'ಈ ಹಾಡನ್ನು ಬೇರೆ ಯಾರಿಂದಲಾದರೂ ಬರೆಸಿಬಿಡಿ ಪ್ಲೀಸ್, ನನ್ನಿಂದ ಸಾಧ್ಯವಾಗುತ್ತಿಲ್ಲ' ಎಂದು ಶ್ರೀನಗರ ಕಿಟ್ಟಿ ಅಭಿನಯಿಸುತ್ತಿರುವ ಚಿತ್ರವೊಂದರ ಸಂಗೀತ ನಿರ್ದೇಶಕರೊಬ್ಬರಿಗೆ ನಾನು ತಿಳಿಸಿದಾಗ ನಿನ್ನೆ ಸಂಜೆಯ ಗಡಿ ದಾಟಿ ರಾತ್ರಿ ಆವರಿಸಿತ್ತು. ಇಷ್ಟಕ್ಕೂ ಇತ್ತೀಚಿಗೆ ನನ್ನ ಆರೋಗ್ಯ ಆಗಾಗ ಕೈ ಕೊಡುತ್ತಿರುತ್ತದೆ. ನಾನು ಲವಲವಿಕೆಯಿಂದಿರಲು ಎಷ್ಟೇ ಪ್ರಯತ್ನಿಸಿದರೂ ಜ್ವರ, ಶೀತ, ಕೆಮ್ಮು, ಮೈ ನೋವು ಅಡ್ಡಿಯುಂಟುಮಾಡುತ್ತವೆ. ಅಲ್ಲದೆ ಕಳೆದ ವಾರ ಪೂರ್ತಿ ಬಿಡುವಿಲ್ಲದೆ ಬರೆದಿದ್ದೆ. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ವಿಶ್ರಾಂತಿ ಇರಲಿಲ್ಲ. ಅದು ನೆಪವಾದರೂ ಸದಾ ಲವಲವಿಕೆಯಿಂದರಲು ಎಷ್ಟೇ ಪ್ರಯತ್ನಿಸಿದರೂ ಅಪಾರ ಬೇಸರ, ಖಿನ್ನತೆ ನನ್ನನ್ನು ಆವರಿಸಿ ಆ ಪ್ರಯತ್ನಕ್ಕೆ ಭಂಗವುಂಟುಮಾಡುತ್ತವೆ. ಯಾವುದಾದರು ದಪ್ಪ ಗಾತ್ರದ ಪುಸ್ತಕವನ್ನು ಓದುತ್ತಾ ಕೂತುಬಿಡಬೇಕು ಅನ್ನಿಸುತ್ತದೆ. ಇಲ್ಲವೇ ಯಾವುದಾದರೂ ದೂರದ ಊರಿಗೆ ಅಂದರೆ ಮನುಷ್ಯರೇ ಇಲ್ಲದ ಜಾಗಕ್ಕೆ ಹೋಗಿ ಒಂದಿಷ್ಟು ಕಾಲ ಪ್ರಕೃತಿಯೊಂದಿಗೆ ಮಾತಾಡುತ್ತ, ಕಾಲ ಕಳೆಯುತ್ತಾ, ಮಾತು, ಪತ್ರಿಕೆ, ಟಿವಿ, ಫೇಸ್ ಬುಕ್, ಇಂಟರ್ನೆಟ್ ಗಳಿಂದಲೂ ದೂರವುಳಿದು ಒಂದಿಷ್ಟು ಕಾಲ ಒಬ್ಬನೇ ಇದ್ದು ಬರಬೇಕಿನಿಸುತ್ತದೆ.
