ಲೊದು, ಒಳ್ಳೆಯವರಿಗೆ ತ್ರಾಸ ಕೊಡೊದು, ಅತ್ತಿ ಸೊಸಿ ಜಗಳಾ, ಅದೇ ನೆನಪಿನ ಶಕ್ತಿ ಹೋಗೊದು, ಇಲ್ಲಾ ಅನೈತಿಕ ಸಂಬಂಧಗಳಿಂದ ಹುಟ್ಟಿದ್ದ ಮಕ್ಕಳು ಅಥವಾ ಹಳೆಯ ಪ್ರೇಯಸಿ ಮುಖಕ್ಕ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ರೂಪಾ ಬದಲಾಯಿಸಿಕೊಂಡು ಬಂದು ಸೇಡ ತಿರಿಸ್ಕೊಳ್ಳೊದು, ಇಂಥಾ ಅಧ್ವಾನನ ತೋರಸ್ತಾರ. ಕಡಿಕಡಿಕೆ ಧಾರಾವಾಹಿ ಮುಗಿಲಿಕ್ಕೆ ಬಂದಾಗ ಒಂದ ವಾರದಾಗ ಸತ್ಯದ ಕಣ್ಣೊರಸಿಧಂಗ ಏನೊ ಒಂದ ತೊರಿಸಿ ಮುಗಸ್ತಾರ. 

ಮನಿಯೊಳಗ ತಾಯಂದಿರು ಇಂಥಾವೆಲ್ಲ ನೋಡೊವಾಗ ಅವರಜೊಡಿ ಮಕ್ಕಳಿಗುನು ನೊಡೊ ರೂಢಿ ಆಗೇಬಿಡತದ. ಇಂಥಾ ಅಧ್ವಾನಗಳನ್ನೆಲ್ಲ ನೋಡಿ ಮಕ್ಕಳ ಮನಸ್ಸಿನ ಮ್ಯಾಲೆ ಎಂಥಾ ಖುಣಾತ್ಮಕ ಪರಿಣಾಮ ಬಿರಬಹುದು ಅಂತ ನೆನಿಸಿಕೊಂಡ್ರ ಇಂದಿನ ಮಕ್ಕಳ ಭವಿಷ್ಯ ಅಂಧಕಾರದತ್ತ ಸರಿಯೊದು ಸ್ಪಷ್ಟ ಗೋಚರ ಆಗತದ. ತಾಯಂದಿರು ತಮ್ಮ ಧಾರಾವಾಹಿಗಳನ್ನ ನೋಡೊ ಬದಲಿಗೆ ದಿನಾ ಸ್ವಲ್ಪ ಹೊತ್ತು ಮಕ್ಕಳಿಗಾಗಿ ವ್ಯಯಿಸಿದ್ರ ತಮ್ಮ ಮಕ್ಕಳನ್ನ ಸಂಸ್ಕಾರವಂತರನ್ನಾಗಿ, ವಿಚಾರವಂತರನ್ನಾಗಿ ರೂಪಿಸಬಹುದು ಅಂತ ನನ್ನ ಅನಿಸಿಕೆ. ಪುಸ್ತಕದ ಗೆಳೆತನ ಮಾಡಬೇಕು. ಪುಸ್ತಕದಂಥ ಒಳ್ಳೆಯ ಗೆಳೆಯ ಎಲ್ಲು ಸಿಗಂಗಿಲ್ಲ. ಇಂಥ ವಿಚಾರಗಳನ್ನ ಮಕ್ಕಳಿಗೆ ಮನವರಿಕೆ ಮಾಡಿಕೊಡುವಲ್ಲೆ ತಾಯಂದಿರು ಶ್ರಮಿಸಬೇಕು. ಮಕ್ಕಳು ಹೆತ್ತ ತಾಯಂದಿರಕ್ಕಿಂತ ದಿನದ ಹೆಚ್ಚಿನ ಸಮಯವನ್ನ ಶಾಲೆಯೊಳಗ ಗುರುಗಳ ಹತ್ರ ಇರತಾರ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯೊಳಗ ತಾಯಿ ಅನ್ನೊ ಗುರುವಿನಷ್ಟೆ ಜವಾಬ್ದಾರಿ ಶಾಲೆಯೊಳಗಿನ ಗುರುಗಳದು ಇರ್‍ತದ. ಶಾಲೆಯ ಶಿಕ್ಷಣ ವ್ಯವಸ್ಥೆಯೊಳಗ ವಾರಕ್ಕ ಒಂದ ಸಲಾನಾದ್ರು ಕಡ್ಡಾಯವಾಗಿ ಗ್ರಂಥಾಲಯದ ಅವಧಿಯನ್ನ ಸೇರಿಸಬೇಕು. ಆ ಅವಧಿಯೊಳಗ ಮಕ್ಕಳನ್ನ ಶಾಲಾ ಗ್ರಂಥಾಲಯದೊಳಗ ಕೂಡಿಸಿ, ನಮ್ಮ ಸನಾತನ ಸಂಸ್ಕೃತಿ, ಆಚಾರ-ವಿಚಾರ, ಮಹಾತ್ಮರ, ಶರಣರ, ದೇಶ ಭಕ್ತರ, ವಿಜ್ಞಾನಿಗಳ ಜೀವನ ಚರಿತ್ರೆ, ಜನಪದ ಸಾಹಿತ್ಯ, ಮಕ್ಕಳ ಸಾಹಿತ್ಯಗಳ ಪುಸ್ತಕಗಳನ್ನ ಒದಗಿಸಬೇಕು. ಇದರಿಂದ ಮಕ್ಕಳಿಗೆ ಓದುವ ಹವ್ಯಾಸವನ್ನ ಬೆಳೆಸಿಕೊಳ್ಳುವಲ್ಲೆ ಸಹಾಯ ಆಗ್ತದ. ಮತ್ತ ಮಕ್ಕಳಿಗೆ ಜೀವನದ ನೈತಿಕ ಮೌಲ್ಯಗಳನ್ನ ಅರಿತು ನಡೆಯುವಲ್ಲೆ ಮಹತ್ವದ ಪಾತ್ರ ವಹಿಸ್ತದ. 
         
