ನಾವು ಯಾರಿಗೇನೂ ಕಮ್ಮಿ ಇಲ್ಲ. ಯಾರ ಹಂಗೂ ನಮಗಿಲ್ಲ. ನಮಗೂ ಒಂದು ಮನಸ್ಸಿದೆ. ಕನಸಿದೆ. ಬದುಕಿದೆ. ಅಸಹಾಯಕತೆಯ ಅನುಕಂಪದಲೆಯಲ್ಲಿ ಮುಳುಗಿಸಿ, ಕಾರುಣ್ಯಧಾರೆಯಲ್ಲಿ ತೇಲಿಸುವ ಅಗತ್ಯವಿಲ್ಲ. ನಮಗೆ ಅವಕಾಶ ಕೊಡಿ. ’ಆಗುವುದಿಲ್ಲ’ ಎಂಬುದನ್ನೆಲ್ಲಾ ’ಆಗಿಸಿ’ ಬಿಡುತ್ತೇವೆ. ಪ್ರತಿಯೊಬ್ಬ ವಿಕಲಚೇತನರಲ್ಲಿ ಕಂಡು ಕೇಳಿ ಬರುವ ದೃಢ ವಿಶ್ವಾಸದ ನುಡಿಗಳಿವು.
ವಿಕಲಚೇತನರೆಂದರೆ ಸಮಾಜದಲ್ಲಿ ಅವಗಣನೆಗೆ ಒಳಗಾಗಿ ಅವರಿಗೆ ತಮ್ಮದೇ ಆದ ಸ್ವಂತಿಕೆ ಇಲ್ಲದಂತಹ ಸ್ಥಿತಿಗೆ ತಂದು ಬಿಟ್ಟಿದ್ದೇವೆ.
ಯಾರೀ ವಿಕಲಚೇತನರು? ’ಅಂಗವಿಕಲ’ ಎಂಬ ಪದಕ್ಕೆ ಪರ್ಯಾಯವಾಗಿ ಇಂದು ’ವಿಕಲಚೇತನ’ ಪದ ಬಳಕೆ ಮಾಡುತ್ತಿದ್ದೇವೆ. ಈ ಪದದಲ್ಲೇ ಇದೆ ಅವರಲ್ಲಿನ ಚೈತನ್ಯದ ಚಿಲುಮೆ. ಹುಟ್ಟಿನಿಂದಲೇ ಕೆಲವರು ಅಂಗವೈಕಲ್ಯ ಹೊಂದಿದ್ದರೆ, ಮತ್ತಷ್ಟು ಮಂದಿ ತಮ್ಮ ಜೀವನದ ಪಯಣದಲ್ಲಿ ನಡೆದ ಆಘಾತ, ಅಪಘಾತ, ಅವಗಡಗಳಿಂದ ಅಂಗವಿಕಲರಾಗುತ್ತಾರೆ. ಅಂದ ಮಾತ್ರಕ್ಕೆ ಅವರಿಗೆ ಅನುಕಂಪದ ಮಾತೇಕೆ? ಅನುಕಂಪದ ಬದಲಿಗೆ ’ಅವಕಾಶ’ಎಂಬ ವೇದಿಕೆಯನ್ನು ನೀಡಿ ’ನೀನು ಸಮರ್ಥ, ಸಾಧಿಸುವ ಸಾಧಕ’ ಎಂಬ ಆತ್ಮವಿಶ್ವಾಸದ ನುಡಿಗಳನ್ನು ನೀಡಿದ್ದೇ ಆದರೆ ಖಂಡಿತವಾಗಿ ಆ ವಿಕಲಾಂಗರು ’ಸಾಧಿಸುವ ಸಾಧಕ’ರಾಗುತ್ತಾರೆ. ಅವರ ಸಾಧನೆಗೆ ಹೆಗಲೆಣೆಯಾಗಬೇಕಾದದ್ದು ಸಮಾಜ, ಸಮಾಜದ ಸಜ್ಜನ ಬಂಧುಗಳ ಮತ್ತು ಅಧಿಕಾರಿವರ್ಗದ ಹೊಣೆ.
ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಮಾದೇಶ ಎನ್ನುವ ಹುಡುಗ ತನ್ನ ಬಳಗದವರೊಬ್ಬರ ಮನೆಯಲ್ಲಿ ನಡೆಯುತ್ತಿದ್ದ ಮದುವೆಯ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದ. ತನ್ನದೇ ವಯೋಮಾನದವರ ಜೊತೆ ಕಲೆತು ಆಟವಾಡುತ್ತಿದ್ದ. ಮದುವೆಯ ದಿಬ್ಬಣದ ವಾಹನವನ್ನು ತೊಳೆದು ನಿಲ್ಲಿಸಿದ್ದ ಸಂದರ್ಭ ಅದು. ಗಾಡಿಯ ಮೇಲೆ ಹತ್ತಿ ಆಟವಾಡುತ್ತಿದ್ದಾಗ ಒಬ್ಬ ಹುಡುಗ ವಾಹನದ ಮೇಲೆ ಹಾದು ಹೋಗಿದ್ದ ಹೈ ಟೆನ್ಷನ್ ವಿದ್ಯುತ್ ತಂತಿಯನ್ನು ನೋಡಿ ತನ್ನ ವಯೋಸಹಜ ಗುಣದಿಂದ ಮುಟ್ಟುವ ಧೈರ್ಯ ಮಾಡಿಬಿಟ್ಟ. ಅದೃಷ್ಟವಶಾತ್ ಆಗ ವಿದ್ಯುತ್ ಹರಿವು ನಿಂತುಹೋಗಿತ್ತು. ಜಿಗಿದು ತಂತಿಯನ್ನು ಮುಟ್ಟುವ ಭರದಲ್ಲಿ ಅವನ ಕೈಯ ಬೆರಳು ಗಾಯಗೊಂಡಿತು. ಅಳುತ್ತಾ ಹೋದವನನ್ನು ಸಮಾಧಾನಿಸಿದ ಪೋಷಕರು ಹೇಗಾಯ್ತು? ಎಂಬ ಪ್ರಶ್ನೆಯನ್ನಿಟ್ಟರು. ಭಯಗೊಂಡ ಮಗು ಮೌನಕ್ಕೆ ಶರಣಾಗಿ ಅಳು ನಿಲ್ಲಿಸುತ್ತದೆ. ಪೋಷಕರ ಪ್ರಶ್ನೆ ಹಾಗೇ ಉಳಿದಾಗ ಅಲ್ಲಿದ್ದ ಮತ್ತೊಬ್ಬ ಹುಡುಗ ತನ್ನ ಜಾಣ್ಮೆಯನ್ನು ತೋರಿಸಿ ’ಶಹಬಾಶ್’ ಗಿರಿ ಗಿಟ್ಟಿಸಲು ’ನಾನು ತೋರಿಸುತ್ತೇನೆ’ ಎಂದು ವಾಹನದ ಮೇಲೇರಿಬಿಟ್ಟ.
ಅಪಾಯಗಳೇ ಹಾಗೆ. ಕ್ಷಣ ಮಾತ್ರದಲ್ಲಿಯೇ ಯಾರಿಗೂ ಸುಳಿವು ಕೊಡದೆ ನಡೆದು ಬಿಡುತ್ತವೆ. ಅಚಾನಕ್ಕಾಗಿ ನಡೆದ ಘಟನೆಯನೇ ಅಪಘಾತ, ಆಕಸ್ಮಿಕ, ಎನ್ನುವುದು. ಕೆಲವೊಮ್ಮೆ ಅದೃಷ್ಟವೂ ಹೌದು. ’Luck is nothing but Accident, Accident is nothing but Luck' ಎಂಬಂತೆ. ವಾಹನದ ಮೇಲೇರಿದ ಹುಡುಗ ತಂತಿಯನ್ನು ನೋಡುವಾಗ ಅಲ್ಲಿದ್ದ ಪೋಷಕರಿಗೆ ಅರ್ಥವಾಗುತ್ತದೆ. ಅವನು ತಂತಿಯನ್ನು ಮುಟ್ಟುವವನಿದ್ದಾನೆ ಎಂದು.
