ಕಥಾಲೋಕ

ಮತಿಭ್ರಮಣೆ: ಶಿವಕುಮಾರ ಚನ್ನಪ್ಪನವರ

ಪೆಣ್ಣು, ಪೆಣ್ಣೆಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು
 -ಸಂಚಿ ಹೊನ್ನಮ್ಮ

ತಾನು ಸೋಮುವಿಗೆ ಹೀಗೆನ್ನಬಾರದಿತ್ತು. ಪಾಪ ಎಷ್ಟು ನೊಂದುಕೊಂಡನೋ ಏನೋ……? ತಾನೇ ಸಾಕಿ ಬೆಳೆಸಿದ ಕೂಸು ಆದರೂ ಅವನು ಹದ್ದುಮೀರಿ ಮಾತಾಡಿದ್ದ. ಬೇಡವೆಂದರೂ ಕೇಳದೇ ಹೆಂಡತಿಯ ಭ್ರೂಣಪತ್ತೆಯ ಕೆಲಸಕ್ಕೆ ಕೈ ಹಾಕಿದ್ದಿರಬಹುದು, ತಮ್ಮ ತಾಯಿಗೆ ಗಂಡು ಮಗುವೇ ಬೇಕೆಂದು, ತನಗೂ ಅದೇ ಇಷ್ಟವಿದೆಯೆಂದು, ಹಟ ಹಿಡಿದು ಈ ಸಲ ಹೆಣ್ಣಾದರೆ ಆಪರೇಷನ್ ಮಾಡಿಸದೇ ಮುಂದಿನದಕ್ಕೆ ಬಿಡಬೇಕೆಂದು ಹಟ ಹಿಡಿದದ್ದು ತಪ್ಪಲ್ಲವೇ……?, ಡಾಕ್ಟರು ಇದು ಎರಡನೇ ಬಾರಿ ಸಿಜೇರಿಯನ್ ಆಗ್ತಿರೋದು ಇವಾಗ್ಲೆ ಆಪರೇಷನ್ ಮಾಡಿಸ್ಬಿಡಿ ತಾಯಿ ಬಹಳ ವೀಕಾಗಿದ್ದಾಳೆ. ಮುಂದೆ ಬಿಟ್ಟುಕೊಂಡು ಹೋದಂತೆಲ್ಲಾ ತೊಂದರೆಯಾಗುತ್ತೆ ಅಂತ ಹೇಳಿದ್ದು ಕೇಳಿದ ಮೇಲೂ ಅವನು ಹಾಗೆ ಹಟ ಹಿಡಿದ್ದಿದ್ದು ಕೋಪ ಒತ್ತರಿಸಿ ಬರುವಂತೆ ಮಾಡಿತ್ತು. ಹೆಣ್ಣಿಗೆ ಹೆಣ್ಣೇ ಶತ್ರು ಅನ್ನೋ ಗಾದೆ ಮಾತಿನಂತೆ ಅಕ್ಕನೂ ಗಂಡೇ ಬೇಕೆಂದು ಹಟ ಹಿಡಿದಿದ್ದು, ತಾನು ಹೀಗೇ ಮಾಡಿದ್ದರೆ ಶಾಂತಾಳಿಗೆ ತಮ್ಮ ಚಿಕ್ಕಮ್ಮ ಕೂಡ ಸಿಕ್ಕಿರುತ್ತಿದ್ದರು. ವಾರಿಗೆ ದೋಸ್ತರು, ಸಂಭಂದಿಗಳು ಅಷ್ಟೇ ಏಕೆ ತಾನೇ  ಎಷ್ಟೋ ಬಾರಿ ಹೇಳಿದ್ದಳು ಇನ್ನೊಂದು ಮದುವೆಯಾಗಲು, ನಾನು ಒಪ್ಪಿದ್ದರೇ ಜಯಾಳ ಗತಿ ಎನು……? ಸಾಯಂಕಾಲದ ತಂಗಾಳಿ ಪಡುವಣದಿಂದ ಬೀಸುವ ದಿಕ್ಕಿಗೆ ಸರಿಯಾಗಿ ಆರಾಮ ಕುರ್ಚಿ ಹಾಕಿ ಕುಳಿತಿದ್ದ ರಾಮಪ್ಪ ಮಾಸ್ತರರು ಹೊರಗಿನಿಂದಲೇ ಜಯಾಳನ್ನೊಮ್ಮೆ ತಿರುಗಿ ನೋಡಿದರು. ಜೀವವಿದ್ದರೂ ಜಡ ವಸ್ತುವಿನಂತೆ ಇಪ್ಪತ್ತು ವರ್ಷದಿಂದ ಬಿದ್ದಿದ್ದಾಳೆ. ಅಸ್ವಸ್ತವಾದ ಕೈ ಕಾಲುಗಳು, ಇಪ್ಪತ್ತು ವರ್ಷದಿಂದ ಅವರ ಚಾಕರಿ ಮಾಡಿ ಎಷ್ಟೋ ಸುಸ್ತು ಹೊಡೆದಿದ್ದರೂ, ಅವಳು ನನ್ನವಳು ಎನ್ನುವದನ್ನು ಮಾತ್ರ ಮಾಸ್ತರರು ಬಿಟ್ಟಿರಲಿಲ್ಲ. ತಿಂಗಳಿಗೆ ಸಾವಿರ ರೂಪಾಯಿ ಮಾತ್ರೆಗಳೇ ಬೇಕು, ಒಮ್ಮೊಮ್ಮೆ ಏನೇನೋ ಮಾತನಾಡುವುದು, ಸಿಕ್ಕಸಿಕ್ಕವರಿಗೆ ಬೈಯುವುದು, ವರ್ಷಕ್ಕೊಮ್ಮೆ ಅತಿಯಾಗಿ ಧಾರವಾಡದ ಹುಚ್ಚಾಸ್ಪತ್ರೆಗೆ ಅಡ್ಮಿಟ್ ಮಾಡಿ ತಿಂಗಳುಗಟ್ಟಲೇ ಅಲೆಯಬೇಕು. ನಿನ್ನೆ ಅಕ್ಕ ಹೇಳಿದ ಮಾತು ಮರೆಯಲ್ಲಿ ನಿಂತು ಕೇಳಿದಾಗಿನಿಂದ ತುಂಬಾ ಬೇಸರವಾಗಿತ್ತು. ಅದಕ್ಕೆ ನಾನು ನಿಜ ಹೇಳಿದ್ದು; ಒಂದು ಭಾರವಾದ ನಿಟ್ಟುಸಿರು ಬಿಟ್ಟರು. 