ಎಷ್ಟೋ ಸಲ ಬೇಸರವಾದಾಗ, ಒಂಟಿತನ ಕಾಡಿದಾಗ, ಶೂನ್ಯತೆ ತುಂಬಿಕೊಂಡಾಗ ಬ್ಯಾಗಿಗೆ ಒಂದೆರಡು ಜೊತೆ ಬಟ್ಟೆ ಹಾಕಿಕೊಂಡು ಮನೆಯಿಂದ ಮೆಜೆಸ್ಟಿಕ್ ವರೆಗೂ ಹೋಗಿ ಮಗಳ ನೆನಪಾಗಿ ಮತ್ತೆ ಮನೆಗೆ ಬಂದಿದ್ದುಂಟು. ನನ್ನ ಮಗಳು ನನ್ನ ಬದುಕಿನ ಬಹು ಮುಖ್ಯಭಾಗ. ಆಕೆ ಹುಟ್ಟಿದ ನಂತರ ಈ ಎರಡು ವರ್ಷಗಳಲ್ಲಿ ನನ್ನಲ್ಲಿ ಅನೇಕ ಬದಲಾವಣೆಗಳು ಕಂಡುಬಂದಿವೆ. ಈಗಾಗಲೇ ಚಿತ್ರನಟಿಯಯರಿಗಿಂತಲೂ ಚೆನ್ನಾಗಿ ಕನ್ನಡ ಮಾತಾಡಬಲ್ಲ ನನ್ನ ಮಗಳು ಬುದ್ಧಿವಂತೆ, ಒಮ್ಮೆ ಹೇಳಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವ ಜಾಣೆ ಎಂಬ ವಿಷಯವಾಗಿ ನನಗೆ ಹೆಮ್ಮೆ. ಆಕೆ ನನ್ನನ್ನು ಅಪ್ಪ, ಅಪ್ಪಾಜಿ ಎಂಬುದಾಗಿಯೂ, ನನ್ನ ಹೆಂಡತಿಯನ್ನು ಮಮ್ಮಿ ಎಂಬುದಾಗಿಯೂ ಕರೆಯುವ ಮುದ್ದು ಜೀವ. ಈ ಮಗು ಹುಟ್ಟಿದ ಮೇಲೆ ನನ್ನ ಕೋಪ ಕಡಿಮೆಯಾಗಿದೆ. ಸೂರ್ಯ ಮುಳುಗುತಿದ್ದಂತೆಯೇ ಮನೆಗೆ ಹೋಗಬೇಕು ಅನ್ನಿಸುತ್ತದೆ. ಹೋಗುವಾಗ ಅವಳಿಗಾಗಿ ಏನಾದರೂ ಒಯ್ಯಬೇಕು ಅನ್ನಿಸುತ್ತದೆ. ಮನೆಗೆ ಹೋದ ಕೂಡಲೇ ಓಡಿ ಬಂದು ಬಾಚಿಕೊಳ್ಳುವ ಈ ಮಗು ನನ್ನೆದೆಯ ಸದ್ದನ್ನು ಆಲಿಸಬಲ್ಲದು. ಕೆಲವೊಮ್ಮೆ ನಾನು ಬೇಸರದಿಂದಿರುವಾಗ ಹತ್ತಿರ ಬಂದು ತನ್ನದೇ ಶೈಲಿಯಲ್ಲಿ ಸಂತೈಸಲು ಪ್ರಯತ್ನಿಸುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಂತಹ ಮಗಳು ನಾನು ಹುಡುಕಿಕೊಳ್ಳುವ ಹೊಸಲೋಕಕ್ಕೆ, ಹೊಸ ಪರಿಸರಕ್ಕೆ ಪರ್ಯಾಯವಾಗಿ ನನಗೆ ದಕ್ಕುವುದು, ನನ್ನ ಖಿನ್ನತೆ, ಹತಾಶೆ, ಏಕಾಕಿತನಗಳನ್ನೆಲ್ಲಾ ನಿವಾರಿಸುವುದು ನನ್ನ ಪಾಲಿನ ಅಚ್ಚರಿ.
