ಮೊನ್ನೆ ಟಿವ್ಹಿ ಒಳಗ ಒಂದ ಕ್ವಿಜ್ ಶೋ ನೋಡ್ಲಿಕತ್ತಿದ್ದೆ. ಭಾಗವಹಿಸಿದವರು ಸುಮಾರು ೧೬ ರಿಂದ್ ೧೮ ವಯಸ್ಸಿನ ಒಟ್ಟು ಎಂಟ ಮಂದಿ ಇದ್ರು. ನಾಲ್ಕ ಗುಂಪ ಮಾಡಿದ್ರು. ಒಂದ ಗುಂಪಿನ್ಯಾಗ ಇಬ್ಬರು, ಭಾಗವಹಿಸಿದ ಹುಡುಗರ ಪರಿಚಯ ಮಾಡಿಕೊಟ್ಟು, ಪ್ರಶ್ನೆಗಳನ್ನ ಕೇಳಲಿಕ್ಕೆ ಶುರು ಮಾಡಿದ್ರು. ಎಷ್ಟ ಸರಳ ಪ್ರಶ್ನೆ ಅದು," ಕೌರವರ ತಂದೆ ಯಾರು?" ಅದಕ್ಕ ಅವರು ಕೊಟ್ಟ ಉತ್ತರಾ "ಅರ್ಜುನ" ಅಂತ. ಅದನ್ನ ಕೇಳಿ ನಾ ದಂಗ ಬಡಧಂಗ ಕುತಿದ್ದೆ. ನಮ್ಮ ಹಿಂದುಗಳ ಪವಿತ್ರ ಗ್ರಂಥ ಮತ್ತ ನಮ್ಮ ಭಾರತೀಯರ ಧಾರ್ಮಿಕ ಜೀವನಕ್ಕ ಮಾರ್ಗದರ್ಶನ ಆದಂಥಾ ಮಹಾಭಾರತದ ಬಗ್ಗೆ ಈಗಿನ ಯುವಕರಿಗೆ ಇರೊಹಂತಾ ಕ್ಷೀಣ ಜ್ಞಾನ ನೋಡಿ ಖರೇನು ಭಾಳಾ ಬ್ಯಾಸರಾತು. ಮುಂದಿನ ಪ್ರಶ್ನೆ,"ಕೆಂಪು ವರ್ಣ ಹೊಂದಿರುವ ಗ್ರಹ ಯಾವದು?" ಅದಕ್ಕ ಯಾರಿಗೂ ಉತ್ತರಾ ಗೊತ್ತಿರಲಿಲ್ಲಾ, ಅದಕ್ಕ ಆ ನಿರೂಪಕಿ ನಕ್ಕೋತ ಸ್ಟೈಲಾಗಿ ಹೊಗ್ಲಿ "ನಾವು ಯಾವ ಪ್ಲಾನೇಟ್‍ನಲ್ಲಿದ್ದೀವಿ ಅಂತಾನಾದ್ರು ಹೇಳತಿರಾ" ಅಂತ ಅಂದದ್ದಕ್ಕ, ಒಂದ ಗುಂಪಿನಿಂದ "ಮಾರ್ಸ್" ಅಂತ ಮತ್ತ ಇನ್ನೊಂದ ಗುಂಪಿನಿಂದ "ಮರಕ್ಯೂರಿ" ಅಂತ ಉತ್ತರಾ ಬಂತು, ಅದನ್ನ ಕೇಳಿ ನಾ ಅಂತು ಹೈರಾಣ ಆಗಿ ಹೊದೆ. ತೀರಾ ನಾವು ಭೂಮಿ ಮ್ಯಾಲೆ ಇದ್ದೇವಿ ಅನ್ನೊ ಸಾಮಾನ್ಯ ಪರಿಜ್ಞಾನ ಸುಧ್ಧಾ ಈಗಿನವರಿಗೆ ಇಲ್ಲಂದ್ರ ಅವರು ಅದೆಂಥಾ ಮಾರ್ಗದರ್ಶನದಾಗ ಬೇಳಿಲಿಕತ್ತಾರ ಅನ್ನೊದ ವಿಚಾರ ಮಾಡೋ ಸಂಗತಿನ ಮತ್ತ. ಇದ ಪರಿಸರ ಮಕ್ಕಳಿಗೆ ಸಿಗಲಿಕ್ಕತ್ತಂದ್ರ ಬರೇ ಈ ಭೌಗೋಲಿಕ, ಐತಿಹಾಸಿಕ, ಧಾರ್ಮಿಕ ವಿಚಾರಗಳನ್ನಷ್ಟ ಅಲ್ಲಾ ಮಾನವೀಯ ಸಂಬಂಧಗಳನ್ನು ಸುಧ್ಧಾ ಮರೆಯುವ ಅಂಥಾ ಪರಿಸ್ಥಿತಿ ಬಂದರು ಆಶ್ಚರ್ಯ ಎನಿಲ್ಲಾ.
