ಮನಸ್ಸುಗಳು ಅನಾಥವಾಗದಿರಲಿ: ಪೂಜಾ ಗುಜರನ್. ಮಂಗಳೂರು.

ಈ ಭೂಮಿ ಮೇಲೆ ಬದುಕುವುದಕ್ಕೆ ಬೇಕಾಗಿರುವುದು ಏನೂ? ಯಾರೋ ಹೇಳಿದರೂ ಗಾಳಿ, ಬೇಕು ನೀರು, ಬೇಕು ಆಹಾರ, ಬೇಕು.. ಸರಿ ಇದೆಲ್ಲ ಈ ಭೂಮಿ ಮೇಲೆ ಸಿಗುತ್ತದೆ. ಉಸಿರಾಡುವುದಕ್ಕೆ ಗಾಳಿ, ಈ ಪ್ರಕೃತಿಯ ಮಡಿಲಿನಲ್ಲಿ ಯಥೇಚ್ಛವಾಗಿ ಸಿಗುತ್ತದೆ. ಅದಕ್ಕಾಗಿ ಯಾರ ಅಪ್ಪಣೆಯು ಬೇಕಾಗಿಲ್ಲ. ಆದರೆ ನೀರು ಆಹಾರ.? ಇದು ಅಪ್ಪಣೆಯಿಲ್ಲದೆ ದೊರೆಯುವುದೇ? ಹರಿದು ಹೋಗುವ ನೀರಿಗೂ ಬೇಲಿ ಹಾಕುವವರು ಇರುವಾಗ ಇದು ಕಷ್ಟವೇ. ಇರಲಿ ಇದು ದೊರೆಯುತ್ತದೆ ಅಂತಿಟ್ಟುಕೊಳ್ಳೋಣ.. ಇನ್ನು ಏನಾದರೂ ಬೇಕಿದೆಯಾ.? ಹೌದು ನೆಮ್ಮದಿ ಬೇಕು ಅದು ಇದ್ದರೆ ಎಲ್ಲಿದ್ದರೂ ಬದುಕಬಹುದು ಅಂತಾರೆ. ಈ ನೆಮ್ಮದಿ ಶಾಂತಿ ಅನ್ನುವ ಮಾತುಗಳು ಬರೋದು ನಾವು ಬದುಕಿನ ಒಂದು ಘಟ್ಟಕ್ಕೆ ಬಂದಾಗ ಮಾತ್ರ.

ಇನ್ನೂ ಇದೇ ಮಾತನ್ನು ಒಂದು ಪುಟ್ಟ ಮಗುವಿಗೆ ಕೇಳಿ ನೋಡಿ. ಅದಕ್ಕೆ ಇದ್ಯಾವುದರ ಅರಿವು ಇರುವುದಿಲ್ಲ. ಅದರ ಪ್ರಪಂಚವೇ ಬೇರೆಯದ್ದಾಗಿರುತ್ತದೆ. ಅದಕ್ಕೆ ಬೇಕಾಗಿರುವುದು ತನ್ನನ್ನು “ಲಾಲಿಸಿ ಪಾಲಿಸುವ” ತನ್ನವರು. ತನ್ನ “ಭವಿಷ್ಯ”ವನ್ನು ರೂಪಿಸುವ “ಹೆತ್ತವರು,. ಆದರೆ ಲಾಲಿಸಬೇಕಾದ ಕೈಗಳು ಅದನ್ನು ಬೀದಿಯಲ್ಲಿ ಬಿಟ್ಟು ಹೋದರೆ.? ಅದು ಬದುಕುವುದಾದರೂ ಹೇಗೆ.? ಮುಂದಿನ ಭವಿಷ್ಯವೇನು.? ಇದನ್ನು ಆ ಕಲ್ಲು ಮನಸ್ಸುಗಳು ಅರಿಯುವುದಿಲ್ಲ. ಬೀದಿ ಬದಿಯಲ್ಲಿ ಯಾವುದೋ ಪೊದೆಯಲ್ಲಿ. ಕಸದ ತೊಟ್ಟಿಯಲ್ಲಿ ಅದೆಷ್ಟು ಕಂದಮ್ಮಗಳು ಒದ್ದಾಡಿ ಪ್ರಾಣ ಬಿಟ್ಟಿವೆ. ಕರುಣೆ ಬಾರದ ಮನಸ್ಸುಗಳ ವಿಕಾರ ರೂಪಕ್ಕೆ ಅನಾಥವಾದ ಮಕ್ಕಳೆಷ್ಟೋ… ಲೆಕ್ಕವಿಟ್ಟವಾರರು..?