ಇಷ್ಟಕ್ಕೂ ಈ ಒಂಟಿತನ, ಮೂಕವೇದನೆ ಮನುಷ್ಯನಿಗೆ ಮಾತ್ರವೋ ಅಥವಾ ಇತರ ಪ್ರಾಣಿ ಪಕ್ಷಿಗಳಿಗೂ ಇದೆಯೇ? ಎಂದು ಪ್ರಶ್ನಿಸಿಕೊಂಡಾಗ ಮನುಷ್ಯನದೇ ಮೇಲುಗೈ. ತಾಯಿಯ ಗರ್ಭದಲ್ಲಿ ಒಂಟಿಯಾಗಿ ಒಂಭತ್ತು ತಿಂಗಳು ಕಳೆಯುವ ಮನುಷ್ಯನಿಗೆ ಅಲ್ಲಿ ಬೇಸರ, ಹತಾಶೆ, ಅಬ್ಬೇಪಾರಿತನಗಳು ಕಾಡಿರಲು ಸಾಧ್ಯವಿಲ್ಲ. ಜನರೇ ತುಂಬಿತುಳುಕುತ್ತಿರುವ ಈ ಜಗತ್ತಿನಲ್ಲಿ ಮನುಷ್ಯ ತಬ್ಬಲಿಯಾಗುವುದು, ತನ್ನ ತಬ್ಬಲಿತನವನ್ನು ತುಂಬಿಕೊಳ್ಳಲು ನಾನಾ ಮಾರ್ಗಗಳನ್ನು ಕಂಡುಕೊಳ್ಳಲು ಯತ್ನಿಸುವುದು ನಿಜಕ್ಕೂ ವಿಪರ್ಯಾಸಕರ. ಪುಸ್ತಕ ಓದುವುದು, ಸಿನಿಮಾ ನೋಡುವುದು, ಚಿತ್ರ ಬರೆಯುವುದು, ಹಾಡು ಕೇಳುವುದು, ಮದ್ಯಪಾನ ಮಾಡುವುದು, ಧೂಮಪಾನ ಮಾಡುವುದು, ಮೈಲಿಗಟ್ಟಲೆ ಒಬ್ಬನೇ ನಡೆಯುವುದು, ಸಮುದ್ರ ತೀರದಲ್ಲಿ ಅಲೆಗಳನ್ನು ನೋಡುತ್ತಾ ಕೂರುವುದು, ಬೆಟ್ಟ ಹತ್ತಿ ಸುತ್ತಲೂ ಅನ್ಯಮನಸ್ಕತೆಯಿಂದ ಅವಲೋಕಿಸುವುದು, ಒಂದಿಷ್ಟು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡುವುದು- ಇವು ಮನುಷ್ಯ ತನ್ನನ್ನು ತಾನು ಮರಳಿ ಪಡೆಯಲು ಯತ್ನಿಸುವ ಉದಾಹರಣೆಗಳಷ್ಟೇ. ಇನ್ನೂ ಕೆಲವರು ಒಬ್ಬ ಸಂಗಾತಿಯನ್ನು ಬಯಸುತ್ತಾರೆ. ತಮ್ಮ ಆಳದ ಯಾತನೆಯನ್ನು, ಅವ್ಯಕ್ತ ದುಃಖವನ್ನು ಮುಕ್ತವಾಗಿ ಹಂಚಿಕೊಳ್ಳಲು ಒಂದು ಕೇಳುವ ಮನಸಿಗಾಗಿ ಹಂಬಲಿಸುತ್ತಾರೆ. ಅಂತಹ ಸಂಗಾತಿ ಹೇಗಿರಬೇಕು? ಹೆಣ್ಣೇ? ಗಂಡೇ? ಎಂಬುದು ಮುಖ್ಯವಾಗುವುದಿಲ್ಲ. ತಮ್ಮ ಮನೋಧರ್ಮವನ್ನು, ತಮ್ಮ ಮನಸ್ಸಿನಾಳದ ಸೂಕ್ಷ್ಮಾತಿಸೂಕ್ಷ್ಮ ಮಿಡಿತಗಳನ್ನು, ತಮ್ಮ ಅಭಿರುಚಿ ಆಲೋಚನಾಕ್ರಮವನ್ನು ಅರಿತಿರಬೇಕು. ಒಂದು ತಬ್ಬಲಿ ಜೀವ ಯಾತಕ್ಕಾಗಿ ಹಂಬಲಿಸುತ್ತಿದೆ? ಎಂಬುದರ ಪರಿಜ್ಞಾನವಿರವಿರಬೇಕು. ಎಷ್ಟೋ ಮಂದಿ ತನ್ನ ಪ್ರಿಯತಮೆಯ ಭುಜಕ್ಕೆ ತಲೆಯಿಟ್ಟು ಕಣ್ಣೀರು ಬಸಿದುಕೊಳ್ಳುವುದರಿಂದ ಸಮಾಧಾನ ಪಡೆದವರಿದ್ದಾರೆ. ತೀರಾ ಗದ್ಗದಿತ ಸ್ಥಿತಿಯಲ್ಲಿ ಆಕೆ ತನ್ನ ಸೆರಗಿನಿಂದ ಕಣ್ಣೊರೆಸಿದಾಗ ಅಲ್ಲಿ ತಾಯಿಪ್ರೀತಿಯನ್ನು ಕಂಡವರಿದ್ದಾರೆ. ಕೆಲವು ಹುಡುಗಿಯರಂತೂ ಒಂದೇ ಒಂದು ಮಾತೂ ಆಡದೆ ಗಂಟೆಗಳ ಕಾಲ ತನ್ನ ಹುಡುಗನ ಎದೆಗೊರಗಿ ಧ್ಯಾನಿಸುವ ಮೂಲಕ ತಮ್ಮ ಅಷ್ಟೂ ದುಃಖವನ್ನು, ಹೇಳಲಾರದ ಯಾತನೆಯನ್ನು, ಆಳದ ದುಗುಡವನ್ನು ನಿವಾರಿಸಿಕೊಂಡವರಿದ್ದಾರೆ.
ನಾವು ಚಿಕ್ಕ ಮಕ್ಕಳಾಗಿದ್ದಾಗ ಕನಸಿನಲ್ಲಿ ಬೆಚ್ಚಿದಾಗಲೋ, ಕತ್ತಲಿಗೆ ಹೆದರಿದಾಗಲೋ ಅಪ್ಪನನ್ನೋ, ಅಮ್ಮನನ್ನೋ, ತಾತನನ್ನೋ, ಅಜ್ಜಿಯನ್ನೋ ಗಟ್ಟಿಯಾಗಿ ಅಪ್ಪಿಕೊಂಡು ಮಲಗುವ ಮೂಲಕ ಧೈರ್ಯ ತಂದುಕೊಳ್ಳುತ್ತಿದ್ದೆವಲ್ಲಾ ಅದನ್ನು ಇಲ್ಲಿ ನೆನೆಯಬಹುದು. ಹಾಗೆ ಅಪ್ಪಿಕೊಳ್ಳುವುದರಿಂದ ತನ್ನ ಆಸರೆಗೆ, ರಕ್ಷಣೆಗೆ ತನ್ನೊಡನೆ ಯಾರೋ ಇದ್ದಾರೆ ಎಂಬ ಭಾವನೆ ಮಕ್ಕಳಲ್ಲಿ ಮೂಡಿ ನಿರಾಳತೆಯುಂಟಾಗಿ ಭಯ ದೂರವಾಗಲು, ನೆಮ್ಮದಿಯಿಂದ ನಿದ್ರಿಸಲು ಹಾದಿ ದೊರಕುತ್ತದೆ. ಇಂತಹ ಬೆಳವಣಿಗೆಗಳು ಯಾರಿಂದಲೂ ಹೇಳಿಸಿಕೊಂಡು ಬರುವುದಲ್ಲ. ಇವೆಲ್ಲಾ ಮನುಷ್ಯ ಸಹಜ ಗುಣಗಳಷ್ಟೇ. ತನಗೆ ಅರಿವಿಲ್ಲದಂತೆ ತನ್ನೊಳಗೆ ಎಷ್ಟೇ ಕ್ರೌರ್ಯ ಅಡಗಿದ್ದರೂ ಸ್ವಭಾವತಃ ಭಾವಜೀವಿಯಾಗಿರುವ ಮನುಷ್ಯನ ಅಸಹಾಯಕತೆಯ ಸಂಕೇತಗಳಿವು. ಅಚ್ಚಿಕೊಳ್ಳುವ, ಪ್ರೀತಿಸುವ, ಸ್ನೇಹಿಸುವ, ಒಡನಾಡುವ, ಬೇರ್ಪಡುವ, ದ್ವೇಷಿಸುವ, ಹಲ್ಲು ಮಸೆಯುವ, ಹಗೆ ಕಾರುವ- ಇಂತಹ ಅನೇಕ ಗುಣಗಳನ್ನು ಹೊಂದಿರುವ ದ್ವಂದ್ವಮಯ ಜೀವಿ ಮನುಷ್ಯ ಹೀಗೆ ತನ್ನ ಶೂನ್ಯವನ್ನು ತುಂಬಿಕೊಳ್ಳಲು, ತನ್ನ ಅಬ್ಬೇಪಾರಿತನಕ್ಕೊಂದು ದಾರಿ ಕಂಡುಕೊಳ್ಳಲು ಇನ್ನೊಬ್ಬ ಮನುಷ್ಯನೊಡಗಿನ ಇಂತಹ ಸಾಂಗತ್ಯ, ಸ್ನೇಹ, ಪ್ರೀತಿ ಬಯಸುವುದು ನಿಜಕ್ಕೂ ಆಶ್ಚರ್ಯದಾಯಕ. ತನ್ನ ಕರುವನ್ನು ಸಂತೆಯಲ್ಲಿ ಮಾರಿ ಬಂದಾಗ ಕೊಟ್ಟಿಗೆಯಲ್ಲಿ ಅದರ ಗೆಜ್ಜೆ ಸದ್ದು ಕೇಳಿಸದಾಗ, ಹಿತ್ತಿಲಿನಲ್ಲಿ ಅದರ ಹೆಜ್ಜೆ ಗುರುತು ಮೂಡದಿದ್ದಾಗ, ತನ್ನ ತುಂಬುಗೆಚ್ಚಲಿಗೆ ಅದು ಗುದ್ದಿ ಹಾಲು ಹೀರುತ್ತಿದ್ದದ್ದು ನೆನಪಾದಾಗ ಹಸುವಿನಂತಹ ಮೂಕಪ್ರಾಣಿಗಳೂ ಕೂಡ ಎಷ್ಟೋ ಸಲ ದುಃಖಿಸುತ್ತವೆ. ಆ ದುಃಖ. ಒಂಟಿತನ, ನೋವು ಅರಿತರೆ ಮಾತ್ರ ಗೊತ್ತಾಗುವುದು. ಎಷ್ಟೋ ಬಾರಿ ತನ್ನ ಪುಟ್ಟ ಮರಿ ನೆನಪಾಗಿ ಕಾಡಿನಲ್ಲಿ ಗುಂಪಿನ ನಡುವೆ ಮೇಯುವ ಕುರಿ ಒಂಟಿಯಾಗಿ ಊರಿನಲ್ಲಿ ತನ್ನ ಮರಿ ಇರುವ ಕೊಪ್ಪಲಿಗೆ ಓಡಿ ಹೋಗಿದ್ದೂ ಉಂಟು. ಸತ್ತ ಕಾಗೆಯ ಸುತ್ತ ಹಿಂಡು ಕಾಗೆಗಳು ಗೋಳಿಡುವ, ಒಂದರ ಮೇಲೆ ಒಂದು ಬಿದ್ದು ಹೊರಳಾಡುವ ನಾಯಿಮರಿಗಳು, ತನ್ನ ಹೊಟ್ಟೆಯನ್ನಪ್ಪಿ ಕೂತ ಮರಿಯನ್ನು ರಕ್ಷಿಸುವ ಸಲುವಾಗಿ ಏನು ಬೇಕಾದರೂ ಮಾಡುವ ಕೋತಿ- ಇವುಗಳನ್ನು ಸೂಕ್ಷ್ಮವಾಗಿ ಗಮನಿಸಬಹುದು.
