ಈಗ ಏನಿದ್ದರೂ ಸಾಂದರ್ಭಿಕ ಕವಿಗೋಷ್ಠಿಗಳ ಕಾಲ. ಹಿಂದೆಲ್ಲ ಚೈತ್ರ ಕವಿಗೋಷ್ಠಿ, ಯುಗಾದಿ ಕವಿಗೋಷ್ಠಿ, ಸಮ್ಮೇಳನದ ಕವಿಗೋಷ್ಠಿಗಳು ನಡೆಯುತ್ತಿದ್ದುದು ವಾಡಿಕೆ. ಈಗ ಗೃಹ ಪ್ರವೇಶ, ಮಗುವಿನ ಹುಟ್ಟು ಹುಬ್ಬಗಳಲ್ಲದೆ ಮದುವೆ ಮನೆಗೂ ನಮ್ಮ ಕವಿಗೋಷ್ಠಿ ಪ್ರವೇಶ ಪಡೆದಿದೆ. ಇದು ಕಾವ್ಯ ಖಾಸಗಿಯಾಗುತ್ತಿರುವ ಜೊತೆಗೆ ಸಾರ್ವತ್ರೀಕತೆಯನ್ನು ಪಡೆಯುತ್ತಿರುವ ಸೂಚನೆಯಾಗಿದೆ.
ಇಂದಿನ ಅವಸರದ ಜಗತ್ತಿನಲ್ಲಿ ಮೊದಲಿದ್ದ ಮದುವೆ ಸಂಭ್ರಮದ ಓಡಾಟ, ಹಾಡು, ಆಟಗಳೆಲ್ಲ ಹೇಳ ಹೆಸರಿಲ್ಲದೆ ಕಣ್ಮರೆಯಾಗುತ್ತಿರುವ ಹೊತ್ತಿನಲ್ಲಿ ಒಂದಿಷ್ಟು ಚಿಂತನೆಗೆ ತೊಡಗಿಸುವ ಕಾವ್ಯಗೋಷ್ಠಿಗಳು ಮದುವೆ ಮಂಟಪದಲ್ಲಿ ಕಾಣಸಿಗುತ್ತಿರುವದೂ ಒಳ್ಳೆಯ ಬೆಳವಣಿಗೆಯಾಗಿದೆ. ಆಡಂಬರ, ಅದ್ದೂರಿಯನ್ನು ಬದಿಗಿಟ್ಟು ತೀರಾ ಅವಸರದ `ಯಾದಿ ಮೆ ಶಾದಿ’ ಯ ಈ ಕಾಲದಲ್ಲಿ ಸಾಹಿತ್ಯಿಕವಾಗಿರುವ, ಸಾಂಸ್ಕøತಿಕವಾಗಿರುವ ಸಂದರ್ಭಗಳನ್ನೂ ಕಳಕೊಳ್ಳುವ ಆತಂಕದಲ್ಲಿದ್ದೇವೆ. ಮದುವೆ ಸಂದರ್ಭದ ಕವಿಗೋಷ್ಠಿಗಳಲ್ಲಿ ಮಂಡಿತವಾಗುವ ಕವಿತೆಗಳೆಲ್ಲ ಮದುವೆಯನ್ನು ಜೀವನದ ಪ್ರಮುಖ ಘಟ್ಟವಾಗಿ ಕಾಣುವ, ವಿಡಂಬನೆಯಿಂದ ನೋಡುವ, ದಾಂಪತ್ಯದ ಸಿಹಿಕಹಿಗಳನ್ನು ಮೆಲುಕು ಹಾಕುವ, ಕಚಗುಳಿಯಿಡುವ ರೀತಿಯಲ್ಲಿರುತ್ತವೆ