ನಿನ್ನೆಯಿಂದ ಅದೇ ಮಾತು ಕೊರೆಯುತ್ತಿದೆ . "ನೋಡು ಸೋಮು. ನಿಮ್ಮ ಮಾವನ ಮಾತು ಕೇಳಬೇಡ, ಅವ್ನು ಹೀಗೆ ಮಾಡಿನೇ ಹೆಂಡತಿನ ಮತಿಭ್ರಮಣೆ ಮಾಡಿದ್ದಾನೆ" ಎಂಬ ಮಾತು ಕೇಳುತ್ತಿದ್ದಂತೆ ಕೋಪ ಒತ್ತರಿಸಿ ಬಂದಿತ್ತು. ಸುಧಾರಿಸಿಕೊಂಡು, ಒಳಹೋಗಿ ವಾರ್ಡಿನ ಮುಂದೆ ಕುಳಿತಾಗ ಹತ್ತಿರ ಬಂದು ಕೇಳಿಯೇ ಬಿಟ್ಟಿದ್ದ. ಆಗಲೇ ಅಷ್ಟೂ ದಿವಸದಿಂದ ಹೊರಬರದೇ ಒಳಗಡೆ ಹುದುಗಿದ್ದ, ಅಲ್ಲೇ ಮಣ್ಣಾಗಬೇಕಿದ್ದ ಸತ್ಯ ಹೊರಬಂದಿದ್ದು. ಸೋಮು ಸ್ಥಿಮಿತ ಕಳೆದುಕೊಂಡು ಕುಳಿತುಬಿಟ್ಟಿದ್ದ. ಕೋಪದ ಕಟ್ಟೆ ಒಡೆಸಿ ಬೈಸಿಕೊಂಡವನಿಗೆ ಏನು ಸಮಾಧಾನ ಮಾಡುವುದು, ಕೋಪದ ಕೆಂಡವಾಗಿದ್ದ ಮಾಸ್ತರರ ಕಣ್ಣುಗಳು ಆರಿ ತಣ್ಣಗಾಗುವ ಹೊತ್ತಿಗೆ ಇಪ್ಪತ್ನಾಲ್ಕು ಗಂಟೆ ಬೇಕಾಗಿತ್ತು. ಹೀಗೆ ತಾನು ವರ್ತಿಸಬಾರದಿತ್ತು, ಅವರಿಗೆಲ್ಲಾ ಸತ್ಯ ಗೊತ್ತಾಗಬಾರದಿತ್ತೆಂದು ಮನಸ್ಸು ಒಳಗೊಳಗೆ ಪರಿತಪಿಸಿದರೂ ಇದಕ್ಕಿಂತ ಉತ್ತಮ ಸಮಯ ಮತ್ತೆಲ್ಲಿ ಸಿಕ್ಕುವುದು? ಹೇಳಿದ್ದು ಸರಿಯಾಗೆ ಇದೆ ಎಂದೊಂದು ಮೂಲೆಯಲ್ಲಿ ಗಾಂಭಿರ್ಯ ಹೇಳುತ್ತಿತ್ತು.

