ಮನಸಿದ್ದರೆ ಮಾರ್ಗ: ಸುರೇಶ್ ಮಡಿಕೇರಿ


 
ಮನುಷ್ಯ ಅಂದ ಮೇಲೆ ಅವನಿಗೆ ಹವ್ಯಾಸ ಎನ್ನುವುದು ಇದ್ದೇ ಇರುತ್ತದೆ. ಹವ್ಯಾಸ ಅಂದ ಮೇಲೆ ಸಾಧಾರಣವಾಗಿ ಅದು ಒಳ್ಳೆಯ ಹವ್ಯಾಸವಾಗಿರುತ್ತದೆ. ಆ ಹವ್ಯಾಸಗಳು ಜೀವನಕ್ಕೆ ಹೊಸ ಚೇತನವನ್ನು, ಜೀವನೋಲ್ಲಾಸವನ್ನು ತಂದು ಕೊಡುತ್ತದೆ. ಆದರೆ ನಮ್ಮಲ್ಲಿ  ಕೆಲವು ಚಟಗಳಿರುತ್ತವೆ. ಈ ಚಟ ಅನ್ನೋದು ಹೆಚ್ಚಾಗಿ ಬಹಳ ಕೆಟ್ಟದ್ದೇ ಆಗಿರುತ್ತದೆ. ಸುಖಿ ಮಾನವ ಫ್ಯಾಶನ್‌ಗಾಗಿ ಆರಂಭಿಸುವ ಈ ಚಟಗಳು ಮುಂದೆ ಅವನನ್ನೇ ದಾಸನನ್ನಾಗಿ ಮಾಡಿಬಿಡುತ್ತವೆ. ಆತನ ಜೀವನದ ಉತ್ಸಾಹ, ಉಲ್ಲಾಸಗಳು ಅವನಿಂದ ದೂರವಾಗುತ್ತವೆ. ಅದು ಮಧ್ಯಪಾನ ಸೇವನೆಯಾಗಿರಬಹುದು, ಧೂಮಪಾನವಾಗಿರಬಹುದು, ಗಾಂಜಾ, ಅಫೀಮು ಸೇವನೆಯಾಗಿರಬಹುದು. ಒಮ್ಮೆ ಈ ದುರಭ್ಯಾಸವನ್ನು ನಮ್ಮದಾಗಿಸಿಕೊಂಡೆವೆಂದರೆ ಆಮೇಲೆ ಅದನ್ನು ಬಿಡುವುದು ಬಹಳ ಕಷ್ಟ. ನಾನಿಂದು ನನ್ನ ಜೀವನದ ಅನುಭವದ ಮೇಲೆ ಮಧ್ಯ ವರ್ಜನೆಯ ಬಗ್ಗೆ ತಮ್ಮಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕೆಂದಿದ್ದೇನೆ.

"I thankful to all those who said no to me its because of them I did it myself. ಐನ್‌ಸ್ಟೀನ್ ಹೇಳಿದ ಈ ಮಾತು ನನಗೆ ಈ ಸಂದರ್ಭದಲ್ಲಿ ನೆನಪಾಗುತ್ತದೆ.  ಯಾಕೆಂದರೆ ತನ್ನ ಕಷ್ಟದ ಸಮಯದಲ್ಲಿ ಯಾರೂ ಸಹಾಯ  ಮಾಡದೇ ಇದ್ದಾಗ ಅವನು ತನ್ನ ಮನಸ್ಸಿನ ದೃಢತೆಯಿಂದ ಏನು ಸಾಧಿಸಿದ್ದಾನೋ ಬಹುಶ: ಅವನಿಗೆ ಬೇರೆ ಯಾರಾದರೂ ಸಹಾಯ ಮಾಡುತ್ತಿದ್ದರೆ ಅವನು ಈ ಮಟ್ಟಕ್ಕೆ ಏರುತ್ತಿರಲಿಲ್ಲವೋ ಏನೋ. ನಾನೇನೂ ಐನ್‌ಸ್ಟೀನೂ ಅಲ್ಲ, ವಿಜ್ಞಾನಿಯೂ ಅಲ್ಲ, ಯಾವ ಮೇಧಾವಿಯೂ ಅಲ್ಲ. ಸಾಮಾನ್ಯ ಮನುಷ್ಯನಾಗಿ ಅನುಭವದ ಹಿನ್ನೆಲೆಯಲ್ಲಿ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದೇನೆ.

