ಎಲ್ರಿಗೂ ಒಂದು ಹೊಟ್ಟೆ ಇರೋದು ಗೊತ್ತು. ಈ ಮತ್ತೊಂದು ಹೊಟ್ಟೆ ಯಾವುದು ಅಂದ್ರಾ ? ಒಂದು ಹೊಟ್ಟೆ ತುಂಬಿಸೋದೇ ಕಷ್ಟ, ಇನ್ನು ಈ ತರ ಮತ್ತೊಂದು ಹೊಟ್ಟೆ ಏನಾದ್ರೂ ಇದ್ರೆ ಅದನ್ನು ಹೇಗಪ್ಪಾ ತುಂಬಿಸೋದು ಅಂದ್ರಾ ? ತಾಯಿಯ ಹೊಟ್ಟೆಯೊಳಗಿರುವ ಮಗುವಿನ ಹೊಟ್ಟೆಯನ್ನು ಮತ್ತೊಂದು ಹೊಟ್ಟೆ ಅಂತೇನಾದ್ರೂ ಕರೆಯೋಕೆ ಹೊರಟಿದ್ದೀನಿ ಅಂತೇನಾದ್ರೂ ವಿಚಿತ್ರ ಆಲೋಚನೆ ಬಂತಾ ? ಊಟ ಹೆಚ್ಚಾಗಿ ಹೊಟ್ಟೆ ಕೆಳಗಾಗಿ ಮಲಗೋಕಾಗದೇ ಇದ್ದಾಗೆಲ್ಲಾ ಹೆತ್ತವ್ವ ನನ್ನ ಹೊತ್ತಾಗ ಹೇಗೆ ಹೊಟ್ಟೆ ಕೆಳಗೆ ಮಲಗಲಾಗದೇ ಬೋರಲು ಮಲಗಿಯೇ ಕಳೆದಿರಬಹುದಪ್ಪಾ ಅಂತನಿರುವವರಿಗೆ ಈ ತರಹ ಆಲೋಚನೆ ಬಂದರೆ ತಪ್ಪೇನಲ್ಲ. ಎರಡು ತಲೆ ಇದ್ದು ಹೊಟ್ಟೆಯಿಂದ ಕೆಳಗೆ ಕೂಡಿಕೊಂಡಿರುವ ಸಯಾಮಿ ಅವಳಿಗಳನ್ನ ಒಬ್ಬನೇ ಅಂತಂದ್ರೆ ಅವರಿಗೂ ಒಟ್ಟು ಎರಡು ಹೊಟ್ಟೆಗಳಿರುತ್ತಲ್ವಾ ಅಂದ್ರಾ ? ಮೇಲಂದ ಆಲೋಚನೆಯನ್ನು ಸದ್ಯಕ್ಕೆ ಬದಿಗಿಟ್ಟು ಒಂದು ತಲೆಯ ಮನುಷ್ಯರಿಗೆ ಒಂದಕ್ಕಿಂತ ಹೆಚ್ಚು ಹೊಟ್ಟೆಗಳೇನಿಲ್ಲ ಅಂತ್ಲೇ ಅನ್ನಬಹುದು. ಮನುಷ್ಯರಿಗಿಲ್ಲದಿದ್ರೂ ಈ ತರಹ ಒಂದಕ್ಕಿಂತ ಹೆಚ್ಚು ಹೊಟ್ಟೆಗಳಿರುವ ಅಥವಾ ವೈಜ್ಞಾನಿಕವಾಗಿ ಹೇಳೋದಾದ್ರೆ ಒಂದೇ ಹೊಟ್ಟೆಯಲ್ಲಿ ಅನೇಕ ಕೋಣೆಗಳಿರುವ ಪ್ರಾಣಿಗಳಿದ್ದಾವೆ. ಮುಂಚೆಯೇ ಒಮ್ಮೆ ಹೊಟ್ಟೆಯ ಬಗ್ಗೆ ಬರೆದಿದ್ದೆನಲ್ಲಾ ಇಲ್ಲಿ ಎಂಬ ಸ್ನೇಹಿತರ ಗೊಂದಲಕ್ಕೆ (ಲೇಖನ) ಅದು ಇದಲ್ಲ, ಇದು ಅದಲ್ಲವೆಂದು ತೆರೆಯೆಳೆಯುತ್ತಾ ಹೊಸ ಕತೆಗೆ ತೆರೆಯನ್ನು ಸರಿಸುತ್ತಿದ್ದೇನೆ.
