ಮತ್ತೊಂದಿಷ್ಟು ವರುಷ ಸಿಗಲಾರೆಯಾ?: ಪದ್ಮಾ ಭಟ್

                 
ಸರಿಯಾಗಿ ಲೆಕ್ಕ ಹಾಕಿದ್ರೆ ಇನ್ನು ಒಂದು ತಿಂಗಳು  ಮಾತ್ರ ನಾ ನಿನ್ ಜೊತೆ ಇರೋದು..ಆಮೇಲೆ  ನೆನಪುಗಳಷ್ಟೆ.. ಏನೇ ಹೇಳು ನಿನ್ನನ್ನು ತುಂಬಾ ಮಿಸ್ ಮಾಡ್ಕೋಳ್ತೀನಿ ಕಣೇ.. ಎಂದು ರೂಂ ಮೇಟ್ ಶ್ರೇಯಾ ಹೇಳುತ್ತಿದ್ದರೆ, ನಾ ನನ್ನ ಪಾಡಿಗೆ ಅಷ್ಟೊಂದು ಲಕ್ಷ್ಯವಿಲ್ಲದೇ ಯಾವುದೋ ಪುಸ್ತಕವನ್ನು ಓದುತ್ತ ಕುಳಿತಿದ್ದೆ.. ಹೂಂ.. ಕಣೇ ನಾನೂ ನಿನ್ ಮಿಸ್ ಮಾಡ್ಕೊಳ್ತೀನಿ ಅಂತಾ ಬಾಯಿಂದ ಮಾತು ಬಂದರೂ ಓದುವ ಪುಸ್ತಕದ ಕಡೆಗೇ ಗಮನವಿದ್ದುದು ಹೆಚ್ಚು.. ಮನಸ್ಸಿನ ಮೇಲೆ ಪುಸ್ತಕ ಸವಾರಿ ನಡೆಸುತ್ತಿತ್ತು..ಅವಳ ಮಾತುಗಳು ಅಷ್ಟೊಂದು ಮನಸ್ಸಿಗೆ ಆ ಸಮಯದಲ್ಲಿ ನಾಟಿರಲಿಲ್ಲ. ನಿನ್ನೆಯಷ್ಟೇ ಕ್ಯಾಲೆಂಡರ್ ನ್ನು ನೋಡುತ್ತಾ ಒಂದು ಬಾರಿ ಬಡಬಡಿಸುತ್ತಿದ್ದ ಬಾಯಿ ತಣ್ಣಗಾಗಿ ಮುಚ್ಚಿಕೊಂಡಿತು. ಮುಂದಿನ ವರುಷ ನೀನೂ ಇರೋಲ್ಲ ನಂಗೆ ತುಂಬಾ ಬೋರ್ ಆಗಬಹುದು ಎಂದು ಸಪ್ಪೆ ಮೋರೆ ಹಾಕಿಕೊಂಡು ಹೇಳಿದಾಗ, ನನಗಿಂತಲೂ ಒಳ್ಳೆಯ ರೂಂ ಮೇಟ್ ಸಿಗ್ತಾರೆ ಬಿಡೆ ಎಂದು ಸಮಾಧಾನ ಮಾಡುವಂತಿತ್ತು ಅವಳ ಮುಖದಲ್ಲಿನ ಭಾವ ॒ಇನ್ನೊಮ್ಮೆ ಮತ್ತೊಮ್ಮೆ ಎಷ್ಟೇ ಪ್ರಯತ್ನಿಸಿದರೂ  ಬದುಕಿನ ಒಂದು ಮಜಲಿನಿಂದ ಇನ್ನೊಂದು ಕಡೆಗೆ  ಹೋಗಲೇಬೇಕಾಗಿದ್ದು ಅನಿವಾರ್‍ಯವೇ ಸರಿ..ಆದರೆ ನೆನಪುಗಳೆಂಬ ಲೋಕದಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತದೆ.. 