ನಾನು ಐನ್‌ಸ್ಟೀನ್‌ನ ಉದಾಹರಣೆಯನ್ನು ಯಾಕೆ ನೀಡಿದ್ದೇನೆ ಅಂದರೆ ನಾವು ಕೂಡಾ ನಮ್ಮ ಜೀವನವನ್ನು ನಿರೂಪಿಸಿಕೊಳ್ಳಬೇಕು. ನಮ್ಮ ಜೀವನದ ರೂವಾರಿಗಳು ನಾವೇ ಹೊರತು ಬೇರೆ ಯಾರನ್ನೂ ಕಾಯುವುದಕ್ಕಾಗುವುದಿಲ್ಲ.  ಅದಕ್ಕಾಗಿ ನಮ್ಮ ಮನಸ್ಸಿನಲ್ಲಿ ದೃಢ ನಿರ್ಧಾರವನ್ನು ಮಾಡಿಕೊಳ್ಳಬೇಕು. ಕೆಲವೊಮ್ಮೆ ನಾವು ಯೋಚಿಸುವುದ್ದಿದೆ ನಾನು ಹೀಗೆ ಮಾಡದಿದ್ದರೆ…?, ನಾನು ಕುಡಿಯದಿದ್ದರೆ…? ನಾನು ಸಿಗರೇಟು ಸೇದದೇ ಇದ್ದರೆ…? ಈ ರೀತಿಯ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಆಗ ಒಮ್ಮೊಮ್ಮೊ ಪಶ್ಚಾತ್ತಪವೂ ನಮ್ಮನ್ನು ಕಾಡುವುದಿದೆ. 

ಬಂಧುಗಳೆ, ತಪ್ಪು ಮನುಷ್ಯನಿಂದ ಆಗೇ ಆಗುತ್ತದೆ. ನಾವು ಬಾಲ್ಯದಲ್ಲಿ ಮಾಡುವ ತಪ್ಪುಗಳಿಗಿಂತ ನಮ್ಮ ಕಾಲೇಜಿನ ಜೀವನದಲ್ಲಿನ ಪುಂಡಾಟಿಕೆಗಳಿಂದಲೇ ನಾವು ಹೆಚ್ಚಾಗಿ ತಪ್ಪು ದಾರಿಯನ್ನು ತುಳಿಯುತ್ತೇವೆ. ವಿನಾ ಕಾರಣ ತರಗತಿ ಬಂಕ್ ಮಾಡುವುದು, ಸ್ನೇಹಿತರೊಂದಿಗೆ ಹರಟೆ, ಬಾರ್, ಪಬ್ ಗಳಿಗೆ ಭೇಟಿ, ಏನೋ ಹೊಸತನ್ನು ಪ್ರಯತ್ನಿಸುವ ಹುಚ್ಚು ಇವುಗಳಿಗೆ ಹೆಚ್ಚು ಗಮನ ಹರಿಸುತ್ತೇವೆಯೇ ಹೊರತು ಜೀವನಕ್ಕೆ ಹೊಸ ದಾರಿಯನ್ನು ತೋರಬಲ್ಲ ವಿದ್ಯೆಯ ಕಡೆಗೆ ನಮ್ಮ ಗಮನ, ಒಲವು ಕಡಿಮೆಯಾಗುತ್ತಾ ಹೋಗುತ್ತದೆ. ನಮಗಿರುವ ಸೌಲಭ್ಯಗಳ ಮಿತಿಯಲ್ಲಿ ಸಂತೃಪ್ತಿಯ ಜೀವನ ನಡೆಸಿದಾಗ ಬಾಳು ಭವ್ಯವಾಗುತ್ತದೆ. ಮಾನವನ ಆಶೆಗಳಿಗೆ ಮಿತಿಯೇ ಇಲ್ಲ. ಅವು ಅನಂತವಾಗಿ, ನಿರಂತರವಾಗಿ ನಾವು ಅದನ್ನು ಬೆಳೆಸಿಕೊಂಡು ಹೋದಂತೆ ನಿರಾತಂಕವಾಗಿ ನಮ್ಮೂಂದಿಗೆ ಇರುತ್ತವೆ. ಅದಕ್ಕೆ ಕಡಿವಾಣ ಹಾಕಬೇಕಾದವರು ನಾವೇ. ಹುಚ್ಚು ಮನಸ್ಸಿನ ಹಲವಾರು ಮುಖಗಳು ನಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುತ್ತವೆ. ಅವುಗಳ ಬೆನ್ನು ಹತ್ತಿದರೆ ಅತ್ಯಂತ ಹೀನಾಯವಾದ ಮತ್ತು ಎಲ್ಲರಿಂದಲೂ ತುಚ್ಚೀಕರಿಸಲ್ಪಟ್ಟ ಬದುಕನ್ನು ನಾವು ಬಾಳಬೇಕಾಗುತ್ತದೆ. ಎಲ್ಲಿಯೂ ನಮಗೆ ಗೌರವ ಸಿಗುವುದಿಲ್ಲ. ಯಾರಿಂದಲೂ ಪ್ರೀತಿ ದೊರೆಯುವುದಿಲ್ಲ.

 ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಅಂದು ಕಲಿತ ವ್ಯಸನಗಳಿಂದ ಮುಕ್ತಿ ಸಿಗುವುದಿಲ್ಲವೇ? ಎನ್ನುವುದು ನಮ್ಮೆದುರಿಗೆ ಇರುವ ಪ್ರಶ್ನೆ. ಸಾಧ್ಯವಿದೆ. ಆದರೆ ನಮ್ಮ ಮನಸ್ಸಿನಲ್ಲಿ ಧ್ರಢತೆ ಇರಬೇಕು. ಅದರ ಬಗ್ಗೆ ಚಿಂತಿಸಬೇಕು.  ಆ ಚಿಂತನ ಮಂಥನದಿಂದ ನಮಗೆ ದುಶ್ಚಟಗಳ ಒಳಿತು ಕೆಡುಕುಗಳ ಬಗ್ಗೆ ಸ್ಪಷ್ಟ ಚಿತ್ರಣ ನಮ್ಮೆದುರು ಮೂಡಿ ಬರುತ್ತದೆ. ಕೆಲವರು ದುಶ್ಚಟಗಳಿಂದ ಹೊರಬರುವ ಇಚ್ಛೆಯುಳ್ಳವರಾಗಿರುತ್ತಾರೆ. ಆದರೆ ಆ ಚಟದಿಂದ ಹೊರಬರುವುದು ಅವರಿಗೆ ಅಷ್ಟು ಸುಲಭ ಸಾಧ್ಯವಾಗುವುದಿಲ್ಲ. ಮಧ್ಯವ್ಯಸನದತ್ತ ನಮ್ಮ ದೃಷ್ಟಿ ಹರಿಸಿದಾಗ ಕುಡಿಯುವುದು ಮತ್ತು ಕುಡಿಸುವುದು ಎರಡೂ ತಪ್ಪು. ಮಧ್ಯ ಎನ್ನುವುದು ವಿಷ. ಒಂದು ನಾವು ಹಾಳಾಗುವುದು ಮಾತ್ರವಲ್ಲ ಇತರರ ಬಂಗಾರದಂತಹ ಜೀವನವನ್ನು ನಮು ಕೈಯ್ಯಾರೆ ಹಾಳುಮಾಡುತ್ತೇವೆ. ಅದೇ ರೀತಿ ಇತರ ವ್ಯಸನವೂ ಹಾಗೆ ನಾವು ಅದರ ದಾಸರಾಗುವುದು ಮಾತ್ರವಲ್ಲದೆ ನಮ್ಮ ಸ್ನೇಹಿತರನ್ನೂ ದಾಸರನಾಗಿಸುತ್ತೇವೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಯೋಚನೆಯನ್ನು ನಾವು ಮಾಡಿಕೊಳ್ಳಬೇಕು.

