ಜವರಯ್ಯ ದಡಾರನೆ ಎದ್ದು ಕುಳಿತ. ತನ್ನ ಪುಟ್ಟ ಮೊಮ್ಮಗ ಬೆನ್ನ ಮೇಲೆ ಕುಣಿಯುತ್ತಿರುವಂತೆ ಕನಸು ಕಂಡು ಒಮ್ಮೆಲೇ ಎಚ್ಚರಗೊಂಡಿದ್ದ. ಆದರೆ ಅಲ್ಲಿ ಯಾವ ಮೊಮ್ಮಗನೂ ಇಲ್ಲ. ಮಠದ ದೀಪಗಳ ಬೆಳಕು ಇರುಳನ್ನು ಹಗಲಾಗಿಸಿತ್ತು. ತನ್ನ ಪಕ್ಕದಲ್ಲೇ ಹರಿದ ಚಾಪೆಯ ಮೇಲೆ ಒಂದಿಷ್ಟು ಸಾಧುಗಳು ಮಲಗಿದ್ದರು. ಅವರು ಎಲ್ಲೆಲ್ಲಿಂದಲೋ ಬಂದು ಸದ್ಯಕ್ಕೆ ಇಲ್ಲಿ ನೆಲೆಸಿದ್ದರು.
"ಈ ಜಲ್ಮ ಇರೋಗಂಟ ಈ ಹಟ್ಟಿ ಕಡೆ ತಲೆ ಹಾಕುದ್ರೆ ಕೇಳಮ್ಮಿ" ಜವರಯ್ಯ ಹೆಂಡತಿಗೆ ಸವಾಲು ಹಾಕಿ ಬಂದಿದ್ದ, "ಈ ಹಟ್ಟೀಲಿ ಹಿರೀಮನ್ಸ ಅಂತ ಒಬ್ಬರಾದ್ರು ನಂಗೆ ಮರ್ಯಾದಿ ಕೊಟ್ಟೀರಾ, ಹೆಂಡ್ರು ಮಾತು ಅತ್ಲಾಗಿರ್ಲಿ. ಈ ಸೊಸೆನಾದ್ರು, ಮಾವಾ ಉಂಡ್ರಾ? ಮಾವಾ ತಿಂದ್ರಾ? ಬಿಸಿಟ್ಟು ಬೇಕೇ? ಬಿಸ್ನೀರು ಬೇಕೇ? ಅಂತ ಒಂದಿನಾನಾರ ಕೇಳಿದ್ದಳೆ? ಉಹುಂ… ಇದೊಂದ್ ಹಟ್ಟಿ, ಇದ್ರಲ್ಲಿ ಬಾಳಾಟ ಮಾಡ್ತಿರೋ ನಾವೆಲ್ಲಾ ಮನುಸ್ರು… ಥೂ…"
ಜವರಯ್ಯ ಮನೆ ಬಿಟ್ಟಿದ್ದು ಊರೆಲ್ಲ ಉಂಡು ಮಲಗಿ, ಗೊರಕೆ ಹೊಡೆಯುವ ಮಧ್ಯರಾತ್ರಿಯ ಸುಮಾರಿಗೆ. ಒಂದೆರಡು ಬಟ್ಟೆ, ಹಳೇ ರಗ್ಗು, ಕನ್ನಡಕ ಇತ್ಯಾದಿಗಳನ್ನು ಒಂದು ಪುಟ್ಟ ಬ್ಯಾಗಿನಲ್ಲಿಟ್ಟುಕೊಂಡು ಯಾರ ಕಣ್ಣಿಗೂ ಬೀಳದಂತೆ ಕಾಡು ಹಾದಿ ಹಿಡಿದು ಊರು ಬಿಟ್ಟಿದ್ದ.
