ಸುಮ್ ಸುಮನಾ ಅಂಕಣ

ಮದಲ ನಾ ಸೆವೆನ್ ಮಂಥ ಬಾರ್ನ ಇದ್ದೇನಿ: ಸುಮನ್ ದೇಸಾಯಿ


ಮಧ್ಯಾಹ್ನ ಮೂರುವರಿ ಆಗಿತ್ತು.  ನಾನು ಮತ್ತ ನಮ್ಮ ತಮ್ಮಾ ಟಿಪಾಯಿ ಮ್ಯಾಲೆ ರಾಶಿಗಟ್ಟಲೆ ಕನ್ಯಾಗೊಳ ಫೋಟೊ ಮುಂದ ಹರವಿಕೊಂಡ ಕುತಿದ್ವಿ. ಮದಲ ಬ್ರಾಹ್ಮಣರಾಗ ಕನ್ಯಾದ ಅಭಾವ ಅದ ಹಂತಾದ್ರೊಳಗ ಇಂವಾ ನಮ್ಮ ತಮ್ಮಂದು ಆರ್ಸೊಣಿಕಿ ಬ್ಯಾರೆ ನೋಡಿ " ಲೇ ಲಗೂನ ಯಾವದ ಒಂದ ಸೆಲೆಕ್ಟ ಮಾಡಿ ಲಗ್ನಾ ಮಾಡಕೊಂಡ ಕಡಿಕ್ಯಾಗ, ಇಲ್ಲಾಂದ್ರ ಎಲ್ಲಿದರ ಒಂದ ಹಿಡಕೊಂಡ ಬಂದ ಮುದ್ರಾ ಹಾಕಿಸಿ ಮನ್ಯಾಗ ಹೋಗಿಸ್ಕೊಬೇಕಾಗ್ತದ ನೋಡ " ಅಂದೆ. ಖರೆನು ಈಗ ಕನ್ಯಾ ಅವ ಅವ ಅನ್ನೊದ್ರಾಗ ಖಪ್ಪಿಸೆ ಹೋಗಿರತಾವು. ಎಷ್ಟೊಕಡೆ  ಕನ್ಯಾ ಸಿಗಲಾರದಕ್ಕ ಮಕ್ಕಳು ಮಾಡಿಕೊಂಡಂಥಾ ಅಂತರಜಾತಿ ವಿವಾಹನ ಬಾಯಿಮುಚ್ಚಕೊಂಡ ಒಪ್ಪಗೊಂಡ ಸ್ವಾಮಗೊಳ ಕಡೆಯಿಂದ ಮುದ್ರಾ ಹಾಕಿಸಿ ಒಳಗ ಕರ್ಕೊಳ್ಳಿಕತ್ತಾರ. ಹೊದ ತಿಂಗಳಾ ನಮ್ಮ ಬಳಗದಾಗನ ನಡದ ಸಂಗತಿ ಇದು ಎನಂದ್ರ " ನಮ್ಮ ದೂರದ ಸಂಬಂಧಮಾಮಾನ ಮಗಾ ವರಾ ಇದ್ದಾ. ಹಳ್ಳ್ಯಾಗ ದೊಡ್ಡ ಜಮೀನದಾರ ಮನೆತನಾ ಅವರದು. ದೊಡ್ದ ಬಂಗಲೆ ತ್ವಾಟದ ಮನಿ, ಲೆಕ್ಕ ಇಲ್ಲದಷ್ಟ ಹೊಲಾ,ತ್ವಾಟಾ ಆಸ್ತಿ ಬಂಗಾರಾ, ಕೆಜಿ ಗಟ್ಟಲೆ ಬೆಳ್ಳಿ, ಮನ್ಯಾಗ ಆಳುಕಾಳು, ಕಾರು ಎಲ್ಲಾ ಸಂಮೃಧ್ಧಿಯಿಂದ ಕೂಡಿದ ಮನಿತನಾ ಅದು. ಇಷ್ಟಿದ್ದು ವರಾ ಹಳ್ಳ್ಯಾಗ ಇರತಾನ,ಹೋಲಾಮನಿ ಕೆಲಸಾ ಮಾಡತಾನ ಅಂತ ಕನ್ಯಾಗೊಳು ನಾ ಯಾಕ ಮಾಡ್ಕೊಂಡೇನ ಅಂತಿದ್ವು. ಹಂಗಂತ ವರಾ ಎನ ಅನಕ್ಷರಸ್ಥ ಎನ ಅಲ್ಲಾ. ಬಿ.ಎಸ್.ಸಿ ಅಗ್ರಿಕಲ್ಚರ್ ಮಾಡ್ಕೊಂಡಾನ. ಡಿಗ್ರಿ ಹೋಲ್ಡರ ಇದ್ದಾನ. ನೋಡಲಿಕ್ಕು ಚೆಲುವ ಚಂದ್ರಾಮ ಆಗ್ಯಾನ. ಆದ್ರು ಆಂವಾ ಹಳ್ಳ್ಯಾಗ ಇರ್ತಾನಂತ ಕನ್ಯಾ ಸಿಗವಲ್ಲುವಾಗಿದ್ವು. ನಮ್ಮ ಮಾಮಾಗೂ ಕನ್ಯಾ ಹುಡುಕಿ ಹುಡುಕಿ ಸಾಕಾಗಿ ಕಡಿಕೆ ಒಂದ ನಿರ್ಧಾರಕ್ಕ ಬಂದು ತನ್ನ ವಿಚಾರನ್ನ ಮನ್ಯಾಗ ಎಲ್ಲಾರ ಮುಂದ ಹೇಳಿದಾ, ಅದೇನಂದ್ರ " ಹೆಣ್ಣಮಕ್ಕಳ ಅನಾಥಶ್ರಮಕ್ಕ ಹೋಗಿ ಇದ್ದ ನಮ್ಮ ಹಕಿಕತ್ತ ಹೇಳಿ ಅಲ್ಲಿಯ ಹೆಣ್ಣಮಕ್ಕಳೊಳಗ ಯೋಗ್ಯಆದಂಥಾ ಒಂದ ಕನ್ಯಾ ನೋಡಿ ಮನಿತುಂಬಿಸಿಕೊಂಡ ಬಂದಬಿಡೊಣು.