ಮದುವೆ ಮುಂಚಿನ ದಿನಗಳಲ್ಲಿ ಹುಡುಗ-ಹುಡುಗಿಯರಲ್ಲಿ ಒಂದು ರೀತಿಯ ಕುತೂಹಲ, ಸಂಭ್ರಮ, ಕಾತರ ಎಲ್ಲವೂ ಮೇಳೈಸಿರುತ್ತವೆ. ಆದರ್ಶಮಾನ ಸಂಗಾತಿಯನ್ನು ಕಾಣುವ, ಕಲ್ಪಿಸುವ ಈ ದಿನಗಳು ತಾರುಣ್ಯದ ತುಂಬಾ ಮಹತ್ವದ ಕಾಲಗಳು. ಇಲ್ಲಿ ಹುಟ್ಟಿಕೊಳ್ಳುವ ಪ್ರೀತಿ, ಪ್ರೇಮ ಭಾವಗಳು ಭಾವನೆಗಳಾಗಿ ಒಡಮೂಡುವುದೇ ಕಾವ್ಯದಲ್ಲಿ. ನಮ್ಮ ಕವಿಗಳು ಇವನ್ನು ಅಕ್ಷರ ಪದರೂಪದಲ್ಲಿ ಸೆರೆ ಹಿಡಿದು ಕೊಟ್ಟರೆ, ಉಳಿದವರೆಲ್ಲ ಬಾನ ಬಾನಂಗಳದಲ್ಲಿ ತೇಲಿಬಿಟ್ಟು ಖುಷಿ ಅನುಭವಿಸುತ್ತಾರೆ. ಕವಿಗಳು ಹಿಡಿದಿಟ್ಟ ಇಂಥ ಭಾವನೆಗಳು ಎಲ್ಲರ ಭಾವಗಳಾಗಿ ಅನುಭವಿಸುವ ಪರಿಯೇ ಸಹೃದಯತೆಯ ಪರಮ ಅರ್ಥವಂತಿಕೆ. ಹಾಗಾಗಿ ಕವಿತೆಗಳಲ್ಲಿನ ಪ್ರೀತಿ, ಪ್ರೇಮ ಯಾರದೂ ಆಗಬಹುದಾದ ಅನುಭವವೇ ಕಾವ್ಯಕ್ಕೆ ದಕ್ಕಿರುವ ಜೀವಂತಿಕೆ.
ಕವಿ ಗಂಗಾಧರ ಅವಟೇರ ಅವರು ತಮ್ಮ ಮದುವೆ ಸಂದರ್ಭದಲ್ಲಿ ಹೊರತಂದ ‘ನಿಬ್ಬಣ’ ಕವನ ಸಂಕಲನವು ಹಲವು ರಸಮಯ ಭಾÀವನೆಗಳಿಂದ ಸಮೃದ್ಧಗೊಂಡಿದೆ. ಇಲ್ಲಿನ ಮದುವೆ ಸಂದರ್ಭದ ಕವಿತೆಗಳು ತೀರಾ ಆಪ್ತವೆನ್ನಿಸಿಕೊಳ್ಳುತ್ತವೆ. “ಒಲಿದೆರಡು ಜೀವಗಳು ಒಂದಾಗಿ ಬೆಸೆದಿರೆ, ಅದುವೇ ಹಿರಿದಾದ ಸಂಸಾರಯೋಗ” ಎಂದು ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು ಮದುವೆ ಬಂಧನದ ಬೆಸುಗೆಯ ಪಾವಿತ್ರ್ಯತೆಯನ್ನು ಸಾರಿದರೆ, “ಒಳ್ಳೆಯ ಬಾಳು, ಜಗದಲಿ ಮೇಲು, ಒಲವೆ ನಮಗೆ ಜೀವನವು” ಎಂಬ ಅರ್ಜುನ ಕೋರಟಕರ ಅವರ ಸಾಲುಗಳಲ್ಲಿ ಜೀವನದ ಸಾರ್ಥಕತೆ ಇದೆ.
“ಮದುವೆ ಸ್ವರ್ಗದಲ್ಲಿ ಹೊಂದಿಸಲ್ಪಡುತ್ತವೆ.
