ಮನಸ್ಸು ಒಂದು ಅದ್ಬುತ ಶಕ್ತಿ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

ಮನಸ್ಸು ಅದ್ಭುತವಾದುದು! ಅತ್ಯದ್ಬುತವಾದುದು! ಯಾರೂ ಅವರವರ ಮನಸ್ಸಿನ ಬಗ್ಗೆ ಚಿಂತಿಸಿದರೆ ಮನಸ್ಸಿನ ಅದ್ಭುತ ಶಕ್ತಿ ಗಮನಕ್ಕೆ ಬರುವುದು. ಅದರ ಬಗ್ಗೆ ಚಿಂತಿಸದಿರುವುದರಿಂದ ಅದರ ಅದ್ಭುತ ಶಕ್ತಿ ಗಮನಕ್ಕೆ ಬರುವುದಿಲ್ಲ! ಆದ್ದರಿಂದ ಯಾರೂ ಮನಸ್ಸಿನ ಅದ್ಭುತ ಶಕ್ತಿಯನ್ನು ಸದುಪಯೋಗ ಮಾಡಿಕೊಳ್ಳುವುದೇ ಇಲ್ಲ! ಆದನ್ನು ಬಳಸಿದರೆ ಅದಕ್ಕೆ ಇರುವ ಅದ್ಬುತ ಶಕ್ತಿ ತಿಳಿಯುವುದು! ಈಗ ಮನಸ್ಸಿಗೆ ಅದ್ಭುತ ಶಕ್ತಿ ಇದೆ ಎಂದು ಹೇಗೆ ನಂಬಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿರಬಹುದು. ಹೌದು! ಅದಕ್ಕಿರುವ ಶಕ್ತಿ ಗೊತ್ತಾಗುವುದಿಲ್ಲ! ಅದು ಜೀವಂತ ಮಾನವನಲ್ಲಿದ್ದರೂ ಹೃದಯ ಮೆದುಳಿನಂತಹ ಅಂಗವಲ್ಲ! ಅದು ಎಲ್ಲಿದೆ ಅಂತ ಗುರುತಿಸದಿರುವುದರಿಂದ ಅದು ಕೆಲಸ ಮಾಡುವುದು ತಿಳಿಯುವುದಿಲ್ಲ! ಅಂದರೆ ಅದರಿಂದ ಇಂತಹ ಕೆಲಸ ಆಗಿದೆ ಎಂದು ಹೇಳಲಾಗುವುದಿಲ್ಲ. ಅದು ಕಾಣಿಸದಿರುವುದರಿಂದ ಅದರ ಸದುಪಯೋಗ ಮಾಡಿಕೊಳ್ಳಬೇಕೆಂದು ಅನಿಸುವುದಿಲ್ಲ! ಕೆಲವರು ಮನಸ್ಸನ್ನು ಮೆದುಳಲ್ಲಿದೆಯೆಂದರೆ ಕೆಲವರು ಅಲ್ಲಿಲ್ಲವೆನ್ನುವರು. ಕೆಲವರು ಹುಡುಕಿ ಗುರುತಿಸಲು ವಿಫಲರಾಗುವರು! ಅದರಿಂದನೆ ಏನೆಲ್ಲಾ ಅದ್ಭುತಗಳು ಉಂಟಾಗುತ್ತಿದ್ದರೂ ಅದರಿಂದನೆ ಎಂದು ಹೇಳಲು ಆಗುತ್ತಿಲ್ಲ! ಕೆಲವರು ಹೇಳಿದರೂ ಕೆಲವರು ನಂಬಲು ತಯಾರಿಲ್ಲ! ಮನಸ್ಸಿನ ವ್ಯಾಪಾರದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರಿಂದ ಹಾಗೆ ಆಗುತ್ತಿರಬಹುದು. ಮನಸ್ಸು ಜೀವಂತ ದೇಹದಲ್ಲಿರುತ್ತದೆ. ಅದು ಅಗೋಚರ! ಅನುಭವ ಗಮ್ಯ!