ಹೊಟ್ಟೆಯಲ್ಲಿ ಕೋಣೆಗಳಾ ?
ಹೌದು. ಯಾವಾಗ್ಲೂ ಏನಾದ್ರೂ ತಿನ್ನಬೇಕೆಂದು ತುಡಿಯುತ್ತಿರುವ ಜನಕ್ಕೆ ಏನು ಯಾವಾಗ್ಲೂ ಎಮ್ಮೆ ತರ ಮೆಲುಕು ಹಾಕ್ತಾನೆ ಇರ್ತೀಯ ? ಬಾಯಿಗೊಂದಿಷ್ಟು ಬಿಡುವು ಕೊಡು ಅಂತ ಹಿರಿಯರು ಬಯ್ಯೋದನ್ನು ನೋಡಿರಬಹುದು. ಎಮ್ಮೆ ಮೆಲುಕು ಹಾಕೋದಕ್ಕೂ, ಹೊಟ್ಟೆಯಲ್ಲಿನ ಕೋಣೆಗಳಿಗೂ ಏನು ಸಂಬಂಧಾ ಅಂದ್ರಾ ? ಅಲ್ಲಿಗೇ ಬರ್ತಿದೀನಿ. ದನ, ಎಮ್ಮೆ , ಆಡು ಹೀಗೆ ಹಲವು ಸಸ್ತನಿಗಳನ್ನೊಳಗೊಂಡ ಮೆಲುಕು ಹಾಕುವ ಜೀವಿಗಳು ಅನ್ನೋ ಪ್ರಬೇಧವಿದೆ. ಸಸ್ತನಿಗಳಲ್ಲಿನ ಈ ಪ್ರಭೇದಕ್ಕೆ ruminants ಅಂತಾರೆ. ಕನ್ನಡದಲ್ಲಿ ಅವನ್ನು ಮೆಲುಕುಜೀವಿಗಳು ಅಂತನ್ನಬಹುದೇನೋ. ಅವಕ್ಕೆ ಈ ಹೆಸರು ಬರಲು ಹೊಟ್ಟೆಯಲ್ಲಿರೋ ರೂಮೆನ್ ಎಂಬ ಕೋಣೆಯೇ ಕಾರಣ. ಹಂಗಂತಾ ಅದೊಂದೇ ಕೋಣೆಯಲ್ಲ ಅವುಗಳಲ್ಲಿರೋದು. ರೂಮೆನ್(rumen), ರೆಟಿಕುಲೆಮ್(reticulam),ಒಮೇಶಮ್(omasum), ಅಬೊಮೊಸಮ್(abomosum) ಎಂಬ ನಾಲ್ಕು ಕೋಣೆಗಳಿರುತ್ತೆ ಆ ಜೀವಿಗಳಲ್ಲಿ.
ಹೊಟ್ಟೆಯಿರೋದೇ ಜೀರ್ಣಿಸೋಕೆ ಅಂದಾಗ ಅದರಲ್ಲಿ ಎಷ್ಟು ಕೋಣೆಯಿದ್ದರೇನು ?
