ಒಂದು ಮಳೆಗಾಲದ ಬೆಳಗ್ಗೆ ಸಕಲೇಶಪುರದ 'ಅಶ್ರಿತಾ' ಲಾಡ್ಜಿನ ಬಾತ್ ರೂಮಿನಲ್ಲಿ ಯೋಗರಾಜಭಟ್ಟರು ಬಾಗಿಲು ಹಾಕಿಕೊಂಡು ಸ್ನಾನ ಮಾಡುತಿದ್ದರು.ನಾನು ಹೊರಗೆ ನಿಂತು 'ಇವನು ಗೆಳೆಯನಲ್ಲ'ವಾಗಬೇಕಿದ್ದ ಕೆಲವು ಅಸ್ಪಷ್ಟ ಸಾಲುಗಳನ್ನು ಹೇಳುತಿದ್ದೆ. ಅವರು ಸ್ನಾನ ಮಾಡುತ್ತಲೇ ಸಾಲುಗಳನ್ನು ಕೇಳಿಸಿಕೊಂಡು ಒಳಗಿನಿಂದಲೇ ಕರೆಕ್ಷನ್ಸ್ ಸೂಚಿಸುತಿದ್ದರು. ನಾನು ಗುರುತು ಹಾಕಿಕೊಳ್ಳುತ್ತಿದ್ದೆ.
ಸ್ನಾನ ಮುಗಿಸಿ ಹೊರಬಂದ ಭಟ್ಟರು ಬಟ್ಟೆ ಹಾಕಿಕೊಂಡು ನನ್ನನ್ನೂ ದಡದಡನೆ ಎಳೆದುಕೊಂಡು ಹೋಟೆಲಿನ ಹೊರಕ್ಕೆ ಬಂದಾಗ ನಟ ಗಣೇಶ್,ಕ್ಯಾಮೆರಾಮ್ಯಾನ್ ಕೃಷ್ಣ, ಮ್ಯಾನೇಜರ್ ಪ್ರತಾಪ್ ರಾವ್ ಮತ್ತಿತರರು ಚಳಿಗೆ ನಡುಗುತ್ತ ಕಾರಿನಲ್ಲಿ ಕುಳಿತಿದ್ದರು. ಭಟ್ಟರು ಜಾಗ ಮಾಡಿಕೊಂಡು ಮುಂದೆ ಕುಳಿತರು. ನಾನು ನಿರ್ದೇಶಕರ ತಂಡದ ಸಕ್ರಿಯ ಸದಸ್ಯರೊಡನೆ ಹಿಂದೆ ಕುಳಿತೆ.
ಕಾರು ಹೊರಟಿತು ಮಂತ್ರಾಕ್ಷತೆಗಳಂತೆ ಆಕಾಶದಿಂದ ಉದುರುತಿದ್ದ ತುಂತುರು ಹನಿಗಳನ್ನು ಬೇಧಿಸುತ್ತ. ಹೊರಟಿತು… ಹೊರಟಿತು… ಸಕಲೇಶಪುರವನ್ನು ಬೆನ್ನಿಗೆ ಮಾಡಿಕೊಂಡು ಹಸಿರು ಮರಗಳ ನಡುವೆ ಇಷ್ಟೇ ಇಷ್ಟಗಲ ಹಬ್ಬಿಕೊಂಡಿದ್ದ ಕೆಸರು ತುಂಬಿದ್ದ ಮಣ್ಣಹಾದಿಗುಂಟ ಯಾವುದೋ ಅಜ್ಞಾತನೆಲೆಯೆಡೆಗೆ. ಗ್ಲಾಸಿನ ಮೇಲೆ ಟಪಟಪ ಬೀಳುತಿದ್ದ ಹನಿಗಳನ್ನು ಅತ್ತಿಂದಿತ್ತ ಇತ್ತಿಂದತ್ತ ಸರಿಸುತಿದ್ದ ವೈಪರನ್ನು ನೋಡುತ್ತಲೇ ಭಟ್ಟರು ನನ್ನನ್ನುದ್ದೇಶಿಸಿ ಹೀಗಂದರು 'ಅನುಪಲ್ಲವಿ ತುಂಬಾನೇ ಮುಖ್ಯ ಹಾಡಿಗೆ'. ನಾನೆಂದೆ,'ಚರಣಗಳೂ ಮುಖ್ಯ ಸಾರ್, ಪಲ್ಲವಿ ತಲೆಯಾದರೆ ಚರಣಗಳು ಕೈಕಾಲುಗಳಿದ್ದಂತೆ'. ಗಣೇಶ್ ಹಿಂದಕ್ಕೆ ತಿರುಗಿ ಮುಗುಳ್ನಕ್ಕು ಮತ್ತೆ ಮುಂದಕ್ಕೆ ತಿರುಗಿದರು.