"ಇಷ್ಟೆಲ್ಲಾ ಮಾಡಿ, ಇಷ್ಟೆಲ್ಲಾ ಮಟ್ಟಿ, ಕಾಡು ಕಡಿದು ಹೊಲ ಮಾಡಿ, ಮಣ್ಣು ಮಿದ್ಸಿ ಮನೆ ಕಟ್ಟಿ, ಓ ಲಕ್ಷ್ಮೋ ಅಂತ ಈಪಾಟಿ ಗೇದು ಮಕ್ಳು ಸಾಕಿ, ಅವ್ಕೂ ಮದ್ವೆ-ಸೋಬ್ನ-ಬಾಣ್ತನ ಗೀಣ್ತನ ಅಂತ ಎಲ್ಲ ಮಾಡಿ ಜೀವ್ನ ನೆಟ್ಟುಗ್ ನ್ಯಾರುಕ್ ಆದ್ಮ್ಯಾಕೆ ಹಟ್ಟಿ ಬುಡೋ ಅಂಥಾದ್ದು ಏನ್ಲಾ ಆಗಿದ್ದತು ಈ ಜವರುನ್ಗೆ" ಎನ್ನುವ ನೆರೆಹೊರೆಯವರ ಮಾತು ತಪ್ಪಿದ್ದಲ್ಲ. ಅಷ್ಟೇ ಅಲ್ಲ. ತನ್ನ ಮೊಮ್ಮಗ ಅಂಗಿ ಹಿಡಿದೆಳೆದು ಮುಖ ಸಪ್ಪಗೆ ಮಾಡಿಕೊಳ್ಳುತ್ತಿದ್ದ. ತಕ್ಷಣ ಅವನನ್ನು ಎತ್ತಿಕೊಳ್ಳಬೇಕು. ಎತ್ತಿಕೊಂಡ ಮೇಲೆ ಇಳಿಸಲು ಮನಸು ಬರುವುದಿಲ್ಲ. ಆ ಮಗು ಅಷ್ಟು ಅಚ್ಚಿಕೊಂಡಿದ್ದಾಗ ಈ ಮನೆ ಬಿಡುವ, ಈ ಮಠ ಸೇರುವ ಆಲೋಚನೆಯೇ ಇರಲಿಲ್ಲ. ಹೆಂಡತಿ, ಮಗ, ಸೊಸೆ, ಮೊಮ್ಮಕ್ಕಳ ಸುಖಕ್ಕಾಗಿ ತಾನು ಯಾವ ತ್ಯಾಗ ಬೇಕಾದರೂ ಮಾಡಲು ಸಿದ್ಧನಿದ್ದ. ತಾನೆಂದೂ ತನಗೇಂತ ಏನನ್ನೂ ಬಯಸಿದವನಲ್ಲ. ತನ್ನ ಮುಪ್ಪಿನ ಏಕಾಕಿತನವನ್ನು ಮಕ್ಕಳು, ಮೊಮ್ಮಕ್ಕಳೊಂದಿಗೆ ಕಳೆಯಬಯಸಿದ್ದ. ಆದರೂ ಇವತ್ತು ಮಠ ಸೇರಬೇಕಾದ ಗತಿ ಬಂತು. ಮನಸು ಆಧ್ಯಾತ್ಮ, ವೈರಾಗ್ಯದತ್ತ ವಾಲತೊಡಗಿತು. ಸಾಂಸಾರಿಕ ಬಂಧನದ ಕೊಂಡಿಗಳು ಒಂದೊಂದಾಗಿ ಕಳಚಿಕೊಳ್ಳುತ್ತಾ ಹೋದವು. ಕುಟುಂಬದ ಗಿಜಿಗಿಜಿ ಗೋಜಲಿಗಿಂತಲೂ ಏಕಾಂತದ ಮೌನ ಪ್ರಿಯವಾಗತೊಡಗಿತು. ಆಹಾರವೂ ಅಷ್ಟೇ ತುಸುವೇ ಸೇವಿಸಿದರೂ ಸಂತೃಪಿಯ ಅನುಭವ. ಎರಡೆರಡು ರಾಗಿ ಮುದ್ದೆ ಉಣ್ಣುತ್ತಿದ್ದ ಆ ದಿನಗಳಲ್ಲಿ? ಇಷ್ಟಿಷ್ಟೇ ಸಿಕ್ಕಿದ್ದು ಮೆಲ್ಲುವ ಈ ದಿನಗಳೆಲ್ಲಿ? ಎಷ್ಟೋ ಸಲ ವಿಗ್ರಹದಂತೆ ಕೂತು ಧ್ಯಾನಿಸುತ್ತಾನೆ. ಬದುಕು ತಂದೊಡ್ಡುವ ಇಂತಹ ಸೋಜಿಗ ಯಾರ ಜಪ್ತಿಗೂ ಸಿಗದಲ್ಲವೇ?