ಚೆನ್ನಾಗಿ ಅಗಿದು ತಿನ್ನಪ್ಪ, ಹೊಟ್ಟೇಲಿ ಮತ್ತೊಂದಿಷ್ಟು ಹಲ್ಲಿರಲ್ಲ ಇವನ್ನ ಚೂರು ಮಾಡೋಕೆ ಅಂತ ಗಬ ಗಬ ಊಟ ಮಾಡೋ ಹುಡುಗ್ರಿಗೆ ಹಿರಿಯರು ಬಯ್ತಿರ್ತಾರೆ. ಚೆನ್ನಾಗಿ ಅಗಿಯದ ಆಹಾರ ಹೊಟ್ಟೆಯಲ್ಲಿನ ಜೀರ್ಣರಸಗಳಿಂದ ಸರಿಯಾಗಿ ಜೀರ್ಣವಾಗದೇ ದೇಹಕ್ಕೆ ಆಹಾರದ ಪೂರ್ಣ ಸತ್ವಗಳು ದಕ್ಕದೇ ಹೋಗಬಹುದೆಂಬ ಅವರ ಉದ್ದೇಶ ನಮ್ಮ ಪಾಲಿಗೆಂತೂ ಸತ್ಯವೇ. ಮೆಲುಕು ಹಾಕೋ ಜೀವಿಗಳ ಜೀರ್ಣಕ್ರಿಯೆ ಒಂದು ಹೊಟ್ಟೆಯಿರುವ ನಮ್ಮ ಜೀರ್ಣಕ್ರಿಯೆಗಿಂತ ಹೇಗೆ ಭಿನ್ನ ಅನ್ನೋದು ಅರ್ಥ ಆಗ್ಬೇಕು ಅಂದ್ರ ನಮ್ಮ ಜೀರ್ಣಕ್ರಿಯೆ ಹೇಗೆ ಅನ್ನೋ ಸ್ಥೂಲ ಕಲ್ಪನೆ ಇರಬೇಕಾಗುತ್ತೆ.
ನಾವು ತಿಂದ ಆಹಾರ ಹೊಟ್ಟೆ ತಲುಪಿ, ಹೊರಹೋಗೋ ದಾರಿಯಲ್ಲಿ ಅದು ಒಳಗಾಗೋ ಅವಸ್ಥೆಗಳೇನು ?
ಮೊದಲು ನಮ್ಮ ಬಾಯಲ್ಲಿ ಆಹಾರ ಅಗೆಯಲ್ಪಡುವಾಗ ಎಂಜಲಿನಲ್ಲಿರುವ ಅಮೈಲೇಸ್ ಎನ್ನೋ ಕಿಣ್ವ ಅದರೊಂದಿಗೆ ಸೇರುತ್ತದೆ. ಇದು ಆಹಾರದಲ್ಲಿರುವ ಶರ್ಕರಪಿಷ್ಟಗಳನ್ನು ಬೇರ್ಪಡಿಸೋಕೆ ಸಹಾಯಕವಾಗುತ್ತದೆ. ನಂತರ ಬರುವ ಫಾರಿಂಕ್ಸ್ ಎನ್ನೋ ಭಾಗ ಮತ್ತು ನಂತರದ ಅನ್ನನಾಳದಲ್ಲಿ ಯಾವ ಜೀರ್ಣರಸಗಳೂ ಸ್ರವಿಸದಿದ್ದರೂ ಆ ಮೂಲಕ ಆಹಾರ ಹೊಟ್ಟೆಯನ್ನು ತಲುಪುತ್ತದೆ. ಹೊಟ್ಟೆಯಲ್ಲಿ ಒಂತರಾ ಜೀರ್ಣರಸಗಳ ಜಾತ್ರೆ. ಯಾಕೆ ಅಂದ್ರಾ ಇಲ್ಲಿ ಸ್ರವಿಸೋ ಗ್ಯಾಸ್ಟ್ರಿಕ್ ಜ್ಯೂಸ್ ಎಂಬುದು ಅನೇಕ ರಾಸಾಯನಿಕಗಳ ಸಂಗಮ. ಇದರಲ್ಲಿರೋ ಪೆಪ್ಸಿನ್ ಮತ್ತು ಗ್ಯಾಸ್ಟ್ರಿಕ್ ಲೈಪೇಸ್ಗಳ ಬಗ್ಗೆ ಮತ್ತು ಅವುಗಳಿಂದ ಹೊಟ್ಟೆಯೇ ಕರಗಿ ಹೋಗದಂತೆ ತಡೆಯಲು ಸ್ರವಿಕೆಯಾಗೋ ಪ್ರತ್ಯಾಮ್ಲದ ಬಗ್ಗೆಯೂ ಹಿಂದಿನ ಸಲ ಬರೆದಿದ್ದೆ. ನಂತರ ಮೇಧೋಜೀರಕಗ್ರಂಥಿ, ಯಕೃತ್ತು, ಪಿತ್ತಕೋಶಗಳು, ಸಣ್ಣ ಕರುಳಲ್ಲೂ ಸ್ರವಿಸೋ ಹಲವಾಮ್ಲಗಳಿಂದ ಆಹಾರ ಇನ್ನಷ್ಟು ಜೀರ್ಣವಾಗಿ ದೊಡ್ಡಕರುಳಿನಲ್ಲಿ ಅಗತ್ಯ ಅಂಶಗಳನ್ನು ಹೀರಲ್ಪಟ್ಟು ವಿಸರ್ಜಿಸಲ್ಪಡೋ ಆಹಾರದ ಹಾದಿಯ ಬಗ್ಗೆ ಬರೆದರೆ ಅದೇ ಒಂದು ದೊಡ್ಡ ಕತೆಯಾದೀತು.
ನಮ್ಮ ಆಹಾರ ಜೀರ್ಣಕ್ರಿಯೆಗಳಿಗೂ ಮುಲುಕುಹಾಕೋ ಜೀವಿಗಳ ಜೀರ್ಣಕ್ರಿಯೆಗೂ ಏನು ವ್ಯತ್ಯಾಸ, ಅದರ ಅಗತ್ಯವೇನು ?
ಈ ಪ್ರಾಣಿಗಳು ತಿನ್ನೋ ಹುಲ್ಲು, ಸೊಪ್ಪುಗಳಲ್ಲಿರೋ ಸೆಲ್ಯುಲೋಸ್, ಹೆಮಿ-ಸೆಲ್ಯುಲೋಸ್ ಮತ್ತು ಫೈಬರ್ಗಳು ಅಷ್ಟು ಸುಲಭವಾಗಿ ಜೀರ್ಣವಾಗುವಂತಹದಲ್ಲ. ಹಾಗಾಗಿ ಅವುಗಳನ್ನು ಜೀರ್ಣಿಸುವುದಕ್ಕೆಂದೇ ರೂಪಿತವಾಗಿರುವಂತಹ ಅವುಗಳ ಹೊಟ್ಟೆಯೇ ನಮಗೂ ಅವಕ್ಕೂ ಇರೋ ವ್ಯತ್ಯಾಸಗಳಲ್ಲೊಂದು. ಅವುಗಳ ಹೊಟ್ಟೆಯಲ್ಲಿ ನಾಲ್ಕು ಕೋಣೆಗಳಿರುತ್ತೆ ಅಂತ ಮುಂಚೆಯೇ ನೋಡಿದ್ವಿ. ಪ್ರತಿಯೊಂದರ ಪ್ರಾಮುಖ್ಯತೆಯೇನು ಅಂದ್ರಾ ? ಅಲ್ಲಿಗೇ ಬರುತ್ತಿದ್ದೇವೀಗ. ರೂಮೆನ್ ಮತ್ತು ರೆಟಿಕ್ಯುಲೆಮ್ ಎಂಬ ಕೋಣೆಗಳಲ್ಲಿ ಎಂಜಲಿನೊಂದಿಗೆ ಮಿಶ್ರವಾಗುವ ಮೊಸರಿನಂತಹ ಆಕಾರವನ್ನು ಪಡೆಯುತ್ತದೆ.