`ಮದುವಿಗೆ ಬರತೆನಲೇ ತಮ್ಮಾ'ಅಂದ್ರ ಸಾಕು ಚಡ್ಡಿಯನ್ನ ತೊಯ್ಸಿಕೊಳ್ಳುವಂತಹ ದಿನಗಳು ನನ್ನ ಪಾಲಿಗೆ ಎದುರಾಗಿದ್ದವು. ಒಮ್ಮೆ ಸಿನ್ನೂರಿಗೆ ನೆಂಟರ ಮದುವಿಗೆ ಅಂತ ಹೋದಾಗ ಕಿತ್ತಲಿ ತುಂಬ ಇಟ್ಟಿದ್ದ ಚಹಾ ರುಚಿಯಾಗಿತ್ತು,ಅಲ್ಲದೆ ಅಂತಹ ಚಹವನ್ನ ಎಂದೂ ಕುಡಿದಿಲ್ಲವಾದರಿಂದ,ಆಸೆ ಎಂಬುದು ಕೆಟ್ಟ ಖೋಡಿ ನೋಡಿ, ಬರೊಬ್ಬರಿ ಒಂದೊಂದ ಗ್ಲಾಸಿನಂಗ ತಂಬಿಗಿಕಿನ ಜಾಸ್ತಿ ಕುಡಿದೆ ಅನಸ್ತೆ, ಮನೆಯಲ್ಲಿ ಇಷ್ಟು ಸಿಗಲ್ಲಂತ,ಆಗೆನು ಆಗಲಿಲ್ಲವಾದರೂ ರಾತ್ರಿ ಸವ ಹೊತ್ತಿನಲ್ಲಿ ಹೊಟ್ಟಿಯಲ್ಲಿ ನಾನಾ ನಮುನಿ ಚಡಪಡಿಕೆ ಆರಂಭ ಆತು. ಅವ್ವನ್ನ ಎಬ್ಬಿಸಿ ಹೊರ ಬಂದ್ರೆ ತಿಪ್ಪೆ ತನಕ ಮಟ್ಟುವಷ್ಟು ತಡಕೊಳ್ಳಿಲ್ಲ ಖೊಡಿನ ತಂದು. ಪಿಕ್ಚರನ್ಯಾಗ ತೋರ್ಸತರಲ್ಲ ಹಾಂಗ ಮುಗಿಯೊ ತಡ ಇಲ್ಲದೆ ಬಂದು ಬಂದು ಕೈಕಾಲು ನಿತ್ರಾಣ ಮಾಡಿತು.`ಮಗಗ ಹಿಂಗ್ಯಾಕಾತು?’ ಅಂತ ಅವ್ವ ಹೆದರಿ ಬೀಗರ ಮನೆಯವರನ್ನ ಎಬ್ಬಿಸಿ ಎಂತಹದೊ ಕಷಾಯನ್ನು ಮಾಡಿ ಕುಡಿಸಿ ಅಂದಿನ ರಾತ್ರಿ ಗೆಲ್ಲಿಸಿದ್ರೂ ಬಿಡಲಿಲ್ಲ. ಬೆಳಿಗ್ಗೆ ಬೆಳಿಗ್ಗೆನ ಕಾಲ ಹೆಚ್.ಪಿ ಪಂಪಸೆಟ್ ನೀರು ಹೊಡದಂಗ ಹೊಡೆಕತಿತು.ನಿತ್ರಾಣನಾಗಿ ತೇಲುಗಣ್ಣು ಮೇಲಗಣ್ಣು ಹಾಕತಾ ಬಿದ್ದಾಗ, ಅಣ್ಣನನ್ನು ಕರಕೊಂಡು ಅಮ್ಮ ಆಸ್ಪತ್ರೆಗೆ ಸಾಗಹಾಕಿದ್ರು.ವೈದ್ಯರು ವಿಚಾರಸಾಕತ್ತೆರ ಹೇಳಲು ಬಾಯಿ ಬರವಲ್ತು. ಪಾಪ ವೈದ್ಯರೆ ಫುಡ್ ಇನಸ್ಪೆಕ್ಷನ್ ಆಗಿರಬೇಕೆಂದು ಮನೆಯವರೆದುರಿಗೆ ಸಬೂಬ ಹೇಳಿ ಬಚಾವ ಮಾಡಿದ್ರು.ನಿಜ ತಿಳಿದಿದ್ದರೆ ಆ ಕಥಿನ ಬ್ಯಾರೆ ಆಗುತ್ತಿತ್ತು.