ಇವತ್ತಿಗೂ ಹಾದಿ ಬೀದಿಯಲ್ಲಿ ಮಕ್ಕಳನ್ನು ಬಿಟ್ಟು ಹೋಗುವವರ ಸಂಖ್ಯೆ ಕಮ್ಮಿಯಾಗಿಲ್ಲ. ಮೊನ್ನೆ ಮೊನ್ನೆ ಮೂರು ವರುಷದ ಆ ಮುದ್ದು ಕಂದಮ್ಮ ಅಳುತ್ತಾ ಬೀದಿಯಲ್ಲಿ ಬರುತ್ತಿತ್ತು ಆ ಮಗುವಿನ ಪರಿಸ್ಥಿತಿ ನೋಡಿದಾಗ ಅಯ್ಯೋ ಅನಿಸುತ್ತಿತ್ತು. ಮೈ ತುಂಬಾ ಗಾಯದ ಗುರುತುಗಳು. ಮಗುವನ್ನು ದಂಡಿಸಿ ಬೀದಿಯಲ್ಲಿ ತಂದು ಬಿಟ್ಟು ಹೋದ ಆ ಮಹಾತಾಯಿಗೆ ಏನನ್ನಬೇಕು? ಹೆತ್ತ ಒಡಲಿಗೆ ಮಗು ಭಾರವೇ.? ಮನೆಯ ಪರಿಸ್ಥಿತಿ ಗಂಡನ ನಿರ್ಲಕ್ಷ್ಯಕ್ಕೆ ಬಾಯಿ ಬಾರದ ಮಗು ಶಿಕ್ಷೆ ಅನುಭವಿಸುವುದು ಅದೆಷ್ಟು ಸರಿ.. ಇದೆಂತಹ ಘೋರ ಪರಿಸ್ಥಿತಿ,?

ಇದನ್ನೆಲ್ಲ ನೋಡುವಾಗ ಕಣ್ಣಂಚು ಒದ್ದೆಯಾಗುತ್ತದೆ. ಅದು ಯಾವ ಪರಿಸ್ಥಿತಿಯ ಪರಿಣಾಮದಿಂದ ಈ ಕಂದಮ್ಮಗಳು ಇದನ್ನೆಲ್ಲ ಎದುರಿಸುತ್ತಿದ್ದಾರೆ.? ಈ ದೇಶದಲ್ಲಿ ಆನಾಥ ಮಕ್ಕಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ.. ತಾನು ಹೆತ್ತ ಕಂದಮ್ಮನನ್ನು ಬೀದಿಯಲ್ಲಿ ಬಿಟ್ಟು ಹೋಗುವ ಆ ಮನಸ್ಸುಗಳ ದುಃಸ್ಥಿತಿ ಅದೆಂತದಿರಬಹುದು.?ಇಂತಹ ಕಠೋರ ಮನಸ್ಸು ಈ ತಾಯಂದಿರಿಗೆ ಬರಲು ಸಾಧ್ಯವೇ? ಹೀಗೆ ಬಿಟ್ಟು ಹೋದ ಅದೆಷ್ಟು ಮಕ್ಕಳು ನಾಯಿಗಳ ಪಾಲಾಗಿವೆ. ಇನ್ನೆಷ್ಟೊ ಮಕ್ಕಳು ಅಂಗಹೀನವಾಗಿದ್ದಾರೆ. ಇದು ನಮ್ಮಲ್ಲಿ ನಡೆಯುವ ಅತಿ ಘೋರ ಸಂಗತಿ.