ಈ ಮೊಸರಿನಂತಹ ಆಕಾರ ಪಡೆದ ಆಹಾರವನ್ನು ಮೆಲುಕು ಹಾಕುವ ರೂಪದಲ್ಲಿ ಎರಡನೇ ಬಾರಿಗೆ ಬಾಯಿಗೆ ತಂದು ಅದನ್ನು ಇನ್ನಷ್ಟು ಜಗಿದಾಗ ಆ ಆಹಾರ ಇನ್ನಷ್ಟು ಹೆಚ್ಚು ಜೀರ್ಣರಸಗಳೊಂದಿಗೆ ಬೆರೆತು ಸಣ್ಣ ಸಣ್ಣ ಚೂರುಗಳಾಗುತ್ತದೆ. ಎರಡನೇ ಬಾರಿ ಚೂರಾದ ಆಹಾರ ಮತ್ತೆ ಹೊಟ್ಟೆ ತಲುಪಿ ಅಬೊಮೋಸಮ್ ಮೂಲಕ ಕೊನೆಗೆ ಸಣ್ಣ ಕರುಳನ್ನು ತಲುಪುತ್ತದೆ. ದೊಡ್ಡ ಕರುಳಲ್ಲಿ ಶಕ್ತಿಯನ್ನು ವರ್ಗಾಯಿಸಿ ಮತ್ತೊಂದು ರೂಪವನ್ನು ಆಹಾರ ಪಡೆಯುತ್ತೆ ಅಂದ್ರೆ ಇನ್ನೂ ಏನೋ ಆಪೂರ್ಣವೆನಿಸಿದ ಭಾವ ಅಲ್ವಾ ? ಹೌದು. ಹೊಟ್ಟೆಯ ನಾಲ್ಕು ಕೋಣೆಗಳಲ್ಲಿ ಏನಾಗುತ್ತೆ ಎಂಬ ಪ್ರಶ್ನೆ ಕಾಡದೇ ಇರಲಾರದು.
ಹೊಟ್ಟೆಯ ಪ್ರತೀ ಕೋಣೆಯಲ್ಲೂ ಏನಾಗತ್ತೆ ?
ರೊಮೆನ್ ಮತ್ತು ರೆಟಿಕ್ಯುಲೆಮ್ ಅನ್ನೋ ಎರಡು ಭಾಗಗಳಿದ್ದರೂ ಅವುಗಳ ಮಧ್ಯೆ ಆಹಾರ ಹಿಂದೆ ಮುಂದೆ ಓಡಾಡೋದ್ರಿಂದ ಅವೆರಡನ್ನೂ ಸೇರಿಸಿ ಡೈಜೆಸ್ಟಾ ಅನ್ನುತ್ತಾರೆ. ನಂತರದ ಕೋಣೆ ಒಮೇಶಮ್ ಅಲ್ಲಿ ಆಹಾರದಲ್ಲಿನ ನೀರು ಮತ್ತು ಕೆಲವು ಲವಣಗಳ ಹೀರುವಿಕೆ ನಡೆಯುತ್ತದೆ. ನಂತರದ ಕೋಣೆ ಅಬೋಮೊಸಮ್ಮಿನಲ್ಲಿ ಸ್ರವಿಕೆಯಾದ ಜೀರ್ಣರಸಗಳಿಂದ ಆಹಾರದ ಜೀರ್ಣಕ್ರಿಯೆ ನಡೆಯುತ್ತದೆ. ಅಂದ ಹಾಗೆ ಮನುಷ್ಯರಲ್ಲಿ ಮತ್ತಿತರ ಮೆಲುಕು ಹಾಕದ ಜೀವಿಗಳಲ್ಲಿ ಸ್ರವಿಕೆಯಾಗದ ಹಲವು ಕಿಣ್ವಗಳು, ಕ್ರಿಮಿಗಳು ಈ ಜೀವಿಗಳ ಹೊಟ್ಟೆಯಲ್ಲಿ ಸ್ರವಿಕೆಯಾಗಿ ಅವುಗಳ ಆಹಾರ ಜೀರ್ಣಕ್ರಿಯೆಗೆ ಇನ್ನೂ ಸಹಕಾರಿಯಾಗುತ್ತದೆ.