"ಏನು ಸಾಧುಗಳೇ ಯೋಚ್ನೆ ಮಾಡ್ತಿದೀರಿ?" ಪಕ್ಕದಲ್ಲಿ ಮಲಗಿದ್ದ ಸಾಧುವೊಬ್ಬ ಎದ್ದು ಕೂತು ಜವರಯ್ಯನನ್ನು ಕೇಳಿದ. ಆಗಷ್ಟೇ ತನ್ನ ಜುಬ್ಬಾದಿಂದ ಭಂಗಿಸೊಪ್ಪು ಹೊರತೆಗೆದು ಹದಮಾಡುತ್ತಾ.
"ಇಲ್ಲ ಕಣೇಳಿ. ಯಾಕೋ ನಿದ್ದತ್ಲಿಲ್ಲ. ಕೂತಿದ್ದಿ" ಜವರಯ್ಯ ಹೇಳಿದ.
"ಪತ್ರೆ ಸೇದುದ್ರೆ ಎಂಥ ಚಿಂತೆನೂ ಮಂಗ್ರುಮಾಯ ಆಗೋಯ್ತದೆ. ತಕೋಳಿ ಸೇದ್ರಿ" ಹದ ಮಾಡಿ ಚಿಲುಮೆಗೆ ತುಂಬಿ ಕಡ್ಡಿ ಗೀರಿ ತಾನೊಂದು ಧಮ್ಮು ಎಳೆದು ಜವರಯ್ಯನಿಗೆ ಕೊಡುತ್ತಾನೆ.
"ಪತ್ರೆ ನಂಗೆ ಭಾರೀ ಹಳೇದೇನೆ ಸ್ವಾಮ್ಗೊಳೆ. ಹಿತ್ಲೆಲೇ ಬೆಳೀತಿದ್ದೆ. ಪೋಲೀಸ್ ಕಾಟ ನೋಡಿ. ಸುಮ್ನಾದೆ. ಆದ್ರೂ ಚಟ ಬುಡುದಿಲ್ಲ ನೋಡಿ" ಜವರಯ್ಯ ಸೇದಿ, ಹೋಗೆ ಬಿಟ್ಟು ಕೆಮ್ಮಿದ.
ಭಂಗಿಹೊಗೆ ಮೂಗಿಗೆ ಬಡಿಯುತ್ತಿದ್ದಂತೆಯೇ ಮಲಗಿದ್ದ ಮತ್ತೊಬ್ಬ ಸಾಧು ಎದ್ದು ಕೂತ. ಉದ್ದನೆಯ ಜಟೆಯನ್ನು ಕಿರೀಟದಂತೆ ಸುತ್ತಿ, ಎತ್ತಿ ನೆತ್ತಿಮೇಲಿಟ್ಟುಕೊಂಡ. ಆತನ ಬಿಳಿಗಡ್ಡ ಅರ್ಧಮೊಳಕ್ಕೂ ಉದ್ದವಿತ್ತು. ಬೆನ್ನು ಗೂನು. "ನೀವು ಒಳ್ಳೇ ಕುಳಾನೇ ಅಂತ ಕಾಣಿಸ್ತದೆ… ಹೊಲ, ಮನೆ, ಆಡು, ದನುಕ್ಕೇನೂ ಕೊರತೆ ಇಲ್ಲ ಅನ್ನಿಸ್ತದೆ" ಅವನ ಮಾತು ಕೇಳಿ ಜವರಯ್ಯ ಕಣ್ಣು ತೇಲಿಸಿ ಮುಗುಳ್ನಕ್ಕ ತನ್ನ ಕೈಲಿದ್ದ ಚಿಲುಮೆಯನ್ನು ಅವನಿಗೆ ಕೊಡುತ್ತಾ.
"ಮನ್ಸ ಸ್ವಾಭಿಮಾನಿ ಆದಷ್ಟೂ ಜೀವ್ನ ದುಸ್ತರ ಅನ್ನಿಸ್ತದೆ ಅಲ್ವುರಾ?", ಗೂನು ಬೆನ್ನಿನ ಸಾಧು ಕೇಳಿದ, "ದಿಕ್ಕು ದೆಸೆ ಇಲ್ದಿರೋ ನಮ್ಮಂತೋರು ಈ ಮಟಗಿಟ ಹುಡಿಕೋತೀವಿ, ಇದು ನಮ್ ಹಣೆಬರ. ನಿಮ್ಮಂತೋರ್ಗೆ ಈ ಪರಿಪಾಟ್ಲು ಯಾಕೇಂತ? ಎಲ್ಲಾ ಕಡೆ ಪರಿಪಾಟ್ಲುಗಳೇ ಬಿಡಿ. ಮನ್ಸ ಅಳ್ತಾ ಅಳ್ತಾನೆ ತಾನೇ ಹುಟ್ಟೋದು!"
"ಇಲ್ಲಾ ಸ್ವಾಮ್ಗೊಳೇ, ಅಳ್ತಾ ಅಳ್ತಾ ಹುಟ್ಟೋ ನರಮನ್ಸ ನೆಮ್ಮದಿ ಹುಡುಕ್ತಾ ಹುಡುಕ್ತಾ ಸತ್ತೋಯ್ತನೆ ಕಣಾ. ಅದ್ಕೆ ಹಿರೀಕ್ರು ಹೇಳೋದು ತಾಯಿಗರ್ಭದಿಂದ ಈಚೆ ಬಂದ್ಮನ್ಸ ಭೂಮ್ತಾಯಿ ಗರ್ಭ ಸೇರೊಗಂಟಾನು ನೆಮ್ದಿ ಹುಡುಕ್ತನೇ ಇರ್ತಾನೆ. ಆದ್ರೆ ಅದು ಸಿಗುದಿಲ್ಲ ಬುಡಿ" ಜವರಯ್ಯ ಹೇಳಿದ.
"ಇಲ್ಲ ಹೊಸಬುದ್ಯೋರೆ, ಈ ನೆಮ್ದಿ ಅನ್ನೋದು ನಾವ್ ನಾವ್ಗಳೇ ಕಂಡುಕೋಬೇಕಾದ್ದು. ಅದನ್ನ ಕೆಲವರು ಹಣದಿಂದ ಕಂಡ್ಕೊತಾರೆ. ಕೆಲವರು ಹೆಣ್ಣಿನಿಂದ ಕಂಡ್ಕೊತಾರೆ. ನಮ್ಮಂಥ ಸನ್ನೇಸಿಗಳು ಈ ಚಿಲುಮೇಲಿ ಕಂಡ್ಕೊತೀವಿ ಅಷ್ಟೇ. ಇದೂನು ತಾತ್ಕಾಲಿಕನೇ ಅಲ್ವುರಾ?" ಸಾಧು ಹೇಳಿ ನಕ್ಕಾಗ ಜವರಯ್ಯ ಪ್ರಶ್ನಿಸಿದ,"ನೀವು ಯಾವೂರ್ ಕಡೆಯವರು? ಈ ಮಠಕ್ಕೆ ಯಾವಾಗ್ ಬಂದ್ರಿ?"