ಮಕ್ಕಳು ಬೀದಿ ಪಾಲಾಗುವುದಕ್ಕೆ ಹಲವಾರು ಕಾರಣಗಳು ಇವೆ.. ಅನೈತಿಕ ವ್ಯವಹಾರ ಇಲ್ಲವೇ ಅತ್ಯಾಚಾರದಿಂದ ಹುಟ್ಟಿದ ಮಕ್ಕಳನ್ನು ಬೀದಿಯಲ್ಲಿ ಎಸೆದು ಹೋಗುತ್ತಾರೆ. ಇನ್ನು ಕೆಲವರು ಬಡತನವನ್ನು ಸಹಿಸಲಸಾಧ್ಯ ಎಂದಾರಿವಾದಗ ಇಲ್ಲವೇ ಕೌಟುಂಬಿಕ ಜಗಳಗಳಿಂದನೂ ಈ ಮಕ್ಕಳನ್ನು ಬೀದಿಗೆ ತಂದು ಹಾಕುತ್ತಾರೆ. ಇನ್ನು ಹೆತ್ತವರಿಬ್ಬರೂ ಇಲ್ಲದಾಗ ಮಗು ಅನಾಥವಾಗುತ್ತದೆ.

ಇದೆಲ್ಲ ಒಂದು ಕತೆಯಾದರೆ.. ಕೆಲವೊಂದು ಹೆತ್ತವರು ಇನ್ನೂ ಭಯಂಕರವಾಗಿ ಯೋಚಿಸುತ್ತಾರೆ. ಅದು ಮಕ್ಕಳನ್ನು ಸಾಯಿಸಿಬಿಡುವ ಅತಿರೇಕದ ಕೆಟ್ಟ ಯೋಜನೆ. ಅದನ್ನು ಕಾರ್ಯಗತ ಮಾಡಿಯೇ ಬಿಟ್ಟ ಕಿರಾತಕರು ಇದ್ದಾರೆ. ಇದು ಅದೆಷ್ಟೋ ಅಮಾಯಕ ಮಕ್ಕಳ ದಾರುಣ ಪರಿಸ್ಥಿತಿ.. ಮಕ್ಕಳು ಬೇಕು ಅಂತ ಹಂಬಲಿಸುವವರು ಒಂದು ಕಡೆಯಾದರೆ.. ಮಕ್ಕಳೇ ಬೇಡ ಅಂತ ಆಶಿಸುವ ಮನಸ್ಸುಗಳು ಇನ್ನೊಂದು ಕಡೆ. ಆನಾಥವಾದ ಮಕ್ಕಳ ಪಾಡು ತುಂಬಾ ದಯನೀಯವಾಗಿರುತ್ತದೆ.

ಬೀದಿಯಲ್ಲಿ ಸಿಕ್ಕಿದ ಮಕ್ಕಳಿಗೆ ನೆರವಾಗುವ ಅದೆಷ್ಟೋ ಸಂಸ್ಥೆಗಳು ಅದರ ಲಾಲನೆ ಪಾಲನೆಯನ್ನು ಮಾಡುತ್ತದೆ. ಸಂಬಂಧಪಟ್ಟವರನ್ನು ಹುಡುಕುವ ಕಾರ್ಯವನ್ನು ಮಾಡುತ್ತದೆ. ಕೆಲವೊಮ್ಮೆ ಯಾರು ಸಿಗದಾಗ ತಾವೇ ಅದನ್ನು ನೋಡಿಕೊಳ್ಳುವ ವ್ಯವಸ್ಥೆಯನ್ನು ಮಾಡುತ್ತದೆ. ಹೀಗೆ ಆ ಮೂಲಕ ನೆರವಾಗುವ ಅನಾಥಶ್ರಮಗಳು ಈ ಕಂದಮ್ಮಗಳಿಗೆ ಒಂದು ದಾರಿದೀಪವಾಗಿ ಜೊತೆಯಾಗುತ್ತದೆ.