ಇದರಿಂದ ಒಂದ ಹೆಣ್ಣಮಗಳ ಜೀವನಕ್ಕ ಸಮಾಧಾನಕೊಟ್ಟಂಥಾ ಕಲ್ಯಾಣ ಕೆಲಸನು ಆಗತದ ಮತ್ತ ನಮ್ಮ ಸಮಸ್ಯಾ ಪರಿಹಾರನು ಆಗತದ ಅಂದ್ರು."  ಇದನ್ನ ಕೇಳಿ ನಮ್ಮ ಮಾಮಾನ ಮಗಗಂತು ಒಪ್ಪಿಗ್ಯಾತು ಆದ್ರ ನಮ್ಮ ಮಾಮಿ ಸ್ವಲ್ಪ ಹಳೆ ಕಾಲದ ಮಡಿ, ಆಚಾರಾ ವಿಚಾರಾ ಇದ್ದಾಕಿ. ಆಕಿಗೆ ಸ್ವಲ್ಪ್ ಕಸಿವಿಸಿ ಆದ್ರು ಪರಿಸ್ಥಿತಿ ಜೊಡಿ  ಒಪ್ಪಂದ ಮಾಡಕೊಂಡ ಹೂಂ ಅಂದ್ಲು. ಕಡಿಕೆ ಒಂದ ಛೊಲೊ ದಿನಾ ನೋಡಿ ಮೊದಲಾ ನಿರ್ಧಾರ ಮಾಡಿದ ಪ್ರಕಾರ ಒಂದ ಅನಾಥಾಶ್ರಮಕ್ಕ ಹೋಗಿ ಅಲ್ಲಿಯ ಮುಖ್ಯಸ್ಥರಿಗೆ ತಮ್ಮ ಎಲ್ಲಾ ವಿಚಾರ ತಿಳಿಸಿ ಮಾಹಿತಿಕೊಟ್ಟು ನೀವು ಒಂದಸಲಾ ವಿಚಾರ ಮಾಡಿ ಆಮ್ಯಾಲೆ ನಿಮ್ಮ ನಿರ್ಧಾರ ಎನ ಅನ್ನೊದ ತಿಳಿಸರಿ ಅಂತ ಹೇಳಿ ಬಂದ್ರು. ಅನಾಥಾಶ್ರಮದ ಮುಖ್ಯಸ್ಥರೆಲ್ಲಾ ಸೇರಿ ಎಲ್ಲಾ ರಿತಿಯಿಂದ ವಿಚಾರ ಮಾಡಿ ನಮ್ಮ ಮಾಮಾಗ  ಫೋನ್ ಮಾಡಿ " ತಾವು ಮಾಡೊ ಕಲ್ಯಾಣ ಕೆಲಸಕ್ಕ ನಮ್ಮದು ಸಂಪೂರ್ಣ ಒಪ್ಪಿಗಿ ಅದ. ತಮಗ ಎಲ್ಲ ರೀತಿಯಿಂದ ಸಹಕಾರಗಳನ್ನ ನಾವು ಕೋಡತೇವಿ ಬಂದು ಭೇಟ್ಟಿ ಆಗ್ರಿ " ಅಂತ ಹೇಳಿದ್ರು. ಆಮ್ಯಾಲೆ ಎಲ್ಲಾ ಕಾರ್ಯಕ್ರಮ ಹೂಪೋಣಿಸಿದಷ್ಟು ಸರಳ ಆದ್ವು. ಸಾದಗಪ್ಪ ಇದ್ರು ನೋಡಲಿಕ್ಕೆ ಛಂದ ಇಧ್ಧಂತಾ ಪಿಯೂಸಿ ತನಕಾ ಓದಿದ ಹುಡಗಿನ್ನ ಆರಿಸಿ ಆಕಿಯ ಒಪ್ಪಿಗಿ ತಗೊಂಡು ಒಂದ ಛೋಲೊ ಮುಹುರ್ತದಾಗ ನಮ್ಮ ಮಾಮಾನ ಮಗನ ಹೆಸರು ವೇಂಕಟೇಶ ಅದ ಅದಕ್ಕ ಆ ಹುಡಗಿಗೆ ಪದ್ಮಾ ಅಂತ ಹೆಸರಿಟ್ಟು ಮನಿತುಂಬಿಸಿಕೊಂಡ್ರು. ನಮ್ಮ ಮಾಮಿಯ ಸಮಾಧಾನಕ್ಕ ಸ್ವಾಮಗೊಳ ಕಡೆಯಿಂದ ಒಂದ ಮುದ್ರಾನು ಹಾಕಿಸಿದ್ರು..