ಆದರೆ ಕೋರ್ಟಿನಲ್ಲಿ ಬಿಡುಗಡೆಯಾಗುತ್ತವೆ”
ಎಂಬ ಜಿ. ಎಸ್. ವಡಗಾವಿ ಅವರ ಹನಿಗವಿತೆಯ ಸಾಲುಗಳು ಕಠೋರವೆನಿಸಿದರೂ ವಾಸ್ತವದಲ್ಲಿ ಚಿಂತನೆಗೆ ತೊಡಗಿಸುತ್ತವೆ. ಸಂಗಮೇಶ ಕೋಟಿಯವರ `ಕಳಕೊಂಡ ಸ್ವಾತಂತ್ರ್ಯ’ ಕವಿತೆ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಛಾಯಾ ಚಿತ್ರದಂತೆ ಮದುವೆ ಸಂದರ್ಭದ ಕ್ಷಣ ಚಿತ್ರಗಳನ್ನು ಸೊಗಸಾಗಿ ಕಟ್ಟಿಕೊಡುತ್ತದೆ.`ನಿಬ್ಬಣ’ದ ದಾಂಪತ್ಯ ಕವಿತೆಗಳಲ್ಲಿ ಜೀವನಾನುಭವದ ದರ್ಶನವಿದೆ. ಬದುಕಿನ ನೋವು-ನಲಿವು, ವಿರಹ ಕಾತರ ಈ ಎಲ್ಲವನ್ನೂ ನಮ್ಮ ಕವಿಗಳು ಸೊಗಸಾದ ಸಾಲುಗಳಲ್ಲಿ ಹೇಳಿದ್ದಾರೆ. ಸತ್ಯಾನಂದ ಪಾತ್ರೋಟರ `ಬಂದು ಬಿಡು’ ಕವಿತೆಯಲ್ಲಿ ತೆರೆದುಕೊಳ್ಳುವ ಹೊಸ ಬದುಕಿಗೆ ಮನದನ್ನೆಯನ್ನು ಬರಮಾಡಿಕೊಳ್ಳುವ ಪರಿ ಸೊಗಸಾಗಿ ನಿರೂಪಿತವಾಗಿದೆ.
ಎಸ್. ಆರ್. ದಿವಾಣ ಅವರ `ಏಳು ಹೆಜ್ಜೆ’ ಕವಿತೆಯ “ಕುಸುಮ ಬಾಣಕೆ ಕುಸುಮ ಸೋಲಲು ಹೊಸತು ಕುಸುಮವು ಅರಳಿತು’ ಎಂಬಲ್ಲಿ ದಂಪತಿಗಳ ಬಾಳಿಗೆ ಬಂದ ಹೊಸ ಬೆಳಕಿನ ಚಿತ್ರಣವಿದೆ. ಮಲ್ಲಿಕಾರ್ಜುನ ಬನ್ನಿ ಅವರ `ಜೇಷ್ಠ ಮಧು-ಆಷಾಢ ಅತ್ತೆ’ ಕವಿತೆ ಬದುಕಿನ ವಿಸ್ತಾರದಲ್ಲಿ ಪತಿ, ಅತ್ತೆ-ಮಾವರ ನಡುವೆ ಹೆಣ್ಣೊಬ್ಬಳ ಪಾತ್ರದರಿವನ್ನೂ ಪ್ರಕಟಪಡಿಸುತ್ತದೆ. ಎಂ. ಜಿ. ದಾಸರ ಅವರ ಪ್ರೀತಿಒರತೆ, ಅಣ್ಣಾಜಿ ಫಡತಾರೆ ಅವರ ಮದುವೆ ಕವಿತೆಗಳು ಇಲ್ಲಿ ಗಮನ ಸೆಳೆಯುತ್ತವೆ. ಶ್ರೀಶೈಲ ಮಾದಣ್ಣವರ, ಬಿ. ಟಿ. ಗುಡ್ಲಮನಿ, ಕೆ. ಬಿ. ಕುಂಬಾಳಿ ಮೊದಲಾದವರ ಹನಿಗವಿತೆಗಳು ಮದುವೆಯ ರಸದೌತಣ ನೀಡುತ್ತವೆ.