ಮೂರು ವರುಷಗಳ ಹಿಂದಿನ ಮಾತು .ಕೈಯಲ್ಲಿ ದೊಡ್ಡ ಬ್ಯಾಗ್‌ಗಳೊಂದಿಗೆ ಒಂದಷ್ಟು ನಿರೀಕ್ಷೆಗಳನ್ನು, ಬಯಕೆಗಳನ್ನುಹೊತ್ತು  ರೂಂಮೇಟ್ ಆಗಿ ಪ್ರವೇಶ ಪಡೆದಿದ್ದಳು.. ಬರೀ ರೂಂ ಮೇಟ್ ಆಗಿ ಮಾತ್ರವಲ್ಲ. ಪ್ರವೇಶ. ಮನಸ್ಸಿನೊಳಗೂ ಗೆಳತಿಯಾಗಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದ್ದಂತೂ ಹೌದು. ನಾನು ಯಲ್ಲಾಪುರ ನೀನ್ಯಾವ ಊರು ಎಂದು ಮೊದಲ ಬಾರಿಗೆ ಕೇಳುವಾಗ ನಂದು ಸಿದ್ದಾಪುರ ಎಂದಿದ್ದಳು.. ಅರೆ! ನೀನು  ಉತ್ತರ ಕನ್ನಡ ಜಿಲ್ಲೆಯವಳಾ? ಎಂದು ಖುಷಿ ಪಟ್ಟಿದ್ದೆ. ಜೀವನದಲ್ಲಿ ಮೊದಲ ಬಾರಿಗೆ ಮನೆಯನ್ನು ಬಿಟ್ಟು ಬಂದ ಅವಳ ತಳಮಳದಲ್ಲಿ ನಾನೂ ಜೊತೆಗೂಡಿದ್ದೆ.. ನಂಗೆ ರೊಟ್ಟಿ ಊಟ ಬೇಕು ಎಂದು ಅವಳ ಬಯಕೆಗೆ ಹೇ ಸುಮ್ನೆ ಕುಚ್ಚಲಕ್ಕಿ ಅನ್ನ ಊಟ ಮಾಡೆ ಬೇರೆ ಆಪ್ಶನ್ಸ್ ಇಲ್ಲ ಎಂದಾಗ ಸೇರಿತ್ತೋ ಸೇರಿಲ್ಲವೋ ಊಟ ಮಾಡುವುದನ್ನು ರೂಢಿಸಿಕೊಂಡಿದ್ದಳು.. ಛೇ ಇಲ್ಲಿಯ ಜನಕ್ಕೆ ಚನ್ನಾಗಿ ಅಡಿಗೆ ಮಾಡೋಕೂ ಬರಲ್ಲಾ..ನಾನು ಮನೇಲಿದ್ದಿದ್ದರೆ ಅಮ್ಮ ರುಚಿ ರುಚಿ ಮಾಡಿ ಬಡಿಸುತ್ತಿದ್ದಳು. ಎಂದು ಪ್ರತೀ ತುತ್ತಿಗೂ ಹೇಳಿಕೊಂಡು, ಅಮ್ಮನನ್ನು ನೆನಪಿಸಿಕೊಂಡು ಊಟ ಮಾಡುವಾಗ ನನಗೂ ಹೌದೆಂದು ಅನಿಸಿದ್ದುಂಟು.. ಹೊರಗಡೆ ಅಂತ ಇದ್ದಾಗ ಅಡ್ಜೆಸ್ಟ್ ಮಾಡ್ಕೊಂಡು ಬದುಕಲೇಬೇಕಲ್ವಾ? ಏನೂ ಮಾಡೋದಿಕ್ಕೆ ಆಗಲ್ಲಾ ಎಂಬ ನಮಗೆ ನಾವೇ ಸಮಾಧಾನದ ಮಾತುಗಳು..