ತಿಂಗಳಿಗೊಮ್ಮೆಯಾದರೂ ಊರಲ್ಲಿನ ಕಂಬದಮ್ಮ ಗುಡಿಗೆ ಹೋಗಿ ಕೈ ಮುಗಿದು ಬರುವಾಗ ಗುಡಿ ಪಕ್ಕ ಗುಡಿಸ್ಲಲ್ಲಿ ಇರ್ತಿದ್ದ ಹನುಮವ್ವನ ಭೇಟಿ ಮಾಡಿ ಒಂದೀಟು ಚಹಾ ಕುಡಿದು ತಲೆ ನೇವರಿಸಿ, ಕರ್ಚಿಗೇನಾದರೂ ಕಾಸು ಬೇಕೆ…..? ಎಂದು ಕೇಳುವುದು ಮಾಮುಲಾಗಿತ್ತು. " ಬೇಡ ಅಯ್ಯಾರೆ……!". ನಿಜವಾಗಿ ದುಡ್ಡು ಬೇಕಾಗಿರಬಹುದಾದರೂ ಈ ರೀತಿಯದ್ದು ಪುಕ್ಕಟೆ ಬೇಡವಾಗಿತ್ತು ಅವಳಿಗೆ, ಒಂದು ಮುಗುಳ್ನಗೆ ನಕ್ಕು ಬರ್ತಿದ್ರು ಮಾಸ್ತರರು, ಆಗಾಗ ಬಟ್ಟೆ ಒಯ್ಯುವುದು, ಕಂಡ – ಕಂಡಲ್ಲಿ ಮಾತಾಡಿಸುವುದು, ಕೆಲವರ ಬಾಯಿಗೆ ಸಿಕ್ಕು ಹೊಲಸಾಗಿತ್ತು. ವಯಸ್ಸಿಗೆ ಬಂದ ಹುಡ್ಗಿ, ಹೆಂಡತಿಗೆ ಕೈ, ಕಾಲು ಇಲ್ಲ. ಬದುಕಿದ್ರೂ, ಸತ್ತಂತೆ, ಮತ್ತೇನು ಮಾಡ್ತಾರೆ ಮಾಸ್ತರರು? ಒಂಟಿ ಹೆಂಗ್ಸು, ಅವ್ವ ತಲೆಕೆಟ್ಟೇತಿ. ಅನ್ನ ಹಳಸಿತ್ತು ನಾಯಿ ಹಸದಿತ್ತು. ಅನ್ನೋ ಹಂಗೆ ಅಂತ ಮಾತಾಡ್ತಿದ್ರು, ಇದೊಂದು ಅಕ್ಕನ ಕೋಪಕ್ಕೆ ಕಾರಣವಾಗಿತ್ತು. ಗೊತ್ತಿದ್ದರೂ ಸೋಮು ಗೊತ್ತಿಲ್ಲದವನಂತೆ ಇದ್ದ. ಆದರೆ ವಾಸ್ತವವೇ ಬೇರೆಯಾಗಿತ್ತು. ಪ್ರತಿದಿನ ಮೊಸರು ತರುತ್ತಿದ್ದ ಹನುಮವ್ವನ ಮನೆಯೊಳಗೆ ಕರೆದು ಮಾತಾಡಿಸಿ ಕಳುಹಿಸುತ್ತಿದ್ದರು, ನಾಕು ದಿನ ಆತು ಅವಳ ಸುದ್ದಿಯೂ ಇಲ್ಲ.