ಮಧ್ಯ ನಿರೋಧ ಮಾಡುವಲ್ಲಿ ಅಹರ್ನಿಶಿ ಹೋರಾಟ ನಡೆಯುತ್ತಲೇ ಇರುತ್ತದೆ. ಆದರೆ ಇದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಯಾಕೆಂದರೆ ಕುಡಿಯುವವನು ಹೇಗಾದರೂ ಮಾಡಿ ಕುಡಿಯುತ್ತಾನೆ. ನಾನು ಹೇಳುವುದೇನೆಂದರೆ ಮಧ್ಯ ನಿರೋಧಕ್ಕಿಂತ ಮಧ್ಯ ವರ್ಜನೆಗೆ ನಾವು ಹೆಚ್ಚು ಒತ್ತುಕೊಡಬೇಕು.  ಅವನು ತನ್ನ ಮನಸ್ಸಿನಲ್ಲಿ ತಂದುಕೊಂಡು ಸ್ವತ: ಇಚ್ಚೆಯಿಂದ ಅದನ್ನು ವರ್ಜಿಸುವ ಪ್ರಯತ್ನ ಮಾಡಬೇಕು. ಮಧ್ಯಪಾನದಿಂದ  ಸಮಾಜಕ್ಕೆ, ಅವನ ಪರಿವಾರಕ್ಕೆ, ಅವನನ್ನೇ ನಂಬಿ ಬದುಕುತ್ತಿರುವ ಅವನ ಮಡದಿ ಮಕ್ಕಳಿಗೆ ಆಗುವ ನೋವು, ತೊಂದರೆಗಳನ್ನು ಅವನಿಗೆ ಮನದಟ್ಟಾಗುವಂತೆ ತಿಳಿಹೇಳಬೇಕು. ಆತ ಯಾವುದೇ ಒತ್ತಡವಿಲ್ಲದೆ ಸ್ವಯಂ ಇಚ್ಚೆಯಿಂದ ಮಧ್ಯವರ್ಜನೆಯನ್ನು ಮಾಡುವ, ಮಾಡಿಸುವ ಪ್ರಯತ್ನ ನಮ್ಮದಾಗಬೇಕು. ಹಾಳಾಗುವ ಜೀವಕ್ಕೆ ಸಾಂತ್ವನ ನೀಡಿ ಸುಂದರ ಜೀವನವನ್ನು ನೀಡಿದ ಭಾಗ್ಯವಂತರು ನಾವಾಗಬಹುದಲ್ಲವೇ? ಆದರೆ ಅದಕ್ಕೆ ಆ ವ್ಯಸನಿ ತನಗಾಗುವ ತೊಂದರೆಗಳನ್ನು ಅರ್ಥೈಸಿಕೊಳ್ಳಬೇಕು.. ನನ್ನ ಸ್ನೇಹಿತನೊಬ್ಬ ಇದಕ್ಕೆ ಜೀವಂತ ಉದಾಹರಣೆ. ಆತ ವಿಪರೀತ ಕುಡಿಯುತ್ತಿದ್ದ. ಮಧ್ಯವಿಲ್ಲದ ಅವನ ದಿನವನ್ನು ಕಲ್ಪಿಸುವುದೂ ಸಾಧ್ಯವಿಲ್ಲ. ಅಂತಹ ವ್ಯಕ್ತಿ ತನ್ನವರಿಗಾಗಿ, ತನ್ನ ಪ್ರೀತಿ ಪಾತ್ರರಿಗಾಗಿ ಆ ವ್ಯಸನದಿಂದ ಹೊರಬಂದು ಸುಮಾರು ೩ ವರ್ಷಗಳೇ ಕಳೆಯಿತು. ಹಾಗಿದ್ದರೆ ಮನಸ್ಸಿದ್ದರೆ ಮಾರ್ಗ ಅಲ್ಲವೇ ಸ್ನೇಹಿತರೆ? ಪ್ರಯತ್ನಕ್ಕೆ ಮೀರಿದ್ದು ಯಾವುದೂ ಇಲ್ಲ. ಆದರೆ ನಮ್ಮಲ್ಲಿ ದೃಢ ನಿಶ್ಚಯವಿರಬೇಕು. ನಾವೆಲ್ಲರೂ ಮನಸ್ಸು ಮಾಡಿದರೆ ದುಶ್ಚಟಗಳಿಂದ ಹೊರಬಂದು ನಮ್ಮ ಬಾಳನ್ನು ಬಂಗಾರವಾಗಿಸಬಹುದು. ನಮ್ಮ ಜೀವವನ್ನೇ ಹಿಂಡಿ ಹಿಪ್ಪೆ ಮಾಡುವ ಆ ದುರಭ್ಯಾಸಗಳಿಂದ ಹೊರಬಂದು ಅದಕ್ಕಿಂತ ಸುಂದರ ಜಗತ್ತು ನಮ್ಮೆದುರಿಗಿದೆ. ಅದನ್ನು ಅನುಭವಿಸಿದಾಗ ನಮ್ಮಷ್ಟು ಸುಖಿಗಳು ಈ ಜಗತ್ತಿನಲ್ಲಿ ಯಾರೂ ಇಲ್ಲ ಎನ್ನುವ ಅನುಭವವಾಗುವುದರಲ್ಲಿ ಎರಡು ಮಾತಿಲ್ಲ.
-ಸುರೇಶ್ ಮಡಿಕೇರಿ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x