ಈಗ ಹನಿಗವಿತೆಗಳ ಕಾಲ. ಸರಳ ನಿರಾಡಂಬರ ಮತ್ತು ಚುಟುಕಾಗಿರುವ ಈ ರಚನೆಗಳು ಆಗಿಂದಾಗ್ಗೆ ಸೆಳೆದುಕೊಂಡು ಬಿಡುತ್ತವೆ. ಬಹಳಷ್ಟನ್ನೂ ಕೆಲವೆ ಕೆಲವು ಸಾಲುಗಳಲ್ಲಿ ಹೇಳಿಬಿಡುವ ಈ ಬಗೆಯ ರಚನೆಗಳು ಈಗ ತುಂಬಾ ಜನಪ್ರಿಯವಾಗಿವೆ. `ನಿಬ್ಬಣ’ ದಲ್ಲಿರುವ ಹನಿಗವಿತೆಗಳಲ್ಲಿ ಮದುವೆ ಮತ್ತು ದಾಂಪತ್ಯದ ವ್ಯಂಗ್ಯ ವಿಡಂಬನೆಗಳ ಕಟಕಿ ಇದೆ.“ಮದುವೆ ಹುಡುಗಾಟಿಕೆಯಲ್ಲ, ನೆಮ್ಮದಿಯ ಬದುಕಿನ ಹುಡುಕಾಟ” ಎಂದು ಸಿದ್ಧಲಿಂಗಪ್ಪ ಬೀಳಗಿ ಮದುವೆಯನ್ನು ಗಂಭೀರವಾಗಿ ತೆಗೆದುಕೊಂಡರೆ, ಡಿ.ಜಿ. ಕಲ್ಲೇದ ಅವರು
ಅಂದು ನಿಬ್ಬಣ ಹೊರಟ
ದಿನ ಮುಖದಲ್ಲಿತ್ತು ಕಳೆ,
ಇಂದು ಬೆಳೆದಿದೆ ಕಳೆ
ಎಂಬಲ್ಲಿ ವ್ಯಂಗ್ಯವಿದೆ. ಮಲ್ಲಿಕಾರ್ಜುನ ಹುಲಗಬಾಳಿ ಅವರ
ಅವಳು ಮೀನ
ನನ್ನದು ಮೇಷ
ಎಲ್ಲದಕೂ ನಮ್ಮಿಬ್ಬರದು
ಮೀನ ಮೇಷ
ಎಂಬ ಸಾಲುಗಳಲ್ಲಿ ದಂಪತಿಗಳಲ್ಲಿ ಭಾವನೆಗಳನ್ನು ತೋರ್ಪಡಿಸುವ ಮೊನಚಾದ ಹಾಸ್ಯವಿದೆ. ಒಂದೆಡೆ ಚೈತ್ರ ಮಾಸದ ತಿಳಿ ಬಯಲಿನಾಗಸ, ಮಾಮರಗಳಲ್ಲಿ ಕೋಗಿಲೆಗಳ ನಿನಾದ, ಮೈದುಂಬಿಕೊಂಡ ಹಸಿರೆಲೆಯ ಮರಗಳು, ನಾಚುತ್ತಿರುವ ಮದುವಣಗಿತ್ತಿ, ಖುಷಿಯಿಂದ ಓಡಾಡಿಕೊಂಡಿರುವ ಕವಿಬಳಗ, ಈ ಎಲ್ಲದರ ನಡುವೆ ಗಂಟಲಲ್ಲೇ ಉಳಿದುಕೊಂಡಿರುವ ತಾಯಂದಿರ ಜನಪದ ಹಾಡುಗಳು, ಅವಸರ ಮಾಡುತ್ತಿರುವ ನಿಬ್ಬಣದ ಮಂದಿ, ಕೈಯಲ್ಲಿರುವ ಅಕ್ಕಿ ಕಾಳುಗಳ ಹಾಕಿ ದಂಪತಿಗಳ ಹರಸುವ ಕಾತರ, ಬಂದವರಿಗೆ ಉಣಬಡಿಸುವ ತರಾತುರಿ, ಈ ಎಲ್ಲಾ ಓಡಾಟ ಸಂಭ್ರಮಗಳ ನಡುವೆ ತೂರಿಕೊಂಡು ಬಂದ ಗಂಗಾಧರ ಅವಟೇರ ಅವರ `ನಿಬ್ಬಣ’ ಕವನ ಸಂಕಲನವು ಮದುವೆ ಸಂದರ್ಭದ ಕವಿತೆಗಳ ಅಪರೂಪದ ಕೊಡುಗೆಯಾಗಿದೆ.
*****
nice