ನಿನ್ನ ಹುಟ್ಟು ಸಾವು ನಿನ್ನ ಪರಿಮಿತಿಯೊಳಗೆ ಇಲ್ಲದೆ ಇರುವ ಇಂತ ಸಂದರ್ಭದಲ್ಲಿ ನಮಗೆಲ್ಲಾ ಜನ್ಮದಾತನಾದೆ. ಇದಕ್ಕಾಗಿ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ. ನಿನ್ನ ಸುಖ ಭೋಗಕ್ಕಾಗಿ ನಾವೇನು ನಮ್ಮ ಕೆಲಸವೇನು ನಮ್ಮ ಅಸ್ತಿತ್ವವೇ ಇಲ್ಲದ ಸಮಯದಲ್ಲಿ ನಮ್ಮನ್ನು ಆವಿಸ್ಕರಿಸಿ ನಿನ್ನ ಪ್ರಪಂಚದಲ್ಲಿ ಒಂದು ಮಹಾನ್ ಸಾಧನೆಯನ್ನು ಮಾಡಿರುವೆಯಾ. ಸತ್ತ ಮೇಲೆ ಸ್ವರ್ಗ ಸೇರುತ್ತೇವೋ ಇಲ್ಲವೋ ಎಂಬ ಸಂದೇಹದಿಂದ ಭೂಮಿಯ ಮೇಲೆ ಸ್ವರ್ಗಕ್ಕೆ ಸಮನಾಗುವ ರೀತಿಯಲ್ಲಿ ನಿನ್ನ ನೆಲೆಯನ್ನು ರಚಿಸಿಕೊಂಡು ಇದಕ್ಕಾಗಿ ಒಂದೊಂದಾಗಿ ನಮ್ಮನ್ನು ಕಂಡು ಹಿಡಿಯಲು ಹೊರಟೆಯಲ್ಲಾ ಓ ಮನುಜ, ನಿನ್ನ ಬುದ್ಧಿಮತ್ತೆಗೊಂದು ಸಲಾಮು.
ನಮಗೆ ತಿಳಿದಿರುವ ಮಟ್ಟಿಗೆ ಮೊದ ಮೊದಲು ನಿನ್ನ ವಂಶದವರು ಆದ ಫಿಲಿಪ್ ಡೆಯಲ್ ಎಂಬುವನು ಫ್ಯಾನ್ ಗೆ ಜನ್ಮದಾತನಾದ. ಚಾರ್ಲ್ಸ್ ಬಾಬೇಜ್ ಎಂಬುವವನು ಕಂಪ್ಯೂಟರ್ಗೆ ಜನ್ಮದಾತನಾದ. ಜಾನ್ ಲಾರ್ಡ್ ಬಿಯರ್ಡ್ ಎಂಬುವವನು ಟಿವಿಗೆ ಜನ್ಮವನ್ನಿತ್ತ. ಕೆಲ ವರುಷಗಳ ಹಿಂದೆ ಮಾರ್ಟಿನ್ ಕೂಪರ್ ಎನ್ನುವವನು ಮೊಬೈಲ್ ಗೆ ಜನ್ಮವನ್ನಿತ್ತು ನೀವೆಲ್ಲಾ ಪ್ರಪಂಚವನ್ನೇ ಅಂಗೈಲಿ ನೋಡುವ ಹಾಗೆ ಮಾಡಿದ ..ಹೀಗೆ ಹೇಳುತ್ತಾ ಹೋದರೆ ನಮ್ಮಲ್ಲಿ ಇರುವ ಪ್ರತಿಯೊಬ್ಬರ ಜನ್ಮದಾತನು ನೀನಾಗಿದ್ದಿಯಾ.