ಬದುಕಿನ ಮೂರು ವರುಷಗಳು ಅವಳೊಂದಿಗೆ ಹೇಗೆ ಕಳೆಯಿತೋ, ತಿರುಗಿ ನೋಡಿದಾಗ ಮೂರೇ ದಿನದಂತೆ.. ಅಷ್ಟು ಬೇಗನೆ ಕಳೆದು ಹೋಯಿತಲ್ವಾ? ಅವಳೊಂದಿಗೆ ಕಳೆದ ದಿನಗಳಲ್ಲಿ ಖುಷಿಯಿತ್ತು, ನಗುವಿತ್ತು. ನಿದ್ರೆಗಣ್ಣಿನಲ್ಲಿಯೇ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ ಸಂತಸವಿತ್ತು. ಊರು ಸುತ್ತೋದ್ರಲ್ಲಿ ಎಕ್ಸ್‌ಪರ್ಟ್ ಆಗಿದ್ದ ಕಾರಣಕ್ಕೆ, ಯಾವಾಗ ಪೇಟೆಗೆ ಹೋದಾಗ್ಲೂ ಈ ಪಿ.ಜಿ ಅಂಕಲ್ ಕಣ್ಣಿಗೆ ಕಾಣಿಸ್ತಾರೆ.. ಬೇರೆ ಕೆಲಸಾನೇ ಇಲ್ವಾ? ನಾವು ತಿರೋಗೋದನ್ನು ನೋಡಿ ಏನ್ ಅಂದ್ಕೊಳ್ತಾರೋ  ಎಂಬ ಬೈಗುಳವಿತ್ತು. ಪ್ರತೀ ದಿನ ಲೈಬ್ರರಿಯಲ್ಲಿ ಇಷ್ಟವಾದ ಪುಸ್ತಕವನ್ನು ಓದುತ್ತಾ ಹಂಗೆ ಲೈಬ್ರರಿಯ ಒಬ್ಬ ಕೆಲಸದ ಹುಡುಗನ ಮೇಲೆ ಕಟ್ಟಿದ ಪಿಸು ಮಾತಿನ ಜೋಕುಗಳಿಗಂತೂ ಲೆಕ್ಕವೇ ಇರಲಿಲ್ಲ. ಮಾತಾಡಿದ್ರೆ ಲೈಬ್ರರಿಯಿಂದ ಹೊರಗೆ ಕಳಿಸ್ತೇನೆ ಎಂಬ ಅವನ ಮಾತು ನಮಗೆ ಅವನ ಮೇಲೆ ತುಂಬಾ ಸಿಟ್ಟು ಬರಲು ಕಾರಣವಾಗಿತ್ತು.. ಮಾತೇ ನಮ್ಮ ಆತ್ಮೀಯ. ಅದಿಲ್ಲದಿದ್ದರೆ ನಮ್ಮ ಹತ್ರಂತೂ ಇರೋಕಾಗಲ್ಲ.. ಕಡಿಮೆ ಮಾತಾಡೋ ಜಾಯಮಾನ ನಮ್ಮದಂತೂ ಅಲ್ಲವೇ ಅಲ್ಲ.. 

ಕಾಲೇಜಿನ ಲೆಕ್ಚರರ್‌ಗಳ ಮಿಮಿಕ್ರಿಯನ್ನು ರೂಂನಲ್ಲಿ ಬಂದು ಮಾಡಿದಾಗ ಹೊಟ್ಟೆ ಹುಣ್ಣಾಗಿಸುವಂತ ನಗು. ಕ್ಲಾಸಿನಲ್ಲಾದ ವಿಶೇಷ ವಿಷಯಗಳನ್ನು ಹಂಚಿಕೊಳ್ಳುವಾಗ, ಮುಖದಲ್ಲಿನ ಖುಷಿಯ ನೆರಿಗೆಗಳು ಸರಿದಾಡುತ್ತಿದ್ದವು.. ಊಟ ಮಾಡುವಾಗ, ತಿಂಡಿ ತಿನ್ನುವಾಗ ಹೇಳದೇ ಕೇಳದೇ ಆತ್ಮೀಯತೆಯ ಭಾವಗಳು ಮಾತನಾಡಿಬಿಡುತ್ತಿದ್ದವು.. ಮಧ್ಯರಾತ್ರಿ ಮಾಡಿ ತಿನ್ನುತ್ತಿದ್ದ ಮಸಾಲಾ ಮಂಡಕ್ಕಿಯಂತೂ, ನಮ್ಮನ್ನು ಇನ್ಮೇಲೆ ತುಂಬಾ ಮಿಸ್ ಮಾಡ್ಕೊಳ್ಳತ್ತೆ.. ಬೆಳಿಗ್ಗೆ ಅಲರಾಂ ಇಟ್ರೂ ಏಳದ ಅವಳ ಪರಿಸ್ಥಿತಿಯನ್ನು ನೋಡಿ ಅಲರಾಂ ಹೊಡ್ಕೊಳ್ಳೋದೂ ನಿಂತಿದೆದಿ॒ನವೂ ನೋಡುತ್ತಿದ್ದ ಕನ್ನಡಿಯ  ಗಾಜು ಹೊಳಪಿಲ್ಲ.. ಮಾಸುತ್ತ ಬಂದಂತಿದೆ.. ಚಿತ್ರ ಬಿಡಿಸಿದ್ದ ರೂಂನ ಗೋಡೆಯೂ ಕೂಡ ಯಾಕೋ ನೆನಪಿನಂಗಳದ ಪಾಲಾಗುತ್ತದೆ.. ನಮ್ಮ ರೂಂನ ಪ್ರತೀ ಕಿಟಕಿಯ ಗಾಜಿಗೂ ಗೊತ್ತು, ನನ್ನ ಮತ್ತು ಅವಳ ಸ್ನೇಹ.. ಇಬ್ಬರ ನಡುವಿನಲ್ಲಿರುವ ವಿಶ್ವಾಸಗಳು..ಹರಟುತ್ತ ಕೂತಿರುತಿದ್ದ ರಾತ್ರಿಯ ದಿನಗಳನೊಮ್ಮೆ ನೆನಪಿಸಿಕೊಂಡರೆ,  ನಿದ್ರೆಯ ಪರಿವಿಲ್ಲದೆಯೇ ಹರಟುತ್ತಿದ್ದೆವು..ಎಷ್ಟೋ ಬಾರಿ ಒಬ್ಬರ ಮೇಲೆ ಇನ್ನೊಬ್ಬರು ಸಿಟ್ಟು ಮಾಡಿಕೊಂಡು ಪೂರ್ವ, ಪಶ್ಚಿಮದ ದಿಕ್ಕಾದ ದಿನಗಳಿಗೂ ಏನೂ ಕಡಿಮೆಯಿಲ್ಲ. ಆದರೆ ವಿಷಯ ಅಂದ್ರೆ ಯಾವ ಕಾರಣಕ್ಕೆ ಸಿಟ್ಟು ಮಾಡ್ಕೊಂಡಿದ್ದು ಅಂತಾನೇ ಮರೆತು ಹೋಗಿಬಿಡುತ್ತಿತ್ತು. ಮುಂದಿನ ಜೀವನದ ಕನಸುಗಳನ್ನು ಕಾಣುತ್ತಿದ್ದೆವೆಂದರೆ ನಾವಿಬ್ಬರೂ ಅಕ್ಕ ಪಕ್ಕ ಮನೆ ಮಾಡ್ಕೋಳ್ಳೋಣ, ಒಟ್ಟಿಗೆ ಹಬ್ಬ ಆಚರಿಸೋಣ ಎಂಬ ಹುಚ್ಚು ಕನಸುಗಳಿಗೆ ನನಸಾಗುವ ಅದೃಷ್ಟ ಇದೆಯೋ ಇಲ್ಲವೋ ಗೊತ್ತಿಲ್ಲ.