ಸಾಮಾನ್ಯವಾಗಿ ನೀವು ಯಾರನ್ನೋ ಇಷ್ಟಪಡುತ್ತೀರ ಎಂದಿಟ್ಟುಕೊಳ್ಳಿ ಅವರು ನೀವು ಪ್ರತಿದಿನ ನಡೆದು ಹೋಗುವ ಹಾದಿಯಲ್ಲಿ ಮತ್ತೆ ಮತ್ತೆ ಭೇಟಿ ಆಗುತ್ತಿರುತ್ತಾರೆ. ಒಮ್ಮೆ ಹೀಗೆ ಆ ದಾರಿಯಲ್ಲಿ ಹೋಗಲು ಆರಂಭಿಸಿರುತ್ತೀರಿ ಅವರ ನೆನಪಾಗುತ್ತದೆ. ಇಂದೂ ಅವರು ಈ ದಾರಿಯಲ್ಲಿ ಎದುರಾದರೆ ಏನು ಚೆನ್ನ ಅಂದುಕೊಳ್ಳುತ್ತೀರಿ! ಅವರು ನಿಜವಾಗಿ ಎದುರಾಗುವರು! ಹೀಗೆ ಅಂದುಕೊಂಡಾಗಲೆಲ್ಲಾ ಬಹಳಷ್ಟು ಸಲ ಅವರು ಎದುರಾಗುವರು! ಮನಕ್ಕೆ ಹತ್ತಿರವಾದವರು ಅದೇ ದಾರಿಯಲ್ಲಿ ಬರುತ್ತಿರುವುದು ಮನಸ್ಸಿಗೆ ಗೊತ್ತಾಗಿ ಅವರ ನೆನೆಯಬಹುದು ಆದ್ದರಿಂದ ಅವರು ಎದುರಾದಾರು! ಅಥವಾ ಅವರನ್ನು ನೆನೆಯುವುದರಿಂದ ಅಲ್ಲೇ ಎಲ್ಲೋ ಹೋಗುತ್ತಿದ್ದವರಿಗೆ ನೀವು ನೆನೆಯುತ್ತಿರುವುದು ಅವರ ಅನುಭವಕ್ಕೆ ಬಂದು ಅವರು ಬರುವಂತಾಗಿರಬಹುದು! ಇದನ್ನು ನಂಬುವುದು ಕಷ್ಟ! ಏಕೆಂದರೆ ಇದನ್ನು ಸಾಬೀತು ಮಾಡುವದು ಇನ್ನೂ ಕಷ್ಟಸಾಧ್ಯ! ಅನೇಕರು ಕಾಕತಾಳೀಯ ಅಂತ ಅಂದು ಅದರ ಬಗ್ಗೆ ಹೆಚ್ಚು ಚಿಂತಿಸಲು ಹೋಗುವುದಿಲ್ಲ! ಆದರೆ ಇದು ಸತ್ಯ!

ನೀವು ಏಸೋದಿನ ಮಲಗುವಾಗ ನಾನು ನಾಳೆ ಬೆಳಗಿನಜಾವ ನಾಲ್ಕು ಗಂಟೆಗೆ ಏಳಬೇಕು ಆ ಸಮಯಕ್ಕೆ ಸರಿಯಾಗಿ ಏಳಲು ಏನು ಮಾಡುವುದು ಎಂದು ಏನೂ ಹೊಳೆಯದೆ ” ಭಗವಂತ ನನ್ನನ್ನು ಬೆಳಿಗ್ಗೆ ನಾಲ್ಕು ಗಂಟೆಗೆ ಸರಿಯಾಗಿ ಎಚ್ಚರವಾಗುವಂತೆ ಮಾಡು ” ಎಂದು ನಾಲ್ಕು ಗಂಟೆಗೆ ಎದ್ದೇಳಬೇಕೆಂಬ ಧ್ಯಾನ ಮಾಡುತ್ತಾ ಮಲಗಿರುತ್ತೀರಿ ಸರಿಯಾಗಿ ನಾಲ್ಕು ಗಂಟೆಗೆ ಎದ್ದೇಳುತ್ತೀರಿ. ಮರುದಿನ ಹೀಗೆ ಅಂದುಕೊಂಡು ಮಲಗಿ ಸರಿಯಾಗಿ ಮೆದುಳಲ್ಲಿ ಗಡಿಯಾರವಿದ್ದು ನಾಲ್ಕು ಗಂಟೆಗೆ ಅಲರಾಂ ಇಟ್ಟವರಂತೆ ಏಳುತ್ತೀರಿ. ಇದಕ್ಕೆ ಕಾರಣ ಏನು ಗೊತ್ತೇ! ನಿಮ್ಮ ಮನಸ್ಸು! ಏಕೆಂದರೆ ಮನಸ್ಸಿಗೆ ಅಂತಹ ಅದ್ಭುತ ಶಕ್ತಿ ಇದೆ! ನೀವೂ ಪ್ರಯತ್ನಿಸಿ ಹೀಗೇ ಆಗುವುದು! ಸುಮ್ಮನೆ ಲಘುವಾಗಿ ಪ್ರಯತ್ನಿಸಿದರೆ ಸಾಧ್ಯವಾಗದು. ಪ್ರಾಮಾಣಿಕವಾಗಿ ಪ್ರಬಲವಾಗಿ ನಂಬಿ ನನ್ನ ಮಾತಿನಲ್ಲಿ ವಿಶ್ವಾಸವಿಟ್ಟು ಮಾಡಿ ಹಾಗೇ ಆಗುತ್ತದೆ! ಇದಷ್ಟೆ ಅಲ್ಲ ಬಹಳಷ್ಟು ವಿಷಯಗಳಿಗೆ ನಮ್ಮ ಮನಸ್ಸಿನ ಶಕ್ತಿಯನ್ನು ಬಳಸಿಕೊಂಡು ಅದರಿಂದ ಅನುಕೂಲಗಳನ್ನು ಪಡೆಯಬಹುದು! ಉತ್ತಮ ಅಂಕಗಳನ್ನು ಪಡೆಯಲು, ಜೀವನದಲ್ಲಿ ಬರುವ ಕಷ್ಟಗಳ ದೈರ್ಯವಾಗಿ ಎದುರಿಸಲು, ಅಮೂಲ್ಯವಾದುದನ್ನು ಸಾಧಿಸಲು, ಬೇಕಾದುದನ್ನು ಪಡೆಯಲು ಮನಸ್ಸು ಅದ್ಭುತ ಶಕ್ತಿ ಕೊಡುತ್ತದೆ.

ಸಾಮಾನ್ಯವಾಗಿ ಬಡವರಿಗೆ ರೈತರಿಗೆ ಯಾವುದೇ ತರಹದ ಕಾಯಿಲೆಗಳು ಬರುವುದಿಲ್ಲ! ಹಣದ ಕೊರತೆಯ ಚಿಂತೆಯೇ ದೇಹದಲ್ಲಿ ಏನೇನೋ ನೋವುಗಳಾಗಿ ಪ್ರಕಟವಾಗುತ್ತದೆ. ಬಡತನ ಅನೇಕ ಕಾಯಿಲೆಗೆ ಕಾರಣ. ಬಡತನ ಹೋದರೆ ಬಹಳಷ್ಟು ಕಾಯಿಲೆ ಇಲ್ಲವಾಗುವುವು ಎಂದು ಉದಯ್ ಜಾದೂಗಾರ್ ಹೇಳುತ್ತಾರೆ! ಅನೇಕರು ಸಹ ಹೀಗೇ ಹೇಳಿದ್ದಾರೆ! ಬಡವರೆಲ್ಲರಿಗೂ ಕಾಯಿಲೆಗಳು ಕಾಡವು! ಬಡವರು ದೈಹಿಕ ಶ್ರಮದ ಕೆಲಸಗಳನ್ನು ನಿತ್ಯ ಮಾಡುವುದರಿಂದ ಉಳಿದವರಿಗಿಂತ ಅವರೇ ಆರೋಗ್ಯವಾಗಿರುವರು! ಬಡತನ ಎಂಬ ಭಾವ ಯಾರಿಗೆ ಕಾಡುವುದೋ ಅವರಿಗೆ ಕಾಯಿಲೆ ಬರುತ್ತದೆ. ಇದೂ ಮನಸ್ಸಿಗೆ ಸಂಬಂಧಿಸಿದ್ದು. ಎಲ್ಲರಿಗೂ ಹಣ ಕೊಟ್ಟು ಬಡತನ ದೂರಮಾಡಲಾಗದು. ಬಡತನವ ಎದುರಿಸುವ ದೈರ್ಯ ತುಂಬಿ ಬಡತನವೆಂಬ ಭಾವ ಓಡಿಸಿ ಕಾಯಿಲೆ ಇಲ್ಲವಾಗಿಸಬಹುದು! ಕಾಯಿಲೆ ಬರಲು ಮನಸ್ಸಿಗೆ ನಕಾರಾತ್ಮಕವಾಗಿ ಒತ್ತಡ ಹಾಕಿದ್ದೇ ಕಾರಣ! ಅದನ್ನು ಇಲ್ಲಾವಾಗಸಿ ಆರೋಗ್ಯದಿಂದಿರಲು ಅದೇ ಮನಸ್ಸಿಗೆ ಸಕಾರಾತತ್ಮಕವಾಗಿ ಒತ್ತಡ ಹಾಕಿದ್ದು ಕಾರಣ! ಬಡವನ ನಕಾರಾತ್ಮಕ ಚಿಂತನೆಯನ್ನು ಸಕಾರಾತ್ಮಕವಾಗಿ ಚಿಂತಿಸುವಂತೆ ಮಾಡಿದುದರ ಫಲವೇ ಆರೋಗ್ಯ!