ಹುಡುಗಿ ಒಳ್ಳೆಯಾಕಿದ್ಲು ಲಗೂನ ಎಲ್ಲಾರ ಜೋಡಿನು ಹೊಂದಿಕೊಂಡ್ಲು. ನಮ್ಮ ಮಾಮಿ ಬಿಡಬೇಕಲ್ಲಾ ತಿಂಗಳೊಪ್ಪತ್ತಿನ್ಯಾಗ ಮಡಿ ಮೈಲಗಿ, ಮುಸರಿ ಗ್ವಾಮಾ, ನೇಮಾ ನಿತ್ಯಾ ಪಧ್ಧತಿ, ಎಲ್ಲಾ ಕಲಿಸಿಕೊಟ್ಟ ತಯಾರ ಮಾಡಿದ್ಲು. ನಮ್ಮ ಮಾಮಿ ಹೆಸರು ಸೋನಕ್ಕಾ ಅಂತ. ಗುಡಿಗೆ ಭಜನಿಗೆ ಪುರಾಣಕ್ಕ ಹೋದಾಗ ಸೋನಕ್ಕ ನಿಮ್ಮ ಸೊಸಿಗೆ ಎಲ್ಲ ನೇಮಾ ನಿತ್ಯಾ ಗೊತ್ತವ ನೋಡ್ರಿ,, ನಮ್ಮನ್ಯಾಗು ಅವ ಒಂದ ಮಂತ್ರ ಇಲ್ಲಾ ಸ್ತೊತ್ರ ಇಲ್ಲಾ ಇನ್ನ ತುಳಸಿಪೂಜಿಯಂತು ದೂರ ಉಳಿತು ಛಂದಾಗಿ ಸ್ನಾನಾ ಮಾಡ್ಯರ ನಾಶ್ಟಾ ಮಾಡತಾವ ಅಂದ್ರ ಅದೂ ಕೇಳಬ್ಯಾಡರಿ. ಅಂತ ಚಾಲವತ್ತಕೊಳ್ಳೊದ ನೋಡಿದ್ರ ನಮ್ಮ ಮಾಮಿಗೆ ಭಾಳ ಖುಷಿ ಆಗತದ.ಛಂದ ನಡದದ ಈಗ ಅವರ ತುಂಬ ಸಂಸಾರಾ. ನಮ್ಮ ಮಾಮಾನ ಈ ನಿರ್ಧಾರದೊಳಗ ಸ್ವಾರ್ಥ ಮತ್ತ ಪರಮಾರ್ಥ ಎರಡು ಇತ್ತು. ಒಂದ ಕಡೆ ಮಗನ್ನ ಮದುವಿನು ಆತು, ಇತ್ಲಾಕಡೆ ಒಬ್ಬ ಅನಾಥ ಹುಡಗಿ ಜೀವನಕ್ಕ ಶಾಶ್ವತ ನೆಲಿನು ಸಿಕ್ಕಂಗಾತು.  ಆಡ್ಕೊಳ್ಳೊ ಮಂದಿ ಸ್ವಲ್ಪ ದಿನಾ ಹಂಗಿಸಿ ಕಡಿಕ್ಯಾದ್ರು. ಜನಕ್ಕ ಯಾವದು ಸಮಾಧಾನ ಇರುದಿಲ್ಲಾ ಛೊಲೊ ಇದ್ರು ಒಂದ ಮಾತ ಅಂತಾರ, ಇಲ್ಲಂದ್ರು ಅಂತಾರ. ಒಬ್ಬರದ   ಮಾತಾಡಕೊಳ್ಳೊಮುಂದ ಮತ್ತ ಯಾರದರ ಹೊಸಾ ಸುದ್ದಿ ಸಿಕ್ತಂದ್ರ ಇದನ್ನ ಬಿಟ್ಟ ಅವರದ ಶೂರು ಮಾಡತಾರ. ನಾವ ಛೊಲೊ ಕೆಲಸಾ ಮಾಡಲಿಕತ್ತೇವಿ ಅನ್ನೊ ನಂಬಿಕಿ ನಮಗ ಇದ್ರ ಸಾಕು. 