"ನನ್ನ ಹೆಂಡ್ತಿ ತೀರ್ಕೊಂಡ್ಳು ನೋಡಿ. ದಿವ್ಸಾ ಆಗೋಕೂ ಮೊದ್ಲೇ ಕಾವಿ ಹಾಕೊಂಡೆ. ಮಕ್ಳು ಮರಿ ಇಲ್ಲ ನಂಗೆ. ಮೊದ್ಲು ಶಿವಾಲ್ದಾಪ್ಪನ ಮಠ ಸೇರ್ಕೊಂಡೆ. ಆಮೇಲೆ, ರಂಗಪ್ಪನ್ ಬೆಟ್ಟ. ನೋಡಿ ಇವಾಗ ಈ ಕಾಡ್ಮಧ್ಯ ಇರೋ ಪಾಳ್ಗುಡಿಲಿ. ನಾನಿಲ್ಲಿಗ್ ಬಂದಾಗ ಈ ನಮ್ಮಪ್ಪುನ್ಗೆ ಹೂನೀರು ಹಾಕೋರೆ ಗತಿ ಇರ್ಲಿಲ್ಲ ಹೊಸಬುದ್ಯೋರೆ. ಗವಿ ಇದ್ದಂಗಿತ್ತು ಈ ಗುಡಿ. ಪಕ್ದಲ್ಲೇ ಇರೋ ದೊಡ್ದಿಗೋಗಿ ನಾನೇ ಒಂದು ಕುಡ್ಲು ಈಸ್ಕೊಂಡ್ ಬಂದಿ ಗಿಡ ಗೆಂಟೆ, ಸತ್ತೆ ಸಿವುರೂ ಎಲ್ಲ ಸವರಿ ವಪ್ಪ ಮಾಡ್ದೆ. ಕೆರೇಲಿ ತಾವರೆ ಹೂವ ಅವೇ. ಪೂಜೆಗೆಂತ ಬಂಡವಾಳ ಹೇಳಿ. ಬರೋರು ಹೋಗೋರು ನಾಕ್ಕಾಸ್ ಕೊಡ್ತಾರೆ. ಸುಗ್ಗಿ ಕಾಲ್ದಲ್ಲಿ ಈ ದೊಡ್ಡಿ ಜನಾನೇ ಅಷ್ಟೋ ಇಷ್ಟೋ ರಾಗಿ-ರಪ್ಟೆ, ಕಾಳು-ಕಡ್ಡಿ ಕೊಡ್ತಾರೆ. ಅದೂ ಇದೂ ಅಂತ ಹರ್ಕೆ ಗಿರ್ಕೆ ಮಾಡ್ಕೊತಾರೆ. ಮುಡುಪು ಗಿಡುಪು ಅಂತ ಕಾಸುಕರಿಮಣಿ ಕೊಡ್ತಾರೆ. ಹಬ್ಬ ಹುಣ್ಮೆ ಇದ್ದಾಗ ಪರಗಿರ ಮಾಡ್ತಾರೆ. ಅವರವರೆ ಬತ್ತಾರೆ ಅವರವರೆ ಬೇಯ್ಸ್ಕೊತಾರೆ ಅವರವರೆ ತಿನ್ಕೊಂಡು ಕೆರೇಲಿ ಕೈ ತೊಳ್ಕೊಂಡು ಹೋಯ್ತಾರೆ. ನಂದೇನು ಕೆಲಸ, ಶಿವಾ ಅಂತ ಗಂಟೆ ಅಳ್ಳಾಡ್ಸಿ ಬಂದೋರ್ ಹಣೆಗೆ ಈಬತ್ತಿ ಇಕ್ಕಿ ಮಂಗಳಾರತಿ ಕೊಡೋದು. ತಲೆಮೇಲೆ ತೀರ್ಥ ಎರಚೋದು. ವೈಸಕ ಗೀಯ್ಸಕ ಮಾಡಿದ್ರೆ ಒಂದಿಷ್ಟಿಷ್ಟ್ ಹಾಕಿ ಕಳ್ಸೋದು. ಇದ್ಯಾವುದೂ ನನ್ನ ಸುಖಕ್ಕೆ ಅಂತ ಮಾಡ್ಕೊಂಡಿರೋದಲ್ಲ. ಎಲ್ಲೆಲ್ಲಿಂದ್ಲೋ ಸಾಧುಗಳು ಬತ್ತಾರೆ. ಭಜನೆ ಮಾಡ್ತಾರೆ. ಭಂಗಿ ಸೇದ್ತಾರೆ. ಶಿವಾ ಅಂತ ಯಂಗೋ ಇದ್ದುದ್ನೇ ಹಂಚ್ಕೊಂಡು ತಿಂತಾರೆ. ಮೊನ್ನೆ ಯಾರೋ ಬೆಂಗಳೂರಿಂದ ಕಾರ್ ಮಾಡ್ಕೊಂಡ್ ಬಂದಿದ್ರು. ಬುದ್ಯೋರ… ಬುದ್ಯೋರಾ ನಿಮ್ ಮಠಕ್ಕೆ ಬಂದು ಹೊದ್ಮ್ಯಾಕೆ ಯಾಪಾರ ಸಾಪಾರ ಎಲ್ಲಾ ಒಳ್ಳೆದಾಗದೆ. ಆದ್ರಿಂದ ಈ ಮಠಕ್ಕೆ ಏನಾರ ಸೇವೆ ಮಾಡ್ಬೇಕು ಅಂತ ಅನ್ನಿಸದೆ. ನೀವೊಪ್ಪೋದಾದ್ರೆ ಈ ಹಳೇ ಗುಡೀನ ಕಿತ್ತಾಗ್ಬುಟ್ಟು ಹೊಸ ಗುಡಿ ಕಟ್ಟಿಸ್ತಿವಿ ಬುದ್ದೀ, ಏನಂತೀರಿ? ಅಂದ್ರು. ಅದುಕ್ಕೆ ನಾನಂದೆ, ಗುಡಿ ಗಿಡಿ ಏನೂ ಕಟ್ಸೋದು ಬ್ಯಾಡ ಕಣ್ರಪಾ.. ನಿಮಗೆ ಶಿವುನ್ ಮ್ಯಾಲೆ ಅಷ್ಟೂ ಭಕ್ತಿ ಇದ್ರೆ ಇಲ್ಲಿ ಒಂದೆರಡು ಅಂಕಣ ಸೂರು ಮಾಡ್ಕೊಡ್ರಪ್ಪ. ಈ ದೊಡ್ಡಿ ಹೈಕ್ಳುಗೆ ನಾಕಕ್ಷರ ಹೇಳ್ಕೊಡ್ತೀನಿ. ಆ ಹಾಳಾದ್ ದೊಡ್ದೀಲಿ ಇಸ್ಕೂಲಿಲ್ಲ. ಎಮ್ಮೆ, ದನ, ಆಡು, ಕುರಿ ಕಾಯೋದ್ರಲ್ಲೇ ಆ ಹೈಕ್ಳು ಕಳೆದೋಗ್ತಿದಾವೆ ಅಂದೆ. ಅದಕ್ಕವರು ಆಯ್ತು ಬುದ್ಯೋರ ಅಂತ ಹೇಳವ್ರೆ. ಇರೋಗಂಟ ಕೈಲಾದ ಸೇವೆ ಮಾಡಬೇಕು ನೋಡಿ. ನಮಗೆ, ನಮ್ ನಮ್ ಮಕ್ಕಳಿಗೆ ಮಾಡ್ಕೊಳ್ಳೋದು ಸ್ವಾರ್ಥ. ಜಗತ್ತಿಗೆ ಮಾಡೋದು ನಿಸ್ವಾರ್ಥ. ಆ ಸೇವೇಲಿ ಶಿವ ಇರ್ತಾನೆ ಅಲ್ವುರಾ?"
ಅಷ್ಟರಲ್ಲಿ ಜವರಯ್ಯ ನಗಲಾರಂಭಿಸಿದ. ಭಂಗಿಸೋಪ್ಪಿನ ನಶೆ ಆತನನ್ನು ಬೇರೆಯದೇ ವ್ಯಕ್ತಿಯನ್ನಾಗಿಸಿತ್ತು. "ಇಂಥ ನಗ ಯಾಕೆ?" ಸಾಧು ಕೇಳಿದ. ಜವರಯ್ಯ ಸುಮ್ಮನೆ ಒಮ್ಮೆ ದಿಟ್ಟಿಸಿ ಮತ್ತೊಂದು ಧಮ್ಮು ಎಳೆದು ಮತ್ತೊಂದು ಮುಗುಳ್ನಗು ತೇಲಿ ಬಿಟ್ಟ. ಅದೇಕೋ ಇದ್ದಕ್ಕಿದ್ದ ಹಾಗೆ ಜವರಯ್ಯನ ಕಣ್ಣುಗಳು ತುಂಬಿಕೊಂಡವು.