ಇಂತಹ ನಿರ್ಗತಿಕ ಮಕ್ಕಳ ಸುಧಾರಣೆಗೆ ನೆರವಾಗುವ ಅನಾಥಾಲಯಗಳು ಒಂದೊಂದು ಬಾರಿ ದಿವ್ಯ ನಿರ್ಲಕ್ಷ್ಯವನ್ನು ತೋರುತ್ತದೆ. ಅದಕ್ಕೆ ಇವತ್ತು ಕೆಲವೊಂದು ಅನಾಥ ಅಶ್ರಮಗಳಲ್ಲಿ ಅತ್ಯಾಚಾರ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳು ವರದಿಯಾಗುತ್ತಿದೆ. “ಕಾಯುವವನು ಕಟುಕನಾದರೆ ನಾನೇನೂ ಮಾಡಲಿ”. ಇದು ಆನಾಥ ಮಗುವಿನ ಅಂತರಾಳದ ಕೂಗು.,
ನಮ್ಮ ಸಮಾಜದಲ್ಲಿ ಎಷ್ಟೇ ಪೋಲಿಸ್ ರಕ್ಷಣೆಗಳು ಹಾಗೂ ಕಾನೂನುಗಳು ಇದ್ದರೂ ಮಕ್ಕಳು ತೊಂದರೆ ಅನುಭವಿಸುವುದು ಇಂದಿಗೂ ತಪ್ಪುತ್ತಿಲ್ಲ.

ಪ್ರೀತಿ ಬಯಸುವ ಈ ಅನಾಥ ಮನಸ್ಸುಗಳ ನೋವು ಕಲ್ಪನೆಗೂ ನಿಲುಕದ್ದಾಗಿರುತ್ತದೆ. ಪ್ರೀತಿ ಕೊಡುವವರೆಲ್ಲರೂ ನನ್ನವರು ಅನ್ನುವ “ಭಾವ” ಮಕ್ಕಳ ಮನಸ್ಸಿನಲ್ಲಿ ಬೇರೂರಿರುತ್ತದೆ. ಅಂಥವರನ್ನು ಬಲು ಬೇಗನೆ ನಂಬಿ ಬಿಡುತ್ತಾರೆ.ಇಂತಹ ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುವವರು ಇದ್ದಾರೆ. ಇನ್ನು ಕೆಲವು ಅಮಾಯಕ ಮಕ್ಕಳಿಗೆ ತಮಗೇನು ಆಗುತ್ತಿದೆ ಅನ್ನುವ ಅರಿವು ಇರುವುದಿಲ್ಲ. ಅವರಿಗೆ ಪ್ರತಿಭಟಿಸುವ ಧೈರ್ಯವು ಇರುವುದಿಲ್ಲ. ಸಾಮಾನ್ಯವಾಗಿ ಇಂತಹ ಮಕ್ಕಳು ಬೇಗನೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಮಕ್ಕಳ ಮನಸ್ಸು ಹೂವಿನಂತೆ. ಮೃದುವಾಗಿರುತ್ತದೆ. ಒಮ್ಮೆ ಮನಸ್ಸಿಗೆ ಘಾಸಿಯಾದರೆ ಅಂತಹ ಮಕ್ಕಳು ಬೇಗನೆ ಖಿನ್ನತೆಗೆ ಒಳಗಾಗುತ್ತಾರೆ. ಅನಾಥ ಮಕ್ಕಳ ರಕ್ಷಣೆ ಬಲಪಡಿಸಲು ಅವರನ್ನು ದುರ್ಬಲತೆಯ ಅಪಾಯದಿಂದ ರಕ್ಷಿಸಬೇಕು. ಶೋಷಣೆಗೆ ಒಳಗಾದ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ರಕ್ಷಣೆಯನ್ನು ಕೊಡಬೇಕು. ಇಲ್ಲದಿದ್ದರೆ ಅಂತಹ ಮಕ್ಕಳು ಬಲುಬೇಗನೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.