ಈಗಿನ ಹುಡಗ್ಯಾರದು ವಿಚಿತ್ರ ಸ್ವಾಭಾವನ ಮತ್ತ.  ಹಳ್ಯಾಗ ಇದ್ರ ಎನಾತ ಅಂತರಕಿಲೆ ಎನ ಸತ್ತ ಹೋಗತಾರ ಏನ ದೇವರಿಗೊತ್ತ. ಅಲ್ಲಾ ಕೈಯ್ಯಾಗ ಇದ್ದ ಛೋಲೊ ವರಾ ಬಿಟ್ಟ ದೊಡ್ಡುರು ಶಹರಾ ಅಂತ ಬೆನ್ಹತ್ತಿ ಹೋಗತಾರಲ್ಲಾ ಇವರಿಗೆ ಎನ ಹೇಳೊದ ದೇವರಿಗೆ ಗೊತ್ತ. ಅಲ್ಲಾ ಈ ಹುಡಗ್ಯಾರು ಮನಶ್ಯಾರನ ಮದವಿ ಮಾಡಕೊಳ್ಳತಾರೊ ಎನ ಊರನ್ನ ಮದುವಿ ಮಾಡ್ಕೊತಾರೊ ಒಂದು ತಿಳಿಲಾರಧಂಗ ಆಗೇದ. ಹಿಂದಕ ವರಾ ಎನ ಕಲತಾನ, ಗುಣಾ ಸ್ವಭಾವಾ ಹೆಂಗ ಅವ, ಮನಿತನಾ ಹೆಂಗದ ಅಂತ ವಿಚಾರ ಮಾಡಿ ಮದವಿ ಮಾಡತಿದ್ರು. ಹುಡುಗಾ ಹಳ್ಳ್ಯಾಗರ ಇರಲಿ ದಿಲ್ಲ್ಯಾಗರ ಇರಲಿ ಮಗಳಿಗೆ ಹೊರಗಿನ ಬಿಸಲ ತೊರಸಲಾರಧಂಗ ಮನ್ಯಾಗ ಕೂಡಿಸಿ ದುಡದ ತಂದ ಹಾಕೊ ಅಷ್ಟ ಗಟ್ಟಿಮುಟ್ಟ ಇದ್ದು ಆರೋಗ್ಯವಂತ ಆಗಿದ್ರ ಸಾಕು ಹಿಂದಮುಂದ ನೋಡದ ಕೊಟ್ಟ ಮದವಿ ಮಾಡತಿದ್ರು. ಆದ್ರ ಈಗಿನ ಕಾಲದಾಗ ವರಾ ಎಂಥಾ ಊರಾಗ ಇರತಾನ, ಮನ್ಯಾಗ ಟಿವ್ಹಿ, ವಾಶಿಂಗ ಮಷೀನ್, ವ್ಯಾಕ್ಯೂಮ ಕ್ಲೀನರ್ ,ಅಡ್ಡ್ಯಾಡಲಿಕ್ಕೆ ಬೈಕ್, ಎಲ್ಲಾ ಅದನೊ ಇಲ್ಲೊ ನೋಡಿ, ( ಅವನ್ನೆಲ್ಲಾ ಆಂವಾ ಮೈ ತುಂಬ ಸಾಲಾ ಮಾಡಿ ತಗೊಂಡಿದ್ರು ಚಿಂತಿಲ್ಲಾ) ಇವತ್ತ ಆ ವರಾ ಒಪ್ಪತ್ತ ಉಣ್ಣೊ ಅಷ್ಟ ಗಳಿಸಿದ್ರು ಚಿಂತಿಲ್ಲಾ ಅಂಥಾಂವಗ ಕೊಡತಾರ. ವರಾ ಇವತ್ತ ಎನ ಕಲತಾನ, ಎಂಥಾ ನೌಕರಿ ಮಾಡತಾನ ಅನ್ನೊದಕ್ಕ ಯಾರು ಅಂಥಾ ಮಹತ್ವ ಕೊಡಂಗಿಲ್ಲಾ. ಹಳ್ಳಿ ಊರಾಗ ಅರಮನಿಯಂಥಾ ಮನ್ಯಾಗ ಇದ್ರು ಲೆಕ್ಕಕ್ಕಿರುದಿಲ್ಲಾ. ಅದ ಶಾಹರದಾಗ ಕಡ್ಡಿಪೆಟ್ಟಿಗಿಯಂಥಾ ಒಂದ ಖೋಲ್ಯಾಗ ಇದ್ರು ಊರಿನ ಮಾರಿ ನೋಡಿ ತಮ್ಮ ಮಗಳ ಮದವಿ ಮಾಡಿಕೊಡತಾರ. ಯಾಕಂದ್ರ ಮುಂದ ಆಜುಬಾಜು, ಬಳಗದವರ ಮುಂದ  ನಮ್ಮ ಮಗಳು ಅಳಿಯಾ ದೊಡ್ಡ ಊರಾಗ ಇರತಾರ ಅಂತ ಹೇಳ್ಕೊಳ್ಳಿಕ್ಕೆ ಬೇಕಲ್ಲಾ. ಅಂದ್ರ ಕಾಲಮಾನ ಹಿಂಗ ಬಂದದ ಅಲ್ಲಾ, ಎಲ್ಲಾರು ಶೋಕಿಗೆ,ದಿಖಾವೆಕ್ಕ ಮೆಚ್ಚಿ ಬಿಟ್ಟಾರ. 

ಹಿಂಗ ಹೊದ ತಿಂಗಳ ನಮ್ಮ ಮನಿ ಬಾಜುದ ಹುಡಗಿನ್ನ ಕನ್ಯಾ ತೊರಸಲಿಕ್ಕೆ ಬಾಗಲಕೋಟಿಗೆ ಕರ್ಕೊಂಡ ಹೋಗಿದ್ದೆ. ವರಾ ನೋಡೊ ಕಾರ್ಯಕ್ರಮನು ಆತು,ಅಲ್ಲೆ ಅವಲಕ್ಕಿ ಚಹಾ, ಬಾಳೆಹಣ್ಣಿನ ಸಮಾರಾಧನಿನು ಆತು. ಗಂಡಿನವರು  ಫೋನ ಮಾಡಿ ಎನನ್ನೊದ ತಿಳಸ್ತೇವಿ ಅಂತ ಹೇಳಿದ್ರು. ನಾವು ಹೋಗಿ ಎನನ್ನೊದ ತಿಳಸ್ತೇವಿ ಅಂದ ಬಂದ್ವಿ. ಹುಡಗಿ ಮಾರಿ ನೋಡಿದ್ರ ಅಂಥಾಪರಿ ಎನ ವರಾ ಮನಸಿಗೆ ಬಂಧಂಗ ಅನಸ್ಲಿಲ್ಲಾ. ವಾಪಸ ಬರೊಮುಂದ ಬಸ್ಸಿನ್ಯಾಗ ಕೂತಾಗ ಹವರಗ ಕೇಳಿದೆ " ಮತ್ತ ಹೆಂಗನಿಸಿದ್ನವ್ವಾ ವರಾ." ಅಂತ ಅಂದದ್ದಕ್ಕ ಆಕಿ ಮಾರಿ ಕಿಂಕರ ಮಾಡಿ" ಅಯ್ಯೊ ಹೇಳ್ಕೊಳ್ಳೊ ಹಂಗ  ಎನ ಸ್ಪೇಷಲ ಅನಿಸುದಿಲ್ಲೆಳರಿ." ಅಂದ್ಲು. ಅದಕ್ಕ ನಾ ಹಂಗ್ಯಾಕಂತಿಯ " ಅಲ್ಲ ವರಾ  ಕೆಂಪಗ ದುಂಡ ದುಂಡಗ ಮಟ್ಟಸಾಗಿ ಛೊಲೊ ಇದ್ದಾನ. ಬಿ ಕಾಂ. ಡಿಗ್ರಿ ಆಗೆದಂತ, ಮ್ಯಾಲಾಗಿ ಸರ್ಕಾರಿ ಕಛೆರ್ಯಾಗ ಎಫ್.ಡಿ.ಸಿ ಇದ್ದಾನ, ಸ್ವಂತ ಮನಿ, ಗಾಡಿ,ಭಂಗಾರಾ,ಬೆಳ್ಳಿ ಮತ್ತ ಹಳ್ಳ್ಯಾಗ ಸ್ವಲ್ಪ ಹೋಲಾಮನಿ ಆಸ್ತಿ ಅದ ಅಂತ. ಮಂದಿನು ಸಮಾಧಾನ ಇದ್ದಾರ ಅನಿಸ್ತದ. " ಅಂದೆ ಅದಕ್ಕ ಆಕಿ " ಅಯ್ಯ ಸುಮಾ ಕಾಕು ಅವರವ್ವನ ಕೈಯ್ಯಾಗಿನ ಬಿಲ್ವಾರಾ ಪಾಟಲಿ ಡಿಸೈನ್ ನೋಡಿದ್ರ ನಂಗೇನ ಅವು ಭಂಗಾರದ್ದ ಅನಸಂಗಿಲ್ಲಾ. ಪಕ್ಕಾ ಕೊಂಡದ್ದು ಜೋಗ್ಯಾರವು ಅನಿಸ್ತಾವ." ಅಂದ್ಲು.