"ಕಣ್ಣಲ್ಲಿ ನೀರು! ನಮ್ಮ ಕಣ್ಣೀರು ಯಾವತ್ತೋ ಬತ್ತೋಗವೆ" ಗೂನುಬೆನ್ನಿನ ಸಾಧು ಹೇಳಿದ, ಮನ್ಸ ಯಾವ್ಯಾವ ಕಾರಣಕ್ಕೆ ಅಳ್ತಾನೆ ಅಂತ ಹೇಳೋದು ಕಷ್ಟ. ಬುದ್ಧ ಯಾವಾಗ್ಲೂ ನಗ್ತಾ ನಗ್ತಾ ಇರೋ ಇಗ್ರ ನೋಡಿದೀನಿ. ಆದ್ರೆ, ಅವ್ನೊಳ್ಗೆ ಅದೆಷ್ಟೋ ಜನರ ನೋವು ಮಡ ಮಡ ಇದ್ದಂಗಿರ್ತದೆ. ನೀವ್ ನಗ್ತಾ ಇದೀರಿ ಅಂದ್ರೆ ನಿಮ್ಮೆದೇಲೂ ಏನೋ ಸಂಕ್ಟ ಇರ್ಬೇಕು. ಏನು ಅಂತ ಕೇಳೋದು ಸರಿಯಲ್ಲ ಬಿಡಿ. ಬೆಂಕಿ ಇರೋ ಕಡೆ ಆವಿ ಇರ್ಲೇಬೇಕು ಅಲ್ವುರಾ? ಇನ್ಮ್ಯಾಕೆ ಅಂತರ್ಮುಖಿ ಆಗ್ಬಿಡಿ, ಈಚ್ಲು ಜಗತ್ತು ಕಾಣ್ಸೋದಿಲ್ಲ ಅವಾಗ. ಒಳ್ಗ್ಲು ಜಗತ್ತು ಭಾಳಾ ಚಂದಾಗಿರ್ತದೆ. ಹೆಂಡ್ರು, ಮಕ್ಳು, ಮೊಮ್ಮಕ್ಳು ಯಾರೂ ಇರಲ್ಲ ಆ ಜಗತ್ತಲ್ಲಿ."
ಜವರಯ್ಯನ ಬೆನ್ನಿನ ಮೇಲೆ ಮೊಮ್ಮಗನ ಪುಟ್ಟ ಪಾದಗಳು ಹರಿದಾಡಿದಂತಾಯಿತು. ಆತನ ಮುಖ ನೋಡಿ ಗೂನುಬೆನ್ನಿನ ಸಾಧು ಒಂದು ಲಹರಿಯಲ್ಲಿ ನಕ್ಕ. ಆ ಗೂನುಬೆನ್ನಿನ ಸಾಧು ಕಣ್ಣಲ್ಲಿ ಯಾವುದೋ ದಿವ್ಯಪ್ರಭೆ ಒಮ್ಮೆಲೇ ದಿಗ್ಗನೆ ಮಿಂಚಿತ್ತಾ? ಗೊತ್ತಿಲ್ಲ.