ಒಂದು ಕೆರೆ, ಒಂದೆರಡು ಎಸ್ಟೇಟು, ಒಂದಷ್ಟು ಗಿಡಮರಗಳನ್ನು ನಮಗೆಲ್ಲ ತೋರಿಸಿದ ಖುಷಿಯಲ್ಲಿ ಧೀರ್ಘ ಪಯಣವೊಂದರ ನಂತರ ಕಾರು ಕಡೆಗೂ ಒಂದುಕಡೆ ನಿಂತಿತು. ಎಲ್ಲರೂ ಕೆಳಗಿಳಿದು ಮೈ ಮುರಿದರು. ನಾನೂ ಇಳಿದೆ. ಬಲಕ್ಕೆ ನೋಡಿದರೆ ಅಲ್ಲೊಂದು ಸುಂದರವಾದ ವಿಶಾಲ ಮನೆಯಿತ್ತು. ಈ ಕಾಡಿನ ಮಧ್ಯ ಇಂಥದೊಂದು ಮನೆ ಕಟ್ಟುವ ಐಡಿಯಾವನ್ನು ಇವರಿಗೆ ಯಾರು ಕೊಟ್ಟರೆಂದು ಬೈದುಕೊಳ್ಳುತ್ತಾ ತಲೆಯೆತ್ತಿದರೆ ಯೂನಿಟ್ ನವರೂ, ಕೊರಿಯೋಗ್ರಾಫರೂ, ಒಂದೆರಡು ಬಣ್ಣದ ಮುಖಗಳೂ ಕಂಡವು.
ಸೀದಾ ಆ ಮಹಾಮನೆಗೆ ನುಗ್ಗಿ ಒಂದು ಪ್ಲಾಸ್ಟಿಕ್ ಚೇರನ್ನೆಳೆದುಕೊಂಡು ತೆರೆದ ಹಸಿರಿನಂಗಳದಲ್ಲಿ ಆಗತಾನೇ ಕಣ್ಬಿಡುತಿದ್ದ ರವಿಗಿರಣಗಳಿಗೆ ಕಂಗೊಳಿಸುತಿದ್ದ ಇಬ್ಬನಿಯನ್ನು ನೋಡುತ್ತಾ ಒಬ್ಬನೇ ಕುಳಿತೆ. ಒಂದು ಸುಂದರಸ್ವಪ್ನದಂತೆ ಕಾಡುತಿದ್ದ ಆ ಪ್ರಕೃತಿ ಸೌಂದರ್ಯವನ್ನಾಹ್ಲಾದಿಸುತ್ತ ಮೈಮರೆತಿದ್ದಾಗ 'ಕುಣಿದು ಕುಣಿದು ಬಾರೆ…' ಹಾಡಿನ ಮೊದಲ ಬಿಜಿಎಂ ಏರುದನಿಯಲ್ಲಿ ಮೊಳಗಿ ನನ್ನನ್ನು ವಾಸ್ತವಕ್ಕೆ ಕರೆತಂದಾಗಲೇ ಗೊತ್ತಾಗಿದ್ದು ಅವತ್ತು ಹಾಡಿನ ಚಿತ್ರೀಕರಣಕ್ಕಾಗಿ ಭಟ್ಟರ ಗ್ಯಾಂಗು ಅಲ್ಲಿಗೆ ಬಂದಿತ್ತೆಂದು.