ಎಲ್ಲದಕ್ಕೂ ಮನಸ್ಸೇ ಕಾರಣ! ಆತ್ಮ ವಿಶ್ವಾಸ, ಮನೋಬಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ ಆರೋಗ್ಯವಾಗಿರುವಿರಿ.

ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಮನಸ್ಸಿದ್ದರೆ ಮಾರ್ಗ! ಮಂಡ್ಯ ಜಿಲ್ಲೆಯ ಯುವ ವಿಜ್ಞಾನಿ ಈಗಲ್ ಡ್ರೋಣ್ ಅನ್ವೇಷಿಸಿದ ಡ್ರೋಣ್ ಪ್ರತಾಪ್ ಬಿಎಸ್ಸಿ ಓದಲು ಕೈಯಲ್ಲಿ ಕಾಸಿಲ್ಲದಿದ್ದರೂ ಬಿಇ ವ್ಯಾಸಂಗ ಮಾಡಬೇಕಾದವರು ಮಾಡಿದ ಪ್ರಾಜೆಕ್ಟ್ ಮಾಡಿ, ಅದಕ್ಕೆ ಸಹಿ ಹಾಕಲು ಬರುವುದಿಲ್ಲವೆಂದರೂ ವಾರಗಟ್ಟಲೆ ಅವರ ಮನೆಗೆ ಅಲೆದು ಅವರ ಸಹಿ ಪಡೆದು ಜಪಾನಿನಲ್ಲಿ ನಡೆದ ವಿಶ್ವ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲು ಹೋಗಲು ಅನೇಕ ಸಮಸ್ಯೆಗಳು ಎದುರಾದರೂ ಅದರಲ್ಲಿ ಭಾಗವಹಿಸಿ ಪ್ರಥಮಿಗನಾಗಿ ಹೊರಹೊಮ್ಮಿ ಸಂತಸಪಟ್ಟದ್ದು, ಭಾರತಕ್ಕೆ ಹೆಮ್ಮೆ ಎನಿಸಿದ್ದು ಅವನ ಅದಮ್ಯ ಮನೋಬಲದಿಂದ! ಅವನು ಚಿಕ್ಕವನಾಗಿದ್ದಾಗ ಹಾರುವ ವಸ್ತುಗಳ ಬಗ್ಗೆ ಆಸಕ್ತಿ ತೋರಿ ಏನಾದರೂ ಹಾರುವ ವಸ್ತು ಕಂಡು ಹಿಡಿಯಬೇಕೆಂಬ ಕನಸು ಕಾಣುತ್ತಿದ್ದರಿಂದ!

ಒಂದು ಕಾಲು ಕಳೆದುಕೊಂಡು ಅದಕ್ಕೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗಿ ವಿಶ್ರಾಂತಿ ಪಡೆಯದೆ ನೇರವಾಗಿ ಹಿಮಾಲಯ ಏರಿದ ವಿಶ್ವದ ಮೊಟ್ಟ ಮೊದಲ ಮಹಿಳಾ ಸಾಧಕಿಯಾದ ಬಚೇಂದ್ರಿಪಾಲರ ಮನೆಗೆ ಬಂದು ಹಿಮಾಲಯ ಏರುವ ಮಹಾತ್ವಾಕಾಂಕ್ಷೆಯನ್ನು ಅವಳು