ನಾ ಒಂದ ನಿಮಿಷ ಥಣ್ಣಗಾದೆ ಅಲ್ಲೆ ಹೋಗಿ ತಲಿ ಕೇಳ್ಗ ಹಾಕ್ಕೊಂಡ ಕೂತಾಕಿ ಕಳ್ಳ ದೄಷ್ಟಿಹಾಕಿ ಎನೆನ ಪತ್ತೆ ಹಚ್ಚ್ಯಾಳಂತ ಆಶ್ಚರ್ಯನ ಆತು. ಹೊಗ್ಲಿ ನೀಯೇನ ಅವರವ್ವನ ಜೋಡಿ ಮದವಿ ಮಾಡ್ಕೊಬೇಕಾಗಿಲ್ಲಾ ವರಾ ಹೇಂಗ ಅನಿಸಿದಾ ಹೇಳು ಅಂದೆ. ಅದಕ್ಕ ಆಕಿ " ಯಾಕೊ ಒಂಥರಾ ಹೆಪ್ಲ್ಯಾನಂಘ ಅನಿಸಿದಾ ಅಂದ್ಲು, ಇದ್ಯಾಕೊ ನಂಗ ಅತಿ ಅನಿಸ್ತು ಅದಕ್ಕ ನಾ" ಅಲ್ಲಾ ಅಂಥಾ ಛೊಲೊ ಕಲತ ಸರ್ಕಾರಿ ನೌಕರಿ ಮಾಡೊ ವರಾ ಇದ್ದಾನ ಅಂಥಾಂವಗ ನೀ ಹೆಪ್ಲ್ಯಾ ಅಂತಿ ಅಂದ್ರ ನಿಂದ ಯಾಕೊ ಅತಿ ಆತ ಅನಿಸ್ತದವಾ ಅಂದೆ. ಅದಕ್ಕ ಆಕಿ" ಅಲ್ಲ ಕಾಕು ಮನಿಗೆ ಕನ್ಯಾ ತೊರಸಲಿಕ್ಕೆ ಬರತಾರಂದ್ರ ಛಂದಾಗಿ ಒಂದ ಇಸ್ತ್ರಿ ಮಾಡಿದ್ದ ಪ್ಯಾಂಟ ಶರ್ಟ ಹಾಕ್ಕೊಂಡ ಕೂಡಬೇಕನ್ನೊ ಕಾಮನಸೆನ್ಸ್ ಇಲ್ಲಾ ಆ ಮನಶ್ಯಾಗ. ಮುದ್ದಿ ಮುದ್ದಿ ಆಗಿದ್ದ ಅಂಗಿ ಹಾಕ್ಕೊಂಡಿದ್ದಾ, ಮತ್ತ ಅದೇನ್ ಪ್ಯಾಂಟಿಗೆ ಮ್ಯಾಚಿಂಗ ಆಗೊ ಅಂಥಾ ಶರ್ಟ ಹಕ್ಕೊಳಿಕ್ಕು ತಿಳಿಯಂಗಿಲ್ಲ ತೀರಾ ಯಾವದೊ ಹಳೆ ಕಾಲದ ಕಾಮೇಡಿ ಹೀರೊ ಹಾಕ್ಕೊತ್ತಿಧ್ಧಂಥಾ ಚಕ್ಸ ಪ್ಯಾಂಟಿಗೆ ಯಾವದೊ ಶರ್ಟ ಹಕ್ಕೊಂಡ ಕೂತಿದ್ದಾ ಮಾರಾಯಾ. ಎನ ಹಂಗ ಜಗತ್ತಿನ್ಯಾಗ ಇಂವನ ಒಬ್ಬಾಂವನ ಸಂಧ್ಯಾವಂದನೆ ಮಾಡತಾನೆನೊ ಅನ್ನೊಹಂಗ ಆ ಮಾರಿ ತುಂಬ ಮುದ್ರಾ ,ಅಂಗಾರಾ ಅಕ್ಷಂತಿ ಬ್ಯಾರೆ. ಸ್ವಲ್ಪ ಸ್ವಚ್ಛ ಆಗಿ ಮಾರಿ ತೊಳಕೊಂಡ ಕೂತಿದ್ರ ಎನ ಇವರಪ್ಪನ ಮನಿ ಗಂಟ ಹೋಗತಿತ್ತೇನ. ಅಲ್ಲಾ ಅದು ಒಂದ ಮನಿನರ ಮನಿನ, ಉದ್ದಕ ರೈಲ ಗಾಡಿ ಹಂಗ ಅದ. ಒಂದ ರೂಮಿಲ್ಲಾ ,ಪ್ರಾಯವಸಿ ಅಂತು ಸಾಧ್ಯನ ಇಲ್ಲಾ ಆ ಮನ್ಯಾಗ.