ಇದು ಒಂದ ಘಟನೆ ಅಲ್ಲ ರಾಯಚೂರಿಗೆ ಅಕ್ಕನ ಮದುವೆಗೆ ಹೋದಾಗಲೂ ಅಲ್ಲಿ ಅಪರಿಚಿತ ಹುಡುಗರೊಂದಿಗೆ ಆಡುತ್ತಿದ್ದಾಗ ಅವರು ಯಾವ ಉದ್ದೇಶದಿಂದ ಮಾಡಿದ್ರೊ ಗೊತ್ತಿಲ್ಲ,ಆಡತಾ ಆಡತಾ ಒಂದು ರೂಮಿನಲ್ಲಿ ದಬ್ಬಿ ಕೀಲಿ ಹಾಕಿ ಹೋಗಿಬಿಡೋದೆ! ಅಪರಿಚಿತ ಸ್ಥಳ ಅವ್ವನ ಸೆರಗನ್ನು ಬಿಟ್ಟು ಒಂದು ದಿನಯು ಸರಿದವನಲ್ಲ. ಮೇಲಿನ ಅಂತಸ್ತಿನಲ್ಲಿದ್ದ ನನ್ನ ರೋಧನ ಯಾರಿಗೂ ಕೇಳಲೆ ಇಲ್ಲ. ಆಯ್ತಪ ನನ್ನ ಕತಿನ ಮುಗಿತು ಅಂತ ತಿಳುಕೊಂಡೆ.ಎದಿಒಡದಂಗಾಗಿ `ಅಮ್ಮಾ….ಅಪ್ಪಾ……' ಅಂತ ಅಳತಾ ನೇಲಕ್ಕೆ ಒರಗಿದೆ. ಕಪಾಳಕ್ಕ ಬಲವಾದ ಪೆಟ್ಟು ಬಿದ್ದಾಗ ಹೌಹಾರಿ ನೋಡತಿನಿ ಅಪ್ಪ ರೌದ್ರಾವತಾರ ತಾಳಿ ನಿಂತಿದ್ದ. `ನಾವು ಎಲ್ಲಿ ಕಳದು ಹೋದಿ ಅಂತ ಊರೆಲ್ಲ ಹುಡುಕಿದ್ರ ನೀ ಇಲ್ಲಿ ಬಂದು ಬಿದ್ದು ಕೊಂಡಿದ್ದಿ,ಎಷ್ಟು ಅಂಜಿಸಿ ಬಿಟ್ಟಿಲೇ' ಎಂದು ಮತ್ತೊಂದು ಕಪಾಳಕ್ಕ ಬಿಗಿಯಾಕ ಬಂದಾಗ ಅವ್ವ ತಡದಳು.ನೆರದೊರೆಲ್ಲ ತಲಿಗೊಂದು ಮಾತಾಡತಿದ್ದರಿಂದ,ಭಯಕ್ಕ ಮಾತಾ ಹೊರಗ ಬರಲಿಲ್ಲ.
ಇನ್ನೊಮ್ಮೆ ನೆಂಟರ ಮದುವೆಯಲ್ಲಿ ಹುಡುಗರೆಲ್ಲರೂ ಕೂಡಿ ಕಡ್ಡಿಪೆಟ್ಟಿಗೆ ಹಿಡಿದು ಆಟವಾಡುತ್ತಿದ್ದಾಗ `ನನ್ನದು ನೋಡ್ರಲೇ ಕಡ್ಡಿ ಬೆಂಕಿ ಹೊತ್ತುಕೊಡು ಹೋಗಿ ಎಷ್ಟುದೂರ ಹೋಗಿ ಬಿಳುತ್ತ' ಅಂತ ಬಲಪ್ರದರ್ಶನ ಮಾಡಿ ಹೆಬ್ಬಟ್ಟಿನಿಂದ ಗಿರಿದ ಕಡ್ಡಿ ನನ್ನ ಕಕ್ಕಿಯ ಸಂಭಂದಿಕರ ಮಗಳ ರೇಷ್ಮೆ ಸಿರಿಯ ಮೇಲೆ ಬಿದ್ದು, ಸ್ವಲ್ಪ ಭಾಗ ಸುಟ್ಟು ಹೋಗಿ ದೊಡ್ಡ ರಾದ್ದಾಂತವೇ ನಡೆದು, ಮದುವೆ ಮುಗಿಯುವತನ ಅವರ ಕಣ್ಣತ್ತಪ್ಪಿಸಿ ಅಡ್ಡಾಡಬೇಕಾಗಿ ಬಂತು. ಅಪರಾಧ ಸಾಬಿತಾದ ವ್ಯಕ್ತಿಯೊಬ್ಬನನ್ನು ಪೋಲಿಸರು ಊರಲ್ಲಿ ಏನೇ ನಡೆದರೂ ಮೊದಲಿಗೆ ಹಿಡಿದುಕೊಂಡು ಬರುವಂತೆ ಯಾವುದೆ ಮನೆಯ ಯಾವುದೆ ಕಾರ್ಯಕ್ರಮಗಳಲ್ಲಿ ಬೇರೆ ಯಾರೊ ತಪ್ಪು ಮಾಡಿದರೂ ಅದಕ್ಕೆ ಬಲಿಪಶು ನಾನೆ ಆಗುವ ದುಸ್ಥಿತಿ ಒದಗಿ ಬಂತು.ಎಲ್ಲೆರ ಹೋಗಲಿ `ಇವಂದು ಏನರ ಕಿತಾಪತಿ ಇದ್ದ ಇರುತ್ತಾ,ಯಾಕ ಕರುಕೊಂಡು ಬರತಾರೊ ಇಂಥ ಖೋಡಿನ' ಅನ್ನೊ ನಿಕ್ ಲೈನುಗಳು ನನಗ ಬಿರುದುಗಳಾದವು. ಇವೆಲ್ಲ ಘಟನೆಗಳು ಮದುವೆ ಅಂದ್ರ ನನಗ ಅಲರ್ಜಿಯಾಗುವಾಂಗ ಮಾಡಿದವು. ಈಗಲೂ ಯಾರಾದ್ರು ಕರಿಯಾಕ ಬಂದ್ರ ನುಂಗಲಾರದ ತುತ್ತಾಗಿ ಬಿಡತದ.