ವ್ಯಕ್ತ ಪಡಿಸಿದುದ ಕೇಳಿ, ಅವಳ ಮನೋಬಲ ಕಂಡು ” ನೀನು ಈಗಾಗಲೆ ಹಿಮಾಲಯ ಏರಿದ್ದೀಯೆ ಮುಂದೆ ಜನರು ನೋಡುವಂತೆ ಏರುವುದು ಬಾಕಿ ಉಳಿದಿದೆ ” ಸ್ವಲ್ಪದಿನ ಕಾಲು ಸರಿಪಡಿಸಿಕೊ ನಂತರ ನಾನೂ ಮಾರ್ಗದರ್ಶನ ಮಾಡುವೆ ಎನ್ನುತ್ತಾಳೆ. ಅರುಣಿಮ ಸಿನ್ಹಾ ಹಿಮಾಲಯ ಏರಿದ ಮೊದಲ ವಿಕಲಾಂಗಚೇತನ ಮಹಿಳಾ ಸಾಧಕಿಯಾಗಿ ಪ್ರಸಿದ್ದಳಾಗುತ್ತಾಳೆ! ಅದು ಸಹ ಮನಸ್ಸಿಗಿರುವ ಅದ್ಭುತ ಶಕ್ತಿಯನ್ನೇ ಸೂಚಿಸುತ್ತದೆ! ಸಾಮಾನ್ಯವಾಗಿ ಯಾವುದೇ ಮಹಾನ್ ಸಾಧಕರಲ್ಲಿ ಮನೋಬಲ ತುಸು ಹೆಚ್ಚೇ ಇರುತ್ತದೆ! ಅದಕ್ಕೇ ಅವರು ಶೀಘ್ರ ಸಾಧಕರಾಗುವರು! ಅರುಣಮಾ ಸಿನ್ಹಾ ಪರ್ವತ ಏರುವ ತರಬೇತಿಪಡೆಯುವಾಗ ಎಡಗಾಲನ್ನು ಊರಿ ಸ್ವಲ್ಪ ದೂರ ಸಾಗಿದರೆ ಸಾಕು ರಕ್ತ ಒಸರುತ್ತಿತ್ತು. ಮತ್ತೆ ಮತ್ತೆ ಕೃತಕ ಕಾಲನ್ನು ಬಿಚ್ಚಿ ಮತ್ತೆ ಮತ್ತೆ ರಕ್ತಒರಸಿ ಮತ್ತೆ ಮತ್ತೆ ಕೃತಕ ಕಾಲ ಕಟ್ಟಿಕೊಂಡು ಮೇಲೇರುವುದರಿಂದ ತುಂಬ ತಡವಾಗುತ್ತಿತ್ತು. ಹೀಗೆ ಆದರೆ ಪರ್ವತ ಏರಲು ಸಾಧ್ಯವಿಲ್ಲ ಎಂಬುದ ಮನಗಂಡು ನಾಳೆಯಿಂದ ಯಾವುದೇಕಾರಣಕ್ಕೂ ಎಷ್ಟೇ ರಕ್ತ ಸುರಿದರೂ ಕಾಲನ್ನು ಬಿಚ್ಚಬಾರದು ಎಂದು ತೀರ್ಮಾನಸಿದಳು. ಅದರ ಹಿಂದೆ ತನ್ನ ಕಾಲಿನಲ್ಲಿ ನಾಳೆಯಿಂದ ರಕ್ತ ಸೋರಂತಾಗಬೇಕೆಂದು ಸಂಕಲ್ಪಿಸಿದಳು! ಮಾರನೆ ದಿನ ರಕ್ತ ಸೋರಲೇ ಇಲ್ಲ! ಇದು ಅವಳ ಇಚ್ಛಾಶಕ್ತಿ! ಇದಕ್ಕೆ ಅವಳ ಮನೋಬಲ ಆತ್ಮಬಲ ಕಾರಣ! ಅದರ ಅದ್ಭುತ ಶಕ್ತಿಯೇ ಕಾರಣ! ಮನಸ್ಸಿಗೆ ಅದ್ಭುತ ಶಕ್ತಿಯಿದೆ!