ನೀನು ಹೀಗೆ ಅಲ್ವಾ ನಿನಗೆ ಅವಶ್ಯಕತೆ ಬಂದಾಗ ಸಮಸ್ಯೆಯನ್ನ ಹೊಗಲಾಡಿಸಲೋಸುಗ ಅನ್ವೇಷಣೆಯಲ್ಲಿ ತೊಡಗುತ್ತಿದ್ದೀಯಾ. ಅದಕ್ಕೆಂದು ಕೊನೆ ಇಲ್ಲ…ಪ್ರತಿ ಕ್ಷಣವೂ ನಮ್ಮಲ್ಲಿ ಬದಲಾವಣೆಯನ್ನು ಬಯಸುತ್ತಿದ್ದೀಯಾ. ಹೆಚ್ಚು ಹೆಚ್ಚು ವಿಷಯಗಳನ್ನು ನಮಗೆ ಅಳವಡಿಸಿ ನಂತರ ಅದಕ್ಕೊಂದು Generation, ಅದಕ್ಕೊಂದು Version ಎಂಬ ನಾಮಾವಳಿಗಳನ್ನ ಇಡುತ್ತ ಹೋಗುತ್ತಿದ್ದೀಯಾ. ಮಾಸಿಕ, ವಾರ್ಷಿಕ ಹೀಗೆ Updates ಗಳನ್ನ ಕೊಡುತ್ತೀದ್ದಿಯಾ. ಇವೆಲ್ಲ ನಮಗೆ ಹೆಮ್ಮೆ ತರುವ ವಿಷಯಗಳೇ. ಆದರೆ ಯಾಕಿಷ್ಟು ನಮ್ಮ ಮೇಲೆ ಕಾಳಜಿ, ಅನುಕಂಪ, ಪ್ರೀತಿ ನಿನಗೆ? ನಮ್ಮವರಿಗೆ ತಿಳಿಯದಾಗಿದೆ. ಆದ್ದರಿಂದ ಈ ಪತ್ರ ಮುಖೇನ ಕೇಳುವ ಮನ ಮಾಡಿದ್ದು.
ಇಷ್ಟೊಂದು ಕಾಳಜಿ, ಅನುಕಂಪ ಮತ್ತು ನಮ್ಮನ್ನು ಗೆಳೆಯನ ಹಾಗೆ ನೋಡಿಕೊಳ್ಳುವ ನಿನ್ನಲ್ಲಿ, ನಮ್ಮಲ್ಲಿರುವ ಕೆಲವು ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. ಪರಿಹಾರವಿಲ್ಲದ ಸಮಸ್ಯೆಗಳೇನಲ್ಲ. ಹುಟ್ಟಿಸಿದ ನಿಮಗೆ ಅದು ಪ್ರಶ್ನೆಯೇ ಅಲ್ಲ..ಆದರೆ ತಾಳ್ಮೆಯಿಂದ ಆಲಿಸಿದರೆ ಹಾಗೂ ನಿಮ್ಮ ಮುಂದಿನ ಜನಾಂಗದವರ ನೆಮ್ಮದಿಯ ಬದುಕಿಗಾಗಿ ಯೋಚಿಸಿದರೆ ನಿನ್ನಲ್ಲೇ ಇದಕ್ಕೆಲ್ಲಾ ಖಂಡಿತ ಪರಿಹಾರವಿದೆ ಓ ಮಾನವ…
ನಿನ್ನ ಯೋಚನೆಗಳು, ಯೋಜನೆಗಳು ದಿನದಿಂದ ದಿನಕ್ಕೆ ಬೆಳೆದಂತೆ ಅದಕ್ಕೆ ತಕ್ಕಂತೆ ಜ್ಞಾನದ ತಂತ್ರವನ್ನು ಬದಲಾಯಿಸುತ್ತ, ಹೆಚ್ಚಿಸುತ್ತಾ, ಅವಶ್ಯಕತೆಗೆ ಮೀರಿ ನಮ್ಮನ್ನು ಉತ್ಪಾದಿಸುತ್ತಾ ಹೋಗುತ್ತಿರುವೆಯಲ್ಲಾ. ಇದರಿಂದ ಮುಂದಾಗುವ ಪರಿಣಾಮದ ಬಗ್ಗೆ ಸ್ವಲ್ಪವಾದರೂ ಯೋಚಿಸಿದೆಯಾ…? ನಮ್ಮವರ ಉತ್ಪಾದನೆಗಾಗಿ ಅದೆಷ್ಟು ಪರಿಸರವನ್ನು ಹಾಳು ಮಾಡಿದ್ದೀಯಾ, ಅದರಿಂದ ಉಂಟಾಗುವ ಮಾಲಿನ್ಯದಿಂದ ಅದೆಷ್ಟು ರೋಗಗಳಿಗೆ ನೀನು ತುತ್ತಾಗಿದ್ದೀಯಾ ಎಂದು ನಿನಗೆ ತಿಳಿದಿದೆಯಾ?