ಸಮಯ ಆರು ಗಂಟೆಗೆ ತಿರುಗುವುದಿತ್ತು ನೆನಪುಗಳನ್ನೆಲ್ಲಾ ಮೆಲಕು ಹಾಕುತ್ತಾ ಹೆಂಡತಿಗೆ ಚಹಾ ಮಾಡಿ ಮಾತ್ರೆ ಕೊಡುವ ಹೊತ್ತಾಯಿತೆಂದು ಏಳಲು ಮನಸ್ಸಾಗದೇ ಕೂತಲ್ಲೇ ಕೂತಿದ್ದ ರಾಮಪ್ಪ ಮಾಸ್ತರರ ಶಿಷ್ಯಂದಿರು ಆಗಲೇ ನಾಕು ಬಾರಿ ನಮಸ್ಕಾರ ಹೊಡೆದಂತಿತ್ತು, ಶಾಲೆಯ ಹತ್ತು ಮಾಸ್ತರರಲ್ಲಿ ರಾಮಪ್ಪ ಮಾಸ್ತರರೆಂದರೇ ವಿಶೇಷ ಗೌರವ ವಿದ್ಯಾರ್ಥಿಗಳಿಗೆ. ಸುತ್ತಲ ತಾಲ್ಲೂಕದ ಶಾಲೆಗಳಲ್ಲಿ ಚಿರಪರಿಚಿತರು ನಾಲ್ಕೈದು ಬಾರಿ ಹೆಡ್ಮಾಸ್ತರರಾಗುವ ಅವಕಾಶ ಬಂದರೂ ಒಪ್ಪಿರಲಿಲ್ಲ. ಅವರ ಶಿಸ್ತು, ಸರಳತನ ಎಲ್ಲರಿಗೂ ಪ್ರಿಯವಾದದ್ದು.  ಮನೆಯ ಟಿಪಾಯಿ ಮೇಲೆ ಒಂದು ಟೀ ಕಪ್ಪು ಯಾವಾಗಲೂ ಇದ್ದೇ ಇರುತ್ತಿತ್ತು. ಯಾರಾದ್ರೂ ಬಂದ್ರೆ ಟೀ ಕುಡಿಸದೇ ಆಚೆ ಕಳಿಸುವ ಜಾಯಮಾನದವರಲ್ಲ. ತಾವೇ ಟೀ ಮಾಡಿ ಕೊಡುತ್ತಿದ್ದರು, ಅಪಾರ ಶಿಷ್ಯವರ್ಗ ಹೊಂದಿದವರು. ಅವರಲ್ಲೊಬ್ಬ ಸೋಮು. ನಿನ್ನೆಯಷ್ಟೇ ಮುಖಕ್ಕೆ ಮುಖ ಕೊಟ್ಟು ಮಾತಾಡಿದ್ದು,

 ಪೋನ್ ರಿಂಗಣಿಸಿತು.
ಆ ಕಡೆಯಿಂದ ಸೋಮು, "ಹಲೋ ಸರ್" 
"ಹೇಳಪ್ಪ", ಮಾಸ್ತರರ ಮಾತು ಮಿದುವಾಗಿತ್ತು. ಮೊದಲೆಲ್ಲಾ ಗಡಸು ದ್ವನಿಯಲ್ಲಿ ಗದರಿಸುತ್ತಾ, ರೂಲು ಕಟ್ಟಿಗೇಲಿ ಹೊಡೆದು ಬುದ್ದಿ ಹೇಳಿದೊವ್ರು, ದೊಡ್ಡವನಾದಂತೆ ಬೈತಿದ್ರು, ಮಗಳ ಮದುವೆಯಾದ್ಮೆಲೆ ಸ್ವಲ್ಪ ಬದಲಾಗಿತ್ತು. ಇದವರ ಮೂರನೇ ರೂಪ.
"ಸರ್, ಹೆಣ್ಣು ಮಗು. ಅರ್ಧಘಂಟೆ ಆಯ್ತು ಬರ್ತಿರಾ  ಪ್ಲೀಸ್. ನನ್ನ ಮೇಲೆ ಕೋಪ ಇದ್ರೆ ಕ್ಷಮಿಸಿ ಸಾರ್".
ಅರೇ ಸೋಮು ಬರ್ತೀನಿ ತಾಳಪ್ಪ ಅರ್ಧ ಘಂಟೆಯಷ್ಟೇ ನಿಮ್ಮತ್ತೆಗೆ ಮಾತ್ರೆ ಕೊಟ್ಟು ಬರ್ತೆನೆ. ಎಂದು ಪೋನಿಟ್ಟರು.
ನಿನ್ನೆ ಹೇಳಿದ್ದನ್ನು ಅವ್ನು ಮತ್ತೆ ಪೀಡಿಸಿ ಕೇಳಿದರೇ ಹೇಳುವುದೋ, ಬೇಡವೋ, ಎನ್ನುವ ಗೊಂದಲದಲ್ಲೆ ಒದ್ದಾಡುತ್ತಾ, ಹಾಗೆ ಜಯಾಳಿಗೆ ಮಾತ್ರೆ ಕೊಟ್ಟು, ಕಾಫಿ ಕುಡಿಸಿ ಮಲಗಿಸಿ ಹೊರಡಲು ಅಣಿಯಾದರು.