ರಾಮಕೃಷ್ಣ ಪರಮಹಂಸರು ಅಪಾರ ಆಧ್ಯಾತ್ಮ ಸಂಪತ್ತನ್ನು ಅನುಭವವನ್ನು ಸಂಗ್ರಹಿಸಿದ್ದರು. ಅದನ್ನು ಇಡೀ ಜಗತ್ತಿಗೆಲ್ಲಾ ಉಣಬಡಿಸಿ ಜಗತ್ತಿಗೆ ಅದರ ಸದುಪಯೋಗವಾಗುವಂತೆ ಮಾಡುವುದು ಹೇಗೆ ಎಂದು ಚಿಂತಿಸತೊಡಗಿದರು. ಅದನ್ನು ಪೂರೈಸಲು ಒಬ್ಬ ಅಸಾಮಾನ್ಯ ಶಿಷ್ಯ ಅವಶ್ಯ ಎಂಬುದ ಮನಗಂಡು ಅಂತಹ ಶಿಷ್ಯನ ಪಡೆದೇ ತೀರುವ ಸಂಕಲ್ಪಮಾಡಿ ದೇವಿಯ ಮೊರೆ ಹೋದರು. ಅಸಮಾನ್ಯ ಶಿಷ್ಯನ ಪಡೆಯುವ ಕನಸ ಕಾಣತೊಡಗಿದರು. ಹೀಗೆ ಇವರ ನಿರಂತರ ಪ್ರಯತ್ನದ ಫಲವಾಗಿ ವಿವೇಕಾನಂದರ ಪಡೆದರು! ವಿಶ್ವನಾಥ ದಂಪತಿಗಳು ಮಗು ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದರು ಕೊನೆಗೆ ತಮ್ಮ ಕುಲ ದೈವವಾದ ಕಾಶಿಯ ವೀರೇಶ್ವರನ ಮೊರೆ ಹೋದರು ಮಗುವನ್ನು ಪಡೆದೇ ತೀರುವ ಸಂಕಲ್ಪ ಮಾಡಿದರು. ಅದರ ಫಲವಾಗಿ ವಿವೇಕಾನಂದ ಜನಿಸಿದರು! ವಿವೇಕಾನಂದರಿಗೆ ಅಮೆರಿಕಕ್ಕೆ ಹೋಗಲು ಹಣವಿರಲಿಲ್ಲ ಅಲ್ಲಿ ತಂಗಲು ವ್ಯವಸ್ಥೆಯಿರಲಿಲ್ಲ ವಿಶ್ವಧರ್ಮ ಸಮ್ಮೇಳನದಲ್ಲಿ ಮಾತನಾಡಲು ಅನುಮತಿಯೇ ಇರಲಿಲ್ಲ! ಆದರೂ ಅಮೆರಿಕಾಕ್ಕೆ ಹೋದರು ಅಲ್ಲಿ ತಂಗಿದರು ವಿಶ್ವಧರ್ಮಸಮ್ಮೇಳನದಲ್ಲಿ ಆಕರ್ಷಕವಾಗಿ ಪರಮ ಜ್ಞಾನಿಯಾಗಿ ಮಾತನಾಡಿ ವಿಶ್ವವಿಖ್ಯಾತರಾದರು! ರಾಮಕೃಷ್ಣ ಪರಮಹಂಸರ ವಿಶ್ವನಾಥ ದಂಪತಿಗಳ ವಿವೇಕಾನಂದರ ಇಚ್ಛಾಶಕ್ತಿ ಮನೋಬಲ ಆತ್ಮಬಲದಿಂದ ಇದೆಲ್ಲಾ ಸಾಧ್ಯವಾದದ್ದು! ಮನಸ್ಸಿಗೆ ಅದ್ಬತವಾದ ಶಕ್ತಿಯಿದೆ!

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನವರು ಆಗಿರುವುದರಿಂದ ಅವರ ಮನೋಬಲವನ್ನು ಹೆಚ್ಚಿಸುವುದರಿಂದ ಅವರು ಅದ್ಭುತ ಸಾಧಕರಾಗಲು ಆತ್ಮವಿಶ್ವಾಸದಿಂದ ಬದುಕಲು ಅನುಕೂಲವಾಗುವುದು. ಆದ್ದರಿಂದ ಅವರ ಮನೋ ಬಲವನ್ನು ಹೆಚ್ಚಿಸುವ ಶಿಕ್ಷಣ ಅಲ್ಲೇ ಕೊಡುವುದು ಒಳಿತು.

ಋಷಿ ಮುನಿಗಳು ನಮಗಿಂತ ಹಿಂದೆಯೇ ಮನಸ್ಸಿನ ಅದ್ಭುತ ಶಕ್ತಿಯನ್ನು ನಾನಾ ವಿಧದಲ್ಲಿ ಬಳಸಿಕೊಂಡಿದ್ದರು ಎಂಬುದನ್ನು ವೇದ ಪುರಾಣಗಳನ್ನು ಓದಿದರೆ ಸಾಕಷ್ಟು ಪುರಾವೆಗಳು ದೊರಕುವುವು! ಮನಸ್ಸಿಗೆ ಅದ್ಭುತ ಶಕ್ತಿಯಿದೆ ಸದುಪಯೋಗ ಮಾಡಿಕೊಳ್ಳಿ! ಅಪರೂಪದ ಸಾಧಕರಾಗುವಿರಿ!

ಕೆ ಟಿ ಸೋಮಶೇಖರ್ ಹೊಳಲ್ಕೆರೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x