ಮೆಲುಕು ಹಾಕೋ ಜೀರ್ಣಕ್ರಿಯೆಗೆ ಸಹಕರಿಸೋ ವಿಶಿಷ್ಟ ಕಿಣ್ವಗಳು,ಕ್ರಿಮಿಗಳು ಯಾವುವು ಅಂದ್ರಾ ?
ನಮ್ಮ ಹೊಟ್ಟೆಯಲ್ಲಿರೋ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಗೆ ಸಹಕರಿಸೋ ಬಗ್ಗೆ ತಿಳಿದಿದ್ದೇ. ಆದ್ರೆ ಮೆಲುಕು ಜೀವಿಗಳ ಹೊಟ್ಟೆಯಲ್ಲಿ ಇವುಗಳ ಕಾರುಬಾರು ಸ್ವಲ್ಪ ಹೆಚ್ಚೇ. ಬ್ಯಾಕ್ಟೀರಿಯಾಗಳು, ಏಕಕೋಶಜೀವಿಗಳು ಮತ್ತು ಕೆಲವು ಜಾತಿಯ ಫಂಗಸ್ಗಳು ಎರಡು ಬಾರಿ ಚೂರಾದ ಆಹಾರದ ಮೇಲೆ ಕೆಲಸ ಮಾಡಿ ಅವನ್ನು ಅಸಿಟಿಕ್ ಆಮ್ಲ, ಪ್ರೋಪಿಯೋನಿಕ್ ಆಮ್ಲ, ಬ್ಯುಟಿರಿಕ್ ಆಮ್ಲಗಳೆಂಬ ಮೂರು ಆಮ್ಲಗಳನ್ನಾಗಿ ವಿಭಜಿಸುತ್ತವೆ. ಅದು ನಂತರ ಮುಂದೆ ಸಾಗಿ ಜೀರ್ಣವಾಗೋ ಪರಿಯನ್ನು ಮೊದಲೇ ಓದಿದ್ದೀವಿ. ಕ್ರಿಮಿಗಳು ಅಂದ್ರೆ ಉಪದ್ರವಿಗಳಲ್ವೇ ? ನಮ್ಮಲ್ಲಿ ಹೊಟ್ಟೆ ಹುಳ ಆಗಿದೆ ಅಂತ ಜೌಷಧಿ ತಗಂಡು ಅವನ್ನು ಕೊಲ್ತಾರಲ್ವೇ ? ಮತ್ತೆ ಹಸುಗಳಲ್ಲಿ ಈ ಕ್ರಿಮಿಗಳು ಹೇಗೆ ಉಪಕಾರಿ ? ನಾನೇನಾದ್ರೂ ಉಲ್ಪಾಪಲ್ಟಾ ಹೇಳ್ತಿದ್ದೀನಾ ಅನ್ನೋ ಗೊಂದಲಕ್ಕೆ ಬಂದ್ರಾ ? ಹಂಗೇನಿಲ್ಲ. ೧೮೪೩ರಲ್ಲಿ ಈ ತರವ ಹಸುವಿನ ಹೊಟ್ಟೆಯಲ್ಲಿರುವ ಸೂಕ್ಷ್ಮ ಜೀವಿಗಳ ಬಗ್ಗೆ ತಿಳಿದುಕೊಂಡಿದ್ರೂ ೧೯೬೬ರ ವರೆಗೆ ವಿಜ್ಞಾನಿಗಳು ಈ ಏಕಕೋಶಜೀವಿಗಳು ಉಪದ್ರವಕಾರಿಗಳು ಅಂತ್ಲೇ ನಂಬಿದ್ರು. ಆದ್ರೂ ಪ್ರಯೋಗವಿಲ್ಲದೇ, ಆಧಾರವಿಲ್ಲದೇ ಯಾವುದನ್ನೇ ನಂಬೋದು ವಿಜ್ಞಾನಿಗಳಿಗೆ ಕಷ್ಟವಲ್ವಾ ? ಅದಕ್ಕೇ ಅಂತ್ಲೇ ಒಂದು ಪ್ರಯೋಗ ಮಾಡಿದ್ರು. ಅದ್ರಲ್ಲಿ ಹಸುವಿನ ಹೊಟ್ಟೆಯಲ್ಲಿದ್ದ ಬ್ಯಾಕ್ಟೀರಿಯಾಗಳನ್ನು ಆಂಟಿ ಸೆಪ್ಟಿಕ್ ಬಳಸಿ ಕೊಂದು ಆಹಾರ ಜೀರ್ಣವಾಗುತ್ತಾ ಅಂತ ನೋಡಿದ್ರಂತೆ . ಈ ಜೀವಿಗಳನ್ನ ಕೊಂದಿದ್ದು ಜೀರ್ಣಕ್ರಿಯೆಗೆ ಸಹಕರಿಸೋ ಬದಲು ಜೀರ್ಣಕ್ರಿಯೆಯೇ ಸರಿಯಾಗಿ ಆಗದಂತೆ ಮಾಡಿತ್ತು ! ಮತ್ತೆ ಈ ಬ್ಯಾಕ್ಟೀರಿಯಾ ಮತ್ತು ಏಕಕೋಶ ಜೀವಿಗಳನ್ನು ಬೆರೆಸಿದಾಗ ಆಹಾರ ಜೀರ್ಣವಾಯಿತಂತೆ.ತಲೆಗೇ ಹುಳ ಬಿಟ್ಟಂಗೆ ಆಯ್ತಾ ? ಹೆ.ಹೆ
ವೈಜ್ಞಾನಿಕವಾಗಿ ಮತ್ತು ಸಿಂಪಲ್ಲಾಗಿ ಹೇಳ್ಬೇಕಂದ್ರೆ, ಹಸುವಿಗೆ ಅದು ತಿನ್ನೋ ಆಹಾರದಲ್ಲಿರೋ ಸೆಲ್ಯುಲೋಸನ್ನ ಜೀರ್ಣಿಸಿಕೊಳ್ಳೋಕೆ ಆಗಲ್ಲ. ಅದನ್ನ ಜೀರ್ಣಿಸೋಕೆ ಒಂದಿಷ್ಟು ಏಕಾಣು ಜೀವಿಗಳು,ಬ್ಯಾಕ್ಟೀರಿಯಾ, ಫಂಗಸ್ಸುಗಳು ಸಹಾಯ ಮಾಡುತ್ವೆ . ಸರಿನಾ ? ಜಗತ್ತಿಗೇ ಉಪಕಾರ ಮಾಡೋ ಹಸುವಿಗೆ ಕಾಟಕೊಡೋ ಕ್ರಿಮಿಗಳಾದ್ರೂ ಉಪಕಾರ ಮಾಡುತ್ತೆ ಅಂದ್ರಾ ? ಹಂಗಾದ್ರೂ ಅನ್ನಬಹುದು ನೋಡಿ. ಇರುವ ಒಂದು ಸೂರ್ಯ ಜಗದ ಹಲವು ಕಡೆ ಹಗಲು ರಾತ್ರಿಗಳನ್ನು ಸೃಷ್ಟಿಸುವಂತೆ ನಡೆಯುವ ಒಂದು ಘಟನೆ ನೋಡುಗನ ನೋಟದಂತೆ ಭಿನ್ನ ಭಿನ್ನ. ಇರುವೊಂದು ಹೊಟ್ಟೆಯ ಹಿಂದೆ ಇಷ್ಟೆಲ್ಲಾ ಸಂಗತಿಗಳಿತ್ತಾ ಅಂದ್ರಾ ? ಅಲ್ಲಲ್ಲಿ ಹೊಡೆದಿರಬಹುದಾದ ಬೋರು ಮತ್ತು ಬಂದಿರಬಹುದಾದ ನಿದ್ರೆಯನ್ನು ಹೊಟ್ಟೆಗೆ ಹಾಕಿಕೊಂಡಿರುತ್ತೀರೆಂಬ ನಂಬಿಕೆಯಲ್ಲಿ…
*****