ಮದುವೆ ಬಗ್ಗೆ ಇಷ್ಟು ಅಲರ್ಜಿ ಪಡೊರು ತಮ್ಮ ಮದುವೆ ಹ್ಯಾಂಗ ಮಾಡಿಕೊಂಡ್ರು ಅನ್ನೊ ವಿಚಾರ ಒದುಗರಲ್ಲಿ ಹೊಕ್ಕಿರಬಹುದು.ವೈಯಕ್ತಿಕ ಹಿತಾಸಕ್ತಿಗಿಂತ ಎಲ್ಲರು ಸಂತೋಷ ಮುಖ್ಯ ಅಂತ ಭಾವಿಸಿದ್ದಕ್ಕಾಗಿಯೆ ಅಪ್ಪನ ಇಛ್ಛೆಯಂತೆ ನಾನು ಮದುವೆಗೆ ಸಮ್ಮತಿಸಿದ್ದೆ. ಎದುರುಗೊಳ್ಳೊ ಕಾಲಕ್ಕ ಸೌಮ್ಯವಾದಿಯಾಗಿದ್ದ ನಮ್ಮಪ್ಪನ ಮೈಯಲ್ಲಿ ಯಾವಾಗ `ಬೀಗರು’ ಎಂಬ ದೆವ್ವ ಪರಕಾಯ ಪ್ರವೇಶ ಪಡೆಯಿತೊ ತಿಳಿಯದು ಒಮ್ಮೇಲೆ ಉಗ್ರವಾದಿಯಾದ. ಅಂಗವಿಕಲನಾಗಿದ್ದ ನಮ್ಮಪ್ಪ `ಕಾಲಿಲ್ಲದವ ಅಂತ ಅಷ್ಟು ಕೀಳಾಗಿ ಅಲಕ್ಷಮಾಡತಾರೆನು ಈ ಬೀಗರು' ಎಂದು ಸಿಟ್ಟಿಗೆದ್ದು ಸಮಾಧಾನ ಮಾಡಲೆತ್ನಿಸಿದ ನನಗೆ `ನೀನು ಇನ್ನೂ ತಾಳಿ ಕಟ್ಟಿಲ್ಲ ಆಗಲೇ ಅವರ ಪರವಾಗಿ ಮಾತಾಡಕ ಹೊಂಟೆನಪ,ನಿನ್ನ ಹಣೆಬರಹ ತೇಲಿತು ನಡಿ'ಎಂದು ಬಿರು ನುಡಿಯಾಡಬೇಕೆ?…..ಎಂದೂ ಅಪ್ಪನ ಎದುರಿಗೆ ವಾದಿಸದವನಾದ್ದರಿಂದ ಮೌನಕ್ಕೆ ಪರಿಸ್ಥಿತಿ ತಿಳಿಯಾಗುವವರೆಗೆ ಶರಣಾದೆ. ಹಿಂಗ ತಿಳಿಯದವರು ಹೇಳ್ತಾರಲ್ಲ `ಹುಟ್ಟಿದ ಮಾರ್ದೆಶನ ಹಿಂಗದೇನೊ' ಅಂತ ಅಂದು ಕೊಳ್ಳಬೇಕಾಗಿದೆ, ಮದುವೆಯಲ್ಲಿ ನನಗ ಎದುರಾಗುವ ಇಂತಹ ಪ್ರಸಂಗಗಳನ್ನು ನೋಡಿ.
ಈಗನೂ ಸಹಿತ ಮದುವೆಗೆ ಯಾರಾದರೂ ಕರದ್ರ ಎದಿ ಝಲ್ ಅಂತದ.ನಾನು ಹೋದ ಕಡೆ ಎಲ್ಲ ಎಡವಟ್ಟು ಆಗೆ ಆಗಿರುತ್ತವೆ. ಬಿಜಾಪುರ,ಬಾಗಲಕೊಟೆ ಕಡೆ ಮದುವೆಗೆ ಹೋದ ಸಮಯದಲ್ಲಿ ಮದುವೆ ಮನೆಲ್ಲಿಗಿಂತ ಹೊರಗಡೆ ಊಟಮಾಡಿಕೊಂಡು ಬಂದಿದ್ದೆ ಹೆಚ್ಚು. ಇಲಕಲ್ಲಿಗೆ ಗೆಳೆಯನೊರ್ವನ ಅಣ್ಣನ ಮದುವೆಗೆಂದು ಹೋಗಿದ್ವಿ. ನಾಷ್ಟವಾಗಿದ್ದರೂ, ಬೇಡವೆಂದರೂ ಒತ್ತಾಯಿಸಿದ್ದರಿಂದ ಅವರು ಸೂಚಿಸಿದ ಸ್ಥಳದಲ್ಲಿ ಕುಡಲೆಬೇಕಾಯಿತು. ಪಕ್ಕದಲ್ಲೆ ಉಪ್ಪಿಟ್ಟಿನ ರಾಶಿಯನ್ನು ಬಂಡಿಯ ಮೇಲೆ ಹರಡಿ ಸೀರೆಯೊಂದನ್ನು ಅದರ ಮೇಲೆ ಹೊದಿಸಿದ್ದರು. ನಾಷ್ಟಕ್ಕೆ ಸಿದ್ಧತೆ ಮಡಲೊಸಗು ಸೀರೆಯನ್ನು ನನ್ನ ಪಕ್ಕಕೆ ಸರಿಸಿ ಬಡಿಸಲು ಆರಂಬಿಸಿದರು. ಪಕ್ಕದಲ್ಲಿ ಹಾಕಿದ್ದ ಆ ಸೀರೆಯಿಂದ ಎಂಥಹದೊ ವಾಸನೆ ಬರತ್ತಿತ್ತು. ಈಗ ಬರಿಯುತ್ತಿರುವಾಗಲು ನೆನಿಸಿಕೊಂಡು ಉಬ್ಬಳಿಕೆ ಬಂದಂಗೆ ಆಗುತ್ತೆ. ತಡೆದುಕೊಳ್ಳಕಾಗದೆ ಕೈತೊಳೆದುಕೊಂಡುಬರುವೆ ಎಂದು ಹೊರ ನಡದೆ.