ಅಪರಿಚಿತರಾಗಿ ಬಂದು, ಆತ್ಮೀಯವಾಗಿ ನಿಂದು, ಹಿಂತಿರುಗಿ ಹೋಗುವಾಗ ನೆನಪುಗಳನ್ನು ಬಿಟ್ಟು ಇನ್ನೇನು.. ಎಲ್ಲ ಖುಷಿಗಳಲ್ಲಿ, ನಗುವಿನಲ್ಲಿ, ಸಿಟ್ಟಿನಲ್ಲಿ, ಜಗಳದಲ್ಲಿ, ಆತ್ಮೀಯತೆಯ ಭಾವಗಳಲ್ಲಿ, ಕಣ್ಣೀರಿನಲ್ಲಿ ಎಲ್ಲವೂ ಅವಳು ಜೊತೆಯಲ್ಲಿದ್ದಳು. ಈಗ ಬಿಟ್ಟು ಬೇರೆ ಕಡೆ ಹೋಗುತ್ತಿದ್ದಾಳೆಂದರೆ ಒಂದು ಬಾರಿ ಅರಗಿಸಿಕೊಳ್ಳೋದು ಕಷ್ಟವಾಗಿ ಗೋಚರಿಸುತ್ತಿದೆ.. ಆದರೆ ಬದುಕು ಒಡ್ಡಿದ ಅನಿವಾರ್‍ಯತೆಗೆ, ಮುಂದಿನ ಜೀವನದ ಕನಸುಗಳಲ್ಲಿ ಸಾಗಲೇಬೇಕು ಎಂಬ ಸತ್ಯವೂ ಗೊತ್ತು.  ಒಂದು ಕಾಲದಲ್ಲಿ ಹೆಸರೇ ಗೊತ್ತಿಲ್ಲದ ಹುಡುಗಿ, ಈಗ ಬೇರೆ ಯಾರಿಗೋ ಅವಳ ಹೆಸರಿದೆಯೆಂದರೂ ಕೇಳಿದ ಕೂಡಲೇ, ಹೇ ನನ್ ರೂಂ ಮೇಟ್ ಹೆಸರು ಕೂಡ ಸೇಮ್ ಎಂದು ಖುಷಿಪಡುತ್ತೇನೆ. . ಜೀವನದಲ್ಲಿ ಎಷ್ಟೋ ಜನರು ಪರಿಚಯವಾಗುತ್ತಾರೆ..ಆದರೆ ಕೆಲವರು ಮಾತ್ರ ಆತ್ಮೀಯರಾಗುತ್ತಾರೆ.. ಎಷ್ಟೋ ಜನ ರೂಂ ಮೇಟ್ ಗಳಾಗಿ ಬಂದರೂ ಅದರಲ್ಲಿ ಕೆಲವರು ಮಾತ್ರ ಸ್ನೇಹಿತರಾಗುತ್ತಾರೆ ಎಂಬುದು ಎಂತಹ ವಿಚಿತ್ರ ಅಲ್ವಾ?