ಇತಿಹಾಸ ಪ್ರಸಿದ್ಧ ಪಂಚತಂತ್ರ ಕೃತಿಯ ರಚನಕಾರ ದುರ್ಗಸಿಂಹನ ಪಂಚತಂತ್ರಗಳಾದ ಭೇದ, ಪರೀಕ್ಷಾ, ವಿಶ್ವಾಸ, ವಂಚನೆ, ಮತ್ತು ಮಿತ್ರಕಾರ್ಯ ಇವುಗಳ ಮೆಲೆ ಕಥೆ, ಉಪಕಥೆಗಳನ್ನು ಹೆಣೆದು ರಚಿಸಿದ ಕೃತಿಯೆ ಪಂಚತಂತ್ರ . ದುರ್ಗಸಿಂಹನು ಈ ಕೃತಿಯನ್ನ ಚಂಪೂ ಸಂಪ್ರದಾಯೊಳಗ ಬರೆದಿದ್ದರೂ ಸಂಸ್ಕೃತ ಶಬ್ದಗಳನ್ನ ಸೂಕ್ತವಾಗಿ ಬಳಸಿಕೊಂಡು, ಜೊತಿಗೆ ಕನ್ನಡದ ಗಾದೆಗಳನ್ನು ಬಹಳ ಹಿತವಾಗಿ ಬಳಸಿಕೊಂಡು ಕನ್ನಡದ ಗದ್ಯದ ಬೆಳವಣಿಗೆಗೆ ಸಹಾಯ ಮಾಡ್ಯಾನ. ಪಂಚತಂತ್ರದೊಳಗ ಪ್ರಾಣಿಪಕ್ಷಿ, ಜಡವಸ್ತುಗಳು ಪ್ರಧಾನ ಪಾತ್ರಗಳಾಗಿ ಮಾನವರ ರೀತಿಯೊಳಗ ಮಾತಾಡೊದನ್ನು ಕಾಣಬಹುದು. ಇದರೊಳಗ ಚಿತ್ರಿತವಾದ ಪಾತ್ರಗಳಾದ ಪಿಂಗಳಿಕ ಅನ್ನೊ ಸಿಂಹ, ಸಂಜೀವಕ ಅನ್ನೊ ಎತ್ತು, ಕರಟಕ-ದಮನಕರೆಂಬ ನರಿಗಳು, ಹಿರಣ್ಯರೋಮ ಎಂಬ ಇಲಿ, ಮುಂತಾದವುಗಳು ಓದುಗರ ಮನಸ್ಸಿನಲ್ಲಿ ಮನೆಮಾಡ್ಯಾವ.  

ದಿನಕ್ಕೊಂದ ಈ ಪಂಚತಂತ್ರ ಗ್ರಂಥದೊಳಗಿನ ಒಂದೊಂದ ಕಥಿಯನ್ನ ಮಕ್ಕಳಿಗೆ ಹೇಳಿದ್ರುನು ಸಾಕು, ಮಕ್ಕಳಿಗೆ ಜೀವನದ ನೀತಿ, ಮತ್ತ ಮೌಲ್ಯಗಳನ್ನ ಅರಿತು ಒಬ್ಬ ಪರಿಪೂರ್ಣ ವ್ಯಕ್ತಿತ್ವವನ್ನ ಹೊಂದಲಿಕ್ಕೆ ಸಾಧ್ಯ ಆಗ್ತದ. ಇಂದಿನ ಮಕ್ಕಳೆ ನಾಳಿನ ಸುಸಂಸ್ಕೃತ, ಪ್ರಗತಿಶೀಲ ಭಾರತದ ಭದ್ರಬುನಾದಿಗಳು ಮತ್ತ ರಕ್ಷಾಕೋಟೆಗಳು.

*****       

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
K.M.Vishwanath
10 years ago

ಅಂಕಣ ಸೊಗಸಾಗಿದೆ 

ಗುರುಪ್ರಸಾದ ಕುರ್ತಕೋಟಿ

ನೀವು ಹೇಳಿದ್ದು ಖರೆ ಅದ! ಮಕ್ಕಳು ಅಪ್ಪ ಅಮ್ಮನ್ನ ನೋಡೇ ಒಳ್ಳೆದು ಅಥವ ಕೆಟ್ಟದ್ದನ್ನ ಕಲಿಯೋದು

2
0
Would love your thoughts, please comment.x
()
x