`ಯಾಕೊ ಎಷ್ಟು ಟಾಪ್ ಆಗಿತ್ತು ಉಪ್ಪಿಟ್ಟು,ತಿನ್ನಲಿಲ್ಲಯಾಕ ಅಂತ' ಬಾಯಿ ಚಪ್ಪರಸ್ತಾ ಕೇಳಿದಾಗ ವಿಷಯ ತಿಳಿದು ಎಲ್ಲೆರ ಕಕ್ಕೆಂಡರೆಂಡು ಸುಮ್ಮನಾದೆ. ಬಾಗಲಕೋಟ ಜಿಲ್ಲೆಯ ಬೇವುರಿಗೆ ಗೆಳೆಯನ ಮದುವೆಗೆಂದು ಹೋಗಿದ್ದೆ. ಅಕ್ಷತೆ ಬಿದ್ದಾದ ಮೇಲೆ ಊಟಕ್ಕ ಹೊರೆಟಿವಿ. ಗದ್ದಲಾನು ಗದ್ದಲವಿದ್ದರು ಗಂಡಿನ ಖಾಸ ದೋಸ್ತ ಅನ್ನೋ ಕಾರಣಕ್ಕ ಇದ್ದಲ್ಲಿ ಊಟ ಬಂತು. ಆದರೆ ಊಟ ಬಾಯಾಗ ಇಟ್ಟುಕೊಳ್ಳಲಾರದಷ್ಟು ಭಯಂಕರ ಖಾರ,ಉಪ್ಪು ಆಗಿತ್ತು. ಬೊಂದೆದ ಸಿಹಿಯಂತು ತಲಿಚಿಟ್ಟ ಹಿಡಿಯಂಗ ಆಗಿತ್ತು.ಜನ ಖುಷಿಯಿಂದ ಹ್ಯಾಂಗುಣಕತ್ತಿದ್ದರೋ ಕಾಣೆ ಕಾಟಾಚಾರಕ್ಕಂಬಂತೆ ಊಂಡು, ಎದ್ದು ಕೈತೊಳೆಯಲು ಹೋದಾಗ ಬೀಗರ ಕಡೆಯಾತ ಅಡಿಗೆಯವರ ಜೊತೆ ಮಾತಾಡತ ಇದ್ದುದು ಕೇಳ್ತು. `ಭಾರಿ ಮಾಡಿರಪ ಅಡಿಗಿ,ಒಬ್ಬ ನನ್ಮಗ ಎರಡನೆ ಸತಿ ಕೇಳಕ ಬರವಲ್ಲ ನೋಡು'ಅಂತಿದ್ದ. ನನ್ನ ನೋಡಿ ಗಪ್ ಆದ ಅವರು `ಹ್ಯಾಂಗದರಿ ನಮ್ಮ ಕಡೆದು ಊಟ?’ಎಂದಾಗ ,`ಮರೆಕಾಗಂಗಲ್ಲ ಬಿಡ್ರಿ’ ಎಂದು ‘ಕುಡಿಯಾಕ ನೀರು ಎಲ್ಲೇವರಿ?’ ಅಲ್ಲಿರುವವರನ್ನು ಕೇಳಿದಾಗ ಜಂಗತ್ತಿದ ಡ್ರಮ್ಮನ್ನು ತೋರಿಸಿದರು. ಆ ನೀರನ್ನು ನೋಡಿ `ಹ್ಯಾಗೋ,ಇಂಥಹ ನೀರನ್ನು ಕುಡಿಯೊದು' ಎಂದಾಗ `ಎಂಥಹ ದನಕರಗಳು ಎಲ್ಲೆಲ್ಲೊ ನಿಂತ ನೀರನ್ನ ಕುಡಿತಾವಂತ,ಅದರಕಿನ ಅತ್ತತ್ತ ಅವೇನ್ರೀ ಈ ನೀರು'ಅಂತ ಸವಾಲೆಸೆದರು. ಆಗ ನನಗ ಮಾತಾಡಕ ಬಾಯೆ ಬರಲಿಲ್ಲ.
ಒಮ್ಮೆ ಸಹುದ್ಯೊಗಿ ಸ್ನೇಹಿತೆ ಮದುವೆಗೆ ಹೋಗಲಾದ್ದರಿಂದ ಆಕೆಯ ಅರತಕ್ಷತೆಗಾದ್ರೂ ಹೋಗೊಣ ಅಂತ ಸಿಬ್ಬಂದಿ ಒತ್ತಾಯಿಸಿದ್ದರಿಂದ ನಿಗದಿತ ಸಂಜೆ ಏಳರ ಸಮಯಕ್ಕೆ ಆ ಊರನ್ನು ತಲುಪಿದಾಗ ಅಲ್ಲಿ ಜನ ಯಾರು ಇರದೆ ಇದ್ದುದು ಕಂಡು ಅನುಮಾನ ಬಂದು,ವಿಚಾರಿಸಿ,ಮನೆಯವರನ್ನು ಪರಿಚಯಿಸಿಕೊಂಡು ವಧು-ವರರನ್ನು ಕರೆಯಲು ತಿಳಿಸಿದೆವು.`ಅವರು ಸಿದ್ದರಾಗುತ್ತಿದ್ದಾರೆ ಕೂಡಿ’ ಎಂದು ಕೂಡ್ರಿಸಿ ಎರಡು ತಾಸು ಕಳೆದರು ಮಾತಾಡಿಸುವವರಿಲ್ಲ, ಜನನು ಇನ್ನು ಬಂದಿಲ್ಲದ್ದನ್ನು ನೋಡಿ `ಅವ್ಯವಸ್ಥೆ ಏನಿದು?’ ಎಂದು ಒಬ್ಬರನ್ನು ಕೇಳಿದೆವು. `ಅಯ್ಯೊ,ನಮ್ಮ ಸಮುದಾಯದಾಗ ರಾತ್ರಿ ಹತ್ತರ ನಂತರನ ರಂಗೇರದು,ಅಷ್ಟು ದೌಡ ಯಾಕ ಬರಾಕ ಹೋಗಿದ್ರಿ ನಿಮಗ ಗೊತ್ತಿಲ್ಲವೆ?'ಎಂದು ಹೇಳಿದಾಗ ಈ ಪರಿಸ್ಥಿತಿಯಿಂದಲೇ ಆ ಎಮ್ಮ ಒತ್ತಾಯಿಸಲಿಲ್ಲ ಎಂದು ತಿಳಿತು. ಬಹು ಹೊತ್ತು ಕುಳಿತರೆ ಬಸ್ಸು ಸಿಗವು ಎಂದು ತಿಳಿದು, ಆಕೆ ಇದ್ದಲ್ಲಿ ಹೋದಾಗ ಇನ್ನು ಸಿವಿಲ್ ಡ್ರಸ್ನಲ್ಲೆ ಇದ್ದರು. ನಾವು ಬಂದಿದ್ದು ಆಕೆಗೆ ಮನೆಯವರಾರು ತಿಳಿಸದಂತೆ ಕಂಡಿರಲಿಲ್ಲ ಅಂತ ಕಾಣುತ್ತೆ, ಗಲಿಬಿಲಿಗೊಂಡಿದ್ದ ಅವಳಿಗೆ ಸಮಾಧಾನಿಸಿ ಶುಬಾಶಯ ಕೋರಿ,ಗಿಫ್ಟ ಕೊಟ್ಟು `ಹೋಗಿಬರ್ತೀವಿ’ ಅಂದ್ವಿ, ನಿಂತ್ರೆ ಕೊನೆ ಬಸ್ಸು ಮಿಸ್ಸಾಗುತ್ತೆ ಅಂದುಕೊಂಡು. `ಸಾರಿ ಸಾರ್ ಆಫಿಸಿನ್ಯಾಗ ಪಾರ್ಟಿ ಕೊಡತಿನಿ ಏನು ತಪ್ಪುತಿಳಕೊಬೇಡಿ’ ಎಂದು ರಿಕ್ವೆಸ್ಡ ಮಾಡಿಕೊಂಡಳು. ಹಸಿವು ಮಿಕ್ಕಿತ್ತು,ಕೊನಿ ಬಸ್ಸು ಹತ್ತಿ ಊರ ಸೇರಿದ್ವಿ.ಖಾನಾವಾಳ್ಯಾಗ ಉಣ್ಣೊನವೆಂದ್ರೆ ಆಗ್ಲೇ ಮುಚ್ಚಿದ್ವು.ಮನೆಲಿ ಹೇಳಿದ್ರ ಹೆಂಡ್ರಿಗೆ ಚೇಷ್ಟೆಗೆ ಗುರಿಯಾಗತಿವಿ ಅಂತ ಖಾಲಿಹೊಟ್ಟೆಲೆ ಮಲಗಬೇಕಾಗಿ ಬಂತು.
ಇನ್ನೂ ಬ್ರಾಹ್ಮಣರ ಮದುವಿಗಳು ಒಂದು ರೀತಿ.ಆಚರಣೆಗಳು ಛಂದಿರತಾವಾದ್ರು ಟೈಮಿಲ್ಲದ ಟೈಮಿನ್ಯಾಗ ಕಾರ್ಯಕ್ರಮಗಳು ನಡಿತಿರತಾವ.ನ ನಡ ರಾತ್ರಿ ಹನ್ನೆರಡು ಘಂಟಿಮ್ಯಾಗ ಅದೇನೊ ರಾಕ್ಷಸರು ತಿನ್ನೊ ಹೊತ್ತು ಅಂತಾರಲ್ಲ ಆ ಸಮಯಕ್ಕ ಭೂಮದೂಟ ಭರ್ಜರಿಯಾಗಿ ನಡದಿರುತ್ತ. ಅಪರಾತ್ರ್ಯಾಗ ಮಂಡಿಗಿ,ಸೊಂಡಿಗಿ,ಹಪ್ಪಳ,ಜೀಲೆಬಿ ತಿಂದ್ರೆ ಕೇಳಬೇಕೆ ಹೊಟ್ಟಿ! ಪಚನ ಆಗಲಿಕ್ರು ಬಿಡಲ್ಲ ಮಂದಿ.ಒತ್ತಾಯಕ್ಕ ತಿಂದು ಅವಗಡ ಯಾಕ ಮಾಡಿಕೊಬೇಕಂತನ ಆದಷ್ಟು ರಾತ್ರಿಯ ಈ ಕಾರ್ಯಕ್ರಮಗಳಿಗೆ ಗೈರಾಗಲಿಕ್ಕೆ ಪ್ರಯತ್ನ ಮಾಡತಿನಿ. ಆದ್ರೂ ಕೇಲವೊಂದು ಸಾರಿ ತಪ್ಪಿಸಿಕೊಳ್ಳಕಾಗಲ್ಲವೆ?ಒಮ್ಮೆ ಸಮಿಪದ ಊರಿಗೆ ಗಂಡು ಬೀಗರಾಗಿ ಒಂದು ಮದುವೆಗೆ ಹೋಗಲೆ ಬೇಕಾಗಿ ಬಂತು. ಗಂಡು ಬೀಗರಂದ್ರ ಸ್ವಲ್ಪ ಗಟ್ಟಸ ತೋರ್ಸಬೇಕೆನ್ನೊ ಮಂದಿ ಇವರಾಗಿದ್ರು.ರಾತ್ರಿ ಹತ್ತಾದ್ರು ಗಾಡಿ ಬಿಡಾಕ ತಯಾರಿಲ್ಲ.`ಏನು ಇಲ್ಲೆ ಐವತ್ತು ಕೀಲೊಮೀಟರು, ತಾಸಿನ ಹಾದಿ,ಅಷ್ಟ್ಯಾಕ ಅವಸರ 'ಅಂತ ಲೇಟಾಗಿ ಬಿಟ್ಟದ್ದಕ್ಕೂ,ನಡುವೆ ಗಾಡಿ ಎರಡು ಮೂರು ಸಾರಿ ಪಂಕ್ಚರ್ ಆಗಿದ್ದಕ್ಕು ಸರಿ ಹೋಯ್ತು.ಆ ಊರು ಮುಟ್ಟಿದಾಗ ಬರೋಬ್ಬರಿ ಎರಡಾಗಿತ್ತು. ಪ್ರಗತಿಪರ ಧೋರಣೆಯ ಹೆಣ್ಣಿನ ತಂದೆ ಕೆಂಡಾ ಮಂಡಲನಾಗಿದ್ದ. ಮನೆ ಹತ್ತಿರ ಬಂದೊಡನೆ ನಮ್ಮಕಡೆಯವನೊಬ್ಬ ಹೀರೆಸ್ತನ ಮೆರಿಲಿಕ್ಕೆ `ಹೇ,ಎಂತವರೋ ಇವರು,ಗಂಡು ಬೀಗರೆಂಬೊ ಕಿಮ್ಮತ್ತಿಲ್ಲೆನು? ಯಾರು ಓಡಿ ಬರವಲ್ರು? ಬಾಜಿ ಬಾರಸವಲು?್ರ'ಅಂದಿದ್ದ ತಡ ಗಾಡಿ ಸುತ್ತಲೂ ಬಡಿಗಿ,ಕುಡುಗೋಲು ಹಿಡಿದ ಮಂದಿ ಜಮಾಯಿಸ್ತು. `ಸೂಳೆ ಮಕ್ಕಳ,ಬರಾ ಟೈಮೆನಲೆ ನಿಮ್ಮದು. ಹೆಣ್ಣಿನವರಂದ್ರ ಏನಂತ ತಿಳುಕೊಂಡ್ರೆಲೆ?ಯಾವನಲೇ ಅವ ಈಗ ದೊಡ್ಡದಾಗಿ ಮಾತಾಡಿದವ.ಬಾರಲೇ ಕೇಳಗೆ'ಎಂದು ವಧುವಿನ ತಂದೆ ಮಚ್ಚು ಹಿಡಿದು ಬಂದಾಗ ಇವ ಅಲ್ಲೇ ಲದ್ದಿ ಹಾಕಿದ್ದ. ಆ ತಂದೆ ಮುಂದುವರೆದು `ನನ್ನ ಮಗಳ ಬಾಳ್ವೆ ಹಾಳಾದ್ರೂ ಪರವಾಗಿಲ್ಲ ,ಯಾವನು ಬರ್ತಿರಿ ಬರ್ರಿ,ಇಲ್ಲಿಂದ ಓಡೆಹೋಗುವರ ತಲಿಉರಳಸ್ತಿನಿ,ಕುಂಯ್ ಅಂದವರ ಕಾಲಕತ್ತರಸ್ತಿನಿ'ಎಂದು ನಿಂತಾಗ ವರನ ತಂದೆ ,ಕೆಲ ಹಿರಿಯರು ತಮ್ಮ ತಪ್ಪಿಗೆ ಕ್ಷಮೆ ಕೇಳಿ ವಾತಾವರಣ ತಿಳಿಗೊಳಿಸಿದರು. ಇವರ ಅವಸರಕ್ಕ ಮಧ್ಯಾಹ್ನ ಊಟ ಮಾಡದೆ ಬಂದ ನನಗೆ ಹಳಸಿದ್ದ ಅಡಿಗೆ ತಿಂದು ಹೊಟ್ಟೆ ಕೆಡಿಸಿಕೊಳ್ಳ ಬೇಕಾತು.ಊಟದ ಬಗ್ಗೆ ಚಕಾರು ಎತ್ತುವಂತಿರಲಿಲ್ಲ.ಏಟು ಎಲ್ಲಿ ಬಿಳತಾವು ಅನ್ನೊ ಭಯಕ್ಕ!