ವಿಷಯ ಗೊತ್ತಾದಮೇಲೂ ವೃಥಾ ಗೊಂದಲಕ್ಕೀಡಾಗಿ ಸಮಯ ಹಾಳುಮಾಡುವುದು ಸರಿಯಲ್ಲವೆಂದೆನಿಸಿ ನನ್ನ ಪಾಡಿಗೆ ನಾನು ಹಾಡು ಬರೆಯಲು ಯೋಜಿಸಿದ್ದೆ. ಈ ಮೊದಲು ಒಂದಿಷ್ಟು ಸಾಲುಗಳನ್ನು ಬರೆದು ಮನೋಮೂರ್ತಿ ಸಾರಥ್ಯದಲ್ಲಿ ಟ್ರ್ಯಾಕ್ ಹಾಡಿಸಿ ತಂದಿದ್ದ ಸಿಡಿಯನ್ನು ಚಿಕ್ಕ ಪ್ಲೇಯರೊಂದರಲ್ಲಿ ಹಾಕಿ ಎರಡೂ ಕಿವಿಗಳಿಗೆ ಇಯರ್ ಫೋನನ್ನು ಸಿಕ್ಕಿಸಿಕೊಂಡು ಬರೆಯುವ ಮೂಡಿಗೆ ಹೋಗಬೇಕೆಂದು ಯತ್ನಿಸುತಿದ್ದಂತೆಯೇ ಯಾರೋ ಒಬ್ಬಳು ಹುಡುಗಿ ತುಂಬ ಸನಿಹ ಬಂದು, ಚೇರೆಳೆದುಕೊಂಡು 'ನಾನೂ ಒಂದ್ಸಲ ಕೇಳಬಹುದಾ…?' ಅಂತ ಹಿಂದಿಯಲ್ಲಿ ಕೇಳಿದಳು. ನಾನು ಆಗಲ್ಲ ಅನ್ನಲಾಗದೆ ಹಾಡಿಗೂ ನನ್ನ ಹೃದಯಕ್ಕೂ ಸೇತುವೆಯಂತಿದ್ದ ಇಯರ್ ಫೋನನ್ನು ಅವಳ ಕೈಗೆ ಕೊಟ್ಟು ಮತ್ತೆ ಹಸಿರನ್ನು ನೋಡಲು ಶುರುಮಾಡಿಕೊಂಡೆ. ಆಕೆ ಸ್ವಲ್ಪ ಹೊತ್ತು ಹಾಡು ಕೇಳಿ ಹೊರಟು ಹೋದಳು. ಯಾರೋ ಟೀ ತಂದುಕೊಟ್ಟರು. ಕುಡಿದು ಪುನಃ ಹಾಡು ಬರೆಯುವ ಮೂಡಿನ ತಲಾಷೆಯಲ್ಲಿದ್ದಾಗ ಅದೇ ಹುಡುಗಿ ಮತ್ತೆ ಬಂದು ಮತ್ತೆ ಹಾಗೇ ಮಾಡಿ ಹೊರಟುಹೋದಳು.
ನನಗೆ ಸಿಟ್ಟು ಬಂತು. ಇವತ್ತಂತೂ ಹಾಡು ಬರೆಯುವ ಕೆಲಸ ಆಗಲ್ಲ ಅಂತ ತೀರ್ಮಾನಿಸಿ ಸ್ವಲ್ಪ ಹೊತ್ತು ಹೊರಗೆಲ್ಲ ಸುತ್ತಾಡಿ ವಾಪಾಸ್ಸಾಗುವಷ್ಟರಲ್ಲಿ ಭಟ್ಟರು, ಕೃಷ್ಣ, ಗಣೇಶ್ ಅದೇ ಟೇಬಲ್ಲಿನಲ್ಲಿ ಮಧ್ಯಾಹ್ನದ ಊಟಕ್ಕೆ ಕುಳಿತಿದ್ದರು. ನಾನೂ ಕುಳಿತೆ. ಊಟ ಮಾಡುವಾಗ ನನ್ನ ಅಪೇಕ್ಷೆಯ ಮೇರೆಗೆ ಕೃಷ್ಣ ತಿಳಿಸಿದರು: ಆ ಹುಡುಗಿಯ ಹೆಸರು ಸಂಜನಾ ಗಾಂಧೀ(ಇವತ್ತಿನ ಪೂಜಾಗಾಂಧೀ)ಯೆಂದೂ, ಅಲ್ಲಿ ಚಿತ್ರೀಕರಣವಾಗುತಿದ್ದ 'ಮುಂಗಾರುಮಳೆ' ಚಿತ್ರದ ನಾಯಕಿಯೆಂದೂ.