ಸಿಟಿ ಬಸ್ಸ್ಟಾಂಡಿನ ಪಕ್ಕದಲ್ಲಿ ನಿಮತಿದ್ದ ರಾಮಪ್ಪ ಮಾಸ್ತರರಿಗೆ ತನ್ನ ಅಕ್ಕನಿಗೆ ಗಂಡು ಕೂಸಿನ ವ್ಯಾಮೋಹ ಹೋಗಿಸುವುದು ಹೇಗೇ ಎನ್ನುವುದು  ತಿಳಿದಿರಲಿಲ್ಲ. ಪಕ್ಕಾ ಹಳ್ಳಿ ಹೆಂಗಸು, ಅದ್ಯಾವುದೋ ಮಠದ ಸ್ವಾಮಿ ಹೇಳಿದಂಗೆ ಕೇಳೋದು, ಮನೆ ಪಡಸಾಲೆಗೆ ಬರೋ ಹೆಂಗಸರ ಜೊತಿ ಕೂತು ಮನೆ ಹರಟೆ ಹೊಡೆಯೋದು. 'ವಾರಸುದಾರ ಅವ್ನು', ಅಂತ ಹಿಂದಿನ ಸಲ ಕೂಸು ಹುಟ್ಟೋಕು ಮುಂಚೆ ಕುಲಾವಿ ಹೊಲಿಸಿದ್ಲು. ಎಲ್ಲಾ ರೀತಿಯಾಗಿ ಹೇಳಿದ್ದಾಯ್ತು. "ನೀನೂ ಒಂದು ಹೆಣ್ಣಲ್ವಾ? ಯಾಕಿಂಗೆ ವಾದ ಮಾಡ್ತಿ ನಂಗೆ ತಿಳಿಒಲ್ದು ನೋಡು. ಸಾವಿರ ಗಂಡ್ಮಕ್ಳಿಗೆ ಒಂಬೈನೂರ ಎಪ್ಪತ್ತು ಹೆಣ್ಮಕ್ಳು ಹುಟ್ತಾರ. ಇನ್ನು ಮೂವತ್ತು ಗಂಡಸರಿಗೆ ಹೆಣ್ಣು ಸೀಗೊದೇ ಇಲ್ಲ. ನೀನೊಬ್ಬ ದಡ್ಡಿ". ಅಂದಿದ್ದಿಕ್ಕೆ ,"ನೀನು ನನ್ನ ಹಿಂದ ಬಿದ್ದಾವ. ನನಗ ತಿಳಿದೊಷ್ಟು ತಿಳಿದೇತೇನs ನಿನಗ, ಸುಮ್ನ ಬಾಯಿಮುಚ್ಚು" ಅಂತಿದ್ಲು. ಅವ್ಳ ಹುಟ್ಟು ಗುಣಾನೇ ಅಷ್ಟು, ಮಹಾ ಹಟಮಾರಿ ಅದ್ರಲ್ಲೇ ನಾನು ಅಂದ್ರ ಮಾತ್ರ ಎಲ್ಲರು ವಿರೋಧಿಸುತ್ತಿದ್ರು. ಅಪ್ಪನೂ ಹಲವಾರು ಬಾರಿ ಸಾಲಿ ಬಿಟ್ಬಿಡು ಸಾಕು. ನಮ್ಗ ಓದು- ಬರಹ ಬರೋರು ಆದ್ರ ಸಾಕು, ಅಂತ ಹಲವಾರು ಬಾರಿ ಹೇಳಿದ್ರೂ ಅವ್ರ ವೀರೊಧದ ನಡುವೆಯೇ ಓದಿದ್ದು, ಜಯಾಳನ್ನು ಪ್ರೀತಿಸಿ ಮದುವೆಯಾದಾಗಲಂತೂ ತಿರಸ್ಕಾರದ ಮಾತುಗಳು. "ಜಯಾಳ ಬಗ್ಗೆ ದಯವಿಟ್ಟು ಮಾತಾಡಬೇಡಿ, ಅವಳೊಬ್ಬ ಮುಗ್ದೆ. ನಾನೇ ಅವಳನ್ನು ಪ್ರೀತಿಸಿದ್ದು." ಅಪ್ಪ ಮೊದಲ ತಿರುಗುಮಾತಿಗೆ ಕೋಪದ ಕೆಂಡವಾಗಿದ್ದರು, ಅಕ್ಕ ಅದಕ್ಕಿಷ್ಟು ತುಪ್ಪ ಸುರೀತಿದ್ದಳು. ಮೊದಲೇ ಸೂಕ್ಷ ಸಂವೇಧಿಯಾಗಿದ್ದ ಜಯಾಳಿಗೆ ಅವ್ರು ಆಡ್ತಿದ್ದ ಮಾತು ಅತೀವ ನೋವು ನೀಡುತ್ತಿದ್ದವು. ತೀವ್ರ ಅಸ್ವಸ್ಥಳಾಗಿದ್ದ ಜಯಾಳಿಗೆ ಇದೊಂದು ಮಾನಸಿಕ ನೋವಾಗಿತ್ತು. ಎರಡನೇ ಕೂಸು ಗಂಡು ಹೆತ್ತು ಅತ್ತಿಗೆಯ ಮಾತುಗಳಿಗೆ ಉತ್ತರ ಹೇಳಬೇಕೆಂದು ಜಯಾ ಅಂದುಕೊಂಡಿದ್ದೇನೋ ಸರಿ. ಮೊದಲೇ ಮಾನಸಿಕವಾಗಿ ನೊಂದವಳು, 