ಗಂಗಾವತಿಗೆ ಇದರಂತೆ ಬೀಗರಾಗಿ ಹೋದಾಗ ಸ್ವಲ್ಪರಲ್ಲೆ ಕೊರ್ಟಿಗೆ ಅಲೆಯುವ ಪ್ರಸಂಗ ಬರತಿತ್ತು.ಮದುವೆಯಲ್ಲಿ ವಧುವಿನ ತಂದೆ ಅಡಿಗೆನ ಕಾಂಟ್ರಾಕ್ಟರಿಗೆ ಅವರು ಡಿಮ್ಯಾಡು ಮಾಡಿದಷ್ಡು ಹಣಕ್ಕೆ, ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಿ ಅಂತ ಕೊಟ್ಟುಬಿಟ್ಟದ್ದರು. ಆದರೆ ಅಡುಗೆ ಬಡಿಸುವವರು ರಾತ್ರಿಯಿಂದಲೇ ಕೈ ಹಿಡಿದು ಬಡಸೋದು ನೋಡಿ ಅಸಮಧಾನ ಎದ್ದಿತ್ತು. ಬೆಳಿಗ್ಗೆ ನಾಷ್ಟಕ್ಕೂ ಹಾಗೆ ಮಾಡಿದಾಗಲೂ ತಡಕೊಂಡಿದ್ರು. ಎಲ್ಲ ಇವರದ ಕಾರಬಾರ ಅಂತ ಖಚಿತ ಮಾಹಿತಿ ಲಭ್ಯ ಆದ ಮೇಲೆ ಮಧ್ಯಾಹ್ನ ಊಟದಲ್ಲೂ ಇದೇ ವರ್ತನೆ ತೋರಿದ ಮೇಲೆ ಕೋಪ ತಾರಕಕ್ಕೆರಿತ್ತು. ನಮ್ಮಕಡೆಯ ಕಡೆಯ ಬಿಸಿ ರಕ್ತದ ಯುವಕರು ಲೇಟಾಗಿ ಊಟಕ್ಕೆ ಹೋದಾಗ ಐಟಮ್ ಗಳು ಖಾಲಿಯಾಗಿವೆ ಅಂದ ಕಾರಣಕ್ಕೆ ರೊಚ್ಚಿಗೆದ್ದು ಖಡಚಿಗಿ,ಸೌಟು ಹಿಡುಕೊಂಡು ಅವರನ್ನ ಓಡಾಡಿಸಿ ಕೊಂತ ನಾ ರೂಮಿನಲ್ಲಿ ಮಲಗಿರುವಾಗ ಅಲ್ಲಿ ಬಂದು ಮನಸೊ ಇಛ್ಛೆ ದಂಡಿಸಬೇಕೆ? `ಎಪ್ಪೊ,ಎವ್ವೊ' ಅಂತ ಅವರು ಪೋಲಿಸ್ ಠಾಣೆಗೆ ಹೋಗಲು ನಿಂತಾಗ ನನ್ನ ಕೈಕಾಲೆ ತಣ್ಣಗಾದವು.ದೊಡ್ಡವರೆಲ್ಲ ಕೂಡಿ ಬಗೆಹರಿಸಿದರಾದರೂ ಆ ಘಟನೆಯ ಸಾಕ್ಷಿದಾರನಾಗಿ, ಗಾಡಿ ಬಿಡೋ ತನ ಪರ ವಿರೋಧಿಗಳ ಕೈಯೊಳಗೆ ಸಿಕ್ಕು ನುಜ್ಜು ನುಜ್ಜಾದೆ.
ಮದುವೆ ಅಂದ್ರ ಮಾಡಿಕೊಳ್ಳುವವರಿಗೆ ಸುಂದರ ಅನುಭೂತಿ.ಹೆಣ್ಣೆತ್ತವರಿಗೆ ಭಾರ ಕಳೆದುಕೊಳ್ಳುತಿರುವೆವು ಎಂಬ ಸಂತೋಷ.ಬೀಗರುಗಳಿಗೆ ಇಷ್ಟು ಹಣಹೀರಿ ವಿಜಯ ಸಾಧಿಸಿದೆನೆಂಬ ಅಥವಾ ವರದಕ್ಷಿಣೆ ತೆಗೆದುಕೊಳ್ಳದೆ ಮಹಾನತೆ ಮೆರೆದೆನೆಂಬ ಬಿಗುಮಾನ.ನೆಂಟರು,ಗೆಳೆಯರುಗಳಿಗೆ ಲಗ್ನವೊಂದು ತಮ್ಮ ಬಜಟ್ಟೆಗೆ ಹೊರೆ ಎಂಬ ಮನೊವೇದನೆ. ಮಂಟಪದವರಿಗೆ,ಸಪ್ಲೈರ್ಸನವರಿಗೆ ಇಂತಹುಗಳು ಮೇಲಿಂದ ಮೇಲೆ ಜರಗುತಿರಲಿ ಎಂಬ ಆಶಾ ಬಾವ. ಮದುವೆ ಎಂಥವರಿಗೆ ಛಲೊ ಅಂದ್ರ ಇಸ್ಪೇಟು,ಜೂಜು ಆಡುವವರಿಗೆ,ನಟನೆ ಮಾಡೊರಿಗೆ,ಕಾಡು ಹರಟೆ ಹೊಡೆಯುವವರಿಗೆ,ಆಡಂಬರ,ಪ್ರತಿಷ್ಟೆ ಮೆರೆಯುವವರಿಗೆ,ಮಕ್ಕಳಿಗೆ,ಮದುವೆಯಾಗದೆ ಇರೊರಿಗೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಮದುವೆಯಲ್ಲಿ ಸಂಬ್ರಮಿಸುವ ಜನ ಇದ್ದಷ್ಟು, ಕರಬೊ ಮಂದಿ ಇರುತ್ತೆ. ಉಳಿದ ಮಂದಿ ಬರದಿದ್ರ ಎಲ್ಲಿ ತಪ್ಪುತಿಳಿದುಕೊಳ್ಳತಾರೊ ಅನ್ನೋ ಭಾವದಲ್ಲಿ ಕಾಟಾಚಾರಕ್ಕ ಬಂದವರಾಗಿರುತ್ತಾರೆ,ಅದರಲ್ಲಿ ಯಾವುದೊ ಅತೃಪ್ತಿಯಿಂದ ಕೊರಗೊ ಮಂದಿ ಹ್ಯಾಂಗಾದರೂ ಮದುವೆನ ಅಸ್ಥವ್ಯಸ್ಥ ಗೊಳಿಸಬೇಕೆಂದು ಅಥವಾ ಅಂತಹ ವಾತಾವರಣ ಉಂಟಾಗಲಿ ಎಂದು ಯೋಚಿಸುತ್ತಿರುತ್ತಾರೆ. ನಾಷ್ಟವೊ,ಊಟವೊ ಸರಿಯಾಗಿರದಿದ್ದರಂತು ಸಾಕು ಬೆಂಕಿ ಹಾಕಲಿಕ್ಕೆ,ರಾಮಾಯಣ ಮಾಡಲಿಕ್ಕೆ.ಇಂತಹ ಹಲವಾರು ಮುಖಗಳು ಕಾಣುವುದರಿಂದ ನಾನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳಾಕ ಪ್ರಯತ್ನಸತಿನಿ.ಆದ್ರೂ ಕೆಲವೊಂದು ಬಿಡದಿರುವಂತಹ ಮದುವೆಗಳಿಗೆ ಹೋಗಲೇಬೇಕಾದಾಗ ಮೊದಲು ಹೇಳಿದ ಹಾಗೆ ಕಾಟಾಚಾರದ ಅತಿಥಿಯಾಗಿ ಹೊಗ್ತಿನಿ, ಬಂಧು,ನೆಂಟರೆದುರಿಗೆ ಕೃತಕ ನಗೆ ಬಿರುತ್ತಾ ಕುಶಲ ವಿಚಾರಸ್ತಿನಿ.ಮರೆತೋ,ನೋಡದೇಯೊ ಮಾತಾಡಿಸದಿದ್ರೂ ತ್ರಾಸ. `ಎಷ್ಟು ಸೊಕ್ಕು ಬಂದದ ಇವಗ,ಸ್ವಲ್ಪನು ಮಾತಾಡಿಸದೆ ಹಾಂಗ ಹೋಗತಾನ ನೋಡು'ಅಂತ ಅನಿಸಿಕೊಳ್ಳ ಬೇಕಾಗುತ್ತದೆ.