ಊಟದ ನಂತರ ಒಂದಷ್ಟು ಸಾಲುಗಳನ್ನು ಬರೆದೆ. ನಾನು ಬಳಸಿದ್ದ ಕೆಲವು ಪದಗಳು ಕೇಳುಗರಿಗೆ ಅರ್ಥವಾಗುತ್ತವೋ, ಇಲ್ಲವೋ ಎಂಬ ಅನುಮಾನ ನನ್ನನ್ನು ಬಾಧಿಸುತಿದ್ದಾಗ ಸ್ವತಃ ಗಣೇಶ್ ಓದಿ ತಲೆದೂಗಿ 'ನೂರು ಜನ್ಮಕೂ ನೂರಾರು ಜನ್ಮಕೂ' ಹಾಡನ್ನು ನೆನಪಿಸಿಕೊಂಡು ಆ ಪದಗಳನ್ನು ಜೀರ್ಣಿಸಿಕೊಂಡ ಕನ್ನಡಕೇಳುಗರು ಇವನ್ನೂ ಸ್ವಾಗತಿಸುತ್ತಾರೆಂದು ಭರವಸೆ ತುಂಬುವುದರ ಜೊತೆಗೆ 'ಇದೊಂದು ಸಿನೆಮಾ ಹಿಟ್ ಆದ್ರೆ ಆ ಕಥೆಯೇ ಬೇರೆ ಶಿವೂ ಅವ್ರೇ' ಎಂದು ಮಾರ್ಮಿಕವಾಗಿ ನುಡಿದು ಹೊರಟು ಹೋದರು. ನಂತರ,ಹಾಡುಗಳು ಹಿಟ್ ಆದವು ಸಿನೆಮಾದಂತೆಯೇ.ಅವರ ಕಥೆಯೂ ಬದಲಾಯಿತು. ಭಟ್ಟರೂ ಸ್ಟಾರಾದರು. ಕೃಷ್ಣಾ ಕೂಡ ಬಿಜಿಯಾದರು, ಈಗಷ್ಟೇ 'ಗಜಕೇಸರಿ' ಸಿನಿಮಾ ನಿರ್ದೇಶಿಸಿದ್ದಾರೆ. ಸಂಜನಾ ಗಾಂಧಿ ಕೂಡ ಏನೇನೋ ಆಗಿ ಈಗ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಾನೂ ಬರೆಯುತಿದ್ದೇನೆ ಯಾವುದನ್ನೂ ಮರೆಯದೆ. ಮತ್ತೆ ಮಳೆ ಹೊಯ್ಯುತ್ತಿದೆ…
*****
ಮತ್ತೆ ನಾವು ತೊಯ್ಸಿಕೊಳ್ಳುತ್ತಲೇ ಇದ್ದೇವೆ….. ಅದೇ ಹನಿಗಳ ಆದಿಯಿಂದ ಇಂದಿನವರೆಗೆ……ಹಾಡುಗಳನ್ನು ಮತ್ತು ನಿಮ್ಮ ಸಾಹಿತ್ಯದ ಹರವನ್ನು….
ಹಾಡು ಬರೆಯುವ ಹೊತ್ತು. ಹಾಡಿಗಾಗಿ ಮೂಡು.
ಮಳೆ ಹನಿಯುತ್ತಲೇ ಇರಲಿ, ಹಾಡೂ ಬರುತ್ತಲೇ ಇರಲಿ
ಇನ್ನೂ, ಎಂದೆಂದಿಗೂ "ಮುಂಗಾರು ಮಳೆ"ಯ ಹನಿಗಳು ಯುವ ಪ್ರೇಮಿಗಳನ್ನ ತೋಯಿಸುತ್ತಲೇ ಇರುತ್ತೆ.
ಸಾಕು ಎನ್ನೊವರ್ಗು ಮಳೆ ನಿಲ್ದೇ ಇರ್ಲಿ ನಿಮ್ ಜೀವ್ನದಲ್ಲಿ.
Nice nice,…….
ಸುಂದರ ಅನುಭವ 🙂