"ಈ ಲೋಕುದ್ ವ್ಯಾಮೋಹ ಒಂದೇದಪ ಹೋಗೋದಲ್ಲ. ಕಾಲಾನೇ ಎಲ್ಕೂ ಉತ್ರ ಕೊಡ್ತಾ ಹೋಯ್ತದೆ. ಕಳ್ಳುಬೆಳ್ಳು ಅಂತ ಕಣ್ಣೀರ್ ಸುರ್ಸೋ ಮನ್ಸುಂಗೆ ಯಾವ್ದೋ ಶಾಶ್ವತ ಅಲ್ಲ ಅಂತ ಅನ್ನಿಸ್ಬೇಕಾದ್ರೆ ಬದ್ಕಿದ್ದಾಗ್ಲೆ ಸತ್ತು ಹುಟ್ಬೇಕು. ಹಸಿವು, ಅವ್ಮಾನ, ಸೋಲು ಎಲ್ಲಾ ಅನುಭೋಸ್ಬೇಕು. ಸಾಯಬೇಕು ಅನ್ನಿಸಬೇಕು. ಆದ್ರೆ ಬದುಕ್ಬೇಕು. ನೇಣಾ ಹಾಕೊಳಕೆ ತಂದ ಹಗ್ಗಾನ ಕೊಮ್ಬೇಗ್ ಕಟ್ಟಿ ಉಯ್ಯಾಲೆ ಆಡ್ಬೇಕು. ಪ್ರಪಂಚ ಸಾಕು ಅನ್ಸಿ ಬಾವಿಗ್ ಬಿದ್ದು ಯಂಗೋ ಈಜ್ಕೊಂಡ್ ಎದ್ಬರ್ಬೇಕು. ವಿಷ ಕುಡುದ್ರೂ ದಕ್ಕಿಸ್ಕೊಂಡು ಶಿವಾ ಅನ್ನಿಸ್ಕೋಬೇಕು. ಹೋಗ್ಲಿ ಬಿಡಿ, ಈ ಹಾಳ್ಮುದ್ಕ ಈ ಸರೊತ್ತಲ್ಲಿ ಬಾಯಿಗ್ ಬಂದುದ್ದೇನೇನೋ ವದರ್ತಾವ್ನೆ. ಚಟ್ಟ ಹತ್ತೋ ವಯ್ಸಲ್ಲೇ ಅಲ್ವುರಾ ತತ್ವ ಕಕ್ಕೋದು. ಅದ್ಕೆ ಹೇಳೋದು ಮನ್ಸ ಮನ್ಸ ಅನ್ನಿಸ್ಕೊಳ್ಳೋಕೆ ಭಾವ್ನೆಗಳೇ ಆಧಾರ. ದೌರ್ಬಲ್ಯನೂ ಅವೇನೇ"
"ಯಾಕೋ ಎದೆ ಹಿಡ್ಕೊಂಡಂಗಾಯ್ತದೆ" ಜವರಯ್ಯ ಕೆಮ್ಮಿದ, "ಆದ್ರಿವಾಗ ಈ ಭಂಗಿಸೊಪ್ಪು ಮಾತ್ರ ನಂಗೆ ಒಳ್ಳೇ ನೆಂಟ. ಅದ್ಯಾಕೋ ನನ್ ಮೊಮ್ಮಗ ಬ್ಯಾರೆ ಗ್ಯಾಪಕ ಆಯ್ತಾವ್ನೆ ಬುದ್ದೀ…" ಜವರಯ್ಯ ಕೆಮ್ಮುತ್ತಲೇ ಹೇಳಿದ.
"ನಮ್ ತಾತ ಹೆಚ್ಚು ಕಡಮೆ ನಿಮ್ಮಂಗೇ ಇದ್ದ. ಅವನಿಗೂ ಅಷ್ಟೇ… ಭಂಗಿಸೊಪ್ಪು ಅಂದ್ರೆ ಪ್ರಾಣ…" ಗೂನುಬೆನ್ನಿನ ಸಾಧು ನಗುತ್ತಾ ನುಡಿದು ಜವರಯ್ಯನ ಎದೆ ನೀವಿ ನೆತ್ತಿ ತಟ್ಟಿದ. ದೀಪಗಳು ಉರಿಯುತ್ತಲೇ ಇದ್ದವು. ಕತ್ತಲು ದೂರದಲ್ಲಿ ನಿಂತು ಎಲ್ಲವನ್ನೂ ದಾಖಲಿಸುತ್ತಿತ್ತು.
******
ನೈಜಕ್ಕೆ ಹತ್ತಿರವಾದ ಉತ್ತಮ ಬರಹ.
ಥ್ಯಾಂಕ್ಸ್ ಸರ್…
Matadolagina sathya darshana estavaythu nimma lekana
sooper shivanna
ತುಂಬ ಚೆನ್ನಾಗಿದೆ ಬರಹ ಕಥೆ