ಒಂದಂತೂ ಮರೆಯಲಾರದಂಥಹ ಘಟನೆ,ಪರಿಚಿತ ಸ್ನೇಹಿತರ ಮದುವೆಗೆ ಹೋಗಿದ್ದೆ. ರಾತ್ರಿ ಬರುತೇನೆಂದಿದ್ದ ಬೀಗರು ಬೇಗನೆ ಬಂದಿದ್ರು.ಬೀಗರು ಬಂದಾರ ಅಂತ ಬೇಗ ಅಡಿಗೆ ಮಾಡು ಅಂತ ಅಡಿಗೆವನ ಹುಡಕತಾರ ಸಿಗವಲ್ಲ.ಕಲ್ಯಾಣ ಮಂಟಪವನ್ನು ಇಡೀಯಾಗಿ ಹುಡುಕಾಡಿದ ಮೇಲೆ ಮಾಳಿಗೆಯ ಯಾರಿಗೂ ಕಾಣದ ಜಾಗವೊಂದರಲ್ಲಿ ಕಂಠಪೂರ್ತಿ ಕುಡಿದು ಮಲಗಿದ್ದಾನೆ.ನೀರಾಕಿದರೂ ಎದ್ದೇಳುವ ಸ್ಥಿತಿಯಲ್ಲಿರಲಿಲ್ಲ.ಬೀಗರೂ ಬಂದಾರ,ಅಡಿಗಿ ಮನ್ಯಾಗ ಏನೂ ಇಲ್ಲ.ಹುಡುಗಿ ತಂದಿ ತಬ್ಬಿಬ್ಬಾಗಿದ್ದ.ರಾತ್ರಿಯಾಗಾಕ ಬಂದ್ರು ಇನ್ನೊಬ್ಬ ಅಡಿಗಿಯಾವ ಸಿಗಲಿಲ್ಲ.ನನ್ನ ಸ್ನೇಹಿತ ಹಾಗೂ ಅವರ ತಂದೆ ಬಡ ಬಡ ಕಾಲಹಿಡಿಯಾಕ ಬಂದ್ರು.ನಾನು ಹೌಹಾರಿ ಎದ್ದು ನಿಂತೆ.ವಿನಮ್ರತೆಯಿಂದ`ನನ್ನ ಮಗಳ ಬಾಳು ನಿನ್ನ ಕೈಯಾಗ ಅದ.ಬೀಗರು ಈಗಾಗಲೆ ಊಟ ಊಟ ಅಂತ ಒದರಾಡಕತ್ಯಾರ.ನಿಮಗ ಅಡಿಗೆ ವಿಚಾರದ ಬಗ್ಗೆ ಹೆಚ್ಚೆನು ಹೇಳಬೇಕಾಗಿಲ್ಲ.ಮನಸ್ಸು ಮಾಡ ಬೇಕು'ಅಂತಬೇಡಿಕೊಂಡ್ರು.ಗೆಳೆಯನೂ ಒತ್ತಾಯಿಸಿದ.ನಿರ್ವಹನ ಇರಲಿಲ್ಲ,ಮಂಗಳಕಾರ್ಯ ಬೇರೆ.ನಾಲ್ಕು ಜನನ ಕರಕೊಂಡು ಅನ್ನ,ಸಾರು ಮಾಡಿದೆ.ಅವರೆಲ್ಲ ಖುಷಿ ಪಟ್ರೂ ಈಗ ಎಲ್ಲೆರ ಹೊದಾಗ `ಅಡಿಗೆವನು ಇನ್ನೂ ಬಂದಿಲ್ಲ'ಅನ್ನೊ ಕೆಟ್ಟ ಸುದ್ದಿ ಕೇಳಿದಾಗ ಎದಿ `ಡವ ಡವ' ಹೊಡಕಂತಿರುತ್ತ.
**********
ಸರ್ ಲೇಖನ ಹಿಡಿಸಿತು. ಬಹಳ ರುಚಿಕಟ್ಟಾಗಿದೆ ಅನುಭವ ಪಾಕ:-)
ಧನ್ಯವಾದಗಳು ಮೇಡಂ
ಕೆಲವರ ನಸೀಬಾ ಹಾಂಗೆ ನೋಡ್ರೀ ಸರ!
ಖರೆ ಅದರಿ
ತುಂಬಾ ಚನ್ನಾಗಿದೆ ಸರ್ ನಕ್ಕು ನಕ್ಕು ಹೊಟ್ಟಿ ಹುಣ್ಣಾತು ನೋಡ್ರಿ.