ಮತ್ತ ಮನಿ ತುಂಬೆಲ್ಲಾ ಬರೆ ಹಿತ್ತಾಳಿ ಸಮಾನು ಮತ್ತ ಗ್ವಾಡಿ ತುಂಬ ಸತ್ತ ಅಜ್ಜ,ಮುತ್ತಜ್ಜನ ಫೋಟೊನ ತುಂಬ್ಯಾವ. ಮನಿ ಅನ್ನೊದನ್ನ ಒಯ್ದು ಪ್ರಾಚೀನವಸ್ತುಗಳ ಮ್ಯೂಸಿಯಂ ಮಾಡಿಟ್ಟಾರ. ಸ್ವಂತ ಮನಿ ಇದ್ರೇನಾತ ದಿನಾ ಗ್ವಾಡಿಗೆನ ಉಪ್ಪಿನಕಾಯಿ ಹಚ್ಚಿ ನೆಕ್ಕಲೇನ. ಒಂದ ಸ್ವಲ್ಪನು ಮಾಡರ್ನ ಅನಿಸುದಿಲ್ಲಾ. ಅವನ ಹತ್ರ ಎನ ಮಹಾ ಅಪಾಚಿ ಬೈಕ ಅದ ಅನ್ನೊ ಹಂಗ ಹೇಳ್ತಿರಲ್ಲಾ, ಅದು ಒಂದ ಗಾಡಿನರ ಗಾಡಿನ, ಹೆಣ್ಣಮಕ್ಕಳ ಹೊಡೆಯೊ ಕೈನೆಟಿಕ್ ಅದ. ಇನ್ನ ಆ ಅಂಬಾಸಿಡರ ಕಾರ ನೋಡಿದ್ರನ ಗಬ್ಬ ಇದ್ದ ಕರೆ ಎಮ್ಮಿ ಹಂಗನಸ್ತದ. ಹೋಲಾ ಮನಿ ಇದ್ರ ಎನಹೋಗಿ ಚಂಡ ನೆಲಕ್ಕ ಹಚ್ಚಿ ಲಾಗಾ ಹೋಡಿಲ್ಯಾ ಹೇಳ್ರಿ. " ಅಂತ ಪೂರಾಣ ಊದಿ ಮುಗಿಸಿದ್ಲು. ನಾ ಒಂದ ಘಳಿಗಿ ದಿಟ್ಟಿಸಿ ಆಕಿ ಮುಖಾನೋಡಿ ಮನಸಿನ್ಯಾಗ "ಅವ್ವ ಇದರ ಸುಟ್ಟಬರಲಿ ಈಗಿನ ಹೆಣ್ಣಮಕ್ಕಳ ದಿಮಾಕಿಗೆರ " ಅಂತ ಅನಕೊಂಡ ಮ್ಯಾಲೆ " ಮಾಡಕೊಳ್ಳಾಕಿ ನೀನವಾ, ನಮ್ದೇನದ ಅಂದು ಸುಮ್ನಾದೆ. ಈಗಿನ ಹರೆದ ಮಕ್ಕಳಿಗೆ ಛೊಲೊ ಯಾವದು, ಸುಮಾರ ಯಾವದು ಅನ್ನೊ ವಿಚಾರ ಮಾಡೊ ಶಕ್ತಿನ ಇಲ್ಲಧಂಗ ಆಗೇದ. ಆಮೇಲೆ ಎನ ಹೇಳಿದ್ರು ಕೇಳೊ ಅಷ್ಟು ತಾಳ್ಮಿನ ಇರಂಗಿಲ್ಲ ಅವರಿಗೆ.