ಬದುಕೇ ಹೀಗೆ.. ರೈಲು ಗಾಡಿಯಂತೆ. ಒಂದಷ್ಟು ದೂರ ಮಾತ್ರ ಜೊತೆಗೆ ಸಿಗುತ್ತಾರೆ.. ಅದರಲ್ಲಿ ಕೆಲವರು ಹತ್ತಿರವಾಗುತ್ತಾರೆ. ಅವರ ನಿಲ್ದಾಣ ಬಂದ ಕೂಡಲೇ ಅವರು ಇಳಿದು ಹೋಗಲೇಬೇಕು. ಇವಳಿಗಿಂತ ಒಳ್ಳೆಯ ರೂಂಮೇಟ್ ಸಿಗಬಹುದು.. ಸಿಗದೇನೂ ಇರಬಹುದು..ಆದರೆ ಅವಳು ಸಿಗಲು ಸಾಧ್ಯವಿಲ್ಲ.. ಅವಳು ಎಂದಿಗೂ ಅವಳು ಮಾತ್ರ ಆಗಲು ಸಾಧ್ಯ.. ದಾರಿ ದೂರವಿರಬಹುದು..ಆದರೆ ಆ ನೆನಪುಗಳು ಮಾತ್ರ ಹತ್ತಿರವೇ.. ಸ್ನೇಹ, ಪ್ರೀತಿ, ವಿಶ್ವಾಸಗಳು ಎಂದಿಗೂ ಶಾಶ್ವತವಾಗಿರುತ್ತದೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
ಚಿನ್ಮಯ ಭಟ್ಟ
ಚಿನ್ಮಯ ಭಟ್ಟ
10 years ago

"ಅಪರಿಚಿತರಾಗಿ ಬಂದು, ಆತ್ಮೀಯವಾಗಿ ನಿಂದು, ಹಿಂತಿರುಗಿ ಹೋಗುವಾಗ ನೆನಪುಗಳನ್ನು ಬಿಟ್ಟು ಇನ್ನೇನು.. "

ನಿಜ…ಬೆನ್ನದಂಟಿನ ನಂಟುಗಳವು…

padma
padma
10 years ago

dhanyavaadagalu.. 🙂

amardeep.p.s.
amardeep.p.s.
10 years ago

chennagide…..ri…..

padma
padma
10 years ago
Reply to  amardeep.p.s.

dhanyavaadagalu… 🙂

prashasti
10 years ago

Nice.. e lekhana na ninna room matege torsu 1 sala.. sakat kushi padta avlu 🙂

padma
padma
10 years ago
Reply to  prashasti

thnx prashasti….

prabhamaninagaraja
prabhamaninagaraja
10 years ago

ಅನುಭವವನ್ನು ಸಮರ್ಥವಾಗಿ ಅಕ್ಷರ ರೂಪಕ್ಕೆ ಇಳಿಸಿದ್ದೀರಿ 🙂

padma
padma
10 years ago

dhanyavaadagalu sir 🙂

shreya gadad
shreya gadad
8 years ago

Hey paddu nijakku aa dinagalu matte sigalla, aa dinagalella ondu saviyada nenapugalu….

nanna preetiya aatmiya peddu muddu gelati love you soo much… ninu, ninna hadugalu, aa ratri suttida dinagalu, ninna kai aduge adella yavattu mareyalagaddu… 

Ambe jagadambe padmambe love you so much, miss you paddu.. 

9
0
Would love your thoughts, please comment.x
()
x