ಮಣ್ಣಿಗೆ ಬಿದ್ದ ಹೂಗಳು ಕವನ ಸಂಕಲನ ವಿಮರ್ಶೆ: ನೂರುಲ್ಲಾ ತ್ಯಾಮಗೊಂಡ್ಲು

Noor Ulla

ನವ್ಯೋತ್ತರ ಕಾವ್ಯಮಾರ್ಗದಲ್ಲಿ, ಮತ್ತೆ ದಲಿತೀಯ ನೆಲೆಯಲ್ಲಿ ಅಂಥದೇ ಸಿಟ್ಟು, ಹತಾಶೆ,ರೋಷ, ಸಮಾಜಿಕ ಶೋಷಣೆಯ ಹಾಗೂ ತಾಯಿ ಮಮತೆ, ಗೆಳತಿಯ ಒಲವು, ಚೆಲುವು, ಮಗುವಿನ ಅಕ್ಕರೆ, ರಾಜಕೀಯ ವಿಡಂಬನೆಗಳನ್ನು ಶಿಲ್ಪವಾಗಿಸಿಕೊಂಡು ಮೈತಳೆದ ಕೃತಿ” ಮಣ್ಣಿಗೆ ಬಿದ್ದಹೂಗಳು” ಬಿದಲೋಟಿ ರಂಗನಾಥ್‍ರ ಇದು ಪ್ರಥಮ ಕವನ ಸಂಕಲನ. ಈ ಸಂಕಲದಲ್ಲಿ ಒಟ್ಟು 51 ಕವನಗಳಿಗೆ ಇವುಗಳಲ್ಲಿ ಬಹುಮುಖ್ಯವಾಗಿ ದಲಿತೀಯಾ ನಿಲುವನ್ನೇ ತಾತ್ವಿಕವಾಗಿರಿಸಿಕೊಂಡು ರಚನೆ ಮಾಡಿದಂತಹ ಕವನಗಳು. ಇಲ್ಲಿ ಮುಖ್ಯವಾಗುತ್ತವೆ. ಸಂಕಲನದ ಶೀರ್ಷಿಕೆಯ ಕವನವೇ ‘ಮಣ್ಣಿಗೆ ಬಿದ್ದ ಹೂಗಳು-ಇಲ್ಲಿ ಕವಿ, ದಲಿತನಾಗಿ ತನಗಾದ ನೋವು, ಅವಮಾನ,ಸಂಕಟವನ್ನು, ತೆರೆದಿಡಲಿಕ್ಕೆಂದೇ ರಚಿಸುತ್ತಾನೆ.
 
“ ಆದಿಕಾಲದ
  ವೃಕ್ಷಕೊಡವಿದ ಬಿರುಸ
  ಬಿಸಿ ಉಸಿರ ಬಿಕ್ಕಳಿಗೆ
  ಮಣ್ಣ ಮೇಲೆ ಬಿದ್ದ ಹೂವು ನಾನು” (ಮಣ್ಣಿಗೆ ಬಿದ್ದು ಹೂ)

ಎನ್ನುವ ಕವಿಯ ದಲಿತೀಯ ಕಾಳಜಿ, ಆ ಥರದ ನೇತ್ಯಾತ್ಮಕ ನಿಲುವು ಸಂಕಲನದಲ್ಲಿ ದನಿಯಾಗಿರುತ್ತದೆ. ವ್ಯಕ್ತಿಗತ ಅನುಭವದ ಜೋತೆ ಜೊತೆಗೆ ಸಾಮಾಜಿಕ ಅನುಭವವನ್ನು ಸಂಕರಿಸಿ ಕೊಂಡಾಗ ಬದುಕಿನ ಅನುಭವ ಧ್ಯಾನಿಸುತ್ತಲೇ ಟೀಕಿಸುತ್ತಾನೆ.
“ಅಮ್ಮ ತಟ್ಟಿಸುಟ್ಟು ಕೊಡುತ್ತಿದ
ರುಚಿಯಾದ ಬಿಸಿ ರಾಗಿ ರೊಟ್ಟಿ
ಅದರ ಮೇಲಿನ ಅವಳ ಚಂದನೆಯ
ಬೆರಳ ನೆರಳ ಹಾಕಿದ ಬೆಣ್ಣೆ
ಇನ್ನು ನನಗೆ ನೆನಪಿದೆ
ಆಗ
ನನಗೆ ಅನ್ನದ ಮೇಲೆ ಆಸೆ
ಈಗ
ಅನ್ನಕ್ಕೆ ಬರಲಿಲ್ಲ
ರೊಟ್ಟಿ ತಟ್ಟಿಕೊಡುವ ಕೈಗಳಲ್ಲ” (ಅಂತರಾಳ)
    
ಕವಿಗೆ ಇಲ್ಲಿ ಕವಿತೆ ಒಲಿದಿದ್ದಾಳೆ. ಜೀವನ ಪ್ರಸಂಗವೊಂದನ್ನು ಕಾವ್ಯವಾಗಿಸುವ ಕಲೆ ಕವಿಗೆ ಸರಾಗವಾಗಿದೆ. ಇಲ್ಲಿನ ಬಹುತೇಕ ಕವಿತೆಗಳು ಹಾಗೆ ಹುಟ್ಟಿಕೊಂಡಿರುವಂಥವು. ಒಟ್ಟಾರೆ ಕವನಗಳಲ್ಲಿ ಮೊದಲ ಕವಿತೆ ಸಾಲು, ಬೆಳ್ಮುಗಿಲು, ಮೂಡದ ಹೆಜ್ಜೆಯ ಮುಂದೆ, ಧರೆಗಿಳಿದ ಚಂದ್ರನಗು ಇಂಥ ಕೆಲವು ಕವನಗಳು ಓದಿಗೆ ತುಂಬಾ ಖುಷಿ ಕೊಡುತ್ತವೆ. ನಂತರ ಕೆಲವು ಕವನಗಳು ಚಿಂತನೆಗೆ ಹಚ್ಚುವುದರೊಂದಿಗೆ ಮತ್ತೆ ಓದಿಸಿಕೊಳ್ಳುತ್ತವೆ. ಅವು ಈ ಕೆಳಗಿನಂತೆ ಹೆಸರಿಸಬಹುದು-ಅಂತರಾಳ, ಕಾಣದ ಬೆಳಕಿನ ಹೆಜ್ಜೆ, ಬೆರಕೆ ಹುಲ್ಲುಗಳ ಬಣವೆ, ಬದುಕಿನ ದೀಪ, ಮಾಗದ ಹೆಜ್ಜೆ ಗುರುತು, ಮಣ್ಣಿಗೆ ಬಿದ್ದ ಹೂ, ಧ್ಯಾನ ಮೌನ ಮತ್ತು ಮುಗಿಲ ಕಡೆ ಮುಖಮಾಡಿ ಕವನಗಳು….

B R book

Ranganath B

ನೆಲಮೂಲ ಸಂಸ್ಕøತಿಯ ಪದರುಗಳಲ್ಲಿ ನಿಲ್ಲುವಂತಹ ಸಾಕಷ್ಟು ಕವನಗಳು ದೇಸಿಯ ಸ್ಪರ್ಷ ಹೊಂದಿದ್ದರೂ ಭಾಷೆ ಪ್ರಬುದ್ಧತೆಯ ಕೊರತೆಯಿಂದ ತೆಳುವಾಗಿವೆ. ಕೆಲವು ಕವನಗಳು ತವಕದಲ್ಲಿರುವಂತೆ ಕಂಡುಬರುತ್ತವೆ. ಇಂಥದೊಂದು ತವಕಕ್ಕೆ “ಅಂಬೇಡ್ಕರ್ ಬಂದಿದ್ದರು ನಮ್ಮ ಮನೆಗೆ” ಕವನ ಸಾಕ್ಷಿ, ತಂತ್ರ ಗಾರಿಕೆಯ ತೊಡಕು, ಬೌದ್ಧಿಕ ಅಸ್ಪಷ್ಟತೆಯನ್ನು “ಮಸಣದ ಜಾಗದಲ್ಲಿ” ಕವಿತೆಯಲ್ಲಿ ಕಂಡುಬರುತ್ತದೆ. ಬದುಕಿನ ಅನುಭವದ ಸರಿಯಾದ ಗ್ರಹಿಕೆ ಇಲ್ಲದಿರುವುದರಿಂದ ಕವಿತೆಯ ಆಶಾಯಕ್ಕೆ ತೊಡಕಾಗುವುದು “ನೀ ನಿರದ ಕತ್ತಲೆಗೆ ಹೆದರುತ್ತೇನೆ ಸದಾ”ಯಂಥಾ ಕವಿತೆಗಳಲ್ಲಿ, ಮತ್ತೆ ಕೆಲವು ಕವನÀಗಳಲ್ಲಿ ಪದ ಪ್ರತಿಮೆ ಹಾಗೂ ಭಾವದಲ್ಲಿನ ಅಸ್ಪಷ್ಟತೆಯಿಂದಾಗಿ ಕವನಗೆದ್ದಿತು ಎನ್ನಿಸುವುದಿಲ್ಲ. ಈ ಥರದ ದೌರ್ಬಲ್ಯಗಳು ಪ್ರಥಮ ಕಾವ್ಯಕೃತಿಗಳಲ್ಲಿ ತೀರಾ ಸಹಜವಾಗೇ ಇರುತ್ತವೆ. ಆದರೆ ವಿಮರ್ಶಕನ ಇತ್ಯಾತ್ಮಕ ಪ್ರಜ್ಞೆಗೆ ಇದೊಂದು ದೋಷವಾಗಿ ಕಂಡರೂ, ಇಲ್ಲಿನ ಕವಿತೆಗಳ ಬಹುಮುಖ್ಯ ಆಶಯ ದಲಿತೀಯಾ ಚಿಂತನೆಗೆ ಒಗ್ಗಿ ಕೊಳ್ಳುವಂತದ್ದು ಮತ್ತು ಆ ಒಂದು ನೆಲೆಯಲ್ಲಿ ಅಂತರಂಗದೊಳಗಿನ ಸಿಟ್ಟುನ್ನು ನವಿರಾಗೆ ಸಿಡಿಸುವುದು, ಅನುಭವಕ್ಕೆ ದಕ್ಕಿಕೊಂಡ ನೋವು, ಆಕ್ರೋಶವನ್ನು ಉತ್ಕಟವಾಗಿ ಟೀಕಿಸುವ ಕುಸುರಿಗಾರಿಕೆ ಇಲ್ಲಿದೆ. 

“ಬುದ್ದ ನಗುತ್ತಿದ್ದಾನೆ ಮುಸಮುಸನೆ
ಒಡೆದ ಸಮಾನತೆಯ ಬಾಗಿಲು ಕೂಡಲಿಲ್ಲ
ನಾನಿರದೆ ಎಂದಿಗೂ ಎನುತ.
ಹಾಲಿಗೆ ಹುಳಿ ಹಿಂಡುವವರೆ ಗಹನವಾಗಿರುವ
ಕಾಲದಲ್ಲಿ, ಭಾವನೆಗಳು ಕತ್ತಲಲ್ಲಿ
ದಾರಿಕಾಣದೆ ಕುಂಟುತ್ತಿವೆ. ” (ಬುದ್ದ ನಗುವ ಹೊತ್ತಲ್ಲಿ)

ಇಲ್ಲಿನ ಕವಿತೆಗಳು ಓದುತ್ತಿದ್ದರೆ ಒಂದಿಷ್ಟು ಚಿಂತನೆ, ಒಂದಿಷ್ಟು ಓತ್ತು ಮೌನ ಆವರಿಸಿ ಕೊಳ್ಳದೆ ಇರದು.