ಎರಡನೇ ಬಾರಿ ಕೂಸು ಹೆಣ್ಣಾದಾಗ, ಅದರ ಕತ್ತು ಹಿಸುಕಿ ಸಾಯಿಸಿ ಪೋಲಿಸರ ಅತಿಥಿಯಾಗಿದ್ದು, ಪತ್ರಿಕೆಗಳಲ್ಲಿ ಈ ಸುದ್ದಿ ನಾಕಾರು ಬಾರಿ ಪುಕಾರಾಗಿ ಊರಲ್ಲಿದ್ದವರೆಲ್ಲಾ ಮಾಸ್ತರರ ಹೆಂಡತಿ ಹಿಗಂತೇ, ಅಂತೆಲ್ಲಾ ಹರಿಸಿದ್ರು. ಅವಳಿಗೆ ಹುಚ್ಚು ಸ್ವಾಮಿ, ಹಂಗೆ- ಹಿಂಗೆ ಅಂತೆಲ್ಲಾ ವಾದಿಸಿ, ಕೇಸು ಮುಗಿಸುವ ಹೊತ್ತಿಗೆ ಅವಳನ್ನು ಎರೆಡು ತಿಂಗಳು ಧಾರವಾಡದಲ್ಲಿ ಇರಿಸಿದ್ದು. ಅಲ್ಲಿಂದ ಹೊರಬಂದಾಗ ಅವ್ಳು ಹುಚ್ಚಿಯೇ ಆಗಿದ್ದು ಮಾಸ್ತಾರರ ಕಣ್ಣ ಮುಂದೆ ನಿಂತಿತ್ತು.

ಆಸ್ಪತ್ರೆ ಬಳಿ ಬಂದಾಗ ಸೋಮು ಕಾಯುತ್ತಿದ್ದ.
"ಹೇಗಿದೆ ಸೋಮು ಮಗು?".
"ಚನ್ನಾಗಿದೆ"
"ಬಾ, ನೋಡೊಣ" ಎಂದು ಮಾಸ್ತರರು ತಡವರಿಸಿದಾಗ ಸೋಮು ಅವರನ್ನು ತಡೆದ. ಅವನ ಕಣ್ಣಲ್ಲಿ ತೆಳುವಾಗಿ ಹನಿ ನೀರು ಜಿನುಗುತ್ತಿತ್ತು.
ಯಾಕೆ ಎಂದು ಕೇಳುವುದಕ್ಕೆ ಮನಸ್ಸಾಗಲಿಲ್ಲ. ಕಾರಣ ಗೊತ್ತಿತ್ತು. ಕೊಸರಿಕೊಂಡು ಒಬ್ಬರೇ ಒಳಹೋಗಿ, ಮಗುವ ನೋಡಿದ್ದಾಯಿತೆಂದು ಹೊರಬಂದಾಗ ಸೋಮು ಏನೋ ಬಯಸಿದವನಂತೆ ಇವರಿಗಾಗೇ ಕಾಯುತ್ತಿದ್ದ.
"ಊಟ ಮಾಡಿದ್ಯಾ? ಬಾ ಬುತ್ತಿ ತಿನ್ನು ". ಮಾಸ್ತರರ ಮಾತಿಗೆ ಮರುಮಾತಾಡದೇ, ಕೈಗೆ ತುತ್ತು ಸಿಕ್ಕು ಬಾಯಿ ಸೇರುವ ಮೊದಲೇ, ಕೊರಳಲ್ಲಿನ ಪ್ರಶ್ನೆ ಹಾಕಿದ.
"ಸರ್ ನಾನು ಯಾರ ಮಗ…….?"
"ಅದೆಲ್ಲಾ ಬೇಡ. ತಿನ್ನು" ಮಾಸ್ತರರು ಗುಡುಗಿದರು.
"ಇಲ್ಲ, ನೀವು ಹೇಳಲೇ ಬೇಕು" ಮತ್ತೇ ವಿತಂಡವಾದ ಬೆಳೆದು ದೊಡ್ಡದಾಗುತ್ತಿದ್ದಂತೆ ಮಾಸ್ತರರು ಸಿಟ್ಟಿಗೆದ್ದರು, ಸೋಮು ಪಟ್ಟು ಬಿಡಲಿಲ್ಲ.
"ಹೌದು ಕಣೋ, ನೀನು ನಮ್ಮೂರ ಹುಚ್ಚಿ ರುದ್ರವ್ವನ ಮಗ ಕಣೋ, ನಾನೇ ಎತ್ತಿ ನಿಮ್ಮವ್ವನ ತೊಡೆಗೆ ಹಾಕಿದ್ದು. ಅದೊಂದು ಹಳ್ಳಿ ಹೆಂಗ್ಸು ಮಾತಾಡುತ್ತೆ ಅಂದ್ರೇ ನೀನು ಹಂಗೇನಾ…….? ನೀನು ನನ್ನ ಶಿಷ್ಯ ಅಂತೇಳೋಕೆ ನಾಚಿಕೆ ಆಗುತ್ತೆ ನಂಗೆ. ಇಂತದ್ದೊಂದು ಕಾಲದಾಗೂ ಗಂಡು ಅಂತ ಸಾಯ್ತಿಯಲ್ಲೋ, ನಿಮ್ಮವ್ವಗ ಹುಟ್ಟಿದ್ದು ಹೆಣ್ಣು, ಅವ್ಳ ಗಂಡು ವ್ಯಾಮೋಹ ನೋಡಿನೇ ನಾನೇ ಅದನ್ನ ನಮ್ಮೂರ ಹುಚ್ಚಿ ರುದ್ರವ್ವನ ಮಡಿಲಾಗ ಹಾಕಿ, ಅವ್ಳ ಗಂಡು ಕೂಸ್ನ ನಿಮ್ಮವ್ವನ ಮಡಿಲಾಗ ಹಾಕಿದ್ದು" ಮಾಸ್ತಾರರ ಕಣ್ಣಲ್ಲಿ ನೀರು ಜಿನುಗಿತು.