ಇವೆಲ್ಲವುಗಳಿಂದ ನಾವು ಮನಗಾಣಬೇಕಾದುದು ಒಂದು ಜೀವಿಯ ಅಸಹಾಯಕತೆಯನ್ನು ಇನ್ನೊಂದು ಜೀವಿಯಿಂದಷ್ಟೇ ತುಂಬಲು ಸಾಧ್ಯ. ಮನುಷ್ಯ ಎಷ್ಟೇ ಸ್ವಾಲವಂಬಿಯಾದರೂ ಭಾವನಾತ್ಮಕ ವಿಷಯಗಳಲ್ಲಿ ಯಾವತ್ತಿಗೂ ಅವಲಂಬಿಯೇ. ಆತನಿಗೆ ತನ್ನ ಕಣ್ಣೀರು ಬಸಿದುಕೊಳ್ಳಲು ಒಂದು ಭುಜ ಬೇಕು, ತನ್ನ ಸಂಕಟವನ್ನು ತೋಡಿಕೊಳ್ಳಲು ಒಂದು ಕೇಳುವ ಮನಸು ಬೇಕೇಬೇಕು. ಹಾಗೆಯೇ ನದಿ, ಗಿಡ, ಮರ, ಪಕ್ಷಿ, ಹೂವು, ಸರೋವರ, ಬೆಟ್ಟ, ಕಣಿವೆ, ಜಲಪಾತ, ಕಾಡು, ಬೆಳದಿಂಗಳು, ತಂಗಾಳಿ, ಹಸಿರು ಇತ್ಯಾದಿಗಳೂ ಮನುಷ್ಯನ ಒಂಟಿತನವನ್ನು ದೂರಮಾಡಬಲ್ಲ ಔಷಧಿಗಳು. ಪುಸ್ತಕ, ಹಾಡು, ಸಂಗೀತ, ಸಿನಿಮಾ, ತನ್ನದೇ ಲೋಕಕ್ಕೆ ಕರೆದೊಯ್ದು ಆ ಕ್ಷಣದ ದುಗುಡವನ್ನು ದೂರ ಮಾಡಿದರೆ, ಒಂದೊಳ್ಳೆಯ ನೆನಪು ಕೂಡ ಮನುಷ್ಯನನ್ನು ಖಿನ್ನತೆಯಿಂದ ಪಾರು ಮಾಡುವುದರಿಂದ ಹೊರತಲ್ಲ.
ಇಷ್ಟೆಲ್ಲಾ ಹೇಳಿದ ಮೇಲೂ, ಇಷ್ಟೆಲ್ಲಾ ಚರ್ಚಿಸಿದ ಮೇಲೂ ನನ್ನ ಭಾರವಾದ ಮನಸು ಹಗುರವಾಯಿತೇ? ಬರೆಯದೇ ಬಿಟ್ಟ ಶ್ರೀನಗರ ಕಿಟ್ಟಿಯವರ ಸಿನಿಮಾದ ಗೀತೆಯನ್ನು ಮತ್ತೆ ಬರೆಯಬೇಕು ಅನ್ನಿಸಿತೇ? ಗೊತ್ತಿಲ್ಲ. ಏಕೆಂದರೆ ಮನಸು ಜಿಜ್ಞಾಸೆಗಳ ಹುತ್ತ.