ನಾವು ತಿಳಿದಿದ್ದೇವೆ. ಪ್ರಪಂಚಕ್ಕೆ ಬೇಕಾಗುವಷ್ಟು ನಮ್ಮನ್ನು ಚೀನಾ ಉತ್ಪಾದಿಸುತ್ತದೆಯಂತೆ. ಪ್ರತಿಯೊಂದು ರಾಷ್ಟ್ರವು ಅಲ್ಲಿಂದ ತಮಗೆ ಬೇಕಾದ ನಮ್ಮನ್ನು ತರಿಸಿಕೊಳ್ಳುತ್ತದೆಯಂತೆ. ಆದರೆ ನಾವು ಹುಟ್ಟುವ ಆ ಪ್ರದೇಶ, ಉದಾಹರಣೆಗೆ ಬೀಜಿಂಗ್ ತೆಗೆದುಕೊ. ಅದೇಷ್ಟು ಕಲುಷಿತಗೊಂಡಿದೆಯೆಂದರೆ ಉತ್ಪಾದಕರಾದ ನೀವು ಉಸಿರಾಡಲು ಆಮ್ಲಜನಕವನ್ನು ಕೊಂಡುಕೊಳ್ಳೋ ಮಟ್ಟಕ್ಕೆ ಬಂದು ನಿಂತಿದೆಯಂತೆ. ಅಂದಮೇಲೆ ನೀನು ತಿಳಿದುಕೊಳ್ಳಬೇಕು ನಾವೆಷ್ಟು ಹಾನಿಕಾರಕರು ಎಂದು.
ಓ ಮಾನವ, ನಿನ್ನ ಒಳಿತಿಗಾಗಿ ಕೆಲವೊಂದು ಮಾರ್ಗದರ್ಶನವನ್ನು ನಾವೇ ಕೊಡಬಲ್ಲೆವು ತಾಳ್ಮೆಯಿಂದ ಕೇಳು. ನಮ್ಮನ್ನು ಉತ್ಪಾದಿಸುವಾಗ ಹೊರಸೂಸುವ ಮತ್ತು ಬಿಡುಗಡೆಯಾಗುವ ವಿಕಿರಣಯುಕ್ತ, ವಿಷಯುಕ್ತ ಪದಾರ್ಥಗಳಿಂದ ನಿನ್ನ ಆರೋಗ್ಯದ ಮೇಲೆ, ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀಳುತ್ತಿದೆ. ವಾಯು ಮಾಲಿನ್ಯದಿಂದ ನಿನಗೆ ಉಸಿರಾಡಲು ಸಹ ತೊಂದರೆಯಾಗುತ್ತಿದೆ. ಆದ್ದರಿಂದ ಅವಶ್ಯಕತೆಗೆ ತಕ್ಕಂತೆ ನಮ್ಮನ್ನು ಉತ್ಪಾದಿಸು. ಮರುಬಳಕೆಯ ಅವಕಾಶವನ್ನು ಹೆಚ್ಚಿಸು, ನಮ್ಮ ಜೀವಿತಾ ಅವಧಿ ಹೆಚ್ಚಿಸು. ಉತ್ತಮ ಗುಣಮಟ್ಟವನ್ನು ನೀಡು. ಅಂದಾಗ ಮಾತ್ರ ಹೆಚ್ಚು ಕಾಲ ನಾವು ನಿನಗೆ ಉಪಯೋಗಕಾರಿಯಾಗಬಲ್ಲೆವು.. ಇಲ್ಲವಾದಲ್ಲಿ ಹುಟ್ಟಿದ ಕೆಲ ವರುಷಗಳಲ್ಲೇ ನಮ್ಮ ಅವಧಿ ಮುಗಿದು ಮತ್ತೆ ಮಾಲಿನ್ಯಕ್ಕೆ ನಾಂದಿಯಾಗಬಲ್ಲೆವು.