ಹೌಹಾರಿ ನಿಂತುಬಿಟ್ಟ ಸೋಮು, ಎಷ್ಟೋ ಬಾರಿ ಕಲ್ಲಿಂದ ದೂರ ನಿಂತು ಎಳ್ಡ್ ಬಾರಿ ಹೊಡಿತ್ತಿದ್ದಾಗ, ತಾನು ನಾಕು ಕಲ್ಲು ಬೀಸಿದ್ದು ನೆಪ್ಪಾತು. ಅವ್ವನ ನೆಪ್ಪು ಹೇಸಿಗೆಯೆನಿಸಿದ್ರೂ ಸತ್ಯವಾಗಿತ್ತು. ಏಟೋ ಬಾರಿ ಹನುಮವ್ವನ ಬೈದದ್ದಿದೆ, 'ಏನೇ ನಮ್ಮ ಮಾವನ ಹತ್ರ ಬಾಳ ಹೊತ್ತು ಮಿಸುಕಾಡ್ತಿ, ನಾಚಿಕೆಯಾಗಲ್ವಾ……? ನಿಮ್ಮಪ್ಪನ ವಯಸ್ಸಿನೋರು ಅವ್ರು. ಪವಿತ್ರ ಸಂಭಂದ ಹೊಲಸಾದ್ದದ್ದು ಹೆಣ್ಣಿನ ತಿರಸ್ಕಾರದಿಂದ", ಎನ್ನುವ ಪ್ರಶ್ನೆಗಳು ಎದುರಾಗಿ, ಮೊನ್ನೆ ಹೋದಾಗ, ಇನ್ನು ಬದುಕುಳಿದ್ದಿದ್ದ  ರುದ್ರವ್ವ ಸಾಯಬೋದು, ಅಂತ ಊರೂರೇ ಮಾತಾಡುತ್ತಿದ್ದರು, ಊರ ಸೇರಬೇಕೆನ್ನುವ ತವಕ ಹೆಚ್ಚಾಗಿ ಹಳ್ಳಿ ಬಸ್ಸಿಡಿದು ತಾಯಿಯ ನೋಡೋಕೆ ಹೊಂಟ. ಊರಲ್ಲಿ ಸೂತಕದ ವಾತಾವರಣ, ದಿಕ್ಕಿಲ್ಲದ ಎಲ್ಡು ಹೆಣಗಳ ಟ್ರಾಕ್ಟರ್ನಲ್ಲಿ ಸಾಗಿಸುತ್ತಾ, "ಸತ್ತಿದ್ದೇ ಒಳ್ಳೇದಾತು ಮಾರಾಯ, ಅವ್ವ ಹುಚ್ಚಿ, ಮಗ್ಳು ಮೈ ಮಾರಿ ಜೀವ್ನ ನಡ್ಸೋ ಹೆಣ್ಣು, ನಮ್ಮೂರಿಗೇ ಕೆಟ್ಟ ಹೆಸ್ರು ಬರೋದಿತ್ತು ಮಾರಾಯ. ಮಾಸ್ತರರು ಹೆಸರಿಗಷ್ಟೇ ದೊಡ್ಡೊವ್ರು, ಮಾಡೋದೆಲ್ಲಾ ಇಂತ ಕೆಲ್ಸ.." ಅನ್ನೋ ಮಾತು ಕೇಳ್ತಿದ್ವು, ಗೋಣೆತ್ತಿ ನೋಡಿದ್ರ ರುದ್ರವ್ವ ಪಕ್ಕ ಹನುಮವ್ವ ಹೆಣವಾಗಿದ್ರು. ರುದ್ರವ್ವನದು ಆಕಸ್ಮಿಕ. ಹನುಮವ್ವನದು ಆತ್ಮಹತ್ಯೆ, ಊರವರೇ ಮುಚ್ಚಾಕಿದ್ರು. ಆ ಗುಂಪಿನಲ್ಲೇ ಒಂದಾಗಿದ್ದ ಅವ್ವನು ಸೋಮು ಕಾಣುತ್ತಿದ್ದಂತೆ ಗಂಡಾ- ಹೆಣ್ಣಾ ಎಂದು ಪದೇ – ಪದೇ ಕೇಳಿದ್ರೂ, ಮರು ಮಾತಾಡದೇ ಮನಿ ಕಡೆ ಹೋಗಿ ಬಟ್ಟೆ ಬರಿ ಪ್ಯಾಕು ಮಾಡ ಹತ್ತಿದ ಸೋಮು, ಇತ್ತ ಆಸ್ಪತ್ರೇಲಿ ಕೂಸು ಕಣ್ಬಿಟ್ಟು ಅವ್ವನ ನೋಡ್ತಿತ್ತು. ವರಾಂಡದಲ್ಲಿದ್ದ ಮಾಸ್ತರರು ಸತ್ಯ ಕಹಿಯಾಗಿಯೇ ಇರುತ್ತೆ ಅಂತ ಇಲ್ಲಿ ಮತಿಭ್ರಮಣೆಯಾಗಿರೋದು ತನ್ನ ಜಯಾಳಿಗಲ್ಲ ಎಂಬುದು ಸ್ಪಷ್ಟವಾಗಿತ್ತು. 
-ಶಿವಕುಮಾರ ಚನ್ನಪ್ಪನವರ

