ಸೃಜನಶೀಲ ಸಮಾನ ಮನಸ್ಸುಗಳು ಒಂದೇಡೆ ಸೇರಿಕೊಂಡು ರಂಗಭೂಮಿಯಲ್ಲಿ ನೆಲೆ ನಿಲ್ಲಬೇಕೆಂಬ ತೀವ್ರ ಹಂಬಲದೊಂದಿಗೆ ಭವಿಷ್ಯದ ಜಾಗೃತಿಯ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಲು ಉದಯೋನ್ಮುಖ ಪ್ರತಿಭೆಗಳ ಸಂಗಮವಾಗಿ ’ಥಿಯೇಟರ್ ಸಮುರಾಯ್’ ಉದಯವಾಗಿ ನಾಲ್ಕು ವರ್ಷಗಳು ಸರಿದು ಸರಿಯಾಗಿ ಐದನೇ ವರ್ಷಕ್ಕೆ ಮುಂದಡಿಯಿಡುತ್ತಿದೆ. ಈ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಹಲವಾರು ಪಲ್ಲಟಗಳು, ಸ್ಥಿತ್ಯಂತರಗಳು ಘಟಿಸಿವೆ. ಇಂತಹ ನಿರಂತರ ಬದಲಾವಣೆಯ ಪ್ರಸ್ತುತ ಪ್ರಸಂಗದಲ್ಲಿ ತಮ್ಮ ಹಲವಾರು ರಂಗಪ್ರಯೋಗಗಳ ಮೂಲಕ ಗಮನ ಸೆಳೆದಿರುವ ’ಥಿಯೇಟರ್ ಸಮುರಾಯ್’ ತಂಡವು ಈ ಸಲ ಸ್ಪೇನ್ ರಂಗಕರ್ಮಿ ಫೆಡರಿಯೋ ಗಾರ್ಸಿಯಾ ಲೋರ್ಕ ರಚಿಸಿದ ಮತ್ತು ಅಕ್ಷರ ಕೆ.ವಿ. ಅವರು ಸಂಶ್ಲೇಷಣೆ ಮಾಡಿದ ಕನ್ನಡರೂಪ ಮಾಡಿರುವ ’ಚಮ್ಮಾರನ ಹೆಂಡತಿ’ ರಂಗಕೃತಿಯ ಪ್ರದರ್ಶನವೊಂದು ಧಾರವಾಡದ ರಂಗಾಯಣದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡು ವಾರಗಳೆರಡೂ ಕಳೆದರೂ ರಂಗಾಸಕ್ತರ ನಡುವೆ ಚರ್ಚೆಯಾಗುತ್ತಿರುವುದು ಸೋಜಿಗದ ಸಂಗತಿ.
ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ರಚನೆಗೊಂಡು ಇಂದಿಗೂ ಪ್ರದರ್ಶನಗೊಳ್ಳುತ್ತಿರುವ ಈ ನಾಟಕದ ಕೇಂದ್ರ ಬಿಂದು ಹೆಮ್ಮಾರಿಯಂತಿರುವ ಚಮ್ಮಾರನ ಹೆಂಡತಿ. ಇದೊಂದು ರೀತಿ ಅರ್ಥವಾಗದ ಮತ್ತು ಅರ್ಥವಿಲ್ಲದ, ಮಲ್ಟಿ ಡೈಮೆನ್ಸನ್ ಕಥಾನಕವೆನ್ನಬಹುದು. ಮಹಾಯುದ್ಧಗಳು ಘಟಿಸುವ ಸಂದರ್ಭದ ಒಬ್ಬ ನಡು ವಯಸ್ಸಿನ ಸಾದಾ ಸವಕಲು ಚಮ್ಮಾರನ ಯುವ ಹೆಂಡತಿಯಾಗಿರುವ ಇವಳು