ಮನದ ಗೋಡೆಗೆ ಒಲವ ಸಿಂಚನ- ಪನ್ನೀರು: ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಕೃತಿ- ಪನ್ನೀರು( ಹನಿಗವನ ಸಂಕಲನ)
ಕವಿ- ಪರಮೇಶ್ವರಪ್ಪ ಕುದರಿ
ಪ್ರಕಾಶನ- ಹರಿ ಪ್ರಕಾಶನ
ಮುದ್ರಣ- ಸ್ವ್ಯಾನ್ ಪ್ರಿಂಟರ್ಸ್
ಬೆಲೆ- ಒಂದು ನೂರು ರೂಗಳು

ಎಲ್ಲ ನಲಿವಿಗೂ
ಪ್ರೀತಿಯೇ ಪ್ರೇರಣೆ
ಎಲ್ಲಾ ನೋವಿಗೂ
ಪ್ರೀತಿಯೇ ಔಷಧಿ!
ಮತ್ತೇಕೆ ಜಿಪುಣತನ
ಕೈ ತುಂಬಾ ಹಂಚಿ
ಎದೆ ತುಂಬಾ ಹರಡಿ( ಪ್ರೀತಿಯೇ ಔಷಧಿ)

ಮಾನವೀಯ ಅಂತಃಕರಣ ಹೊಂದಿದ ಪ್ರತಿ ಮನುಷ್ಯ ನೂ ಕವಿಯೇ! ಹೀಗಿರುವಾಗ ಕವಿ ಮನದಿ ಇಂತಹ ದೇದಿಪ್ಯಮಾನದ ಹೊಳಹಿನ ಸಾಲೊಂದು ಹೊಳೆದರೆ ಅದು ಸ್ವಸ್ಥ ಸಮಾಜದ ಕುರುಹು.
ಪರಮೇಶ್ವರಪ್ಪ ಕುದರಿ ಪ್ರೌಢಶಾಲಾ ಅಧ್ಯಾಪಕರಾಗಿ,ಗಾಯಕ ರಾಗಿ, ಮಿಮಿಕ್ರಿ ಕಲಾವಿದರು ಆಗಿ ನಾಡಿನಾದ್ಯಂತ ಪರಿಚಿತರಾಗಿದ್ದಾರೆ. ಬಹುಮುಖ ಪ್ರತಿಭೆಯಾದರೂ ಕವಿಯಾಗಿ ಇವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಇವರಿಗಿಂತ ಇವರ ಬರಹ ಮಾತನಾಡುತ್ತದೆ.ಈಗಾಗಲೇ ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ಕೃತಿರತ್ನಗಳನ್ನು ಕೊಡಮಾಡಿದ ಕುದರಿ ಸರ್ ಇದೀಗ ‘ ಪನ್ನೀರು’ ಎಂಬ ಪ್ರೇಮ ಹನಿಗವನ ಸಂಕಲನದ ಮೂಲಕ ಸಹೃದಯರ ಮುಖಾಮುಖಿ ಆಗಿದ್ದಾರೆ.

ನೀ ನನ್ನವಳಾಗ
ಬೇಕೆಂದು
ಭೂಮಿ ತಾಯಿನ್ನ
ಬೇಡಿಕೊಂಡೆ!
ನಿಮ್ಮ ತಾಯಿನ
ಕೇಳೋದು ಮರೆತುಬಿಟ್ಟೆ!( ಮರೆತೆ)

ಅರೆರೆ ಕವಿ ಭಾವವೇ….ಬೇಕಾದ್ದನ್ನು ಬೇಕಾದವರಿಂದಲೇ ಕೇಳಿ ಪಡೆಯಬೇಕು. ಹಾಗಾದಾಗ ಅದಕ್ಕೊಂದು ಸಾರ್ಥಕತೆ. ಇಂತಹ ಛಕ್ಕೆನ್ನು ವ ಸೆಳಕುಗಳು ಕುದರಿ ಮಾಸ್ತರರ ಪ್ರಯೋಗ ಶೀಲತೆಗೆ ಉದಾಹರಣೆ!

ಒಲವಿನ ಆರಾಧನೆಯಲ್ಲಿ ಇಡೀ ಜಗತ್ತಿನ ಯುವಸಮೂಹವೇನು , ಯಾವ ವಯೋ ಬೇಧ ತೋರದೇ ತೊಡಗಿವೆ. ಪ್ರೀತಿ ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲೂಬಾರದು. ಪ್ರೀತಿ ಇಲ್ಲದ ಮೇಲೆ …..ಅನ್ನುವ ಜಗತ್ಪ್ರಸಿದ್ಧ ಕವಿತೆಯ ಮೂಲಕ ಜಿ.ಎಸ್. ಶಿವರುದ್ರಪ್ಪ ಅವರು ಮನೆ ಮಾತಾಗಿದ್ದಾರೆ. ಒಲವಿಲ್ಲದೇ ಅದಾವ ಫಲವೂ ದೊರೆಯದು. ಪನ್ನೀರ ಮಣಿಮಾಲೆಯೂ ಕೂಡ ಒಲವ ಸಿಂಚವನ್ನು ಮನದ ಗೋಡೆಯ ತುಂಬಾ ನವಿರಾಗಿ ಸಿಂಪಡಿಸುತ್ತದೆ.