ಬೇಡಾ…., ಬೇಡಾ….. ಎನ್ನುತ್ತಿರುವಾಗಲೇ ತಂತಿ ತೋರಿಸುವ ಪ್ರಯತ್ನದ ಯತ್ನ ನಡೆಯುತ್ತದೆ. ಕಾಣದಂತೆ ತಂತಿಯಲ್ಲಿ ಹರಿಯುತ್ತಿದ್ದ ವಿದ್ಯುತ್ ಯಮಸ್ವರೂಪಿಯಾಗುತ್ತದೆ. ನೋಡು ನೋಡುತ್ತಿದ್ದಂತೆ ಬಾಲಕನನ್ನು ಆಕರ್ಷಿಸಿದ ವಿದ್ಯುತ್ ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಹಸಿದ ಹೆಬ್ಬುಲಿಯೊಂದು ಆಹಾರವಾಗಿ ಸಿಕ್ಕಿದ ಜಿಂಕೆಯನ್ನು ಬೇಟೆಯಾಡಿ ಅದರ ಕೊರಳಿಗೆ ಬಾಯಿಹಾಕಿ ರಕ್ತ ಹೀರುವ ಹಾಗೆ ವಿದ್ಯುತ್ ತಂತಿ ಹಸಿದ ಹುಲಿಯಂತೆ ಆ ಬಾಲಕನ ರಕ್ತ ಹೀರುತ್ತದೆ. ನಿಮಿಷಗಳಲ್ಲಿ ರಕ್ತ ಹೀರಿದ ತಂತಿ, ರಸವನ್ನು ಹೀರಿದ ಗಾಣ ಕಬ್ಬಿನ ಸಿಪ್ಪೆಯನ್ನು ಹೊರಗುಗುಳುವಂತೆ ಬಾಲಕನನ್ನು ಎಸೆಯುತ್ತದೆ. ದುರಾದೃಷ್ಟವೆಂದರೆ ಆಗ ತಾನೇ ತೊಳೆದಿದ್ದ ವಾಹನದ ತೇವಾ ಇನ್ನೂ ಆರಿರಲಿಲ್ಲ. ಹಾಗಾಗಿ ಅಪಾಯ ಸ್ವಲ್ಪ ಹೆಚ್ಚಾಗಿಯೆ ಆಗುತ್ತದೆ. ಬಾಲಕ ಅರೆ ಜೀವಾವಸ್ಥೆಯಲ್ಲಿ ಉಳಿಯಲಾರದ ಸ್ಥಿತಿಯಲ್ಲಿ ಆಸ್ಪತ್ರೆ ಸೇರುತ್ತಾನೆ. ಸುಮಾರು ಹತ್ತೊಂಬತ್ತು ಬಾಟಲ್ ರಕ್ತ ಕೊಡಲಾಗುತ್ತದೆ. ಬದುಕಿಳಿದುದ್ದೇ ಹೆಚ್ಚು ಎನ್ನುವಂತೆ ಪ್ರಾಣಾಪಾಯದಿಂದ ಪಾರಾದ ಬಾಲಕನ ಅದೃಷ್ಟ ಚೆನಾಗಿತ್ತು. ಆದರೆ ಬಲಗೈ ಪೂರ್ಣವಾಗಿ ತೆಗೆಯಬೇಕೆಂಬ ವೈದ್ಯರ ಸಲಹೆ ಅವನ ತಂದೆಗೆ ಸಹಿಸಲಸಾಧ್ಯವಾದ ನೋವು ತರುತ್ತದೆ. ಹೆದರದೆ ಸಮಸ್ಯೆಯನ್ನು ಎದುರಿಸಬೇಕೆಂದು ಕೈ ತೆಗೆಸಲು ಒಪ್ಪುವುದಿಲ್ಲ. ಅವನ ಊನಗೊಂಡ ಬಲಗೈ ಈಗಲೂ ವಿಕಾರವಾಗಿ ಹಾಗೇ ಇದೆ.