ಕೆಣಕಿದವರಿಗೆ ಢಾಕಿನಿ ಮತ್ತು ಉನ್ಮತ್ತ ಸ್ವರೂಪಿಣಿ. ಆದರೆ ತನ್ನಂತರಂಗದಲ್ಲಿ ತನ್ನದೇ ಭಾವಲೋಕವನ್ನು ಕಾಫಿಟ್ಟುಕೊಂಡ ಮಹಿಳೆ. ಸಾಮಾನ್ಯವಾಗಿ ಇದು ಎಲ್ಲರ ಮನೆಯಲ್ಲಿ ವಿಶೇಷವಾಗಿ ಎಲ್ಲಾ ಹೆಣ್ಣು ಮಕ್ಕಳ ಕಥಾನಕವಾಗಿದೆ. ಇಲ್ಲಿ ಗಂಡು-ಹೆಣ್ಣು ಎರಡೂ ಅಲ್ಲದಿರುವ ಆತ್ಮಗಳ ವಿಶ್ವಾಸದ ಕಥನರೂಪವಾಗಿದೆ. ತಮ್ಮ ಕಲ್ಪನಾವಿಲಾಸಕ್ಕೆ ತಾವೇ ಮನಸೋಲುವವರ ರಂಪರಾಮಾಯಣದಂತಿದೆ. ಇರುವುದನ್ನು ಬಿಟ್ಟು ಇಲ್ಲದುದರ ಕಡೆಗೆ ಹೋಗುತ್ತಾ ; ನಿರಾಶೆಯಾಗಿ ಮತ್ತೇ ಮೂಲಕ್ಕೆ ಮರಳುವ ಮತ್ತು ಮರಳುವ ಮೊದಲು ತಮ್ಮ ಶವಪೆಟ್ಟಿಗೆ ತಾವೇ ಸಿದ್ಧಪಡಿಸಿಕೊಳ್ಳುತ್ತಾ, ಕೊನೆ ಕ್ಷಣದಲ್ಲಿ ಬುದ್ಧಿಗೆ ಮಿಂಚು ಹೊಡೆದು ಎಚ್ಚರಗೊಂಡು ಸಂಕಟದಿಂದ ಪಾರಾಗಿ ಬರುವ ಜಾಣತನ ಮತ್ತು ಚೆಲುವಿನಿಂದ ಕಂಗೊಳಿಸುವ ಉಪದ್ವಾಪಿ ಹೆಂಡತಿಯೆಂಬ ಸ್ತ್ರೀಯೊಬ್ಬಳ ಮನೋಸ್ಥಿತಿಯ ಕುರಿತ ರಂಗಪ್ರದರ್ಶನ. ಹಾಗೇ ನೋಡಿದರೆ ಇಲ್ಲದ ಅರ್ಥವನ್ನು ಸೃಷ್ಟಿಸುವ ನಾಟಕವಾಗಿದೆ. ಇಂತಹ ನಾಟಕವನ್ನು ಯುವ ಪ್ರತಿಭೆಗಳಿಗಾಗಿ ನಿದೇರ್ಶನ ಮಾಡಿದವರು ಸತೀಶ ತಿಪಟೂರು ಮತ್ತು ಸಂಗೀತ ಸಂಯೋಜನೆ ಮಾಡಿದವರು ಶ್ರೀನಿವಾಸ್ ಚೈತನ್ಯ. ಇವರೊಂದಿಗೆ ಅವಿನಾಶ ರೈ, ಬಿಂದು ರಕ್ಷಿದಿ, ಹರೀಶ್ ಕುಮಾರ, ಜಗದೀಶ, ಮೋಹನ ಖೇಣಿ, ಸ್ಮೀತೇಶ್, ಯೋಗೇಶ ಶೆಟ್ಟಿ, ಪುರುಷೋತ್ತಮ್, ರೂಪಾ ಸಿ.ಆರ್ ಮುಂತಾದವರು ತಮ್ಮ ಪೌಢ ಅಭಿನಯದಿಂದ ಧಾರಾನಗರಿಯ ರಂಗಾಸಕ್ತರ ಗಮನ ಸೆಳೆದರು. ಇಂತಹ ವಿಶಿಷ್ಟ ಪ್ರಯೋಗವನ್ನು ಆಯೋಜನೆ ಮಾಡಿದ ಸಮುದಾಯ ಮತ್ತು ಸ್ನೇಹಿತರು ಮೆಚ್ಚುಗೆಗೆ ಅರ್ಹರು.
****
Very nice review. More such reviews should be published.