-ಹೃದಯಶಿವ
*****
ಮನಸು ಮರ್ಕಟ. ಚೆನ್ನಾಗಿದೆ ಹೃದಯಶಿವ.
ಬಹಳ ಚಂದದ ಭಾವಾಭಿವ್ಯಕ್ತಿ… 🙂
ಈಗೀಗ, ನನಗೆ ಗೊತ್ತಿಲ್ಲದೆಯೇ, ನಿಮ್ಮ ಲೇಖನಗಳ ಫ್ಯಾನ್ ಆಗಿದ್ದೇನೆ ಹೃದಯ ಶಿವ. ನಿಮ್ಮ ಲೇಖನಗಳು ಮನ ತಟ್ಟುತ್ತವೆ. ಈ ಲೇಖನವೂ ಚೆನ್ನಾಗಿದೆ.
ನೋವ ಬಸಿರು ಹೊತ್ತ ಹೃದಯ
ತನ್ನ ಒಳಗೆ ಮರುಗಿದೆ
ಇರಿದ ಕಾಲನದೋ ಕಲ್ಲು ಹೃದಯ
ಎನುತ ಮನವು ಕುಂದಿದೆ…
ಹೃದಯಸ್ಪರ್ಶಿ ಬರಹ…
ತುಂಬಾ ಆಪ್ತವೆನಿಸುವಂತೆ ಬರೆದಿದ್ದೀರಿ.. ಕೆಲವು ನನ್ನ ಮನಸ್ಥಿತಿಯನ್ನು ಹೋಲುವಂತಿತ್ತು..
ತಾಯಿ ಆಗಿರಬಹುದು, ಮಗಳಾಗಿರಬಹುದು.. ಹೀಗೆ ಯಾವುದೋ ಒಂದು ಜೀವ ನಮ್ಮನ್ನು ಎಷ್ಟೋ ಸಲ ದುಡುಕದಂತೆ ತಡೆಯುತ್ತೆ ಅಲ್ವಾ ..? ಚೆನ್ನಾಗಿದೆ
ನಿಮ್ಮ ಬರಹ ಓದಿ ಖುಷಿ ಆಯ್ತು… ಈ ಭಾವಗಳ ಜಗದಲ್ಲಿ ಆಸರೆಗೊಂದು ನಮ್ಮವರು ಅಂತ ಯಾರೇ ಇದ್ದರೂ, ಏನೋ ಒಂದು ಶಕ್ತಿ.. ಬದುಕಿಗೆ ಸ್ಪೂರ್ತಿ…
ಎಲ್ಲರಿಗೂ ಧನ್ಯವಾದಗಳು. ಅಂದಹಾಗೆ ಶ್ರೀನಗರ ಕಿಟ್ಟಿಯವರು ನಟಿಸುತ್ತಿರುವ ಆ ಚಿತ್ರಕ್ಕೆ ಹಾಡು ಬರೆದೆ. ಮೊನ್ನೆ ಹಾಡಿಸಿದೆವು…
ಲೇಖನ ಇಷ್ಟವಾಯಿತು ಸರ್
ಹೃದಯವೊಂದು ಪುಟ್ಟದಾದ ನೊಂದ ಬಟ್ಟಲು,
ಪ್ರೀತಿ ಅದರ ಆಳದಲ್ಲಿ ಗೂಡು ಕಟ್ಟಲು,
ಶಾಂತಿ, ತೃಪ್ತಿ ಮನದ ಗೋಡೆ ಕದವ ತಟ್ಟಲು,
ಎಷ್ಟು ಚೆಂದ ಭಾವಗಳನು ಬಳಸಿ ಹೂಡಲು.
ನಿಮ್ಮ ಬರಹ ತುಂಬಾ ಭಾವನಾತ್ಮಕವಾಗಿದೆ.