ಒಂದು ವರ್ಷಕಾಲ ಮನೆಯಲ್ಲೇ ಇದ್ದ ಬಾಲಕನನ್ನು ಶಾಲೆಗೆ ಸೇರಿಸುತ್ತಾರೆ. ಒಂದು ತರಗತಿ ಹಿಂದಕ್ಕೆ ಹಾಕುತ್ತಾರೆ. ಅಂದರೆ ಎರಡು ತರಗತಿಯಷ್ಟು ಹಿಂದಕ್ಕೆ ಬರುತ್ತಾನೆ. ಬಲಗೈ ಕೆಲಸಗಳಿಗೆಲ್ಲಾ ಎಡಗೈಯನ್ನೇ ಆಶ್ರಯಿಸ ಬೇಕಾಗುತ್ತದೆ. ಅವನ ಜೀವನ ಮುಗಿಯಿತೆಂದೇ ಬಹಳಷ್ಟು ಮಂದಿಯ ಅನುಕಂಪದ ಲೊಚಗುಟ್ಟುವಿಕೆ ಅವನಿಗೆದುರಾಗುತ್ತದೆ. ಆ ಅನುಕಂಪದ ಲೊಚಗುಟ್ಟುವಿಕೆಗೆ ಬಲಿಯಾಗದೆ, ತನ್ನ ಬಲಗೈ ಸಾಮಾರ್ಥ್ಯವನ್ನು ಎಡಗೈಗೆ ತರಿಸಿಕೊಳ್ಳುತ್ತಾನೆ. ’ಓದುವುದು ಆಷ್ಟಕ್ಕಷ್ಟೇ, ಪಾಸಾಗಲು ಅಡ್ಡಿಯೇನಿಲ್ಲ’ ಎನ್ನುವಂತೆ ಬೆಳೆದವನು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ್ದಾನೆ. ಈಗ ಹತ್ತನೆ ತರಗತಿಯ ಪರೀಕ್ಷೆಯನ್ನು ಎದುರಿಸಲು ಅಭ್ಯಾಸ ಮಾಡುತ್ತಿದ್ದಾನೆ. ಹೈಜಂಪ್ ಮತ್ತು ಓಟಗಳಲ್ಲಿ ಉತ್ತಮ ಸಾಧನೆ ಮಾಡಿದ ಈ ’ಮಾದೇಶ’ ಶಾಲಾಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ’ಶಾಲಾಚಾಂಪಿಯನ್’ ಆಗಿದ್ದಾನೆ. ಎರಡು ಬಾರಿ ರಾಮನಗರ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯಮಟ್ಟದಲ್ಲಿ ಎರಡೂ ಬಾರಿ ಹೈಜಂಪ್ ಪಂದ್ಯದಲ್ಲಿ, ಮತ್ತು ಒಮ್ಮೆ ನೂರು ಮೀಟರ್ ಹರ್ಡಲ್ಸ್ ಪದ್ಯದಲ್ಲಿ, ಮತ್ತೊಮ್ಮೆ ಮೂರುಸಾವಿರ ಮೀಟರ್ ಓಟದಲ್ಲಿ ಭಾಗವಹಿಸಿದಾನೆ. ಕಿರು ಅಂತರದಲ್ಲಿ ಗೆಲುವು ತಪ್ಪಿಸಿಕೊಂಡಿದ್ದರೂ ವಿಕಲಚೇತನನಾದ ’ಮಾದೇಶ’ ಸಾಮಾನ್ಯವರ್ಗದ ಗುಂಪಿನಲ್ಲಿ ಆಟ ಆಡಿದ್ದಾನೆ.
ಮಾದೇಶ ಸಿ.ಪಿ.