ತುಮಕೂರಿನ ಜಾನಪದೀಯ ಸೀಮೆಯ ಬಿದಲೋಟಿ ಎಂಬ ಪುಟ್ಟು ಗ್ರಾಮದಿಂದ ಕಾರಂಜಿಯಂತೆ ಪುಟಿದ ರಂಗನಾಥ್ ಯುವ ಪ್ರತಿಭಾ ಕವಿಯಾಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ನೆಲಮೂಲ ಸಂಸ್ಕøತಿಯ ಚಹರೆಯನ್ನು ಕಾವ್ಯದಲ್ಲಿ ಕಟ್ಟಿಕೊಡುವ ಹುಮ್ಮಸ್ಸಿನೊಂದಿಗೆ ನಿಂತಿರುವ ಇವರಲ್ಲಿ ಈ ನೆಲೆಯ ಕಾಳಜಿ, ಶೋಷಿತ ಬದುಕನ್ನು ಸಾಮಾಜಿಕ ಸಮನಾಂತರ ನೆಲೆಯಲ್ಲಿ ಗುರುತಿಸಬೇಕೆನ್ನುವ ಕೆಚ್ಚು, ರೋಷ, ಎಲ್ಲಕಿಂತ ಮುಖ್ಯವಾಗಿ ಮಹಾತ್ವಕಾಂಕ್ಷೆ ನೆಲೆ ಇವರಲ್ಲಿ ಗಟ್ಟಿಯಾಗಿದೆ.

ಕವಿಗೆ ಕಾವ್ಯದ ಚೌಕಟ್ಟು ಇರಲಾರದು, ಆದರೆ ಕಾವ್ಯೆ ಪ್ರಜ್ಞೆಯಿರಬೇಕಾಗುತ್ತದೆ. ಅಂತಹ ಕಾವ್ಯ ಪ್ರಜ್ಞೆಗೆ ಬಿದಲೋಟಿ ರಂಗನಾಥ್ ಇನ್ನೂ ಹೆಚ್ಚು, ಹೆಚ್ಚು ತೆರೆದು ಕೊಳ್ಳಲಿ. ಹಾಗೆ ತೆರೆದು ನಿಂತಾಗ ಬರೆಯುವ, ಮುಂದೆ ಬರುವ ಕವನಗಳು ಇನ್ನೂ ಉತ್ತಮ ಕವಿತೆಗಳ ಸಾಲಿನಲ್ಲಿ ನಿಲ್ಲುವಂತಹ ಕವನಗಳಾಗುತ್ತವೆ ಎಂಬ ಒಂದು ಆಶಯ ನನ್ನದು.

********
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Suresh Rajamane
Suresh Rajamane
8 years ago

ಚಂದದ ಮತ್ತು ಗಟ್ಟಿಯಾದ ವಿಮರ್ಶೆ ಸರ್.

Noorulla thyamagondlu
Noorulla thyamagondlu
8 years ago

ಧನ್ಯವಾದಗಳು ಸುರೇಶ್ ರಾಜಮನೆ ಸರ್.

Noorulla thyamagondlu
Noorulla thyamagondlu
8 years ago

ಮಣ್ಣಿಗೆ ಬಿದ್ದಹೂಗಳು ವಿಮರ್ಶಾಲೇಖನ ಪ್ರಕಟಿಸಿದ್ದಕ್ಕೆ ತುಂಬ ಧನ್ಯವಾದಗಳು ಪುಂಜು ಸರ್.-ನೂರುಲ್ಲಾ ತ್ಯಾಮಗೊಂಡ್ಲು 

 

ಉಮರ್ ದೇವರಮನಿ
ಉಮರ್ ದೇವರಮನಿ
4 years ago

ಇದು ನಿಮ್ಮ ಎರಡನೇ ವಿಮರ್ಶಾ ಲೇಖನವನ್ನು ಓದಿದ್ದು, ತುಂಬಾ ಚೆನ್ನಾಗಿ ವಿಮರ್ಶೆ ಮಾಡುತ್ತಿದ್ದೀರಿ…ಶುಭವಾಗಲಿ ನೂರ್ ಭಾಯ್

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
3 years ago

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

5
0
Would love your thoughts, please comment.x
()
x