ಅಂತು ಇಂತು ನಮ್ಮ ತಮ್ಮಾ ಇದ್ದದ್ರಾಗ ಒಂದ ಛೊಲೊ ಹುಡಗಿ ಫೋಟೊ ಆರಿಸಿದಾ. ಹುಡಗಿ ಕಲತಾಕಿದ್ಲು, ಅಪ್ಪಾ ಅಮ್ಮಗ ಒಬ್ಬಾಕಿನ ಮಗಳು, ತಕ್ಕ ಮಟ್ಟಿಗೆ ಮನೆತನದಿಂದ ಛೊಲೊ ಇದ್ರು. ಮದವಿಕಿಂತಾ ಮದಲನ ಮೊಬೈಲನ್ಯಾಗ ಎಸ್ ಎಂ ಎಸ್ ಹಾರ್ಯಾಡಿದ್ವು. ಆಕಿ ಎನೊ ನಮ್ಮ ತಮ್ಮಗ " ನಾವು ಜಮಿನ್ದಾರ ಮನತನದವರು ನಮಗ ಯಾವಾಗಿದ್ರು ಡ್ರಾಯ್ ಫ್ರೂಟ್ಸ್ ತಿಂದನ ರೂಢಿ" ಅಂದ್ಲಂತ, ಅದಕ್ಕ ಇಂವಾ ಫೋನ ಮಾಡಿ ಅಕ್ಕಾ ಹಿಂಗ ಅಂತ ಹೇಳಿದಾ ಅದಕ್ಕ ನಾ" ಆರೋಗ್ಯಕ್ಕ ಛೊಲೊ ಬಿಡು ಗುಡ ಹ್ಯಾಬಿಟ್" ಅಂದು ಸಮಾಧಾನ ಮಾಡಿದೆ. " ಮತ್ತ ಒಂದಿನಾ ನಂಗ ಮನಿ ಕೆಲಸಾ ಮಾಡಿನ ರೂಢಿ ಇಲ್ಲಾ ಅಂದ್ಲಂತ" ಅದಕ್ಕ ನಾ "ಈಗಿನ ಕಾಲದಾಗ ಕನ್ಯಾ ಸಿಗೊದನ ವಝ್ಝ ಅದ ಅಂಥಾದ್ರಾಗ ಸಿಕ್ಕ ಕನ್ಯಾ ಹೆಂಗಿದ್ರು ಮಾಡ್ಕೊಳ್ಳಬೇಕು, ನೀ ಎನು ಕಿರಿಕಿರಿ ಮಾಡಬ್ಯಾಡಾ, ಕೆಲಸದಾಕಿನ್ನ ಇಟಗೊಂಡ್ರಾತ ತಗೋ" ಅಂದೆ.ನೋಡ ನೋಡೊದ್ರಾಗ ಮದವಿನು ಆತು. ಸತ್ಯನಾರಾಯಣ ಪೂಜಾ ಮುಗಿಸ್ಕೊಂಡ ವಾಪಸ ಊರಿಗೆ ಬಂದ್ವಿ. ಮುಂದ ಎರಡ ದಿನಕ್ಕ ಮಧ್ಯಾನ ೧೨ ಕ್ಕ ನಮ್ಮ ತಮ್ಮನ ಫೋನ ಬಂತು. ಯಾಕೊ ಸೋತವರಂಘ ಧ್ವನಿ ಇತ್ತು.

ಎಲ್ಲೆ ಇಬ್ಬರು ಗಂಡಾ ಹೆಂಡತಿ ಜಗಳಾಡಿರಬೇಕಂತ ಅನಿಸಿ " ಯಾಕ ಎಲ್ಲಾ ಆರಾಮ ಅದ ಇಲ್ಲೊ, ಯಾಕ ಧ್ವನಿ ಒಂಥರಾ ಆಗೇದ, ಜಗಳಾಡಿರೇನ " ಅಂತ ಕೇಳಿದೆ  ಅದಕ್ಕ ಆಂವಾ" ಇಲ್ಲಕ್ಕಾ ಮತ್ತ ಮಧ್ಯಾಹ್ನ ಊಟಕ್ಕ ಮನಿಗೆ ಬಂದೆ, ಇನ್ನು ಅಡಗಿ ಮಾಡಿಲ್ಲ್ಯಾಕ ಅಂತ ಕೇಳಿದೆ. ಅದಕ್ಕ ಆಕಿ " ನಾ ಭಾಳ ಸೂಕ್ಷ್ಮ ಇದ್ದೇನಿ,  ನಮ್ಮ ಹೆಲ್ತ ಅಷ್ಟಕ್ಕಷ್ಟ ,ಮದಲ ನಾವ ಸೆವೆನ ಮಂಥ ಬಾರ್ನ ಇದ್ದೇನಿ, ನನಗ ಕೆಲಸಾ ಮಾಡಿ ರೂಢಿನ ಇಲ್ಲಾ " ಅಂದ್ಲಂತ ಅದಕ್ಕ " ಅಕ್ಕ ಈ ಯೊಳರಾಗ ಹುಟ್ಟಿದ್ದನ್ನ ನನಗ ಕಟ್ಟಿ ಕೈತೊಳಕೊಂಡಾರ ಈಗೆನ್ ಮಾಡ್ಲಿ "ಅಂದಾ. ಅದಕ್ಕ ನಾ" ಇನ್ನೆನ ಮಾಡತಿ ತಮ್ಮಾ ನಿನ್ನ ಕಡೆ ಯಾವ ಇನ್ನ ಲೈಫ ಲಾಯಿನ ಇಲ್ಲಾ. ಪಾರಾಗಲಿಕ್ಕೆ ಅಂತು ಸಾಧ್ಯನ ಇಲ್ಲಾ. ನೀ ಕಲತ ಅಡಗಿ ಮಾಡೊ ವಿದ್ಯಾ ಇನ್ನೆಂದ ಉಪಯೋಗ ಆಗ್ಬೇಕ, ನೀನ ಅಡಗಿ ಮಾಡೊ ರೂಢಿ ಮಾಡ್ಕೊ. ನೀ ಪ್ರೀತಿಯಿಂದ ಎಂಟ ದಿನಾ ಅಡಗಿ ಮಾಡಿ ಹಾಕಿದ್ಯಂದ್ರ ಒಂಬತ್ತನೆ ದಿನಾ ಆಕಿ ಖರೇನು ಅಡಗಿ ಕಲಕೊಳ್ಳಿಕ್ಕೆ ಪ್ರಯತ್ನ ಮಾಡೆ ಮಾಡತಾಳ. ಇಲ್ಲಾಂದ್ರ ಹೆಂಡತಿ ಅಂದಮ್ಯಾಲೆ ನಿನ್ನ ಮನಸಿಗೆ ತಕ್ಕಂಘ ನಡಕೊಂಡ್ರ ಮಾತ್ರ ಹೆಂಡತಿ ಇಲ್ಲಾಂದ್ರ ಆಲ್ಲಾ ಅಂದ್ರ ಅದು ತಪ್ಪಾಗತದ. ಒಂದ ಸಲಾ ನೀ ಆಕಿನ್ನ ನಿನ್ನ ಜೀವನಾದ ಸ್ವೀಕಾರ ಮಾಡಿ ಅಂದ್ರ ಆಕಿಯ ಗುಣಾವಗುಣಗೊಳನು ಮನಸ್ಪೂರ್ತಿ ಸ್ವೀಕಾರ ಮಾಡಬೇಕು. ಅದಕ್ಕ " ಟೇಡಾ ಹೈ , ಪರ ಮೇರಾ ಹೈ." ಅಂತ ಅನ್ಕೊತ ಖುಷಿಯಿಂದ ಜೀವನಾ ಮಾಡ ಅಂತ ಹೇಳಿ ಫೋನ ಕೇಳಗಿಟ್ಟೆ.