ಈ ಅನಾಥ ಮಕ್ಕಳ ಪಾಡು ಆ ದೇವರಿಗೆ ಪ್ರೀತಿ.. ಅದೆಷ್ಟೋ ಕಷ್ಟ ನೋವುಗಳನ್ನು ಅನುಭವಿಸುತ್ತ ಬದುಕುವ ಮುಗ್ಧ ಮನಸ್ಸಿನ ಮಕ್ಕಳನ್ನು ನೋಡುವಾಗ ಕರುಳು ಚುರ್ರು ಅನ್ನುತ್ತದೆ. ಕೆಲವೊಮ್ಮೆ ತಮ್ಮನ್ನು ದತ್ತು ತೆಗೆದುಕೊಂಡವರಿಂದ ಸುಖವಾಗಿ ಬದುಕುವ ಕಂದಮ್ಮಗಳು ಇರುತ್ತವೆ. ಇನ್ನು ಕೆಲವು ಕಡೆ ದತ್ತು ತೆಗೆದುಕೊಂಡವರು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡದ್ದು ಇದೆ. ಅಂತಹ ಮಕ್ಕಳ ಸ್ಥಿತಿ ಇನ್ನು ಹೀನಾಯವಾಗಿರುತ್ತದೆ. ತಾನು ಅನಾಥ ಅನ್ನುವ ಭಾವ ಅವರನ್ನು ಕ್ಷಣ ಕ್ಷಣವೂ ಕಾಡುತ್ತಿರುತ್ತದೆ. ಹೆತ್ತೊಡಲ ಮಡಿಲಿಗಾಗಿ ಹಂಬಲಿಸುವ ಅದೆಷ್ಟೋ ಮುದ್ದು ಕಂದಮ್ಮಗಳು ತನ್ನವರ ದಾರಿಯನ್ನು ಕಾಯುತ್ತ ಇರುತ್ತಾರೆ.

ತಾನು ಹೆತ್ತ ಮಗುವನ್ನು ಬೀದಿಗೆ ತಂದು ಹಾಕುವ ಮನಸ್ಸು ಯಾವ ಹೆತ್ತವರಿಗೂ ಬಾರದಿರಲಿ. ತಮ್ಮ ಸ್ವಾರ್ಥಕ್ಕಾಗಿ ಬಾಯಿ ಬಾರದ ಕಂದಮ್ಮಗಳನ್ನು ತೊಟ್ಟಿಯಲ್ಲಿ ಹಾಕದಿರಿ. ನಮ್ಮ ಅಸಹಾಯಕತೆಗೆ ನಾವೇ ಹೊಣೆಗಾರರೇ ಹೊರತು ಆ ಮಕ್ಕಳಲ್ಲ. ನಮ್ಮನ್ನು ಕಾಯುವ ಆ ಭಗವಂತ ಒಬ್ಬನಿರುವಾಗ ಯಾರು ಅನಾಥರಲ್ಲ ಅನ್ನುವ ಭಾವ ಆ ಮುಗ್ಧ ಮನಸ್ಸುಗಳಲ್ಲಿ ಬೆಳೆಸಬೇಕು. ಮುಂದೆ ಯಾವ ಮನಸ್ಸುಗಳು ಅನಾಥವಾಗದಿರಲಿ.. ಪ್ರೀತಿ ಬಯಸುವ ಆ ಮುಗ್ಧ ಮನಸ್ಸಿಗೆ ನಿಷ್ಕಲ್ಮಶವಾದ ಪ್ರೀತಿ ದೊರೆಯಲಿ.

ಪೂಜಾ ಗುಜರನ್. ಮಂಗಳೂರು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ನಂದಾ
ನಂದಾ
3 years ago

ಮನಮುಟ್ಟುವ ಬರಹ

1
0
Would love your thoughts, please comment.x
()
x