ಪರಿಚಯ: ಮೂಲತಃ ರಾಣೇಬೆನ್ನೂರು ತಾಲ್ಲೂಕಿನ ನಿಟಪಳ್ಳಿ ಗ್ರಾಮದವರಾದ ಲೇಖಕರು ಎಂ.ಕಾಂ. ಪದವೀಧರರು. ಕಾವ್ಯ ಮತ್ತು ಕಥೆಗಳನ್ನು ಹೆಣೆಯುವುದರಲ್ಲಿ ಆಸಕ್ತಿ ಹೊಂದಿರುವ ಇವರ ಮೊದಲ ಕವನ ಸಂಕಲನ “ಒಂದು ಭ್ರೂಣದ ಕನಸು”.ಇವರು ತಮ್ಮ ಜೋಗುಳ ಕತೆಗೆ ಬೇಂದ್ರೆ ಸಣ್ಣಕತಾಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಪಂಜುವಿನಲ್ಲಿ ಶಿವಕುಮಾರ್ ರವರು ರೆಗ್ಯುಲರ್ ಆಗಿ ಬರೆಯುತ್ತಿರುತ್ತಾರೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಮತಿಭ್ರಮಣೆ: ಶಿವಕುಮಾರ ಚನ್ನಪ್ಪನವರ

  1. ಛೆನ್ನಾಗಿದೆ ಆದರೆ ತುಂಬಾ ಗೋಜಲು ಗೋಜಲು ಅನಿಸಿತು.

  2. ಕಥಾವಸ್ತುವಿನ ಆಯ್ಕೆಯಲ್ಲಿಿ ಎರಡು ಮಾತಿಲ್ಲ. ಒಳ್ಳೆಯ ಸಂದೇಶವಿರುವ ಕಥೆ ಇಷ್ಟವಾಯ್ತು ಸರ್. ಆದರೆ ಕಥೆಯ ನಿರೂಪಣೆ ಇನ್ನಷ್ಟು ಸ್ಪಷ್ಟತೆಯನ್ನು ಕೇಳುತ್ತದೆ.

    1. ಖಂಡಿತವಾಗಿ ಮೆಡಮ್, ಪ್ರತಿಕ್ರಿಯೆಗಾಗಿ ಧನ್ಯವಾದಗಳು

Leave a Reply

Your email address will not be published. Required fields are marked *