ಜಗತ್ತಿನ್ಯಾಗ ಎಲ್ಲಾರು ಜೀವನದ ತಮ್ಮದ ಆದಥಾ ಕನಸ ಕಂಡಿರತಾರ, ಆದರ ಎಲ್ಲಾರಿಗು ಎಲ್ಲಾನು ಅಂದ್ಕೊಂಢಂಗ ಸಿಗುದಿಲ್ಲಾ. ಆದರ ನಮ್ಮ ವಾಸ್ತವದೊಳಗ ಕನಸುಗಳನ್ನ ಕೂಡಿಸಿ ನೋಡ್ರಿ ಎಲ್ಲಾ ನು ಛಂದ ಅನಿಸ್ತದ. ನಾವು ಯಾರಲ್ಲೆ ನ್ಯೂನತೆಗಳನ್ನ ಹುಡಕತಿರ್ತೇವೊ ಅವರಲ್ಲೆನ ನಾವ ಬಯಸಿ ಹುಡಕಲಿಕತ್ತ ಪ್ರೀತಿ ಕಾಣಸ್ತದ. ನಮ್ಮ ಜೀವನದೊಳಗ ಸುಖಾನ ತುಂಬಿರತದ. ಜಗತ್ತು ಛಂದ ಅನಿಸ್ತದ.


ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ಮದಲ ನಾ ಸೆವೆನ್ ಮಂಥ ಬಾರ್ನ ಇದ್ದೇನಿ: ಸುಮನ್ ದೇಸಾಯಿ

  1. ಬೋ ಪಸಂದಾಗಿ ಬರ್ದೀರಿ… ಕಾಮಿಡಿ ಜೋತಿಗ ಒಳ್ಳೇ ವಿಚಾರಾನೂ ಹೇಳಿರಿ. ಒಟ್ಟನಾಗ ಸೂಪರಾಗೈತಿ ನೋಡ್ರೀ…

  2. ಅಕ್ಕೋರ. ಸಖತ್ತಾಗಿ ಬರ್ದೀರ..
    ಅನಾಥಾಶ್ರಮದ ಹುಡ್ಗಿ ಕತೆ: ನಂ ಶಿಮೋಗ ಕಡಿಗೂ ಹಿಂಗೇ ಆಗದ 🙁 ಹುಡ್ಗಿ ಹಳ್ಳೀ ಕಡೆ ಬರಕೆ ಒಪ್ದೇ ಅನಾಥಾಶ್ರಮದಿಂದ ಕರೆತರೋ ಪರಿಸ್ಥಿತಿ ಆಗೇದ..

    ಹುಡ್ಗಿ ಹುಡ್ಗನ್ ನೋಡಿದ್ ಕತೆ: ಒಮ್ಮೆ ಬೆಚ್ಚಾದೆ ನೋಡ್ರಿ. ಹಿಂಗೂ ಇರ್ತದಾ ಹೇಳಿ..

    ಸೆವೆನ್ ಮಂತ್ ಬಾರ್ನ್ ಕತೆ: ಇಂತ ಪರಿಸ್ಥಿತಿ ಯಾರಿಗಾರಾ ಬರ್ಬೋದು.. ಆದರೆ ಅದರ ಕೊನೆಯಲ್ಲಿ ನೀವು ಕೊಟ್ಟ ಮೆಸೇಜು ಸ್ಯಾನೆ ಪಸಂದಾತ್ರಿ..
     

  3. ಖರೇನ ನೋಡ್ರೀ ಬಾಯೇರ….ನಿಮ್ಮ ಲೇಖನಾ ಭಾಳ ಚಲೋ ಬಂದೇತ್ರಿ…ಖುಷಿ ಆಗ್ತದ ನೋಡ್ರೀ….Best wishes…

  4. ಲೇಖನ ಚೆನ್ನಾಗಿ ಮೂಡಿ ಬಂದಿದೆ. ಉತ್ತರ ಕನಾಱಟಕದ ಭಾಷೆ ನಿಮಗೆ ಕರಗತವಾಗಿದೆ,  ಇದು ಲಲಿತ ಪ್ರಬಂಧ ವೆನ್ನುವದಕ್ಕಿಂತ ಹಾಸ್ಯಲೇಖನವೆನ್ನುದು ಹೆಚ್ಚು ಸೂಕ್ತ. ಜನರನ್ನು ನಗಿಸುವುದರಲ್ಲಿ ನೀವು ಯಶಸ್ವಿಯಾಗಿದ್ದೀರಿ ಮೊ:9448093589

  5. Neevu edurige kutu hellikattiri nava kellikattevi anasohanga baradeeri,verygood,navu innu bhal kalibekaged.

Leave a Reply

Your email address will not be published. Required fields are marked *