ಜನಜಂಗುಳಿ
ನಡುವೆ
ಅವಳನ್ನು ಕಂಡೆ
ಅವಳನ್ನೇ
ನನ್ನವಳಾಗಿಸಿಕೊಂಡೆ
ಅಂದಿನಿಂದ
ನನ್ನ ಬಾಳು ಸಂಡೆ!( ಸಂಡೆ)

ವೀಕೆಂಡೆಂಬ ಮಜಬೂತು ಮಜ ಮಾಡುವ ದಿನಗಳ ಮೋಹಕತೆಗೆ ಮರುಳಾಗದವರೇ ಇಲ್ಲ! ಅಂತಹ ಭಾನುವಾರ ಇಡೀ ಜನುಮವಾದರೆ ಆ ಪ್ರೇಮಿಯ ಪಾಡೇನು….ಒಲವೇ ಒಲವು ತುಂಬಿ ತುಳುಕಾಡುತ್ತದೆ. ಆ ನಿಟ್ಟಿನ ಹನಿಕಾವ್ಯ ಮಹಾಕಾವ್ಯದ ಮಜಲಿನ ಮಹತ್ತಾಗಿದೆ.

ಗೆಳತಿ
ಬಲವಾಗಿ ಒಮ್ಮೆ
ಅಪ್ಪಿಕೋ ನನ್ನನು!
ಬದುಕಲು
ಬಲವಾದ
ಕಾರಣವೊಂದು
ಸಿಕ್ಕಂತಾಗುತ್ತೆ!( ಕಾರಣ)……

ಅಷ್ಟೇ ನೋಡಿ ಪ್ರೀತಿಸುವವನಿಗೆ ಬದುಕಲು ಒಂದೇ ಒಂದು ಕಾರಣ ಬೇಕು; ಅದೂ ಅವಳೊಲವಿನ ಗಟ್ಟಿಯಾದ ಅಪ್ಪುಗೆಯಾದರೂ ಆಹಾ…ಸಾಕು…ಬಾಳು ಧನ್ಯ.

ಇಂತಹ ನೂರಾರು ಪ್ರೇಮ ಕಾವ್ಯ ಹನಿಗಳು ಪನ್ನೀರ ಹೂಜಿಯಲ್ಲಿ ಅಡಗಿವೆ. ಜೊತೆಯಲ್ಲಿ ಸಾಮಾಜಿಕ ಚಿಂತನೆಯ ಹನಿಗವನಗಳು ಕಾಡುತ್ತವೆ.

ಕಿರಿದರೊಳ್ ಪಿರಿದೆಂಬಂತೆ ಬಿಂದುವಿನಲ್ಲಿ ಸಿಂಧು ದರ್ಶನ ಗೈವ ಪರಿ ಪನ್ನೀರು ಕಾಲುವೆಯಲ್ಲಿ ಬಹುವಾಹಿ ಸಿಹಿ ನೀರೇ ಹರಿದಿದೆ.ಸಹೃದಯ ದೊರೆ ಬೊಗಸೆಯೊಡ್ಡಿ ಬಾಚಿ ಕುಡಿದಿದ್ದೇ ಆದರೆ ಮೈಮನವೆಲ್ಲಾ ಪ್ರೀತಿ ಚಿಲುಮೆಯ ಸಣ್ಣ ಸಿಂಚನವಾಗುವುದರಲ್ಲಿ ಸಂಶಯವಿಲ್ಲ.

ಇಡೀ ಪದ್ಯ ತೆರೆದಿಡುತ್ತಾ ಹೋದಲ್ಲಿ ಬಯಲೇ ಬಯಲಾಗಿ ಕಾಡುವುದು, ಸ್ವಾದವಡಗಿ ಸೊರಗುವುದು. ಮುದ್ದಾದ ಪುಸ್ತಕ ಇದೆ. ಕೈಲಿ ಹಿಡಿದರೇ ಮೃದು ಮಧುರ ಗುಲಾಬಿ ಪಕಳೆ ಸೋಕಿದ ಸ್ಪರ್ಷಾನುಭವ.
ಒಳ ಹೂರಣವೂ ಒಬ್ಬಟ್ಟ ಮೀರಿಪ ಸಾಧು- ಸಾಧ್ಯತೆ. ಕವಿಮನದ , ಪ್ರೀತಿ ಹಾದಿಯ, ಒಲುಮೆ ಹಾಡಿಗೆ ಜೀವನಾಡಿಯಾಗಬಯಸುವ ಸಕಲರೂ ಒಮ್ಮೆ ಓದಬಹುದಾದ ಒಲವ ಹೊತ್ತಿಗೆಯಿದು.
ಪ್ರೇಮಿಗಳಲ್ಲದಿದ್ದರೂ ಓದಿದೊಡೆ ಒಲವ ಮಧುರ ಕಡಲಿನೊಲು ಜಾರುವುದು ಖಚಿತ.

ತಣ್ಣನೆಯ ಭಾವದ ಮೂಲಕ ನವಿರಾದ ಪ್ರೇಮ ಹನಿಗವನ ಕೃತಿ ಇದು ಓದಲು ತಕ್ಕುದಾಗಿದೆ.

ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x