ಇನ್ನೊಂದು ವಿಷಯ ನಿನ್ನಲ್ಲಿ ಹೇಳಬೇಕೆಂದುಕೊಂಡಿರುವೆ ಮಾನವ. ನಿನ್ನ ಅವಧಿ ಮುಗಿದ ಮೇಲೆ ನಿಮ್ಮವರು ಶಾಸ್ತ್ರೋಕ್ತವಾಗಿ ವಿಧಿ ವಿಧಾನವನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತೀರಲ್ಲವೇ…ಆದರೆ ನಮ್ಮ ಅವಧಿ ಮುಗಿದ ಮೇಲೆ ನಿನಗ್ಯಾಕೆ ನಮ್ಮ ಮೇಲೆ ಅಷ್ಟೊಂದು ತಾತ್ಸಾರ.? ಯಾವುದೋ ಗುಜರಿ ಅಂಗಡಿಗೋ ಅಥವಾ ದಲ್ಲಾಳಿಗೋ ಪುಡಿಗಾಸಿಗೆ ಮಾರುತ್ತಿಯಲ್ಲ ಇದು ಸರಿಯೇ?. ಉಪಯೋಗಿಸುವಾಗ ಇದ್ದಷ್ಟು ಪ್ರೀತಿ, ಕಾಳಜಿ ಮುಗಿದ ಮೇಲೆ ಯಾಕಿಲ್ಲ ನಿನಗೆ? ಅವರೇನು ಮಾಡುತ್ತಾರೆ ಎಂದು ತಿಳಿದಿದೆಯಾ ಮಾನವ? ನಮ್ಮನ್ನು ಸರಿಯಾಗಿ ವಿಂಗಡಿಸದೆ, ಪಾದರಸ, ಸೀಸ, ನೀಲಿ ತವರ ಮುಂತಾದ ಪದಾರ್ಥಗಳನ್ನು, ಇನ್ನಿತರ ವಿಷಪೂರಿತ ವಸ್ತುಗಳನ್ನು ದಹಿಸಿ ವಾತಾವರಣಕ್ಕೆ ಸೇರಿಸಿ ಇನ್ನಷ್ಟು ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಆದ್ದರಿಂದ ಅವಧಿ ಮುಗಿದ ನಮ್ಮನ್ನು ಪರವಾನಗಿ ಹೊಂದಿದ ಇ-ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕೊಡು ಮತ್ತು ಸರಿಯಾಗಿ ಸಂಸ್ಕರಣೆ ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊ.
ನಮ್ಮ ಹುಟ್ಟು ಸಾವಿಗೆ ಸೂತ್ರಧಾರ ನೀನು. ನಮ್ಮ ಪಾಲಿನ ಬ್ರಹ್ಮ ನೀನು. ನಿನ್ನ ಬಗ್ಗೆ, ನಿನಗಿಲ್ಲದ ಖಾಳಜಿಯ ಬಗ್ಗೆ ಮಾತಾಡಿದೇವೆಂದು ಬೇಸರಿಸದಿರು. ನಿನ್ನೊಡನೆ ನಾವು ಇದ್ದೇವೆ. ನಿನ್ನನ್ನು ಅರ್ಥಮಾಡಿಕೊಂಡಿದ್ದೇವೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇವೆ. ನಮಗಾಗಿ ನೀನು ಅನುಭವಿಸುತ್ತಿರುವ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದೇವೆ. ಹೀಗೆ ಮುಂದುವರಿದರೆ ನಿನ್ನ ಮುಂದಿನ ಪೀಳಿಗೆಯವರಿಗೆ ಕಷ್ಟವಾಗುವುದು ಎಂಬ ನಿಟ್ಟಿನಲ್ಲಿ ಒಂದಿಷ್ಟು ಹಿತನುಡಿಯನ್ನು ಹೇಳಲೋಸುಗ ಈ ಪತ್ರವನ್ನು ನಾವೆಲ್ಲರೂ ಒಟ್ಟಾಗಿ ಸೇರಿ ಬರೆದಿದ್ದೇವೆ. ತಪ್ಪಿದ್ದಲ್ಲಿ ಕ್ಷಮೆ ಇರಲಿ. ಹೇಳಿದ್ದು ನೆನಪಿರಲಿ. ನಮ್ಮ ಅನ್ವೇಷಣೆ ಸದಾ ಇರಲಿ. ಆದರೆ ಅದು ಮಾಲಿನ್ಯ ರಹಿತವಾಗಿರಲಿ.
-ಪಿ. ಕೆ. ಜೈನ್ ಚಪ್ಪರಿಕೆ.
very nice sir