ಬಹುಶಃ ಇವನು ವಿಕಲಚೇತನರ ವರ್ಗದಲ್ಲಿ ಆಟೋಟಗಳಲ್ಲಿ ಭಾಗವಹಿಸಿದರೆ ಇವನ ಕ್ಷೇತ್ರದ ಆಟಗಳಲ್ಲಿ ಮೊದಲಿಗನು ಇವನಾಗುವುದರಲ್ಲಿ ಸಂಶಯವಿಲ್ಲ. ಮುಂದೆ ನಡೆಯಲಿರುವ ಪ್ಯಾರಾ ಒಲಂಪಿಕ್ ಪಂದ್ಯಕ್ಕೆ ಹದಿನಾರರಿಂದ ಮೂವತ್ತು ವರ್ಷದೊಳಗಿನ ವಯೋಮಾನದಡಿಯಲ್ಲಿ ಇವನ ಆಯ್ಕೆಯಾಗಿದ್ದು, ಕರ್ನಾಟಕವನ್ನು ಅಥವಾ ಭಾರತವನ್ನು ಪ್ರತಿನಿಧಿಸುವ ಹೊಣೆಗಾರಿಗೆ ಇವನ ಮೇಲೆದೆ. ಪ್ರಸ್ತುತ ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕಿನ ರಸ್ತೆಜಕ್ಕಸಂದ್ರದ ಜೈನ್ ವಿದ್ಯಾನಿಕೇತನ್ ಶಾಲೆಯಲ್ಲಿ ಹತ್ತನೇ ಇಯತ್ತೆಯಲ್ಲಿ ವ್ಯಾಸಂಗ ಮಾಡುತ್ತಿರುವ ಇವನು ಅಪ್ಪಟ ಗ್ರಾಮೀಣ ಪ್ರತಿಭೆ. ನಗರೀಕರಣದ ವಾಸನೆ ಎಳ್ಳಷ್ಟು ಇಲ್ಲದ ಅಪ್ಪಟ ಪ್ರತಿಭೆ. ಇವನಿಗೆ ಅವಕಾಶಗಳು ಬೇಕಷ್ಟೆ. ಶಾಲೆಯಲ್ಲಿ ಗರಿಷ್ಠ ಮಟ್ಟದಲ್ಲಿ ಅವಕಾಶಗಳನ್ನು ನೀಡಿದೆ. ಶಾಲೆಯಿಂದ ಹೊರಬಂದ ಮೇಲೆ, ಹೊರ ಪ್ರಪಂಚದಲ್ಲಿ ವಿಕಲ ಚೇತನರ ಗುಂಪಿನಲ್ಲಿ ಅವಕಾಶಗಳು ಸಿಗಬೇಕು.
ಈ ಬಾಲಕನ ಕಿರು ಪರಿಚಯ ನಿಮ್ಮ ಮುಂದೆ ಇಡುತ್ತಾ ವಿಕಲ ಚೇತನರಿಗೆ ಬೇಕಾಗಿರುವುದು ಅನುಕಂಪವಲ್ಲ. ಅವಕಾಶಗಳು. ಅನುಕಂಪದ ರುಚಿ ಹತ್ತಿದ ಇವರು ಸೋಮಾರಿಗಳಾಗಿ ಅನುಕಂಪವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಬಿಡುತ್ತಾರೆ. ’ಇವರಿಗೆ ಆತ್ಮವಿಶ್ವಾಸ ಎಂಬ ಅಸ್ತ್ರವನ್ನು ಕೈಗೆ ಕೊಟ್ಟು, ದೃಢನಿಷ್ಠೆ ಎಂಬ ಮಾರ್ಗವನ್ನು ಹಾಕಿಕೊಟ್ಟಿದ್ದೇ ಆದರೆ ಇವರೆಲ್ಲ ಸ್ವಾವಲಂಬಿಗಳಾಗಿ ತಮ್ಮ ಕಾಲಮೇಲೆ ತಾವು ನಿಂತು ಮತ್ತೊಬ್ಬರ ಬಾಳಿಗೆ ಬೆಳಕಾಗುವುದರಲ್ಲಿ ಸಂಶಯವೇ ಇಲ್ಲಾ. ಸಮಾಜ, ಸಮಾಜದ ಸಜ್ಜನವರ್ಗ, ಗೆಳೆಯರು, ಪೋಷಕರು, ಶಿಕ್ಷಕವರ್ಗ, ಅಧಿಕಾರಿವರ್ಗ ಈ ನಿಟ್ಟಿನಲ್ಲಿ ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕು. ಆಗುತ್ತಾರೆ ಎಂಬ ಆಶಯದೊಂದಿಗೆ ……… .
*****