ನಾವ ಸಣ್ಣವರಿದ್ದಾಗ ಸ್ಕೂಲನ್ಯಾಗ ರಾಮಾಯಣ, ಮಹಾಭಾರತ, ಶ್ರೀಕೃಷ್ಣ ಪರಿಕ್ಷಾಗಳನ್ನ ನಡಸತಿದ್ರು. ಮತ್ತ ಅದರ ಜೊತಿಗೇನ ರೆಡ್-ಕ್ರಾಸ್, ಪ್ರಥಮ ಚಿಕಿತ್ಸೆ, ಬೌಧ್ಧಿಕ ಪರಿಕ್ಷಾಗಳು ನಡಿತಿದ್ವು. ಪರಿಕ್ಷಾಪೂರ್ವ ಈ ಎಲ್ಲಾ ವಿಷಯಗಳ ಬಗ್ಗೆ ನಮಗ ತರಬೇತಿ ಕೊಡ್ತಿದ್ರು. ಮತ್ತ ಪ್ರತಿ ವಾರಾ ಮನೆಕೆಲಸ ಅಂತಾ ಒಂದಿಷ್ಟು ಕ್ರಿಯಾತ್ಮಕ ಚಟುವಟಿಕೆಗಳನ್ನ ಮಾಡಲಿಕ್ಕೆ ಕೊಡತಿದ್ರು. ಒಂದೊಂದ ವಾರಾ ಒಂದೊಂದ, ಬ್ಯಾರೆ ಬ್ಯಾರೆ ನಮೂನಿ ಪಕ್ಷಿಗಳ ಚಿತ್ರಾ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ, ಹಣ್ಣುಗಳ ಚಿತ್ರ, ಹೂವುಗಳ ಚಿತ್ರ, ಸಾಕು ಪ್ರಾಣಿಗಳ ಚಿತ್ರ, ಕಾಡುಪ್ರಾಣಿಗಳ ಚಿತ್ರಗಳನ್ನ ಸಂಗ್ರಹ ಮಾಡಿ ದೊಡ್ಡದೊಂದ ಬೋರ್ಡನೊಳಗ ಅಂಟಿಸಿ, ಆಯಾ ಚಿತ್ರದ ಕೆಳಗ ಅವಕ್ಕ ಸಂಬಂಧಪಟ್ಟ ಹೆಸರು ಮತ್ತ ವಿವರಣೆ ಬರೆದು ತಂದು ಟೀಚರ ಅವರಿಗೆ ಒಪ್ಪಿಸಬೇಕಾಗತಿತ್ತು. ಮತ್ತ ರಟ್ಟಿನಿಂದ ತುಳಸಿ ಕಟ್ಟಿ, ಮನಿಯಂಥಾ ವಸ್ತುಗಳನ್ನ ಮಾಡಕೊಂಡ ಬರಲಿಕ್ಕೆ ಹೇಳತಿದ್ರು. ಅಗಲಾದ ಟ್ರೇ ಒಳಗ ತುಂಬ ಮಣ್ಣ ಹಾಕಿ ಅದನ್ನ ಹಸಿ ಮಾಡಿ, ಅದರಾಗ ಬೀಜಾ ಹಾಕಿ ಅವು ಮೊಳಕಿ ಎದ್ದಮ್ಯಾಲೆ ಟೀಚರವರಿಗೆ ತಂದು ಒಪ್ಪಿಸಿ ಅದರ ಬಗ್ಗೆ ಸಂಕ್ಷಿಪ್ತ ವಿವರಣೆ ಬರದು ತೊರಸಬೇಕಾಗತಿತ್ತು. ಹಿಂಗ ಸ್ಕೂಲನ್ಯಾಗ ಬ್ಯಾರೆ ಬ್ಯಾರೆ ವಿಷಯಗಳ ಬಗ್ಗೆ, ಕರಕುಶಲ ವಸ್ತುಗಳನ್ನ ಮಾಡೋದು ಹೆಂಗಂತ ತಿಳಿಸಿಕೊಟ್ಟು ನಮ್ಮ ಕಡೆಯಿಂದ ಪ್ರಾಯೋಗಿಕವಾಗಿ ಪ್ರಯೋಗಗಳನ್ನ ಮಾಡಸ್ತಿದ್ರು. ತಿಂಗಳಿಗೊಮ್ಮೆ ಒಂದೊಂದ ಕ್ಲಾಸನ್ಯಾಗ ಐದು ಮಂದಿ ಹುಡುಗುರದ ಒಂದ ಗುಂಪ ಮಾಡಿ, ಪ್ರತಿ ಗುಂಪಿಗೂ ಒಂದೊಂದ ವಿಷಯ ಕೊಟ್ಟು ಅಂದ್ರ ಹಳ್ಳಿಯ ವಾತಾವರಣ, ಶಹರದ ಚಿತ್ರಣ, ಉದ್ಯಾನವನ, ದೇವಸ್ಥಾನ, ಆಶ್ರಮ, ಪಾಠಶಾಲೆ, ಗುರುಕುಲಗಳು ಹಿಂಗ ಯಾವದರ ಬಗ್ಗೆ ಮಾದರಿಗಳನ್ನ ಮಾಡಕೊಂಡ ಬರಲಿಕ್ಕೆ ಹೇಳತಿದ್ರು. ಎಲ್ಲಾರು ಕೂಡೆ ಚರ್ಚೆ ಮಾಡಿ ವಿಷಯಕ್ಕ ಸಂಬಂಧಪಟ್ಟ ವಸ್ತುಗಳನ್ನ ಸಂಗ್ರಹ ಮಾಡಿ ನಮಗ ವಹಿಸಿದ ವಿಷಯದ ಬಗ್ಗೆ ಪ್ರೋಜೆಕ್ಟ್ ವರ್ಕ್ ಮಾಡತಿದ್ವಿ. ಒಬ್ಬರಿಗೊಬ್ಬರು ಸಹಕಾರ ಕೊಟಗೋತ ಕೆಲಸಾ ಮಾಡಿದ್ರ ಎಷ್ಟ ಛೊಲೋ ಫಲಿತಾಂಶ ಸಿಗತದ ಮತ್ತ ಸಹಾಯ ಮನೋಭಾವನೆ ಬೆಳಿತದ.
ಪ್ರತಿ ಶನಿವಾರಾ ಮಧ್ಯಾನಾ ೪ ಘಂಟೆಕ ಮತ್ತ ರವಿವಾರಾ ಮುಂಝಾನೆ ೯ ಘಂಟೆಕ ಗೀತಾ ಕ್ಲಾಸ್ ನಡಸತಿದ್ರು, ದೇವರ ಶ್ಲೋಕಗಳನ್ನ ಮತ್ತ ಭಗವದ್ಗಿತಾ ಅಧ್ಯಾಯಗಳನ್ನ ಹೇಳಿಕೊಡತಿದ್ರು. ತಿಂಗಳ ಕಡಿವಾರದಾಗ ಶ್ಲೋಕಗಳ ಸ್ಪರ್ಧೆ ಇಡತಿದ್ರು. ಶುಕ್ರವಾರಕ್ಕೊಮ್ಮೆ ಸರಸ್ವತಿ ಪೂಜಾ ಮಾಡಸ್ತಿದ್ರು, ಹಿಂಗ ವಿಧ್ಯಾಭ್ಯಾಸದ ಜೊಡಿ ಸಾಮಾನ್ಯ ಜ್ಞಾನ ಮತ್ತ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆನೂ ಕಲಿತಿದ್ವಿ.
ಈಗಿನ ಕಾಲಮಾನದಾಗ ಆಧುನಿಕ ತಂತ್ರಜ್ಞಾನ ಭಾಳ ಅವಶ್ಯಕ ಅದ. ಆದರ ನಮ್ಮ ದೇಶದ ಐತಿಹಾಸಿಕ, ಪೌರಾಣಿಕ ಮತ್ತ ಪ್ರಾಚೀನ ಸಂಸ್ಕೃತಿಯ ಬಗ್ಗೆ ತಿಳಕೊಳ್ಳೊದು ಸುಧ್ಧಾ ನಮ್ಮ ಕರ್ತವ್ಯ. ನಾವು ಮೊದಲು ನಮ್ಮ ವಿದ್ಯಾಭ್ಯಾಸದ ಜೋಡಿ ನಮ್ಮ ದೇಶದ ಸಂಸ್ಕೃತಿ ಮತ್ತ ಐತಿಹಾಸಿಕ, ಪೌರಾಣಿಕ, ಧಾರ್ಮಿಕ ಆಚಾರ ವಿಚಾರ, ದೇಶದ ಸಾಮಾಜಿಕ, ಅರ್ಥಿಕ ಪರಿಸ್ಥಿತಿ ಬಗ್ಗೆ ಜ್ಞಾನಾರ್ಜನೆ ಮಾಡಬೇಕು ಅಂದ್ರನ ನಾವು ಪರಿಪೂರ್ಣ ಸಾಧನೆಕಾರರಾಗಲಿಕ್ಕೆ ಸಾಧ್ಯ ಅದ. ಅದೆಲ್ಲಾ ಬಿಟ್ಟು ನಾವು ಬರೇ ಭಾಳಷ್ಟು ಮಾರ್ಕ್ಸ ತಗೊಂಡು ವಿದೇಶಕ್ಕ ಹೋಗಿ ಅಲ್ಲೆ ಛೊಲೋ ಕೆಲಸಾ ಮಾಡಿ ಅಲ್ಲಿ ಮಂದಿ ಕಡೆ ವ್ಹಾಹ್ ವ್ಹಾಹ್ ಅನಿಸ್ಕೊಂಡು ಕೈ ತುಂಬ ಪಗಾರ ತಗೊಂಡು ಬ್ಯಾಂಕ ಬ್ಯಾಲನ್ಸ ಜಾಸ್ತಿ ಮಾಡ್ಕೊಂಡ್ರ ಅದು ಪರಿಪೂರ್ಣ ಸಾಧನೆ ಆಗಂಗಿಲ್ಲಾ. ನಮ್ಮ ಉತ್ತರ ಕರ್ನಾಟಕದ ಕಡೆ ಒಂದ ಗಾದೆ ಮಾತು ಅದ, "ಮದ್ಲ ಮನಿ ಗೆದ್ದ ಆಮ್ಯಾಲೆ ಮಾರ ಗೆದಿಬೇಕ" ಅಂತ, ಹಂಗ ಮದ್ಲ ನಮ್ಮತನದ ಬಗ್ಗೆ ತಿಳಕೊಂಡ, ನಮ್ಮ ದೇಶಕ್ಕಾಗಿ ಎನರೆ ಒಳ್ಳೆದನ್ನ ಮಾಡಿ, ಆಮ್ಯಾಲೆ ಜಗತ್ ಮೆಚ್ಚೊ ಸಾಧನೆ ಮಾಡಬೇಕು.
ನಿಜ ಅಕ್ಕೋರ, ಮಕ್ಕಳ ಆಡೋ ರೀತಿ ನೋಡೀದ್ರ ಪಿಚ್ಚನಿಸುತ್ತೆ. ಆದ್ರೂ ಮನ್ಯಾಗ ಮೊದಲಿಂದ ಚೂರು ಚೂರು ಹೇಳಿಕೊಟ್ರ ತಿದ್ದಿಕೊಳ್ಳುತ್ತವೆ ಅಂಥ ನನ್ನ ಅನಿಸಿಕೆ.. ಅದನ್ನ ನಾವು ಮಾಡಬೇಕು.
ನಮ್ಮಲ್ಲೂ ಒಂದು ಗಾದೆ ಮಾತಿದೆ "ಅಪ್ಪ ನಿತ್ಗೋಂಡು ಉಚ್ಚಿ
ಹೊಯ್ದ್ರೆ ಮಗ ಓಡಾಡಕೋತ ಉಚ್ಚಿ ಹೊಯ್ತಾನೆ" ಹಾಗೆ ಮೊದ್ಲು
ಮನಿ ಗೆದ್ದು ಮಾರ ಗೆಲ್ಲೋದೆ ಸೂಕ್ತ. ಲೇಖನ ಇಷ್ಟ ಆತು. ಕೀಪ್ ಇಟ್ ಅಪ್.
ಸುಮನ್ ಅವರೆ ತಾವು ಹೇಳಿದ್ದು ನಿಜಾ ಅದ…
ಇತ್ತಿತ್ಲಾಗ ಸಣ್ಣ ಮಕ್ಕಳು ಭಾಳ ಛೇ೦ಜ್ ಆಗಲಿಕತ್ತಾರ. ಇದು ಹಿ೦ಗ ಮು೦ದು
ವರೆದ್ರ ಮು೦ದಿನ ಪೀಳಿಗೆ ನೆನಸಿಕೊ೦ಡ್ರ ಖರೆನ ದು:ಖ ಅಗತದ. .ನಮ್ ಕರ್ತವ್ಯ ನಾವು ಮಾಡಲೇಬೇಕು. ತಿಳಿಸಿ ಹೇಳಲೇ ಬೇಕು.
ಹೌದ್ರಿ ಅಕ್ಕೋರೆ.. ಇಡೀ ದಿನ ಕಂಪ್ಯೂಟರೆದು ಕುಂಡ್ರೂದೊಂದೇ ಆಟ ಆಗೈತ್ರಿ ಈಗ. ನೆಂಟ್ರಿಷ್ಟ್ರ ಮನೆಗೆ ಹೋಗೋದಾಗ್ಲಿ , ಹೊರಗಡೆ ಏನು ನಡಿತಿದೆ ತಿಳ್ಯೋದಾಗ್ಲಿ ಇಲ್ಲೇ ಇಲ್ಲ.. ಖರೇನೆ ಬೇಜಾರಾಗ್ತದ .. 🙁